6

ಮೌಲ್ಯಯುತ ಷೇರು ಖರೀದಿಗೆ ಆದ್ಯತೆ

ಕೆ. ಜಿ. ಕೃಪಾಲ್
Published:
Updated:
ಮೌಲ್ಯಯುತ ಷೇರು ಖರೀದಿಗೆ ಆದ್ಯತೆ

ನಾಲ್ಕು ದಿನಗಳ ವಹಿವಾಟಿನಲ್ಲಿ ಷೇರಿನ ಬೆಲೆಗಳು ಹೆಚ್ಚು ಒತ್ತಡದಲ್ಲಿದ್ದವು. ಉತ್ತಮ ಫಲಿತಾಂಶ ಪ್ರಕಟಿಸಿದ ಟಾಟಾ ಗ್ಲೋಬಲ್ ಬಿವರೇಜಿಸ್,  ಪಿಸಿ ಜ್ಯೂವೆಲ್ಲರ್ಸ್‌ಗಳು ಚುರುಕಿನ ಏರಿಕೆ ಕಂಡವು.

ಫಲಿತಾಂಶವು ಹಿಂದಿನ ತ್ರೈಮಾಸಿಕಕ್ಕಿಂತ ಕಳಪೆಯಾಗಿದ್ದರು ಸಹ ಭಾರತ್ ಅರ್ಥ್ ಮೂವರ್ಸ್, ಜಿಎಸ್‌ಎಫ್‌ಸಿ,  ಬಾಂಬೆ ಡೈಯಿಂಗ್  ಮುಂತಾದವುಗಳು ಏರಿಕೆ ಕಂಡುಕೊಂಡವು.  ಕಂಪೆನಿಗಳ ಸಾಧನೆಗಿಂತ ಅವುಗಳ ಬ್ರ್ಯಾಂಡ್‌ಗೆ ಹೆಚ್ಚಿನ ಆದ್ಯತೆ ನೀಡುವ ಪ್ರವೃತ್ತಿ ಮುಂದುವರೆದಿದೆ.

ಸತುವಿನ ದರವು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕಳೆದ ಹತ್ತು ವರ್ಷಗಳಲ್ಲಿನ ಗರಿಷ್ಠ ಮಟ್ಟಕ್ಕೆ ಚಿಮ್ಮಿದ ಸುದ್ದಿಯು ಹಿಂದುಸ್ಥಾನ್ ಜಿಂಕ್ ಷೇರಿನ ಬೆಲೆಯನ್ನು ₹ 271 ರ ಸಮೀಪದಿಂದ ₹300 ನ್ನು ದಾಟಿಸಿತು. ಬಹಳ ವರ್ಷಗಳ ನಂತರ ಟಾಟಾ ಸ್ಟೀಲ್ ಷೇರಿನ ಬೆಲೆಯು ₹600 ನ್ನು ದಾಟಿ ₹636ರ ವಾರ್ಷಿಕ ಗರಿಷ್ಠ ದಾಖಲಿಸಿ ₹625 ರ ಸಮೀಪ ಅಂತ್ಯ ಕಂಡಿದೆ. ಬ್ಯಾಂಕಿಂಗ್ ಮತ್ತು ಫಾರ್ಮಾ ವಲಯದ ಷೇರುಗಳು ನಿರಾಶಾದಾಯಕವಾಗಿದ್ದವು.  ಸರ್ಕಾರಿ ವಲಯದ ಗೇಲ್ ಇಂಡಿಯಾ, ಎಚ್‌ಪಿಸಿಎಲ್, ಬಿಪಿಸಿಎಲ್‌, ಐಓಸಿ ಷೇರುಗಳು ಲಾಭಾಂಶದ ನಂತರದಲ್ಲಿ  ಚೆನ್ನೈ ಪೆಟ್ರೋಲಿಯಂ ಚುರುಕಾದ ಚಟುವಟಿಕೆಯಿಂದ ಏರಿಕೆ ಕಂಡವು.

ಜಿಎಸ್‌ಟಿ ಕಾರಣದಿಂದಾಗಿ ಕುಸಿತ ಕಂಡಿದ್ದ ಐಟಿಸಿ ಷೇರು ಈ ವಾರ ಉತ್ತಮ ಬೆಂಬಲದೊಂದಿಗೆ ₹270 ರಿಂದ ₹284ರವರೆಗೂ ಜಿಗಿತ ಕಂಡಿತು. ಲಾರ್ಸನ್ ಅಂಡ್ ಟೊಬ್ರೊ, ಮಾರುತಿ ಸುಜುಕಿಗಳು ಲಾಭದ ನಗದೀಕರಣ

ದಿಂದ ಸ್ವಲ್ಪ ಇಳಿಕೆ ಕಂಡವು.

ಕಳೆದ ತ್ರೈಮಾಸಿಕದ ಹಾನಿಗಿಂತ ಜೂನ್ ಅಂತ್ಯದ ತ್ರೈಮಾಸಿಕದ ಹಾನಿ ಕಡಿಮೆಯಾಗಿದೆ ಎಂಬ ಕಾರಣಕ್ಕಾಗಿ ಜಿಎಂಆರ್‌ ಇನ್ಫ್ರಾಸ್ಟ್ರಕ್ಚರ್‌ ಕಂಪೆನಿ ಷೇರಿನ ಬೆಲೆಯು ₹19.50ತಲುಪಿ ನಂತರ ಹೆಚ್ಚಿನ ಒತ್ತಡದಿಂದ ₹18.30 ರಲ್ಲಿ ಕೊನೆಗೊಂಡಿದೆ.

ಪೇಟೆ ಸ್ಪಂದಿಸುವ ವೇಗ ಕಲ್ಪನಾತೀತವಾಗಿದೆ.   ಇದಕ್ಕೆ ಉದಾಹರಣೆಯಾಗಿ ಸರ್ಕಾರಿ ವಲಯದ ಪವರ್ ಫೈನಾನ್ಸ್ ಕಾರ್ಪೊರೇಷನ್ ಷೇರಿನ ಬೆಲೆಯು ಈ ತಿಂಗಳ ಮೊದಲ ವಾರದಲ್ಲಿ ₹120 ರ ಸಮೀಪದಲ್ಲಿದ್ದು  ಆ ಸಮಯದಲ್ಲಿ ಕಂಪೆನಿಯು 10 ರಂದು ಬೋನಸ್ ಷೇರಿನ ವಿತರಣೆ ಪರಿಶೀಲಿಸಲಿದೆ ಎಂಬ ಸುದ್ದಿಯು ಷೇರಿನ ಬೆಲೆಯನ್ನು ₹139ನ್ನು ತಲುಪುವಂತೆ ಮಾಡಿತು.  ಆದರೆ ಕಂಪೆನಿಯು ಬೋನಸ್ ಷೇರು ಪ್ರಕಟಿಸಲಿಲ್ಲ.  ಈ ಕಾರಣದಿಂದಾಗಿ  ಷೇರಿನ ಬೆಲೆಯು ₹116 ರ ಸಮೀಪಕ್ಕೆ ಕುಸಿಯಿತು.  ಇದು ಪೇಟೆಯ ತಕ್ಷಣದ ಪ್ರತಿಕ್ರಿಯೆಯಾಗಿದ್ದು, ಕಂಪೆನಿಯ ತ್ರೈಮಾಸಿಕ ಫಲಿತಾಂಶ ಉತ್ತಮವಾಗಿದ್ದ ಕಾರಣ  ಈ ವಾರಾಂತ್ಯದಲ್ಲಿ ಷೇರಿನ ಬೆಲೆಯು ಮೇಲಕ್ಕೆ ಚಿಮ್ಮಿದೆ.  ಈಗಿನ ಪೇಟೆಗಳಲ್ಲಿ ಕಾರಣಗಳು ನಿಮಿತ್ತ ಮಾತ್ರ, ವಹಿವಾಟುದಾರರಲ್ಲಿ ಅವಕಾಶ ಸೃಷ್ಟಿಸಿಕೊಳ್ಳುವ ಕೌಶಲ್ಯ ಕರಗತವಾಗಿದೆ.

ಕಳೆದ ತಿಂಗಳು 1:1 ರ ಅನುಪಾತದ ಬೋನಸ್ ಷೇರು ವಿತರಿಸಿದ ಪೆಟ್ರೋನೆಟ್ ಎಲ್‌ಎನ್‌ಜಿ ಕಂಪೆನಿ ಬೋನಸ್ ಷೇರು ಪ್ರಕಟಿಸಿದ  ಸಂದರ್ಭದಲ್ಲಿ ಪ್ರತಿ ಷೇರಿಗೆ ₹5 ರಂತೆ ಲಾಭಾಂಶ ಪ್ರಕಟಿಸಿತ್ತು.  ಬೋನಸ್ ಷೇರಿಗೆ ಮುಂಚೆ ಲಾಭಾಂಶ ವಿತರಿಸದೆ ಈಗ ಅಂದರೆ ಸೆಪ್ಟೆಂಬರ್ 8 ನ್ನು ನಿಗದಿತ ದಿನವಾಗಿಸಿದ ಕಾರಣ ಲಾಭಾಂಶವು ಪ್ರತಿ ಷೇರಿಗೆ ₹2.50 ಯಂತೆ ವಿತರಣೆಯಾಗಲಿದೆ ಎಂದು ಕಂಪೆನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪೆನಿಯ ಲಾಭಾಂಶ ವಿತರಣೆ ವಿಳಂಬವಾಗುವ ಕಾರಣ ಬೋನಸ್ ಷೇರು ವಿತರಣೆಯಿಂದ ಹೆಚ್ಚಾದ ಬಂಡವಾಳದ ಮೇಲೆ  ಪ್ರತಿ ಷೇರಿಗೆ ₹2.50  ಯಂತೆ ಲಾಭಾಂಶ ವಿತರಿಸಲಾಗುವುದೆಂದು ಪ್ರಕಟಿಸಬೇಕಾಗಿತ್ತು.  ಇದು ಸರಿಯಾದ ಕ್ರಮವಾಗಿರದೆ ಸಾಮಾನ್ಯರಿಗೆ ದಾರಿತಪ್ಪಿಸುವಂತಿದೆ.  ಈ ಸಮಜಾಯಿಷಿ ಹೊರಬಂದದ್ದರಿಂದ ಷೇರಿನ ಬೆಲೆಯು ಗುರುವಾರದ ಗರಿಷ್ಠ ₹236 ರ ಸಮೀಪದಿಂದ ಹಿಂದಿರುಗಿ ₹229 ರಲ್ಲಿ ಕೊನೆಗೊಂಡಿದೆ.

ಕಂಪೆನಿಯ ಸಾಧನೆಯೊಂದೇ ಷೇರಿನ ಬೆಲೆಯಲ್ಲಿ ಏರಿಳಿತ ಉಂಟು ಮಾಡುವುದಿಲ್ಲ, ಬಾಹ್ಯ ಕಾರಣಗಳು ಹೆಚ್ಚು ಹೆಚ್ಚು ಪ್ರಭಾವಿಯಾಗಿರುತ್ತವೆ. ಅಗ್ರಮಾನ್ಯ ಕಂಪೆನಿಗಳಲ್ಲಿನ ಒಂದು ಬೆಳವಣಿಗೆಗೆ, ಅದು ಸಕಾರಾತ್ಮಕವಾಗಲಿ  ಅಥವಾ ನಕಾರಾತ್ಮಕವಾಗಲಿ,   ಪೇಟೆ ಯಾವ ರೀತಿ ಸ್ಪಂದಿಸುತ್ತದೆ ಎಂಬುದಕ್ಕೆ ಶುಕ್ರವಾರ ಇನ್ಫೊಸಿಸ್ ಷೇರಿನ ವೇಗದ ಇಳಿಕೆ ಮತ್ತು ಚೇತರಿಕೆಗಳು ಉತ್ತಮ ನಿದರ್ಶನ.

ಬೆಳವಣಿಗೆಯು ಎಷ್ಟು ಪ್ರಭಾವಿ ಎಂಬುದಕ್ಕಿಂತ ಅವಕಾಶಗಳ ಸೃಷ್ಟಿಯತ್ತ ಪೇಟೆಯ ಹೆಚ್ಚಿನ ಗಮನವಿರುತ್ತದೆ.  ಇನ್ಫೊಸಿಸ್ ಕಂಪೆನಿಯ ಆಡಳಿತ ಮಂಡಳಿ ಶನಿವಾರ ಷೇರು ಮರು ಖರೀದಿ ಬಗ್ಗೆ ನಿರ್ಧರಿಸುವ ಕಾರ್ಯ ಸೂಚಿಯ ಕಾರಣ ಗುರುವಾರ ಷೇರಿನ ಬೆಲೆಯೂ ಚೇತರಿಕೆಯಿಂದ ₹1,028 ರವರೆಗೂ ಜಿಗಿಯಿತು.  ನಂತರದ ದಿನ ಷೇರಿನ ಬೆಲೆಯು ಏಕ ಮುಖವಾಗಿ ಕುಸಿಯುತ್ತಾ  ₹ 884 ರವರೆಗೂ ಕುಸಿಯಿತು.

ಈ ವಿಧದ ಕುಸಿತವು ಶುಕ್ರವಾರ ಷೇರಿನ ಬೆಲೆ ಇನ್ನೂ ಹೆಚ್ಚಬಹುದೆಂಬ ನಿರೀಕ್ಷೆಗಳನ್ನು ಸುಳ್ಳಾಗಿಸಿತು.   ಅಂದು ಕಂಪೆನಿಯ ಮುಖ್ಯಸ್ಥ ವಿಶಾಲ್ ಸಿಕ್ಕಾ ಅವರು ರಾಜೀನಾಮೆ ನೀಡಿದ ಕಾರಣ ಉಂಟಾದ ಗೊಂದಲಮಯ ವಾತಾವರಣವೇ ಈ ಕುಸಿತಕ್ಕೆ ಪ್ರೇರಣೆಯಾಗಿದೆ.  ಇದು ಒಂದು ಕಂಪೆನಿಯ ಏಳಿಗೆಗೆ ಅದರ ನೇತೃತ್ವ ವಹಿಸಿರುವ ನಾಯಕನ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದನ್ನು ತಿಳಿಸುತ್ತದೆ.

ಒಟ್ಟಾರೆ ವಹಿವಾಟಿನ ನಾಲ್ಕು ದಿನಗಳಲ್ಲಿ 311 ಅಂಶಗಳ ಏರಿಕೆಯನ್ನು ಸಂವೇದಿ ಸೂಚ್ಯಂಕ ಪಡೆದರೆ ಮಧ್ಯಮ ಶ್ರೇಣಿ ಸೂಚ್ಯಂಕವು 482 ಅಂಶಗಳ ಏರಿಕೆ ಕಂಡುಕೊಂಡಿದೆ.  ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 581 ಪಾಯಿಂಟುಗಳ ಏರಿಕೆಯಿಂದ ಪೇಟೆಯಲ್ಲಿ ಖರೀದಿ ಆಸಕ್ತಿ ಮುಂದುವರೆದಿರುವುದನ್ನು ದೃಢೀಕರಿಸಿದೆ.  ವಿದೇಶಿ ವಿತ್ತೀಯ ಸಂಸ್ಥೆಗಳು ₹5,892  ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ಥಳೀಯ ವಿತ್ತೀಯ ಸಂಸ್ಥೆಗಳು ₹4,369 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯವು ₹131.10 ಲಕ್ಷ ಕೋಟಿಗೆ ಏರಿಕೆ ಕಂಡಿತು.

ಹೊಸ ಷೇರು: ಕೆಐಓಸಿಎಲ್ ಲಿಮಿಟೆಡ್ (ಕುದುರೆ ಮುಖ ಐರನ್ ಓರ್ ಕಂಪೆನಿ) ಷೇರುಗಳು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟಾಗುತ್ತಿದ್ದು, 22 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬೋನಸ್ ಷೇರು: ಟಾಲ್ ಬ್ರೋಸ್ ಎಂಜಿನಿಯರಿಂಗ್ ಲಿಮಿಟೆಡ್ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಲಾಭಾಂಶ: ಅಂಬಿಕಾ ಕಾಟನ್ ಮಿಲ್ಸ್ ಪ್ರತಿ ಷೇರಿಗೆ ₹10 (ನಿ ದಿ: 30 ನೇ ಆಗಸ್ಟ್)

ಮುಖಬೆಲೆ ಸೀಳಿಕೆ: ಇನ್ ಫೀ ಬೀಮ್ ಇನ್ ಕಾರ್ಪೊರೇಷನ್ ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲಿದೆ. ಇದಕ್ಕಾಗಿ ಸೆಪ್ಟೆಂಬರ್ 1 ನಿಗದಿತ ದಿನ.

ಜಮುನಾ ಆಟೊ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆಯನ್ನು ₹5 ರಿಂದ ₹1 ಕ್ಕೆ ಸೀಳಲು ಅಕ್ಟೊಬರ್ 6 ನಿಗದಿತ ದಿನವಾಗಿದೆ.

ಬೇರ್ಪಡಿಸುವಿಕೆ ವಿಚಾರ:ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ ಆಫ್ ಇಂಡಿಯಾ ಲಿಮಿಟೆಡ್ ಕಂಪೆನಿಯ ಉತ್ಪಾದನಾ ವ್ಯವಹಾರವನ್ನು ಬೇರ್ಪಡಿಸಿ ಮುಂದೆ  ಲಿಸ್ಟಿಂಗ್ ಆಗದೇ ಇರುವ ಟಿ ಐ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಲಿ ನಲ್ಲಿ  ವಿಲೀನಗೊಳಿಸುವಿಕೆ 24 ರಿಂದ ಜಾರಿಯಾಗಲಿದೆ.

ವಾರದ ವಿಶೇಷ: 

ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಕಂಪೆನಿಗಳು ಉತ್ತಮ ಸಾಧನೆಯನ್ನೇನು ಪ್ರದರ್ಶಿಸಿಲ್ಲ.  ಇದಕ್ಕೆ ವಿವಿಧ ಕಾರಣಗಳೊಂದಿಗೆ ಜಿಎಸ್‌ಟಿಯು ಕಾರಣವಾಗಿದೆ.  ಈ ತ್ರೈಮಾಸಿಕದಲ್ಲಿ ಕಂಪೆನಿಗಳು ಪ್ರಕಟಿಸುತ್ತಿರುವ ಕಾರ್ಪೊರೇಟ್ ಫಲಗಳು ಕ್ಷೀಣಿತವಾಗಿವೆ.   ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದತ್ತ ತಿರುಗಿವೆ.

ಸ್ಥಳೀಯ ವಿತ್ತೀಯ ಸಂಸ್ಥೆಗಳು ನಿರಂತರವಾಗಿ ಖರೀದಿಯತ್ತ ಸಾಗಿವೆ.  ಮ್ಯುಚುವಲ್ ಫಂಡ್‌ಗಳತ್ತ ಹೆಚ್ಚಿನ ಹಣದ ಹರಿವು ಬರುತ್ತಿದೆ.  ಬ್ಯಾಂಕ್ ಬಡ್ಡಿ ದರ ಕಡಿತದ ಕಾರಣ ಎಲ್ಲಾ ದಿಕ್ಕುಗಳಿಂದಲೂ ಷೇರುಪೇಟೆಯತ್ತ ಹಣದ ಹರಿವು ಹೆಚ್ಚಾಗಿದೆ.  ಒಂದು ಉತ್ತಮವಾದ ಬ್ರ್ಯಾಂಡ್ ಆಗಿರುವ ಕಂಪೆನಿಯ ಷೇರಿನ ಬೆಲೆಯು, ಕಂಪೆನಿ ಲಾಭ ಗಳಿಸುತ್ತಿದೆಯೋ ಇಲ್ಲವೋ ಎಂಬ ಅಂಶವನ್ನು ಪರಿಗಣಿಸದೆ ಬೇಡಿಕೆ ಪ್ರದರ್ಶಿತವಾಗುತ್ತಿರುವ ಈ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರು ವ್ಯಾಲ್ಯೂ ಪಿಕ್ ನತ್ತ ಮಾತ್ರ ಗಮನಹರಿಸಿದರೆ ಕ್ಷೇಮ.  ಪ್ರಚಾರಗಳು ಕೆಲವೊಮ್ಮೆ ಬರುವ ಶಿಫಾರಸುಗಳನ್ನು ಪೇಟೆ ಲೆಕ್ಕಿಸದೆ ತನ್ನ ಹಾದಿಯಲ್ಲಿ ಸಾಗುತ್ತಿದೆ.

ಇನ್ಫೋಸಿಸ್ ಷೇರಿನ ಬೆಲೆ ಕುಸಿತವು ಹೇಗೆ ಒಂದೇ ದಿನ ಅನಿರೀಕ್ಷಿತವಾಗಿಯಾಯಿತೋ ಹಾಗೆಯೇ ಅಪೋಲೊ ಹಾಸ್ಪಿಟಲ್ ಷೇರು  ಕೇಂದ್ರ ಸರ್ಕಾರ  ಮೊಣಕಾಲು ಚಿಕಿತ್ಸೆಯ ದರದ ಬಗ್ಗೆ ವಿಧಿಸಿದ ನಿರ್ಬಂಧದ ಕಾರಣ ವಾರ್ಷಿಕ ಕನಿಷ್ಠಕ್ಕೆ ಕುಸಿಯಿತು.  ಅನಿರೀಕ್ಷಿತ ಬೆಳವಣಿಗೆಗಳಿಗೆ ಅನಿರೀಕ್ಷಿತ ಮಾದರಿಯ ಏರಿಳಿತಗಳು ಪ್ರದರ್ಶಿತವಾಗುತ್ತಿರುವ ಈ ದಿನಗಳಲ್ಲಿ ಲಾಭ ಗಳಿಕೆಯೊಂದೇ ಧ್ಯೇಯವಾಗಿದ್ದು, ಅನುಸರಿಸಬೇಕಾದ ದಾರಿ ನಗಣ್ಯವಾಗಿದೆ.  ಇದಕ್ಕೆ ಸೂಕ್ತ ಪರಿಹಾರವೆಂದರೆ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಮಾತ್ರ.

(ಮೊ: 9886313380 ಸಂಜೆ 4.30 ರ ನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry