ಸಾಕ್ಷಿ, ಬಜರಂಗ್ ಮೇಲೆ ನಿರೀಕ್ಷೆ

7

ಸಾಕ್ಷಿ, ಬಜರಂಗ್ ಮೇಲೆ ನಿರೀಕ್ಷೆ

Published:
Updated:
ಸಾಕ್ಷಿ, ಬಜರಂಗ್ ಮೇಲೆ ನಿರೀಕ್ಷೆ

ಪ್ಯಾರಿಸ್‌: ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಸಾಕ್ಷಿ ಮಲ್ಲಿಕ್ ಹಾಗೂ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಬಜರಂಗ್‌ ಪೂನಿಯಾ ಸೋಮವಾರದಿಂದ ಇಲ್ಲಿ ಆರಂಭವಾಗಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪ್ರಮುಖ ಭರವಸೆ ಎನಿಸಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ 58ಕೆ.ಜಿ ವಿಭಾಗದಲ್ಲಿ ಪದಕ ಗೆದ್ದಿದ್ದರು. 60ಕೆ.ಜಿ ವಿಭಾಗಕ್ಕೆ ಹೊರಳಿದ ಬಳಿಕ ಅವರು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ  ಬೆಳ್ಳಿ ಸಾಧನೆ ಮಾಡಿದ್ದರು. ಇದೇ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ಗೂ ಅರ್ಹತೆ ಗಿಟ್ಟಿಸಿದ್ದಾರೆ.

ಮಂಗಳವಾರ ಮಹಿಳೆಯರ ವಿಭಾಗದ ಪಂದ್ಯಗಳು ಆರಂಭವಾಗಲಿವೆ. ಸಾಕ್ಷಿ ಈ ವಿಭಾಗದಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ 55ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ವಿನೇಶ್‌ ಪೊಗಟ್ ಇಲ್ಲಿ 48ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಫಾರ್ಮ್ ಕಂಡುಕೊಂಡಿರುವ 22 ವರ್ಷದ  ವಿನೇಶ್ ಇಲ್ಲಿ ಪದಕ ಗೆಲ್ಲುವ ಭರವಸೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಪೊಗಟ್ ಸಹೋದರಿಯರಾದ ಗೀತಾ ಹಾಗೂ ಬಬಿತಾ ಆಯ್ಕೆ ಟ್ರಯಲ್ಸ್‌ನಲ್ಲಿ ಕೂಡ ಕಣಕ್ಕಿಳಿದಿರಲಿಲ್ಲ. ಯುವ ಆಟಗಾರ್ತಿಯರಾದ ರಿತು ಹಾಗೂ ಸಂಗೀತಾ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.

2013ರಲ್ಲಿ ಇಲ್ಲಿ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಗೆದ್ದಿದ್ದ ಬಜರಂಗ್ ಈ ಬಾರಿ ಚಿನ್ನ ಗೆಲ್ಲುವ ನಿಟ್ಟಿನಲ್ಲಿ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬಜರಂಗ್ ಅವರ ಸಾಧನೆ ಈ ಚಾಂಪಿಯನ್‌ಷಿಪ್‌ನ ಪ್ರಮುಖ ಸ್ಪೂರ್ತಿ ಎನಿಸಿದೆ. 2013ರಲ್ಲಿ 60ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದಿದ್ದ ಅವರು ಈ ಬರಿ 65ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಹೊಸ ನಿಯಮದ ಅನುಸಾರ ನಿಗದಿಯಾಗಿರುವ ತೂಕದ ವಿಭಾಗಗಳಲ್ಲಿ ಬಜರಂಗ್ ಅವರು ಹಿಂದಿನ ಕೆಲವು ಟೂರ್ನಿಗಳ ಆಧಾರದ ಮೇಲೆ ಏಷ್ಯಾದ ಉತ್ತಮ ಕುಸ್ತಿಪಟು ಎನಿಸಿದ್ದಾರೆ. ಹತ್ತು ದಿನಗಳ ಹಿಂದೆ ನಡೆದ ವಿಶೇಷ ಆಯ್ಕೆ ಟ್ರಯಲ್ಸ್‌ನಲ್ಲಿ ಬಜರಂಗ್‌ 10–0ರಲ್ಲಿ ರಾಹುಲ್ ಮಾನ್ ಅವರನ್ನು ಮಣಿಸಿ ಈ ಚಾಂಪಿಯನ್‌ಷಿಪ್ ಅರ್ಹತೆ ಗಿಟ್ಟಿಸಿದ್ದಾರೆ.

ಸೋನೆಪತ್‌ನಲ್ಲಿ ನಡೆದಿದ್ದ ಟ್ರಯಲ್ಸ್‌ನಲ್ಲಿ ರಾಹುಲ್ ಗೆಲುವು ದಾಖಲಿಸಿದ್ದರು. ಆದರೆ ಬಜರಂಗ್ ಅವರು ಭಾರತ ಕುಸ್ತಿ ಫೆಡರೇಷನ್‌ಗೆ ಮತ್ತೊಮ್ಮೆ ಟ್ರಯಲ್ಸ್ ನಡೆಸುವಂತೆ ಮನವಿ ಮಾಡಿದ್ದರು. ಟ್ರಯಲ್ಸ್‌ ನಡೆಸಿದ್ದ ವೇಳೆ ತಾವು ಜ್ವರದಿಂದ ಬಳಲುತ್ತಿದ್ದ ಕಾರಣ ಇನ್ನೊಂದು ಅವಕಾಶ ನೀಡುವಂತೆ ಪತ್ರದಲ್ಲಿ ಕೋರಿದ್ದರು. ಈ ಮನವಿ ಪುರಸ್ಕರಿಸಿದ ಫಡರೇಷನ್‌ ಆಗಸ್ಟ್‌ 12ರಂದು ವಿಶೇಷ ಟ್ರಯಲ್ಸ್ ನಡೆಸಿತ್ತು.

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಸಂದೀಪ್ ತೋಮರ್‌ 57ಕೆ.ಜಿ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದಾರೆ. ಫ್ರೀಸ್ಟೈಲ್ ಕುಸ್ತಿಪಟುಗಳಾದ ಅಮಿತ್ ಧನಕರ್‌ (70ಕೆ.ಜಿ), ಪ್ರವೀಣ್‌ ರಾಣಾ (74ಕೆ.ಜಿ), ಸತ್ಯವ್ರತ್‌ ಕಡಿಯಾನ್ (97ಕೆ.ಜಿ) ಕೂಡ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ.

ಗ್ರೀಕೊ ರೋಮನ್ ವಿಭಾಗದಲ್ಲಿ ಭಾರತದ ಎಂಟು ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ. ಚಾಂಪಿಯನ್‌ಷಿಪ್‌ನ ಮೊದಲ ಎರಡು ದಿನ ಈ ವಿಭಾಗದಲ್ಲಿ ಪಂದ್ಯಗಳು ನಡಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry