7

ಬಿಟ್ಟೇನೆಂದರೂ ಬಿಡದ ವ್ಯಾಮೋಹ...

Published:
Updated:
ಬಿಟ್ಟೇನೆಂದರೂ ಬಿಡದ ವ್ಯಾಮೋಹ...

ಬಿಟ್ಟುಕೊಡುವುದು ನಮಗೆ ಯಾರಿಗೂ ಸುಲಭವಲ್ಲ. ಮಗಳು ಹದಿಹರೆಯ ದಾಟಿದ ಬಳಿಕವೂ ಹೆತ್ತವರಾಗಿ ನಿಮಗೆ ಆಕೆಯ ಬಗ್ಗೆ ಚಿಂತೆ ಇರುತ್ತದೆ ಮತ್ತು ನಿಮ್ಮ ನಿಲುವುಗಳನ್ನು ಹೇರುತ್ತೀರಿ. ಅದನ್ನು ಅನುಸರಿಸುವಂತೆ ಮಾಡಲು ನಾವು ನಿರಂಕುಶ ಅಧಿಕಾರವನ್ನು ಬಳಸುತ್ತೇವೆ; ಸ್ವಲ್ಪವೇ ಸ್ವಲ್ಪ ಸ್ವತಂತ್ರ ಮನೋಭಾವವನ್ನು ಅವರು ತೋರಿದರೆ ಭಾವನಾತ್ಮಕವಾಗಿ ಅಥವಾ ಸಂಪತ್ತನ್ನು ಬಳಸಿ ಪರಿಸ್ಥಿತಿಯನ್ನು ನಮ್ಮ ಪರವಾಗಿ ಪರಿವರ್ತಿಸುತ್ತೇವೆ. ಸೂಕ್ಷ್ಮವಾಗಿ ಮಾತ್ರವಲ್ಲ, ರಾಜಾರೋಷವಾಗಿ ಕೂಡ ಇದು ನಡೆಯುತ್ತದೆ. ಮಗ ದೊಡ್ಡವನಾದ ಬಳಿಕ ನಮ್ಮ ಸಣ್ಣ ಅಥವಾ ದೊಡ್ಡ ಉದ್ಯಮವನ್ನು ವಹಿಸಿಕೊಳ್ಳಲು ಬಯಸಿದರೆ, ಅಧಿಕಾರವನ್ನು ಹಸ್ತಾಂತರಿಸಲು ನಮಗೆ ಇಷ್ಟ ಇರುವುದಿಲ್ಲ, ಕೊನೆಯ ಉಸಿರು ಇರುವವರೆಗೆ ನಾವು ಅದಕ್ಕೆ ಅಂಟಿಕೊಂಡೇ ಇರುತ್ತೇವೆ. ಇದು ವಿಶೇಷವೇನೂ ಅಲ್ಲ. ಸಾಮ್ರಾಜ್ಯವಾಗಲೀ, ರಾಜಕಾರಣವಾಗಲೀ, ವ್ಯಾಪಾರವಾಗಲೀ, ಧಾರ್ಮಿಕ ವ್ಯವಸ್ಥೆಯಾಗಲೀ ಅಥವಾ ಕುಟುಂಬವೇ ಆಗಲಿ ಬಿಟ್ಟುಕೊಡುವುದಕ್ಕೆ ನಾವು ಸಿದ್ಧವಿರುವುದಿಲ್ಲ. ಅಧಿಕಾರ ಮತ್ತು ಪ್ರಸಿದ್ಧಿಯೇ ಹಾಗೆ, ಅದಕ್ಕೆ ಬಿಟ್ಟುಕೊಡಲಾಗದ ಸಮ್ಮೋಹಕತೆ ಇರುತ್ತದೆ.

ತಮ್ಮ ಜೀವಿತಾವಧಿಯಲ್ಲಿಯೇ ದಂತಕತೆಯಾದವರು ನಾರಾಯಣ ಮೂರ್ತಿ. ನಮ್ಮ ನಡುವೆ ಇರುವ ಅತ್ಯುತ್ತಮ ಪ್ರತಿಭಾವಂತರಿಗೂ ಅನುಕರಿಸಲಾಗದ ನಾಯಕತ್ವ ಗುಣಗಳನ್ನು ಹೊಂದಿರುವ ಅವರು ಬಹುದೊಡ್ಡ ಸಂಕೇತ. ಮಿತವ್ಯಯದ ಜೀವನದ ಮೂಲಕ ತಮ್ಮ ಬದುಕನ್ನೇ ನಿದರ್ಶನವಾಗಿ ಇಟ್ಟವರು ಅವರು. ಶಾಲಾ ಶಿಕ್ಷಕರ ಮಗನಾದ ಅವರು ಕೇವಲ ₹10 ಸಾವಿರ ಮೂಲಧನದಲ್ಲಿ ಇತರ ಪಾಲುದಾರರ ಜತೆ ಸೇರಿ ಶ್ರೇಷ್ಠವಾದ ಮಾಹಿತಿ ತಂತ್ರಜ್ಞಾನ (ಐಟಿ) ಸಂಸ್ಥೆ ಕಟ್ಟಿದರು. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ತಮ್ಮಂತಹ ಲಕ್ಷಾಂತರ ಜನರಿಗೆ ಭರವಸೆಯ ಬೆಳಕಾದವರು.

ಮೂರ್ತಿ ಅವರಲ್ಲಿ ಕಂಡ ಅಸಾಧಾರಣ ಅಂಶ ಏನು ಎಂದು ಅವರ ಹೆಂಡತಿ ಸುಧಾಮೂರ್ತಿ ಅವರನ್ನು ನಾನೊಮ್ಮೆ ಕೇಳಿದ್ದೆ. ಗಂಡನ ಬಗ್ಗೆ ಹೆಂಡತಿಗೆ ಗೊತ್ತಿಲ್ಲದ್ದೇನೂ ಇರುವುದಿಲ್ಲ ಎನ್ನುತ್ತಾರೆ. ಹಾಗಾಗಿ ನನಗೆ ಕುತೂಹಲವಿತ್ತು. ‘ಅವರೊಬ್ಬ ದಾರ್ಶನಿಕ’ ಎಂದು ಸುಧಾ ಹೇಳಿದ್ದರು. ‘ದರ್ಶನ ಎಂದರೆ ಅಗೋಚರವಾದದ್ದನ್ನು ಕಾಣುವುದು’ ಎಂಬುದು ಜೊನಾಥನ್ ಸ್ವಿಫ್ಟ್‌ನ ಮಾತು. ಇಲ್ಲೊಂದು ವಿರೋಧಾಭಾಸ ಇದೆ- ನಮಗೆ ಸ್ಪಷ್ಟವಾಗಿ ಏನು ಕಾಣಿಸುತ್ತದೆಯೋ ಅದು ದರ್ಶನ. ಭವಿಷ್ಯ ಅಥವಾ ಮುಂದೇನಾಗುತ್ತದೆ ಎಂಬುದು ಅಗೋಚರ. ಮುಂದೇನಾಗಬಹುದು ಎಂಬುದನ್ನು ಒಬ್ಬ ಉದ್ಯಮಿ ಮನಸ್ಸಿನಲ್ಲಿಯೇ ಕಾಣಬಲ್ಲ. ಇತರರಿಗೆ ಕಾಣದ್ದು ಆತನಿಗೆ ಕಾಣಿಸುತ್ತದೆ. ಲೈಸೆನ್ಸ್ ರಾಜ್‍ನ ದಿನಗಳಲ್ಲಿ, ಒಂದು ಕಂಪ್ಯೂಟರ್ ಆಮದು ಮಾಡಿಕೊಳ್ಳುವ ಪರವಾನಗಿಗೆ ವರ್ಷಗಟ್ಟಲೇ ಕಾಯಬೇಕಿದ್ದ ದಿನಗಳಲ್ಲಿ, ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವೇ ಇಲ್ಲದಿದ್ದ ದಿನಗಳಲ್ಲಿ, ಈ ಕ್ಷೇತ್ರದಲ್ಲಿ ಭಾರತಕ್ಕೆ ಬಹಳ ದೊಡ್ಡ ಭವಿಷ್ಯವಿದೆ ಎಂಬುದನ್ನು ಮೂರ್ತಿ ಅವರು ಕಂಡಿದ್ದರು. ಭರವಸೆ ಮತ್ತು ಉತ್ಸಾಹವನ್ನು ಕಳೆದುಕೊಳ್ಳದೆ ತಮ್ಮ ಕನಸಿನ ಸಾಕಾರಕ್ಕೆ ನಿರಂತರವಾಗಿ ಕೆಲಸ ಮಾಡಿದ ಅವರು ಭಾರತದ ಐಟಿ ಕ್ಷೇತ್ರದ ಭವಿಷ್ಯವನ್ನು ರೂಪಿಸಿದರು. ಒಂದು ಪೈಸೆಯೂ ಕೈಯಲ್ಲಿ ಇಲ್ಲದ ದಿನಗಳನ್ನು ಅವರು ಕಂಡಿದ್ದಾರೆ. ಆದರೆ ಅವರಲ್ಲಿದ್ದ ಕೆಚ್ಚು ಮತ್ತು ದೃಢನಿಷ್ಠೆಯಿಂದಾಗಿಯೇ ಹಿಡಿದ ಕೆಲಸವನ್ನು ಬಿಡಲಿಲ್ಲ. ಸಣ್ಣ ಸಂಪನ್ಮೂಲದಿಂದಲೇ ಬದುಕು ನಡೆಸಿದರು, ಸ್ಕೂಟರ್‌ನಲ್ಲಿ ಪಯಣಿಸುತ್ತಲೇ ತಮ್ಮ ಗುರಿ ಮುಟ್ಟಿದರು.

ಮೂರ್ತಿ ಅವರು ನಾಯಕ ಮಾತ್ರವಲ್ಲ, ತಮ್ಮ ಜತೆ ಸೇರಿ ಸಂಸ್ಥೆ ಸ್ಥಾಪಿಸಿದ ಇತರ ಪಾಲುದಾರರನ್ನೂ ನಾಯಕರನ್ನಾಗಿ ಬೆಳೆಸಿದವರು. ಪಾಲುದಾರರ ಅಹಂ ಮತ್ತು ವೈಯಕ್ತಿಕ ಸಂಘರ್ಷದ ಕಾರಣದಿಂದ ಉಂಟಾಗುವ ಭಿನ್ನಾಭಿಪ್ರಾಯಗಳಿಂದಾಗಿ ಹೆಚ್ಚಿನ ಉದ್ಯಮಗಳು ವಿಫಲವಾಗುತ್ತವೆ. ‘ಹೆಂಡತಿಗಾದರೂ ವಿಚ್ಛೇದನ ಕೊಡಬಹುದು, ವ್ಯಾಪಾರದ ಪಾಲುದಾರರನ್ನು ಬಿಡಲಾಗದು ಎಂಬುದನ್ನು ನೆನಪಿಡಿ’ ಎಂದು ನನ್ನ ಆರ್ಥಿಕ ಸಲಹೆಗಾರರು ಒಮ್ಮೆ ಹೇಳಿದ್ದರು. ತಮ್ಮ ಪಾಲುದಾರರನ್ನು ಅತ್ಯಂತ ಚಾತುರ್ಯದಿಂದ ಆಯ್ಕೆ ಮಾಡಿಕೊಂಡಿದ್ದರು ಮತ್ತು ಆ ಎಲ್ಲ ಪಾಲುದಾರರು ಪ್ರಶ್ನಾತೀತವಾಗಿ ಅವರನ್ನು ಅನುಸರಿಸಿದರು ಹಾಗೂ ಅವರ ಕನಸು ಮತ್ತು ನಾಯಕತ್ವವನ್ನು ನಂಬಿದರು ಎಂಬುದು ಮೂರ್ತಿ ಅವರ ಹೆಗ್ಗಳಿಕೆ. ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಶಿಬುಲಾಲ್, ದಿನೇಶ್, ರಾಘವನ್ ಮತ್ತು ಸ್ಥಾಪನಾ ಪಾಲುದಾರ ಅಲ್ಲದಿದ್ದರೂ ಬಳಿಕ ಜತೆಯಾದ ಮೋಹನ್‍ದಾಸ್ ಪೈ ಅವರು ತಮ್ಮದೇ ರೀತಿಯಲ್ಲಿ ಉತ್ತಮ ನಾಯಕರು.

ನಂತರದ ವರ್ಷಗಳಲ್ಲಿ ಮೂರ್ತಿ ಅವರು ಇನ್ಫೊಸಿಸ್‍ನ ಸಂಕೇತ ಮತ್ತು ಅದರ ಮುಖವಾದದ್ದು ಮಾತ್ರವಲ್ಲದೆ, ಭಾರತದ ಐಟಿ ಉದ್ಯಮದ ಗುರುತು ಕೂಡ ಆದರು. ಷೇರುದಾರರ ಅಪಾರ ಸಂತೃಪ್ತಿ ಮತ್ತು ನಿರಂತರ ಲಾಭ ಗಳಿಕೆಯಿಂದಾಗಿ ಇನ್ಫೊಸಿಸ್, ಷೇರುಪೇಟೆಯ ಕಣ್ಮಣಿಯಾಗಿತ್ತು ಮತ್ತು ಭಾರತದ ಐಟಿ ಉದ್ಯಮದ ಮುಂದಾಳುವಾಗಿತ್ತು. ಅಮೆರಿಕ ಮತ್ತು ಪಶ್ಚಿಮದ ದೇಶಗಳಲ್ಲಿ ಕೂಡ ಇನ್ಫೊಸಿಸ್ ನಾಸ್ಡಾಕ್‍ನಲ್ಲಿ ನೋಂದಣಿಯಾಗಿತ್ತು. ಈ ರೀತಿಯ ನೋಂದಣಿಯಾದ ಭಾರತದ ಮೊದಲ ಸಂಸ್ಥೆ ಇದು. ಮೂರ್ತಿ ಅವರ ಹಿರಿಮೆ ಇರುವುದು ಹಣಕಾಸಿನ ಗಳಿಕೆಯಲ್ಲಿ ಮಾತ್ರವಲ್ಲ. ಇನ್ಫೊಸಿಸ್ ಅತ್ಯುತ್ತಮ ನೈತಿಕ ಮಟ್ಟವನ್ನು ಅಳವಡಿಸಿಕೊಂಡಿತು ಮತ್ತು ಉದ್ಯಮ ಆಡಳಿತಕ್ಕೆ ಹೊಸ ಮಾನದಂಡವನ್ನೇ ಸೃಷ್ಟಿಸಿತು. ಇದು ಮೂರ್ತಿ ಅವರ ಹಿರಿಮೆಯನ್ನು ಹಲವು ಪಟ್ಟು ಹೆಚ್ಚಿಸಿದೆ. ಒಳ್ಳೆಯವರಾಗಿರುವುದೇ ಉತ್ತಮ ವ್ಯಾಪಾರ ಎಂಬುದನ್ನು ಅವರು ನಮಗೆಲ್ಲ ಕಲಿಸಿಕೊಟ್ಟರು. ನೈತಿಕವಾಗಿ ಮತ್ತು ಪ್ರಾಮಾಣಿಕವಾಗಿ ಇರುವ ಮೂಲಕವೇ ಉದ್ಯಮದಲ್ಲಿ ಯಶಸ್ಸು ಪಡೆಯುವುದು ಸಾಧ್ಯ ಎಂಬುದನ್ನು ಅನುಮಾನದಿಂದ ನೋಡುತ್ತಿದ್ದವರು ಮತ್ತು ಉದ್ಯಮಶೀಲತೆಯ ಆಕಾಂಕ್ಷೆ ಹೊಂದಿದ್ದ ಯುವಜನರಿಗೆ ಅವರು ತೋರಿಸಿಕೊಟ್ಟರು. ‘ಶ್ರೀಮಂತನಾಗಬೇಕಿದ್ದರೆ ಠಕ್ಕನಾಗಿ, ನಿಮ್ಮ ಕನಸನ್ನೂ ಮೀರಿದ ಸಮೃದ್ಧ ವ್ಯಕ್ತಿಯಾಗಬೇಕಿದ್ದರೆ ಉತ್ತಮ ಉದ್ಯಮ ಆಡಳಿತ ಮಾನದಂಡಗಳನ್ನು ಅನುಸರಿಸಿ’ ಎಂದು ಸಿ.ಕೆ. ಪ್ರಹ್ಲಾದ್ ಒಮ್ಮೆ ಹೇಳಿದ್ದರು.

ಮೂರ್ತಿ ಅವರು ವಿನಮ್ರತೆಯೇ ಮೂರ್ತಿವೆತ್ತಂತೆ, ಅತ್ಯಂತ ಸಭ್ಯವಾಗಿ ತಮ್ಮನ್ನು ಬಿಂಬಿಸಿಕೊಂಡವರು. ಆದರೆ  ಇನ್ಫೊಸಿಸ್‍ನ ಒಳಗೆ ಅವರು ನಿರಂಕುಶಾಧಿಕಾರಿ ಮತ್ತು ಕಟ್ಟು ನಿಟ್ಟಾಗಿಯೇ ಸಂಸ್ಥೆಯನ್ನು ನಡೆಸಿಕೊಂಡು ಹೋದವರು ಎಂದು ಗುರುತಿಸಿಕೊಳ್ಳುತ್ತಾರೆ. ‘ಅವರೊಬ್ಬ ಭಯಾನಕ ವ್ಯಕ್ತಿ’ ಎಂದು ಮೋಹನ್‍ದಾಸ್ ಪೈ ಅವರು ಹೇಳಿದ್ದು ನನಗೆ ನೆನಪಿದೆ. ಅದಕ್ಕೆ ಉದಾಹರಣೆಯಾಗಿ ಅವರು ಒಂದು ಘಟನೆಯನ್ನು ಹೇಳಿದ್ದರು. ಒಂದು ರಾತ್ರಿ ಪೈ ಅವರಿಗೆ ಕರೆ ಮಾಡಿದ ಮೂರ್ತಿ, ಮೈಸೂರಿನಲ್ಲಿ ಅವರು ನಿರ್ಮಿಸಿರುವ ಏಕಕಾಲಕ್ಕೆ ಹತ್ತು ಸಾವಿರ ಜನರಿಗೆ ತರಬೇತಿ ನೀಡಬಹುದಾದ ಇನ್ಫೊಸಿಸ್ ಕೇಂದ್ರದಲ್ಲಿ ನೀರಿನ ಬಳಕೆ ಕಡಿಮೆ ಮಾಡಲು ಸೂಚಿಸುತ್ತಾರೆ. ಅದು ಸಾಧ್ಯವಿಲ್ಲ ಎಂದು ವಾದಿಸಲು ಪೈ ಯತ್ನಿಸುತ್ತಾರೆ. ಆದರೆ ಮೂರ್ತಿ ಅವರ ಬಳಿ ನೀರಿನ ಬಳಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳೂ ಇದ್ದವು. ‘ಮೋಹನ್, ಅಲ್ಲಿ ನೀರಿನ ಬಳಕೆ ತಲಾ 50 ಲೀಟರ್‌ಗಿಂತ ಹೆಚ್ಚು ಇದೆ. ಅದನ್ನು ನೀವು 20 ಲೀಟರ್‌ಗೆ ಇಳಿಸಬೇಕು. ನಾನು ದಿನಕ್ಕೆ 15 ಲೀಟರ್ ನೀರಷ್ಟೇ ಬಳಸುತ್ತಿದ್ದೇನೆ. ನಾನು ಬಕೆಟ್ ಉಪಯೋಗಿಸುತ್ತೇನೆ’ ಎಂದು ಮೂರ್ತಿ ಹೇಳಿದ್ದರಂತೆ. ಲಾಭದ ಮೊತ್ತ ಸಾವಿರಾರು ಕೋಟಿರೂಪಾಯಿ ಆಗಿದ್ದಾಗಲೂ ಸಂಸ್ಥೆಗಾಗಿ ಒಂದೊಂದು ಪೈಸೆ ಉಳಿಸಲು ಪ್ರತಿಯೊಂದನ್ನೂ ಗಮನಿಸುವ ಇಂತಹ ಪ್ರವೃತ್ತಿ ಅಪೂರ್ವ. ಮಹಾತ್ಮ ಗಾಂಧಿಯ ರೀತಿಯ ಕಟು ವರ್ತನೆ ಅವರದ್ದು. ಆದರೆ ಅವರ ಪ್ರಶ್ನಾತೀತ ಬದ್ಧತೆಯಿಂದಾಗಿ ಎಲ್ಲರೂ ಎಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದರು. ಅವರು ಇನ್ಫೊಸಿಸ್‍ನಲ್ಲಿ ತಂದೆ ಸಮಾನವಾದ ವ್ಯಕ್ತಿ. ತಮ್ಮಂತಹುದೇ ಬದ್ಧತೆಯನ್ನು ಅವರು ಇತರರಿಂದಲೂ ಬಯಸುತ್ತಿದ್ದರು ಮತ್ತು ಸ್ವತಃ ತಮಗೂ ಅವರು ಯಾವುದೇ ವಿನಾಯಿತಿ ಕೊಡುತ್ತಿರಲಿಲ್ಲ.

ಒಂದಲ್ಲ ಒಂದು ದಿನ ನಾವು ಅಧಿಕಾರ ಹಸ್ತಾಂತರಿಸಿ, ದಾರಿ ಬಿಟ್ಟುಕೊಡಬೇಕು. ಹೊಸ ತಲೆಮಾರು ಅದನ್ನು ವಹಿಸಿಕೊಳ್ಳಬೇಕು. ಹಾಗೆ ಬಂದವರು ಸ್ಥಾಪಕರ ಸ್ಥಾನ ತುಂಬಲಾಗದು ಮತ್ತು ಸ್ಥಾಪಕರಿಗೆ ಅವರು ಪರ್ಯಾಯವೂ ಅಲ್ಲ. ಅದು ಸಾಧ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ. ನೆಪೋಲಿಯನ್‍ನ ಪ್ರಸಿದ್ಧವಾದ ಒಂದು ಮಾತು ಹೀಗಿದೆ: ‘ನಾನು ನನ್ನ ಕಾಲದ ಸೃಷ್ಟಿ. ನನ್ನ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕೂಡ ನನಗೆ ಪರ್ಯಾಯವಾಗುವುದು ಅಸಾಧ್ಯ’.

ವಿಶಾಲ್ ಸಿಕ್ಕಾ ಅವರು ನಾರಾಯಣಮೂರ್ತಿ ಆಗುವುದು ಸಾಧ್ಯವಿಲ್ಲ. ಅವರು ಗೌರವಾನ್ವಿತವಾಗಿಯೇ ತಮ್ಮ ಹುದ್ದೆ ಬಿಟ್ಟು ಹೊರನಡೆದಿದ್ದಾರೆ. ತಮ್ಮ ಪರಿಕಲ್ಪನೆಯ ನೈತಿಕ ಮಾನದಂಡಗಳನ್ನು ಅನುಸರಿಸುವಲ್ಲಿ ಸಿಕ್ಕಾ ವಿಫಲ ರಾಗಿದ್ದಾರೆ ಎಂದು ನಾರಾಯಣಮೂರ್ತಿ ಮತ್ತು ಅವರ ಕೆಲವು ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಮೂರು ವರ್ಷಗಳ ಹಿಂದೆ ಮೂರ್ತಿ ಅವರು ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದರು. ಸಿಕ್ಕಾ ಅವರನ್ನು ಆಯ್ಕೆ ಮಾಡಿದ್ದು ಮೂರ್ತಿ ಅವರೇ. ಅಲ್ಲಿಗೆ ಎಲ್ಲವೂ ಮುಗಿಯಬೇಕಿತ್ತು. ಅದರ ಪಾಡಿಗೆ ಅದನ್ನು ನಡೆಯಲು ಬಿಟ್ಟು ಮೂರ್ತಿ ಅವರು ಇತರ ಷೇರುದಾರರ ಹಾಗೆಯೇ ನಿರ್ದೇಶಕ ಮಂಡಳಿ ಸಭೆ ಮತ್ತು ವಾರ್ಷಿಕ ಮಹಾಸಭೆಗಳಲ್ಲಿ ತಮ್ಮ ಪ್ರಭಾವ ಬಳಸಬೇಕಿತ್ತು ಅಥವಾ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಬೇಕಿತ್ತು. ನಿರ್ದೇಶಕ ಮಂಡಳಿಯ ಮೇಲೆ ಅವರಿಗೆ ವಿಶ್ವಾಸವೇ ಇಲ್ಲ ಎಂದಾಗಿದ್ದಲ್ಲಿ ಇತರ ಷೇರುದಾರರ ಜತೆ ಸೇರಿ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಿರ್ದೇಶಕ ಮಂಡಳಿಯನ್ನು ಬದಲಾಯಿಸಲು ಪ್ರಯತ್ನಿಸಬೇಕಿತ್ತು. ನೀವು ಶೇ 3ರಿಂದ 4ರಷ್ಟು ಷೇರು ಹೊಂದಿರುವ ಸಣ್ಣ ಷೇರುದಾರರಾಗಿರಬಹುದು ಅಥವಾ ದೊಡ್ಡ ಷೇರುದಾರರಾಗಿರಬಹುದು (ಮೂರ್ತಿ ಮತ್ತು ಇತರ ಸ್ಥಾಪಕರು ಸಣ್ಣ ಷೇರುದಾರರ ಗುಂಪಿಗೆ ಸೇರುತ್ತಾರೆ) ಕುಟುಂಬವೊಂದರ ನಿಯಂತ್ರಣದಲ್ಲಿರುವ ಹಲವು ನೋಂದಾಯಿತ ಸಂಸ್ಥೆಗಳ ರೀತಿಯಲ್ಲಿ ಇನ್ಫೊಸಿಸ್ ಅನ್ನು ನಡೆಸಲು ಬರುವುದಿಲ್ಲ. ಈ ಕಾರಣಕ್ಕಾಗಿಯೇ ಮೂರ್ತಿ ಅವರು ಭಿನ್ನ, ಅದಕ್ಕಾಗಿಯೇ ಅವರಿಗೆ ಭಾರತದಲ್ಲಿ ಅಷ್ಟೊಂದು ಗೌರವ.

ನಿವೃತ್ತರಾಗಿದ್ದ ಮೂರ್ತಿ ಅವರು, ಟಿಸಿಎಸ್‍ಗೆ ಹೋಲಿಸಿದರೆ ಇನ್ಫೊಸಿಸ್‍ನ ಕ್ಷಮತೆ ಕಮ್ಮಿಯಾಗಿದೆ ಎಂಬ ಕಾರಣಕ್ಕೆ ಆರು ವರ್ಷಗಳ ಹಿಂದೆ ಸಂಸ್ಥೆಗೆ ಮತ್ತೆ ತಾವಾಗಿಯೇ ಬಂದರು. ಆಗ ಸಿಇಒ ಆಗಿದ್ದ ಶಿಬುಲಾಲ್ ಅವರು ಮೂರ್ತಿ ಅವರನ್ನು ಆದರದಿಂದಲೇ ಬರಮಾಡಿಕೊಂಡರು. ಹಾಗೆ ನೋಡಿದರೆ ಶಿಬುಲಾಲ್ ಉತ್ತಮ ಸಾಧನೆಯನ್ನೇ ಮಾಡಿದ್ದರು. ರೂಪಾಯಿ ಎದುರು ಏರುತ್ತಲೇ ಹೋದ ಡಾಲರ್ ಮೌಲ್ಯ, ಪಶ್ಚಿಮದ ದೇಶಗಳಲ್ಲಿನ ಆರ್ಥಿಕ ಹಿಂಜರಿತದಂತಹ ಸವಾಲಿನ ನಡುವೆಯೂ ಇನ್ಫೊಸಿಸ್ ಸಾಧನೆ ಉತ್ತಮವಾಗಿಯೇ ಇತ್ತು. ಸಂಸ್ಥೆಯ ಎಲ್ಲ ಸ್ಥಾಪಕರೂ ಮೂರ್ತಿ ಅವರನ್ನು ಪ್ರೀತಿ ಗೌರವದಿಂದಲೇ ಕಾಣುತ್ತಾರೆ. ಸಿಕ್ಕಾ ಅವರು ಹೊಸ ತಲೆಮಾರಿನ ವೃತ್ತಿಪರ ವ್ಯಕ್ತಿ, ಅವರಿಗೆ ಅವರದೇ ನಿಲುವುಗಳಿವೆ. ಮೂರ್ತಿ ಅವರು ಮತ್ತೆ ಬಂದಾಗಲೂ ಉತ್ತಮ ಕೆಲಸವನ್ನೇ ಮಾಡಿದರು. ಆದರೆ ಗೊಣಗುತ್ತಲೇ ಅಧಿಕಾರ ಹಸ್ತಾಂತರ ಮಾಡಿದರು ಮತ್ತು ಆಗ ಅವರು ಹೇಳಿದ್ದ ಕೆಲವು ಮಾತುಗಳು ಅವರ ಹಿರಿಮೆಗೆ ತಕ್ಕದ್ದಾಗಿರಲಿಲ್ಲ ಎಂಬುದು ವಿಷಾದದ ಸಂಗತಿ. ಇನ್ಫೊಸಿಸ್‍ಗೆ ಮೂರ್ತಿ ಅವರು ಹಾಕಿಕೊಟ್ಟ ಗಟ್ಟಿ ತಳಪಾಯ ಮತ್ತು ಅವರು ಬೆಳೆಸಿದ ಪ್ರಬಲ ನಾಯಕತ್ವ ಯಾವುದೇ ಬಿರುಗಾಳಿಯನ್ನು ತಡೆದುಕೊಳ್ಳಲು ಶಕ್ತವಿದೆ.

ತಪ್ಪು ಯಾರದ್ದು ಎಂಬುದನ್ನು ಹುಡುಕುವ ಪ್ರಯತ್ನ ಇದಲ್ಲ. ಉತ್ತಮ ಆಡಳಿತವನ್ನು ಜಾರಿ ಮಾಡುವಲ್ಲಿ ಸಿಕ್ಕಾ ಮತ್ತು ಆಡಳಿತ ಮಂಡಳಿ ಯಶಸ್ವಿಯಾಗಿಲ್ಲ ಎಂದು ಸ್ಥಾಪಕರಲ್ಲಿ ಕೆಲವರು ಅಥವಾ ಮೂರ್ತಿ ಅವರು ಆರೋಪಿಸಿದ್ದಾರೆ. ಆದರೆ, ಇದು ವ್ಯವಸ್ಥೆಯನ್ನು ಮುಂದುವರಿಯಲು ಬಿಡುವ ಮತ್ತು ತಾವು ಘನತೆಯಿಂದ ಹಿಂದೆ ಸರಿಯುವ ವಿಚಾರ. ಹೊಸ ತಲೆಮಾರಿನ ಮೇಲೆ ನಂಬಿಕೆ ಮತ್ತು ವಿಶ್ವಾಸ ಇರಿಸಿ, ಅವರದ್ದೇ ತಪ್ಪುಗಳಿಂದ ಅವರು ಕಲಿಯಲು ಅವಕಾಶ ಕೊಡುವ ವಿಚಾರ. ತಮ್ಮ ಕನಸುಗಳನ್ನು ತಾವೇ ಕಂಡುಕೊಳ್ಳಲು ಮತ್ತು ಬದಲಾಗುತ್ತಿರುವ ಕಾಲದಲ್ಲಿ ಬಾಳಿಕೆ ಬರುವಂತಹ ಸಂಸ್ಥೆ ಕಟ್ಟಲು ಅವರಿಗೆ ಪ್ರೋತ್ಸಾಹ ನೀಡುವ ವಿಚಾರ. ನಾವು ಶಾಶ್ವತವಾಗಿ ಇರುವುದಕ್ಕೆ ಸಾಧ್ಯವಿಲ್ಲ ಮತ್ತು ನಮ್ಮ ಕಾಲ ಮುಗಿಯಿತು ಎಂಬುದನ್ನು ಅರ್ಥ ಮಾಡಿಕೊಳ್ಳುವ ವಿಚಾರ.

ಎಮರ್ಸನ್‍ನ ಸಾಲುಗಳನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು: ‘ಓಕ್ ಬೀಜಕ್ಕಿಂತ ಪೂರ್ಣತೆ ಮತ್ತು ಸಮಗ್ರತೆ ಇರುವ ಓಕ್ ಮರ ಉತ್ತಮವೇ? ಮಗುವಿಗಿಂತ ಆ ಮಗುವಿನ ಅಸ್ತಿತ್ವಕ್ಕೆ ಕಾರಣವಾದ ಹೆತ್ತವರು ಉತ್ತಮವೇ? ಈ ಭೂತಕಾಲದ ಪೂಜೆ ಎಲ್ಲಿಂದ ಬಂತು?’

-ಕ್ಯಾಪ್ಟನ್‌ ಗೋಪಿನಾಥ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry