6

ದೂರದ ದುರಂತ ಕಣ್ಣಿಗೆ ತಣ್ಣಗೆ

ನಾಗೇಶ ಹೆಗಡೆ
Published:
Updated:
ದೂರದ ದುರಂತ ಕಣ್ಣಿಗೆ ತಣ್ಣಗೆ

ಮೊನ್ನೆ ಅಮೆರಿಕದಲ್ಲಿ 38 ವರ್ಷಗಳ ನಂತರ ಖಗ್ರಾಸ ಸೂರ್ಯಗ್ರಹಣ ಸಂಭವಿಸಿದ್ದರ ಬಗ್ಗೆ ಸುದ್ದಿಯ ಮಹಾಪೂರವೇ ಬಂದಿದೆ. ಜಗತ್ತಿನ ಯಾವುದೇ ಪ್ರಮುಖ ಮಾಧ್ಯಮದಲ್ಲೂ ಬರೀ ಅದರದ್ದೇ ಸುದ್ದಿ. ಮರುದಿನವೇ ಇಲ್ಲಿ ತಲಾಖ್ ಕುರಿತು ತೀರ್ಪು ಬಂದಿದ್ದರಿಂದ ನಮ್ಮಲ್ಲಿ ಸದ್ಯ ಅದರದ್ದೇ ಮಹಾಪೂರ ಇದೆ. ಇತ್ತ ಉತ್ತರ ಪ್ರದೇಶ, ಬಿಹಾರ, ಬಂಗಾಳ ಮತ್ತು ಅಸ್ಸಾಂನಲ್ಲಿ ಮಹಾಪೂರದಿಂದ ಅದೆಷ್ಟೊ ಕೋಟಿ ಜನ ಜಾನುವಾರಗಳು ತತ್ತರಿಸು ತ್ತಿವೆ. ಆದರೆ ಆ ಕುರಿತ ಸುದ್ದಿಗೆ, ಚರ್ಚೆಗೆ ತೀವ್ರ ಬರಗಾಲ ಬಂದಿದೆ. ಹುಡುಕಿದರೆ ಎಲ್ಲೋ ಅಲ್ಲೊಂದು ಇಲ್ಲೊಂದು ಇಂಗ್ಲಿಷ್ ಚಾನೆಲ್‌ನಲ್ಲಿ ಒಂದರ್ಧ ನಿಮಿಷದ ವರದಿ; ಮುಖ್ಯಮಂತ್ರಿಗಳ ನೆರೆವೀಕ್ಷಣ ವಿಡಿಯೊ; ಪತ್ರಿಕೆಗಳಲ್ಲೂ ಅಷ್ಟೆ: ಮನೆಮಠಗಳು ಮುಳುಗಿದ್ದರ ಒಂದು ಚಿತ್ರದ ಜೊತೆ ಅಡಿಟಿಪ್ಪಣಿ ಅಷ್ಟೆ. ಓದುಗರ ಆಸಕ್ತಿಯೂ ಅಷ್ಟಕ್ಕಷ್ಟೆ; ಈ ಬಾರಿ ಎಷ್ಟು ಜನ ಬಲಿಯಾದರು ಎಂಬ ಸಂಖ್ಯೆಯತ್ತ ಒಮ್ಮೆ ಕಣ್ಣಾಡಿಸಿ ಮುಂದಕ್ಕೆ ಹೋಗುವುದು.

ನಮ್ಮ ಮನಸ್ಸು ಯಾಕೆ ಹೀಗೆ? ಒಂದು ಮಗು ಅಥವಾ ಒಬ್ಬ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದಾಗ, ಎದ್ದೊಬಿದ್ದೊ ಸಹಾಯಕ್ಕೆ ಧಾವಿಸುವ ನಮಗೆ ಹತ್ತಿಪ್ಪತ್ತು ಜನ, ಹತ್ತಿಪ್ಪತ್ತು ಲಕ್ಷ ಜನ ಸಂಕಷ್ಟಕ್ಕೀಡಾದಾಗ ಏನೂ ಅನ್ನಿಸುವುದಿಲ್ಲ ಏಕೆ? ಇದರ ಹಿಂದಿನ ಮನಸ್ಥಿತಿಯ ಬಗ್ಗೆ ಸೈಕಾಲಜಿ ತಜ್ಞರು ಏನನ್ನುತ್ತಾರೆ? ಅದನ್ನು ಮುಂದೆ ನೋಡೋಣ. ಮೊದಲಿಗೆ ಬಿಹಾರ, ಬಂಗಾಳ, ಅಸ್ಸಾಂನ ಸಿವಿಲ್ ಎಂಜಿನಿಯರಿಂಗ್ ದುರಂತಗಳ ಕಡೆ ಕ್ಷಿಪ್ರ ನೋಟ ಹರಿಸೋಣ.

ಈ ಬಾರಿಯ ನೆರೆ ಹಾವಳಿ ಇತ್ತೀಚಿನ ದಶಕಗಳ ಎಲ್ಲ ದಾಖಲೆಗಳನ್ನೂ ಮೀರಿಸುವಷ್ಟು ವ್ಯಾಪಕವಾಗಿದೆ. ಉತ್ತರ ಪ್ರದೇಶದ 24 ಜಿಲ್ಲೆ, ಬಿಹಾರದ 18 ಜಿಲ್ಲೆ, ಬಂಗಾಳದ ಆರು ಜಿಲ್ಲೆ, ಅಸ್ಸಾಂನ 33 ಜಿಲ್ಲೆಗಳು ಮಹಾಪೂರಕ್ಕೆ ತುತ್ತಾಗಿವೆ. ಸರ್ಕಾರಿ ಲೆಕ್ಕದಲ್ಲಿ ಸತ್ತವರ ಸಂಖ್ಯೆ 800 ದಾಟಿದೆ, ತೇಲಿ ಹೋದವರ ಲೆಕ್ಕ ಸಿಕ್ಕಿಲ್ಲ. ಅಷ್ಟೆ ತಾನೆ, ಇನ್ನುಳಿದ ಹದಿನೈದು ಕೋಟಿ ಜನರು ನೆರೆ ಇಳಿದ ನಂತರ ಹೇಗೊ ಮತ್ತೆ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎಂದು ಮುಂದೆ ಸಾಗುವ ಮೊದಲು ತುಸು ನಿಲ್ಲಿ. ಬದುಕುಳಿದವರ ನರಕದತ್ತ ತುಸು ಗಮನ ಹರಿಸೋಣ: ಒಂದು ಮನೆ ಕುಸಿದರೆ (ಬಡವರದ್ದೇ ಕುಸಿಯುತ್ತದೆ) ಹತ್ತು ಹದಿನೈದು ವರ್ಷಗಳ ಶ್ರಮವೆಲ್ಲ ನೀರುಪಾಲಾಗಿರುತ್ತದೆ. ಕೃಷಿಕನ ಲಕ್ಷಾಂತರ ರೂಪಾಯಿಗಳ ಎಮ್ಮೆ, ದನ, ಕುರಿಗಳು ನೀರುಪಾಲು; ಧಾನ್ಯ ನಷ್ಟ, ಬೆಳೆ ನಷ್ಟ. ಕೃಷಿ ಸರಂಜಾಮುಗಳ ನಷ್ಟ. ಮಧ್ಯಮ ದರ್ಜೆಯ ವ್ಯಾಪಾರಿಗಳ ಅನೇಕ ಲಕ್ಷ ರೂಪಾಯಿಗಳ ಮಾಲು ನೀರುಪಾಲು. ಸಿಮೆಂಟು, ಸಕ್ಕರೆ, ಕಾಳುಕಡಿ, ಸಾಲಸೋಲ ಲೆಕ್ಕಪತ್ರ ಎಲ್ಲ ತರ್ಪಣ. ಸರ್ಕಾರ ನೀಡುವ ಪರಿಹಾರ ಎಷ್ಟೊ, ಯಾರಿಗೊ, ಯಾವ ಕಾಲಕ್ಕೊ? ಅದಕ್ಕೆ ಬೇಕಿದ್ದ ದಾಖಲೆಗಳೂ ಒದ್ದೆಮುದ್ದೆ. ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಗಂಗಾ ಕೊಳ್ಳದಲ್ಲಿ ನೆರೆ ಇಳಿಯುವುದೇ ತೀರ ನಿಧಾನ. ಮೂರು ತಿಂಗಳೊ, ನಾಲ್ಕು ತಿಂಗಳೊ. ಅಲ್ಲಿಯವರೆಗೆ ಬದುಕೇ ದೊಡ್ಡ ನರಕ.

ಇವೆಲ್ಲ ಸಂಕಷ್ಟಗಳಿಗೂ ಸರ್ಕಾರಿ ಯೋಜನೆಗಳ ವೈಫಲ್ಯಗಳೇ ಕಾರಣ ಎಂಬುದಕ್ಕೆ ಧಾರಾಳ ಸಾಕ್ಷ್ಯಗಳು ಸಿಗುತ್ತಿವೆ. ಹಿಂದೆಯೂ ಈ ರಾಜ್ಯಗಳ ಜನರು ಗಂಗಾ, ಯಮುನಾ, ಗಂಡಕ್, ಘಾಘ್ರಾ, ಕೋಶಿ ನದಿಗಳ ಪ್ರವಾಹವನ್ನು ಅನುಭವಿಸಿದವರು. ನೆರೆ ನಿರೀಕ್ಷಿತವಾಗಿರುತ್ತಿತ್ತು, ತಾತ್ಕಾಲಿಕವಾಗಿರುತ್ತಿತ್ತು. ಉಳಿದ ಹೂಳು ಅಲ್ಲಿನ ಜಮೀನಿನ ಫಲವತ್ತತೆಯನ್ನು ಹೆಚ್ಚಿಸುತ್ತಿತ್ತು. ಆದರೆ ಒಂದೊಂದು ಪಂಚವಾರ್ಷಿಕ ಯೋಜನೆ ಜಾರಿಗೆ ಬಂದಂತೆಲ್ಲ ದುರ್ದಿನಗಳೂ ಹೆಚ್ಚುತ್ತಿವೆ. ಒಂದು ಮುಖ್ಯ ಕಾರಣ ಏನೆಂದರೆ 1970ರ ದಶಕದಲ್ಲಿ ಬಾಂಗ್ಲಾದೇಶದ ಗಡಿಯಲ್ಲಿ ಫರಾಕ್ಕಾ ಅಡ್ಡಗಟ್ಟೆ ನಿರ್ಮಿಸಿದ್ದು. ಅಲ್ಲಿ ಶೇಖರಗೊಳ್ಳುವ ಹೂಳು ಮೂರು ರಾಜ್ಯಗಳಿಗೆ ತೊಂದರೆ ಒಡ್ಡುತ್ತಿದೆ. ಫರಾಕ್ಕಾ ಯೋಜನೆಯ ನೀಲನಕ್ಷೆ ತಯಾರಾದಾಗಲೇ ಪಶ್ಚಿಮ ಬಂಗಾಳದ ಚೀಫ್ ಎಂಜಿನಿಯರ್ ಕಪಿಲ್ ಭಟ್ಟಾಚಾರ್ಯ ಅದನ್ನು ವಿರೋಧಿಸಿದ್ದರು. ಗಂಗಾನದಿ ಜಾಲವೆಂದರೆ ಹಿಮಾಲಯ ಮತ್ತು ವಿಂಧ್ಯವನ್ನು ಪುಡಿ ಮಾಡಿ ಸಮುದ್ರಕ್ಕೆ ಸಾಗಿಸುವ ಒಂದು ಬೃಹತ್ ಕೊಳವೆಜಾಲ ಇದ್ದಂತೆ. ಪ್ರತಿ ಮಳೆಗಾಲದಲ್ಲೂ ಗಂಗಾ ಮತ್ತು ಅದರ ಉಪನದಿಗಳು ಅಪಾರ ಪ್ರಮಾಣದಲ್ಲಿ ಹೂಳನ್ನು ಸಾಗಿಸಿ ಬಂಗಾಳ ಕೊಲ್ಲಿಗೆ ಸುರಿಯುತ್ತಿರುತ್ತವೆ. ಸಮುದ್ರದ ಆಳದಲ್ಲಿ ಅದು ಪೇರಿಸಿದ ಹೂಳಿನ ರಾಶಿಯನ್ನು ಅಂಡಮಾನ್‌ವರೆಗೂ ಪರ್ವತಮಾಲೆಯಂತೆ ಗುರುತಿಸಬಹುದು.

ಎಂಜಿನಿಯರ್ ಕಪಿಲ್ ಭಟ್ಟಾಚಾರ್ಯ ಇದನ್ನು ಅರಿತಿದ್ದರು. ‘ಫರಾಕ್ಕಾ ಅಡ್ಡಗಟ್ಟೆ ನಿರ್ಮಿಸಿದರೆ ಹೂಳನ್ನು ತಡೆದಂತಾಗಿ ಅದು ನದಿಕೊಳ್ಳದಲ್ಲೇ ನೂರಿನ್ನೂರು ಕಿಲೊಮೀಟರ್‌ವರೆಗೂ ಶೇಖರವಾಗುತ್ತದೆ. ನೆರೆ ಹಾವಳಿ ಹಾಗೂ ರೈತರ ಸಂಕಷ್ಟ ಹೆಚ್ಚುತ್ತದೆ, ಪರಿಹಾರದ ವೆಚ್ಚ ಹೆಚ್ಚುತ್ತದೆ, ಬೇಸಿಗೆಯಲ್ಲಿ ನೀರಿನ ಕೊರತೆಯಾಗಿ, ಜಲಸಾರಿಗೆ ಕಷ್ಟವಾಗುತ್ತದೆ’ ಎಂದು ಅವರು 1960ರಲ್ಲೇ ವಿವರಿಸಿದ್ದರು. ಆದರೆ ನೆಹರೂ ದೃಷ್ಟಿಯಲ್ಲಿ ದೊಡ್ಡ ಅಣೆಕಟ್ಟೆಗಳೇ ಆಧುನಿಕ ದೇಗುಲಗಳೆನಿಸಿದ್ದವು. ಈ ತಂತ್ರಜ್ಞನ ಪ್ರತಿರೋಧವನ್ನು ದಿಲ್ಲಿಯ ತಜ್ಞರು ತಳ್ಳಿಹಾಕಿದರು. ಅಷ್ಟೇ ಅಲ್ಲ, ಅವರನ್ನು ರಾಷ್ಟ್ರದ್ರೋಹಿ, ಪಾಕಿಸ್ತಾನಿ ಏಜೆಂಟರೆಂದೆಲ್ಲ ಆಪಾದಿಸಿ, ತಮ್ಮ ಹುದ್ದೆ ತ್ಯಜಿಸುವಂತೆ ಒತ್ತಡ ಹೇರಿದರು. ಕಪಿಲ್ ಭಟ್ಟಾಚಾರ್ಯ ಅಂದು ವಿವರಿಸಿದ ದುಃಸ್ವಪ್ನಗಳೆಲ್ಲ ವರ್ಷವರ್ಷಕ್ಕೆ ನಿಜವಾಗುತ್ತ ಬಂದಿವೆ. ಕಳೆದ ವರ್ಷ ಮಹಾಪೂರ ಬಂದಾಗ ಬಿಹಾರದ ಮುಖ್ಯಮಂತ್ರಿ ಇದೇ ನಿತೀಶ್ ಕುಮಾರ್, ಎಲ್ಲ ಸಂಕಷ್ಟಗಳಿಗೂ ಫರಾಕ್ಕಾ ಅಡ್ಡಗಟ್ಟೆಯೇ ಕಾರಣವೆಂದೂ, ಅದನ್ನು ಕಿತ್ತೆಸೆದು ಹೂಳನ್ನೆಲ್ಲ ನೂಕಬೇಕೆಂದೂ ಹೇಳಿದ್ದರು. ಹಾಗೆ ಮಾಡಲು ಈಗ ಹೊರಟರೆ ಅರ್ಧ ಬಾಂಗ್ಲಾದೇಶವೇ ಹೂಳಿನಲ್ಲಿ ಹೂತೀತೆಂಬುದು ಅವರ ಅರಿವಿಗೆ ಬರಲಿಲ್ಲವೇಕೊ.

ಗಂಗಾ ನದಿಯುದ್ದಕ್ಕೂ ಹೂಳಿನ ಸಂಚಯ ಹೆಚ್ಚಾಗುತ್ತ, ನೆರೆಯಬ್ಬರ ಹೆಚ್ಚುತ್ತ ಹೋದಂತೆ ಇನ್ನಷ್ಟು ಸರಣಿ ತಪ್ಪುಗಳನ್ನು ಸಿವಿಲ್ ತಜ್ಞರು ಹೊಸೆಯುತ್ತ ಹೋದರು. ಪ್ರವಾಹವನ್ನು ತಡೆಯಲೆಂದು ಗಂಗಾನದಿಯುದ್ದಕ್ಕೂ ಎರಡೂ ದಂಡೆಗಳಗುಂಟ ಗೋಡೆಗಳನ್ನು ಕಟ್ಟಲೆಂದು ಪ್ರತಿ ವರ್ಷವೂ ಪ್ರತಿ ರಾಜ್ಯದಲ್ಲೂ ಪೈಪೋಟಿಯಲ್ಲಿ ನೂರಾರು ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಯಿತು. ತಡೆಗೋಡೆ ಕಟ್ಟದೇ ಇದ್ದಿದ್ದರೆ ಪ್ರವಾಹದ ನೀರು ಮತ್ತು ಹೂಳು ನದಿಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಅಡ್ಡಡ್ಡಕ್ಕೆ ವಿತರಣೆಯಾಗುತ್ತಿತ್ತು. ಪ್ರವಾಹದ ಕೆಳಹರಿವು ಅಷ್ಟೇನೂ ಉಗ್ರವಾಗುತ್ತಿರಲಿಲ್ಲ. ಈಗ ಉದ್ದಗಟ್ಟೆ ಕಟ್ಟಿದ್ದರಿಂದ ಪ್ರವಾಹದ ನೀರೆಲ್ಲ ನದಿಯ ಪಾತ್ರದಲ್ಲೇ ಧಾವಿಸುತ್ತ, ಕೆಳಕೆಳಕ್ಕೆ ಹೋದಂತೆ ಇನ್ನಷ್ಟು ಉಗ್ರಗಾಗುತ್ತ, ಕಟ್ಟೆಯನ್ನು ಅಲ್ಲಲ್ಲಿ ಒಡೆದು, ನದಿಯ ಎಡಬಲಗಳ ಹತ್ತಿಪ್ಪತ್ತು ಕಿಲೊಮೀಟರ್‌ವರೆಗೆ ಧಾವಿಸಿ ಸರ್ವನಾಶ ಮಾಡತೊಡಗಿತು. ಕಟ್ಟೆಕಟ್ಟುವ ಗುತ್ತಿಗೆದಾರರಿಗೆ ಮತ್ತು ಮೇಲಿನವರಿಗೆ ಪ್ರತಿವರ್ಷವೂ ಹಬ್ಬ; ಜನ-ಜಾನುವಾರುಗಳ ಪಾಲಿಗೆ ಮಾರಿಹಬ್ಬ.

ಅಭಿವೃದ್ಧಿ ಯೋಜನೆಯ ಹೆಸರಿನಲ್ಲಿ ವ್ಯಯಿಸಿದ ಲಕ್ಷಾಂತರ ಕೋಟಿ ಹಣವೆಲ್ಲ ಕೆಲವರ ಕಿಸೆಗಳನ್ನಷ್ಟೇ ತುಂಬಿಸುತ್ತ, ಸಾಮಾನ್ಯರ ಸಂಕಷ್ಟಗಳನ್ನು ಹೆಚ್ಚಿಸುತ್ತ, ಮುಂದಿನ ಪೀಳಿಗೆಗಳಿಗೆ ಶಾಶ್ವತ ದುರಂತಗಳನ್ನು ಹೊಸೆಯುತ್ತ ಹೋಗುವಂತಾಗಿದೆ. ಫರಾಕ್ಕಾ ಒಂದೇ ಅಲ್ಲ, ದಾಮೋದರ್ ಅಣೆಕಟ್ಟು, ಭಾಕ್ರಾ ನಾಂಗಲ್, ಈಚಿನ ಸರ್ದಾರ್ ಸರೋವರ್ ಎಲ್ಲ ಬಹುಕೋಟಿ ಯೋಜನೆಗಳೂ ದುರ್ಬಲರ, ಕೃಷಿಕರ ಮತ್ತು ಆದಿವಾಸಿಗಳ ಪಾಲಿಗೆ ಸರಣಿ ಸಂಕಟಗಳನ್ನೇ ತಂದೊಡ್ಡುತ್ತಿವೆ. ಸಂತ್ರಸ್ತರ ಸಂಖ್ಯೆ ದಶಲಕ್ಷಗಳನ್ನು ಮೀರಿ, ದಶಕೋಟಿಯನ್ನೂ ದಾಟುತ್ತದೆ. ಅವರಿಗಾಗಿ ನಾಳೆ ಸಿದ್ಧವಾಗುವ ಯೋಜನೆಗಳು ಸರಿಯಾಗಿ ಜಾರಿಗೆ ಬರುತ್ತವೆಂಬ ಭರವಸೆಗಳೂ ಕ್ಷೀಣವಾಗುತ್ತಿವೆ. ಅಂಥ ಯೋಜನೆಗಳ ಫಲಾನುಭವಿಗಳಾಗಿ ಐಷಾರಾಮಿ ಬದುಕುವ ಕೋಟಿಗಟ್ಟಲೆ ಜನರ ಸಂವೇದನೆಗಳೂ ವರ್ಷದಿಂದ ವರ್ಷಕ್ಕೆ ಕ್ಷೀಣವಾಗುತ್ತಿವೆ. ಅಥವಾ ಸಂವೇದನೆಗಳನ್ನು ಉಕ್ಕಿಸಬೇಕಿದ್ದ ಮಾಧ್ಯಮಗಳಲ್ಲೇ ಹೂಳು ತುಂಬಿದೆಯೆ? ನಮ್ಮ ಭಾವನೆಗಳು ಮರಗಟ್ಟುವ ಜೊತೆಗೆ, ಸಂತಾಪ ಸೂಚಿಸುವ ಜನನಾಯಕರ ಹೇಳಿಕೆಗಳೂ ಕೃತಕವೆನಿಸುತ್ತವೆ ಏಕೆ?

ಮನೋವಿಜ್ಞಾನದಲ್ಲಿ ಇದಕ್ಕೆ ‘ಮಾನಸಿಕ ಜಡತ್ವ’ ಎನ್ನುತ್ತಾರೆ. ಸಂಕಷ್ಟಕ್ಕೊಳಗಾದವರ ಸಂಖ್ಯೆ ದೊಡ್ಡದಿ ದ್ದಷ್ಟೂ ನಮ್ಮ ಸ್ಪಂದನಶೀಲತೆ ಕಮ್ಮಿಯಾಗುತ್ತ ಹೋಗುತ್ತದೆ. ‘ಒಬ್ಬ ವ್ಯಕ್ತಿ ಕಷ್ಟಕ್ಕೆ ಸಿಲುಕಿದರೆ ನೆರವಿಗೆ ಧಾವಿಸುತ್ತೇವೆ; ಇಬ್ಬರು ಕಷ್ಟಕ್ಕೆ ಸಿಕ್ಕಿಕೊಂಡರೆ ನಮ್ಮ ಉತ್ಸಾಹ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಮನೋವಿಜ್ಞಾನಿ ಪೌಲ್ ಸ್ಲೋವಿಕ್. ಸಾಮೂಹಿಕ ದುರಂತಗಳನ್ನು, ಕಗ್ಗೊಲೆಗ ಳನ್ನು ಮನುಕುಲ ಪದೇಪದೇ ಕಡೆಗಣಿಸುತ್ತದೆ ಏಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಒರೆಗಾನ್ ವಿವಿಯ ಸಂಶೋಧನೆಯಲ್ಲಿ ಖ್ಯಾತಿ ಪಡೆದಿರುವ ಸೈಕಾಲಜಿಸ್ಟ್ ಈತ. ಮನುಷ್ಯನ ಮಿದುಳು ಲಕ್ಷ, ದಶಲಕ್ಷ ಸಂಖ್ಯೆಯಲ್ಲಿ ನೊಂದವರ ಬಗ್ಗೆ ಯಾಕೆ ಸಹಕಂಪನ ತೋರಿಸಲಾರದು ಎಂಬುದನ್ನು ವಿಶ್ಲೇಷಿಸುವುದು ಈತನ ಪರಿಣತಿ. ತರಕಾರಿ ಅಂಗಡಿಗಳಲ್ಲಿ 50 ಪೈಸೆಗೂ ಕೊಸರಾಡುವ ನಾವು ಹೊಟೆಲ್‌ಗಳಲ್ಲಿ 20 ರೂಪಾಯಿಗಳ ಭಕ್ಷೀಸನ್ನು ಸಲೀಸಾಗಿ ನೀಡುತ್ತೇವೆ. ಒಂದು ರೂಪಾಯಿ ಮತ್ತು ನೂರು ರೂಪಾಯಿಗಳ ಮಧ್ಯೆ ಅಗಾಧ ವ್ಯತ್ಯಾಸ ಕಾಣಿಸುವ ನಮಗೆ ಮನೆ ಕಟ್ಟುವ ಸಂದರ್ಭದಲ್ಲಿ ಮರಳಿನ ಬೆಲೆ ಲಾರಿಗೆ 37 ಸಾವಿರ ಮತ್ತು 37,100ರ ಮಧ್ಯೆ ಹೆಚ್ಚು ವ್ಯತ್ಯಾಸವೇ ಕಾಣುವುದಿಲ್ಲ. ಮೊತ್ತದ ವ್ಯತ್ಯಾಸ ಅಷ್ಟೇ ಇದ್ದರೂ ಮೊತ್ತ ದೊಡ್ಡದಾದಷ್ಟೂ ಮೌಲ್ಯ ಕಡಿಮೆ ಆಗುತ್ತದೆ. ‘ಮನುಷ್ಯ ಜೀವದ ಮೌಲ್ಯವೂ ಹಾಗೇ’ ಎನ್ನುತ್ತಾರೆ.

ಇಂಥ ಮಾನಸಿಕ ಜಡತ್ವಕ್ಕೆ ತದ್ವಿರುದ್ಧವಾ ದದ್ದು ‘ಏಕಾಗ್ರ ಪರಿಣಾಮ’. ಸಾವಿರ ಜನರು ಸತ್ತಾಗ ಅದೊಂದು ಸುದ್ದಿ ಅಷ್ಟೆ. ಆದರೆ ಒಂದು ಮಗು ಕೊಳವೆ ಬಾವಿಗೆ ಬಿದ್ದಾಗ ಲಕ್ಷಾಂತರ ಜನ ಆತಂಕಕ್ಕೀಡಾಗುತ್ತಾರೆ. ಸಿರಿಯಾದಿಂದ ಲಕ್ಷೋಪಲಕ್ಷ ನಿರಾಶ್ರಿತರು ಇರುವೆಗಳಂತೆ ಮುಳುಗೇಳುತ್ತ, ಸತ್ತುಬದುಕುತ್ತ ವಲಸೆ ಹೊರಟಾಗ ಏನೂ ಅನ್ನಿಸಿರಲಿಲ್ಲ. ಆದರೆ ಒಂದು ಚಂದದ ಮಗುವು ನೀರುಪಾಲಾಗಿ ಅದರ ಶವ ಟರ್ಕಿಯ ಸಮುದ್ರ ತೀರದಲ್ಲಿ ಮಕಾಡೆ ಮಲಗಿದ ಚಿತ್ರವನ್ನು ನೋಡಿದಾಗ ಇಡೀ ಪ್ರಪಂಚ ಮರುಗಿತು. ರೆಡ್‌ಕ್ರಾಸ್ ನಿರಾಶ್ರಿತರ ಪರಿಹಾರ ನಿಧಿಗೆ ದೇಣಿಗೆಯ ಮಹಾಪೂರ ಬಂತು. ಒಂದೂವರೆ ಲಕ್ಷ ನಿರಾಶ್ರಿತರಿಗೆ ಆಶ್ರಯ ಕೊಡಲು ಸ್ವೀಡನ್ ನಿರ್ಧರಿಸಿತು. 2015ರ ಅಕ್ಟೋಬರ್‌ನಲ್ಲಿ ಮುಗಿಲಿಗೇರಿದ ಅನುಕಂಪದ ಆಲೇಖ ಒಂದು ತಿಂಗಳವರೆಗೂ ಏರಿಕೆಯಲ್ಲಿದ್ದು ಕ್ರಮೇಣ ತಣ್ಣಗಾಯಿತು.

ಮನೋತಜ್ಞರ ಈ ಪ್ರಯೋಗವನ್ನು ನೋಡಿ: ರಸ್ತೆ ಬದಿಯಲ್ಲಿ ಒಂದು ಮಗುವನ್ನು ಕೂರಿಸಿ ‘ಈಕೆ ನಿರಾಶ್ರಿತೆ, ನೆರವು ನೀಡಿ’ ಎಂಬ ಫಲಕ ಇಟ್ಟರೆ ನೂರಾರು ರೂಪಾಯಿ ಬಂದು ಬೀಳುತ್ತದೆ. ಅದೇ ಮಗುವಿನ ಪಕ್ಕ ‘15 ಸಾವಿರ ಇಂಥ ನಿರಾಶ್ರಿತರು, ನೆರವು ನೀಡಿ’ ಎಂಬ ಫಲಕ ಇಟ್ಟಾಗ ದೇಣಿಗೆ ಅರ್ಧಕ್ಕರ್ಧ ಕಮ್ಮಿಯಾಗುತ್ತದೆ. ಮತ್ತೆ ಎಷ್ಟೋ ಬಾರಿ, ಕೇದಾರನಾಥ ದುರಂತದ ಹಾಗೆ ಒಂದು ಘೋರ ದುರ್ಘಟನೆ ಹಠಾತ್ ಸಂಭವಿಸಿದರೆ ಅನುಕಂಪದ ಧಾರೆ ಹರಿಯುತ್ತದೆ. ಅಷ್ಟೇ ಜನರು ಬೇರೆಬೇರೆ ರಾಜ್ಯಗಳಲ್ಲಿ ಒಂದು ವಾರದ ಅವಧಿಯ ನೆರೆಯಲ್ಲಿ ಅಸುನೀಗಿದರೆ ಅಥವಾ ನಾಪತ್ತೆಯಾದರೆ ಗಮನಕ್ಕೇ ಬರುವುದಿಲ್ಲ.

ಗಮನಕ್ಕೆ ಬರುವುದಿಲ್ಲ, ಏಕೆಂದರೆ ಗಮನಕ್ಕೆ ತರಬೇಕಾದ ಮಾಧ್ಯಮಗಳ ಆದ್ಯತೆ ಬದಲಾಗಿರುತ್ತದೆ. ದುರಂತದ ಒಳನೋಟ ಹಾಗಿರಲಿ, ಈಗೀಗ ಉಚಿತ ವೈಮಾನಿಕ ವೀಕ್ಷಣೆಗೂ ವರದಿಗಾರರು ಹೋಗುತ್ತಿಲ್ಲ. ಮಾನವೀಯ ಮೌಲ್ಯಗಳಿಗೆ ಟಿಆರ್‌ಪಿ ಅಳತೆಗೋಲು ಇಲ್ಲವಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry