ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ತೀರ್ಪು: ಹಲವು ದೂರಗಾಮಿ ಪರಿಣಾಮ

Last Updated 24 ಆಗಸ್ಟ್ 2017, 19:13 IST
ಅಕ್ಷರ ಗಾತ್ರ

ನವದಹೆಲಿ: ಡಿಎನ್‌ಎ ಆಧರಿತ ತಂತ್ರಜ್ಞಾನ (ಬಳಕೆ ಮತ್ತು ನಿಯಂತ್ರಣ) ಮಸೂದೆ 2017

ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಖಾಸಗಿತನ ಮೂಲಭೂತ ಹಕ್ಕು ಎಂಬ ಮಹತ್ವದ ತೀರ್ಪು ನೀಡಿದೆ. ಈ ಒಂದು ತೀರ್ಪು ಈಗ ಜಾರಿಯಲ್ಲಿರುವ ಹಲವು ಕಾನೂನುಗಳು ಮತ್ತು ಜಾರಿ ಮಾಡಲು ಉದ್ದೇಶಿಸಿರುವ ಹಲವು ಮಸೂದೆಗಳ ಮೇಲೆ ಪರಿಣಾಮ ಬೀರಲಿದೆ. ಖಾಸಗಿತನ ಮೂಲಭೂತ ಹಕ್ಕು ಆಗಿರುವುದರಿಂದ ಉಂಟಾಗುವ ಮುಖ್ಯ ಪರಿಣಾಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ದೇಶದ ಸಮಸ್ತ ನಾಗರಿಕರ ಡಿಎನ್‌ಎ ಮಾದರಿಯನ್ನು ಕಲೆ ಹಾಕಿ ಅವನ್ನು ಒಂದೆಡೆ ಸಂಗ್ರಹಿಸಿಕೊಡಲು ಈ ಮಸೂದೆ ಅನುವು ಮಾಡಿಕೊಡುತ್ತದೆ. 2015ರಲ್ಲೇ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತಾದರೂ ವ್ಯಾಪಕ ವಿರೋಧದ ಕಾರಣ ಮಸೂದೆಗೆ ಹಲವು ತಿದ್ದುಪಡಿ ಮಾಡಲಾಗಿದೆ. ಮಸೂದೆಯನ್ನು ವಿರೋಧಿಸುತ್ತಿರುವವರು ಡಿಎನ್‌ಎ ಮಾದರಿ ಸಂಗ್ರಹವನ್ನೂ ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಈ ವಿಚಾರದಲ್ಲೂ ಮಹತ್ವ ಪಡೆದಿದೆ.

ಮಸೂದೆ ವಿವರ

* ಡಿಎನ್‌ಎ ಮಂಡಳಿ ಮತ್ತು ಡಿಎನ್‌ಎ ದತ್ತಾಂಶ ಬ್ಯಾಂಕ್‌ ಸ್ಥಾಪನೆ

* ದೇಶದ ಸಮಸ್ತ ನಾಗರಿಕರ ಡಿಎನ್‌ಎ ಮಾದರಿಗಳನ್ನು ಡಿಎನ್‌ಎ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ

* ಡಿಎನ್‌ಎ ಮಾದರಿಗಳ ಪರೀಕ್ಷೆ ಮತ್ತು ವಿಶ್ಲೇಷಣೆ ನಡೆಸಲು ಡಿಎನ್‌ಎ ಪ್ರಯೋಗಾಲಯಗಳಿಗೆ ಮಂಡಳಿ ಅನುಮತಿ ನೀಡುತ್ತದೆ

* ಯಾವುದೇ ಅಪರಾಧಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಲಭ್ಯವಿರುವ ರಕ್ತ ಮತ್ತು ಕೂದಲಿನ ಮಾದರಿಗಳನ್ನು ಬಳಸಿಕೊಂಡು ಅಪರಾಧಿಗಳನ್ನು ಪತ್ತೆ ಮಾಡಲು ಅನುಕೂಲವಾಗಲಿದೆ

* ಅಪರಿಚಿತ ಶವಗಳ ಗುರುತು ಪತ್ತೆಗೆ ನೆರವಾಗಲಿದೆ

* ಯಾವುದೇ ವ್ಯಕ್ತಿಗಳ ಪೋಷಕರ ಪತ್ತೆಗೆ ನೆರವಾಗಲಿದೆ

ಆಕ್ಷೇಪಗಳು

* ಡಿಎನ್‌ಎ ಮಾದರಿಗಳ ವಿಶ್ಲೇಷಣೆಯಲ್ಲಿ ಆಯಾ ವ್ಯಕ್ತಿಗೆ ಇರುವ ಕಾಯಿಲೆಗಳು ಮತ್ತು ದೈಹಿಕ ನ್ಯೂನತೆಗಳನ್ನು ಪತ್ತೆ ಮಾಡಲು ಸಾಧ್ಯವಿದೆ. ಈ ವಿವರಗಳನ್ನು ಬಳಸಿಕೊಂಡು ವ್ಯಕ್ತಿಯ ಘನತೆ ಮತ್ತು ಖಾಸಗಿತನಕ್ಕೆ ಧಕ್ಕೆ ತರುವ ಅಪಾಯಗಳಿವೆ. ಜತೆಗೆ ಈ ವಿವರಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಅಪಾಯವೂ ಇದೆ

* ಡಿಎನ್‌ಎ ಮಾದರಿ ಸಂಗ್ರಹದ ವೇಳೆ ವಿವರಗಳು ತಪ್ಪಾಗಿ ದಾಖಲಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅಪರಾಧ ಪ್ರಕರಣಗಳ ತನಿಖೆಯಲ್ಲಿ ಡಿಎನ್‌ಎ ಮಾದರಿಯನ್ನೇ ಅಂತಿಮ ಸಾಕ್ಷ್ಯವನ್ನಾಗಿ ಪರಿಗಣಿಸುವುದಾದರೆ ನಿರಪರಾಧಿಗಳು ತೊಂದರೆಗೆ ಸಿಲುಕುವ ಅಪಾಯವಿರುತ್ತದೆ

* ಅಪರಾಧ ಪ್ರಕರಣಗಳ ತನಿಖೆಯಲ್ಲಿ ಡಿಎನ್‌ಎ ಮಾದರಿಯ ವಿಶ್ಲೇಷಣೆಯನ್ನು ಅನುಸರಿಸುತ್ತಿರುವ ದೇಶಗಳಲ್ಲಿ (ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್‌) ಅಪರಾಧ ತನಿಖೆಯಲ್ಲಿ ಗಣನೀಯ ಪ್ರಗತಿಯೇನೂ ಕಂಡುಬಂದಿಲ್ಲ

**

ದಯಾಮರಣ

ದಯಾಮರಣವೂ ಖಾಸಗಿತನದ ಹಕ್ಕಿನ ಭಾಗವೇ ಆಗುತ್ತದೆ ಎಂದು ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ದಯಾಮರಣವನ್ನು ಕೋರಿದ ಅರ್ಜಿಗಳ ಪ್ರಕರಣಗಳನ್ನು ಈಗ ಹೊಸ ರೀತಿಯಲ್ಲೇ ಪರಿಗಣಿಸಬೇಕಾಗುತ್ತದೆ

‘ಖಾಸಗಿತನಕ್ಕೆ ಹಲವು ಮುಖಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಸೂಕ್ತ. ವಿಶ್ರಾಂತಿ ಪಡೆಯುವುದು, ಆಶ್ರಯ ಪಡೆಯುವುದು ಮತ್ತು ಲೈಂಗಿಕ ಒಲವುಗಳು  ಖಾಸಗಿತನದ ಕೆಲವು ಅಂಶಗಳು. ಈ ಮೂರೂ ಸಂಗತಿಗಳು ಮನುಷ್ಯನ ಸ್ವಾತಂತ್ರ್ಯಕ್ಕೆ ಅತ್ಯಗತ್ಯ. ಖಾಸಗಿತನದ ಹಕ್ಕು ಸಂವಿಧಾನದ ಅಡಿ ದತ್ತವಾಗಿರುವ ವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಹಾಗೆಯೇ ದೀರ್ಘಾವಧಿಯಿಂದ ಪಡೆದುಕೊಳ್ಳುತ್ತಿರುವ ಚಿಕಿತ್ಸೆಯನ್ನು ನಿರಾಕರಿಸುವುದು ಅಥವಾ ದಯಾಮರಣವನ್ನು ಅಪೇಕ್ಷಿಸುವುದು ಖಾಸಗಿತನದ ಭಾಗವೇ ಆಗುತ್ತದೆ’ ಎಂದು ನ್ಯಾಯಮೂರ್ತಿ ಚಲಮೇಶ್ವರ್ ಹೇಳಿದ್ದಾರೆ.

**

ಗರ್ಭಪಾತ

ಗರ್ಭಪಾತವೂ ವ್ಯಕ್ತಿಸ್ವಾತಂತ್ರ್ಯದ ಅಡಿ ಖಾಸಗಿತನದ ಹಕ್ಕು ಎಂದು ಪೀಠ ಹೇಳಿದೆ. ಹೀಗಾಗಿ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನು ಮತ್ತು ನಿಯಮಗಳನ್ನು ಮರುಪರಿಶೀಲಿಸಬೇಕಾಗುತ್ತದೆ.

‘ತನ್ನ ಗರ್ಭದಲ್ಲಿರುವ ಮಗುವನ್ನು ಹೆರಬೇಕೇ ಅಥವಾ ಗರ್ಭಪಾತ ಮಾಡಿಸಿಕೊಳ್ಳಬೇಕೇ ಎಂಬುದು ಆಯಾ ಮಹಿಳೆಯ ಖಾಸಗಿತನವಾಗುತ್ತದೆ. ಇದು ಆಕೆಯ ಆಯ್ಕೆಯ ಸ್ವಾತಂತ್ರ್ಯವೂ ಹೌದು’ ಎಂದು ನ್ಯಾಯಮೂರ್ತಿ ಚಲಮೇಶ್ವರ್ ಪ್ರತಿಪಾದಿಸಿದ್ದಾರೆ.

**

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ಕ್ಕೆ ಸಂಬಂಧಿಸಿದಂತೆ 2013ರಲ್ಲಿ ನ್ಯಾಯಮೂರ್ತಿ ಕೌಶಲ್ ಅವರ ತೀರ್ಪು ವ್ಯಕ್ತಿಯ ಮೂಲಭೂತಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ‘ಅಸಹಜ’ ಲೈಂಗಿಕ ಕ್ರಿಯೆಯು ನಿಸರ್ಗಕ್ಕೆ ವಿರುದ್ಧವಾದುದು ಮತ್ತು ಶಿಕ್ಷಾರ್ಹ ಅಪರಾಧ ಎಂದು ಸೆಕ್ಷನ್ 377 ಹೇಳುತ್ತದೆ. 2009ರಲ್ಲಿ ದೆಹಲಿ ಹೈಕೋರ್ಟ್‌ ಇದು ಅಪರಾಧವಲ್ಲ ಎಂದು ಹೇಳಿತ್ತು. ಆದರೆ 2013ರಲ್ಲಿ ಸುಪ್ರೀಂ ಕೋರ್ಟ್‌ ಇದು ಅಪರಾಧ ಎಂದೇ ಹೇಳಿತ್ತು. ಲೈಂಗಿಕ ಒಲವು ಖಾಸಗಿತನದ ಹಕ್ಕು ಎಂದು ಈಗ ಸುಪ್ರೀಂ ಕೋರ್ಟ್‌ ಹೇಳಿದೆ. ಅಲ್ಲದೆ ಇದೇ ವಿಚಾರವು ಈಗ ಸುಪ್ರೀಂ ಕೋರ್ಟ್‌ನ ಐದು ಸದಸ್ಯರ ಮತ್ತೊಂದು ಪೀಠದಲ್ಲಿ ವಿಚಾರಣೆಯಲ್ಲಿ ಇರುವುದರಿಂದ ಒಂಬತ್ತು ಸದಸ್ಯರ ಪೀಠವು ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ.

‘ಲೈಂಗಿಕತೆಯು ಖಾಸಗಿತನ ಮತ್ತು ಘನತೆಯ ವಿಚಾರ. ವ್ಯಕ್ತಿಯ ಲೈಂಗಿಕತೆಯ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದರಿಂದ  ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಲೈಂಗಿಕತೆ ವಿಚಾರದಲ್ಲಿ ವ್ಯಕ್ತಿಯನ್ನು ಸಾಮಾಜಿಕವಾಗಿ ತೆಗಳುವ ಮತ್ತು ತಿರಸ್ಕರಿಸುವ ಆತಂಕವಿದೆ. ಇದರ ಜತೆಯಲ್ಲಿ ಸೆಕ್ಷನ್‌ 377 ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆಯನ್ನೂ ವಿಧಿಸುತ್ತದೆ. ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಚಾರ. ನ್ಯಾಯಮೂರ್ತಿ ಕೌಶಲ್‌ ಅವರ ಪೀಠವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಸಣ್ಣ ಪ್ರಮಾಣದ ವಿಚಾರಣೆಯ ಆಧಾರದಲ್ಲೇ ಲೈಂಗಿಕ ಅಲ್ಪಸಂಖ್ಯಾತರ ಲೈಂಗಿಕ ಒಲವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದ ಕೌಶಲ್ ಅವರ ಪ್ರತಿಪಾದನೆ ಸರಿಯಲ್ಲ. ಈ ಪ್ರಕರಣವನ್ನು ಅವರು ನಿಭಾಯಿಸಿದ ರೀತಿಯನ್ನೂ ನಾವು ಒಪ್ಪುವುದಿಲ್ಲ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

‘ಲೈಂಗಿಕ ಒಲವು ಖಾಸಗಿತನದ ಮಹತ್ವದ ಅಂಶಗಳಲ್ಲಿ ಒಂದು. ಅದರ ಆಧಾರದಲ್ಲಿ ಯಾವುದೇ ವ್ಯಕ್ತಿಯನ್ನು ಅಸಮಾನತೆಗೆ ಗುರಿಮಾಡುವುದು ಆತನ ಘನತೆಗೆ ತರುವ ಧಕ್ಕೆಯೇ ಹೌದು. ಸಮಾಜದಲ್ಲಿನ ಪ್ರತಿಯೊಬ್ಬರ ಲೈಂಗಿಕ ಒಲವನ್ನು ರಕ್ಷಿಸಬೇಕು ಎಂದು ಸಮಾನತೆ ಪ್ರತಿಪಾದಿಸುತ್ತದೆ. ಖಾಸಗಿತನದ ಹಕ್ಕು ಮತ್ತು ಲೈಂಗಿಕ ಒಲವಿನ ರಕ್ಷಣೆ ಸಂವಿಧಾನದ 14, 15 ಮತ್ತು 21ನೇ ವಿಧಿಗಳು ನೀಡಿರುವ ಮೂಲಭೂತಹಕ್ಕುಗಳ ಜೀವಾಳವೇ ಆಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT