ಸೋಮವಾರ, ಜೂನ್ 21, 2021
29 °C

ಮಲೆನಾಡಿನ ಕಲಶ ಈ ‘ನಾಡಕಳಸಿ’

ಹ.ಸ. ಬ್ಯಾಕೋಡ Updated:

ಅಕ್ಷರ ಗಾತ್ರ : | |

ಮಲೆನಾಡಿನ ಕಲಶ ಈ ‘ನಾಡಕಳಸಿ’

ಮೈದುಂಬಿಕೊಂಡ ಜೋಗದ ಜಲಪಾತ ನೋಡಿಕೊಂಡು ಸಾಗರದ ಬಸ್ ನಿಲ್ದಾಣಕ್ಕೆ ಬಂದು ನಿಂತು ಐದೋ ಹತ್ತೋ ನಿಮಿಷ ಆಗಿತ್ತು. ಸ್ವಲ್ಪವೇ ದೂರದಲ್ಲಿದ್ದ ರೈಲು ನಿಲ್ದಾಣಕ್ಕೆ ಹೋಗಿ ಮೈಸೂರಿಗೆ ಹೋಗುವ ರೈಲನ್ನು ಹತ್ತಬೇಕಿತ್ತು. ಆದರೆ ಮಳೆ ಧೋ... ಎಂದು ಸುರಿಯುತ್ತಿತ್ತು. ಹೇಗೋ ಹೋಗಿಬಿಡೋಣ ಎಂದರೆ ಬೆನ್ನ ಹಿಂದೆ ಹಾಗೂ ಬಗಲಲ್ಲಿ ಎರಡು ಕ್ಯಾಮರಾ ಬ್ಯಾಗ್‍ಗಳಿದ್ದವು. ಅವು ನೆನೆದರೆ ಕಷ್ಟ.

ಲಕ್ಷಾಂತರ ರೂಪಾಯಿ ಮೌಲ್ಯದ ಲೇನ್ಸ್‌ಗಳು, ಕ್ಯಾಮರಾಗಳು ನೀರಲ್ಲಿ ನೆನೆದರೆ ಅಷ್ಟೇ..! ಕ್ಯಾಮೆರಾಗಳು ಹಾಳಾದರೆ ಎಂದು ಹೆದರಿ ಬಸ್ ನಿಲ್ದಾಣದಲ್ಲಿಯೇ ನಿಂತುಬಿಟ್ಟೆ. ಅರ್ಧ ಗಂಟೆಯಾದರೂ ಮಳೆ ನಿಲ್ಲಲಿಲ್ಲ. ಮೈಸೂರು ರೈಲು ಕೂಡ ಹೊರಟು ಹೋಯಿತು.

ಅನಿವಾರ್ಯ ಎಂದುಕೊಂಡು ಅಲ್ಲಿಯೇ ಇದ್ದ ಹೋಟೆಲ್‍ಗೆ ಹೋಗಿ ಚಹ ಕುಡಿಯತೊಡಗಿದೆ. ಆ ವೇಳೆ ಧುತ್ತನೆ ಎದುರಿಗೆ ಬಂದು ನಿಂತವರು ಹಿರಿಯ ಸ್ನೇಹಿತರಾದ ಕೆ.ಚಂದ್ರಶೇಖರ.

‘ಏನ್ರೀ ಇದು, ಹೇಳದೆ ಕೇಳದೆ ನಮ್ಮೂರಿಗೆ ಬಂದಿದ್ದಿರೀ? ಏನ್ ಸಮಾಚಾರ, ಜೋಗ್ ಫಾಲ್ಸ್ ನೋಡಕೆ ಬಂದ್ರಾ?’ ಎಂದು ಪ್ರಶ್ನಿಸಿದರು.

`ಹ್ಞೂ ಸಾರ್, ಬಿಡುವಾಗಿದ್ದೆ. ಹಾಗಾಗಿ ಬೆಂಗಳೂರಿನಿಂದ ಜೋಗದ ಬಸ್ ಹತ್ತಿ ಬಂದುಬಿಟ್ಟೆ. ಆಗಲೇ ಮೈಸೂರು ಟ್ರೈನ್ ಹತ್ತಿ ಹೋಗಬೇಕಿತ್ತು. ಮಳೆ ಜೋರಾಗಿತ್ತು, ಕ್ಯಾಮೆರಾ ಬ್ಯಾಗ್‍ಗಳು ಇವೆಯಲ್ಲ, ಹಾಗಾಗಿ ಇಲ್ಲೇ ಇದ್ದುಬಿಟ್ಟೆ’ ಎಂದೆ.

`ನೀವು ಬೆಂಗಳೂರು ಟ್ರೈನ್‌ಗೆ ಹೋಗಬೇಕಲ್ವ? ಮೈಸೂರು ಟ್ರೈನ್ ಯಾಕೆ?’ ಎಂದು ಮತ್ತೆ ಪ್ರಶ್ನಿಸಿದರು.

`ನಿಜ ಸಾರ್, ನಾನು ಬೆಂಗಳೂರಿಗೆ ಹೋಗಬೇಕು. ಆದರೆ ಬೇಲೂರಿಗೆ ಹೋಗಿ ಅಲ್ಲಿ ಹೊಯ್ಸಳ ರಾಜ ಹುಲಿಯೊಂದಿಗೆ ಹೋರಾಡುವ ಶಿಲ್ಪವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡು ಹೋಗಬೇಕು. ಅದಕ್ಕಾಗಿ ಮೈಸೂರು ಟ್ರೈನ್ ಹಿಡಿಯಬೇಕಿತ್ತು. ಈ ಮಳೆಯಿಂದ ಮಿಸ್ ಆಯಿತು ನೋಡಿ ಸಾರ್...’ ಎಂದೆ.

`ಅದಕ್ಕೆ ಯಾಕೆ ಬೇಜಾರು ಮಾಡಿಕೊಳ್ಳುತ್ತೀರಿ, ನಮ್ಮ ಈ ಮಲೆನಾಡಿನ ದಟ್ಡವಾದ ಬೆಟ್ಟದ ನಡುವೆ ಅದೇ ಹೊಯ್ಸಳ ರಾಜ ಹುಲಿಯೊಂದಿಗೆ ಹೋರಾಡುವುದನ್ನು ತೋರಿಸುತ್ತೇನೆ ಬನ್ನಿ, ಇವತ್ತು ನಮ್ಮನೇಲಿ ಇದ್ದುಬಿಡಿ’ ಎಂದು ಚಂದ್ರಶೇಖರ ಅವರು ಆಡಿದ ಮಾತು ಕೇಳಿ ನಾನು ದಂಗಾದೆ.

‘ನಿಜನಾ ಸಾರ್!’ ಎಂದು ಕೇಳಿದ್ದಕ್ಕೆ ಅವರು, ‘ಹೇಗೂ ಟ್ರೈನ್ ಮಿಸ್ ಆಗಿದೆ. ಇವತ್ತು ಬೆಂಗಳೂರು ಟ್ರೈನೂ ಇಲ್ಲ. ಸುಮ್ನೇ ತಲೆ ಕೆಡಿಸಿಕೊಂಡು ಬಸ್ ಹತ್ತಿಕೊಂಡು ರಾತ್ರಿ ಪ್ರಯಾಣ ಮಾಡಿಕೊಂಡು ಬೇಲೂರು ತಲುಪುವ ಬದಲು ಇವತ್ತು ರಾತ್ರಿ ನಮ್ಮನೇಲಿ ಇದ್ದು, ಬೆಳಿಗ್ಗೆ ಆರೇಳು ಗಂಟೆಗೆ ಸ್ಕೂಟರ್‍ನಲ್ಲಿ ಹೋಗೋಣ. ಆರೇಳು ಕಿ.ಮೀ ದೂರ ಅಷ್ಟೇ, ಹಸಿರು ಬೆಟ್ಟಗಳ ಮಧ್ಯದಲ್ಲಿ ಹೊಯ್ಸಳ ರಾಜ ಹುಲಿಯೊಂದಿಗೆ ಹೋರಾಡುವುದನ್ನು ನಿಮಗೆ ತೋರಿಸುತ್ತೇನೆ. ಯೋಚನೆ ಮಾಡಬೇಡಿ. ನೋಡಿ ಹೇಗೂ ಮಳೆ ನಿಂತಿತು. ಹತ್ತಿ ನನ್ನ ಸ್ಕೂಟರ್’ ಎಂದು ತಮ್ಮ ಮನೆಗೆ ಕರೆದುಕೊಂಡು ಹೋದರು.

ಮರುದಿನ ಬೆಳಿಗ್ಗೆ ಏಳೂವರೆ ಗಂಟೆಗೆ ನೀರುದೋಸೆ ತಿಂದು, ಬಿಸಿಬಿಸಿ ಚಹಾ ಕುಡಿದು ಚಂದ್ರಶೇಖರ್ ಅವರ ಸ್ಕೂಟರ್ ಏರಿ ಕುಳಿತ ನನಗೆ ಕುತೂಹಲ. ಎಲ್ಲಿಯ ಬೇಲೂರು ಎಲ್ಲಿಯ ಸಾಗರ! ಮಲೆನಾಡಿನಲ್ಲಿ ಹೊಯ್ಸಳ ಹುಲಿಯೊಂದಿಗೆ ಹೋರಾಡುವ ದಾಖಲೆ! ಸಾಗರ ಪಟ್ಟಣ ದಾಟಿದ ನಮ್ಮ ಬೈಕು ಬೆಟ್ಟಗಳ ಮಧ್ಯದ ರಸ್ತೆಯಲ್ಲಿ ಹೋಗುತ್ತಿದ್ದರೆ ಸುತ್ತಲೂ ಜೀಂ.. ಜೀಂ... ಎಂದು ಕೂಗುವ ಜೀರುಂಡೆಗಳ ಸದ್ದು ಒಂಥರಾ ಭಯ ಹುಟ್ಟಿಸುವಂತಿತ್ತು.

ಇನ್ನು ತಣ್ಣಗೆ ಬೀಸುತ್ತಿದ್ದ ಗಾಳಿ, ಯಾವ ಹನಿಗಳು ದಪದಪನೆ ಸುರಿಯುತ್ತಿವೆಯೋ ಎಂದು ಕೊಂಚ ಕತ್ತೆತ್ತಿ ನೋಡಿದರೆ ಮೋಡಗಳು ಸಾಲು ಸಾಲಾಗಿ ತೇಲಿಕೊಂಡು ಹೋಗುತ್ತಿದ್ದವು. ಗಂಟೆ ಎಂಟಾಗುತ್ತಿದ್ದರೂ ಸೂರ್ಯನ ಕಿರಣಗಳ ಸುಳಿವು ಮಾತ್ರ ಇರಲಿಲ್ಲ. ಹಾಗಾಗಿ ಸ್ನೇಹಿತರಾದ ಚಂದ್ರಶೇಖರ ಅವರು ಸ್ವಲ್ಪ ನಿಧಾನವಾಗಿ ಸ್ಕೂಟರ್ ಓಡಿಸುತ್ತಿದ್ದರು. ಕೆಲ ಹೊತ್ತಿನ ಬಳಿಕ ರಸ್ತೆಯ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿದ ಚಂದ್ರಶೇಖರ್, ‘ಇಳೀರಿ, ನಿಮಗೆ ಹೊಯ್ಸಳ ಹುಲಿಯೊಂದಿಗೆ ಹೋರಾಡುವುದನ್ನು ತೋರಿಸುತ್ತೇನೆ’ ಎಂದರು.

ಅವರ ಮಾತನ್ನು ಕೇಳುತ್ತಿದ್ದಂತೆ ನಿಜಕ್ಕೂ ಭಯವಾಯಿತು. ಏಕೆಂದರೆ ಅವರು ಸ್ಕೂಟರ್ ನಿಲ್ಲಿಸಿದ್ದ ಸ್ಥಳ ಹುಲಿಗಳು ಓಡಾಡುವಂತಹ ಸ್ಥಳದಂತೆಯೇ ಇತ್ತು. ರಸ್ತೆಯಲ್ಲಿ ಯಾರೊಬ್ಬರ ಸುಳಿವೂ ಇರಲಿಲ್ಲ. ನನ್ನ ಕ್ಯಾಮೆರಾ ಬ್ಯಾಗ್ ಒಂದನ್ನು ತೆಗೆದುಕೊಂಡು ಮುಂದೆ ಹೊರಟ ಚಂದ್ರಶೇಖರ್ ಅವರನ್ನು ಹಿಂಬಾಲಿಸಿದೆ.

ತಟ್ಟನೆ ಎದುರಾಯಿತು ಒಂದು ಕರಿಕಲ್ಲಿನ ದೊಡ್ಡ ದೇವಾಲಯ. ಅದರ ಪಕ್ಕದಲ್ಲಿಯೇ ಒಂದು ಚಿಕ್ಕ ದೇವಾಲಯವೂ ಕಂಡಿತು. ನಸುಕಿನಲ್ಲಿ ಹನಿದ ಹನಿಗಳಿಂದ ತೊಯ್ದು ಎರಡೂ ದೇವಾಲಯಗಳು ಫಳಫಳಿಸುತ್ತಿದ್ದವು. ಆ ಎರಡೂ ದೇವಾಲಯಗಳ ಮಧ್ಯಕ್ಕೆ ನನ್ನನ್ನು ಕರೆದುಕೊಂಡು ಹೋದ ಚಂದ್ರಶೇಖರ್, ‘ಅಲ್ನೋಡಿ, ಹೊಯ್ಸಳ ಹುಲಿಯೊಂದಿಗೆ ಹೋರಾಡುತ್ತಿದ್ದಾನೆ’ ಎಂದರು.

ಕೂಡಲೇ ಕತ್ತು ತಿರುಗಿಸಿ ನೋಡಿದೆ. ನಿಜ! ಹೊಯ್ಸಳ ರಾಜ ಹುಲಿಯೊಂದಿಗೆ ಹೋರಾಡುತ್ತಿದ್ದ!! ಆ ದೃಶ್ಯವನ್ನು ಕಂಡು ಬಹಳ ಆಶ್ಚರ್ಯವಾಯಿತು. ಬೇಲೂರಿನಲ್ಲಿ ಮಾತ್ರ ಹೊಯ್ಸಳ ರಾಜ ಹುಲಿಯೊಂದಿಗೆ ಹೋರಾಡುವ ಶಿಲ್ಪ ಇರುವುದು ಎಲ್ಲರಿಗೂ ಗೊತ್ತಿರುವ ಸಾಮಾನ್ಯ ಸಂಗತಿ. ಆದರೆ ಮಲೆನಾಡಿನ ಬೆಟ್ಟಗಳ ಮಧ್ಯದಲ್ಲೊಂದು ಅದ್ಭುತ ಶಿಲ್ಪಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ದೇವಾಲಯದ ಮೇಲೆ ಹೊಯ್ಸಳ ಹುಲಿಯೊಡನೆ ಇರುವ ದೃಶ್ಯ ಅನೇಕರಿಗೆ ತಿಳಿದಿಲ್ಲ. ಅಲ್ಲದೆ ವಿಶೇಷವೆಂದರೆ ಇದೇ ದೇವಾಲಯದಲ್ಲಿ ಭುವನೇಶ್ವರಿ ದೇವಿಯ ಶಿಲ್ಪವೂ ಇದೆ. ಇಂತಹ ವೈಶಿಷ್ಟ್ಯ ಇರುವ ಸ್ಥಳ ‘ನಾಡಕಳಸಿ’. ಈ ಸ್ಥಳ ಒಂದು ಕುಗ್ರಾಮ. ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲದಿರುವುದರಿಂದಲೋ ಅಥವಾ ಸೂಕ್ತ ಪ್ರಚಾರದ ಕೊರತೆಯಿಂದಲೋ ಈ ಸ್ಥಳ ಪ್ರವಾಸಿಗರಿಂದ ದೂರವಾಗಿಯೇ ಉಳಿದಿದೆ.

ದಟ್ಟವಾದ ಕಾಡು ಮರಗಳ ಮಧ್ಯದಲ್ಲಿರುವ, ಹೊಯ್ಸಳ ರಾಜನ ಶಿಲ್ಪವಿರುವ ಈ ದೇವಾಲಯ ಹಿರಿದಾಗಿದ್ದು, ಅದನ್ನು ಮಲ್ಲಿಕಾರ್ಜುನ ದೇವಾಲಯವೆಂದು ಕರೆಯಲಾಗುತ್ತಿದೆ. ಅದರ ಪಕ್ಕಲ್ಲಿಯೇ ಇನ್ನೊಂದು ಕಿರಿದಾದ ದೇವಾಲಯವಿದ್ದು, ಅದನ್ನು ರಾಮೇಶ್ವರ ದೇವಾಲಯವೆಂದು ಕರೆಯಲಾಗುತ್ತಿದೆ.

ಈ ಎರಡೂ ದೇವಾಲಯಗಳಿರುವ ‘ನಾಡಕಳಸಿ’ ಗ್ರಾಮ ಸಾಗರ ಪಟ್ಟಣದಿಂದ ಬರೋಬ್ಬರಿ ಎಂಟು ಕಿ.ಮೀ. ದೂರದಲ್ಲಿದೆ. ಈ ಗ್ರಾಮವು ಹೊಯ್ಸಳರ ಕಾಲದ ಪ್ರಮುಖ ಪಟ್ಟಣವಾಗಿತ್ತು. ಆಗಿನ ಕೊಂಡನಾಡು ಅಧಿಪತಿಯಾದ ಬಳೆಯಣ್ಣ ವೆರ್ಗಡೆ (ಬಳೆಯಣ್ಣ ಹೆಗ್ಗಡೆ ಅಂತಲೂ ಹೇಳುತ್ತಾರೆ) ಕ್ರಿ.ಶ. 1218ರಲ್ಲಿ ಈ ಎರಡೂ ದೇವಾಲಯಗಳನ್ನು ನಿರ್ಮಿಸಿದ್ದು, ದೇವಾಲಯಗಳು ಹೊಯ್ಸಳ ಶೈಲಿಯಲ್ಲಿಯೇ ಇವೆ.

ಹಿರಿದಾದ ಮಲ್ಲಿಕಾರ್ಜುನ ದೇವಾಲಯವು ಚೌಕಾಕಾರದ ತಲವಿನ್ಯಾಸವನ್ನು ಹೊಂದಿದೆ. ಗರ್ಭಗೃಹ, ಸುಖನಾಸಿ ಹಾಗೂ ಒಂದು ಮುಖಮಂಟಪವನ್ನು ಹೊಂದಿದೆ. ಮುಖಮಂಟಪಕ್ಕೆ ಉತ್ತರ, ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಪ್ರವೇಶದ್ವಾರಗಳು ಇವೆ. ವೃತ್ತಾಕಾರದ ಒಟ್ಟು ಎಂಟು ಕಂಬಗಳಿವೆ.

ಹೊಳಪು ಮೈ ಇರುವ ಹಾಗೂ ಪಟ್ಟಿಕೆಗಳನ್ನೊಳಗೊಂಡ ಸ್ತಂಭಗಳು ದೇವಾಲಯದ ಮುಖಮಂಟಪದಲ್ಲಿವೆ. ಆ ಮುಖಮಂಟಪದಲ್ಲಿರುವ ದೇವಕೋಷ್ಠಕಗಳಲ್ಲಿ ಸುಂದರವಾದ ಕೆತ್ತನೆಯುಳ್ಳ ಸಪ್ತಮಾತ್ರಿಕ, ಗಣೇಶ, ಮಹಿಷಮರ್ದಿನಿ ಹಾಗೂ ಉಮಾಮಹೇಶ್ವರ ವಿಗ್ರಹಗಳನ್ನು ಇಡಲಾಗಿದೆ. ಗರ್ಭಗೃಹವನ್ನು ಕದಂಬನಾಗರ ಶಿಖರ ಅಲಂಕರಿಸಿರುವುದು ವಿಶೇಷ.

ಈ ಮಲ್ಲಿಕಾರ್ಜುನ ದೇವಾಲಯದ ದಕ್ಷಿಣ ಭಾಗದಲ್ಲಿರುವ ರಾಮೇಶ್ವರ ದೇವಾಲಯವನ್ನು ಸದಾಶಿವ ದೇವಾಲಯವೆಂದೂ ಕರೆಯಲಾಗುತ್ತಿದೆ. ರಾಮೇಶ್ವರ ದೇವಾಲಯವು ಆಯತಾಕಾರದಲ್ಲಿರುವುದು ಮತ್ತೊಂದು ವಿಶೇಷ. ಒಂದು ಸುಖನಾಸಿ ರಹಿತ ಗರ್ಭಗೃಹವನ್ನು ಹೊಂದಿದೆ. ಗರ್ಭಗೃಹದ ಸುತ್ತಲೂ ಇರುವ ಪ್ರದಕ್ಷಿಣಾಪಥವು ನೇರವಾಗಿದ್ದು, ನವರಂಗಕ್ಕೆ ಸೇರಿಕೊಂಡಿದೆ.

ಸಾಮಾನ್ಯವಾಗಿ ದ್ರಾವಿಡಶೈಲಿಯ ದೇವಾಲಯಗಳಲ್ಲಿ ಕಂಡುಬರುವ ತಳವಿನ್ಯಾಸವು ಹೊಯ್ಸಳ ಶೈಲಿಯ ದೇವಾಲಯಗಳಲ್ಲಿ ಬಹಳ ವಿರಳ. ಆದರೆ ಅಂತಹ ವಿರಳ ದೇವಾಲಯಗಳ ಸಾಲಿಗೆ ಈ ದೇವಾಲಯಗಳು ಸೇರಿಕೊಳ್ಳುತ್ತವೆ. ಎರಡೂ ದೇವಾಲಯಗಳನ್ನು ನಕ್ಷತ್ರಾಕಾರದ ಪೀಠದ ಮೇಲೆ ನಿರ್ಮಿಸಲಾಗಿದ್ದು, ಎರಡು ಮೇಲ್ಚಾವಣಿಗಳು ಸಹ ನಕ್ಷತ್ರಾಕಾರದಲ್ಲಿಯೇ ನಿರ್ಮಿತಗೊಂಡಿವೆ.

ರಾಮೇಶ್ವರ ದೇವಾಲಯಕ್ಕೆ ಪ್ರವೇಶ ದ್ವಾರ ಮಾತ್ರ ಇದೆ. ಆ ಪ್ರವೇಶ ದ್ವಾರದ ಅಕ್ಕಪಕ್ಕದ ಗೋಡೆಗಳಲ್ಲಿ ವಾತ್ಸಾಯನ ಕಾಮಸೂತ್ರದ ಆಕರ್ಷಕ ಶಿಲ್ಪಗಳನ್ನು ಕೆತ್ತಲಾಗಿದೆ. ವಿಭಿನ್ನವಾಗಿರುವ ಅಷ್ಟೂ ಶಿಲ್ಪಗಳು ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತವೆ. ಇಂತಹ ಅದ್ಭುತ ಶಿಲ್ಪೆಯುಳ್ಳ ದೇವಾಲಯಗಳನ್ನು ನೋಡಬೇಕೆಂದರೆ ರಾಜಧಾನಿ ಬೆಂಗಳೂರಿನಿಂದ ಬರೋಬ್ಬರಿ 356 ಕಿ.ಮೀ. ದೂರ ಕ್ರಮಿಸಬೇಕು. ಶಿವಮೊಗ್ಗ ಮಾರ್ಗವಾಗಿ ಸಾಗರ ತಲುಪಿ ಅಲ್ಲಿಂದ ನಾಡಕಳಸಿಗೆ ಬಹುಬೇಗ ತಲುಪಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.