7

ಗಾಂಧೀಬಜಾರಿನ ಮಹಾಲಕ್ಷ್ಮಿ ಟಿಫಿನ್‌ ರೂಂ...

Published:
Updated:
ಗಾಂಧೀಬಜಾರಿನ ಮಹಾಲಕ್ಷ್ಮಿ ಟಿಫಿನ್‌ ರೂಂ...

-ಶ್ರೀರಂಜನಿ ಅಡಿಗ

ಪ್ರತಿವರ್ಷ ರಜೆಗೆಂದು ಅಮೆರಿಕದಿಂದ ಭಾರತಕ್ಕೆ ಬರುವ ನನ್ನ ಅಕ್ಕ ಉಷಾ, ತಾನು ತಿರುಗಾಡಿದ, ಕಂಡ ಹೊಸ ಸ್ಥಳಗಳ ಬಗ್ಗೆ ನಿಷ್ಠೆಯಿಂದ ಅಷ್ಟೇ ತಾಜಾ ಆಗಿ ಫೇಸ್‌ಬುಕ್ಕಿನಲ್ಲಿ ಬರೆದುಕೊಳ್ಳುತ್ತಾಳೆ. ಪ್ರತಿಸಲ ಬಂದಾಗ ಒಂದು ಹೊಸ ವಿಚಾರದ - ನಾವಿಲ್ಲಿ ಇದ್ದೂ ನಮಗೇ ಅಪರಿಚಿತವಾಗಿರುವ - ಅನ್ವೇಷಣೆ ಅವಳ ಹೆಗ್ಗಳಿಕೆ ಎಂದು ನನಗೆ ಅನಿಸುತ್ತದೆ.

ಮೊನ್ನೆ ಮೊನ್ನೆ ಪೋಸ್ಟ್ ಮಾಡಿದ ಮಸಾಲೆ ದೋಸೆ, ಇಡ್ಲಿ, ಸಾಂಬಾರಿನ ಬಣ್ಣ ಬಣ್ಣದ ಫೋಟೋಗಳನ್ನು ನೋಡುತ್ತಲೇ ನನ್ನ ಬಾಯಲ್ಲಿ ನೀರೂರಲು ಆರಂಭವಾಯಿತು. ಅವು ಬೆಂಗಳೂರಿನ ಡಿ.ವಿ.ಜಿ ರಸ್ತೆಯಲ್ಲಿರುವ, ಇನ್ನೂ ಸಾಂಪ್ರದಾಯಿಕ ಗೆಟಪ್ಪಿನಲ್ಲೇ ಇರುವ ಮಹಾಲಕ್ಷ್ಮಿ ಟಿಫಿನ್‌ ರೂಮ್‌ನಲ್ಲಿ ಸಿಗುವ ತಿಂಡಿಯ ಪೋಟೋಗಳು.

ಯಾವತ್ತಾದರೂ ಅಲ್ಲಿಗೆ ದಾಳಿ ಇಡಲೇಬೇಕು ಎಂದು ನಿರ್ಧರಿಸಿ ಮೊನ್ನೆ ಭಾನುವಾರ ಗಂಡನನ್ನು ಹೊರಡಿಸಿದೆ. ಏನು, ಎತ್ತ, ಎಲ್ಲಿ, ಎಲ್ಲಾ ಪ್ರವರಗಳನ್ನು ನನ್ನಿಂದ ತಿಳಿದುಕೊಂಡು ‘ಓಹೋ, ಅದಾ? ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ಅಡ್ಡಾಡಿದ ಅಡ್ಡಾ ಅದು’ ಅಂದ.

ಡಿ.ವಿ.ಜಿ ರಸ್ತೆಯ ಮುಖ್ಯ ಮಾರ್ಗದಲ್ಲೇ ಇರುವ - ಹಳೇ ಬೋರ್ಡಿನ ಖದರಿನಲ್ಲಿ ಕಂಗೊಳಿಸುವ - ಹೋಟೆಲನ್ನು ಹುಡುಕಲು ಕಷ್ಟವೇನೂ ಆಗಲಿಲ್ಲ. ಒಳಗೆ ಕಾಲಿಡುತ್ತಲೇ ಬಾಗಿಲಿನಲ್ಲಿ ಸ್ವಾಗತಕಾರಿಣಿ ಅಲ್ಲಲ್ಲ ಮೆನು ಬೋರ್ಡು ಸ್ವಾಗತಿಸಿತು. ಸುಸಜ್ಜಿತ ಒಳಾವರಣ (ಅದೇ, ಇಂಗ್ಲಿಷಿನಲ್ಲಿ ಹೇಳುತ್ತಾರಲ್ಲ ಆಂಬಿಯೆನ್ಸ್) ಸುಖಾಸೀನ ಸೀಟುಗಳು, ಮೆಲುದನಿಯ ಹಿನ್ನೆಲೆ ಸಂಗೀತ, ಸಮವಸ್ತ್ರಧಾರಿ ಸರ್ವರ್‌ಗಳು - ಏನನ್ನೂ ನಿರೀಕ್ಷಿಸದಿರಿ. ಆದರೆ ನಿಮ್ಮ ನಿರೀಕ್ಷೆಯ, ರುಚಿಮೊಗ್ಗುಗಳನ್ನು ಅರಳಿಸುವ ರುಚಿಯಾದ ತಿಂಡಿಗಳು ನಿಮಗೆ ಬೇಸರ ಉಂಟುಮಾಡುವುದಿಲ್ಲ.

ನಗುಮೊಗದ ಸೇವೆಯೊಂದಿಗೆ, ಆರ್ಡರ್ ಮಾಡಿದ ಐದು ನಿಮಿಷಗಳೊಳಗೇ ಮಸಾಲೆ ದೋಸೆ, ಉಪ್ಪಿಟ್ಟು ನಮ್ಮಟೇಬಲ್ ಮೇಲೆ ಇದ್ದವು. ಮೊದಲ ನೋಟಕ್ಕೇ ಸೆಳೆಯುವ, ಕೆಂಪು ಕೆಂಪಾದ ದೋಸೆ. ವ್ಯಾಸ ಮಾತ್ರ ಸ್ವಲ್ಪ ಸಣ್ಣದು. ಉಷಾ ಸರಿಯಾಗಿಯೇ ಬರೆದಿದ್ದಾಳೆ ಅಂದುಕೊಂಡೆ. ಒಳಗಡೆ ಆಲೂಗಡ್ಡೆ ಪಲ್ಯ, ದೋಸೆಗೆ ಹಚ್ಚಿದ ಚಟ್ನಿ ಕೆಂಪಾಗಿರದೆ ಬಿಳಿ ಬಣ್ಣದ್ದಾಗಿದ್ದು ಇಲ್ಲಿಯ ವಿಶೇಷ ಅನಿಸಿತು. ಎರಡೇ ಬೆರಳಿನಲ್ಲಿ ಮುರಿದು ಬಾಯಿಗಿಟ್ಟುಕೊಳ್ಳುವಷ್ಟು ಮೆತ್ತಗೆ, ಹೂಹಗುರ. ಜೊತೆಗೆ ಗರಿಗರಿ.

ಇದೇ ರುಚಿ ನನ್ನೂರು ಕೋಟದ (ಉಡುಪಿ ಜಿಲ್ಲೆ) ‘ಮಂಟಪ ಹೋಟೆಲ್ಲಿನದ್ದು.’ ಇನ್ನು ಉಪ್ಪಿಟ್ಟು - ಈರುಳ್ಳಿಯೊಂದನ್ನು ಬಿಟ್ಟು ಯಾವುದೇ ತರಕಾರಿಯನ್ನಾಗಲೀ, ಬಣ್ಣವನ್ನಾಗಲೀ, ಮಸಾಲೆ ಪುಡಿಗಳನ್ನಾಗಲೀ ಹಾಕದ ಸಹಜ - ನಿರಾಭರಣ ಸುಂದರಿಯಾಗಿತ್ತು. ಹದವಾದ ಒಗ್ಗರಣೆ ಮತ್ತು ಹಿತವಾದ ಖಾರ, ಚಟ್ನಿಯೊಂದಿಗೆ ಜೊತೆ ರುಚಿ ದುಪ್ಪಟ್ಟಾಗಿತ್ತು.

ತಿನ್ನುತ್ತಲೇ ನಾಲಗೆಯಿಂದ ಹೊಟ್ಟೆಗೆ ಜಾರಿ, ಇನ್ನೊಂದು ತುತ್ತು ತಿನ್ನಲು ಕೈ ಮತ್ತು ನಾಲಗೆ ಎರಡೂ ಅವಸರಿಸುತ್ತಿದ್ದವು. ನಂತರ ಕುಡಿದ ಸ್ಟ್ರಾಂಗ್‌ ಕಾಫಿಯ - ಹದವಾದ ಸಿಹಿ ಮತ್ತು ಇದ್ದೂ ಇಲ್ಲದಂತಿರುವ ಕಹಿ - ಪ್ರತೀ ಗುಟುಕು ನಾಲಗೆಯ ಮೇಲೆ ವಿಶಿಷ್ಟ ರುಚಿಯ ಷರಾ ಹಾಕಿತ್ತು.

ಅಲ್ಲೇ ಕ್ಯಾಷಿಯರ್‌ ಕೌಂಟರ್‌ನಲ್ಲಿ ಕುಳಿತಿದ್ದ ಹೋಟೆಲ್‌ ಮಾಲೀಕ ಗಿರೀಶ್‌ ಕಾರಂತರಲ್ಲಿ ಹೋಟೆಲ್ಲಿನ ಇತಿಹಾಸವನ್ನು ಕೆದಕಿದೆ. ಕಾಲದ ಕಾವಲಿಯಲ್ಲಿ ನೆನಪಿನ ದೋಸೆಯನ್ನು ಬಿಸಿಬಿಸಿಯಾಗಿ ಬಿಚ್ಚಿಟ್ಟರು ಕಾರಂತರು. ಅವರ ಅಜ್ಜ ವಾಸುದೇವ ಕಾರಂತರ ಕನಸಿನ ಕೂಸಂತೆ ಇದು.

1926ರಲ್ಲಿ ಕರಾವಳಿಯಿಂದ ವಲಸೆ ಬಂದು ಸರ್ಕಲ್ಲಿನ ಹತ್ತಿರ ಸ್ಥಾಪನೆ ಮಾಡಿದರು. 1948ರಲ್ಲಿ ಈಗಿನ ಕಟ್ಟಡಕ್ಕೆ ಸ್ಥಳಾಂತರ ಆಯಿತಂತೆ. ಆಗ ಮೇಲಿನ ಮಹಡಿಯಲ್ಲಿಯೂ ಕಾರ‍್ಯನಿರ್ವಹಿಸುತ್ತಾ ಇತ್ತು.

1978ರಿಂದ ಸ್ವಲ್ಪ ಬದಲಾವಣೆ ಮಾಡಿ ನೆಲ ಮಹಡಿಯಲ್ಲಿ ಮಾತ್ರ ಜನರಿಗೆ ತಿಂಡಿ–ತಿನಿಸುಗಳ ಸೇವೆ ಒದಗಿಸಲಾಗುತ್ತಿದೆ ಎಂಬ ವಿಚಾರ ತಿಳಿಸಿದರು.

ಅಂದಿನಿಂದ ಇಂದಿನವರೆಗೂ ಅವೇ ಆಸನಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಒತ್ತಿ ಹೇಳಲು ಅವರು ಮರೆಯಲಿಲ್ಲ. ಅವರಿಗೊಂದು ಧನ್ಯವಾದ ಹೇಳಿ, ಕೈಯಲ್ಲೇ ಬರೆದಿದ್ದ ಬಿಲ್ಲನ್ನು ಪಾವತಿಸಿ, ಈ ಗಾಂಧೀ ಬಜಾರು ತನ್ನಲ್ಲಿ ಇನ್ನೆಷ್ಟು ನಿಗೂಢಗಳನ್ನು ಅಡಗಿಸಿಕೊಂಡಿದೆಯೋ ಎಂದುಕೊಳ್ಳುತ್ತಾ ಹೊರಬಂದೆ.

ಮಕ್ಕಳು ಇನ್ನೊಮ್ಮೆ ಬರಬೇಕು ಅಂದವು. ರುಚಿಯನ್ನು ಮೆದ್ದ ನಾಲಗೆಗೆ, ಜೇಬಿಗೂ ಹಗುರವಾಗಿ ಕಾಣಿಸಿ ಮೇಲಾಗಿ ನನ್ನೂರಿನವರು ಎಂಬ ಹಿರಿಮೆಯ ಗರಿ ಮೂಡಿ ‘ಓಕೆ’ ಎಂದು ಬಲಗೈಯ ಹೆಬ್ಬೆಟ್ಟನ್ನು ಮೇಲೆತ್ತಿದೆ. ಹಾಂ! ಹೇಳಲು ಮರೆತಿದ್ದೆ - ಇಡ್ಲಿ, ದೋಸೆಗಳಂತೆ ಮುರುಕು, ಕಾರಾಶೇವು ಮುಂತಾದ ಎಣ್ಣೆಯಲ್ಲಿ ಕರಿದ ತಿಂಡಿಗಳೂ ಇಲ್ಲಿ ಸಖತ್ ಫೇಮಸ್ಸು. ಸರಿ ಹಾಗಾದ್ರೆ - ಇವತ್ತು ಹೇಗೂ ಭಾನುವಾರ. ಬೆಂಗಳೂರಿನವರು ಮತ್ತು ಇಂದು ಬೆಂಗಳೂರಿಗೆ ಬಂದವರು ಗಾಂಧಿ ಬಜಾರಿಗೆ ಹೋಗಿ ಇಲ್ಲೇ ತಿಂಡಿ ತಿಂದು ಬನ್ನಿ... ಮಿಸ್ ಮಾಡ್ಕೋಬೇಡಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry