7

ಪಲಿಮಾರು ಪರ್ಯಾಯ: ಕಟ್ಟಿಗೆ ಮುಹೂರ್ತ

Published:
Updated:

ಉಡುಪಿ: ಪಲಿಮಾರು ಪರ್ಯಾಯಕ್ಕೆ ಪೂರ್ವಭಾವಿಯಾಗಿ ಮಧ್ವ ಸರೋವರದ ಬಳಿ ಭಾನುವಾರ ಕಟ್ಟಿಗೆ ಮುಹೂರ್ತ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಪಲಿಮಾರು ಮಠದಲ್ಲಿ ವಿಷ್ಣು ಸಹಸ್ರ ನಾಮ ವೇದ ಪಾರಾಯಣ, 7.45ಕ್ಕೆ ಚಂದ್ರೇಶ್ವರ, ಅನಂತೇಶ್ವರ ಹಾಗೂ ಶ್ರೀಕೃಷ್ಣ , ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 8.30ಕ್ಕೆ ಪಲಿಮಾರು ಮಠದಿಂದ ರಾಜಾಂಗಣ ಮಾರ್ಗವಾಗಿ ಮಧ್ವಸರೋವರದ ವರೆಗೆ 5 ಕಟ್ಟು ಕಟ್ಟಿಗೆಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಅಲ್ಲಿ ಕಟ್ಟಿಗೆ ಕಟ್ಟುಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಹೆರ್ಗ ವೇದ ವ್ಯಾಸ ಭಟ್ ಪೌರೋಹಿತ್ಯ ವಹಿಸಿದ್ದರು.

‘ಪಲಿಮಾರು ಪರ್ಯಾಯದ ಸಿದ್ಧತೆಯ ಹಿನ್ನೆಲೆಯಲ್ಲಿ ಈಗಾಗಲೇ ಬಾಳೆ ಮುಹೂರ್ತ ಹಾಗೂ ಅಕ್ಕಿ ಮುಹೂರ್ತ ನಡೆದಿದೆ. ಪರ್ಯಾಯಕ್ಕೆ ಅಗತ್ಯ ಇರುವ ಕಟ್ಟಿಗೆಯನ್ನು ಸಂಗ್ರಹಿಸಲು ಈಗ ಕಟ್ಟಿಗೆ ಮುಹೂರ್ತ ಮಾಡಲಾಗಿದೆ’ ಎಂದು ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ ಸುದ್ದಿಗಾರರಿಗೆ ತಿಳಿಸಿದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಜಿ ರಾಘವೇಂದ್ರ, ಪ್ರದೀಪ್ ಕುಮಾರ್‌ ಕಲ್ಕೂರು,ಪದ್ಮನಾಭ, ಹರಿಕೃಷ್ಣ, ಕಟೀಲ ವಾಸುದೇವ, ಅಷ್ಟಮಠಗಳ ದಿವಾನರು ಇದ್ದರು.

ಪ್ರತಿ ದಿನ ಅನ್ನ ಸಂತರ್ಪಣೆಗೆ ಬಳಕೆ

ಎರಡು ವರ್ಷಗಳ ಅವಧಿಯ ಪರ್ಯಾಯಕ್ಕೆ ಅಗತ್ಯ ಇರುವ ಕಟ್ಟಿಗೆಯನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡುವುದೇ ಕಟ್ಟಿಗೆ ಮುಹೂರ್ತ. ಮಧ್ವ ಸರೋವರದ ಬಳಿ ಕಟ್ಟಿಗೆಯ ರಥವನ್ನು ನಿರ್ಮಾಣ ಮಾಡಲಾಗುತ್ತದೆ. ಚಪ್ಪರ ಮುಹೂರ್ತದ ದಿನ ಅದಕ್ಕೆ ಶಿಖರ ಕಲಶ ಇಡಲಾಗುತ್ತದೆ. ಕೃಷ್ಣ ಮಠದಲ್ಲಿ ಪ್ರತಿ ದಿನ ಅನ್ನ ಸಂತರ್ಪಣೆ ಇರುವುದರಿಂದ ಅಡುಗೆ ಮಾಡಲು ಭಾರಿ ಪ್ರಮಾಣದಲ್ಲಿ ಕಟ್ಟಿಗೆ ಬೇಕಾಗುತ್ತದೆ. ಪರ್ಯಾಯದ ಅಂತ್ಯದ ವೇಳೆಗೆ ರಥ ನಿರ್ಮಾಣಕ್ಕೆ ಉಪಯೋಗಿಸಿದ ಕಟ್ಟಿಗೆಯನ್ನೂ ತೆಗೆದು ಬಳಸಿಕೊಳ್ಳಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry