ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಾ ಸೌದಾ ಮತ್ತು ಸೆಕ್ಯುಲರ್‌ವಾದ

ಅನೇಕ ತಾತ್ವಿಕ ಮತ್ತು ರಾಜಕೀಯ ಸವಾಲುಗಳು ಈ ವಿದ್ಯಮಾನದಲ್ಲಿವೆ
Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ರಾಜಾರಾಮ ತೋಳ್ಪಾಡಿ /  ನಿತ್ಯಾನಂದ ಬಿ. ಶೆಟ್ಟಿ

ದೇಶ-ವಿದೇಶಗಳ ಲಕ್ಷಾಂತರ ಜನರ ಆರಾಧ್ಯದೈವ, ಸ್ವಘೋಷಿತ ದೇವಮಾನವ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ತನ್ನ ಆಶ್ರಮದಲ್ಲಿ ಸೇವೆಗಿದ್ದ ಇಬ್ಬರು ಸಾಧ್ವಿಯರ ಮೇಲೆ ಕೆಲ ವರ್ಷಗಳ ಹಿಂದೆ ನಡೆಸಿದ ಅತ್ಯಾಚಾರ ಹಾಗೂ ಅದಕ್ಕೆ ನ್ಯಾಯಾಲಯ ವಿಧಿಸಿದ ಶಿಕ್ಷೆ, ಅದನ್ನು ವಿರೋಧಿಸಿ ಈ ಬಾಬಾನ ಭಕ್ತರು ನಡೆಸಿದ ದಾಂದಲೆ ಮತ್ತು ವ್ಯಾಪಕ ಹಿಂಸೆ, ಕೊಲೆ ಇತ್ಯಾದಿ ಘಟನೆಗಳು ಈಗಜಗತ್ತಿನ ಗಮನ ಸೆಳೆದಿರುವ ಸಂಗತಿಗಳಾಗಿವೆ. ಮೇಲುನೋಟಕ್ಕೆ ಹುಚ್ಚಾಟದಂತೆ ಅಥವಾ ರಾಕ್ಷಸೀ ಪ್ರವೃತ್ತಿಯಂತೆ ಕಾಣುವ ಈ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಭಯಭೀತಿ ಹುಟ್ಟಿಸುವ ಅನೇಕ ತಾತ್ವಿಕ ಮತ್ತು ರಾಜಕೀಯ ಸವಾಲುಗಳು ನಮ್ಮ ಗಮನಕ್ಕೆ ಬರುತ್ತವೆ.

ಒಂದೆಡೆ ಈ ಘಟನೆ ರಾಜ್ಯದ ಅಸಹಾಯಕತೆ, ರಾಜಕೀಯ ಪಕ್ಷಗಳ ಬೇಜವಾಬ್ದಾರಿತನ ಮತ್ತು ರಾಜಕಾರಣಿಗಳ ನಿರ್ಲಜ್ಜೆ ಬಿಂಬಿಸಿದರೆ, ಇನ್ನೊಂದೆಡೆ ಅದು ಭಾರತದ ಪ್ರಜಾತಂತ್ರ ಹಾಗೂ ಸೆಕ್ಯುಲರ್ ಚಿಂತನೆಗೆ ಎದುರಾಗಿರುವ ಕಷ್ಟ ಕಾರ್ಪಣ್ಯಗಳ ಕಡೆಗೂ ನಮ್ಮ ಗಮನ ಸೆಳೆಯುತ್ತದೆ. ಅಂತೆಯೇ, ಈ ದೇಶದ ಅಸಂಖ್ಯಾತ ಧಾರ್ಮಿಕ ಸಂಪ್ರದಾಯಗಳನ್ನು ಮತ್ತು ಸಮುದಾಯಗಳನ್ನು ಸಾಂಸ್ಕೃತಿಕ ರಾಷ್ಟ್ರವಾದದ ಏಕಸೂತ್ರದಲ್ಲಿ ಹೆಣೆಯಲು ಯತ್ನಿಸುವ ಸಂಘ ಪರಿವಾರದ ಸಾಹಸಕ್ಕೆ ಎದುರಾಗಿರುವ ತೊಡಕುಗಳನ್ನೂ ಅದು ತೋರಿಸುತ್ತದೆ. ಒಟ್ಟಿನಲ್ಲಿ ಅನೇಕ ಮಗ್ಗುಲುಗಳಿರುವ ಈ ಡೇರಾ ವಿದ್ಯಮಾನದ ಕುರಿತು ಕೆಲವು ವಿಚಾರಗಳನ್ನು ಈ ಲೇಖನ ಮಂಡಿಸುತ್ತದೆ.

ಸುಪ್ರಸಿದ್ಧ ಚಿಂತಕ ಪಾರ್ಥ ಚಟರ್ಜಿಯವರು ವಿಶೇಷವಾಗಿ ಭಾರತದಂತಹ ವಸಾಹತೋತ್ತರ ಸಮಾಜಗಳ ಸಂದರ್ಭದಲ್ಲಿ ಮಾಡಿರುವ ಒಂದು ಮಹತ್ವದ ತಾತ್ವಿಕ ಪ್ರಮೇಯದಿಂದ ನಮ್ಮ ಈ ಚರ್ಚೆಯನ್ನು ಆರಂಭಿಸುತ್ತೇವೆ. ಅವರ ಪ್ರಕಾರ ವಸಾಹತುಶಾಹಿ ನಡುಪ್ರವೇಶದಿಂದ ಆಧುನಿಕಗೊಂಡ ವಸಾಹತೋತ್ತರ ಸಮಾಜಗಳಲ್ಲಿ ಒಂದಕ್ಕೊಂದು ವಿರೋಧಾಭಾಸದಿಂದ ಕೂಡಿದ ಎರಡು ವಿದ್ಯಮಾನಗಳಿವೆ. ಅವುಗಳನ್ನು ನಾಗರಿಕ ಸಮಾಜ (ಸಿವಿಲ್ ಸೊಸೈಟಿ) ಮತ್ತು ರಾಜಕೀಯ ಸಮಾಜ (ಪೊಲಿಟಿಕಲ್ ಸೊಸೈಟಿ) ಎಂದು ಪಾರ್ಥ ಚಟರ್ಜಿ ಪ್ರತ್ಯೇಕಿಸುತ್ತಾರೆ. ನಾಗರಿಕ ಸಮಾಜವು ನಾಗರಿಕತ್ವ, ಪ್ರಜಾತಂತ್ರ, ಸಾಂವಿಧಾನಿಕ ಆಶಯಗಳು, ಕಾನೂನಿನ ಆಳ್ವಿಕೆ, ಸೆಕ್ಯುಲರ್ದೃಷ್ಟಿ, ನಾಗರಿಕ ಹಕ್ಕು ಮತ್ತು ಕರ್ತವ್ಯಗಳು ಮೊದಲಾದ ಮೌಲಿಕ ಚೌಕಟ್ಟುಗಳ ನೆಲೆಯಲ್ಲಿ ತನ್ನನ್ನು ತಾನು ನಿರ್ವಹಿಸಿಕೊಳ್ಳುವ ವಿದ್ಯಮಾನವಾಗಿದೆ. ಆದರೆ ರಾಜಕೀಯ ಸಮಾಜವು ಅಂಚಿನಲ್ಲಿರುವ ಅನೇಕಾನೇಕ ಸಮುದಾಯಗಳ ಮತ್ತು ಧಾರ್ಮಿಕ ಸಂಪ್ರದಾಯಗಳ ಅಸ್ಮಿತೆಗಳನ್ನು ಪ್ರತಿನಿಧಿಸುವ ಆದರೆ ಒಡಕುಗಳಿಂದ ಕೂಡಿದ ವಿದ್ಯಮಾನವಾಗಿದೆ.

ನಾಗರಿಕ ಸಮಾಜ, ರಾಜಕೀಯ ವ್ಯವಸ್ಥೆಯ ಆಯಕಟ್ಟಿನಪ್ರದೇಶಗಳಲ್ಲಿ ವ್ಯವಹರಿಸುವ ಮತ್ತು ಬಹುಮಟ್ಟಿಗೆ ವ್ಯವಸ್ಥೆಯ ಹಿತಾಸಕ್ತಿಗಳನ್ನು ಪೋಷಿಸುವ ಹಾಗೂ ಲಾಭವನ್ನು ಪಡೆಯುವ ಗುಂಪುಗಳ ಸಂಕೀರ್ಣವಾಗಿದೆ. ಆದರೆ ರಾಜಕೀಯ ಸಮಾಜ ವಿಭಿನ್ನ ಅಸ್ಮಿತೆಗಳ ನಡುವಿನ ಹಣಾಹಣಿಯ, ವಿಭಿನ್ನ ಸ್ವರೂಪದ ಹೋರಾಟ ಮತ್ತು ಪ್ರತಿಭಟನೆಗಳ ಪ್ರದರ್ಶನವಾಗಿ ಕಾಣಿಸುತ್ತದೆ.

ನಾಗರಿಕ ಸಮಾಜದಲ್ಲಿ ಬದಿಗೆ ಸರಿಸಲಾದ, ಅನನ್ಯತೆಗಳನ್ನು ಪ್ರತಿನಿಧಿಸುವ ರಾಜಕೀಯ ಸಮುದಾಯ ನಾವುಹೇಳುವ ಆಧುನಿಕತೆಯ ಮೌಲ್ಯಗಳಿಗೋ, ಪ್ರಜಾತಾಂತ್ರಿಕ-ವೈಚಾರಿಕ ಎಂದು ನಾವು ಪ್ರತಿಪಾದಿಸುವ ಸಂಗತಿಗಳ ಒಳಗೋ ಎಲ್ಲ ಸಂದರ್ಭದಲ್ಲೂ ಬರುವುದಿಲ್ಲ. ಉದಾಹರಣೆಗೆ ಆದಿವಾಸಿಗಳ ಪರವಾಗಿ ಇರುವ ಸಂಘಟನೆ. ಇವರು ಈಗಿನ ನಮ್ಮ ಆಧುನಿಕ ಸಮಾಜದಲ್ಲಿ ಅಂಚಿನಲ್ಲಿರುವವರು. ಅವರು ತಮ್ಮ ಬದುಕಿಗಾಗಿ, ತಮ್ಮ ಹಕ್ಕಿಗಾಗಿ ಹೋರಾಟ ನಡೆಸುವಂತಹ ಒಂದು ರಾಜಕೀಯ ಸಮಾಜವಾಗಿ ಇದ್ದಾರೆ. ಇವರು ನಾಗರಿಕ ಸಮಾಜದ ಪ್ರಜಾತಾಂತ್ರಿಕ ಚೌಕಟ್ಟುಗಳೊಳಗೆ ಕೆಲವೊಮ್ಮೆ ಬರಬಹುದು, ಇನ್ನು ಕೆಲವೊಮ್ಮೆ ಬಾರದೆಯೂ ಇರಬಹುದು. ಇನ್ನೊಂದು ಉದಾಹರಣೆ ಡೇರಾ ಸಚ್ಚಾ ಸೌದದಂತಹ ಧಾರ್ಮಿಕ ಸಂಘಟನೆ.

ಪಾರ್ಥ ಚಟರ್ಜಿ ಅವರು ನಾಗರಿಕ ಸಮಾಜ ಮತ್ತು ರಾಜಕೀಯ ಸಮಾಜಗಳ ನಡುವೆ ಎಳೆದ ಈ ವಿಶ್ಲೇಷಣಾತ್ಮಕ ವ್ಯತ್ಯಾಸ ಪ್ರಸ್ತುತ ನಮ್ಮನ್ನು ಕಂಗೆಡಿಸಿದ ಡೇರಾ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯಕವಾಗಬಹುದು. ಹರಿಯಾಣದ ಪಂಚಕುಲಾದಲ್ಲಿ ನಡೆದದ್ದು ಪಾರ್ಥ ಹೇಳಿದ ಇಂತಹ ಒಂದು ರಾಜಕೀಯ ಸಮಾಜದ ವಿಕಟ ಅಟ್ಟಹಾಸ. ಎಲ್ಲ ಬಗೆಯ ರಾಜಕೀಯ ಸಮಾಜಗಳು ಯಾವತ್ತೂ ಇಂತಹ ವಿಕಟ ಅಟ್ಟಹಾಸವನ್ನು ಮಾಡು
ತ್ತವೆ ಎಂದು ನಾವು ಹೇಳುತ್ತಿಲ್ಲ. ಅವು ಕ್ರಾಂತಿಕಾರಿ ಪ್ರತಿಭಟನೆಯ ಮಾದರಿಯನ್ನೂ ಅನುಸರಿಸಬಹುದು ಅಥವಾ ಪ್ರಜಾಸತ್ತಾತ್ಮಕ ಹೋರಾಟದ ಮಾದರಿಯನ್ನೂ ಹೊಂದಿರಬಹುದು. ಆದರೆ ಪಂಚಕುಲಾದಲ್ಲಿ ನಡೆದ ಇಂತಹ ಒಂದು ಅಟ್ಟಹಾಸವನ್ನು ಸಮರ್ಥವಾಗಿ ಎದುರಿಸಲು ನಮ್ಮ ಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಪಕ್ಷಭೇದವಿಲ್ಲದೆ ನಮ್ಮ ರಾಜಕೀಯ ಪಕ್ಷಗಳು ತಮ್ಮ ತಮ್ಮ ಭ್ರಷ್ಟತೆಯಿಂದಲಾಗಿ ಈ ಬಗೆಯ ಪೊಲಿಟಿಕಲ್ ಸೊಸೈಟಿಗಳ ಆಗ್ರಹ-ದುರಾಗ್ರಹಗಳಿಗೆ ಮಣಿಯುತ್ತಿರುವುದೇ ಆಗಿದೆ.

ಪಾರ್ಥ ಚಟರ್ಜಿ ಗುರುತಿಸುವ ಈ ನಾಗರಿಕ ಸಮಾಜ ಮತ್ತು ರಾಜಕೀಯ ಸಮಾಜವೆನ್ನುವ ವ್ಯತ್ಯಾಸ ಪಾಶ್ಚಿಮಾತ್ಯ ಸಮಾಜಗಳಲ್ಲೂ ಇದೆ. ಆದರೆ ಆಧುನಿಕತೆಯ ಸಹಜ ಬೆಳವಣಿಗೆಯಿಂದಾಗಿ ಪಾಶ್ಚಿಮಾತ್ಯ ಸಮಾಜಗಳಲ್ಲಿ ಪ್ರಜಾತಾಂತ್ರಿಕ ಅಡಿಪಾಯದಲ್ಲಿ ರೂಪುಗೊಂಡ ಸಶಕ್ತ ನಾಗರಿಕ ಸಮಾಜವಿದೆ. ಈ ನಾಗರಿಕ ಸಮಾಜವೇ ಕೆಲವೊಮ್ಮೆ ಅಷ್ಟೇನೂ ಸಂಘಟಿತವಲ್ಲದ, ಒಡಕುಗಳಿಂದ ಕೂಡಿದ ರಾಜಕೀಯ ಸಮಾಜದ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ ಮತ್ತು ಹೋರಾಟಗಳನ್ನು ನಡೆಸುತ್ತದೆ. ಪಶ್ಚಿಮದ ಸಮಾಜದಲ್ಲಿ ಇಂತಹ ನಿದರ್ಶನಗಳು ಹೇರಳವಾಗಿವೆ. ಆದರೆ ಭಾರತದಂತಹ ಅಸಮಾನ ಸಮಾಜದಲ್ಲಿ ನಾಗರಿಕ ಸಮಾಜ ಕ್ಷೀಣವಾಗಿದೆ ಮತ್ತು ಅನೇಕ ಆಂತರಿಕ ವಿರೋಧಾಭಾಸಗಳನ್ನು ಹೊಂದಿದೆ. ಹಾಗಾಗಿ, ತನ್ನಾಚೆಗಿರುವ ಒಡಕಿನಿಂದ ಕೂಡಿದ್ದಾದರೂ ವ್ಯಾಪಕವಾದ ಹಾಗೂ ಕೆಲವೊಮ್ಮೆ ಬಲಾಢ್ಯವಾದ ರಾಜಕೀಯ ಸಮಾಜದ ವಿಭಿನ್ನಗುಂಪುಗಳ ಜೊತೆ ಅದು ಅರ್ಥಪೂರ್ಣವಾದ ಸಂವಾದವನ್ನು ನಡೆಸುವಲ್ಲಿ ಸೋತಿದೆ. ಹೀಗಾಗಿ, ಭಾರತದಲ್ಲಿ ದುರ್ಬಲವಾದ ನಾಗರಿಕ ಸಮಾಜ ಮತ್ತು ಪ್ರತಿಷೇಧಗಳಿಂದ ಕೂಡಿದ ರಾಜಕೀಯ ಸಮಾಜದ ನಡುವೆ ಆಳವಾದ ಕಂದಕವು ಸೃಷ್ಟಿಯಾಗಿದೆ. ಇಂತಹ ವಿರೋಧಾಭಾಸಗಳನ್ನು ಬಿಂಬಿಸುವ ಅಸಮಾನ ಹಾಗೂ ಅಸಮತೋಲಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಭಾರತೀಯಸೆಕ್ಯುಲರ್‌ವಾದ ಮತ್ತು ಅದನ್ನು ಕಾರ್ಯಗತಗೊಳಿಸುವ ಭಾರತ, ರಾಜಕೀಯವಾಗಿ ಕಕ್ಕಾಬಿಕ್ಕಿಯಾಗಿದೆ. ಇದರ ಪರಿಣಾಮವೇ ಪಂಚಕುಲಾದಲ್ಲಿ ಕಂಡು ಬಂದ ಅರಾಜಕತೆ.

ನಾವು ಈ ಲೇಖನದಲ್ಲಿ ಮೊದಲಿಗೆ ಪ್ರಸ್ತಾಪಿಸಿದಂತೆ ಹರಿಯಾಣದಲ್ಲಿ ನಡೆದ ಹಿಂಸೆ ನಮ್ಮ ಪ್ರಜಾತಾಂತ್ರಿಕವ್ಯವಸ್ಥೆಯಲ್ಲಿ ಅಂತಸ್ಥವಾಗಿರುವ ಸೆಕ್ಯುಲರ್ ರಾಜಕಾರಣದ ವಿರೋಧಾಭಾಸಗಳನ್ನು ಎತ್ತಿ ತೋರಿಸುತ್ತದೆ. ಭಾರತದ ಸೆಕ್ಯುಲರ್ ದೃಷ್ಟಿಕೋನವು ಸ್ವಾತಂತ್ರ್ಯ ಹೋರಾಟ ಉತ್ಪಾದಿಸಿದ ಮೌಲ್ಯಗಳು, ಸಂವಿಧಾನ ರಚನಾ ಸಭೆಯಲ್ಲಿ ಚರ್ಚಿತವಾದ ವಿಚಾರಗಳು, ಸ್ವಾತಂತ್ರ್ಯಾನಂತರದ ರಾಜಕಾರಣದಲ್ಲಿ ಸಂಭವಿಸಿದ ಘಟನೆಗಳು ಹಾಗೂ ಈ ಘಟನೆಗಳ ನೆಲೆಯಲ್ಲಿ ನ್ಯಾಯಾಲಯಗಳು ನೀಡಿದ ಚಾರಿತ್ರಿಕ ತೀರ್ಪುಗಳು ಇವುಗಳಿಂದೆಲ್ಲಾ ಮಥನಗೊಂಡು ರೂಪುತಳೆದಿದೆ. ರಾಜಕೀಯ ತತ್ವಶಾಸ್ತ್ರಜ್ಞ ರಾಜೀವ್ ಭಾರ್ಗವ್ ಈ ಕುರಿತು ವಿಸ್ತೃತವಾಗಿ ಬರೆದಿದ್ದಾರೆ.

ಭಾರತದ ಸೆಕ್ಯುಲರ್‌ವಾದವು ದಟ್ಟವಾದ ಧಾರ್ಮಿಕ ಸಮುದಾಯಗಳು ಮತ್ತು ಅವುಗಳ ನಡುವಿನ ತಿಕ್ಕಾಟಗಳಲ್ಲಿ ರೂಪುಗೊಂಡ ವಿದ್ಯಮಾನವೆಂದು ಅವರು ಹೇಳುತ್ತಾರೆ. ಅವರ ಪ್ರಕಾರ ತಾತ್ವಿಕವಾಗಿ ಸರ್ವ ಧರ್ಮ ಸಮಭಾವವನ್ನು ಪ್ರತಿನಿಧಿಸುವ ಭಾರತದ ಸೆಕ್ಯುಲರ್‌ವಾದ ಮತ್ತು ಅದರ ನಿರ್ವಾಹಕ ಸ್ಥಾನದಲ್ಲಿರುವ ನಮ್ಮ ಭಾರತ ರಾಜ್ಯ (ಸ್ಟೇಟ್‌) ತನ್ನ ಕ್ರಿಯಾಚರಣೆಯಲ್ಲಿ ಧಾರ್ಮಿಕ ಮತ ಸಂಪ್ರದಾಯಗಳ ಹಾಗೂ ಸಮುದಾಯಗಳ ನಡುವಿನ ಬಿಕ್ಕಟ್ಟುಗಳನ್ನು, ತಕರಾರುಗಳನ್ನು, ಘರ್ಷಣೆಗಳನ್ನು ಸ್ವತಃ ತಾನೇ ಒಂದು ವಿಶಿಷ್ಟ ಬಗೆಯ ತತ್ವನಿಷ್ಠ ಅಂತರದ ನೆಲೆಯಲ್ಲಿ ಪರಿಹರಿಸಲು ಯತ್ನಿಸುತ್ತದೆ ಅಥವಾ ಅವುಗಳನ್ನು ನಿರ್ವಹಿಸುವ ಸಾಮರ್ಥ್ಯ ನ್ಯಾಯ ಸಮ್ಮತವಾಗಿ ತನಗೆ ಇದೆ ಎಂದು ತಿಳಿದುಕೊಳ್ಳುತ್ತದೆ. ಆದರೆ ವಾಸ್ತವದಲ್ಲಿ ಭಾರತ ರಾಜ್ಯವೇ ಎಲ್ಲಾ ಬಗೆಯ ವಿರೋಧಾಭಾಸಗಳ ಮತ್ತು ಹಿತಾಸಕ್ತಿಗಳ ನಡುವಿನ ತಿಕ್ಕಾಟಗಳ ಪರಿದೃಶ್ಯವಾಗಿದೆ. ಹೀಗಾಗಿ, ತಾನಂದುಕೊಂಡಂತೆ ಸ್ವಾಯತ್ತತೆಯ ನೆಲೆಯಲ್ಲಿ ಮತ್ತು ವೈಚಾರಿಕ ಪ್ರಕಾಶದಲ್ಲಿ ಅದು ತಾನು ಪ್ರತಿನಿಧಿಸಿದ ಪ್ರಜಾತಾಂತ್ರಿಕ ಸೆಕ್ಯುಲರ್ ಕಾರ್ಯಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸೋತಿದೆ.

ಅಂದರೆ ಒಟ್ಟಿನಲ್ಲಿ ಸಮುದಾಯಗಳ ನಡುವಿನ ತಿಕ್ಕಾಟವನ್ನು ಪರಿಹರಿಸುವ ಒಂದು ದೃಷ್ಟಿಕೋನವಾಗಿ ಸೆಕ್ಯುಲರಿಸಮ್ ಮತ್ತು ಅದರ ಸಾಧನವಾಗಿ ರಾಜ್ಯವನ್ನು ನೋಡಬೇಕೆಂದು ರಾಜೀವ್ ಭಾರ್ಗವ್ ಅಭಿಪ್ರಾಯಪಡುತ್ತಾರೆ. ಆದರೆ ಡೇರಾ ಸಚ್ಚಾದಂತಹ ಧಾರ್ಮಿಕತೆಯ ಹೆಸರಿನಲ್ಲಿರುವ ರಾಜಕೀಯ ಸಮುದಾಯಗಳು ರಾಜ್ಯವನ್ನು ಗೌರವಿಸುವುದು ಹೋಗಲಿ ರಾಜ್ಯ ಅನ್ನುವುದು ಒಂದು ಇದೆ ಎಂಬುದನ್ನೇ ಗುರುತಿಸುವುದಿಲ್ಲ ಎನ್ನುವುದೇ ದಿಗ್ಭ್ರಾಂತಿ ಹುಟ್ಟಿಸುವ ಸಂಗತಿ.

‌ಮೇಲಿನ ಮಾತಿನ ಅರ್ಥ ನಮ್ಮ ರಾಜ್ಯ ಸೆಕ್ಯುಲರ್ ಕಾರ್ಯಸೂಚಿಯನ್ನು ನಿರ್ವಹಿಸುವಲ್ಲಿ ನಿರಂತರವಾಗಿ ವೈಫಲ್ಯವನ್ನು ಅನುಭವಿಸುತ್ತದೆ ಎಂದು ಅಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್‌, ತ್ರಿವಳಿ ತಲಾಖ್‌ ಸಂದರ್ಭದಲ್ಲಿ ಕೊಟ್ಟಿರುವ ತೀರ್ಪು, ಖಾಸಗಿ ಹಕ್ಕಿನ ಕುರಿತು ನೀಡಿದ ತೀರ್ಪು ಮತ್ತು ಸಿಬಿಐ ವಿಶೇಷ ನ್ಯಾಯಾಲಯವು ಗುರ್ಮಿತ್ ಸಿಂಗ್‌ನನ್ನು ಅಪರಾಧಿ ಎಂದು ನೀಡಿದ ತೀರ್ಪು ಇವುಗಳು ನ್ಯಾಯಾಂಗದ ಘನತೆಯನ್ನು ಬಿಂಬಿಸುವ ವಿದ್ಯಮಾನಗಳು ಮಾತ್ರವಲ್ಲ ಅವು ಭಾರತದ ಪ್ರಜಾತಂತ್ರ ಮತ್ತು ಸೆಕ್ಯುಲರ್ ಚರಿತ್ರೆಯ ಮಹತ್ವದ ಮೈಲಿಗಲ್ಲುಗಳು ಕೂಡ ಆಗಿವೆ.

ಈ ಮೇಲಿನ ಸಂಗತಿಗಳ ಜೊತೆಗೆ ಡೇರಾದ ಈ ವಿದ್ಯಮಾನಕ್ಕೆ ಇನ್ನೊಂದು ಆಯಾಮವೂ ಇದೆ. ಅದು ರಾಷ್ಟ್ರವಾದದ ನೆಲೆಯಲ್ಲಿ ನಮ್ಮ ದೇಶದ ಅಸಂಖ್ಯಾತ ಮತಪಂಥಗಳನ್ನು ಹಾಗೂ ಸಮುದಾಯಗಳನ್ನು ಏಕತ್ರಗೊಳಿಸುವ ಸಂಘಪರಿವಾರದ ರಾಜಕಾರಣಕ್ಕೂ ಸವಾಲನ್ನು ಎಸೆಯುತ್ತಿದೆ. ತಾವು ಹಾಕಿಕೊಟ್ಟ ತಾತ್ವಿಕ ಚೌಕಟ್ಟಿನ ರಾಜಕೀಯ ವೇದಿಕೆಯ ಅಡಿಯಲ್ಲಿ ಈ ದೇಶದ ಎಲ್ಲ ಮತಸಂಪ್ರದಾಯಗಳು ತಾವು ತೋರಿಸಿಕೊಟ್ಟ ಜಾಗದಲ್ಲಿ ಅಚ್ಚುಕಟ್ಟಾಗಿ ಕುಳಿತು ತಮ್ಮನ್ನು ಸಮರ್ಥಿಸುತ್ತವೆ ಎಂದು ಸಂಘಪರಿವಾರ ತಿಳಿದುಕೊಂಡಿದ್ದಲ್ಲಿ ಅದರ ಆ ತಿಳಿವಳಿಕೆ ಈ ವಿದ್ಯಮಾನದಿಂದ ಭಗ್ನಗೊಂಡಿದೆ. ತಾನು ಹಾಕಿದ ಲಕ್ಷ್ಮಣರೇಖೆಯನ್ನು ಮೀರುವ ತನ್ನ ಹಟವನ್ನೇ ಸಾಧಿಸುವ, ಯಾವ ಹದ್ದುಬಸ್ತಿಗೂ ಸಿಲುಕದ ಸಮುದಾಯಗಳನ್ನು ರಾಷ್ಟ್ರವಾದದ ಚೌಕಟ್ಟಿನಲ್ಲಿ ನಿರ್ವಹಿಸುವುದು ಹೇಗೆ ಎನ್ನುವ ಪ್ರಶ್ನೆಯನ್ನು ಸಂಘಪರಿವಾರ ಒಂದಲ್ಲ ಒಂದು ದಿನ ಎದುರಿಸಬೇಕಾಗಿದೆ. ಇದು ಬಹುಶಃ ಸಂಘಪರಿವಾರದ ರಾಜಕಾರಣ ನಿರೀಕ್ಷಿಸದಿದ್ದ ಒಂದು ವಿಶಿಷ್ಟ ಸವಾಲು.

ಡೇರಾದ ಈ ವಿದ್ಯಮಾನವನ್ನು ಹಲವು ನೆಲೆಗಳಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಪಡುವ ನಮ್ಮ ಈ ಲೇಖನದಲ್ಲಿ ನಾವು ಪ್ರಸ್ತಾಪಿಸದಿದ್ದ ಇನ್ನೊಂದು ಆಯಾಮವನ್ನು ಸಂಸ್ಕೃತಿ ಚಿಂತಕ ಶಿವ್‌ ವಿಶ್ವನಾಥನ್‌ ಗುರುತಿಸುತ್ತಾರೆ. ಖಾಸಗಿ ಚಾನೆಲ್ ಒಂದರಲ್ಲಿ ರಾಮ್-ರಹೀಮ್ ಪ್ರಕರಣದ ಕುರಿತು ಮಾತಾಡುತ್ತಿದ್ದ ಶಿವ್‌, ಡೇರಾ ವಿದ್ಯಮಾನವೂ ಸೇರಿದಂತೆ ಇಂದು ನಾವು ಎದುರಿಸುತ್ತಿರುವ ವಿರೋಧಾಭಾಸಗಳು ಮತ್ತು ವೈಷಮ್ಯಗಳು ಭಾರತಕ್ಕೆ ಅಂಕುಡೊಂಕಾಗಿ ಬಂದ ಆಧುನಿಕತೆಯ ಸ್ವರೂಪಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿವೆ. ಬಹಳ ಆಳವಾಗಿ ನೆಲೆಗೊಂಡಿರುವ ಮತ್ತು ವಿರೂಪಗೊಂಡಿರುವ ಈ ನಮ್ಮ ಆಧುನಿಕತೆಯನ್ನು ಆಧ್ಯಾತ್ಮಿಕಗೊಳಿಸುವ ಮತ್ತು ಕುರೂಪಗೊಂಡು ಆಳ ಕಳೆದುಕೊಂಡ ನಮ್ಮ ಆಧ್ಯಾತ್ಮಿಕತೆಯನ್ನು ಹೆಚ್ಚು ವೈಚಾರಿಕಗೊಳಿಸುವ ಒಂದು ಮಹತ್ವದ ಕ್ರಿಯಾಚರಣೆ ನಮ್ಮಲ್ಲಿ ನಡೆಯಬೇಕಾಗಿದೆ ಎನ್ನುತ್ತಾರೆ. ಇದು ನಮ್ಮನ್ನು ಇನ್ನೊಂದು ನೆಲೆಯಲ್ಲಿ ಯೋಚನೆಗೆ ಹಚ್ಚುವಂತಹ ಒಳನೋಟ.

ಈ ಎಲ್ಲ ವಿದ್ಯಮಾನಗಳಿಗಿರುವ ಬಹುಮುಖಿ ಆಯಾಮಗಳ ನೆಲೆಗಳಲ್ಲಿ ನೋಡುವುದಾದರೆ ಬಹುಶಃ ಆಧುನಿಕ ಭಾರತೀಯ ಸಮಾಜದ ಜ್ಞಾನ ವಿನ್ಯಾಸಗಳಲ್ಲಿರುವ ಅಸಮತೆ ಮತ್ತು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂಪ್ರದಾಯಗಳು ರಾಜಕೀಯ ಶಕ್ತಿ ಕೇಂದ್ರಗಳಾಗಿ ಪರಿವರ್ತಿತವಾದ ವೈಖರಿ, ನಿರಂತರವಾಗಿ ಮಾರ್ಪಾಟುಗೊಳ್ಳುತ್ತಿರುವ ನಮ್ಮ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾಸ್ತವಗಳ ಹಿನ್ನೆಲೆಯಲ್ಲಿ ನಮ್ಮ ಸಮಸ್ಯೆ ಮತ್ತು ವೈಷಮ್ಯಗಳನ್ನು ಅರ್ಥ ಮಾಡಿಕೊಳ್ಳುವ ಜರೂರು ತೀವ್ರವಾಗಿದೆ.

ಲೇಖಕರು ಅನುಕ್ರಮವಾಗಿ ಮಂಗಳೂರು ಮತ್ತು ತುಮಕೂರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT