5

ಡೇರಾ ಸಚ್ಚಾ ಸೌದಾ ಬಾಬಾನ ದಿವ್ಯ ಸಂದೇಶ

ಪ್ರಸನ್ನ
Published:
Updated:
ಡೇರಾ ಸಚ್ಚಾ ಸೌದಾ ಬಾಬಾನ ದಿವ್ಯ ಸಂದೇಶ

ಇತ್ತೀಚಿನ ದಿನಗಳಲ್ಲಿ ಎಲ್ಲ ಪತ್ರಿಕೆಗಳ ಮುಖ‍ಪುಟಗಳನ್ನೂ ತುಂಬಿಕೊಂಡಿರುವ ಡೇರಾ ಸಚ್ಚಾ ಸೌದಾ ಬಾಬಾನ ಪ್ರಕರಣವು ಆಧ್ಯಾತ್ಮಿಕ ಮಾರುಕಟ್ಟೆಯೊಳಗೆ ಭೀಕರ ತಲ್ಲಣವನ್ನು ಸೃಷ್ಟಿಸಿದೆ. ಮಾರುಕಟ್ಟೆ ಕುಸಿಯುವ ಎಲ್ಲ ಸಾಧ್ಯತೆಗಳೂ ಇವೆ. ತನ್ನ ಅವಾಂತರಗಳ ಮೂಲಕ ಬಾಬಾ, ಎಲ್ಲ ಆಧುನಿಕ ಸನ್ಯಾಸಿಗಳಿಗೆ ದಿವ್ಯ ಸಂದೇಶವೊಂದನ್ನು ನೀಡಿದ್ದಾನೆ.

ಅಧ್ಯಾತ್ಮವನ್ನು ಮಾರುಕಟ್ಟೆ ಪದಾರ್ಥವನ್ನಾಗಿ ಮಾಡಿಕೊಂಡು ಅಪಾರ ಲಾಭ ಪಡೆಯುತ್ತಿರುವ ಸೌಮ್ಯ ಮುಖದ ಸನ್ಯಾಸಿಗಳೇ! ‘ನೀವು ಈ ಕೂಡಲೇ ನಿಮ್ಮ ವಹಿವಾಟನ್ನು ಬಂದು ಮಾಡದೆ ಹೋದರೆ ನನಗಿಂತ ಮಿಗಿಲಾದ ರಾಕ್ಷಸಮುಖವೊಂದು ನಿಮಗೆ ಮೂಡಿಬರಲಿದೆ’ ಎಂಬುದು ಬಾಬಾನ ಎಚ್ಚರಿಕೆ ಸಂದೇಶ. ಬಾಬಾ, ತನ್ನನ್ನೇ ಬಲಿಕೊಟ್ಟುಕೊಂಡು ನೀಡಿರುವ ಈ ಸಂದೇಶಕ್ಕಾಗಿ ನಾವು ಆತನಿಗೆ ಚಿರಋಣಿಯಾಗಿರಬೇಕು. ಇಷ್ಟಕ್ಕೂ, ಅತಾರ್ಕಿಕ ಸಂದೇಶಗಳನ್ನು ನೀಡುವುದು ಸನ್ಯಾಸಿ ಪರಂಪರೆಗೆ ಹೊಸತೇನಲ್ಲ.

ಆಧ್ಯಾತ್ಮಿಕ ಮಾರುಕಟ್ಟೆ, ಆಧ್ಯಾತ್ಮಿಕೋದ್ಯಮ! ಆಹಾ, ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ ಅಂಗಡಿಗಳು. ಮಿಕ್ಕೆಲ್ಲ ಅಂಗಡಿಗಳಿಗಿಂತ ಮಿಗಿಲಾಗಿ ಲಾಭ ಮಾಡುತ್ತಿವೆ. ಸತ್ಯವನ್ನು ತಲೆಕೆಳಗಾಗಿ ನಿಲ್ಲಿಸಿವೆ ಆಧ್ಯಾತ್ಮಿಕ ಅಂಗಡಿಗಳು. ಯಶಸ್ವಿ ಮಾರುಕಟ್ಟೆ ಹಾಗೂ ಯಶಸ್ವಿ ಸನ್ಯಾಸ ಎಣ್ಣೆ–ಸೀಗೆಕಾಯಿ ಇದ್ದಂತೆ ಎಂಬುದು ಸತ್ಯ. ಅವು ಬೆರೆಯಲಾರವು, ಬೆರೆಸಬಾರದು ಎಂಬುದು ಸತ್ಯ. ಮಾರುಕಟ್ಟೆಯ ಸಂಪೂರ್ಣ ನಿಯಂತ್ರಣದಲ್ಲಿರುವ ಇಂದಿನ ಸಭ್ಯತೆಯು ಇವೆರಡನ್ನೂ ಹಾಲು–ಜೇನು ಎಂಬಂತೆ ಬೆರೆಸಿಬಿಟ್ಟಿದೆ. ಈಗ, ಈ ವಿಷಮ ಸಂಬಂಧದ ಫಲವಾಗಿ ವಿಷವು ಹೊರಬರುತ್ತಿದೆ.

ಭಕ್ತರಿಂದ ಅಪ್ಪಾಜಿ ಎಂದೇ ಕರೆಸಿಕೊಳ್ಳುತ್ತಿದ್ದ ಈ ಬಾಬಾ, ಬ್ರೇಕ್‌ ಡಾನ್ಸ್‌ ಮಾಡುವ ಬಾಬಾ. ಈತನ ಶಿಷ್ಯ– ಶಿಷ್ಯೆಯರು ರೌಡಿಗಳೇನಲ್ಲ ಅಥವಾ ತೀವ್ರ ಆಧುನಿಕರೂ ಅಲ್ಲ. ಇವರು ಅರೆಗ್ರಾಮೀಣ ಪ್ರದೇಶಗಳಿಂದ ಬಂದ ಭೋಳೆ ಸ್ವಭಾವದ ಸಾಮಾನ್ಯರು. ಬಾಬಾ ಜೈಲು ಸೇರಿದ ನಂತರ ವಿಷಣ್ಣವದನರಾಗಿ ತಮ್ಮ ಸಾಮಾನು ಸರಂಜಾಮು ತಾವೇ, ತಮ್ಮ ತಲೆಯ ಮೇಲೆಯೇ ಹೊತ್ತು, ಡೇರಾ ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದ ಚಿತ್ರವು ಮನಕರಗಿಸುವಂತಿತ್ತು. ಅನೇಕ ರೈತರನ್ನು ಕಂಡೆ ನಾನವರ ನಡುವಿನಿಂದ. ಗೃಹಿಣಿಯರನ್ನು ಕಂಡೆ.

ಬಾಬಾ ಸಂದೇಶ ನೀಡಿರುವ ರೀತಿ ಅಸಾಧಾರಣವಾದದ್ದು. ಅಸಭ್ಯವಾದದ್ದು. ಬೆಚ್ಚಿಬೀಳಿಸುವ ಹಿಂಸೆಯಿಂದ ಕೂಡಿದ್ದು ಆತನ ದಿವ್ಯ ಸಂದೇಶ. ಬಾಬಾ, ಲೈಂಗಿಕ ಹಗರಣ ನಡೆಸಿದ. ಕೊಲೆಗಳನ್ನು ಮಾಡಿಸಿದ. ಭಕ್ತರನ್ನು ಕಂತೆ ಕಂತೆ ವೋಟುಗಳನ್ನಾಗಿ ಪರಿವರ್ತಿಸಿ ವಿವಿಧ ರಾಜಕೀಯ ಪಕ್ಷಗಳಿಗೆ ದುಬಾರಿ ಬೆಲೆಗೆ ಮಾರಿದ. ಐದು ಕೋಟಿ ಅಮಾಯಕ ಭಕ್ತರನ್ನು ಐದು ಕೋಟಿ ಗೂಂಡಾಗಳಾಗಿ ಪರಿವರ್ತಿಸಿ ದೇಶದ ಕಾನೂನಿನ ವಿರುದ್ಧ ದುಂಡಾವರ್ತಿ ನಡೆಸಿದ. ವಿಪರೀತವಾದ ಸಾವು ನೋವು ಹಾಗೂ ಸಾರ್ವಜನಿಕ ಆಸ್ತಿ ನಾಶಕ್ಕೆ ಬಾಬಾ ಕಾರಣನಾದ. ಕೊನೆಗೊಮ್ಮೆ ಜೇಲು ಸೇರಿಕೊಂಡ ಬಾಬಾನ ಸಂದೇಶ ನಿಜಕ್ಕೂ ಅಸಾಧಾರಣವಾದದ್ದು.

ಆದರೆ ನಾವು ಸಂದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೇವೆ. ಕಡೆಗಣಿಸಿ ಬಾಬಾನತ್ತ ಬೈಗುಳಗಳನ್ನು ತೂರಿ ಸುಮ್ಮಗಾಗಿದ್ದೇವೆ. ನಮಗೆ ಬೇಕಿದೆ ಯಶಸ್ವಿ ಬಾಬಾಗಳು. ನಾವು ಹುಡುಕಲಾರೆವು ಗ್ರಾಮೀಣ ಪ್ರದೇಶಗಳಿಗೆ ತೆರಳಿ ನಿಜವಾದ ಸಂತನನ್ನ. ಸಂತೆಯಲ್ಲಿ ನಿಂತು, ಇವನು ಕೆಟ್ಟ ಬಾಬಾ, ಇವನು ಒಳ್ಳೆಯ ಬಾಬಾ ಎಂದು ವಿಂಗಡನೆ ಮಾಡುತ್ತ ಸಮಯ ಹಾಳು ಮಾಡುತ್ತಿದ್ದೇವೆ.

ಸನ್ಯಾಸವು ಸುಲಭ ಜನಪ್ರಿಯತೆ ಗಳಿಸಿರುವ ಕಾಲವಿದು. ಭಾರತ ದೇಶವು ಆಧ್ಯಾತ್ಮಿಕ ಪ್ರತಿಕೃತಿಗಳ ಸೂಪರ್‌ ಮಾರ್ಕೆಟ್‌ ಆಗಿ ಹೊರಹೊಮ್ಮಿರುವ ಕಾಲ. ಅರ್ಥಾತ್‌, ಸುಲಭ ಸನ್ಯಾಸದ ಕಾಲ. ರಾಶಿ ದುಡ್ಡು, ರಾಶಿ ಅಧಿಕಾರ ಹಾಗೂ ರಾಶಿ ರಾಶಿ ಅಹಂಕಾರ ತರುತ್ತಿದೆ. ಸನ್ಯಾಸಿಗಳಿಗೆ ಮಾರುಕಟ್ಟೆ. ಹೇಗೆ ತಾನೇ ಉಳಿದೀತು ವೈರಾಗ್ಯ ಈ ಕಲುಷಿತ ವಾತಾವರಣದೊಳಗೆ?

ಸನ್ಯಾಸ ಸಂಸ್ಥೆಗಳು ಲಾಭ ಮಾಡುತ್ತಿವೆ ಮಾತ್ರವಲ್ಲ, ಸಂಪೂರ್ಣ ತೆರಿಗೆ ವಿನಾಯಿತಿ ಪಡೆದಿವೆ, ಕಾನೂನು ಮುಕ್ತಿ ಪಡೆದಿವೆ, ರಾಜಕೀಯ ಶ್ರೀರಕ್ಷೆ ಪಡೆದಿವೆ. ಯಾವುದೇ ಅಂಬಾನಿ– ಅದಾನಿಗಳನ್ನೂ ನಾಚಿಸಬಲ್ಲ ಬೃಹತ್‌ ಯಂತ್ರೋದ್ಯಮಗಳಾಗಿವೆ ಮಠಮಾನ್ಯಗಳು. ಯಂತ್ರೋದ್ಯಮದ ಮುಖಕ್ಕೆಲ್ಲ ಕಾವಿಬಣ್ಣ ಬಳಿದಿವೆ ಅಷ್ಟೆ, ಸನ್ಯಾಸ ಸಂಸ್ಥೆಗಳು. ಎಲ್ಲ ಯಂತ್ರೋದ್ಯಮಗಳಂತೆ ಇವೂ ಸಹ ನೈತಿಕತೆಯ ಪ್ರಚಾರ ಮಾಡುತ್ತವೆ, ಆದರೆ ನೈತಿಕಾತೀತವಾಗಿ ವ್ಯವಹರಿಸುತ್ತವೆ. ಹೇಗೆ ತಾನೆ ಉಳಿದೀತು ವೈರಾಗ್ಯ ಈ ಕಲುಷಿತ ವಾತಾವರಣದೊಳಗೆ?

ಮಾರುಕಟ್ಟೆ ತೇಜಿಯಲ್ಲಿದೆ. ಆಧ್ಯಾತ್ಮಿಕ ಪದಾರ್ಥಗಳ ಉತ್ಪಾದನೆಗಿಂತ ಅದರ ಬೇಡಿಕೆ ಅದೆಷ್ಟೋ ಪಟ್ಟು ಮಿಗಿಲಾಗಿದೆ. ಲಟ್ಟಿಸಿದ ಹಿಟ್ಟು ರೊಟ್ಟಿಯ ರೂಪು ತಳೆದು ಕಾವಲಿಗೆ ಬಿದ್ದದ್ದೇ ತಡ, ಅದು ಬೇಯುವ ಮೊದಲೇ ಕೈಯಿಕ್ಕಿ ಗಬಗಬನೆ ಮುಕ್ಕುವವರಂತೆ, ಮಹಾಜನತೆ, ಹಸಿ ಬಿಸಿ ಆಧ್ಯಾತ್ಮಿಕತೆಯನ್ನು ಮುಕ್ಕುತ್ತಿದೆ. ದುಡ್ಡೆಣಿಸಲಿಕ್ಕೂ ಬಿಡುವಿಲ್ಲದಂತಾಗಿದೆ ಸನ್ಯಾಸ ಸಂಸ್ಥೆಗಳಿಗೆ. ಬೆವರು ಸುರಿಸಿದ್ದಾರೆ ಬಾಬಾಗಳು ದುಡ್ಡೆಣಿಸಿ ಎಣಿಸಿ. ಸಚ್ಚಾ ಸೌದಾ ಬಾಬಾನ ತೂತಿನ ಹುಂಡಿಯೇ ದಿನವೊಂದಕ್ಕೆ ಒಂದು ಕೋಟಿ ರೂಪಾಯಿಗಳ ವರಮಾನ ತರುತ್ತಿತ್ತಂತೆ!

ಯಾವ ಅನುಮಾನವೂ ಬೇಡ ನಿಮಗೆ! ಬಾಬಾ ಸಿಡಿಸಿದ ಬಾಂಬು ಎಲ್ಲ ಸನ್ಯಾಸಿಗಳ ಯಶಸ್ಸಿನ ಉದರದಲ್ಲಿ ಸಿಡಿಯದೆ ಅಡಗಿ ಕುಳಿತಿದೆ. ಕಾಪಿಟ್ಟುಕೊಂಡು ಬಂದಿದ್ದಾರೆ ಸನ್ಯಾಸಿಗಳು ಸಿಡಿಬಾಂಬನ್ನು. ಆಧುನಿಕ ಡೇರಾಗಳು, ಮಠಗಳು ಹಾಗೂ ಆಶ್ರಮಗಳು ಆಸ್ಪತ್ರೆ ಸಂಕೀರ್ಣಗಳಿದ್ದಂತೆ. ರೋಗ ಪರಿಹಾರ ಮಾಡಬೇಕಿರುವ ಆಸ್ಪತ್ರೆಯೇ ಹೇಗೆ ಹೊಸ ಹೊಸ ರೋಗಗಳನ್ನು ರೋಗಿಗೆ ಅಂಟಿಸಿ ಕಳುಹಿಸುತ್ತಿದೆಯೋ ಹಾಗೆಯೇ ಸನ್ಯಾಸ ಕೇಂದ್ರಗಳೂ ಸಹ ಹೊಸ ಹೊಸ ಆಧ್ಯಾತ್ಮಿಕ ಕಾಯಿಲೆಗಳನ್ನು ಭಕ್ತರಿಗೆ ಅಂಟಿಸಿ ಕಳುಹಿಸುತ್ತವೆ. ಹಿಂದಿರುಗಿ ಬರಬೇಕಲ್ಲ ಭಕ್ತರು ಮತ್ತೆ ಮತ್ತೆ ಕಾಯಿಲೆಯ ನಿವಾರಣೆಗೆಂದು!

ಕಾಯಿಲೆ ಸರಳವಾದದ್ದು. ಶ್ರಮದ ಬದುಕಿಗೆ ದೂಡಬೇಕಿದೆ ಭಕ್ತರನ್ನು ಹಿಂದು ಮುಂದು. ಯಾವ ಬಾಬಾನಿಗೆ ಛಾತಿಯಿದೆ ಬಾಗಿಲಿಗೆ ಬಂದ ಭಕ್ತನನ್ನು ದೂಡಲಿಕ್ಕೆ ಹಿಂದು ಮುಂದು. ಸನ್ಯಾಸವನ್ನು ತಿರಸ್ಕರಿಸಲಿಕ್ಕಾಗಿ ಹೇಳುತ್ತಿರುವ ಮಾತಲ್ಲವಿದು. ಇಂದಿನ ಸಮಾಜವು ಹಿಂದೆಂದಿಗಿಂತಲೂ ರೋಗಗ್ರಸ್ತವಾಗಿದೆ. ಮಠಮಾನ್ಯಗಳು ಹಾಗೂ ಸನ್ಯಾಸಿಗಳ ನೈತಿಕ ಬೆಂಬಲವು ಹಿಂದೆಂದಿಗಿಂತಲೂ ಇಂದಿನ ಜನತೆಗೆ ಬೇಕಿದೆ. ಆದರೆ ಪ್ರತಿಕೃತಿಗಳನ್ನು ಮಾರಾಟ ಮಾಡುವ ಧಾರ್ಮಿಕ ಸಂಸ್ಥೆಗಳಿವು, ಗದರಿಯಾವು ಹೇಗೆ ಭಕ್ತರನ್ನು ಸರಿದಾರಿಗೆ?

ಸನ್ಯಾಸಿಯಲ್ಲಿ ನಾವು ಬಯಸಬೇಕಾದದ್ದು ಲೌಕಿಕ ಯಶಸ್ಸನ್ನಲ್ಲ, ಲೌಕಿಕ ಅಪ–ಯಶಸ್ಸನ್ನು, ಸುಲಭ ಜನಪ್ರಿಯತೆಯನ್ನಲ್ಲ ಶ್ರಮದ ಸಾಧನೆಯನ್ನು, ಸಾಂಕೇತಿಕ ಪ್ರತಿಕೃತಿಗಳನ್ನಲ್ಲ ಸಾಧನೆಯೆಂಬ ಮೂಲ ಕೃತಿಯನ್ನು. ಇರಲಿ, ರೋಗ ನಿದಾನವನ್ನು ಇನ್ನಷ್ಟು ಕಾಲ ಮುಂದೂಡಿ ರೋಗ ವಿಧಾನವನ್ನೇ ಇನ್ನಷ್ಟು ಕಾಲ ಚರ್ಚಿಸೋಣವಂತೆ.

ನಾನೊಬ್ಬ ರಂಗಕರ್ಮಿ. ನಟನೆ ಕಲಿಸುತ್ತ ಬಂದಿರುವವನು. ನಟನೆಯ ಕ್ಷೇತ್ರದ ಬಗ್ಗೆ ಅಧಿಕೃತವಾಗಿ ಮಾತನಾಡಲು ಪರವಾನಗಿ ಇದೆ ನನಗೆ. ನಟರಿಗೂ ಸನ್ಯಾಸಿಗಳಿಗೂ ಅನೇಕ ಸಾಮ್ಯತೆಗಳಿವೆ. ಅನೇಕ ವ್ಯತ್ಯಾಸಗಳೂ ಇವೆ. ಮೊದಲು ವ್ಯತ್ಯಾಸಗಳನ್ನೇ ಗಮನಿಸೋಣವಂತೆ. ನಟನಿಗೆ ತಾನು ಪಾತ್ರವಲ್ಲವೆಂಬ ಅರಿವಿರುತ್ತದೆ. ಈ ಅರಿವು ನಟನೆಯ ಪ್ರಾಥಮಿಕ ಅಗತ್ಯವಾಗಿರುತ್ತದೆ.

ಅರ್ಥಾತ್‌, ತನ್ನಯ ಸುಳ್ಳುತನವನ್ನು ಒಪ್ಪಿಕೊಂಡಿರುತ್ತಾನೆ ನಟ. ರಂಗದ ಮೇಲೆ ತಾನಾಡಲಿರುವ ಮಾತು, ಮಾಡಲಿರುವ ಹಾವಭಾವ, ಧರಿಸಲಿರುವ ವೇಷಭೂಷ, ಮುಖಕ್ಕೆ ಮೆತ್ತಿಕೊಂಡಿರುವ ಮುಖವರ್ಣಕ್ಕೆ ಸುತ್ತಲೂ ನಿಲ್ಲಿಸಿರುವ ರಂಗಸಜ್ಜಿಕೆ ಇತ್ಯಾದಿ ಯಾವುದೂ ಸತ್ಯವಲ್ಲವೆಂಬ ಅರಿವು ನಟರಿಗಿರುತ್ತದೆ. ಸನ್ಯಾಸಿಗಳಿಗೆ ಇತ್ತೀಚೆಗಂತೂ ಈ ಅರಿವು ಕ್ಷೀಣಿಸಿದೆ. ತಾನೇ ಸತ್ಯವೆಂಬ ಭ್ರಮೆ ಸಾಂಕ್ರಾಮಿಕ ರೋಗದಂತೆ ಸನ್ಯಾಸಿಗಳನ್ನು ಆವರಿಸತೊಡಗಿದೆ.

ನಟನಾದರೋ, ತಾನು ಧರಿಸಿರುವ ಪಾತ್ರವು ಸುಳ್ಳೆಂಬ ವಿನಯ ಭಾವದಿಂದ ಸಾಧನೆ ಶುರು ಮಾಡುತ್ತಾನೆ. ನಟನ ಸಾಧನೆಯನ್ನು ನಾವು ಸಾಧನೆ ಎಂಬ ಭಾರಿ ಪದ ಬಳಸಿ ಕರೆಯುವುದೇ ಇಲ್ಲ. ತಾಲೀಮು ಎಂಬ ಸರಳ ಪದ ಬಳಸಿ ಕರೆದುಬಿಡುತ್ತೇವೆ. ರಂಗಭೂಮಿಯ ವಿನಯವಿದು. ಇರಲಿ, ತಾಲೀಮಿನ ಮೂಲಕ ಹಂತ ಹಂತವಾಗಿ ಸುಳ್ಳನ್ನು ದಾಟುತ್ತಕ್ರಮಿಸುತ್ತಾನೆ ನಟ. ಹೀಗೆ ಕ್ರಮಿಸಿ ಕ್ರಮಿಸಿ, ತನ್ನೊಟ್ಟಿಗಿನ ಇತರೆ ನಟರೊಟ್ಟಿಗೆ ಸಾಮುದಾಯಿಕ ವಿನಯದಿಂದ ವರ್ತಿಸಿ, ಕೊನೆಗೊಂದು ದಿನ ರಂಗಸ್ಥಳವನ್ನು ಏರುತ್ತಾನೆ.

ಅಂದು ಆತ ಅಥವಾ ಆಕೆ ಯಶಸ್ವಿಯಾದರೆ, ಸತ್ಯವಾಗಿ ಕಂಡರೂ ಕಾಣಬಹುದು. ಯಶಸ್ವಿಯಾಗದೆ ಉಳಿದರೆ ಅಸತ್ಯವಾಗಿಯೇ ಕಂಡುಬಿಡಬಹುದು. ಏನೇ ಆಗಲಿ ಪ್ರೇಕ್ಷಕರಿಗಾದ ಸತ್ಯದ ಕಾಣ್ಕೆ ಕಾಯಂ ಆದದ್ದು, ತಾನು ಕಾಯಂ ಆದ ಬುದ್ಧನೋ ಬಸವನೋ ಹೌದು ಎಂಬ ಅಹಂಕಾರ ನಟನಿಗಿರುವುದಿಲ್ಲ. ನಟನೆಯ ವಿನಯವಿದು. ಸನ್ಯಾಸಕ್ಕೂ ಸಲ್ಲುವ ವಿನಯವಿದು. ತಾನು ಸನ್ಯಾಸಿಯಲ್ಲ, ದುರ್ಬಲ ಮನುಷ್ಯ ಮಾತ್ರ. ತಾನಾಡುತ್ತಿರುವ ನುಡಿಗಳು ಬೊಗಳೆ ನುಡಿಗಳು ಮಾತ್ರ. ಮತ್ತಷ್ಟು ಕ್ರಿಯಾಶೀಲತೆ ಬೇಕಿದೆ ತನಗೆ, ಮತ್ತಷ್ಟು ಸದ್ದಿರದ ಸೇವೆ ಮಾಡಬೇಕಿದೆ ತನಗೆ. ಈ ಮಠ, ಈ ಪತ್ರಿಕೆ, ಈ ಫೋಟೊಗಳು ತನ್ನಯ ಸಾವು ಎಂಬ ವಿನಯ ಆಧುನಿಕ ಸನ್ಯಾಸಿಗೆ ತೀರ ತೀರ ಕಷ್ಟ. ಹಳಬರಿಗಿತ್ತಂತೆ ಹುತ್ತ ಕಟ್ಟಬಲ್ಲ ಚಿತ್ತ. ಗೊತ್ತಿಲ್ಲ ನನಗೆ.

ಧಾರ್ಮಿಕ ವ್ಯವಸ್ಥೆಗಳೆಲ್ಲ ಸಾಂಕೇತಿಕ ವ್ಯವಸ್ಥೆಗಳು. ಮಾರುಕಟ್ಟೆ ವ್ಯವಸ್ಥೆಗಳು. ಈಗ ಸ್ವಯಂಚಾಲಿತ ಯಂತ್ರ ವ್ಯವಸ್ಥೆಗಳು. ಮಾನವರೆಲ್ಲ ಈ ವ್ಯವಸ್ಥೆಯೊಳಗಡೆ ನಟ್ಟು ಬೋಲ್ಟುಗಳು. ಬಾಬಾಗಳೂ ಅಷ್ಟೆ. ಬುದ್ಧ ಬಸವರನ್ನು ಅಥವಾ ಕೃಷ್ಣನನ್ನು ಅಥವಾ ಕ್ರಿಸ್ತನನ್ನು ಪ್ರತಿಕೃತಿಗಳನ್ನಾಗಿ ಮಾಡಿ, ಸುಲಭ ಬೆಲೆಗೆ ಮಾರಬೇಕಿರುವ ವ್ಯವಸ್ಥೆಗಳಿವು.

ಸನ್ಯಾಸಿ, ವೈಯಕ್ತಿಕ ನೆಲೆಯಲ್ಲಿ ಅಪ್ರಾಮಾಣಿಕ ವ್ಯಕ್ತಿ ಎಂದು ನನ್ನ ಮಾತಿನ ಅರ್ಥ ಖಂಡಿತಾ ಅಲ್ಲ. ಇಂದಿನ ಮಾರುಕಟ್ಟೆ ವ್ಯವಸ್ಥೆಯು ಹೇಗೆ ನನ್ನಲ್ಲಿ ಅಪ್ರಾಮಾಣಿಕತೆಯನ್ನು ಪ್ರಚೋದಿಸುತ್ತಿದೆಯೋ ಹಾಗೆಯೇ ಸನ್ಯಾಸಿಯಲ್ಲಿಯೂಅಪ್ರಾಮಾಣಿಕತೆಯನ್ನು ಪ್ರಚೋದಿಸುತ್ತಿದೆ ಎಂದು ನನ್ನ ಮಾತಿನ ಅರ್ಥ. ನಾನೊಬ್ಬ ಭಕ್ತ, ನನ್ನಲ್ಲಿ ಪ್ರಚೋದಿತವಾಗುತ್ತಿರುವ ಅಪ್ರಾಮಾಣಿಕತೆಗೆ ಮದ್ದು ಬೇಕಿದೆ ನನಗೆ. ನನ್ನಷ್ಟೇ ರೋಗಗ್ರಸ್ತ ವ್ಯವಸ್ಥೆಯು ನನ್ನ ಕಾಯಿಲೆಗೆ ಹೇಗೆ ಮದ್ದು ನೀಡೀತು ಎಂದಷ್ಟೆ ನನ್ನ ಪ್ರಶ್ನೆ, ಇರಲಿ.

ನಟನಿಗೂ ಸನ್ಯಾಸಿಗೂ ಇರುವ ಸಾಮ್ಯತೆಯನ್ನು ಕುರಿತು ಇಷ್ಟು ಚರ್ಚೆ ಮಾಡುವ. ಸನ್ಯಾಸಿಗಳೂ ನಟರೇ ಸರಿ. ಮಾರುಕಟ್ಟೆಯಲ್ಲಿ ಯಶಸ್ವಿಯಾಗಿರುವ ಒಬ್ಬ ಸನ್ಯಾಸಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿರುವ ಒಬ್ಬ ಸ್ಟಾರಿನಷ್ಟೇ ಒಳ್ಳೆಯ ನಟ. ನಟನೆಯ ತರಬೇತಿ ಶಿಬಿರಗಳಲ್ಲಿ, ಹವ್ಯಾಸಿನಟರನ್ನು ತರಬೇತುಗೊಳಿಸುವ ಸಂದರ್ಭಗಳಲ್ಲಿ, ಬಾಲನಟರನ್ನು ನಾನು ಗದರುವುದಿದೆ. ‘ಹೋಗ್ರೀ! ಅಷ್ಟೊಂದು ಟೀವಿ ನೋಡ್ತೀರಿ! ಹೋಗಿ ಟೀವಿ ಚಾನೆಲ್ಲು ಆನ್ ಮಾಡಿ, ಆಸ್ತೆಯ ಚಾನೆಲ್ಲು ಭಕ್ತಿಯ ಚಾನೆಲ್ಲು ತಿರಿಗಿಸ್ರಿ! ಅಲ್ಲಿ ಬಾಬಾಗಳು, ಸನ್ಯಾಸಿಗಳು ಪ್ರವಚನ ನೀಡ್ತಿರ‍್ತಾರೆ. ನೋಡ್ರಿ! ನೋಡಿ ಕಲೀರಿ ಆ್ಯಕ್ಟಿಂಗ್!’ ಎಂದು ಗದರಿಸುತ್ತೇನೆ ನಾನು.

ನಟನೆ ಕಲಿಯಲಿಕ್ಕೆ ನಾಟ್ಯಶಾಸ್ತ್ರವಿದ್ದಂತೆ ಭಕ್ತಿಯ ಚಾನೆಲ್ಲುಗಳು. ಅಲ್ಲಿ ಆ ದಿನ ಪ್ರವಚನ ನೀಡುತ್ತಿರುವ ಬಾಬಾ ಯಾರೇ ಇರಲಿ. ಹೆಣ್ಣೇ ಇರಲಿ ಗಂಡೇ ಇರಲಿ. ಯಾವುದೇ ಭಾಷೆ ಮಾತನಾಡುತ್ತಿರಲಿ. ಅರ್ಥ ಹುಡುಕಲು ಹೋಗದೆ ಸುಮ್ಮನೆ ಕೇಳಿ, ಕಾಣಿ. ಕಣ್ಣಿಗೆ ಹಬ್ಬ, ಕಿವಿಗೂ ಹಬ್ಬ, ಪ್ರವಚನಗಳು. ಅವರ ಆಂಗಿಕಗಳ ನಿರ್ದಿಷ್ಟತೆ, ವಾಚಕದಮಾಧುರ್ಯ, ವಿಷಯದ ವಿಂಗಡನೆಯ ಚಾತುರ್ಯ, ಹಾಸ್ಯಪ್ರಜ್ಞೆ, ನಾಟಕೀಯತೆ, ಭಾವುಕತೆ ಹಾಗೂ ಸಂವಹನ ಮಂತ್ರಮುಗ್ಧವಾಗಿಸುತ್ತದೆ ನನ್ನನ್ನು. ಸನ್ಯಾಸಿಗಳು ವೃತ್ತಿಪರ ನಟರು. ಸಣ್ಣ ಸಣ್ಣ ವಿವರಗಳನ್ನೂ ಕರಗತ ಮಾಡಿಕೊಂಡಿರುತ್ತಾರೆ, ದುಡಿಸಿಕೊಳ್ಳುತ್ತಾರೆ. ಕ್ಯಾಮೆರಾ ರೋಲಾದ ಕ್ಷಣದಿಂದ ಹಿಡಿದು ಮುಕ್ತಾಯದ ಕ್ಷಣದವರೆಗೆ ತಡೆಯಿಲ್ಲದೆ, ಅವಸರವೂ ಇಲ್ಲದೆ, ತಕ್ಕಡಿಯಲ್ಲಿಟ್ಟು ತೂಗಿದಂತೆ ಮಾತನಾಡುತ್ತಾರೆ. ನಂಬಿಕೆಯನ್ನು ಮನರಂಜನೆಯೊಟ್ಟಿಗೆ ಹದವಾಗಿ ಬೆರೆಸಿ ಉಣಬಡಿಸುತ್ತಾರೆ, ದುಡ್ಡು ತೆತ್ತು ಬಂದಿರುವ ಸಾವಿರಾರು ಭಕ್ತರ ಎದುರುಗಡೆಗೆ.

ಎಂತಹ ವೇಸ್ಟ್! ಕೇವಲ ಮಾತಿನಿಂದ ದೈವ ಪ್ರತ್ಯಕ್ಷವಾಗಬಲ್ಲುದಾಗಿದ್ದರೆ, ಕೇವಲ ಮುಖವರ್ಣಿಕೆಯ ಬಲದಿಂದ, ವಸ್ತ್ರಾಲಂಕಾರ, ಮೈಕು, ಲೈಟು, ಹೂವು, ಹೊಗೆ, ಹಾಸು, ಊದುಬತ್ತಿಯ ಬಲದಿಂದ ಆಧ್ಯಾತ್ಮಿಕತೆ ಕೈಗೂಡಬಲ್ಲುದಾಗಿದ್ದರೆ, ದೇವರು ಟೀವಿ ಪರದೆ ಹರಿದುಕೊಂಡು ಹೊರಬರಬೇಕಿತ್ತು, ವರ ನೀಡಬೇಕಿತ್ತು, ಪ್ರತಿನಿತ್ಯ. ಬರಲಿಲ್ಲ, ಬರುವುದೂ ಇಲ್ಲ. ಬರುವುದೇನಿದ್ದರೂ ಆರ್ಥಿಕ ವರಮಾನ ಮಾತ್ರ.

ಸನ್ಯಾಸಿಗಳಿಗೆ ಮತ್ತೊಂದು ಹೆಗ್ಗಳಿಕೆಯಿದೆ. ಅದು ಕೂಡ ನಾಟಕದಿಂದಲೇ ಕಲಿತದ್ದು. ಸಂಕೇತಗಳ ಸಮರ್ಥ ನಿರ್ವಹಣೆ ಮಾಡುವ ಕಲೆ. ಕಮಲದ ಹೂವಿನ ಕಟೌಟ್ ಒಂದನ್ನು ಅವರ ಕೈಗಿತ್ತು ನೋಡಿ ಅಥವಾ ಉರುಜುಕಲ್ಲು. ಅದನ್ನವರು ನಿರ್ವಹಿಸುವ ಪರಿ ಗಮನಿಸಿ. ನಿಮ್ಮಂತೆ ಒರಟರಲ್ಲ ಅವರು. ಅವರ ಕೈಗಳಿಗೆ ಅಪಾರ ಕೌಶಲವಿರುತ್ತದೆ. ಜುಜುಬಿ ಕಟೌಟಿಗೇ ಪುಷ್ಪಾರ್ಚನೆ ಮಾಡುತ್ತಾರೆ, ಅಭಿಷೇಕ ಮಾಡುತ್ತಾರೆ. ಕುಂಕುಮಾರ್ಚನೆ ಮಾಡುತ್ತಾರೆ. ಪಂಚಾಮೃತ ಹಂಚಿ ಮಂಗಳಾರತಿ ಮಾಡಿ ಮಂತ್ರಮುಗ್ಧರನ್ನಾಗಿಸಿ ಕೈಬಿಡುತ್ತಾರೆ ನಿಮ್ಮನ್ನು. ನಟರು ಅವರಿಂದ ಕಲಿಯಬೇಕಾದ್ದು ಬಹಳವಿದೆ. ಇಷ್ಟಕ್ಕೂ, ಬಹಳ ಹಿಂದೆ ನಟನೇ ಪೂಜಾರಿಯೂ ಪೂಜಾರಿಯೇ ನಟನೂ ಆಗಿದ್ದರೆಂದು ಪುರಾತತ್ವ ಚರಿತ್ರೆಗಳು ಹೇಳುತ್ತವೆ ತಾನೆ? ಇರಲಿ.

‘ಎನ್ನಯ ಕಾಲೇ ಕಂಬ ಶಿರವೇ ಹೊನ್ನ ಕಳಶ’ ಎಂದು ಸರಳವಾಗಿ ಹೇಳಿ ಇಡೀ ದಿನ ಕತ್ತೆ ಕೆಲಸ ಮಾಡಿಸುವ ನಿಜವಾದ ಆಧ್ಯಾತ್ಮಿಕತೆಯ ಕಾಲವಲ್ಲವಿದು ಅಥವಾ ಭಿಕ್ಷುಕನನ್ನು ಮೋಹಿಸುವ ಅಕ್ಕನ ಕಾಲವೂ ಅಲ್ಲವಿದು. ಭಿಕ್ಷುಕನನ್ನು ಬಿಡಿ ರೈತರನ್ನೂ ವರಿಸಲಿಕ್ಕೆ ನಿರಾಕರಿಸುತ್ತಿದ್ದಾಳೆ ಇಂದಿನ ಹೆಣ್ಣು ಮಗಳು. ಗಂಡು ಮಕ್ಕಳಂತೂ ಸರಿಯೇ ಸರಿ. ಸರಳ ಬದುಕಿಗೆ ಹಿಂದಿರುಗಿದರೆ, ಅಧ್ಯಾತ್ಮವೂ ತಂತಾನೆ ಹಿಂದಿರುಗುತ್ತದೆ ನಿಜದ ಬದುಕಿಗೆ. ಇಲ್ಲವೆಂದರೆ ಸಚ್ಚಾ ಸೌದಾ ಬಾಬಾನ ಸಂದೇಶ ನಿಜವಾಗುವ ಎಲ್ಲ ಸಾಧ್ಯತೆಗಳೂ ನಮ್ಮ ಮುಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry