7

‘ದುರಂತ ಪ್ರವಾಸ’ದ ರಾಹುಲ್‌ ಗಾಂಧಿ

ರಾಮಚಂದ್ರ ಗುಹಾ
Published:
Updated:
‘ದುರಂತ ಪ್ರವಾಸ’ದ ರಾಹುಲ್‌ ಗಾಂಧಿ

ಗೋರಖಪುರದ ಬಾಬಾ ರಾಘವ ದಾಸ್‌ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಘೋರ ದುರಂತ ಸಂಭವಿಸಿದ ಬಳಿಕ ಅಲ್ಲಿಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ಕೊಟ್ಟಿದ್ದರು. ಅಷ್ಟೊಂದು ಶಿಶುಗಳು ಮತ್ತು ಸಣ್ಣ ಮಕ್ಕಳ ಸಾವಿನಿಂದಾಗಿ ಉತ್ತರ ಪ್ರದೇಶದ ಆದಿತ್ಯನಾಥ ನೇತೃತ್ವದ ಸರ್ಕಾರ ದಂಡನಾರ್ಹವೇ ಆಗಿತ್ತು. ರಾಜ್ಯ ಸರ್ಕಾರದ ವೈಫಲ್ಯಗಳತ್ತ ಗಮನ ಸೆಳೆಯುವುದು ಮಹತ್ವಾಕಾಂಕ್ಷಿ, ಚೈತನ್ಯಯುತ ರಾಜಕಾರಣಿಗೆ ದೊರೆತ ಅವಕಾಶವಾಗಿತ್ತು.

ಈ ವಿಚಾರದಲ್ಲಿ ಅಭಿಯಾನವೊಂದನ್ನು ನಡೆಸಿದ್ದರೆ ಅದು ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುತ್ತಿತ್ತು. ಉತ್ತರ ಪ್ರದೇಶ ಈ ದೇಶದ ಅತ್ಯಂತ ದೊಡ್ಡ ರಾಜ್ಯ, ಜತೆಗೆ ಇದು ರಾಹುಲ್‌ ಅವರ ತವರು ರಾಜ್ಯವೂ ಹೌದು. ಹಾಗಿದ್ದರೂ ಗೋರಖಪುರ ಮತ್ತು ಉತ್ತರ ಪ್ರದೇಶದಲ್ಲಿ ರಾಹುಲ್‌ ಇದ್ದದ್ದು ಕೆಲವೇ ತಾಸು. ಬಳಿಕ ಅವರು ಯುರೋಪ್‌ ಪ್ರವಾಸಕ್ಕೆ ಹೋಗಿಬಿಟ್ಟರು.

ಈ ವರ್ತನೆ ಅವರ ವ್ಯಕ್ತಿತ್ವದ ಭಾಗವೇ ಆಗಿದೆ. ಜೂನ್‌ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಐವರು ರೈತರು ಬಲಿಯಾದರು. ಸಾಲ ಮನ್ನಾ ಮತ್ತು ತಮ್ಮ ಬೆಳೆಗೆ ಒಳ್ಳೆಯ ಬೆಲೆ ದೊರೆಯಬೇಕೆಂದು ಆಗ್ರಹಿಸಿ ಅವರು ಪ್ರತಿಭಟನೆ ಮಾಡುತ್ತಿದ್ದರು. ಕೃಷಿ ಕ್ಷೇತ್ರ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ. ಇದಕ್ಕೆ ಸರ್ಕಾರದ ನೀತಿಯೇ ಆಂಶಿಕ ಅಥವಾ ಮುಖ್ಯ ಕಾರಣ.  ‘ಸರ್ಕಾರದ ನೀತಿಯ ಪರಿಣಾಮಗಳು ಎದ್ದು ಕಾಣುತ್ತಿವೆ: ಗ್ರಾಮೀಣ ಅರ್ಥ ವ್ಯವಸ್ಥೆಯಾದ ಜಮೀನು ಮಾರುಕಟ್ಟೆ, ಸಾಲದ ಜಾಲಗಳು, ಖರೀದಿ  ಮತ್ತು ಫಸಲು ಬೆಲೆಗಳನ್ನು ನೋಟು ರದ್ದತಿಯು ಸಂಪೂರ್ಣವಾಗಿ ಹದಗೆಡಿಸಿದೆ’ ಎಂದು ಮಂದ್‌ಸೌರ್‌ ಪ್ರತಿಭಟನೆ ಬಗ್ಗೆ ಅಮನ್‌ ಸೇಥಿ ಮತ್ತು ಪುಣ್ಯಪ್ರಿಯ ಮಿಶ್ರಾ ಅವರು ಹಿಂದುಸ್ತಾನ್‌ ಟೈಮ್ಸ್‌ ಪತ್ರಿಕೆಯಲ್ಲಿ ಬರೆದಿದ್ದರು.

ನೋಟು ರದ್ದತಿಯು ಸಂಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಕ್ರಮ. ಅದರ ಪರಿಣಾಮಗಳನ್ನು ಮಧ್ಯಪ್ರದೇಶದ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರ ಸರಿಯಾಗಿ ನಿರ್ವಹಿಸಿಲ್ಲ ಎಂಬುದನ್ನು ಮಂದ್‌ಸೌರ್‌ ದುರಂತವು ಎತ್ತಿ ತೋರಿಸಿದೆ. ಈ ದುರಂತದ ಬಗ್ಗೆಯೂ ಬೆನ್ನುಬಿಡದ ಅಭಿಯಾನದ ಮೂಲಕ ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಅವಕಾಶ ಇತ್ತು. ರಾಹುಲ್‌ ಏನು ಮಾಡಿದರು? ಅವರು ಕೆಲವು ತಾಸುಗಳ ಮಟ್ಟಿಗೆ ಮಂದ್‌ಸೌರ್‌ಗೆ ಭೇಟಿ ಕೊಟ್ಟರು. ಬಳಿಕ ಯುರೋಪ್‌ಗೆ ಹಾರಿದರು.

ರಾಹುಲ್‌ ಅವರು ತಮ್ಮ ತಾಯಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈಕೆಳಗೆ ಕೆಲಸ ಮಾಡುವವರು. ನಾನು ಸೋನಿಯಾ ಅವರನ್ನು ಯಾವತ್ತೂ ಭೇಟಿಯಾಗಿಲ್ಲ. ಅವರು ತಮ್ಮ ಅತ್ತೆ ರಾಜಕೀಯ ಅಪಮಾನದ ಸ್ಥಿತಿಯಿಂದ ಪುಟಿದೆದ್ದು ಬಂದ ರೀತಿಯಲ್ಲಿಯೇ ಸೋಲಿನಿಂದ ಸ್ಫೂರ್ತಿ ಪಡೆದುಕೊಳ್ಳುವವರು ಎಂದು ಅವರ ಆಪ್ತರು ಹೇಳುವುದನ್ನು ಕೇಳಿದ್ದೇನೆ. 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ಮತ್ತು ಅವರ ಪಕ್ಷ ಹೀನಾಯವಾಗಿ ಸೋತಿತ್ತು. ಈ ಚುನಾವಣೆ ನಡೆದದ್ದು ಮಾರ್ಚ್‌ನಲ್ಲಿ; ಎರಡು ತಿಂಗಳ ಬಳಿಕ ಬಿಹಾರದಲ್ಲಿ ಮೇಲ್ಜಾತಿಯ ಜನರ ಗುಂಪೊಂದು ಕೆಲವು ದಲಿತರನ್ನು ಸುಟ್ಟು ಹಾಕಿತ್ತು. ದೆಹಲಿ ಬಿಟ್ಟ ಇಂದಿರಾ ಅವರು ನೇರವಾಗಿ ದಲಿತರ ಸಜೀವ ದಹನ ನಡೆದ ಬೆಲ್ಚಿ ಗ್ರಾಮಕ್ಕೆ ಹೊರಟರು. ಭಾರಿ ಮಳೆಯಿಂದಾಗಿ ಆ ಗ್ರಾಮಕ್ಕೆ ಕಾರು ಹೋಗುತ್ತಿರಲಿಲ್ಲ. ಹಾಗಾಗಿ ಇಂದಿರಾ ಜೀಪ್‌ನಲ್ಲಿ ಹೋಗಬೇಕಾಯಿತು. ಆ ಜೀಪ್‌ ಕೂಡ ಮಣ್ಣಿನಲ್ಲಿ ಸಿಕ್ಕಿಕೊಂಡಾಗ ಆನೆ ಏರಿ ಆ ಗ್ರಾಮಕ್ಕೆ ಅವರು ಹೋಗಿದ್ದರು.

ಇಂದಿರಾ ಅವರು ಬಡವರು ಮತ್ತು ಶೋಷಿತರ ಪರ ಎಂಬ ವರ್ಚಸ್ಸನ್ನು ಅವರು ಬೆಲ್ಚಿ ತಲುಪಿದ ಈ ನಾಟಕೀಯ ರೀತಿ ಅವರಿಗೆ ಮರಳಿ ತಂದುಕೊಟ್ಟಿತು. ಬಿಹಾರದಿಂದ ಹಿಂದಿರುಗಿದ ಅವರು ರಜೆ ಪಡೆದುಕೊಳ್ಳಲಿಲ್ಲ (ಮೊಮ್ಮಗ ಯುರೋಪನ್ನು ಇಷ್ಟಪಡುವುದಕ್ಕಿಂತ ಹೆಚ್ಚು ಅವರು ಹಿಮಾಲಯವನ್ನು ಇಷ್ಟಪಡುತ್ತಿದ್ದರು ಕೂಡ). ಬದಲಿಗೆ, ಜನತಾ ಪಕ್ಷದ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದರು. ಅಪರಾಧ ಪ್ರಮಾಣದಲ್ಲಿ ಆಗಿರುವ ಹೆಚ್ಚಳ, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಗಳ ಬಗ್ಗೆ ಭಾಷಣ ಮಾಡುತ್ತಾ ಇಡೀ ದೇಶ ತಿರುಗಿದರು.

ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ 1977ರ ಮಾರ್ಚ್‌ನಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು ಮತ್ತು ಮೂರು ವರ್ಷದೊಳಗೆ ಮರಳಿ ಅಧಿಕಾರ ಪಡೆಯಿತು. ರಾಜೀವ್‌ ಗಾಂಧಿ ನೇತೃತ್ವದಲ್ಲಿಯೂ 1989ರ ನವೆಂಬರ್‌ನಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌, ಸುಮಾರು ಎರಡು ವರ್ಷಗಳಲ್ಲಿ ಮರಳಿ ಪಡೆಯಿತು. ಸೋನಿಯಾ ಅವರ ನೇತೃತ್ವದಲ್ಲಿಯೂ 1998 ಮತ್ತು 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತು. ಆದರೆ 2004ರಲ್ಲಿ ಅಧಿಕಾರಕ್ಕೆ ಏರಿತು. ತಮ್ಮನ್ನು ಸಮಾಧಾನಪಡಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್‌ನಲ್ಲಿರುವವರು ಈ ನಿದರ್ಶನಗಳನ್ನು ಹೇಳುತ್ತಿರುತ್ತಾರೆ. ಆದರೆ ಈ ಇತಿಹಾಸಕಾರನ ಮಟ್ಟಿಗೆ ಈ ಹಳೆಯ ಕತೆಗಳನ್ನು ಹೇಳಿಕೊಂಡು ಸಮಾಧಾನಪಟ್ಟುಕೊಳ್ಳುವುದು ಹುಸಿ ಸಮಾಧಾನ ಮಾತ್ರ. ಯಾಕೆಂದರೆ ಕಾಂಗ್ರೆಸ್‌ ಈಗ ಎದುರಿಸುತ್ತಿರುವ ಸಮಸ್ಯೆ ಹಿಂದಿಗಿಂತ ಬಹಳ ತೀವ್ರವಾಗಿದೆ. ಅದಲ್ಲದೆ, ಕಾಂಗ್ರೆಸ್‌ನ ಈಗಿನ ನಾಯಕತ್ವಕ್ಕೆ ಹಿಂದಿನವರಿಗೆ ಇದ್ದಷ್ಟು ದಕ್ಷತೆ ಇಲ್ಲ.

ರಾಹುಲ್‌ ಅವರು ಹದಿಮೂರು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಈ ಅವಧಿಯಲ್ಲಿ ಅವರ ಸಾಧನೆಗಳು ಏನು? ಹೊಗಳುಭಟ ಕಾಂಗ್ರೆಸಿಗರು ಪಕ್ಷದ ಸೋಲಿನ ಹೊಣೆಯನ್ನು (ಇತ್ತೀಚೆಗೆ ಇಂತಹ ಸೋಲು ಸಾಮಾನ್ಯವಾಗಿಬಿಟ್ಟಿದೆ) ಇತರರ ಮೇಲೆ ಹೊರಿಸುತ್ತಿದ್ದಾರೆ ಮತ್ತು ಗೆಲುವಿನ ಶ್ರೇಯ (ಇತ್ತೀಚೆಗೆ ಇದು ಬಹಳ ವಿರಳ) ರಾಹುಲ್‌ಅವರಿಗೆ ಸಲ್ಲುತ್ತಿದೆ. ಹಾಗಿದ್ದರೂ, ರಾಹುಲ್‌ ಅವರ ರಾಜಕೀಯ ಜೀವನದಲ್ಲಿ ಗಮನಾರ್ಹವಾದದ್ದು ಏನೂ ಇಲ್ಲ ಎಂದೇ ಪಕ್ಷದ ಹೊರಗಿನ ವಿಶ್ಲೇಷಕರು ಹೇಳಬೇಕಾಗುತ್ತದೆ. ರಾಹುಲ್‌ ಅವರ ಯಶಸ್ಸು ಎಂದು ಹೇಳಬಹುದಾದದ್ದು 2009ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಹೋರಾಡಿ ಪಡೆದ 21 ಸ್ಥಾನಗಳಗೆಲುವು. ಅದನ್ನು ಬಿಟ್ಟರೆ, ರಾಹುಲ್‌ ಅವರ ರಾಜಕೀಯ

ಜೀವನವಿಡೀ ಮೌನ, ವೈಫಲ್ಯಗಳು, ತಪ್ಪಿಸಿಕೊಂಡ ಅವಕಾಶಗಳು ಮತ್ತು ದುರಂತ ಪ್ರವಾಸೋದ್ಯಮ ಮಾತ್ರ.

ಭರವಸೆಯ ಬ್ಯಾಟ್ಸ್‌ಮನ್‌ಗೆ ಒಂದು ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಫಲವಾದರೆ ಮತ್ತೆ ಎರಡು ಅವಕಾಶ ದೊರೆಯಬಹುದು. ಸತತ ಮೂರು ವೈಫಲ್ಯ ಎಂದರೆ ಆತನ ಕತೆ ಅಲ್ಲಿಗೆ ಮುಗಿದಂತೆಯೇ. ರಾಹುಲ್‌ ಅವರ ರಾಜಕೀಯ ವೃತ್ತಿಜೀವನವನ್ನು ಕ್ರಿಕೆಟ್‌ ಭಾಷೆಯಲ್ಲಿ ವಿವರಿಸುವುದಾದರೆ ಹಲವು ಸೊನ್ನೆಗಳು ಮತ್ತು ಕೆಲವು ಒಂದಂಕಿ ರನ್‌ಗಳ ನಡುವೆ ಒಂದು ಅರ್ಧ ಶತಕ ಎಂದು ಹೇಳಬಹುದು. ಹಾಗಿದ್ದರೂ ಅವರು ತಂಡದ ಆರಂಭಿಕ ಆಟಗಾರ ಮತ್ತು ನಿಯೋಜಿತ ನಾಯಕ.

ಒಬ್ಬ ರಾಜಕೀಯ ನಾಯಕನಾಗಿ ರಾಹುಲ್‌ ಅವರಿಗೆ ತಮ್ಮ ತಾಯಿಯ ತಾಕತ್ತು, ತಂದೆಯ ಮೋಡಿ ಮಾಡುವ ಶಕ್ತಿ, ಅಜ್ಜಿಯ ಕೆಚ್ಚು, ಇಚ್ಛಾಶಕ್ತಿ ಮತ್ತು ಭಾರತದ ತಳಮಟ್ಟದ ಗ್ರಹಿಕೆಗಳ ಕೊರತೆ ಇದೆ. ಅದೇ ಹೊತ್ತಿಗೆ, ಎದುರು ಪಕ್ಷದ ನಾಯಕತ್ವ ಹೆಚ್ಚು ಚತುರ, ಗುರಿ ಕೇಂದ್ರಿತ ಮತ್ತು ನಿರ್ದಯಿ ಆಗಿದೆ. ಇಂದಿರಾ ಅವರ ಪುನಶ್ಚೇತನಕ್ಕೆ ಮೊರಾರ್ಜಿ ದೇಸಾಯಿ ಮತ್ತು ಚರಣ್‌ ಸಿಂಗ್‌ ಅವರ ಅದಕ್ಷತೆ ಮತ್ತು ಪರಸ್ಪರ ವೈರ ದೊಡ್ಡ ಮಟ್ಟದಲ್ಲಿ ನೆರವಾಗಿದೆ. 1989 ಮತ್ತು 1991ರ ನಡುವಣ ಅವಧಿಯಲ್ಲಿ ರಾಜೀವ್‌ ನೇತೃತ್ವದ ಕಾಂಗ್ರೆಸ್‌ಗೆ ಪ್ರತಿಸ್ಪರ್ಧಿಗಳಾಗಿದ್ದವರು ವಿ.ಪಿ. ಸಿಂಗ್‌ ಮತ್ತು ದೇವಿಲಾಲ್‌. ಈ ಇಬ್ಬರಿಗೂ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಇರಲಿಲ್ಲ ಮತ್ತು ಅವರಿಬ್ಬರೂ ಜತೆಯಾಗಿ ಸಾಗಲೂ ಇಲ್ಲ. ಆದರೆ, ಈಗ ಕಾಂಗ್ರೆಸ್‌ ಮತ್ತು ಅಧಿಕಾರದ ನಡುವೆ ನಿಂತಿರುವವರು ನರೇಂದ್ರ ಮೋದಿ ಮತ್ತು ಅಮಿತ್‌ ಷಾ. ಮತ್ತೆ ಮತ್ತೆ ಎದುರಾದ ಚುನಾವಣಾ ಸೋಲುಗಳನ್ನು ಮೆಟ್ಟಿ ನಿಂತು ಮೋದಿ ಮತ್ತು ಷಾ ಅವರನ್ನು ಸೋಲಿಸುವ ಇಚ್ಛಾಶಕ್ತಿ ಮತ್ತು ರಾಜಕೀಯ ಚಾತುರ್ಯ ರಾಹುಲ್‌ ಅವರಿಗೆ ಇದೆಯೇ?

ಈ ಸಾಮರ್ಥ್ಯ ಅವರಲ್ಲಿ ಇದೆ ಎಂದು ನನಗೆ ಅನಿಸುವುದಿಲ್ಲ. ಬುದ್ಧಿವಂತರಾದ ಕೆಲವು ಕಾಂಗ್ರೆಸಿಗರು ಕೂಡ ಹಾಗೆಯೇ ಭಾವಿಸಿದ್ದಾರೆ ಮತ್ತು ಅದನ್ನು ಅವರು ಅತ್ಯಂತ ಸೌಮ್ಯವಾದ ಭಾಷೆಯಲ್ಲಿ ಹೇಳುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಜೈರಾಮ್‌ ರಮೇಶ್‌ ಅವರು ಕಳೆದ ತಿಂಗಳು ನೀಡಿದ ಸಂದರ್ಶನವೊಂದರಲ್ಲಿ ‘ಕಾಂಗ್ರೆಸ್‌ನ ಅಸ್ತಿತ್ವಕ್ಕೇ ಬಿಕ್ಕಟ್ಟು ಎದುರಾಗಿದೆ’, ‘ನಾವು ಮೋದಿ ಮತ್ತು ಷಾ ಅವರನ್ನು ಎದುರಿಸಬೇಕಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದಿದ್ದರು.

ಜೈರಾಮ್‌ ಅವರ ಹೇಳಿಕೆಗಳನ್ನು ಬಹಳ ಜನ ಗಮನಿಸಿದ್ದಾರೆ. ಆದರೆ ಕಾಂಗ್ರೆಸ್‌ನ ಯುವ ಮುಖಂಡರೊಬ್ಬರು ಜೂನ್‌ನಲ್ಲಿ ಪತ್ರಿಕೆಯೊಂದರಲ್ಲಿ ಬರೆದ ಲೇಖನವನ್ನು ಹೆಚ್ಚಿನ ಜನ ಗಮನಿಸಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಗೆದ್ದರೆ ಭಾರತವನ್ನು ಹಿಂದೂ ದೇಶವಾಗಿಸುವುದಕ್ಕಾಗಿ ಅವರು ಸಂವಿಧಾನವನ್ನು ಬದಲಾಯಿಸಲಿದ್ದಾರೆ ಎಂದು ಅವರು ವಾದಿಸಿದ್ದರು. ಇದನ್ನು ತಡೆಯಲು ಓದುಗರು ನೆರವಾಗಬೇಕು ಎಂದು ಕೋರಿದ್ದರು.

ಬಿಜೆಪಿ ಮಹತ್ವಾಕಾಂಕ್ಷಿ ಯೋಜನೆಯನ್ನು ಹೊಂದಿದ್ದು, ಚಾಣಾಕ್ಷ ಕಾರ್ಯತಂತ್ರ, ಪ್ರಭಾವಿ ನಾಯಕ, ತಳಮಟ್ಟದಲ್ಲಿ ಕೆಲಸ ಮಾಡುವ ಉತ್ಸಾಹ ಮತ್ತು ಅಧಿಕಾರದ ನಿಜವಾದ ಹಸಿವು ಇದೆ ಎಂದು ಕಾಂಗ್ರೆಸ್‌ನ ಆ ಮುಖಂಡ ಬರೆದಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್‌ನಲ್ಲಿ ಮಹತ್ವಾಕಾಂಕ್ಷಿ ಯೋಜನೆ, ಕಾರ್ಯತಂತ್ರ ಇಲ್ಲ, ನಾಯಕತ್ವಕ್ಕೆ ಜಡ ಹಿಡಿದಿದೆ, ತಳಮಟ್ಟದಲ್ಲಿ ಕೆಲಸ ಮಾಡುವ ಶಕ್ತಿ ಇಲ್ಲ ಮತ್ತು ಅಧಿಕಾರದ ಹಸಿವು ಇಲ್ಲವೇ ಇಲ್ಲ ಎಂಬುದನ್ನು ಅವರು ವಿವರಿಸಿಲ್ಲ.

ಕಾಂಗ್ರೆಸ್‌ನ ಈಗಿನ ಸ್ಥಿತಿಗೆ ಅದನ್ನು ನಿಯಂತ್ರಿಸುತ್ತಿರುವ ಕುಟುಂಬವೇ ನೇರ ಹೊಣೆ ಎಂದು ಭಾರತದಪ್ರಜಾಪ್ರಭುತ್ವ ಸದೃಢವಾಗಿ ಮುಂದುವರಿಯಬೇಕು ಎಂಬ ಆಕಾಂಕ್ಷೆ ಇರುವವರು ಭಾವಿಸಿದ್ದಾರೆ. ಸಲೊನ್‌ ಡಾಟ್‌ ಕಾಂ ಎಂಬ ವೆಬ್‌ಸೈಟ್‌ಗೆ ನಾನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್‌ನ ಅವನತಿ ಮತ್ತು ಅದರ ಕಾರಣಗಳನ್ನು ಚರ್ಚಿಸಿದ್ದೆ. ನನ್ನ ಹೇಳಿಕೆಯನ್ನು ಇನ್ನಷ್ಟು ವಿಸ್ತರಿಸಿ ಪ್ರತಿಕ್ರಿಯೆ ನೀಡಿದ್ದ ವ್ಯಕ್ತಿಯೊಬ್ಬರು ‘ನೆಹರೂ ಅವರು ಲೋಪಗಳಿಂದ ಕೂಡಿದ್ದರೂ ಶ್ರೇಷ್ಠ ವ್ಯಕ್ತಿ. ಆದರೆ ಅವರ ಉತ್ತರಾಧಿಕಾರಿಗಳಿಗೆ ಅವರಷ್ಟು ಗಟ್ಟಿ ವ್ಯಕ್ತಿತ್ವ ಅಥವಾ ನಾಯಕತ್ವ ಸಾಮರ್ಥ್ಯ ಇಲ್ಲ’ ಎಂದಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ, ಐವತ್ತು ವರ್ಷ ಆಡಳಿತ ನಡೆಸಿದ ಹೆಗ್ಗಳಿಕೆಯ ಪಕ್ಷ ಈಗ ಶೇ 10ರಷ್ಟು ಸ್ಥಾನಗಳನ್ನೂ ಗೆಲ್ಲಲಾಗದೆ ನಗೆಪಾಟಲಿಗೀಡಾಗಿದೆ ಮತ್ತು ಅಪ್ರಸ್ತುತ ಎನಿಸಿಬಿಟ್ಟಿದೆ. ‘ಒಂದು ಕುಟುಂಬ ಮತ್ತು ಬಾಯಿಬಿಟ್ಟರೆ ಪೆದ್ದುತನವನ್ನೇ ಹೇಳುವ ಮೂರ್ಖ ಮಗನ ಆಚೆಗೆ ನೋಡುವ ಶಕ್ತಿಯೇ ಕಾಂಗ್ರೆಸ್‌ಗೆ ಇಲ್ಲವಾಗಿದೆ. ಮೂರ್ಖತನಕ್ಕೆ ಸಂಬಂಧಿಸಿದ ಜೋಕುಗಳಿಗೆ ಈ ಮಗ ಇನ್ನೊಂದು ಹೆಸರಾಗಿಬಿಟ್ಟಿದ್ದಾರೆ. ಅವರು ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಒಂದರ ನಾಯಕ’ ಎಂದು ಆ ವ್ಯಕ್ತಿ ಅಭಿಪ್ರಾಯಪಟ್ಟಿದ್ದಾರೆ.

ಈ ಅಜ್ಞಾತ ಪ್ರತಿಕ್ರಿಯೆಕಾರ ಇನ್ನಷ್ಟು ವಿವರಣೆ ನೀಡಿದ್ದಾರೆ: ‘ಭಾರತದ ರಾಷ್ಟ್ರೀಯ ರಾಜಕಾರಣದಲ್ಲಿ ಈಗ ಮತದಾರರು ಅತ್ಯುತ್ಸಾಹದ ರಾಜಕೀಯ ಘಾತುಕ ಶಕ್ತಿ ಮತ್ತು ಮುತ್ತಜ್ಜ ದೊಡ್ಡ ಮುತ್ಸದ್ದಿಯಾಗಿದ್ದರು ಎಂಬುದಷ್ಟೇ ಅರ್ಹತೆಯಾಗಿರುವ ಹುಡುಗನ ನಡುವೆ ಆಯ್ಕೆ ಮಾಡಬೇಕಿದೆ. ನನಗೆ ಗೊತ್ತಿರುವ ಹಲವರು ಮೋದಿ ಅವರಿಗೆ ಮತ ನೀಡಿದ್ದು ಅವರ ಧಾರ್ಮಿಕ ನಿಲುವುಗಳ ಕಾರಣಕ್ಕಾಗಿ ಅಲ್ಲ. ಬದಲಿಗೆ, ಪರ್ಯಾಯವಾಗಿ ಇರುವುದು ಒಬ್ಬ ಬಾಲಕ ಎಂಬ ಕಾರಣಕ್ಕೆ. ನಾನು ಇಂತಹ ಆಯ್ಕೆ ಮಾಡುವುದಿಲ್ಲ, ಆದರೆ ಈ ಆಯ್ಕೆ ಮಾಡಿದ ಜನರನ್ನು ದೂರುವುದಕ್ಕೂ ಸಾಧ್ಯವಿಲ್ಲ’ ಎಂದು ಆ ವ್ಯಕ್ತಿ ಪ್ರತಿಪಾದಿಸಿದ್ದಾರೆ.

ಆ ವ್ಯಕ್ತಿ ಬಳಸಿರುವ ಭಾಷೆ ಕಟುವಾಗಿದೆ. ಅವರು ಮಾಡಿರುವ ವಿಶ್ಲೇಷಣೆ ನಿಖರವಾಗಿದೆ ಮತ್ತು ಅದನ್ನು ಭಾರತದ ರಾಜಕಾರಣದ ವಸ್ತುನಿಷ್ಠ ವಿಶ್ಲೇಷಕರು ತಳ್ಳಿ ಹಾಕಲಾಗದು. ಮುಖ್ಯ ವಿರೋಧ ಪಕ್ಷದ ಮುಖ್ಯಸ್ಥ ಕಣ್ಣಿಗೆ ಕಾಣುವ ರೀತಿಯಲ್ಲಿ ಅದಕ್ಷನಾಗಿದ್ದರೆ ಭಾರತದ ಪ್ರಜಾತಂತ್ರದ ಭವಿಷ್ಯಕ್ಕೆ ಕತ್ತಲು ಕವಿದಂತೆ. ಹಾಗಿದ್ದಾಗ, ಪೈಶಾಚಿಕ, ವಿಭಜನವಾದಿ ಹಿಂದೂ ಮೂಲಭೂತವಾದಿ ಶಕ್ತಿಗಳನ್ನು ಎದುರಿಸುವವರು ಯಾರು?

‘ಭಾರತ ಬದಲಾಗಿದೆ, ಹಳೆಯ ಘೋಷಣೆಗಳು, ಸೂತ್ರಗಳು, ಮಂತ್ರಗಳು ಕೆಲಸ ಮಾಡವು’ ಎಂದು ಜೈರಾಮ್‌ ಹೇಳಿದ್ದಾರೆ. ಪಕ್ಷದ ನಾಯಕತ್ವವೇ ಬದಲಾಗಬೇಕು ಎಂದು ಅವರು ನೇರವಾಗಿ ಹೇಳುವುದು ಸಾಧ್ಯವಾಗದು. ಆದರೆ ನಮಗೆ ಅದು ಸಾಧ್ಯ. ರಾಷ್ಟ್ರ ರಾಜಕಾರಣದಲ್ಲಿ ರಾಹುಲ್‌ ಅವರ ಇರುವಿಕೆಯೇ ಮೋದಿ ಮತ್ತು ಷಾ ಅವರಿಗೆ ಬಹುದೊಡ್ಡ ಆಸ್ತಿ. ಅದೇ ರೀತಿಯಲ್ಲಿ, ಬಿಜೆಪಿಯ ದ್ವೇಷಪೂರಿತ ರಾಜಕಾರಣವನ್ನು ವಿರೋಧಿಸುವವರು ಮತ್ತು ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವವರಿಗೆ ಬಹಳ ದೊಡ್ಡ ನಷ್ಟ. ರಾಹುಲ್‌ ಅವರು ಈಗ ಇರುವ ಸ್ಥಾನದಲ್ಲಿ ಇರುವ ಮೂಲಕ  ನೆಹರೂ ಕನಸಿನ ಭಾರತವನ್ನು ನಾಶಪಡಿಸುವ ಶಕ್ತಿಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry