7

ನಮ್ಮ ನಡುವಿನ ‘ಇವರು’ ಕಥೆಯಾದರು ಏಕೆ?

Published:
Updated:
ನಮ್ಮ ನಡುವಿನ ‘ಇವರು’ ಕಥೆಯಾದರು ಏಕೆ?

ಯಲ್ಲಪ್ಪ ಸವಳೆ, ಹುಲಿಗೆಮ್ಮ ಭೋವಿ, ಅನ್ನೀಸ ಫಾತಿಮಾ ಶೇಖ್‌ ಇವರೆಲ್ಲರೂ ಪ್ರವಾಹದ ಎದುರು ಬಂಡೆಯಂತೆ ದೃಢವಾಗಿ ನಿಂತವರು. ಹಣೆಬರಹ ಅಲ್ಲ; ಆತ್ಮಬಲವನ್ನು ನಂಬಿ ಯಶಸ್ವಿಯಾದವರು.

ಹೈದರಾಬಾದ್‌ ಕರ್ನಾಟಕದಲ್ಲಿ ಹತ್ತಾರು ಮಂದಿ ಸಾಧಕರು ಇದ್ದಾರೆ. ಅವರಲ್ಲಿ ಕೆಲವರು ಹುಡುಕಾಟದಲ್ಲಿ ಸಿಕ್ಕಿದರು. ಬಾಲ್ಯದಲ್ಲಿ ಪಠ್ಯಪುಸ್ತಕಕ್ಕೂ ಗತಿ ಇಲ್ಲದೆ ನಲುಗಿದ್ದ ದಿಲೀಪಗಿರಿ ಕೆ.ಗೋಸಾಯಿ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಬಡವರಿಗೆ ಬಂಡಿ ಕೊಟ್ಟು ಬದುಕು ಕಟ್ಟುವ ಮಹಮದ್‌ ಗೌಸ್‌ ಇದ್ದಾರೆ. ಇಡೀ ಗ್ರಾಮವನ್ನು ಮಾದರಿಯನ್ನಾಗಿ ರೂಪಿಸಿದ ಶಿಕ್ಷಕ ಕೊಟ್ರೇಶಿ ಹಾಗೂ ಲಾರಿಯನ್ನು ಚಲಾಯಿಸುತ್ತಾ ದೇಶ ಸುತ್ತುವ ಯುವತಿ ವಲ್ಲಿಕಾ ಕೂಡ ಇದ್ದಾರೆ.ಇವರ ಸಾಧನೆ ಹೆಚ್ಚಿನವರಿಗೆ ಗೊತ್ತಿಲ್ಲ. ಏಕೆಂದರೆ ಇವರು ಶ್ರೀಸಾಮಾನ್ಯರು.

ಕಲಬುರ್ಗಿ ಜಿಲ್ಲೆ ಆಳಂದ ಪಟ್ಟಣದ ಗೊಲ್ಲರ ಹುಡುಗ ಯಲ್ಲಪ್ಪ ಸವಳೆಗೆ ಒಂದು ದಿನ ವಿಪರೀತ ಹಸಿವಾಗಿತ್ತು. ಭಿಕ್ಷೆ ಬೇಡಲು ಹೋದಾಗ ಕೆಲವರು ಹೊಡೆದು, ಕತ್ತು ಹಿಡಿದು ದೂಡಿದ್ದರು. ಹಸಿವಿನಿಂದ ಕಂಗಾಲಾಗಿದ್ದ ಈತನಿಗೆ ರೈತನೊಬ್ಬ ಹೊಲದಲ್ಲಿ ಮರಕ್ಕೆ ಕಟ್ಟಿದ್ದ ಬುತ್ತಿ ಕಾಣಿಸಿತ್ತು. ಅದನ್ನೇ ಕದ್ದು ಹಸಿವು ತಣಿಸಿಕೊಂಡಿದ್ದನು.

ಈತ ಬಾಲ್ಯದಲ್ಲಿ ಅಜ್ಜಿ ಜೊತೆ ಊರೂರು ಸುತ್ತಾಡಿ ಬಲೂನ್‌, ಸೇಫ್ಟಿಪಿನ್‌, ಹೇರ್‌ಪಿನ್‌, ಸೂಜಿ ಮಾರಾಟ ಮಾಡುತ್ತಿದ್ದ. ಶಾಲೆಗೆ ದಾಖಲಾದರೂ ತರಗತಿಗೆ ಹೋಗಲಿಲ್ಲ. ಕುರಿ ಕಾಯುವ ಸಲುವಾಗಿಯೇ ಅಪ್ಪ ಶಾಲೆ ಬಿಡಿಸಿದ್ದ. ರಾತ್ರಿ ಶಾಲೆಯ ಮಾಸ್ತರ್‌ ದೇವೀಂದ್ರಪ್ಪ ಅವರ ಕಾಳಜಿಯಿಂದಾಗಿ 16ನೇ ವಯಸ್ಸಿಗೆ ನೇರವಾಗಿ 7 ನೇ ತರಗತಿಯ ಪರೀಕ್ಷೆಯನ್ನು ಬರೆದು ಉತ್ತೀರ್ಣನಾದ ಯಲ್ಲಪ್ಪ, ಆಳಂದದ ಗೊಲ್ಲರ ಸಮುದಾಯದಲ್ಲಿ ಎಸ್‌ಎಸ್‌ಎಲ್‌ಸಿ ಪಾಸು ಮಾಡಿದ ಮೊದಲಿಗ.

ವಯಸ್ಕರಾದ ಮೇಲೆ ಅಜ್ಜಿಯೊಂದಿಗೆ ಹಳ್ಳಿ ಹಳ್ಳಿಗಳನ್ನು ಅಲೆದು ಹಳೇ ಕಬ್ಬಿಣ, ಪ್ಲಾಸ್ಟಿಕ್‌ ಸಾಮಾನುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು. ನಂತರ ಆಳಂದದಲ್ಲಿ ಸಣ್ಣ ಪ್ರಮಾಣದ ಗುಜರಿ ಅಂಗಡಿ ತೆರೆದರು. ಕೆಲವು ವರ್ಷಗಳ ಬಳಿಕ ಬ್ಯಾಂಕ್‌ನಿಂದ ಸಾಲ ಪಡೆದು ಪ್ಲಾಸ್ಟಿಕ್‌ ಕೊಡಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಿದರು. ಈಗ ಅಲ್ಲಿ 50 ಲಕ್ಷ ರೂಪಾಯಿ ಬಂಡವಾಳವನ್ನು ಹೂಡಲಾಗಿದ್ದು, ಹತ್ತು ಮಂದಿ ಕೆಲಸ ಮಾಡುತ್ತಿದ್ದಾರೆ.

ನಮಗೆ ಎಲ್ಲವೂ ನಗರ, ಮಹಾನಗರ, ದೊಡ್ಡ ಉದ್ಯಮಿಗಳು, ಕೋಟಿ, ಕೋಟಿ ಸಂಬಳ ಪಡೆಯುವ ಬಹುರಾಷ್ಟ್ರೀಯ ಕಂಪೆನಿಗಳು ಸಿಇಒಗಳು ಮಾತ್ರ ಸಾಧಕರಂತೆ ಕಾಣಿಸುತ್ತಾರೆ. ಅವರನ್ನೇ ಸ್ಫೂರ್ತಿ, ಪ್ರೇರಣೆ ಎಂದು ಬಿಂಬಿಸಲಾಗುತ್ತದೆ. ಆದರೆ ಅನಕ್ಷರಸ್ಥೆ ಹುಲಿಗೆಮ್ಮ ಯಾರಿಗೂ ಏನು ಕಮ್ಮಿ ಇಲ್ಲ.

ಹುಲಿಗೆಮ್ಮ ಭೋವಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕು ಹನುಮಸಾಗರದವರು. ಇವರಿಗೆ ಸಣ್ಣ ವಯಸ್ಸಿಗೇ ಮದುವೆ ಮಾಡಲಾಗಿತ್ತಾದರೂ, ಸ್ವಾವಲಂಬಿಯಾಗಿಯೇ ಬದುಕಬೇಕಾದ ಅನಿವಾರ್ಯತೆ ಬಂದಿತ್ತು. ತವರಿಗೆ ಮರಳಿದರು. ಸಹೋದರರಿಗೆ ಭಾರವಾಗಲು ಮನಸ್ಸು ಒಪ್ಪದೆ ಕಲ್ಲು ಒಡೆಯಲು ಶುರು ಮಾಡಿದರು. ಜಲ್ಲಿಕಲ್ಲು ಒಡೆಯುವುದರಲ್ಲಿ ಇವರು ನಿಪುಣೆ. ಹೀಗಾಗಿ ಕೈತುಂಬ ಕೆಲಸ ಸಿಕ್ಕಿತು. ಹಂತ ಹಂತವಾಗಿ ಬೆಳೆದು ಜಲ್ಲಿಕಲ್ಲು ಒಡೆದು ಕೊಡುವ ಗುತ್ತಿಗೆದಾರರಾಗಿದ್ದಾರೆ. ನೂರು ರೂಪಾಯಿ ನೋಟಿನ ಮುಖವನ್ನು ನೋಡದೇ ಇದ್ದ ಇವರು ವಾರಕ್ಕೆ ಒಂದೂವರೆ ಲಕ್ಷ ರೂಪಾಯಿಯಷ್ಟು ಕೂಲಿಯನ್ನು ಹಂಚುತ್ತಾರೆ.

‘ಬಡತನದ ಬವಣೆ ಗೊತ್ತಿರುವ ನನಗೆ ಬಡವರೆಂದರೆ ಮನಸ್ಸು ಕರಗುತ್ತದೆ. ಈಗ ನನ್ನ ಬಳಿ 40 ಹೆಂಗಸರು, 20 ಗಂಡಸರು ಕೆಲಸ ಮಾಡುತ್ತಿದ್ದಾರೆ. ನಾನು ಹಣ ಗಳಿಸುವುದಕ್ಕಿಂತ ದೀನರಿಗೆ ಕೆಲಸ ನೀಡಬೇಕು. ಅವರ ಹೊಟ್ಟೆ ತುಂಬಿಸಬೇಕು ಎಂಬ ಉದ್ದೇಶ ಹೊಂದಿರುವುದರಿಂದ ಈಗಲೂ ಕಾರ್ಮಿಕಳಾಗಿಯೇ ಇದ್ದೇನೆ. ನನ್ನ ಹತ್ತಿರ ಕೆಲಸ ಮಾಡುವವರ ಮನೆಯಲ್ಲಿ ಮಂಗಳ ಕಾರ್ಯಗಳು ನಡೆದರೆ ಶಕ್ತಿಮೀರಿ ಸಹಾಯ ಮಾಡುವುದರಿಂದ ಎಲ್ಲರಿಗೂ ಅಕ್ಕಳಾಗಿದ್ದೇನೆ’ ಎನ್ನುತ್ತಾರೆ ಹುಲಿಗೆಮ್ಮ.

31 ವರ್ಷದ ಅನ್ನೀಸ ಫಾತಿಮಾ ಶೇಖ್‌ ಅವರ ಕಥೆಯೇ ಬೇರೆ. ಇವರ ತಂದೆ–ತಾಯಿ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದವರು. ತುಂಬಾ ಹಿಂದೆಯೇ ಮುಂಬೈಗೆ ವಲಸೆ ಹೋದವರು. ಅಲ್ಲಿ ರಸ್ತೆಬದಿ ತರಕಾರಿ ಮಾರಾಟ ಮಾಡುತ್ತಿದ್ದರು. ಒಂದು ದಿನ ಪಾಲಿಕೆಯವರು ಪೊಲೀಸರ ಜತೆ ಬಂದು ಅಂಗಡಿಯನ್ನು ಧ್ವಂಸಗೊಳಿಸಿದರು. ಸಂಘರ್ಷಕ್ಕೆ ಇಳಿದಾಗ ಲಾಠಿ ಪ್ರಹಾರ ನಡೆಯಿತು. ಪೊಲೀಸರು ಇಡೀ ಕುಟುಂಬವನ್ನು ಜೈಲಿಗೆ ಕಳುಹಿಸಿದರು.

ತಂದೆ–ತಾಯಿಯ ಜತೆಗೆ ತರಕಾರಿ ಮಾರುತ್ತಲೇ ಬೀದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪೂರ್ಣ ವಿರಾಮ ಹಾಕುವುದು ಹೇಗೆ ಎಂದು ಯೋಚಿಸುತ್ತಿದ್ದರು. ಅದೇ ವೇಳೆಗೆ ‘ಆಜಾದ್‌ ಹಾಕರ್ಸ್‌ ಯೂನಿಯನ್‌’ ನ ದಯಾಶಂಕರ ಸಿಂಗ್‌ ನೆರವಿಗೆ ಬಂದರು. ಆರ್ಥಿಕ ತೊಂದರೆಯಿಂದ 7ನೇ ತರಗತಿಯ ನಂತರ ಶಾಲೆ ಬಿಟ್ಟ ಇವರು ಖಾಸಗಿಯಾಗಿ 10ನೇ ಮತ್ತು ಪಿಯುಸಿಯನ್ನು ಪಾಸು ಮಾಡಿದರು.

ಪೋಷಕರ ಜೊತೆ ಯೂನಿಯನ್‌ ಸಭೆಗೂ ಹೋಗುತ್ತಿದ್ದರು. ಅಲ್ಲಿ ಕಾಮ್ರೇಡ್‌ಗಳ ಭಾಷಣ ಕೇಳಿ ಪ್ರಭಾವಿತರಾದರು. ಇವರೂ ಭಾಷಣ ಮಾಡಿ ಸೈ ಎನಿಸಿಕೊಂಡರು. ಮುಂದೆ ಹೋರಾಟದ ಹಾದಿಯಲ್ಲಿ ನಡೆಯತೊಡಗಿದರು. ಮುಂಬೈನಲ್ಲಿ ಬೀದಿಬದಿ ವ್ಯಾಪಾರಿಗಳ ಪರ ಕಾನೂನು ಹೋರಾಟಕ್ಕಾಗಿ ಇರುವ ಆಜಾದ್‌ ಹಾಕರ್ಸ್‌ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾದರು. ಈಗ ‘ಕ್ರೆಡಿಟ್‌ ಕೋ ಆಪರೇಟಿವ್‌ ಬ್ಯಾಂಕ್‌’ ನ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದು, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿ ಆರ್ಥಿಕವಾಗಿ ನೆರವಾಗುತ್ತಿದ್ದಾರೆ.

ಭಾರತದಲ್ಲಿ ಅಂಬಾನಿಯಿಂದ ಅದಾನಿ ವರೆಗೆ ಕೆಲವೇ ವ್ಯಕ್ತಿಗಳು ನಮ್ಮ ಕಲ್ಪನೆಗೂ ನಿಲುಕದಷ್ಟು ಸಂಪತ್ತು ಹೊಂದಿದ್ದಾರೆ. ಇಂಥವರು ಯುವ ಜನಾಂಗಕ್ಕೆ ‘ಧ್ರುವತಾರೆ’ಗಳಂತೆ ಕಾಣಿಸುತ್ತಾರೆ.

ಆದರೆ ಯಲ್ಲಪ್ಪ ಸವಳೆ, ಹುಲಿಗೆಮ್ಮ ಭೋವಿ, ಅನ್ನೀಸ ಫಾತಿಮಾ ಶೇಖ್‌ ಅವರು ನಮ್ಮ ನೆಲದ ಬಳ್ಳಿ, ಬೇಲಿ ಮೇಲಿನ ಹೂ, ಕಾಡುಹಕ್ಕಿಯ ಹಾಡಿನಂಥವರು. ಸುಂದರವಾಗಿದ್ದರೂ, ಪರಿಮಳ ಬೀರುತ್ತಿದ್ದರೂ, ಇಂಪಾಗಿ ಹಾಡುತ್ತಿದ್ದರೂ ಯಾರ ಗಮನಕ್ಕೂ ಬರುವುದೇ ಇಲ್ಲ. ಇವರಿಗೆ ಅದು ಬೇಕಾಗಿಯೂ ಇಲ್ಲ.

ಇವರು ನಮಗೆ ಮಾದರಿ. ಏಕೆಂದರೆ ಕಷ್ಟಗಳು, ಸಮಸ್ಯೆಗಳೊಂದಿಗೆ ರಾಜಿ ಮಾಡಿಕೊಂಡವರಲ್ಲ. ಹೋರಾಟ, ಸಂಘರ್ಷದ ಮೂಲಕ ಮುನ್ನುಗ್ಗಿದವರು. ಅನಿವಾರ್ಯವನ್ನು ಅವಕಾಶವನ್ನಾಗಿಸಿಕೊಂಡವರು. ಇವರು ಯಾರೂ ವ್ಯಕ್ತಿತ್ವ ವಿಕಸನದ ಕಾರ್ಯಾಗಾರಕ್ಕೆ ಹೋದವರಲ್ಲ. ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿದವರೂ ಅಲ್ಲ. ಪ್ರೇರಣೆ ನೀಡುವ ವಿಡಿಯೋಗಳನ್ನು ನೋಡಿದವರೂ ಅಲ್ಲ. ಆದರೆ, ಇವರಲ್ಲಿ ಛಲವಿತ್ತು, ಅದಕ್ಕೆ ತಕ್ಕನಾದ ಆತ್ಮಬಲವಿತ್ತು. ಕಣ್ಣು ಮುಂದೆ ಗುರಿ ಇತ್ತು. ಹೀಗಾಗಿ ಗೆದ್ದರು.

ಹಣ ಗಳಿಸಬೇಕು, ಬಂಗಲೆ ಕಟ್ಟಬೇಕು, ಕಾರಿನಲ್ಲಿ ಓಡಾಡಬೇಕು, ಅವಮಾನಿಸಿದವರ ಎದುರು ಶ್ರೀಮಂತಿಕೆಯ ದವಲತ್ತು ತೋರಿಸಿ ಸೇಡು ತೀರಿಸಿಕೊಳ್ಳಬೇಕು ಎನ್ನುವ ಸಣ್ಣತನ ತೋರಿದವರಲ್ಲ.

ಇವರೆಲ್ಲರೂ ಮೊದಲು ತಮ್ಮ ಬದುಕನ್ನು ಚೆಂದಗಾಣಿಸಿಕೊಂಡರು. ಆನಂತರ ತಮ್ಮಂಥವರಿಗೆ ಆಸರೆಯಾದರು. ತಮಗೆ ಒದಗಿಬಂದಂತಹ ಕಷ್ಟ, ಅವಮಾನ, ಹಸಿವನ್ನು ಅವರಿಂದ ದೂರ ಇರಿಸಬೇಕು ಎನ್ನುವ ಸಮುದಾಯ ಪ್ರಜ್ಞೆಯನ್ನು ಹೊಂದಿದವರು. ಇವರೆಲ್ಲ ಏಕೆ ಕಥೆಯಾದರು ಎಂದು ಯೋಚಿಸುತ್ತಿದ್ದೆ.

ಹುಲಿಗೆಮ್ಮ ಭೋವಿ ಕೆಲಸ ಮಾಡಿದವರಿಗೆ ಕೂಲಿ ಕೊಟ್ಟು ಕಳುಹಿಸುತ್ತಿದ್ದರೆ ಕೇವಲ ಗುತ್ತಿಗೆದಾರರಾಗುತ್ತಿದ್ದರು. ಯಲ್ಲಪ್ಪ ಸವಳೆ ಕಾರ್ಖಾನೆ ಮಾಡಿ ಹಣ ಗಳಿಸಿ ಕುಟುಂಬವನ್ನಷ್ಟೇ ನೋಡಿಕೊಳ್ಳುತ್ತಿದ್ದರೆ ಬಂಡವಾಳಶಾಹಿ ಆಗುತ್ತಿದ್ದರು. ಅನ್ನೀಸ ಫಾತಿಮಾ ಶೇಖ್‌ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಸಿಡಿದೇಳದೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಸಮಯಸಾಧಕಿ ಆಗುತ್ತಿದ್ದರು.

ಹುಲಿಗೆಮ್ಮ ಭೋವಿ ಜೊತೆಗೆ ಅಂಗವಿಕಲೆಯರು, ವಿಧವೆಯರು. ಗಂಡನ ಮನೆಯಿಂದ ಹೊರ ಹಾಕಿಸಿಕೊಂಡವರು, ಕಡುಬಡವರೇ ಇದ್ದಾರೆ. ಗೊಲ್ಲರ ಯಲ್ಲಪ್ಪ ಆರ್ಥಿಕವಾಗಿ ಸಬಲರಾದ ಮೇಲೆ ತಮ್ಮ ಸಮುದಾಯದ ಮುಂದಾಳು ಆಗಿದ್ದಾರೆ.

ಅನ್ನೀಸ ಫಾತಿಮಾ ಶೇಖ್‌ ಅವರು ದೇಶದಲ್ಲಿ ಇರುವ 2 ಕೋಟಿ ಬೀದಿಬದಿ ವ್ಯಾಪಾರಿಗಳು, ಅವರನ್ನು ಅವಲಂಬಿಸಿರುವ ಸುಮಾರು 10 ಕೋಟಿ ಜನ, ಚಿಕ್ಕಪುಟ್ಟ ವ್ಯಾಪಾರದ ಮೂಲಕ ನಿರುದ್ಯೋಗ ಮೆಟ್ಟಿ ಸ್ವಾವಲಂಬಿ ಜೀವನ ನಡೆಸುತ್ತಿರುವವರ ಪರ ಧ್ವನಿ ಮೊಳಗಿಸುತ್ತಿದ್ದಾರೆ.

ಇವರೆಲ್ಲರೂ ನನಗೆ ತುಂಬಾ ಇಷ್ಟವಾದವರು. ಏಕೆಂದರೆ, ಇವರು ತಮ್ಮ ‘ಭಾವಚಿತ್ರ’ವನ್ನು ತಾವೇ, ತಮಗೆ ಬೇಕಾದಂತೆ ಬಿಡಿಸಿಕೊಂಡವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry