ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಬತ್ತದ ಚಿಲುಮೆ

ವೇದ–2
Last Updated 1 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವೇದ. ಈ ಶಬ್ದ ಹಲವರಿಗೆ ಹಲವು ರೀತಿಯ ಅರ್ಥಗಳನ್ನೂ ಅನರ್ಥಗಳನ್ನೂ ಉಂಟುಮಾಡುತ್ತಿದೆ. ಒಟ್ಟು ವೇದವನ್ನು ಅಧ್ಯಯನ ಮಾಡಿ, ‘ವೇದ ಎಂದರೆ ಇದು’ ಎಂದು ಹೇಳುವುದು ದಿಟವಾಗಿಯೂ ಒಂದು ಬೌದ್ಧಿಕ ಸಾಹಸವೇ ಸರಿ; ಅದು ಅಷ್ಟು ಸುಲಭವಾಗಿ ನಡೆಯುವಂಥದ್ದೂ ಅಲ್ಲ; ಜೀವನದುದ್ದಕ್ಕೂ ನಡೆಯಬೇಕಾದ ಸಂಗತಿಯಿದು. ಹೀಗಾಗಿಯೇ ವೇದವನ್ನು ಹೊಗಳುವ ಮತ್ತು ತೆಗಳುವ ಗುಂಪಿನಿಂದ ಚಿಮ್ಮುವ ಮಾತುಗಳು ವಸ್ತುನಿಷ್ಠವಾಗಿರುವುದಿಲ್ಲ; ಕೇವಲ ಆವೇಶದ ದುಡುಕು ಮಾತುಗಳು ಆಗಿರುತ್ತವೆಯಷ್ಟೆ.

ಹಾಗಾದರೆ ವೇದದ ಆಶಯವನ್ನು ಹೇಗೆ ತಿಳಿಯುವುದು?

ವೇದ ಎಂದರೆ ಅರಿವು, ತಿಳಿವಳಿಕೆ, ಜ್ಞಾನ ಎಂದೇ ಅರ್ಥವಲ್ಲವೆ? ಈ ನೆಲೆಯಿಂದ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವೆ? ‘ಆನೋಭದ್ರಾಃ ಕ್ರತವೋ ಯಂತು ವಿಶ್ವತಃ’. ಇದು ಋಗ್ವೇದದ ಒಂದು ಸೊಲ್ಲು. ‘ಒಳಿತಾದುದು ಎಲ್ಲ ಕಡೆಗಳಿಂದಲೂ ನಮ್ಮೆಡೆಗೆ ಬರಲಿ’ – ಎನ್ನುವುದು ಈ ಮಾತಿನ ಸಾರಾಂಶ. ವೇದದ ಒಟ್ಟು ಆಶಯವೇ ಈ ಮಾತಿನಲ್ಲಿದೆ ಎಂದರೆ ಅದು ತಪ್ಪಾಗದು. ನಮ್ಮ ಜೀವನ ಚೆನ್ನಾಗಿರಬೇಕು. ಹೀಗೆ ಚೆನ್ನಾಗಿರಲು ಅರಿವು ಎಚ್ಚರವಾಗಿರಬೇಕು. ಅಂಥ ವಿವೇಕ ಎಲ್ಲಿಂದ ಬಂದರೂ ನಾವು ಸ್ವೀಕ ರಿಸಬೇಕು. ಏಕೆಂದರೆ ಜ್ಞಾನ ಎನ್ನುವುದು ದೇಶ–ಕಾಲಗಳನ್ನು ಮೀರಿದ ತತ್ತ್ವ ಎನ್ನುವುದು ವೇದದ ಕೇಂದ್ರವಿಷಯ.

ಅದು ಸರಿ. ಆದರೆ ಎಷ್ಟೆಲ್ಲ ಅರಿವನ್ನು ವೇದ ಕೊಡಬಲ್ಲದು? ವೇದದಲ್ಲಿರುವ ಅರಿವಿನ ಪ್ರಮಾಣ ಎಷ್ಟು? ಎಂದರೆ, ವೇದದಲ್ಲಿರುವ ಜ್ಞಾನ ಎಷ್ಟು ಅಥವಾ ಎಲ್ಲ ಜ್ಞಾನವೂ ವೇದದಲ್ಲಿದೆಯೆ? 

‘ಅನಂತಾ ವೈ ವೇದಾಃ’. ಈ ಒಕ್ಕಣೆ ವೇದದಭಾಗವೇ ಆಗಿರುವ ಬ್ರಾಹ್ಮಣಗ್ರಂಥದಲ್ಲಿ ಬರುತ್ತದೆ. (ಇಲ್ಲಿ ‘ಬ್ರಾಹ್ಮಣ’ ಎನ್ನುವುದು ಜಾತಿಯನ್ನೋ ವರ್ಣವನ್ನೋ ಸೂಚಿಸುವಂಥದ್ದಲ್ಲ; ಅದು ವೇದದ ಒಂದು ವಿಭಾಗ. ಅದನ್ನು ಮುಂದೆ ನೋಡೋಣ.) ತೈತ್ತಿರೀಯ ಬ್ರಾಹ್ಮಣದಲ್ಲಿ ಈ ಮಾತು ಬಂದಿರುವ ಸಂದರ್ಭವೂ ಸ್ವಾರಸ್ಯಕರವಾಗಿದೆ. ಕಥೆಯ ರೂಪದಲ್ಲಿದೆ ಆ ಸಂದರ್ಭ.

ಮಹರ್ಷಿ ಭರದ್ವಾಜರು ಅವರ ಆಯಸ್ಸಿನ ಮುಕ್ಕಾಲು ಭಾಗ ಗುರುಕುಲದಲ್ಲಿಯೇ ಇದ್ದರು. ಅಷ್ಟು ಕಾಲವೂ ವೇದವನ್ನು ಅಧ್ಯಯನ ಮಾಡಿ, ಹಣ್ಣು ಹಣ್ಣು ಮುದುಕರಾದರು. ಮುಪ್ಪಿನಿಂದ ನಿತ್ರಾಣಗೊಂಡಿದ್ದ ಅವರಲ್ಲಿಗೆ ಒಮ್ಮೆ ಇಂದ್ರ ಬಂದ. ‘ಮಹರ್ಷಿಗಳೇ! ನಿಮ್ಮ ಆಯಸ್ಸಿನ ನಾಲ್ಕನೇ ಭಾಗವನ್ನೂ ನಿಮಗೆ ಕೊಡುವೆ. ಆಗ ನೀವು ಏನು ಮಾಡುತ್ತೀರಿ?’ ಎಂದು ಕೇಳಿದ. ಆಗ ಮಹರ್ಷಿಗಳು, ‘ವೇದಾಧ್ಯಯನವನ್ನು ಮುಂದುವರೆಸುವೆ; ಪೂರ್ಣವಾಗಿ ವೇದವನ್ನು ತಿಳಿಯುವುದೇ ನನ್ನ ಬಯಕೆ’ ಎನ್ನುತ್ತಾರೆ. ಆಗ ಇಂದ್ರ ಮೂರು ವೇದಪರ್ವತಗಳನ್ನು ಸೃಷ್ಟಿಸುತ್ತಾನೆ. ಅವುಗಳಿಂದ ತಲಾ ಒಂದೊಂದು ಹಿಡಿ ಮಣ್ಣನ್ನು ತೆಗೆದುಕೊಂಡ. ‘ಮಹರ್ಷಿಗಳೇ! ಈಗ ನೀವು ನೀವು ಕಲಿತಿರುವ ವೇದದ ಪ್ರಮಾಣ ಈ ಮುಷ್ಟಿಯಲ್ಲಿರುವ ಮಣ್ಣಿನಷ್ಟು ಮಾತ್ರವೇ; ಉಳಿದಿರುವುದು ಆ ಪರ್ವತಗಳಷ್ಟು. ವೇದಗಳು ಅನಂತ; ಅವು ಎಂದಿಗೂಮುಗಿಯದ ಜ್ಞಾನರಾಶಿ’ ಎನ್ನುತ್ತಾನೆ. ಕೊನೆಗೆಅವರಿಗೆ ಎಲ್ಲ ವೇದಗಳ ಸಾರವಾಗಿ ಸಾವಿತ್ರ
ಮಂತ್ರವನ್ನು ಉಪದೇಶಿಸುತ್ತಾನೆ.

ಇದು ಅಲ್ಲಿರುವ ಕಥೆ; ಧ್ವನಿಪೂರ್ಣವಾಗಿದೆ. ಜ್ಞಾನವನ್ನು ಗಾತ್ರದಲ್ಲಿ ಅಳೆಯುವುದಕ್ಕೆ ಸಾಧ್ಯವಿಲ್ಲ; ಅದರ ಗುಣವನ್ನು ಗ್ರಹಿಸಬಹುದಷ್ಟೆ. ಇಡಿಯ ಸಾಗರವನ್ನು ನಮ್ಮ ಬೊಗಸೆಯಲ್ಲಿ ಹಿಡಿಯಲಾರೆವು. ಆದರೆ ಸಾಗರದ ನೀರಿನ ಎಲ್ಲ ಗುಣಗಳೂ ನಮ್ಮ ಬೊಗಸೆಯ ನೀರಿನಲ್ಲೂ ಇರುತ್ತವೆ. ಗಾತ್ರದಲ್ಲಿ ದಕ್ಕದಿದ್ದರೂ ಗುಣದಲ್ಲಿ ಅದು ನಮಗೆ ಒಲಿದಿರುತ್ತದೆ. ಬೀಜವೊಂದರಲ್ಲಿ ಅನಂತ ಮರಗಳಿರುತ್ತವೆಯಲ್ಲವೆ? ಹೀಗಾಗಿಯೇ ಭರದ್ವಾಜರಿಗೆ ಇಂದ್ರನು ಎಲ್ಲ ವೇದದ ಸಾರವಾಗಿ ಒಂದು ಮಂತ್ರವನ್ನು ಉಪದೇಶಿಸಿದ್ದು.

ವೇದದ ಉದ್ದಕ್ಕೂ ಇಂಥ ನಿಲುವನ್ನೇ ಕಾಣುತ್ತೇವೆ. ‘ಇರುವ ಸತ್ಯ ಒಂದೇ, ಅದನ್ನು ತಿಳಿದವರು ಬೇರೆ ಬೇರೆ ಹೆಸರುಗಳಿಂದ ವ್ಯವಹರಿಸುತ್ತಾರೆ’ (ಏಕಂ ಸತ್‌ ವಿಪ್ರಾ ಬಹುದಾ ವದಂತಿ) – ಎನ್ನುವ ಪ್ರಸಿದ್ಧ ಮಾತು ವೇದದ್ದೇ ಹೌದು. ಜೀವನದ ಹಿತಕ್ಕೆ, ಏಳಿಗೆಗೆ ಒದಗುವ ಅರಿವನ್ನು ಪಡೆಯಲು ಇರುವ ದಾರಿಗಳು ಅಸಂಖ್ಯ ಎನ್ನುವುದು ವೇದವೇ ನೀಡುವ ವಿಶಾಲ ಜ್ಞಾನ. ಹೀಗೆ ಜೀವನ ಸಾರ್ಥಕತೆಗೆ ಒದಗುವ ಅರಿವಿನ ಬತ್ತದ ಚಿಲುಮೆಯೇ ವೇದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT