ದೇಶಕ್ಕೆ ಏಕೈಕ ಪದಕದ ’ಗೌರವ’

7

ದೇಶಕ್ಕೆ ಏಕೈಕ ಪದಕದ ’ಗೌರವ’

Published:
Updated:
ದೇಶಕ್ಕೆ ಏಕೈಕ ಪದಕದ ’ಗೌರವ’

ಹ್ಯಾಂಬರ್ಗ್‌: ಭಾರತದ ಗೌರವ್ ಬಿಧೂರಿ ಅವರು ವಿಶ್ವ ಭಾಕ್ಸಿಂಗ್ ಚಾಂಪಿಯನ್‌ಷಿಪ್‌ನ 56 ಕೆಜಿ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ಮರಳಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಅವರು ಗುರುವಾರ ರಾತ್ರಿ ನಡೆದ ಸೆಮಿಫೈನಲ್‌ ಬೌಟ್‌ನಲ್ಲಿ ಅಮೆರಿಕದ ಡ್ಯೂಕ್‌ ರಗಾನ್‌ ವಿರುದ್ಧ ಸೋತರು. ಇದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಈ ವರೆಗೆ ಭಾರತಕ್ಕೆ ಲಭಿಸಿದ ನಾಲ್ಕನೇ ಕಂಚು. ಈ ಹಿಂದೆ ವಿಜೇಂದರ್ ಸಿಂಗ್‌ (2009) ವಿಕಾಸ್ ಕೃಷ್ಣನ್‌ (2011) ಮತ್ತು ಶಿವ ಥಾಪ (2015) ಕಂಚಿನ ಪದಕ ಗೆದ್ದಿದ್ದರು.

‘ಆರಂಭದಲ್ಲಿ ಪಾಯಿಂಟ್ ಗಳಿಸಲು ಇಬ್ಬರೂ ಪರದಾಡಿದರು. ಮೊದಲ ಸುತ್ತಿನಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಬಾಕ್ಸರ್‌ಗಳು ದಾಳಿ ನಡೆಸುವ ಅವಕಾಶಕ್ಕಾಗಿ ಕಾದರು. ರಗಾನ್‌ ಹೆಚ್ಚು ಎಚ್ಚರಿಕೆಯಿಂದ ಮುನ್ನುಗ್ಗಿದರು. ಅವರು ಆಕ್ರಮಣಕ್ಕೆ ಇಳಿದಾಗ ಗೌರವ್ ಅವರು ಸಮರ್ಥವಾಗಿ ಪ್ರತಿದಾಳಿ ನಡೆಸಿದರು. ಆದರೆ ಪಾಯಿಂಟ್ ಬಿಟ್ಟುಕೊಡದ ರಗಾನ್‌ ಮೇಲುಗೈ ಸಾಧಿಸಿದರು.

ಎರಡನೇ ಸುತ್ತಿನಲ್ಲಿ ರೋಚಕ ಸ್ಪರ್ಧೆ ಕಂಡುಬಂತು. ಗೌರವ್‌  ಮೇಲುಗೈ ಸಾಧಿಸಿದ ಕಾರಣ ಅಮೆರಿಕ ಬಾಕ್ಸರ್‌ ರಕ್ಷಣೆಗೆ ಒತ್ತು ನೀಡಿದರು. ಅಷ್ಚರಲ್ಲಿ ಗೌರವ್‌ ಕೂಡ ಆಕ್ರಮಣವನ್ನು ಕೈಬಿಟ್ಟು ರಕ್ಷಣಾತ್ಮವಾಗಿ ಆಡಿದರು. ಆದರೆ ಅಂತಿಮವಾಗಿ ಗೆಲುವಿಗಾಗಿ ವಿಭಿನ್ನ ತಂತ್ರ ಹೆಣೆದ ರಗಾನ್‌ಗೆ ಉತ್ತರ ನೀಡಲು ಗೌರವ್‌ ವಿಫಲರಾದರು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ರಗಾನ್‌ ಇಂಗ್ಲೆಂಡ್‌ನ ಪೀಟರ್‌ ಮೆಕ್‌ಗ್ರೈಲ್‌ ಅವರನ್ನು ಎದುರಿಸುವರು.

‘ಫೈನಲ್‌ ಪ್ರವೇಶಿಸಲು ಸಾಧ್ಯವಾಗದೇ ಇದ್ದದ್ದು ನಿರಾಸೆ ತಂದಿದೆ. ಡ್ಯೂಕ್‌ ಅವರು ನಿರೀಕ್ಷೆಗೂ ಮೀರಿ ರಕ್ಷಣಾತ್ಮಕವಾಗಿ ಆಡಿದರು. ಹೀಗಾಗಿ ಆರಂಭದಲ್ಲಿ ನನಗೆ ಪಾಯಿಂಟ್ ಗಳಿಸಲು ಸಾಧ್ಯವಾಗಲಿಲ್ಲ. ನಂತರ ಸ್ಪರ್ಧೆಗೆ ಒಗ್ಗಿಕೊಂಡು ಹೋರಾಡಿದೆ’ ಎಂದು ಗೌರವ್‌ ಬಿಧೂರಿ ಸುದ್ದಿಸಂಸ್ಥೆಗೆ ತಿಳಿಸಿದರು.

ಭಾರತದ ಕೋಚ್‌ ಸಾಂಟಿಯೊ ನೀವಾ ಅವರು ಗೌರವ್‌ ಸಾಧನೆಯನ್ನು ಕೊಂಡಾಡಿದರು. ‘ಡ್ಯೂಕ್‌ಗೆ ಗೌರವ್ ಉತ್ತಮ ಪ್ರತಿಸ್ಪರ್ಧೆ ಒಡ್ಡಿದ್ದರು. ಆದರೆ ಫೈನಲ್‌ ಪ್ರವೇಶಿಸಲು ಅವರಿಗೆ ಅವಕಾಶ ದೊರೆಯಲಿಲ್ಲ’ ಎಂದು ಹೇಳಿದ ನೀವಾ ‘ಒಟ್ಟಿನಲ್ಲಿ ಈ ಬಾರಿ ಭಾರತ ಉತ್ತಮ ಸಾಧನೆ ಮಾಡಿದೆ. ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗಲಿದೆ’ ಎಂದರು.

ಚಾಂಪಿಯನ್‌ಷಿಪ್‌ನ 49 ಕೆಜಿ ವಿಭಾಗದಲ್ಲಿ ಅಮಿತ್ ಫಂಗಲ್‌ ಮತ್ತು 56 ಕೆಜಿ ವಿಭಾಗದಲ್ಲಿ ಕವಿಂದರ್ ಬಿಷ್ಟ್‌ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದರು.

ತೃಪ್ತಿ ತಂದ ಸಾಧನೆ

ಕೇವಲ ಏಕೈಕ ಪದಕ ಗೆದ್ದಿದ್ದರೂ ಈ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ಕೋಚ್‌ ಸ್ಯಾಂಟಿಯಾಗಿ ನೀವಾ ಹೇಳಿದ್ದಾರೆ. ಚೀನಾದಂಥ ಬಲಿಷ್ಠ ರಾಷ್ಟ್ರಗಳೇ ಪದಕ ಗೆಲ್ಲದೆ ಬರಿಗೈಯಲ್ಲಿ ವಾಪಸಾಗಿರುವುದರಿಂದ ಭಾರತದ ಸಾಧನೆ ತೃಪ್ತಿಕರ ಎಂಬುದು ಅವರ ವಾದ.

‘ರಷ್ಯಾ ಮತ್ತು ಉಕ್ರೇನ್‌ನಂಥ ರಾಷ್ಟ್ರಗಳ ಬಾಕ್ಸರ್‌ಗಳಿಗೆ ಭಾರತ ಪ್ರಬಲ ಸ್ಪರ್ಧೆ ಒಡ್ಡಿದ್ದು ಕೂಡ ಗಮನಾರ್ಹ ಅಂಶ. ನಾವು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೆವು. ಅವುಗಳ ಪೈಕಿ ಕೆಲವೊಂದನ್ನು ರಿಂಕ್‌ನಲ್ಲಿ ಜಾರಿಗೆ ತರಲು ಸಾಧ್ಯವಾಗಿದೆ. ಕೆಲವೊಂದು ಯೋಜನೆಗಳು ವಿಫಲಗೊಂಡಿವೆ. ಆದರೂ ಮುಂದಿನ ಹಾದಿಯಲ್ಲಿ ಹೊಸ ಹೆಜ್ಜೆ ಇರಿಸಲು ಇಲ್ಲಿನ ಅನುಭವ ಸಹಕಾರಿಯಾಗಲಿದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry