ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿತನದ ಹಕ್ಕು- ಅನುದಿನದ ಬದುಕನ್ನು ಪ್ರಭಾವಿಸುವ ಪರಿ

ಖಾಸಗಿತನದ ಹಕ್ಕು ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಸಾಧಕ–ಬಾಧಕ
Last Updated 1 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಾಗರಿಕರ ಖಾಸಗಿತನದ ಹಕ್ಕು ಸಂವಿಧಾನವೇ ಸಂರಕ್ಷಿಸಿರುವ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ನ ಒಂಬತ್ತು ಮಂದಿ ಸದಸ್ಯರ ವಿಶಾಲ ನ್ಯಾಯಪೀಠ ಆಗಸ್ಟ್ 24ರಂದು ನೀಡಿದ ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಲಾಗಿದೆ. ನಾಗರಿಕ ಹಕ್ಕುಗಳನ್ನು ಕುರಿತಾದ ಈ ತೀರ್ಪು, ಸಂವಿಧಾನವೆಂಬ ಸಂಪದ್ಭರಿತ ಗಣಿಯಿಂದ ಹೊರತೆಗೆದಿರುವ ವಿರಳ ವಜ್ರ ಎಂದೂ ತಜ್ಞರು- ವ್ಯಾಖ್ಯಾನಕಾರರು ಹೇಳಿದ್ದಾರೆ.

ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಿದ ಈ ತೀರ್ಪು ಸರ್ವಸಮ್ಮತಿಯದು. 547 ಪುಟಗಳಷ್ಟು ಉದ್ದದ್ದು. ಪುಟ್ಟಸ್ವಾಮಿ ಈ ಹಿಂದೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದವರು.

ಖಾಸಗಿತನದ ಹಕ್ಕು ನಾಗರಿಕನ ಮೂಲಭೂತ ಹಕ್ಕು ಅಲ್ಲ. ಸಂವಿಧಾನವು ಖಾಸಗಿತನದ ಹಕ್ಕನ್ನು ನಿರ್ದಿಷ್ಟವಾಗಿ ನಮೂದಿಸಿ, ಸಂರಕ್ಷಿಸಿಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ವಾದಿಸಿತ್ತು. ಈ ವಾದವನ್ನು ನ್ಯಾಯಪೀಠ ನಿರ್ಣಯಾತ್ಮಕವಾಗಿ ತಳ್ಳಿ ಹಾಕಿತು.

ಸಂವಿಧಾನದ 21ನೆಯ ವಿಧಿ ಜೀವಿಸುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ. ಈ ಹಕ್ಕಿನಲ್ಲೇ ಖಾಸಗಿತನದ ಹಕ್ಕು ಅಂತರ್ಗತವಾಗಿ ಬೆರೆತು ಹೋಗಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.

ಮುಂಬರುವ ದಿನಗಳಿಗೆ ಕಟ್ಟಿಕೊಟ್ಟಿರುವ ಸಾಂವಿಧಾನಿಕ ಚೌಕಟ್ಟು: ಈ ತೀರ್ಪು ಮುಂಬರುವ ಹಲವಾರು ವರ್ಷಗಳವರೆಗೆ ದೇಶದ ಸಾಂವಿಧಾನಿಕ ಮತ್ತು ಕಾನೂನು ನೆಲನೋಟದ ಮೇಲೆ ಭಾರೀ ಪರಿಣಾಮ ಉಂಟು ಮಾಡಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಭುತ್ವ ಇರಿಸುವ ಕಣ್ಗಾವಲು, ಆಧಾರಾಂಶಗಳ ಸಂಗ್ರಹ, ಆಧಾರಾಂಶಗಳ ಸಂರಕ್ಷಣೆ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು, ಆಹಾರ ನಿಷೇಧದ ಕಾನೂನು ಸಿಂಧುತ್ವ, ರೊಬೋಟ್ ತಂತ್ರಜ್ಞಾನದ ನಿಯಂತ್ರಣಕ್ಕೆ ಕಾನೂನು ಚೌಕಟ್ಟು ರಚನೆ, ಆಸ್ತಿ ಹಕ್ಕು ಕುರಿತು ಪುನರಾಲೋಚನೆ, ಹೆಣ್ಣು ದೇಹದ ಸ್ವಾಯತ್ತತೆ ಮುಂತಾದ ಹಲವು ಹತ್ತು ಸಂಗತಿಗಳ ಮೇಲೆ ಹೊಸ ಬೆಳಕನ್ನು ಚೆಲ್ಲಲಿದೆ.

ಖಾಸಗಿತನಕ್ಕೆ ಸಂಬಂಧಿಸಿದ ನಾನಾ ವಿಷಯಗಳು ನ್ಯಾಯಾಲಯಗಳ ಮೆಟ್ಟಿಲು ಹತ್ತಿದಾಗ ಅವುಗಳನ್ನು ಯಾವ ಬೆಳಕಿನಲ್ಲಿ ಚರ್ಚಿಸಿ ಇತ್ಯರ್ಥಗೊಳಿಸಬೇಕು ಎಂಬುದರ ಸಾಂವಿಧಾನಿಕ ಚೌಕಟ್ಟನ್ನು ಈ ತೀರ್ಪು ಕಟ್ಟಿಕೊಟ್ಟಿದೆ.

ಖಾಸಗಿತನದ ಹಕ್ಕು ವೈಚಾರಿಕ ಸ್ವಾತಂತ್ರ್ಯದ ಕೀಲಿ ಕೈ: ಖಾಸಗಿತನದ ಹಕ್ಕು ಇಲ್ಲದೆ ಹೋದರೆ ಜನತಂತ್ರ, ಘನತೆ ಹಾಗೂ ಸೋದರ ಭಾವದ ಮೂಲನೆಲೆಯಿಂದ ಚಿಮ್ಮುವ ವ್ಯಕ್ತಿಗತ ಸ್ವಯಂ-ವಿಕಾಸದ ಮಾತುಗಳು ಅರ್ಥಹೀನ. ಎಲ್ಲಾ ನಾಗರಿಕರವ್ಯಕ್ತಿತ್ವವನ್ನು ಗೌರವಿಸುವ ಮತ್ತು ನಾಗರಿಕ ತನ್ನನ್ನು ತಾನೇ ಕಂಡುಕೊಳ್ಳಲು ಹಾಗೂ ಕೃತಕತ್ಯತೆ ಸಾಧಿಸಲು ಮುಕ್ತ ವಾತಾವರಣ ಕಲ್ಪಿಸುವ ಬಾಧ್ಯತೆಯನ್ನು ಈ ತೀರ್ಪು ಭಾರತ ಒಕ್ಕೂಟದ ಮೇಲೆ ಹೇರುತ್ತದೆ. ಖಾಸಗಿತನವು ಘನತೆಯ ಒಂದು ರೂಪ ಮತ್ತು ಅದುವೇ ಸ್ವಾತಂತ್ರ್ಯದ ಉಪಘಟಕ ಹಾಗೂ ವೈಚಾರಿಕ ಸ್ವಾತಂತ್ರ್ಯಕ್ಕೆ ಕೀಲಿ ಕೈ.

ಖಾಸಗಿತನದ ಹಕ್ಕನ್ನು ಮೊಟಕುಗೊಳಿಸುವುದು ಸುಲಭ ಅಲ್ಲ: ಖಾಸಗಿತನದ ಈ ಮೂಲಭೂತ ಹಕ್ಕನ್ನು ಪ್ರಭುತ್ವವು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕಾಗಿ ಮೊಟಕುಗೊಳಿಸಬಹುದು. ಆದರೆ ಅದಕ್ಕಾಗಿ ಕಾನೂನು ತರಬೇಕು. ಈ ಕಾನೂನು ನ್ಯಾಯಾಲಯಗಳಲ್ಲಿ ಪುನಃ ಸಂವಿಧಾನದ ಸಿಂಧುತ್ವದ ಪರೀಕ್ಷೆಗೆ ಗುರಿಯಾಗಲೇಬೇಕು.

‘ಅದರ ಪಾಡಿಗೆ ಅದನ್ನು ಉಳಿಸಬೇಕಿರುವ ಖಾಸಗಿ ಆವರಣವನ್ನು ಕಾಯ್ದಿರಿಸುವುದೇ’ ಖಾಸಗಿತನದ ಹಕ್ಕು ಎಂದು ತೀರ್ಪು ಹೇಳಿದೆ.

ಮಾಹಿತಿಯ ಗಣಿಗಾರಿಕೆ- ವ್ಯಕ್ತಿಸ್ವಾತಂತ್ರ್ಯಕ್ಕೆ ಪೆಟ್ಟು: ಆಧಾರಾಂಶಗಳು ಅಥವಾ ಮಾಹಿತಿಯ ಗಣಿಗಾರಿಕೆಯಿಂದಾಗಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಬೀಳಬಹುದು. ಅದಕ್ಕಾಗಿ ಆಧಾರಾಂಶವನ್ನು ರಕ್ಷಿಸುವ ಕಾನೂನಿನ ಅಗತ್ಯವಿದೆ. ಖಾಸಗಿತನದ ಮೂಲಭೂತ ಹಕ್ಕು ಮತ್ತು ದೇಶದ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವಂತಹ ಕಾನೂನು ಬರಬೇಕಿದೆ. ನಾನಾ ಸೇವೆಗಳನ್ನು ಪಡೆಯಲು ಆಧಾರ್ ಗುರುತು ಸಂಖ್ಯೆಗಳನ್ನು ಕಡ್ಡಾಯ ಮಾಡುವ ವ್ಯವಸ್ಥೆಯ ಮೇಲೆ ಈ ತೀರ್ಪು ಭಾರೀ ಪರಿಣಾಮ ಉಂಟು ಮಾಡಲಿದೆ. ಆಧಾರಾಂಶ ಅಥವಾ ಮಾಹಿತಿ ಸಂರಕ್ಷಣೆ ಕಾನೂನು ಜಾರಿ ಮಾಡದೆ ಹೋದರೆ ಆಧಾರ್ ಕಡ್ಡಾಯವಾಗಿ ಉಳಿಯುವುದು ಕಷ್ಟ. ಈ ಅಂಶಗಳನ್ನು ನ್ಯಾಯಾಲಯ ಮುಂಬರುವ ದಿನಗಳಲ್ಲಿ ಇತ್ಯರ್ಥಗೊಳಿಸಲಿದೆ. ಅದರ ಅಡಿಪಾಯವೇ ಈ ತೀರ್ಪು.

ಬಹುತ್ವ ಗುರುತಿಸುವ ತೀರ್ಪು: ಕೌಟುಂಬಿಕ ಬದುಕಿನ ಪಾವಿತ್ರ್ಯ, ಮದುವೆ, ಮಕ್ಕಳ ಹೆರುವುದು, ಮನೆ, ಲೈಂಗಿಕಒಲವು ನಿಲುವುಗಳಂತಹ ವೈಯಕ್ತಿಕ ಆಪ್ತ ಸಂಬಂಧಗಳ ಸಂರಕ್ಷಣೆಯನ್ನು ಖಾಸಗಿತನ ಒಳಗೊಂಡಿದೆ. ತನ್ನ ಬದುಕಿನ ಬಹುಮುಖ್ಯ ವಿಷಯಗಳನ್ನು ಖುದ್ದು ನಿಯಂತ್ರಿಸಲು ವ್ಯಕ್ತಿಯೊಬ್ಬರು ಹೊಂದಿರುವ ಸಾಮರ್ಥ್ಯ ಮತ್ತು ವ್ಯಕ್ತಿಗತ ಸ್ವಾಯತ್ತತೆಯನ್ನು ಗುರುತಿಸಿ ಕಾಪಾಡುವುದೇ ಖಾಸಗಿತನ. ಖಾಸಗಿತನವು ನಮ್ಮ ಸಂಸ್ಕೃತಿಯ ವೈವಿಧ್ಯ
ವನ್ನು ಸಂರಕ್ಷಿಸುತ್ತದೆ ಮತ್ತು ಬಹುತ್ವವನ್ನು ಗುರುತಿಸುತ್ತದೆ. ವ್ಯಕ್ತಿಯೊಬ್ಬ ಸಾರ್ವಜನಿಕ ಆವರಣದಲ್ಲಿದ್ದ ಮಾತ್ರಕ್ಕೆ ಆತನ ಅಥವಾ ಆಕೆಯ ಖಾಸಗಿತನ ಕಳೆದು ಹೋಗುವುದಿಲ್ಲ ಅಥವಾ ಅದನ್ನು ಶರಣಾಗತಿ ಮಾಡಿದಂತಾಗುವುದಿಲ್ಲ.

ಖಾಸಗಿತನದ ಹಕ್ಕುಗಳು ಬಡವರಿಗೂ ಬೇಕು: ಖಾಸಗಿತನ ಎಂಬುದು ಪ್ರತಿಷ್ಠಿತರಿಗೆ ಸೀಮಿತವಾದುದಲ್ಲ ಎಂದು ತೀರ್ಪು ಸ್ಪಷ್ಟಪಡಿಸಿದೆ. ಪ್ರಭುತ್ವವು ಜಾರಿ ಮಾಡುವ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಬೇಕಿದ್ದರೆ ಖಾಸಗಿತನದ ಹಕ್ಕನ್ನು ಬಿಟ್ಟುಕೊಡಬೇಕು ಎಂಬ ಕೇಂದ್ರ ಸರ್ಕಾರದ ವಾದವನ್ನು ತೀರ್ಪು ತುಂಡರಿಸಿದೆ.

‘ಬಡವರಿಗೆ ಬೇಕಿರುವುದು ಆರ್ಥಿಕ ಯೋಗಕ್ಷೇಮವೇ ವಿನಾ ನಾಗರಿಕ ಮತ್ತು ರಾಜಕೀಯ ಹಕ್ಕುಗಳಲ್ಲ ಎಂಬ ವಾದವನ್ನು ಮಾನವ ಹಕ್ಕುಗಳ ಕಡು ಕೆಟ್ಟ ಉಲ್ಲಂಘನೆಗಳಿಗಾಗಿ ಇತಿಹಾಸದ ಉದ್ದಕ್ಕೂ ದುರುಪಯೋಗ ಮಾಡುತ್ತ ಬರಲಾಗಿದೆ. ಸಾಮಾಜಿಕ- ಆರ್ಥಿಕ ಕಲ್ಯಾಣ ಯೋಜನೆಗಳ ಜಾರಿಯೂ ಸೇರಿದಂತೆ ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಆಳುವವರು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಇಲ್ಲವೇ ಎಂದು ಪ್ರಶ್ನಿಸುವ ಹಕ್ಕು ಆಳಿಸಿಕೊಳ್ಳುವವರಿಗೆ ಇದೆ. ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಸಾಮಾಜಿಕ- ಆರ್ಥಿಕ ಹಕ್ಕುಗಳಿಗೆ ಅಡಿಯಾಳು ಎಂಬ ವಾದವನ್ನು ಇದೇ ನ್ಯಾಯಾಲಯ ಖಂಡತುಂಡವಾಗಿ ತಿರಸ್ಕರಿಸಿದೆ’.

ಅಭಿವೃದ್ಧಿ ಮತ್ತು ಸ್ವಾತಂತ್ರ್ಯದ ನಡುವೆ ಅವಿನಾಭಾವ ಸಂಬಂಧವಿದೆ ಎಂದಿರುವ ತೀರ್ಪು ‘ಅಭಿವೃದ್ಧಿ ಎಂಬುದು ಒಂದು ಅರ್ಥದಲ್ಲಿ ಜನಸಮುದಾಯಗಳ ಸ್ವಾತಂತ್ರ್ಯದ ವಿಸ್ತರಣೆ’ ಎಂಬಂಥ ಅರ್ಥಶಾಸ್ತ್ರಜ್ಞ ಪ್ರೊ. ಅಮರ್ತ್ಯ ಸೇನ್ ಅವರ ಮಾತನ್ನು ಉಲ್ಲೇಖಿಸಿದೆ.

ವೈವಾಹಿಕ ಅತ್ಯಾಚಾರಕ್ಕೆ ಈ ತೀರ್ಪು ಮರಣಶಾಸನ: ಪುರುಷನೊಬ್ಬ ತನ್ನ ಪತ್ನಿಯೊಡನೆ ಸಂಭೋಗ ಕ್ರಿಯೆ ನಡೆಸಿದರೆ ಮತ್ತು ಪತ್ನಿಯ ವಯಸ್ಸು 15 ವರ್ಷ ಮೀರಿದ್ದರೆ ಅದು ಅತ್ಯಾಚಾರ ಅಲ್ಲ ಎನ್ನುತ್ತದೆ ಭಾರತೀಯ ದಂಡ ಸಂಹಿತೆಯ 375ನೆಯ ಸೆಕ್ಷನ್. ಆದರೆ ಖಾಸಗಿತನಕ್ಕೆ ಸಂಬಂಧಿಸಿದ ತೀರ್ಪು ದಂಡ ಸಂಹಿತೆಯ ಈ ಸೆಕ್ಷನ್ ಅನ್ನು ಕೊನೆಗಾಣಿಸಲಿದೆ. ತೀರ್ಪಿನ ಪ್ರಕಾರ ಮಹಿಳೆಯ ದೇಹದ ಮೇಲೆ ಆಕೆಯ ಹಕ್ಕು ಖಾಸಗಿತನದ ಹಕ್ಕಿನ ಅಡಿ ಬಂದು ಮೂಲಭೂತ ಹಕ್ಕು ಆಗಲಿದೆ. ಪತ್ನಿಯ ದೇಹವನ್ನು ಉಲ್ಲಂಘಿಸುವ ಹಕ್ಕು ಪತಿಗೂ ಇರುವುದಿಲ್ಲ. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಕೂಡದು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ದೆಹಲಿ ಹೈಕೋರ್ಟ್ಮುಂದೆ ಪ್ರಮಾಣಪತ್ರ ಸಲ್ಲಿಸಿದೆ. ದೆಹಲಿ ಹೈಕೋರ್ಟ್ ಮುಂದೆ ನಡೆಯುತ್ತಿರುವ ಈ ಮೊಕದ್ದಮೆ ಖಾಸಗಿತನದ ಹಕ್ಕು ಕುರಿತ ತೀರ್ಪಿನ ಬೆಳಕಿನಲ್ಲೇಇತ್ಯರ್ಥ ಆಗಬೇಕಿದೆ.

ಬಯಸಿದ್ದನ್ನು ತೊಡಬಹುದು, ಇಷ್ಟಪಟ್ಟ ಆಹಾರ ತಿನ್ನಬಹುದು...: ಬಯಸಿದ್ದನ್ನು ತೊಡುವ, ಇಷ್ಟಪಟ್ಟಿದ್ದನ್ನು ತಿನ್ನುವ ಹಾಗೂ ಬೇಕಾದಲ್ಲಿ ವಾಸಿಸುವ ಹಕ್ಕುಗಳು ಈ ತೀರ್ಪಿನಿಂದಾಗಿ ನಾಗರಿಕರಿಗೆ ಲಭಿಸಲಿವೆ. ತಾವೇನು ತಿನ್ನುತ್ತಿದ್ದೇವೆ, ತಾವು ಹೇಗೆ ಬಟ್ಟೆ ಧರಿಸುತ್ತಿದ್ದೇವೆ, ತಾವು ತಮ್ಮ ವೈಯಕ್ತಿಕ ಬದುಕಿನಲ್ಲಾಗಲೀ ಸಾಮಾಜಿಕ ಇಲ್ಲವೇ ರಾಜಕೀಯ ಬದುಕಿನಲ್ಲಾಗಲೀ ಯಾರೊಂದಿಗೆ ಸ್ನೇಹ ಸಂಬಂಧ ಇಟ್ಟುಕೊಳ್ಳುತ್ತಿದ್ದೇವೆ ಎಂಬುದನ್ನು ಪ್ರಭುತ್ವ ನಿರ್ಧರಿಸಬೇಕೆಂದು ಈ ದೇಶದ ನಾಗರಿಕರು ಯಾರೂ ಬಯಸುವುದಿಲ್ಲ. ತಮ್ಮ ಅನುಮತಿಯಿಲ್ಲದೆ ತಮ್ಮ ಮನೆ ಅಥವಾ ಆಸ್ತಿಪಾಸ್ತಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಇಲ್ಲವೇ ಸೇನೆಯಯೋಧರು ಅತಿಕ್ರಮಿಸುವುದನ್ನು ಯಾವ ನಾಗರಿಕರೂ ಇಷ್ಟಪಡುವುದಿಲ್ಲ.

‘ಬೀಫ್‌’ ಸೇವನೆ ನಿಷೇಧದ ಭವಿಷ್ಯವೇನು?: ನಿಷೇಧದ ಹಾಲಿ ಕಾನೂನುಗಳು ತಮ್ಮ ಖಾಸಗಿತನದ ಹಕ್ಕು ಮತ್ತು ಆಹಾರದ ಆಯ್ಕೆಯನ್ನು ನಿರ್ಬಂಧಿಸಿವೆ ಎಂದು ಯಾರು ಬೇಕಾದರೂ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಸಂವಿಧಾನದ 19 ಮತ್ತು 21ನೆಯ ವಿಧಿಗಳನ್ನು ಅಕ್ಕಪಕ್ಕದಲ್ಲಿಟ್ಟು ಓದಿದಾಗ... ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು, ಉಡುಪನ್ನು ಹೇಗೆ ಧರಿಸಬೇಕು, ಯಾವ ಧರ್ಮವನ್ನು ಆಚರಿಸಬೇಕು ಎಂಬ ಆಯ್ಕೆಗಳನ್ನು ಖಾಸಗಿ ಮನೋ ಆವರಣದಲ್ಲಿ ಧ್ಯಾನಿಸಿ ಮಾಡಲು, ಆದ್ಯತೆಗಳನ್ನು ನಿರ್ಧರಿಸಲು ಈ ವಿಧಿಗಳು ಸ್ವಾತಂತ್ರ್ಯ ನೀಡುತ್ತವೆ. ಖಾಸಗಿತನ ಎಂಬುದು ವ್ಯಕ್ತಿ ಪಾವಿತ್ರ್ಯದ ಕಟ್ಟಕಡೆಯ ಅಭಿವ್ಯಕ್ತಿ ಎಂದು ತೀರ್ಪು ಹೇಳಿದೆ.

‘ಆಧಾರ್’ ಉಳಿಯುತ್ತದೆಯೇ?: ಆಧಾರ್ ಯೋಜನೆಯನ್ನು ಪ್ರಶ್ನಿಸಿರುವ ಮತ್ತೊಂದು ಪ್ರತ್ಯೇಕ ಮೊಕದ್ದಮೆಯ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಇನ್ನೂ ನಡೆದಿದೆ. ಖಾಸಗಿತನವನ್ನು ಎತ್ತಿ ಹಿಡಿದು ಕಾಪಾಡಿರುವ ಈ ತೀರ್ಪು, ಆಧಾರ್ ಮೊಕದ್ದಮೆಯ ಮೇಲೆ ದಟ್ಟ ಪರಿಣಾಮ ಬೀರಲಿದೆ.

ಐವರು ಸದಸ್ಯರ ಸುಪ್ರೀಂ ಕೋರ್ಟ್ ನ್ಯಾಯಪೀಠ, ಆಧಾರ್ ಊರ್ಜಿತವೇ ಅಲ್ಲವೇ ಎಂಬುದನ್ನು ಮುಂಬರುವ ದಿನಗಳಲ್ಲಿ ತೀರ್ಮಾನಿಸಲಿದೆ. ಹೊಸ ಮಾರ್ಗಸೂಚಿಗಳ ಜೊತೆಗೆ ಆಧಾರ್ ಉಳಿಯಲಿದೆ ಎಂಬ ನಿರೀಕ್ಷೆ ಇದೆ.

ಇಂತಹುದೊಂದು ಐತಿಹಾಸಿಕ ತೀರ್ಪು ಬರುವ ಸನ್ನಿವೇಶವನ್ನು ಸೃಷ್ಟಿಸಿದ್ದೇ ಆಧಾರ್ ಯೋಜನೆ. ಆಧಾರ್ ನೋಂದಣಿ ಕಡ್ಡಾಯ ಇಲ್ಲ ಎಂದು ಮಾತಿನಲ್ಲಿ ಹೇಳುತ್ತಲೇ ಕೃತಿಯಲ್ಲಿ ಕಡ್ಡಾಯ ಮಾಡುವ ಎಲ್ಲ ಕ್ರಮಗಳನ್ನು ಜರುಗಿಸಿದ ಕೇಂದ್ರ ಸರ್ಕಾರದ ನಡೆ ವಿವಾದ ಹುಟ್ಟಿಸಿತ್ತು. ಬೆರಳಚ್ಚುಗಳು, ಅಕ್ಷಿಪಟಲ ಅಚ್ಚುಗಳಂತಹ ಬಯೊಮೆಟ್ರಿಕ್‌ ವಿವರಗಳನ್ನು ಆಧಾರ್ ಅಡಿ ಸಂಗ್ರಹಿಸಲಾಗುತ್ತಿದೆ. ವಿಶ್ವದ ಅತಿದೊಡ್ಡ ಮಾಹಿತಿ ಭಂಡಾರವೇ ಸೃಷ್ಟಿಯಾಗಿದೆ. ಇಂತಹ ವಿವರಗಳ ಕಡ್ಡಾಯ ಸಂಗ್ರಹ ಮತ್ತು ಆಧಾರ್ ಜಾರಿಯ ಮೇಲೆ ಖಾಸಗಿತನದ ಈ ತೀರ್ಪು ಭಾರೀ ಪ್ರಭಾವ ಉಂಟು ಮಾಡಲಿದ್ದು, ಹೊಸ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.

‘ಈ ವ್ಯವಸ್ಥೆಯಿಂದ ಹೊರಗೆ ಉಳಿಯುವ ಆಯ್ಕೆ ಜನರಿಗೆ ಇರಬೇಕು. ಈ ತೀರ್ಪಿನ ನಂತರ ಆಧಾರ್ ಕಡ್ಡಾಯ ಅಲ್ಲ ಎಂದು ಕೇಂದ್ರ ಸರ್ಕಾರ ಸಾರಬೇಕೆಂದು ನಿರೀಕ್ಷಿಸುವೆ’ ಎನ್ನುತ್ತಾರೆ ಅರ್ಜಿದಾರರಲ್ಲಿ ಒಬ್ಬರಾದ ಅರುಣಾ ರಾಯ್.

ಆಧಾರಾಂಶ ಗಣಿಗಾರಿಕೆ ಮತ್ತು ಖಾಸಗಿತನದ ಹಕ್ಕು: ಅರ್ಥವ್ಯವಸ್ಥೆ ಹೆಚ್ಚು ಹೆಚ್ಚು ಡಿಜಿಟಲ್ ಸ್ವರೂಪ ಪಡೆದುಕೊಳ್ಳುತ್ತಿರುವ ದಿನಗಳಿವು. ಹಾಗೆಯೇ ಸಾಮಾಜಿಕ ಮಾಧ್ಯಮಗಳು, ಆನ್ ಲೈನ್ ವಾಣಿಜ್ಯ ಕಂಪೆನಿಗಳ ವ್ಯವಹಾರಗಳ ವ್ಯಾಪ್ತಿ ವಿಸ್ತಾರವಾಗಿ ಬೆಳೆಯುತ್ತಿವೆ. ನಾಗರಿಕರು ದಿನನಿತ್ಯ ವ್ಯವಹಾರಗಳಲ್ಲಿ ನಾನಾ ಡಿಜಿಟಲ್ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುವ ವ್ಯಕ್ತಿಗತ ಆಧಾರಾಂಶಗಳು ಕಳವಿಗೆ ಕನ್ನಕ್ಕೆ ಸಿಗದಂತೆ ರಕ್ಷಿಸಲು ಬಲಿಷ್ಠ ಭದ್ರತಾ
ಕ್ರಮಗಳನ್ನು ರೂಪಿಸುವಂತೆ ತೀರ್ಪಿನಲ್ಲಿ ಸೂಚಿಸಲಾಗಿದೆ. ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಸಂತಾನೋತ್ಪತ್ತಿ ಹಕ್ಕು- ಹೆಣ್ಣು ದೇಹದ ಸ್ವಾಯತ್ತತೆ: ಖಾಸಗಿತನದ ಹಕ್ಕಿನಂತೆ ಸಂತಾನೋತ್ಪತ್ತಿ ಹಕ್ಕನ್ನು ಸಂವಿಧಾನದಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಿಲ್ಲ. ಆದರೆ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕಿನ ನೆರಳಲ್ಲಿ ಸಂತಾನೋತ್ಪತ್ತಿ ಹಕ್ಕು ಕೂಡ ಅಸ್ತಿತ್ವದಲ್ಲಿದೆ ಎಂದು ತೀರ್ಪು ಸಾರಿ ಹೇಳಿದೆ. ತನ್ನ ದೇಹದ ಮೇಲೆ ತನ್ನ ಹಕ್ಕಿದೆ ಎಂದು ಮಹಿಳೆ ಪ್ರತಿಪಾದಿಸಬಹುದು. ಮಗುವನ್ನು ಹೆರುವುದು ಇಲ್ಲವೇ ಗರ್ಭಪಾತ ಆರಿಸಿಕೊಳ್ಳುವುದು ಮಹಿಳೆಗೆ ಬಿಟ್ಟ ವಿಷಯ ಆಗಲಿದೆ.

ಖಾಸಗಿತನ ಎಂಬುದು ದೇಹ, ಮನಸು ಹಾಗೂ ಅತ್ಯಾಪ್ತ ಆಯ್ಕೆಗಳನ್ನು ಒಳಗೊಂಡಂತಹುದು. ಘನತೆ, ಸ್ವಾಯತ್ತತೆ, ಸ್ವಾತಂತ್ರ್ಯಗಳ ತಿರುಳಿನಲ್ಲಿ ನೆಲೆಸಿರುವಂತಹುದು ಖಾಸಗಿತನ. ಮಾತು, ಸಂಗ, ಚಲನವಲನ, ವ್ಯಕ್ತಿಗತ ಸ್ವಾತಂತ್ರ್ಯ, ಆತ್ಮಸಾಕ್ಷಿಯ ಸ್ವಾತಂತ್ರ್ಯಗಳಿಂದ ಅದನ್ನು ಬೇರ್ಪಡಿಸಲು ಬರುವುದಿಲ್ಲ.

ಗೂಗಲ್, ಫೇಸ್‌ಬುಕ್‌ ಇತ್ಯಾದಿಗಳಿಗೆ ಕಡಿವಾಣ: ಈಕಂಪೆನಿಗಳು ಪ್ರಾಯಶಃ ತಮ್ಮ ಸ್ವಂತ ದೇಶಗಳ ಸರ್ಕಾರಗಳು ಹೊಂದಿರುವುದಕ್ಕಿಂತ ಹೆಚ್ಚು ಆಧಾರಾಂಶ ಮತ್ತು ಮಾಹಿತಿಯನ್ನು ಹೊಂದಿವೆ. ಇಂತಹ ಸರ್ಕಾರೇತರ ದೈತ್ಯ ಕಂಪೆನಿಗಳಿಗೆ ತಮ್ಮ ಗ್ರಾಹಕರ ಆಯ್ಕೆಗಳು, ಆದ್ಯತೆಗಳು, ಚಲನವಲನ, ಆಹಾರಪದ್ಧತಿ, ಖರೀದಿ ವಿವರ, ವಾಸಸ್ಥಾನ, ಆರೋಗ್ಯ ಅನಾರೋಗ್ಯ ಮುಂತಾದ ಮಾಹಿತಿಗಳು ತಿಳಿದಿವೆ. ಈ ವೈಯಕ್ತಿಕ ಡೇಟಾವನ್ನು ದುರುಪಯೋಗ ಮಾಡಿಕೊಳ್ಳದಂತೆ ತಡೆಯಬೇಕಿದೆ ಎಂದು ತೀರ್ಪು ತಾಕೀತು ಮಾಡಿದೆ.

ದಯಾಮಾರಣ ಇನ್ನು ದೂರವಿಲ್ಲ: ಹಾಸಿಗೆ ಹಿಡಿದ ವ್ಯಕ್ತಿ ತನ್ನ ಇಚ್ಛೆಗೆ ವಿರುದ್ಧವಾಗಿ ಬದುಕುಳಿದು ಯಾತನೆ ಅನುಭವಿಸುವ ಅಗತ್ಯ ಇರದು. ಪ್ರಾಣ ತೊರೆಯುವ ಇಚ್ಛೆಯೂ ಖಾಸಗಿತನದ ಹಕ್ಕಿನ ವಲಯಕ್ಕೆ ಸೇರುತ್ತದೆ. ಆತನ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿ ಬದುಕಿರುವಂತೆ ಪ್ರಭುತ್ವ ನಿರ್ಬಂಧಿಸುವಂತಿಲ್ಲ.

ಖಾಸಗಿತನದ ಮೂಲಭೂತ ಹಕ್ಕುಅನಿರ್ಬಂಧಿತ ಅಲ್ಲ. ರಾಷ್ಟ್ರೀಯ ಭದ್ರತೆ, ಅಪರಾಧಗಳ ತಡೆ-ತನಿಖೆ, ಸಾರ್ವಜನಿಕ ಹಿತ, ಅರಿವಿನ ಪ್ರಸಾರದಂತಹ ವಿಷಯಗಳಿಗೆ ಖಾಸಗಿತನದ ಹಕ್ಕು ಅಧೀನ. ಈ ದಿಸೆಯಲ್ಲಿ ಸಕಾರಣ ನಿರ್ಬಂಧಗಳು ಜಾರಿಯಾಗಲಿವೆ.

ಖಾಸಗಿತನ ಕುರಿತ ಈ ತೀರ್ಪು ಸಂಭ್ರಮಿಸಲು ಲಾಯಕ್ಕಾದದ್ದು. ಖಾಸಗಿತನವನ್ನು ಬೀಳುಗಳೆಯುವ ಪ್ರಭುತ್ವದ ಎಲ್ಲ ಕ್ರಿಯೆಗಳಿಗೆ ಈ ತೀರ್ಪು ಅನ್ವಯ ಆದಾಗಲೇ ಈ ಸಂಭ್ರಮಕ್ಕೆ ಒಂದು ಅರ್ಥ ಬಂದೀತು.

ಎಲ್ಲ ಮೂಲಭೂತ ಹಕ್ಕುಗಳು ಸ್ವಚ್ಛಂದವೇನೂ ಅಲ್ಲ. ಸಕಾರಣ ನಿರ್ಬಂಧಗಳ ಗೆರೆಯನ್ನು ದಾಟುವಂತಿಲ್ಲ. ಸಕಾರಣ ನಿರ್ಬಂಧಗಳ ಹೆಸರಿನಲ್ಲಿ ಸರ್ಕಾರ ಈ ತೀರ್ಪಿನ ಆಶಯವನ್ನು ತೆಳುವಾಗಿಸದಂತೆ ನ್ಯಾಯಾಲಯಗಳು ಕಾಯಬೇಕಿದೆ.

ಲೈಂಗಿಕ ಅಲ್ಪಸಂಖ್ಯಾತರು ಕ್ರಿಮಿನಲ್‌ಗಳಲ್ಲ...

ಲೈಂಗಿಕ ಒಲವು–ನಿಲುವುಗಳು ಖಾಸಗಿತನದ ಹಕ್ಕಿನ ಭಾಗವೇ ಆಗಿರುವ ಕಾರಣ ಭಾರತೀಯ ದಂಡ ಸಂಹಿತೆಯಲ್ಲಿ 377ನೇಯ ಸೆಕ್ಷನ್‌ ಊರ್ಜಿತವಾಗಿ ಉಳಿಯುವುದು ಅಸಾಧ್ಯ. ಈ ಸಂಬಂಧ ಜಾನ್‌ ಪ್ರತಿಷ್ಠಾನದ ಅರ್ಜಿ ಕುರಿತು ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಇನ್ನು ಕ್ರಿಮಿನಲ್‌ ಕಳಂಕದಿಂದ ಅಳುಕಿಲ್ಲ. 

ಲೈಂಗಿಕ ಒಲವು–ನಿಲುವುಗಳು ಖಾಸಗಿ ವಿಚಾರಗಳು. ಲೈಂಗಿಕ ಒಲವು ನಿಲುವುಗಳ ಆಧಾರದ ಮೇಲೆ ಯಾವುದೇ ವ್ಯಕ್ತಿಯನ್ನು ತಾರತಮ್ಯದಿಂದ ನೋಡುವುದು ಆ ವ್ಯಕ್ತಿಯ ಘನತೆಗೆ ಚ್ಯುತಿ ತಂದಂತೆ. ಸಮಾಜದಲ್ಲಿನ ಇಂಥಹ ಪ್ರತಿಯೊಬ್ಬ ವ್ಯಕ್ತಿಗೆ ಸಮಾನ ವೇದಿಕೆಯ ಮೇಲೆ ರಕ್ಷಣೆ ಸಿಗಬೇಕು. ಖಾಸಗಿತನದ ಹಕ್ಕು ಮತ್ತು ಲೈಂಗಿಕ ಒಲವು ನಿಲುವುಗಳ ರಕ್ಷಣೆ ಪಡೆಯುವುದು ಸಂವಿಧಾನದ 14, 15 ಹಾಗೂ 21ನೆಯ ವಿಧಿಗಳ ಪ್ರಕಾರ ನಾಗರಿಕರ ಮೂಲಭೂತ ಹಕ್ಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT