6

ಈಗ: ಎಲ್ಲ ಕಾಲದ ವರ್ತಮಾನ

Published:
Updated:
ಈಗ: ಎಲ್ಲ ಕಾಲದ ವರ್ತಮಾನ

‘ರಾಮ’. ಇದೇ ನಾರದರು ವಾಲ್ಮೀಕಿಗಳಿಗೆ ಕೊಟ್ಟ ಉತ್ತರ.

‘ನೀವು ಹೇಳಿದ ಗುಣಗಳು ಬಹಳ. ಅವು ಒಬ್ಬನಲ್ಲಿ ದುರ್ಲಭ. ಆದರೂ ಅಂಥ ಗುಣವಂತನಾದ ಪುರುಷನೊಬ್ಬನಿದ್ದಾನೆ. ಅವನ ಬಗ್ಗೆ ಹೇಳುತ್ತೇನೆ; ಕೇಳೋಣವಾಗಲಿ’ ಎಂದು ರಾಮನ ಕಥೆಯನ್ನು ಹೇಳಲು ತೊಡಗಿದರು.

ವಾಲ್ಮೀಕಿಗಳ ಪ್ರಶ್ನೆಯಲ್ಲಿ ನಾವೊಂದು ವಿಶೇಷ ಅಂಶವನ್ನು ಇಲ್ಲಿ ಗಮನಿಸಲೇಬೇಕು. ‘ಗುಣವಂತನಾದ ವ್ಯಕ್ತಿ ಯಾರಿದ್ದಾನೆ’ ಎಂದಷ್ಟೆ ಅವರು ಪ್ರಶ್ನಿಸಲಿಲ್ಲ; ‘ಈಗ’ ಅಂಥವರು ಯಾರಿದ್ದಾರೆ – ಎನ್ನುವುದೇ ಅವರ ಪ್ರಶ್ನೆ. ‘ಈಗ’ (‘ಸಾಂಪ್ರತಂ’) ಎನ್ನುವುದಕ್ಕೆ ಇಲ್ಲಿ ಹೆಚ್ಚಿನ ಒತ್ತನ್ನು ಕೊಟ್ಟು ಇಡೀ ಸಂದರ್ಭವನ್ನು ವಿಶ್ಲೇಷಿಸಬೇಕೆನಿಸುತ್ತದೆ.

‘ಈಗ’ ಎಂದರೆ ಯಾವಾಗ? ವಾಲ್ಮೀಕಿಗಳ ಕಾಲದಲ್ಲಿ; ಅದು ರಾಮನ ಕಾಲವೂ ಹೌದು. ‘ರಾಮ’ನಂಥ ರಾಮನೇ ಇದ್ದ ಕಾಲದಲ್ಲೂ ಗುಣವಂತನ ಅನ್ವೇಷಣೆ ನಡೆದಿದೆ. ಇಂಥದೊಂದು ಹುಡುಕಾಟಕ್ಕೆ ಕಾರಣವಾದದ್ದು ಏನು? ಇದು ನಾವಿಲ್ಲಿ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆಯೇ ಹೌದು.

‘ಈಗ’ ಎಂದರೆ ಅದು ವಾಲ್ಮೀಕಿ ಅಥವಾ ರಾಮನ ಕಾಲ ಎನ್ನುವುದು ಸರಿ. ಆದರೆ ಅದು ಯಾವ ಕಾಲ? ರಾಮಾಯಣದ ಕಾಲ – ಎಂದು ಜಾರಿಕೆಯ ಉತ್ತರ ಕೊಡಲಾದೀತು! ಇಷ್ಟಕ್ಕೂ ರಾಮಾಯಣದ ಕಾಲ ಯಾವುದು?

ರಾಮಾಯಣ ನಡೆದದ್ದು ತ್ರೇತಾಯುಗದಲ್ಲಿ. ಇದು ಪರಂಪರೆಯಲ್ಲಿರುವ ಎಣಿಕೆ. ಯುಗಗಳು ನಾಲ್ಕು: ಕ್ರಮವಾಗಿ ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ನಾವಿರುವುದು ಕಲಿಯುಗದಲ್ಲಿ. ಈ ಒಂದೊಂದು ಯುಗದ ಕಾಲಪ್ರಮಾಣವೂ ಒಂದೊಂದು ತೆರನಾಗಿರು

ತ್ತದೆ. ಯುಗದ ಕಾಲಪ್ರಮಾಣದ ಎಣಿಕೆ ಹೀಗಿದೆ: ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನವಂತೆ; ಹೀಗಾಗಿ ಮನುಷ್ಯರ 360 ವರ್ಷಗಳು ಎಂದರೆ ದೇವತೆಗಳಿಗೆ ಅದು ಒಂದು ವರ್ಷ. ದೇವತೆಗಳ 1,200 ವರ್ಷಗಳು (4.32 ಲಕ್ಷ ಮಾನುಷವರ್ಷಗಳು) ಸೇರಿ ಕಲಿಯುಗವಾಗುತ್ತದೆ. 2,400 ದೇವವರ್ಷಗಳು (8.64 ಲಕ್ಷ ಮಾನುಷವರ್ಷಗಳು) ಸೇರಿ ದ್ವಾಪರಯುಗ; 3,600 ದೇವವರ್ಷಗಳು (12.96 ಲಕ್ಷ ಮಾನುಷವರ್ಷಗಳು) ತ್ರೇತಾಯುಗ ಎಂದೆನಿಸಿಕೊಳ್ಳುತ್ತದೆ; 4,800 ದೇವವರ್ಷಗಳು (17.28 ಲಕ್ಷ ಮಾನುಷವರ್ಷಗಳು) ಕೃತಯುಗದ ಪ್ರಮಾಣ. ನಾಲ್ಕು ಯುಗದ ಕಾಲವ್ಯಾಪ್ತಿ ಒಟ್ಟಾಗಿ 12,000 ದೇವವರ್ಷಗಳು (43.20 ಲಕ್ಷ ಮಾನುಷವರ್ಷಗಳು).

ಈ ನಾಲ್ಕು ಯುಗಗಳು ಕ್ರಮವಾಗಿ ಒಂದಾದ ಬಳಿಕ ಇನ್ನೊಂದರಂತೆ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಈ ಎಣಿಕೆ ‘ಮನ್ವಂತರ’, ‘ಕಲ್ಪ’ ಎಂದೆಲ್ಲ ಮುಂದುವರಿಯುತ್ತದೆ. ಯುಗಗಳ ಸಾಂಪ್ರದಾಯಿಕ ಎಣಿಕೆಯ ಪ್ರಕಾರ ಈ ವರ್ಷಕ್ಕೆ (ಎಂದರೆ 2017ಕ್ಕೆ) ರಾಮಾಯಣ ನಡೆದು ಎಂಟು ಲಕ್ಷದ ತೊಂಬತ್ತು ಸಾವಿರದ ಒಂದುನೂರ ಹದಿನೇಳು ವರ್ಷಗಳಾಗುತ್ತವೆ! ಅಷ್ಟು ವರ್ಷಗಳ ಹಿಂದೆಯೇ ತೋರಿಕೊಂಡ ಪ್ರಶ್ನೆ ‘ಈಗ ಒಳ್ಳೆಯವನು ಯಾರಾದರೂ ಇದ್ದಾರೆಯೆ?’

ಭಾರತೀಯರ ಕಾಲಪ್ರಜ್ಞೆಯ ಅನನ್ಯತೆಯನ್ನು ಯುಗಕಲ್ಪನೆಯಲ್ಲಿ ಕಾಣಬಹುದು. ಕಾಲದ ಅನಂತತೆಯನ್ನೂ ಅಗಾಧತೆಯನ್ನೂ ನಮ್ಮ ಪೂರ್ವಜರು ಸಾಕ್ಷಾತ್ಕರಿಸಿಕೊಂಡಿರುವ ವಿಧಾನವೂ ವಿಶೇಷವಾಗಿದೆ. ಕಾಲದ ಅನಂತತೆ ಎಂದರೆ ಅದು ಎಲ್ಲ ಯುಗದ ವರ್ತಮಾನವೇ ಆಗಿರುತ್ತದೆ. ‘Eternity is in love with the productions of time’. ಇದು ವಿಲಿಯಂ ಬ್ಲೇಕ್‌ನ ಮಾತು. ‘ಅನಂತತತ್ತ್ವಕ್ಕೆ ಕಾಲದ ಸೃಷ್ಟಿಶೀಲತೆಯೊಂದಿಗೆ ಪ್ರೀತಿ’. ಹೀಗಾಗಿ ‘ಈಗ’ ಎನ್ನುವುದು ‘ಎಲ್ಲ’ ಯುಗದ ವರ್ತಮಾನ, ಎಲ್ಲ ಕಾಲದ ‘ಸದ್ಯ’; ಅನಂತವೃತ್ತದ ಯಾವ ಬಿಂದುವೂ ‘ಈ ಕ್ಷಣ’ – ‘ಈಗ’ ಆಗಬಹುದು. ಪ್ರಾಚೀನ ವಾಙ್ಮಯದಲ್ಲಿ, ಎಂದರೆ ವೇದ–ಉಪನಿಷತ್ತುಗಳಲ್ಲಿ, ಆಗಾಗ ‘ಅಗ್ರೇ’ – ಮೊದಲಲ್ಲಿ – ಎಂಬ ಮಾತು ಕಾಣಿಸಿಕೊಳ್ಳುತ್ತದೆ. ‘ಮೊದಲಲ್ಲಿ’ ಎಂದರೆ ಏನು? ಇದು ಯಾವುದೋ ಘಟನಾಸರಣಿಯ ಮೊದಲು ಎಂದಲ್ಲ; ಕಾಲದ ಮೊದಲು ಎಂದೂ ಅಲ್ಲ. ಎಂದೂ ಇರುವ ಸದ್ಯದ ಸ್ಥಿತಿಯೇ ‘ಮೊದಲು’. ಇದನ್ನು ‘Ever-present now’ - ಎಂದಿದ್ದಾರೆ, ಆನಂದ ಕುಮಾರಸ್ವಾಮಿ. ಅಂತೆಯೇ ವಾಲ್ಮೀಕೀಕಾಲದ ‘ಈಗ’ – ಅದು ನಮ್ಮ ಕಾಲದ ‘ಈಗ’ ಕೂಡ ಹೌದು.

ಹೀಗಾಗಿ ವಾಲ್ಮೀಕಿಗಳ ಪ್ರಶ್ನೆ ಅದು ನಮ್ಮ ಕಾಲದ ಪ್ರಶ್ನೆಯೂ ಹೌದು. ರಾಮಾಯಣ ನಮಗೆ ಪ್ರಸ್ತುತವಾಗುವುದೇ ಈ ಕಾರಣದಿಂದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry