ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5.5 ಲಕ್ಷ ಕೋಟಿ ವೆಚ್ಚದಲ್ಲಿ 60 ನದಿಗಳ ಜೋಡಣೆ

Last Updated 1 ಸೆಪ್ಟೆಂಬರ್ 2017, 19:34 IST
ಅಕ್ಷರ ಗಾತ್ರ

ದಾಧನ್ (ಮಧ್ಯಪ್ರದೇಶ): ದೇಶದ 60 ನದಿಗಳನ್ನು ಜೋಡಿಸುವ ₹ 5.5 ಲಕ್ಷ ಕೋಟಿ ಮೊತ್ತದ ಹಲವು ಯೋಜನೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅಂತಿಮ ಹಂತದ ಸಿದ್ಧತೆ ನಡೆಸಿದೆ. ಯೋಜನೆಗಳಿಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಪ್ರವಾಹ ಮತ್ತು ಬರಕ್ಕೆ ಅಂತ್ಯ ಹಾಡುವುದೇ ಈ ಯೋಜನೆಗಳ ಪ್ರಮುಖ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರೇ ಯೋಜನೆಗಳ ಜಾರಿಗೆ ಮುತುವರ್ಜಿ ವಹಿಸಿದ್ದಾರೆ. ಹೀಗಾಗಿ ಬೇರೆ ಬೇರೆ ಇಲಾಖೆಗಳಿಂದ ಅಗತ್ಯ ಅನುಮತಿಗಳು ತೀರಾ ಕಡಿಮೆ ಅವಧಿಯಲ್ಲೇ ದೊರೆತಿವೆ. ಕೆಲವು ಯೋಜನೆಗಳ ಕಾಮಗಾರಿ ಈ ತಿಂಗಳ ಅಂತ್ಯದ ವೇಳೆಗೇ ಆರಂಭವಾಗುತ್ತದೆ’ ಎಂದು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಷ್ಟೂ ಯೋಜನೆಗಳಲ್ಲಿ ಗುಜರಾತ್‌ ಮತ್ತು ಮಹಾರಾಷ್ಟ್ರಗಳ ಪರತಾಪಿ ಮತ್ತು ನರ್ಮದಾ, ದಮನ್‌ಗಂಗಾ ಮತ್ತು ಪಿಂಜಾಲ್ ಹಾಗೂ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಹರಿಯುವ ಕರ್ನಾವತಿ–ಬೆತವಾ ನದಿಗಳ ಜೋಡಣೆ ಯೋಜನೆಗಳ ಮಾಹಿತಿ ಮಾತ್ರ ಲಭ್ಯವಾಗಿದೆ.

ಮೊದಲ ಹಂತದಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಯೋಜನೆಗಳ ಜಾರಿಗೆ ಆದ್ಯತೆ ನೀಡಲಾಗುತ್ತದೆ. ಫಲಾನುಭವಿ ರಾಜ್ಯಗಳಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಿದ್ದರೆ ನೀರು ಹಂಚಿಕೆ ಸಮಸ್ಯೆ ತಲೆದೋರುವುದಿಲ್ಲ ಎಂದು ಮೂಲಗಳು ಹೇಳಿವೆ.

ಜಲ ಸಂರಕ್ಷಣೆ ಮತ್ತು ಉತ್ತಮ ಬೇಸಾಯ ಪದ್ಧತಿಗಳನ್ನು ರೂಢಿಸಿಕೊಳ್ಳುವುದೇ ಬರ ನಿವಾರಣೆಗೆ ಅತ್ಯುತ್ತಮ ಪರಿಹಾರ. ನದಿ ಜೋಡಣೆಯಿಂದ ಪರಿಸರದ ಮೇಲೆ ವ್ಯಾಪಕ ದುಷ್ಪರಿಣಾಮ ಉಂಟಾಗುತ್ತದೆ ಎಂದು ಪರಿಸರವಾದಿಗಳು ಈ ಯೋಜನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾವತಿ–ಬೆತವಾ ಜೋಡನೆಗೆ ಆದ್ಯತೆ...

‘ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಹರಿಯುವ ಕರ್ನಾವತಿ ಮತ್ತು ಬೆತವಾ ನದಿಗಳ ಜೋಡಣೆ ಯೋಜನೆಗೆ ಎನ್‌ಡಿಎ ಸರ್ಕಾರ ಆದ್ಯತೆ ನೀಡುತ್ತಿದೆ. ಝಾನ್ಸಿ ಸಮೀಪ ಹರಿಯುವ ಬೆತವಾದಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ. ಆದರೆ ಕರ್ನಾವತಿಯಲ್ಲಿ ಮುಂಗಾರು ವೇಳೆಯಲ್ಲಿ ಪ್ರವಾಹ ಉಂಟಾಗುವಷ್ಟು ಹರಿವು ಇರುತ್ತದೆ. ಹೀಗಾಗಿ ನದಿಗೆ ದಾಧನ್ ಬಳಿ ಅಣೆಕಟ್ಟು ಕಟ್ಟಿ ಅಲ್ಲಿ ಸಂಗ್ರಹವಾಗವ ನೀರನ್ನು ಪಶ್ಚಿಮಾಭಿಮುಖವಾಗಿ ನಾಲೆಯ ಮೂಲಕ ಬೆತವಾ ನದಿಗೆ ಹರಿಸಲಾಗುತ್ತದೆ’ ಎಂದು ಜಲಸಂಪನ್ಮೂಲ ಸಚಿವಾಲಯ ಪ್ರಕಟಿಸಿರುವ ವಿಸ್ತೃತ ಯೋಜನಾ ವರದಿಯಲ್ಲಿ ವಿವರಿಸಿಲಾಗಿದೆ.

ಯೋಜನೆಯ ಪ್ರಮುಖಾಂಶಗಳು

* ಕರ್ನಾವತಿ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಪ್ರವಾಹ ಇಳಿಮುಖವಾಗಲಿದೆ

* ಅಣೆಕಟ್ಟಿನ ಬಳಿ ಎರಡು ಜಲವಿದ್ಯುತ್‌ ಉತ್ಪಾದಕ ಘಟಕಗಳನ್ನು ಸ್ಥಾಪಿಸಿ ಅವುಗಳ ಮೂಲಕ ವಾರ್ಷಿಕ 78 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ

* ಬೆತವಾ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿನ ಬರದ ಪರಿಸ್ಥಿತಿ ನಿವಾರಣೆಯಾಗುತ್ತದೆ

ಆಕ್ಷೇಪಗಳು

* ಮುಂಗಾರಿನಲ್ಲಿ ಮಾತ್ರ ಕರ್ನಾವತಿ ತುಂಬಿ ಹರಿಯುವುದರಿಂದ ಯೋಜನೆಗೆ ಭಾರಿ ವೆಚ್ಚ ಮಾಡುವುದು ಲಾಭದಾಯಕವಲ್ಲ

* ಹಿನ್ನೀರಿನಲ್ಲಿ ಭಾರಿ ವಿಸ್ತಾರವಾದ ಅರಣ್ಯಪ್ರದೇಶ, ಪನ್ನಾ ರಾಷ್ಟ್ರೀಯ ಉದ್ಯಾನದ ಶೇ 10ಕ್ಕೂ ಹೆಚ್ಚು ಭಾಗ ಮುಳುಗಡೆಯಾಗುತ್ತದೆ. ಇದು ಜೈವಿಕ ಅಸಮತೋಲನಕ್ಕೆ ಕಾರಣವಾಗುತ್ತದೆ

* ನಾಲೆ ನಿರ್ಮಿಸಲು ಭಾರಿ ಪ್ರಮಾಣದಲ್ಲಿ ಕಾಡನ್ನು ಕಡಿಯಬೇಕಾಗುತ್ತದೆ

* ಪನ್ನಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಗಳು ಮತ್ತು ಅಳಿವಿನಂಚಿನಲ್ಲಿವೆ ಎಂದು ಗುರುತಿಸಲಾಗಿರುವ ರಣಹದ್ದುಗಳು ಇವೆ. ಉದ್ಯಾನವನದ ಕೆಲಭಾಗ ಮುಳುಗಡೆಯಾಗುವುದರಿಂದ ಹುಲಿಗಳು ಮತ್ತು ರಣಹದ್ದುಗಳ ಆವಾಸ ನಾಶವಾಗುತ್ತದೆ

* ಕರ್ನಾವತಿ ನದಿಯು ಬೆತವಾಗಿಂತ 70 ಅಡಿಗಳಷ್ಟು ಕೆಳಮಟ್ಟದಲ್ಲಿ ಹರಿಯುತ್ತದೆ. ಹೀಗಾಗಿ ಕರ್ನಾವತಿಯಿಂದ ಬೆತವಾಗೆ ನೀರನ್ನು 70 ಅಡಿಗಳಷ್ಟು ಎತ್ತರಕ್ಕೆ ಪಂಪ್‌ ಮಾಡಬೇಕಾಗುತ್ತದೆ. ಯೋಜನೆಯಿಂದ ಲಭ್ಯವಾಗುವ 78 ಮೆಗಾವಾಟ್ ವಿದ್ಯುತ್‌ನಲ್ಲಿ ಶೇ 30ರಷ್ಟು ಇದಕ್ಕೇ ವೆಚ್ಚವಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT