ಭಾನುವಾರ, ನವೆಂಬರ್ 17, 2019
27 °C
ಮಿತ್ರಪಕ್ಷಗಳಿಗಿಲ್ಲ ಮಣೆ

ಮೋದಿ ಸಂಪುಟ ಪುನರ್‌ರಚನೆ 9 ಹೊಸಮುಖಗಳಿಗೆ ಅವಕಾಶ

Published:
Updated:
ಮೋದಿ ಸಂಪುಟ ಪುನರ್‌ರಚನೆ 9 ಹೊಸಮುಖಗಳಿಗೆ ಅವಕಾಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಭಾನುವಾರ ಪುನರ್‌ ರಚನೆಯಾಗಲಿದ್ದು, ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ಸೇರಿದಂತೆ ಒಂಬತ್ತು  ಹೊಸ ಮುಖಗಳಿಗೆ ಅಚ್ಚರಿ ಎಂಬಂತೆ ಸಚಿವ ಸ್ಥಾನದ ಅವಕಾಶ ದೊರೆತಿದೆ.

ಭಾರತೀಯ ವಿದೇಶ ಸೇವೆಯ (ಐಎಫ್‌ಎಸ್‌) ನಿವೃತ್ತ ಅಧಿಕಾರಿ, ಪಂಜಾಬ್‌ನ ಹರದೀಪ್‌ ಸಿಂಗ್ ಪುರಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ, ಕೇರಳದ ಅಲ್ಫೋನ್ಸ್ ಕಣ್ಣನ್ ದಾನಮ್ ಅವರು ಸಂಸತ್‌ ಸದಸ್ಯರಲ್ಲದಿದ್ದರೂ ಬಿಜೆಪಿ ವರಿಷ್ಠರು ಅವರಿಗೆ ಸ್ಥಾನ ನೀಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಅಣಿಯಾಗಲಿರುವ ಕರ್ನಾಟಕದಿಂದ ಒಬ್ಬ ಸಂಸದರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆಯಲಾಗಿದೆ. 9 ಹೊಸ ಮುಖಗಳಿಗೆ ರಾಜ್ಯ ಸಚಿವ ಖಾತೆ ಹಾಗೂ ಸ್ವತಂತ್ರ ಖಾತೆ ವಹಿಸುವ ಸಾಧ್ಯತೆ ಇದೆ.

ರಕ್ಷಣಾ ಖಾತೆ ಗೊಂದಲ: ಭಾನುವಾರ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿದ್ದರೂ, ರಕ್ಷಣಾ ಖಾತೆಯನ್ನು ಯಾರಿಗೆ ವಹಿಸಬೇಕು ಎಂಬ ಗೊಂದಲ ಶನಿವಾರ ರಾತ್ರಿಯವರೆಗೆ ಮುಂದುವರಿದಿತ್ತು.

ಮನೋಹರ ಪರಿಕ್ಕರ್‌ ರಾಜೀನಾಮೆ ನಂತರ ತೆರವಾದ ಮಹತ್ವದ ರಕ್ಷಣಾ ಖಾತೆಯನ್ನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದು, ಪುನರ್‌ ರಚನೆ ವೇಳೆ ಹಿರಿಯ ಸಚಿವರೊಬ್ಬರಿಗೆ ವಹಿಸುವ ನಿಟ್ಟಿನಲ್ಲಿ ವರಿಷ್ಠರು ಶನಿವಾರ ರಾತ್ರಿವರೆಗೆ ಮೂರು ಸುತ್ತಿನ ಮಾತುಕತೆ ನಡೆಸಿದರು.

ಹಿರಿಯ ಸಚಿವರಾದ ರಾಜನಾಥ ಸಿಂಗ್‌, ಸುಷ್ಮಾ ಸ್ವರಾಜ್‌, ನಿತಿನ್‌ ಗಡ್ಕರಿ, ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಸಭೆ ನಡೆಯಿತು. ಆದರೆ, ರಕ್ಷಣಾ ಖಾತೆಯ ಬಗ್ಗೆ ಅನೇಕರು ನಿರಾಸಕ್ತಿ ತಾಳುತ್ತಿರುವುದರಿಂದ ಗೊಂದಲ ಮುಂದುವರಿದಿದೆ ಎಂದು ತಿಳಿದುಬಂದಿದೆ.

‘ಹೆಚ್ಚುವರಿಯಾಗಿ ರಕ್ಷಣಾ ಖಾತೆ ನೀಡಿದರೆ ನಿರ್ವಹಿಸಲು ಸಿದ್ಧ’ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರಾದರೂ, ‘ಪೂರ್ಣ ಪ್ರಮಾಣದಲ್ಲಿ ರಕ್ಷಣಾ ಖಾತೆಯೊಂದನ್ನೇ ನಿರ್ವಹಿಸಬೇಕು’ ಎಂಬ ವರಿಷ್ಠರ ಸಲಹೆಯನ್ನು ಅವರು ತಳ್ಳಿ ಹಾಕಿದ್ದರಿಂದ ಗೊಂದಲ ಮುಂದುವರಿದಿದೆ.

ಮಥುರಾ ಪ್ರವಾಸದಿಂದ ಸಂಜೆ ದೆಹಲಿಗೆ ಮರಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಪ್ರಧಾನಿ ಮೋದಿ ಜೊತೆ ರಾತ್ರಿ 8ರಿಂದ 9ರವರೆಗೆ ಚರ್ಚೆ ನಡೆಸಿದ ಬಳಿಕ ಪುನರ್‌ ರಚನೆಯ ಕಸರತ್ತನ್ನು ಪೂರ್ಣಗೊಳಿಸಿದ್ದು, ಒಂಭತ್ತು ಜನರ ಹೆಸರನ್ನು ಅಂತಿಮಗೊಳಿಸಿದರು.

ಈಗಾಗಲೇ ಸಚಿವರಾದ ಉಮಾ ಭಾರತಿ, ಕಲರಾಜ್‌ ಮಿಶ್ರಾ, ಬಂಡಾರು ದತ್ತಾತ್ರೇಯ, ರಾಜೀವ್‌ ಪ್ರತಾಪ್‌ ರೂಡಿ ಸೇರಿದಂತೆ 7 ಸಚಿವರಿಂದ ರಾಜೀನಾಮೆ ಸ್ವೀಕರಿಸಿರುವ ಪ್ರಧಾನಿ, ಕೆಲವು ಸಚಿವರಿಗೆ ಬಡ್ತಿ ನೀಡುವ ಸಾಧ್ಯತೆ ಇದೆ.

ಜೆಡಿಯು ಸೇರಿದಂತೆ ಹಲವು ಮಿತ್ರಪಕ್ಷಗಳಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಈ ಬಾರಿ ಬಿಜೆಪಿ ಸಂಸದರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸಂಪುಟ ಸೇರಲಿರುವ ಪ್ರಮುಖರು

ಅನಂತಕುಮಾರ್‌ ಹೆಗಡೆ (ಉತ್ತರ ಕನ್ನಡ ಲೋಕಸಭೆ ಕ್ಷೇತ್ರ, ಕರ್ನಾಟಕ)

ಶಿವಪ್ರತಾಪ ಶುಕ್ಲಾ (ರಾಜ್ಯಸಭೆ ಸದಸ್ಯ, ಉತ್ತರ ಪ್ರದೇಶ)

ಅಶ್ವಿನಿಕುಮಾರ್ ಚೌಬೆ (ಬಕ್ಸರ್‌ ಲೋಕಸಭೆ ಕ್ಷೇತ್ರ, ಬಿಹಾರ)

ವೀರೇಂದ್ರಕುಮಾರ್ (ಟಿಕಮ್‌ಗಡ ಲೋಕಸಭೆ ಕ್ಷೇತ್ರ, ಮಧ್ಯಪ್ರದೇಶ)

ರಾಜಕುಮಾರ್ ಸಿಂಗ್ (ಅರಾ, ಲೋಕಸಭೆ ಕ್ಷೇತ್ರ, ಬಿಹಾರ)

ಹರದೀಪ್‌ ಸಿಂಗ್ ಪುರಿ (ನಿವೃತ್ತ ಐಎಫ್‌ಎಸ್‌ ಅಧಿಕಾರಿ, ಪಂಜಾಬ್‌)

ಗಜೇಂದ್ರ ಸಿಂಗ್ ಶೆಖಾವತ್‌ (ಜೋಧಪುರ, ಲೋಕಸಭೆ, ರಾಜಸ್ಥಾನ)

ಸತ್ಯಪಾಲ್‌ ಸಿಂಗ್ (ಬಾಗಪತ್, ಲೋಕಸಭೆ ಕ್ಷೇತ್ರ, ಉತ್ತರ ಪ್ರದೇಶ)

ಅಲ್ಫೋನ್ಸ್‌ ಕಣ್ಣನ್‌ ದಾನಮ್‌ (ನಿವೃತ್ತ ಐಎಎಸ್‌ ಅಧಿಕಾರಿ, ಬಿಜೆಪಿ ಸಕ್ರಿಯ ಸದಸ್ಯ, ಕೇರಳ)

ಆಕಾಂಕ್ಷಿಗಳಿಗೆ ಬರಲೇ ಇಲ್ಲ ಕರೆ!

ನವದೆಹಲಿ: ‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಪ್ರಧಾನಿ ಮೋದಿ ರಾಜ್ಯದ ಇಬ್ಬರು ಸಂಸದರಿಗೆ ಸಚಿವ ಸ್ಥಾನ ನೀಡಬಹುದು’ ಎಂಬ ನಿರೀಕ್ಷೆ ಇದೆಯಾದರೂ, ಶನಿವಾರ ರಾತ್ರಿಯವರೆಗೆ ವರಿಷ್ಠರು ಯಾರಿಗೂ ಕರೆ ಮಾಡಿ ಆಹ್ವಾನ ನೀಡಿಲ್ಲ.

ಸಚಿವ ಸ್ಥಾನದ ಆಕಾಂಕ್ಷಿ, ಹಾವೇರಿ ಸಂಸದ ಶಿವಕುಮಾರ್‌ ಉದಾಸಿ ಕಳೆದ ಮೂರು ದಿನಗಳಿಂದ ಇಲ್ಲೇ ಇದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಸಹ ದೌಡಾಯಿಸಿದರು.

ಆದರೆ, ‘ಇದುವರೆಗೆ ನಮಗೆ ಹೈಕಮಾಂಡ್‌ನಿಂದ ಕರೆ ಬಂದಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸಂಸದರಾದ ಸುರೇಶ ಅಂಗಡಿ, ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ವದಂತಿಗಳು ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರ ಹೆಸರು ಶುಕ್ರವಾರ ಆ ಪಟ್ಟಿಗೆ ಸೇರಿಕೊಂಡಿದೆ. ಆದರೆ, ಹೈಕಮಾಂಡ್‌ನ ಕರೆಗಾಗಿ ಕಾದು ಕುಳಿತ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.

ಇಬ್ಬರನ್ನು ಮೋದಿ ಅವರು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದೇ ಭಾವಿಸಲಾಗಿತ್ತು. ಆದರೆ, ಶನಿವಾರ ರಾತ್ರಿಯವರೆಗೂ ಆಕಾಂಕ್ಷಿಗಳಿಗೆ ಹೈಕಮಾಂಡ್‌ನಿಂದ ಆಹ್ವಾನ ಬಂದಿಲ್ಲ ಎಂದು ಬಿಜೆಪಿಯ ರಾಜ್ಯದ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ಸಂಸದರಿಗೆ ಆಹ್ವಾನ ಬಂದಿರುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಆಹ್ವಾನ ಬಂದಿದ್ದರೂ ಗೋಪ್ಯತೆ ಕಾಪಾಡಿರುವ ಸಾಧ್ಯತೆಗಳೂ ಇವೆ. ಒಂದೊಮ್ಮೆ ಆಹ್ವಾನ ಬಂದಿದ್ದಲ್ಲಿ ಭಾನುವಾರ ಗೊತ್ತಾಗಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಮೋದಿಯ ಅಚ್ಚರಿಯ ಆಯ್ಕೆ ಅನಂತಕುಮಾರ ಹೆಗಡೆ

ಶಿರಸಿ: ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅವರು 1990ರ ದಶಕದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕರಾಗಿ ನೇಮಕಗೊಂಡಿದ್ದರು. ಅಲ್ಲಿಂದ ಅವರಿಗೆ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಸ್ಥಾನದ ಹೊಣೆ ವಹಿಸಲಾಯಿತು. ಅದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಜೀವಂತವಾಗಿತ್ತು.

ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದ ಅನಂತಕುಮಾರ್‌ ಅವರನ್ನು 1996ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಬಿಜೆಪಿ, ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ವಶಕ್ಕೆ ಪಡೆದುಕೊಂಡಿತು.

ಆಗಿನಿಂದ 1999ರ ಲೋಕಸಭೆ ಚುನಾವಣೆ ಹೊರತುಪಡಿಸಿ ಇನ್ನುಳಿದ 1998, 2004, 2009 ಹಾಗೂ 2014 ಚುನಾವಣೆಯಲ್ಲಿ ಅನಂತಕುಮಾರ ಉತ್ತರ ಕನ್ನಡ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

1999ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ ಅವರು ಅನಂತಕುಮಾರ ಅವರನ್ನು ಸೋಲಿಸಿದ್ದರು.

ಪ್ರತಿಕ್ರಿಯಿಸಿ (+)