ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನವೇ ಗುರುವಿನ ವ್ಯಾಖ್ಯಾನ

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

– ಸಮರ್ಥೇಶ ಕರ್ಣಾವತಿ

ದಕ್ಷಿಣಾಮೂರ್ತಿಸ್ತೋತ್ರದಲ್ಲಿ ಒಂದು ವಿಚಿತ್ರವಾದ ಮಾತಿದೆ: ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರೂರ್ಯುವಾ/ ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತುಚ್ಛಿನ್ನಸಂಶಯಾಃ// ಇದರ ಅರ್ಥ ಹೀಗೆ: ವಿಚಿತ್ರವಾದ ಸಂಗತಿ ಎಂದರೆ, ಆಲದ ಮರದ ಕೆಳಗೆ ವೃದ್ಧರಾದ ಶಿಷ್ಯರೂ ಮತ್ತು ಯುವಕನಾದ ಗುರುವೂ ಕುಳಿತಿದ್ದಾರೆ. ಗುರುವಿನ ಮೌನವೇ ವ್ಯಾಖ್ಯಾನವಾಗಿದೆ. ಅದರಿಂದಲೇ ಶಿಷ್ಯರ ಸಂಶಯಗಳೆಲ್ಲಾ ಪರಿಹಾರವಾಗುತ್ತಿದೆ.

ಇದು ಹೇಗೆ ಸಾಧ್ಯ? ಚಿಕ್ಕವರಿಂದ ಕಂಪ್ಯೂಟರ್ ಅನ್ನೋ, ಫೋನಿಗೆ ಸಿಮ್ ಕಾರ್ಡ್ ಹಾಕುವುದನ್ನೋ ಕಲಿಯಬಹುದು ಸರಿ. ಆದರೆ, ಆಧ್ಯಾತ್ಮಿಕ ಜ್ಞಾನ, ಶಾಸ್ತ್ರವಾಕ್ಯ ವಿವಕ್ಷೆ – ಇವೆಲ್ಲಾ ಅನುಭವದಿಂದ ಮೂಡಲೇಬೇಕಲ್ಲ. ಅದಕ್ಕೆ ವಯಸ್ಸು ಮತ್ತು ಪ್ರಬುದ್ಧತೆಯೂ ಅಗತ್ಯ ತಾನೆ? ವಯಸ್ಸಾದ ಮಾತ್ರಕ್ಕೆ ಇವೆಲ್ಲಾ ಬಂದುಬಿಡುತ್ತದೆ ಎನ್ನುವುದು ಸರಿಯಲ್ಲದಿದ್ದರೂ, ವಯಸ್ಸಿನ ಅನುಭವವಿಲ್ಲದೇ ಬರಬಹುದು ಎನ್ನುವುದೂ ತಪ್ಪು ತಾನೆ? ಬರೀ ಅಷ್ಟೇ ಆದರೂ ಒಪ್ಪಬಹುದಿತ್ತು. ಅದರ ಜೊತೆಗೆ ಇಲ್ಲಿ ಗುರು ಏನನ್ನೂ ಹೇಳುತ್ತಿಲ್ಲ. ಸುಮ್ಮನೆ ಮೌನವಾಗಿದ್ದಾನೆ.

ಅಷ್ಟಕ್ಕೇ ಶಿಷ್ಯರ ಸಂಶಯಗಳೆಲ್ಲಾ ಪರಿಹಾರವಾಗುತ್ತಿದೆ. ಇದು ಹೇಗೆ ಸಾಧ್ಯ? ಇವೆಲ್ಲಾ ದಕ್ಷಿಣಾಮೂರ್ತಿಯಂತಹ, (ಮತ್ತು ಅನ್ವಯವಾಗಿ ನೋಡಿದರೆ, ಇದನ್ನು ರಚಿಸಿದ ಶಂಕರಭಗವತ್ಪಾದರೇ ಮೊದಲಾದ) ಮಹಾತ್ಮರಲ್ಲಿ ಸಾಧ್ಯವೇನೋ ಎಂದು ತೇಲಿಸಿಬಿಡುವುದು ಅಷ್ಟು ಸರಿಕಾಣುವುದಿಲ್ಲ. ಈ ಶ್ಲೋಕದ ಅರ್ಥ ಬರಿ ಅಷ್ಟೇ ಆಗಿದ್ದರೆ, ಇದರಿಂದ ಹೆಚ್ಚು ಪ್ರಯೋಜನವೂ ಇಲ್ಲ. ನಮ್ಮ ತಿಳಿವಿಗೆ ದಕ್ಕದ ದೊಡ್ಡವರ ದೊಡ್ಡತನದಿಂದ ನಮಗೇನು ಲಾಭ?

ಹಾಗಾದರೆ, ಈ ಶ್ಲೋಕ ಜ್ಞಾನದ ಸ್ವರೂಪದ ಬಗ್ಗೆಯೇ ಏನನ್ನೋ ಹೇಳುತ್ತಿರಬೇಕು. ಮೊದಲನೆಯದಾಗಿ, ನಾವು ಜ್ಞಾನವನ್ನು ನೋಡುವ ಎರಡು ಕ್ರಮಗಳನ್ನು ಗುರುತಿಸಬೇಕು. ಒಂದು ಕ್ರಮದ ಪ್ರಕಾರ ಮನುಷ್ಯರಾದ ನಾವು ಜ್ಞಾನವನ್ನು ಸಂಶೋಧನೆ, ತರ್ಕ, ಅನುಮಾನ, ಇತ್ಯಾದಿಗಳ ಮೂಲಕ ಉತ್ಪಾದಿಸುತ್ತೇವೆ. ಅಂದರೆ, ಜ್ಞಾನ ಎನ್ನುವುದು ಉತ್ಪಾದಿತವಾದದ್ದು. ಇನ್ನೊಂದು ಕ್ರಮದ ಪ್ರಕಾರ, ಜ್ಞಾನ ಎನ್ನುವುದು ಉತ್ಪಾದಿತವಾದದ್ದಲ್ಲ.

ಅದು ಎಂದಿಗೂ ಇರುವುದು, ನಿತ್ಯವಾದದ್ದು. ಅಂದರೆ, ವಸ್ತುಗಳ ನಿಜ ಸ್ವರೂಪವೇ ಜ್ಞಾನ. ನಮಗೆ ಮೊದಲು ಅದು ತಿಳಿದಿರುವುದಿಲ್ಲ. ನಂತರ ವಿದ್ಯೆಯ ಮೂಲಕ ತಿಳಿಯುತ್ತದೆ ಅಷ್ಟೆ. ಇದರಲ್ಲಿ ಉತ್ಪಾದಿಸುವಂಥದ್ದು ಏನೂ ಇಲ್ಲ. ಹಾಗಾದರೆ ಇಂತಹ ತಿಳಿವು ಬರುವುದು ಹೇಗೆ? ಸಾಮಾನ್ಯವಾಗಿ, ಅದಕ್ಕೆ ಕತಕ ಬೀಜದ ಉದಾಹರಣೆ ಕೊಡುತ್ತಾರೆ. ಕಲ್ಮಶದಿಂದ ಕೂಡಿದ ನೀರು ಶುಭ್ರವಾಗಿರುವುದಿಲ್ಲ. ಅದಕ್ಕೆ ಕತಕಬೀಜವನ್ನು ಹಾಕಿದಾಗ, ಅದು ಕಲ್ಮಶವನ್ನೆಲ್ಲಾ ಸಾಂದ್ರಗೊಳಿಸಿ ಕೆಳಕ್ಕೆ ತಳ್ಳಿ, ಶುಭ್ರ್ರವಾದ ನೀರು ಮಾತ್ರ ಪ್ರತ್ಯೇಕವಾಗುವಂತೆ ಮಾಡುತ್ತದೆ.

ವಿದ್ಯೆಯೂ ಅಷ್ಟೆ. ವಸ್ತುಗಳ ನಿಜ ಸ್ವರೂಪ ಯಾಕೆ ತಿಳಿಯುವುದಿಲ್ಲ ಎಂದರೆ ವಸ್ತುಗಳ ನಿಜಸ್ವರೂಪದ ಜೊತೆಜೊತೆಗೇ ನಿಜವಲ್ಲದ್ದು, ಭ್ರಮಾತ್ಮಕವಾದದ್ದು, ನಮ್ಮೊಳಗೇ ಇರುವ ಗೋಜಲುಗಳು, ಇಂದ್ರಿಯಗಳ ಅಸೂಕ್ಷ್ಮತೆ, ಪೂರ್ವಾಗ್ರಹಗಳು, ಇವೆಲ್ಲಾ ಜೊತೆಯಾಗಿ ಕಾರಣವಾಗಿರುತ್ತದೆ. ಇದನ್ನೆಲ್ಲಾ ಸಾವಧಾನವಾಗಿ ನಿವಾರಿಸಿದರೆ, ಸ್ವಾಭಾವಿಕವಾಗಿಯೇ ವಸ್ತುಗಳ ನಿಜಸ್ವರೂಪ ಮುನ್ನೆಲೆಗೆ ಬರುತ್ತದೆ.

ಜ್ಞಾನದ ಈ ಎರಡೂ ಚಿತ್ರಣಗಳು ಒಂದಕ್ಕೊಂದು ವಿರುದ್ಧ ಎಂದು ತೋರಬಹುದಾದರೂ, ಅದು ಹಾಗೇನೂ ಅಲ್ಲ. ಜ್ಞಾನವನ್ನು ಕಲಿಸುವವನ ದೃಷ್ಟಿಯಿಂದ ಹೇಳಿದರೆ, ಕಲಿಕೆಯ ಕ್ರಮಗಳು ಮುಖ್ಯವಾದ್ದರಿಂದ ಜ್ಞಾನ ಎಂದರೆ ಉತ್ಪಾದಿತವಾದದ್ದು ಎಂದು ಹೇಳುತ್ತೇವೆ.

ಅದೇ ಕಲಿಯುವವನ ದೃಷ್ಟಿಯಿಂದ ಹೇಳಿದರೆ, ಕಲಿಯುವುದಕ್ಕೆ ಬೇಕಾದ ಸಂಸ್ಕಾರ, ಪೂರ್ವತಯಾರಿ, ಶೀಲ, ಆಚಾರ ಮುಖ್ಯವಾದ್ದರಿಂದ, ಮತ್ತು ನಾವು ತಿಳಿಯಲು ಬಯಸುತ್ತಿರುವ ವಸ್ತುವಿನ ಕುರಿತೇ ಶ್ರದ್ಧೆ ಬೆಳೆಯಬೇಕಾಗಿರುವುದರಿಂದ, ಜ್ಞಾನವನ್ನು ನಿತ್ಯವೆಂದು ಹೇಳುತ್ತೇವೆ.

ನಿತ್ಯವೆಂದಮೇಲೆ ಅದಕ್ಕೆ ವಸ್ತುಗಳಿಗಿರುವ ಲಕ್ಷಣಗಳಿಲ್ಲ ಎಂದೇ ಅರ್ಥ. ವಸ್ತುಗಳು ನಿತ್ಯವಲ್ಲ. ಅವು ಕಾಲಕ್ರಮದಲ್ಲಿ ನಾಶವಾಗುತ್ತವೆ, ಮುಪ್ಪಾಗುತ್ತವೆ, ದೊಡ್ಡದೋ, ಚಿಕ್ಕದೋ ಆಗುತ್ತವೆ. ಬಣ್ಣ, ಆಕಾರ ಇವುಗಳಲ್ಲೆಲ್ಲಾ ಬದಲಾಗುತ್ತವೆ.

ಜ್ಞಾನಕ್ಕೆ ಈ ಯಾವ ಬಾಧೆಗಳೂ ಇಲ್ಲ. ಅಂದಮೇಲೆ, ಜ್ಞಾನವನ್ನು ಹಳೆಯದು, ಹೊಸದು, ಚಿಕ್ಕದು, ದೊಡ್ಡದು ಎಂದೆಲ್ಲಾ ಕರೆಯಲು ಬರುವುದಿಲ್ಲ. ಗುರುತ್ವದ ಸಿದ್ಧಾಂತವನ್ನು ರೂಪಿಸಿ ಶತಮಾನಗಳೇ ಸಂದಿರಬಹುದು. ಆದರೆ, ಕಲಿಯುವವನ ದೃಷ್ಟಿಯಲ್ಲಿ ಎಂದಿಗೂ ಅದು ಹೊಸದೇ. ಅಷ್ಟೇ ಅಲ್ಲ, ಪ್ರತೀ ಬಾರಿ ಅದನ್ನು ಅನ್ವಯಿಸಬೇಕಾದರೂ ಅದನ್ನು ಪುನಾರಚಿಸಿಕೊಳ್ಳಬೇಕು.

ಹಾಗಾದರೆ, ಜ್ಞಾನದ ಮೂರ್ತಸ್ವರೂಪ ಯಾವುದು? ಜ್ಞಾನ ನಮ್ಮ ಅನುಭವಕ್ಕೆ ಬರುವುದು ಹೇಗೆ? ಅದನ್ನು ನಾವು ನೋಡಬಹುದಾದರೆ ಎಲ್ಲಿ ನೋಡಬಹುದು? ಅದಕ್ಕೆ ಒಂದೇ ಉತ್ತರ. ಜ್ಞಾನಿಯೇ ಜ್ಞಾನದ ಮೂರ್ತಸ್ವರೂಪ. ಪುಸ್ತಕದಲ್ಲೂ ಜ್ಞಾನವಿದೆಯಲ್ಲಾ ಎಂದು ಕೇಳಬಹುದು. ಒಂದು ರೀತಿಯಿಂದ ಇದು ನಿಜವಾದರೂ, ಆ ಪುಸ್ತಕದಲ್ಲಿರುವುದು ಸೂಚಿಸುತ್ತಿರುವುದಾದರೂ ಏನನ್ನು?

ಯಾವನೋ ಒಬ್ಬ ಅಥವಾ ಹಲವಾರು ಜ್ಞಾನಿಗಳ ಸಾಧನೆಯ ಫಲವನ್ನು ತಾನೆ? ಅಂದಮೇಲೆ, ಜ್ಞಾನಿಗೂ ಜ್ಞಾನಕ್ಕಿರುವ ಲಕ್ಷಣಗಳನ್ನೇ ಆರೋಪಿಸಬಹುದು. ಒಬ್ಬ ವ್ಯಕ್ತಿಯಾಗಿ ಅವನು ಕಾಲಕ್ರಮದಲ್ಲಿ ಮುಪ್ಪಾಗುತ್ತಾನಾದರೂ, ಕೃಶವಾಗುತ್ತಾನಾದರೂ, ಜ್ಞಾನಿಯಾಗಿ ಅವನಿಗೆ ಇಂತಹ ಬಾಧೆಗಳಿಲ್ಲ. ಗೆದ್ದಲು ಹಿಡಿದು ಜೀರ್ಣವಾಗುವುದು ಭೌತಶಾಸದ ಪಠ್ಯಪುಸ್ತಕವೇ ಹೊರತೂ, ಭೌತಶಾಸ್ತ್ರವಲ್ಲ.

ಇಂತಹ ಜ್ಞಾನಿಗಳಲ್ಲೇ ಶ್ರೇಷ್ಠನಾದವನು ದಕ್ಷಿಣಾಮೂರ್ತಿ. ಅವನಿಗೆ ಕಾಲದ ಬಾಧೆಯಿಲ್ಲ ಎಂದು ಹೇಳುವುದನ್ನೇ ಅವನು ಯುವಕ ಎಂದು ಹೇಳುವ ಮೂಲಕ ಈ ಶ್ಲೋಕ ತೋರಿಸುತ್ತಿದೆ. ಆದರೆ, ನಾವು, ಶಿಷ್ಯರು, ಅಂದರೆ, ಜ್ಞಾನವನ್ನು ಹುಡುಕುತ್ತಿರುವವರು ವೃದ್ಧಾಪ್ಯಕ್ಕೆ ಪಕ್ಕಾಗುವವರು. ಏಕೆಂದರೆ, ನಾವಿನ್ನೂ ನಮ್ಮ ಮನುಷ್ಯ ಮಿತಿಗಳನ್ನು ಮೀರಿಲ್ಲ. ಇನ್ನೂ ಜ್ಞಾನಿಗಳಾಗಿಲ್ಲ.

ಈಗ ಎರಡನೆಯ ಪ್ರಶ್ನೆ. ಈ ಗುರುವಾದ ದಕ್ಷಿಣಾಮೂರ್ತಿ ಮೌನದಲ್ಲೇ ವ್ಯಾಖ್ಯಾನ ಮಾಡುತ್ತಿದ್ದಾನಲ್ಲ, ಇದು ಏನು ಸೋಜಿಗ? ಅದು ಧ್ಯಾನದ ಬಗ್ಗೆ ಇರುವುದು ಎಂದು ಹೇಳಬಹುದೇ? ಧ್ಯಾನ ಮಾಡುವುದು ಜ್ಞಾನಕ್ಕೆ ಸಾಧನವಾದರೂ ಅದೇ ಜ್ಞಾನವಲ್ಲ. ಮತ್ತು ಸಂಶಯಗಳೆಲ್ಲಾ ಧ್ಯಾನದಿಂದ ಪರಿಹಾರವಾಗುತ್ತವೆ ಎನ್ನುವುದೂ ಸ್ವಲ್ಪ ವಿಚಿತ್ರ. ಹಾಗಾದರೆ, ಮೌನದಲ್ಲಿ ಹೇಳಿಕೊಡುವ ಪಾಠ ಎಂಥದ್ದು? ಇದರಲ್ಲೂ ಜ್ಞಾನದ ಲಕ್ಷಣವೇ ಇದೆ ಎಂದು ತೋರುತ್ತದೆ.

ನಿರ್ದಿಷ್ಟ ವಸ್ತುಗಳ ಲಕ್ಷಣಗಳನ್ನು ಗುರುತಿಸಲು ಹಲವು ಪರಿಕಲ್ಪನೆಗಳು ಬೇಕು. ಕುರ್ಚಿ, ಮೇಜು, ಕೆಂಪು, ಕಪ್ಪು, ಅಣು, ಪರಮಾಣು, ಉದ್ದ, ಅಗಲ, ಇವೆಲ್ಲ ನಿರ್ದಿಷ್ಟ ವಸ್ತುಗಳನ್ನು ಗುರುತಿಸಲು ಬೇಕಾದ್ದು. ಆದರೆ, ವಸ್ತು ಎಂದರೆ ಏನು? ಎನ್ನುವ ಪ್ರಶ್ನೆಯನ್ನು ಉತ್ತರಿಸಲು ಯಾವ ರೀತಿಯ ಪರಿಕಲ್ಪನೆ ಬೇಕು? ಅದಕ್ಕೆ ಇಷ್ಟೆಲ್ಲಾ ಸಂಕಿರ್ಣವಾದ ಪರಿಕಲ್ಪನೆಗಳು ಬೇಕಿಲ್ಲ.

ಯಾವುದು ಇದೆಯೋ ಅದು ವಸ್ತು ಎಂದು ಹೇಳಬಹುದು. ಅಂದರೆ, ಇರುವಿಕೆ ಎನ್ನುವ ಒಂದೇ ಪರಿಕಲ್ಪನೆ, ಅಥವಾ, ಇನ್ನೊಂದಷ್ಟು ಇಂಥವೇ ಪರಿಕಲ್ಪನೆಗಳು ಸಾಕು. ಇದರರ್ಥ, ವಸ್ತು ಎಂದರೆ ಏನು ಎನ್ನುವ ಪ್ರಶ್ನೆ ತುಂಬಾ ಸುಲಭವೆಂದೇನೂ ಅಲ್ಲ. ನಿರ್ದಿಷ್ಟ ವಸ್ತುಗಳ ಬಗೆಗಿನ ಪ್ರಶ್ನೆಗಿಂತ ಇದು ಭಿನ್ನವಾದ ಪ್ರಶ್ನೆ ಎಂದಷ್ಟೇ ಇದರ ಅರ್ಥ.

ಆದರೆ, ಒಂದನ್ನಂತೂ ಗಮನಿಸಿ. ವಸ್ತು ಎಂದರೆ ಏನು ಎನ್ನುವ ಮೂಲಭೂತ ಪ್ರಶ್ನೆ ನಮ್ಮ ಪರಿಕಲ್ಪನೆಗಳ ಸಂಖ್ಯೆಯನ್ನ ಗಣನೀಯವಾಗಿ ಕಡಿಮೆ ಮಾಡುತ್ತದೆ. ನಿರ್ದಿಷ್ಟ ವಸ್ತುಗಳ ಬಗ್ಗೆ ಚಿತ್ರವಿಚಿತ್ರವಾದ ಶ್ರೀಮಂತವಾದ ವಿವರಣೆಗಳು ಇರಬಹುದಾದಂತೆ, ವಸ್ತು ಎಂದರೆ ಏನು ಎನ್ನುವ ಪ್ರಶ್ನೆಯ ಬಗ್ಗೆ ತುಂಬಾ ಚಿತ್ರವಿಚಿತ್ರ ವಿವರಣೆಗಳು ಇರಲು ಸಾಧ್ಯವಿಲ್ಲ. ಅದನ್ನೇ ಹೀಗೂ ಹೇಳಬಹುದು.

ನಿರ್ದಿಷ್ಟ ವಸ್ತುಗಳ ಕುರಿತು ಇರುವ ವಿಜ್ಞಾನ ಎನ್ನುವ ಜ್ಞಾನಶಾಖೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಶ್ರೀಮಂತವಾಗುತ್ತಿದೆ. ಆದರೆ, ವಸ್ತು ಎಂದರೆ ಏನು ಎನ್ನುವ ಪ್ರಶ್ನೆಯ ಕುರಿತು ಇರುವ ಮೆಟಫಿಸಿಕ್ಸ್ ಎನ್ನುವ ಜ್ಞಾನಶಾಖೆ ಸುಮಾರು ಎರಡೂವರೆ ಸಾವಿರ ವರ್ಷದಿಂದಲೂ ಇದ್ದಲ್ಲೇ ಇದೆಯೇ ಹೊರತೂ ಹೆಚ್ಚೇನೂ ಬೆಳೆದಿಲ್ಲ.

ಇದೇನೂ ಒಂದು ದೋಷವಲ್ಲ. ಈ ಪ್ರಶ್ನೆಯ ಲಕ್ಷಣವೇ ಅದು. ಈಗ, ಇದೇ ರೀತಿಯಲ್ಲಿ ಯೋಚಿಸುತ್ತಾ ವಸ್ತು ಎಂದರೆ ಏನು ಎನ್ನುವ ಪ್ರಶ್ನೆಯ ಹಾಗೆಯೇ, ಅದರ ಬಗ್ಗೆ ನಮಗಿರುವ ಜ್ಞಾನ ಎಂದರೆ ಏನು, ಹಾಗೆಯೇ ಮುಂದುವರೆದು, ಜ್ಞಾನ ಎನ್ನುವುದು ಜ್ಞಾನಿಯಲ್ಲೇ ಮೂರ್ತೀಭವಿಸಿದೆ ಎನ್ನುವುದು ಹೌದಾದರೆ, ಜ್ಞಾನಿ ಎಂದರೆ ಯಾರು ಎನ್ನುವ ಪ್ರಶ್ನೆಗಳನ್ನೂ ಗಮನಿಸಿ. (ಒಬ್ಬ ಜ್ಞಾನಿಯ ಲಕ್ಷಣಗಳೇನು ಎನ್ನುವುದು ಆ ಪ್ರಶ್ನೆಯ ಅರ್ಥವಲ್ಲ. ಈ ಜ್ಞಾನಿ ಎಂಬೊಬ್ಬ ನಮ್ಮೊಳಗಿದ್ದಾನಲ್ಲ, ಅವನು ಯಾರು? ಎನ್ನುವುದು ಈ ಪ್ರಶ್ನೆಯ ಅರ್ಥ).

ಈ ರೀತಿಯ ಪ್ರಶ್ನೆಗಳಿಂದ ಪ್ರಯೋಜನವೇನು ಎಂದು ನೀವು ಕೇಳಬಹುದು. ಬಹುಶಃ ಇಂತಹ ಪ್ರಶ್ನೆಗಳಿಂದ ನಮ್ಮ ನಿತ್ಯಬದುಕಿಗೆ ಯಾವ ಪ್ರಯೋಜನವೂ ಇಲ್ಲದೇ ಇರಬಹುದು. ಅಷ್ಟೇ ಅಲ್ಲ. ಇಂತಹ ಪ್ರಶ್ನೆಗಳನ್ನು ಕೇಳುವುದರಿಂದ ತಲೆ ಸುತ್ತಿ, ಹುಚ್ಚುಹಿಡಿಯುತ್ತದೆ ಅಷ್ಟೇ ಎಂದೂ ನೀವು ಸಕಾರಣವಾಗಿ ಹೇಳಬಹುದು. ಆದರೆ, ಅಷ್ಟಾದ ಮೇಲೂ, ಇಂತಹ ಪ್ರಶ್ನೆಯನ್ನು ಅರ್ಥಪೂರ್ಣವಾಗಿ ಕೇಳಲು ಸಾಧ್ಯ ಎಂದಮೇಲೆ, ಅದೇ ಆ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೂ ಸಮರ್ಥನೆ ಎಂಬುದನ್ನು ಒಪ್ಪಲೇಬೇಕು. ಇಂತಹ ಮೆಟಫಿಸಿಕಲ್ ಪ್ರಶ್ನೆಗಳು ಸಾಮಾನ್ಯವಾಗಿ ಇರುವುದು ವಸ್ತುಗಳ ಬಗ್ಗೆ ಇನ್ನೂ ಹೆಚ್ಚು ಜ್ಞಾನವನ್ನು ಪಡೆಯುವುದಕ್ಕಲ್ಲ. ಬದಲಾಗಿ, ವಸ್ತುವಿನ ಸ್ವರೂಪವು ಅದರ ಮೇಲ್ಪದರದ ಚಿತ್ರವಿಚಿತ್ರವಾದ ಭಾವಭಂಗಿ

ಗಳನ್ನೆಲ್ಲಾ ಕಳಚಿಕೊಂಡು ಶುದ್ಧವಾಗಿ, ಶುಭ್ರವಾಗಿ ಮೂಡಲು. ಅಂದಮೇಲೆ, ಇದು ವಸ್ತುಸ್ವರೂಪವನ್ನು ಅರಿಯಲು ಇರುವ ವಿದ್ಯೆ. ಮನುಷ್ಯರ ಭಾಷೆಯಲ್ಲಿ ಇರುವ ಮಾತುಗಳೆಲ್ಲಾ ಇರುವುದು ವಸ್ತುಗಳ ನಿರ್ದಿಷ್ಟತೆಯನ್ನು ಚಿತ್ರಿಸಲು. ವಸ್ತುಸ್ವರೂಪವನ್ನು ಅರಿಯುವುದು ಭಾಷೆಯ ಮಿತಿಗಳ ಒಳಗೆ ಕಷ್ಟಸಾಧ್ಯವೇ. ಆದರೆ ದಕ್ಷಿಣಾಮೂರ್ತಿಯಾದಿಯಾಗಿ, ಶಂಕರಭಗವತ್ಪಾದರೇ ಮಧ್ಯಮರಾಗಿ, ನಮ್ಮ ಸುತ್ತ ಇರುವ ಎಲ್ಲಾ ಮುಮುಕ್ಷುಗಳೂ ತಿಳಿಯಲು, ತಿಳಿಸಲು ಹೊರಟಿರುವುದು ನಿರ್ದಿಷ್ಟ ವಸ್ತುಗಳ ಕುರಿತ ಜ್ಞಾನವನ್ನಲ್ಲ.

ಅವರು ತಿಳಿಸಲು ಹೊರಟಿರುವುದು ವಸ್ತುಸ್ವರೂಪದ ಕುರಿತ, ಜ್ಞಾನಸ್ವರೂಪದ ಕುರಿತ, ಜ್ಞಾನಿಯ ಕುರಿತ ಜ್ಞಾನ. ಅಂದರೆ, ಅದರ ಮೊದಲ ಅಗತ್ಯವೇ, ನಿರ್ದಿಷ್ಟ ವಸ್ತುಗಳ ಕುರಿತು ಇರುವ ಭಾಷೆಯಿಂದ ದೂರವಾಗಿ, ಒಂದು ಹೊಸ ಔಪಚಾರಿಕವಾದ ಭಾಷೆಯನ್ನು ರೂಪಿಸಿಕೊಳ್ಳುವುದು.

ಮತ್ತೂ ಮುಂದೆ ಹೋಗಿ, ಭಾಷೆಯಲ್ಲಿ ಮೂಡುವ ಚಿತ್ತವಿಚಿತ್ರ ವಿವರಣೆಗಳನ್ನು ನಿಧಾನವಾಗಿ ಶಮನ ಮಾಡುತ್ತಾ, ಆ ವಿವರಣೆಗಳ ಗೋಜಲಿನಲ್ಲೇ ಇರುವ ಮನಸ್ಸು ಅದರಿಂದ ಬಿಡಿಸಿಕೊಂಡು ನಿಧಾನವಾಗಿ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಮೂಡುವಂತೆ ಮಾಡುವುದು. ಹೇಳುವುದಲ್ಲ. ತೋರಿಸುವುದು. ತೋರಿಸುವುದಲ್ಲ. ಮಾಡುವುದು. ‘ಗುರೋಸ್ತು ಮೌನಂ ವ್ಯಾಖ್ಯಾನಂ’ ಎನ್ನುವುದರ ಹಿಂದಿನ ಗುಹ್ಯ ಇದು. ವಸ್ತುಸ್ವರೂಪ ಗೋಚರಿಸಿದ ಮೇಲೆ ಇನ್ನೆಲ್ಲಿಯ ಸಂಶಯ? ಇನ್ನ್ಯಾವ ಪ್ರಶ್ನೆ? ಹಾಗಾಗಿಯೇ ’ಶಿಷ್ಯಾಸ್ತುಚ್ಛಿನ್ನಸಂಶಯಾಃ.’

ಹೀಗೆ ಲೋಕಶಂಕರರಾದ ಶಂಕರಭಗವತ್ಪಾದರು ಲೋಕಗುರುವಾದ ದಕ್ಷಿಣಾಮೂರ್ತಿಯನ್ನು ಕುರಿತು ರಚಿಸಿದ ಸ್ತೋತ್ರ ಶಿಕ್ಷಕ ದಿನಾಚರಣೆಯ ದಿನಕ್ಕೆ ಒಂದು ಅನುಪಮವಾದ ಜ್ಞಾನಾನುಸಂಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT