ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧವಾಗುತ್ತಿದೆ ಆಫ್‌ಲೈನ್‌ ತುಳು ವಿಕಿಪೀಡಿಯಾ

Last Updated 4 ಸೆಪ್ಟೆಂಬರ್ 2017, 9:10 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ಶಾಲೆಗಳಲ್ಲಿ ತುಳು ಭಾಷೆ ಕಲಿಕೆಗೆ ಅವಕಾಶವಿದ್ದರೂ ವಿದ್ಯಾರ್ಥಿಗಳಿಗೆ ಪಠ್ಯದ ಹೊರತಾಗಿ ಪೂರಕ ಮಾಹಿತಿ ನೀಡುವ ಆಕರಗಳು ಕಡಿಮೆ ಇವೆ. ಆದ್ದರಿಂದ ಆಫ್‌ಲೈನ್‌ ತುಳು ವಿಕಿಪೀಡಿಯಾಗಳನ್ನು ಸಿದ್ಧಪಡಿಸಿ ನೀಡುವ ಉದ್ದೇಶವಿದೆ ಎಂದು ಕರಾವಳಿ ವಿಕಿಮೀಡಿಯನ್ಸ್‌ನ ಕಾರ್ಯದರ್ಶಿ ಹಾಗೂ ಅಂಕಣಕಾರ ಡಾ. ಯು.ಬಿ. ಪವನಜ ಹೇಳಿದರು.

ನಗರದ ರಾಮಕೃಷ್ಣ ಕಾಲೇಜಿನಲ್ಲಿ ಭಾನುವಾರ, ಕರಾವಳಿ ವಿಕಿಮೀಡಿಯನ್ಸ್‌ ಮತ್ತು ರಾಮಕೃಷ್ಣ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ತುಳು ವಿಕಿಪೀಡಿಯಾದ ಮೊದಲ ವರ್ಷಾಚರಣೆ ಮತ್ತು ವಿಕಿಪೀಡಿಯಾ ಗ್ರಂಥಾಲಯ ಉದ್ಘಾಟನೆ’ಯಲ್ಲಿ ಅವರು ಮಾಹಿತಿ ನೀಡಿದರು.

ಕಂಪ್ಯೂಟರ್‌ ಇರುವ ಶಾಲೆಗಳಲ್ಲಿ ಈ ವಿಕಿಪೀಡಿಯಾ ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ಪಡೆಯುವುದು ಸಾಧ್ಯ. ಈ ನಿಟ್ಟಿನಲ್ಲಿ ಕರಾವಳಿ ವಿಕಿಮೀಡಿಯನ್ಸ್‌ ತಂಡ ಕೆಲಸ ಮಾಡುತ್ತಿದೆ ಎಂದರು.

ತುಳುವಿನಲ್ಲಿ ಎನ್‌ಸೈಕ್ಲೋಪೀಡಿಯಾ ಇಲ್ಲ. ವಿಜ್ಞಾನ ಲೇಖನಗಳೂ ಕಡಿಮೆ ಇವೆ. ಇದೀಗ ತುಳು ವಿಕಿಪೀಡಿಯಾದ ಮೂಲಕ ತುಳು ಭಾಷೆ ಮತ್ತು ಸಂಸ್ಕೃತಿಯ ಮಾಹಿತಿ ಡಿಜಿಟಲ್‌ ಮಾದರಿಯಲ್ಲಿ ಹೊಸ ತಲೆಮಾರನ್ನು ತಲುಪುವುದು ಸಾಧ್ಯವಾಗಿದೆ ಎಂದರು.

ಕರಾವಳಿ ವಿಕಿಮೀಡಿಯನ್ಸ್ ತಂಡ ತುಳು, ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿ ಕೆಲಸ ಮಾಡುತ್ತಿದೆ. ಕಾಲೇಜುಗಳಲ್ಲಿ ವಿಕಿಪೀಡಿಯಾ ವಿದ್ಯಾರ್ಥಿ ಸಂಘಟನೆಯೂ ಸಕ್ರಿಯವಾಗಿದೆ ಎಂದು ಅವರು ವಿವರಿಸಿದರು.

ಡಾ. ವಿಶ್ವನಾಥ ಬದಿಕಾನ ಮಾತನಾಡಿ, ‘2016ರ ಆಗಸ್ಟ್‌ 6ರಂದು ಭಾರತದ 23ನೇ ಭಾಷೆಯಾಗಿ ತುಳು ವಿಕಿಪೀಡಿಯಾ ಲೈವ್‌ ಆಗಿದೆ. ಅದರ ವರ್ಷಾಚರಣೆ ನಿಟ್ಟಿನಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ರಾಮಕೃಷ್ಣ ಕಾಲೇಜಿನಲ್ಲಿ ನಡೆಸಲಾಗಿದ್ದು, ಇಬ್ಬರು ಅಂಧ ವಿದ್ಯಾರ್ಥಿಗಳೂ ಸೇರಿದಂತೆ ಹಲವರು ಭಾಗವಹಿಸಿದ್ದಾರೆ’ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ, ‘ಜಾಗತಿಕ ಮಟ್ಟದಲ್ಲಿ ವ್ಯಾಪಿಸಿರುವ ಜ್ಞಾನವನ್ನು ಸ್ಥಳೀಯ ಭಾಷೆಯಲ್ಲಿ ನೀಡುವುದು ಮತ್ತು ಸ್ಥಳೀಯ ಮಾಹಿತಿಯನ್ನು ಜಾಗತಿಕ ನೆಲೆಯಲ್ಲಿ ಪಸರಿಸುವ ನಿಟ್ಟಿನಲ್ಲಿ ತುಳು ವಿಕಿಮೀಡಿಯನ್ಸ್‌ ತಂಡ ಮಾಡುತ್ತಿರುವ ಕೆಲಸ ಶ್ಲಾಘನಾರ್ಹ’ ಎಂದು ಹೇಳಿದರು.

ತುಳು ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಉಪನ್ಯಾಸಕ ಡಾ. ಕಿಶೋರ್‌ ಕುಮಾರ್‌ ರೈ ಶೇಣಿ, ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಸಂಚಾಲಕ ಬಿ. ಕೃಷ್ಣ ಪ್ರಸಾದ್‌ ರೈ,ವಿಕಿಮೀಡಿಯಾ ಫೌಂಡೇಶನ್‌ನ ಹಿರಿಯ ಪ್ರೋಗ್ರಾಂ ಆಫೀಸರ್‌ ಅಸಾಫ್‌ ಬರ್ಟೋವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT