5

ಸಾಂಕೇತಿಕತೆ ಮೀರಿದ ದಕ್ಷತೆ ಪ್ರದರ್ಶಿಸಲಿ

Published:
Updated:
ಸಾಂಕೇತಿಕತೆ ಮೀರಿದ ದಕ್ಷತೆ ಪ್ರದರ್ಶಿಸಲಿ

ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ನಾಳೆ ಅಧಿಕಾರ ಗದ್ದುಗೆಗೇರಲಿರುವುದು ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆ. ಸ್ವತಂತ್ರ ಭಾರತದ ಈ 70 ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ಪೂರ್ಣಪ್ರಮಾಣದ ರಕ್ಷಣಾ ಖಾತೆಯ ಹೊಣೆ ಹೊರುತ್ತಿರುವುದು ಇದೇ ಮೊದಲು. ಈ ಹಿಂದೆ ಇಂದಿರಾ ಗಾಂಧಿಯವರು 1975ರ ನವೆಂಬರ್‌ನಿಂದ ಡಿಸೆಂಬರ್ ಹಾಗೂ 1980ರ ಜನವರಿಯಿಂದ 1982ರ ಜನವರಿಯವರೆಗೆ ಪ್ರಧಾನಿ ಹುದ್ದೆ ಜೊತೆಗೆ ರಕ್ಷಣಾ ಖಾತೆಯನ್ನು ಹೆಚ್ಚುವರಿಯಾಗಷ್ಟೇ ನಿರ್ವಹಿಸಿದ್ದರು. ಭಾನುವಾರದ ಸಂಪುಟ ಪುನರ್ ರಚನೆಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ರಕ್ಷಣಾ ಖಾತೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸಂದೇಶವನ್ನೇ ನೀಡಿದ್ದಾರೆ. ಮೋದಿಯವರು ನೀಡಿದ ಈ ದೊಡ್ಡ ಅಚ್ಚರಿಯಿಂದಾಗಿ ಕೇಂದ್ರ ಸಂಪುಟ ಪುನರ್‍‍ರಚನೆಯ ಕುರಿತಾದ ವಾಗ್ವಾದದ ಕಥನ ಶೈಲಿ ನಾಟಕೀಯವಾಗಿ ಬದಲಾಗಿಹೋಯಿತು. ಮಹಿಳಾ ಸಬಲೀಕರಣದ ಸಂಭ್ರಮಾಚರಣೆಯಾಗಿ ಇದು ಪರಿವರ್ತಿತವಾಯಿತು.

ಕೇಂದ್ರ ಸಂಪುಟಕ್ಕೆ ದೊಡ್ಡ ಶಸ್ತ್ರಚಿಕಿತ್ಸೆಯೇ ಆಗುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಅದಕ್ಕೆ ತಕ್ಕಂತೆ ಅನೇಕ ಪ್ರಮುಖ ಸಚಿವರ ರಾಜೀನಾಮೆಗಳಿಂದ ಊಹಾಪೋಹಗಳು ದೊಡ್ಡ ಮಟ್ಟದಲ್ಲೇ ಇದ್ದವು. ಗೃಹ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ರಕ್ಷಣಾ ಖಾತೆಗಳಂತಹ ರಾಷ್ಟ್ರದ ಪ್ರಮುಖ ನಾಲ್ಕು ಖಾತೆಗಳು ಸಾಮಾನ್ಯವಾಗಿ ಪುರುಷರ ಕೋಟೆಗಳಾಗಿಯೇ ಇರುತ್ತವೆ. ಹೀಗಾಗಿ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದ ರಕ್ಷಣಾ ಖಾತೆ ಯಾರಿಗೆ ಎಂಬ ಬಗ್ಗೆ ಅನೇಕ ಊಹಾಪೋಹಗಳ ಕಥೆಗಳೂ ಹರಿದಾಡಿದ್ದವು. ಆದರೆ ಮೋದಿಯವರ ಸಂಪುಟದಲ್ಲಿ ಅನೇಕ ಪ್ರಭಾವಿ ಖಾತೆಗಳನ್ನು ಮಹಿಳೆಯರು ಈಗಾಗಲೇ ಪಡೆದುಕೊಂಡಿದ್ದಾರೆ ಎಂಬುದು ವಾಸ್ತವ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ಅಧಿಕಾರ ಗದ್ದುಗೆಗೇರಿದಾಗಲಿಂದಲೂ ವಿದೇಶಾಂಗ ವ್ಯವಹಾರದಂತಹ ಪ್ರಬಲ ಖಾತೆಯ ಸಚಿವ ಸ್ಥಾನವನ್ನು ಸುಷ್ಮಾ ಸ್ವರಾಜ್ ಅವರು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈಗ ಭದ್ರತೆ ಕುರಿತ ಸಂಪುಟ ಸಮಿತಿಯಲ್ಲಿ(ಸಿಸಿಎಸ್) ಸುಷ್ಮಾ ಸ್ವರಾಜ್ ಜೊತೆಗೆ ನಿರ್ಮಲಾ ಸೀತಾರಾಮನ್ ಅವರೂ ಇರುತ್ತಾರೆ ಎಂಬುದು ದೊಡ್ಡ ಸಂಗತಿ. ಪ್ರಧಾನಿ ಸೇರಿದಂತೆ ಗೃಹ ಸಚಿವ ಹಾಗೂ ಹಣಕಾಸು ಸಚಿವರೂ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಈ ಬೆಳವಣಿಗೆಯ ಬಗ್ಗೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲೂ ಸಕಾರಾತ್ಮಕ ಭಾವನೆಗಳು ಹರಿದುಬಂದಿವೆ. ಆದರೆ 2019ರ ಲೋಕಸಭಾ ಚುನಾವಣೆಯನ್ನು ಕುರಿತಾದ ದೂರದೃಷ್ಟಿಯೂ ಇಲ್ಲಿದೆ ಎಂಬ ಮಾತುಗಳಲ್ಲಿ ಹುರುಳಿಲ್ಲದೆ ಇಲ್ಲ. ನೋಟು ರದ್ದತಿಯ ಪರಿಣಾಮಗಳ ಕುರಿತಾದ ಚರ್ಚೆ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿತವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ವಾಗ್ವಾದದ ದಿಕ್ಕು ಬದಲಿಸುವ ನೆಪವೂ ಇಲ್ಲಿದೆ ಎಂಬಂಥ ತರ್ಕ ಇದು.

ದೆಹಲಿ ಹೈಕೋರ್ಟ್‌ನಲ್ಲಿ ವೈವಾಹಿಕ ಅತ್ಯಾಚಾರ ಅಪರಾಧವಾಗಿಸುವ ವಿರುದ್ಧ  ವಾದವನ್ನು ಮಂಡಿಸಿರುವ ಕೇಂದ್ರ ಸರ್ಕಾರ ತೀವ್ರ ಟೀಕೆಗಳಿಗೆ ಗುರಿಯಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳಾ ಕೇಂದ್ರಿತ, ಮಹಿಳಾ ಪರ ಸರ್ಕಾರ ಎಂಬಂಥ ಚರ್ಚೆಗಳು ಕಾವು ಪಡೆದುಕೊಳ್ಳುವುದು ಅನುಕೂಲಕರ. ಅಷ್ಟೇ ಅಲ್ಲ, ರೈಲ್ವೆ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಕಾಳಜಿ ಪ್ರದರ್ಶಿಸಿರುವ ಮೋದಿಯವರು ಸುರೇಶ್ ಪ್ರಭುವನ್ನು ಬದಲಿಸಿ ಪೀಯೂಷ್ ಗೋಯಲ್ ಅವರಿಗೆ ರೈಲ್ವೆ ಖಾತೆ ನೀಡಿರುವುದು ಆಡಳಿತದಲ್ಲಿನ ಅಂತರ ಮುಚ್ಚಿ ದಕ್ಷತೆ ತರುವ ಯತ್ನವಾಗಿದೆ.

ಇಂತಹ ಸನ್ನಿವೇಶದಲ್ಲಿ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನಿರ್ಮಲಾ ಸೀತಾರಾಮನ್ ಅವರು ಎದುರಿಸಬೇಕಾಗಿರುವ ಸವಾಲುಗಳು ಅನೇಕ. ಪಾಕಿಸ್ತಾನ ಹಾಗೂ ಚೀನಾ ಜೊತೆ ಗಡಿ ಉದ್ವಿಗ್ನತೆಯನ್ನು ಭಾರತ ಅನುಭವಿಸುತ್ತಿರುವ ಸಂದರ್ಭ ಇದು. ಸಿಕ್ಕಿಂ ವಲಯದಲ್ಲಿ ಚೀನಾ ಜೊತೆಗಿನ ಬಿಕ್ಕಟ್ಟು ಮಿಲಿಟರಿ ಸಂಘರ್ಷವಾಗಿ ಪರಿಣಮಿಸಿಬಿಡಬಹುದು ಎಂಬಂಥ ಸ್ಥಿತಿಯಿಂದ ಈಗಷ್ಟೇ ಹೊರಬಂದಿರುವ ಸಂದರ್ಭದಲ್ಲಿ ಈ ಗುರುತರ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುತ್ತಿದ್ದಾರೆ ಅವರು.

ದೆಹಲಿಯ ಜೆಎನ್‌ಯುನಲ್ಲಿ ಅರ್ಥಶಾಸ್ತ್ರ ಓದಿದ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವೆಯಾಗಿ ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ  ತಮ್ಮ ಸಂಧಾನ ಚಾತುರ್ಯ ಪ್ರದರ್ಶಿಸಿದ್ದಾರೆ. ನೋಟು ರದ್ದತಿ ಹಾಗೂ ಜಿಎಸ್‌ಟಿಿ ಜಾರಿ  ಆರ್ಥಿಕತೆ ಮೇಲೆ ಬೀರಿದ ಪರಿಣಾಮಗಳ ಮಧ್ಯೆಯೂ ಅವನ್ನು ಸಮರ್ಥಿಸಿದ್ದಾರೆ. ಹಾಗೆಯೇ ರಫ್ತು ವಹಿವಾಟಿನಲ್ಲಿ ಭಾರತದ ಮಂಕಾದ ಕಾರ್ಯ ನಿರ್ವಹಣೆ ಬಗ್ಗೆ ಟೀಕೆಗಳನ್ನೂ ಎದುರಿಸಿದ್ದಾರೆ. ಆದರೆ, ‘ಪ್ರತಿ ಟೀಕೆಯಲ್ಲಿಯೂ ಸಂದೇಶವಿರುತ್ತದೆ. ಅದರಿಂದ ನಾವು ಕಲಿಯಬೇಕಾಗುತ್ತದೆ. ಟೀಕೆಗಳಿಗೆ ನಾನೇನೂ ವಿರೋಧಿಯಲ್ಲ. ಹೆದರಿಕೆಯೂ ಇಲ್ಲ. ಖಂಡಿತವಾಗಿಯೂ ಟೇಕೆಗಳಲ್ಲಿರುವ ಸಂದೇಶ ಅರಿತುಕೊಳ್ಳುತ್ತೇನೆ. ವಿಮರ್ಶೆ, ಕಾರ್ಯನಿರ್ವಹಣೆಯನ್ನುಪ್ರತಿಫಲಿಸುವುದಿಲ್ಲ. ಸಾಧ್ಯವಾದ ತಿದ್ದುಪಡಿಗಳನ್ನು ಮಾಡಿಕೊಳ್ಳಲು ನೀವು ಸಿದ್ಧರಿದ್ದರೆ ಇದು ನಿಮ್ಮ ಕಾರ್ಯನಿರ್ವಹಣೆಯನ್ನು ಹೆಚ್ಚು ಮಾಡುತ್ತದೆ’ ಎಂದು ಹೇಳುವಂತಹ ಛಾತಿ ಹೊಂದಿದವರು ಅವರು.

ಪ್ರಾದೇಶಿಕ ಭದ್ರತೆ ಹಾಗೂ ಭೂ- ರಾಜಕೀಯ ವ್ಯವಸ್ಥೆ ಬದಲಾಗುತ್ತಲೇ ಇರುವ ಪ್ರಸಕ್ತ ಸಂದರ್ಭದಲ್ಲಿ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚು ಮಾಡುವುದು ಸೇರಿದಂತೆ ಹಲವು ಸಂಕೀರ್ಣ ಸವಾಲುಗಳನ್ನು ಎದುರಿಸಲೂ ನಿರ್ಮಲಾ ಸೀತಾರಾಮನ್ ಸಜ್ಜಾಗಬೇಕಿದೆ. ದೇಶಿ ರಕ್ಷಣಾ ಉತ್ಪಾದನೆಗೆ ಸರ್ಕಾರ ಗಮನ ಕೇಂದ್ರೀಕರಿಸುತ್ತಿದೆ. ಇಂತಹ ಸಂದರ್ಭದಲ್ಲಿ  ನಿರ್ಮಲಾ ಸೀತಾರಾಮನ್ ಅವರು ದೊಡ್ಡ ಸುಧಾರಣಾ ಉಪಕ್ರಮಗಳನ್ನು ಇನ್ನೂ ಮುಂದಕ್ಕೆ ಒಯ್ಯಬೇಕಿದೆ.  ಅಮೆರಿಕ ಹಾಗೂ ರಷ್ಯಾದಂತಹ ಅನೇಕ ರಾಷ್ಟ್ರಗಳ ಜೊತೆ ಮಹತ್ವಾಕಾಂಕ್ಷೆಯ ಆಯಕಟ್ಟಿನ ಸಹಭಾಗಿತ್ವ ಮಾದರಿಗಳನ್ನು ಜಾರಿಗೊಳಿಸಬೇಕಿದೆ. ಹೊಸ ಮಾದರಿಯಲ್ಲಿ ಸಬ್‌ಮೆರಿನ್ ಹಾಗೂ ಫೈಟರ್ ಜೆಟ್‌ಗಳಂತಹ ಮಿಲಿಟರಿ ಉಪಕರಣಗಳನ್ನು ವಿದೇಶಿ ರಕ್ಷಣಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತದಲ್ಲಿ ತಯಾರಿಸಲು ಭಾರತದ ಖಾಸಗಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ರಕ್ಷಣಾ ತಯಾರಿಕೆ ಕ್ಷೇತ್ರ ಆರ್ಥಿಕತೆಗೆ ಪುನಶ್ಚೇತನ ನೀಡುವುದಲ್ಲದೆ ಉದ್ಯೋಗಗಳ ಸೃಷ್ಟಿಗೂ ದಾರಿಯಾಗುತ್ತದೆ ಎಂಬ ನಂಬಿಕೆ ಎನ್‌ಡಿಎ ಸರ್ಕಾರದ್ದು.

ಪುರುಷಮಯವಾಗಿರುವ ಮಿಲಿಟರಿಯ ಅಧಿಕಾರದ ಮೊಗಸಾಲೆಗಳಲ್ಲಿ ತಮ್ಮ ಛಾಪು ಮೂಡಿಸುವ ಸವಾಲು ಈಗ ಅವರಿಗಿದೆ. ಸ್ಥಗಿತಗೊಂಡಿದ್ದ ರಕ್ಷಣಾ ಖರೀದಿ ಯೋಜನೆಗಳಿಗೆ ಮನೋಹರ ಪರಿಕ್ಕರ್ ಅವರು ರಕ್ಷಣಾ ಸಚಿವರಾಗಿದ್ದಅವಧಿಯಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಗೋವಾ ಮುಖ್ಯಮಂತ್ರಿಯಾಗಲು ರಕ್ಷಣಾ ಖಾತೆಯನ್ನು ಪರಿಕ್ಕರ್ ತೊರೆದ ನಂತರ ಜೇಟ್ಲಿ ಅವರು ಹಣಕಾಸು ಖಾತೆ ಜೊತೆಗೆ ರಕ್ಷಣಾಖಾತೆಯ ಹೊಣೆಯನ್ನೂ ಹೊತ್ತಿದ್ದರು. ಪರಿಕ್ಕರ್ ಅವರು ಇದ್ದಕ್ಕಿದ್ದಂತೆ ನಿರ್ಗಮಿಸಿದ ಕಾರಣದಿಂದಾಗಿ ಹಲವು ಕೆಲಸಗಳು ಅಪೂರ್ಣವಾಗಿಯೇ ಉಳಿದಿವೆ. ಬಹುತೇಕ ಮಿಲಿಟರಿ ಆಧುನೀಕರಣ ಕಾರ್ಯಕ್ರಮಗಳು ಆಡಳಿತಾತ್ಮಕ ಅಡೆತಡೆ ಮತ್ತಿತರ ಕಾರಣಗಳಿಂದಾಗಿ ವಿಳಂಬವಾಗಿವೆ. ಈ ಎಲ್ಲವೂ ಈಗ ಹೊಸ ಸಚಿವೆ ನೇತೃತ್ವದಲ್ಲಿ ಚಾಲನೆಗೊಳ್ಳಬೇಕಿವೆ.

1960ರಷ್ಟು ಹಿಂದೆಯೇ ವಿಶ್ವದ ಮೊದಲ ಮಹಿಳಾ ಪ್ರಧಾನಿ ಶ್ರೀಲಂಕಾದ ಸಿರಿಮಾವೊ ಭಂಡಾರನಾಯಿಕೆ ಅವರು ಮೊದಲ ರಕ್ಷಣಾ ಸಚಿವರೂ ಆಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬೇಕು. ಈಗ ಫ್ರಾನ್ಸ್, ಇಟಲಿ, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ಸುಮಾರು 15 ರಾಷ್ಟ್ರಗಳಲ್ಲಿ ಮಹಿಳಾ ರಕ್ಷಣಾ ಸಚಿವರಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರೂ ಬಾಂಗ್ಲಾದೇಶದ ರಕ್ಷಣಾ ಸಚಿವರಾಗಿದ್ದಾರೆ. ‘ಮಹಿಳೆಯಾಗಿಯೂ ’ ಭಯೋತ್ಪಾದನೆಯನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರನ್ನು 2015ರಲ್ಲಿ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ‘ಮಹಿಳೆಯಾಗಿಯೂ’ ಎಂಬ ಮೋದಿ ಮಾತು ತೀವ್ರ ಟೀಕೆಗೊಳಗಾಗಿತ್ತು. ಈಗ ಅದೇ ಪ್ರಧಾನಿ ರಕ್ಷಣಾ ಖಾತೆಗೆ ಮಹಿಳೆಯನ್ನು ನಿಯೋಜಿಸಿ ದೊಡ್ಡ ಸಂದೇಶ ನೀಡಿದ್ದಾರೆ.

14 ಲಕ್ಷ ಸದಸ್ಯರಿರುವ ಸಶಸ್ತ್ರ ಪಡೆಗಳ 62,000 ಅಧಿಕಾರಿಗಳ ಪೈಕಿ ಮಹಿಳಾ ಅಧಿಕಾರಿಗಳ ಸಂಖ್ಯೆ ಕೇವಲ 3,500. ಎಂದರೆ ಸೇನೆಯಲ್ಲಿ ಲಿಂಗ ತಾರತಮ್ಯ ಯಾವ ಪರಿ ಇದೆ ಎಂಬುದನ್ನು ಊಹಿಸಿಕೊಳ್ಳಬಹುದು. ಸುದೀರ್ಘ ಕಾಲದ ಕಾನೂನು ಸಮರಗಳ ನಂತರ ಮಹಿಳಾ ಅಧಿಕಾರಿಗಳು ಈಗ ಕಾಯಂ ನೇಮಕಾತಿಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತಿದೆ. ಯುದ್ಧರಂಗದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಲು ಭೂಸೇನೆಯಲ್ಲಿ ಮಹಿಳೆಗೆ ಅವಕಾಶ ನೀಡಲಾಗುವುದು ಎಂದು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕಳೆದ ಜೂನ್‌ನಲ್ಲಷ್ಟೇ ಹೇಳಿದ್ದರು. ಈಗ ಇದನ್ನು ಮುಂದಕ್ಕೆ ಒಯ್ಯುವ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್‌ರತ್ತ ನಿರೀಕ್ಷೆ ಸಹಜವಾಗಿಯೇ ಹೆಚ್ಚಿರುತ್ತದೆ. ಈ ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿರುವುದಾಗಿ ಸಚಿವೆಯೂ ಹೇಳಿರುವುದು ಭರವಸೆದಾಯಕ.

ಮಹಿಳಾ ನಾಯಕಿಯರು ಸಾಮಾನ್ಯವಾಗಿ ಶಾಂತಿ ಪ್ರತಿಪಾದಕರಾಗಿರುತ್ತಾರೆಯೆ? ಎಂಬುದೂ ಚರ್ಚೆಯ ವಸ್ತು. ಜನಸಾಮಾನ್ಯ ಮಹಿಳೆಯರು ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಎಂಬುದು ನಿಜ. ಯುದ್ಧಗಳಲ್ಲಿ ಅಮೆರಿಕ ತೊಡಗಿಕೊಳ್ಳುವುದಕ್ಕೆ ಅಲ್ಲಿನ ಮಹಿಳೆಯರ ಬೆಂಬಲ ಇಲ್ಲದಿದ್ದುದು ಕಳೆದ ಶತಮಾನದಲ್ಲಿ ನಡೆದ ಸಂಶೋಧನಾ ಅಧ್ಯಯನಗಳಲ್ಲಿಯೂ ವ್ಯಕ್ತವಾಗಿತ್ತು. ಆದರೆ ಯುದ್ಧಗಳಲ್ಲಿ ತೊಡಗಿಕೊಳ್ಳುವಲ್ಲಿ ಮಹಿಳಾ ನಾಯಕಿಯರು ಪುರುಷರಿಗಿಂತ ಭಿನ್ನವಾಗೇನೂ ಇರುವುದಿಲ್ಲ ಎಂಬುದನ್ನೂ ಇತಿಹಾಸ ತೋರಿಸಿಕೊಟ್ಟಿದೆ.

ಸಮಕಾಲೀನ ಇತಿಹಾಸದಲ್ಲಿ ಇಂದಿರಾ ಗಾಂಧಿ, ಇಸ್ರೇಲ್ ಪ್ರಧಾನಿಯಾಗಿದ್ದ ಗೋಲ್ಡಾ ಮೀರ್, ಬ್ರಿಟನ್ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ ಅವರುಗಳೆಲ್ಲಾ ಯುದ್ಧಗಳಲ್ಲಿ ತೊಡಗಿಕೊಂಡವರೇ. ಬ್ರಿಟಿಷ್ ನಿಯಂತ್ರಿತ ಫಾಕ್‌ಲ್ಯಾಂಡ್ ದ್ವೀಪಗಳ ಮೇಲೆ ಅರ್ಜೆಂಟೀನಾ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಲು ಮಾರ್ಗರೆಟ್ ಥ್ಯಾಚರ್ ಹಿಂಜರಿಯಲಿಲ್ಲ. ಈ ದ್ವೀಪಗಳ ರಕ್ಷಣೆಯಲ್ಲಿ ಬ್ರಿಟನ್ ಯಶಸ್ವಿಯಾದ ನಂತರ ಮಾರ್ಗರೆಟ್ ಥ್ಯಾಚರ್ ಜನಪ್ರಿಯತೆ ಹೆಚ್ಚಾಯಿತು. ಹೀಗಿದ್ದೂ ಯುದ್ಧಗಳ ಬಗ್ಗೆ ಮಹಿಳಾ ನಾಯಕಿಯರು ಪುರುಷರಿಗಿಂತ ಭಿನ್ನವಾಗಿ ಆಲೋಚಿಸುತ್ತಾರೇನೊ! ಗೋಲ್ಡಾ ಮೀರ್ ಮಾತುಗಳಿವು: ‘ಮಧ್ಯ ರಾತ್ರಿಯಾದರೂ ಸರಿಯೇ ನಮ್ಮ ಒಬ್ಬನೇ ಒಬ್ಬ ಸೈನಿಕ ಸತ್ತರೂ ನನಗೆ ಮಾಹಿತಿ ತಿಳಿಸಬೇಕು ಎಂದು ನಾನು ಸೂಚನೆಗಳನ್ನು ನೀಡಿದ್ದೇನೆ. ಈಜಿಪ್ಟ್ ಸೈನಿಕ ಸತ್ತಾಗಲೂ ಮಧ್ಯರಾತ್ರಿಯಾದರೂ ಸರಿ ತನ್ನನ್ನು ಎಚ್ಚರಿಸಬೇಕು ಎಂದು ಅಧ್ಯಕ್ಷ ನಾಸೆರ್ ಸೂಚನೆಗಳನ್ನು ನೀಡಿದಲ್ಲಿ ಶಾಂತಿ ಮೂಡುತ್ತದೆ’.

ಪುರುಷ ಹಾಗೂ ಮಹಿಳಾ ನಾಯಕಿಯರ ಮಧ್ಯೆ ವ್ಯತ್ಯಾಸಗಳಿದ್ದರೂ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮಹಿಳಾ ನಾಯಕಿಯರಿದ್ದಾರೆ ಎಂಬುದಂತೂ ನಿಜ. ಫ್ರೆಂಚ್ ಲೇಖಕಿ ಸಿಮನ್ ದಿ ಬುವಾ ಮಾತುಗಳಿವು: ‘ಪರ್ಸಿಯಸ್, ಹರ್ಕ್ಯುಲಸ್, ಡೇವಿಡ್, ಅಖಿಲೆಸ್, ಲ್ಯಾನ್ಸ್ ಲಾಟ್, ಫ್ರೆಂಚ್ ಯೋಧರುಗಳಾದ ಡಿ ಗೆಕ್ಲಾ ಮತ್ತು ಬಯಾರ್ಡ್ ಹಾಗೂ ನೆಪೊಲಿಯನ್. ಇಷ್ಟೆಲ್ಲಾ ಪುರುಷರ ನಡುವೆ ಕಾಣಸಿಗುವ ಮಹಿಳೆಯ ಹೆಸರು ಒಂದೇ ಒಂದು. ಅದು ಜೋನ್ ಆಫ್ ಆರ್ಕ್’.

ಇಂದು ಬೆಳೆಯುತ್ತಿರುವ ಯುವಕರಿಗೆ ಪ್ರೇರಣೆ ಪಡೆಯಲು ಅನೇಕ ಯೋಧರ ಮಾದರಿಗಳಿವೆ. ಆದರೆ ಮಹಿಳೆಯರಿಗೆ ಇಂತಹ ಮಾದರಿಗಳು ಎಲ್ಲಿವೆ? ಆದರೆ ಇಂದಿನ ಹೆಣ್ಣುಮಕ್ಕಳಿಗೆ ಅನುಸರಿಸಲು ಅನೇಕ ಸಶಕ್ತ ಮಾದರಿಗಳು ಸೃಷ್ಟಿಯಾಗುತ್ತಿವೆ ಎಂಬುದೇ ಸಂತಸದ ಸಂಗತಿ. ನಾರ್ವೆ ಪ್ರಧಾನಿಯಾಗಿದ್ದ ಗ್ರೊ ಹಾರ್ಲೆಮ್‍‍ ಬ್ರಂಡ್ಟ್ ಲ್ಯಾಂಡ್‌ಗೆ ಇಸ್ರೇಲ್‌ನ ಗೋಲ್ಡಾ ಮೇರ್‌ನ ಮಾದರಿ ಇತ್ತು. ಬ್ರಿಟನ್ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್‌ಗೆ ಇಂದಿರಾ ಗಾಂಧಿಯ ಮಾದರಿ ಇತ್ತು.

ಎನ್‌ಡಿಎ ಸರ್ಕಾರದಲ್ಲಿ ಈಗ ಆರು ಸಂಪುಟ ದರ್ಜೆ ಸಚಿವೆಯರಿದ್ದಾರೆ ಎಂಬುದೂ ದೊಡ್ಡ ಸಂಗತಿಯೆ. ಮಹಿಳಾ ಸಶಕ್ತೀಕರಣದ ಸಂಕೇತಗಳಾಗಿಯಷ್ಟೇ ಈ ಹುದ್ದೆಗಳು ಉಳಿಯಬಾರದು. ಸ್ವತಂತ್ರವಾಗಿ ಕೆಲಸ ಮಾಡಲೂ ಅವಕಾಶ ನೀಡಬೇಕು ಎಂಬಂತಹ ಸಾರ್ವಜನಿಕರ ಮಾರ್ಮಿಕ ಮಾತುಗಳನ್ನೂ ನಮ್ಮ ಬಲಿಷ್ಠ ಪ್ರಧಾನಿಯವರು ಗಂಭೀರವಾಗಿ ತೆಗೆದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry