7

ವೃದ್ಧೆಗೆ ಕಾರು ಗುದ್ದಿಸಿ ಹೋಗಿದ್ದ ಉಪನ್ಯಾಸಕ ಸೆರೆ

Published:
Updated:
ವೃದ್ಧೆಗೆ ಕಾರು ಗುದ್ದಿಸಿ ಹೋಗಿದ್ದ ಉಪನ್ಯಾಸಕ ಸೆರೆ

ಬೆಂಗಳೂರು: ಮತ್ತೀಕೆರೆ ಮುಖ್ಯರಸ್ತೆಯಲ್ಲಿ ಸೆ.1ರ ಬೆಳಿಗ್ಗೆ ಎಲಿಯಮ್ಮ (74) ಎಂಬುವರಿಗೆ ಕಾರು ಡಿಕ್ಕಿ ಮಾಡಿ, ವಾಹನ ನಿಲ್ಲಿಸದೆ ಪರಾರಿಯಾಗಿದ್ದ ಉಪನ್ಯಾಸಕ ಕೆ.ಎಸ್.ನಾಗರಾಜ್ ಅವರು ಯಶವಂತಪುರ ಸಂಚಾರ ‍ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಎಂ.ಎಸ್.ರಾಮಯ್ಯ ನಗರ ನಿವಾಸಿಯಾದ ನಾಗರಾಜ್, ರಾಜಾಜಿನಗರದ ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಸೆ.1ರ ಬೆಳಿಗ್ಗೆ 7.45ರ ಸುಮಾರಿಗೆ ಅವರು ಕಾರಿನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ, ರಸ್ತೆ ದಾಟುತ್ತಿದ್ದ ಎಲಿಯಮ್ಮ ಅವರಿಗೆ ಡಿಕ್ಕಿ ಮಾಡಿ ವಾಹನ ನಿಲ್ಲಿಸದೆ ಹೊರಟು ಹೋಗಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಅದೇ ದಿನ ಮಧ್ಯಾಹ್ನ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅಪಘಾತದ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

8319 ಸುಳಿವು: ‘ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯದಲ್ಲಿ ಕಾರಿನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದರೆ, ಅದು ಕೆಂಪು ಬಣ್ಣದ ಮಾರುತಿ ಆಲ್ಟೋ ಕಾರು ಎಂದಷ್ಟೇ ಗೊತ್ತಾಗಿತ್ತು. ಸ್ವಲ್ಪ ಸಮಯದ ನಂತರ ಠಾಣೆಗೆ ಬಂದ ಅಪಘಾತದ ಪ್ರತ್ಯಕ್ಷದರ್ಶಿ ಚಾಕೋ ಎಂಬುವರು, ‘ಆ ಕಾರಿನ ನೋಂದಣಿ ಸಂಖ್ಯೆ 8319’ ಎಂದು ಹೇಳಿದರು. ಆ ಸುಳಿವು ಆಧರಿಸಿ ತನಿಖೆ ಪ್ರಾರಂಭಿಸಿದೆವು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

(ಎಲಿಯಮ್ಮ)

‘ಆರ್‌ಟಿಒ ಕಚೇರಿಯಲ್ಲಿ ಹಾಗೂ ನಮ್ಮ ಆಟೊಮೇಷನ್ ಸೆಂಟರ್‌ನಲ್ಲಿ ಪರಿಶೀಲನೆ ನಡೆಸಿ ಆ ನೋಂದಣಿ ಸಂಖ್ಯೆಯಲ್ಲಿರುವ ಎಲ್ಲ ಕಾರುಗಳ ವಿವರ ತೆಗೆದೆವು. ಆಗ ಕೆಎ–04–ಎಂಬಿ–8319 ನೋಂದಣಿ ಸಂಖ್ಯೆಯಲ್ಲಿ ಕೆಂಪು ಬಣ್ಣದ ಮಾರುತಿ ಆಲ್ಟೋ ಕಾರು ಇರುವುದು ಗೊತ್ತಾಯಿತು. ಅದರ ಮಾಲೀಕ ನಾಗರಾಜ್ ಎಂಬುದೂ ತಿಳಿಯಿತು.’

‘ಮೊದಲು ಗೆದ್ದಲಹಳ್ಳಿಯಲ್ಲಿ ನೆಲೆಸಿದ್ದ ನಾಗರಾಜ್, ವಾಹನ ನೊಂದಣಿ ಮಾಡಿಸುವಾಗ ಅದೇ ವಿಳಾಸ ಕೊಟ್ಟಿದ್ದರು. ಹೀಗಾಗಿ, ಅವರನ್ನು ಹುಡುಕಿಕೊಂಡು ನಾವೂ ಗೆದ್ದಲಹಳ್ಳಿಗೇ ಹೋದೆವು. ಆದರೆ, ನಾಗರಾಜ್ ಕುಟುಂಬ ಎರಡು ವರ್ಷಗಳ ಹಿಂದೆಯೇ ಎಂ.ಎಸ್.ರಾಮಯ್ಯನಗರಕ್ಕೆ ವಾಸ್ತವ್ಯ ಬದಲಾಯಿಸಿರುವುದಾಗಿ ಸ್ಥಳೀಯರು ಹೇಳಿದರು. ನಂತರ ಅಲ್ಲಿಗೆ ಹೋಗಿ ಆರೋಪಿಯನ್ನು ಬಂಧಿಸಿದೆವೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry