7

ನದಿಜೋಡಣೆಯ ಗಡಚು ಮತ್ತು ಗಡಕರೀಕರಣ

ನಾಗೇಶ ಹೆಗಡೆ
Published:
Updated:
ನದಿಜೋಡಣೆಯ ಗಡಚು ಮತ್ತು ಗಡಕರೀಕರಣ

ಅತಿವೃಷ್ಟಿ ಅನಾವೃಷ್ಟಿಗಳ ಈ ಭೀಕರ ತೊನೆದಾಟವನ್ನು ನಿಲ್ಲಿಸಲು ಏಕಕಾಲಕ್ಕೆ ಎರಡು ಯತ್ನಗಳು ಆರಂಭವಾದಂತಿವೆ. ಒಂದೆಡೆ ನದಿಗಳ ಪುನಶ್ಚೇತನಕ್ಕಾಗಿ ಸದ್ಗುರು ಜಗ್ಗಿ ವಾಸುದೇವ್ ಇಡೀ ಭಾರತದ ಜನರನ್ನು ಜೋಡಿಸಲೆಂದು ಮೈಕೊಡವಿ ಹೊರಟಿದ್ದಾರೆ. ಅದೇ ವೇಳೆಗೆ ಇತ್ತ ಭಾರೀ ವಿದೇಶೀ ಯಂತ್ರೋಪಕರಣ ಮತ್ತು ವಿಶ್ವಬ್ಯಾಂಕ್ ಸಾಲದ ನೆರವಿನ ನದಿಜೋಡಣೆಯ ಕನಸು ಹೆಣೆಯುತ್ತ ಕೂತಿದ್ದ ನಿತಿನ್ ಗಡ್ಕರಿ ಜಲಸಂಪನ್ಮೂಲ ಸಚಿವರಾಗಿ ಅಧಿಕಾರಕ್ಕೆ ಬಂದಿದ್ದಾರೆ. ಇಬ್ಬರ ಘೋಷಣೆಯೂ ಒಂದೇ: ನಮ್ಮ ನದಿಗಳನ್ನು ಸಾಯಲು ಬಿಡಬಾರದು. ಇಬ್ಬರ ಗುರಿಯೂ ಸರಿಸುಮಾರು ಒಂದೇ: ದೇಶದ ಎಲ್ಲ ನದಿಗಳೂ ವರ್ಷವಿಡೀ ಹರಿಯುವಂತಾಗಬೇಕು ಎಂದು ಸದ್ಗುರು ಹೇಳಿದರೆ, ಗಡ್ಕರಿ ನೂರು ನದಿಗಳಲ್ಲಿ ಹಡಗು ಓಡಿಸುವುದು ಸರ್ಕಾರದ ಉದ್ದೇಶ ಎಂದು ಹೇಳಿದ್ದಾರೆ.

ಆದರೆ ಅವರಿಬ್ಬರು ಆಯ್ಕೆ ಮಾಡಿಕೊಂಡ ವಿಧಾನಗಳು ಮಾತ್ರ ಹೋಲಿಕೆಗೆ ಸಿಗುವಂತಿಲ್ಲ. ಅಧ್ಯಾತ್ಮ ಗುರು ಹಾಗೂ ಅಸ್ಖಲಿತ ವಾಗ್ಮಿ ಜಗ್ಗಿ ವಾಸುದೇವ್ ನಮಗೆಲ್ಲ ದಿಗಿಲು ಹುಟ್ಟಿಸುವಂತೆ ಭಾರತದ ನದಿಗಳ ದುಃಸ್ಥಿತಿಯನ್ನು ವರ್ಣಿಸುತ್ತಾರೆ. ‘ಕೃಷ್ಣಾ ನದಿ ಸಮುದ್ರವನ್ನು ಸೇರುವ ಮೊದಲೇ ವರ್ಷದಲ್ಲಿ ಸುಮಾರು ನಾಲ್ಕು ತಿಂಗಳು ಬತ್ತುತ್ತಿದೆ; ಕಾವೇರಿ ನದಿ ಎರಡೂವರೆ ತಿಂಗಳುಗಳ ಕಾಲ ಸಮುದ್ರದಂಚಿಗೆ ಒಣಗಿ ನಿಂತಿರುತ್ತದೆ. ನಾವು ಈಗಲೂ ಏನೂ ಮಾಡದಿದ್ದರೆ ಇನ್ನು 10-15 ವರ್ಷಗಳಲ್ಲಿ ನದಿಗಳೆಲ್ಲ ಒಣಗಿ ಹೋಗುತ್ತವೆ’ ಎನ್ನುತ್ತಾರೆ. ನಿತಿನ್‌ ಗಡ್ಕರಿ, ‘ಶೇಕಡಾ 80ರಷ್ಟು ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೋರಿ ಹೋಗುತ್ತಿದೆ’ ಎನ್ನುತ್ತಾರೆ. ಜಗ್ಗಿಯವರು ನದಿಯನ್ನು ಜೀವಚೈತನ್ಯದ ಸೆಲೆ ಎನ್ನುತ್ತಾರೆ. ಗಡ್ಕರಿಯವರು ನದಿಗಳ ಮೂಲಕ ಹಡಗುಗಳನ್ನೂ ಹೊವರ್‌ಕ್ರಾಫ್ಟ್ (ತ್ರಿಚರಿ) ವಿಮಾನಗಳನ್ನೂ ಓಡಿಸಿ ಎಷ್ಟೊಂದು ಬಗೆಯಲ್ಲಿ ವಾಣಿಜ್ಯೋದ್ಯಮವನ್ನು ಎತ್ತರಕ್ಕೆ ಎತ್ತಬಹುದು ಎನ್ನುತ್ತಾರೆ. ಸದ್ಗುರು, ‘ನೀರಿದ್ದಲ್ಲಿ ಅರಣ್ಯ ಬೆಳೆಯುವುದಿಲ್ಲ- ಅರಣ್ಯಗಳಿದ್ದಲ್ಲಿ ನೀರು ಇರುತ್ತದೆ’ ಎನ್ನುತ್ತ ನದಿಗಳ ಎರಡೂ ದಂಡೆಗಳಲ್ಲಿ ಕನಿಷ್ಠ ಒಂದು ಕಿಲೊಮೀಟರ್ ಅಗಲಕ್ಕೆ ಅರಣ್ಯಗಳನ್ನು ಬೆಳೆಸಲು ಕರೆ ಕೊಡುತ್ತಿದ್ದಾರೆ. ದಂಡೆಗಳಲ್ಲಿರುವ ಕೃಷಿಭೂಮಿಯಲ್ಲಿ ಧಾನ್ಯದ ಬದಲು ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎನ್ನುತ್ತಾರೆ. ಗಡ್ಕರಿಯವರ ಆದ್ಯತೆ ಅರಣ್ಯಗಳ ಕಡೆಗೆ ಇಲ್ಲವೇ ಇಲ್ಲ. ನದಿಗಳಿಂದ ಮರಳನ್ನು ಹೇರಳವಾಗಿ ಎತ್ತಿ ಕಟ್ಟಡಗಳನ್ನು ಕಟ್ಟಬೇಕು. ಆಗ ನದಿಗಳ ಆಳ ತಂತಾನೇ ಹೆಚ್ಚಾಗುವುದರಿಂದ ಜಲಸಾರಿಗೆ ಸಲೀಸಾಗುತ್ತದೆ ಎಂದು ಅವರು ಕಳೆದ ವರ್ಷ ಜಲಸಾರಿಗೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಾಗ ತಮ್ಮ ಕನಸಿನ ನದಿನಕ್ಷೆಯನ್ನು ಬಿಚ್ಚಿ ತೋರಿಸಿದ್ದರು.

ನದಿಗಳ ಕಡೆ ಜನರ ಗಮನವನ್ನು ಸೆಳೆಯಲೆಂದು ಜಗ್ಗಿ ವಾಸುದೇವ್ ಅವರು ಈ ಇಡೀ ತಿಂಗಳು ರಾಷ್ಟ್ರವ್ಯಾಪಿ ‘ರಿವರ್ ರ‍್ಯಾಲಿ’ ಹಮ್ಮಿಕೊಂಡಿದ್ದಾರೆ. ಸೆಪ್ಟೆಂಬರ್ 1ರಿಂದ ಕೊಯಮತ್ತೂರಿನ ಅವರ ಆಶ್ರಮದಿಂದ ಆರಂಭವಾದ ರ‍್ಯಾಲಿ ಕನ್ಯಾಕುಮಾರಿ, ಮದುರೈ, ಪಾಂಡಿಚೇರಿ ಮೂಲಕ ಇಂದು ಮೈಸೂರು, ನಾಳೆ ಬೆಂಗಳೂರನ್ನು ಹಾದು ಚೆನ್ನೈ, ಹೈದರಾಬಾದ್, ಮುಂಬೈ, ಭೋಪಾಲ್, ಚಂಡೀಗಡ, ಹರದ್ವಾರ ದಾಟಿ ಅಕ್ಟೊಬರ್ 2ರಂದು ದಿಲ್ಲಿಗೆ ತಲುಪಲಿದೆ. ಪ್ರತಿ ನಗರದಲ್ಲೂ ಅದ್ಧೂರಿ ಸಭೆ, ಗಣ್ಯರ ಉಪನ್ಯಾಸ ಮತ್ತು ಜಗ್ಗಿಯವರ ವಾಗ್ಝರಿ ಎಲ್ಲವೂ ಅಂತರಜಾಲದಲ್ಲಿ ದಿನದಿನವೂ ಕ್ಷಣಕ್ಷಣಕ್ಕೂ ಅಪ್‌ಡೇಟ್ ಆಗುತ್ತಿರುತ್ತದೆ. ಗುರುವಿನ ಪ್ರೇರಣೆಯಿದ್ದರೆ ಉತ್ತಮ ಕೆಲಸಕ್ಕೆ ಜನಜೋಡಣೆಯೂ ಸಾಧ್ಯ ಎಂದು ಜಗ್ಗಿಯವರ ತಂಡ ತೋರಿಸುತ್ತಿದೆ.

ಹಾಗೆಂದು ಸದ್ಗುರು ಪ್ರೇರಿತ ‘ರಿವರ್ ರ‍್ಯಾಲಿಗೆ’ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ ಎನ್ನುವಂತಿಲ್ಲ. ಸಮಾಜದಲ್ಲಿ ಉನ್ನತ ಸ್ತರದಲ್ಲಿರುವವರ ಬೆಂಬಲದಿಂದ ನಡೆಯುತ್ತಿರುವ ಈ ‘ಹೈಟೆಕ್’ ರ‍್ಯಾಲಿಯಲ್ಲಿ ನಮ್ಮ ನದಿಗಳ ದುಃಸ್ಥಿತಿಗಳ ಚರ್ಚೆ ಮತ್ತು ವಿಷಾದವಿಮರ್ಶೆ ಇರುತ್ತದೆ ನಿಜ. ಆದರೆ ಅದಕ್ಕೆ ಕಾರಣವಾದ ಅಸಲೀ ಕುಳಗಳ ಬಗ್ಗೆ ವಿಶ್ಲೇಷಣೆ ಇರುವುದಿಲ್ಲ. ಅಂದರೆ ಮರಳುದಂಧೆಯ ಬಗ್ಗೆ, ನದಿಯಂಚಿನ ನೆಲಹಿಡುಕರ ಬಗ್ಗೆ, ರೆಸಾರ್ಟ್ ಮಾರೀಚರ ಬಗ್ಗೆ, ನದಿಗೆ ಮಾಲಿನ್ಯ ತುಂಬುವ ಉದ್ಯಮಿಗಳ ಬಗ್ಗೆ, ಮಾಲಿನ್ಯ ನಿಯಂತ್ರಣ ಮಂಡಲಿಗಳ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ, ಸರ್ಕಾರದ ನಿದ್ರಾವಸ್ಥೆಯ ಬಗ್ಗೆ ರ‍್ಯಾಲಿಯಲ್ಲಿ ಬಡಿದೆಬ್ಬಿಸುವ ಭಾಷಣಗಳು ಕೇಳಿಸಲಿಕ್ಕಿಲ್ಲ.

ವೇದ,ಉಪನಿಷತ್ತುಗಳಲ್ಲಿ ನದಿಯ ಪಾತ್ರವನ್ನು ಪಾವಿತ್ರ್ಯವನ್ನು ಹೊಗಳುವ ಸವಿಮಾತುಗಳಿರುತ್ತವೆ. ವಿದೇಶಗಳಲ್ಲಿನ ನದಿಗಳ ಸುಂದರ ವರ್ಣನೆಗಳಿರುತ್ತವೆ. ಜಲಚಕ್ರದ ಕುರಿತು, ಬೇರುಗಳ ಮೂಲಕ ಜಿನುಗುವ ಮಳೆನೀರಿನ ಕುರಿತು ವೈಜ್ಞಾನಿಕ ಮಾಹಿತಿಗಳಿರುತ್ತವೆ. ಆದರೆ ಬೇರುಮೂಲದ ಜನರನ್ನು ತೊಡಗಿಸಿಕೊಳ್ಳುವ ಬಗ್ಗೆ ಆದ್ಯತೆ ಕಾಣುವುದಿಲ್ಲ. ದೊಡ್ಡ ಜನರ ಗಮನ ಸೆಳೆಯುವ ದೊಡ್ಡ ನದಿಗಳ ವಿಚಾರವೇ ಮುನ್ನೆಲೆಯಲ್ಲಿ ಇರುತ್ತದೆ ವಿನಾ, ನದಿಯ ಮೂಲಧಾರೆ ಎನಿಸಿದ ಚಿಕ್ಕ ಚಿಕ್ಕ ಹಳ್ಳಗಳಂಚಿನ ಚಿಕ್ಕ ಚಿಕ್ಕ ಶ್ರಮಿಕರನ್ನು ತೊಡಗಿಸುವ (ಮಹಾರಾಷ್ಟ್ರದ ಪಾನಿ ಫೌಂಡೇಶನ್ ಮಾದರಿಯ) ಕೈಂಕರ್ಯ ಇಲ್ಲ.

ಗಡ್ಕರಿಯವರ ನಕ್ಷೆಯಲ್ಲಿ ಹಡಗುಗಳು ಮತ್ತು ಹಡಗುಗಳನ್ನೇ ಎತ್ತಿಳಿಸುವ ಯಂತ್ರಗಳೇ ತುಂಬಿವೆ. ಫರಾಕ್ಕಾ ಅಡ್ಡಗಟ್ಟೆಯಲ್ಲಿ ಅವರು ಅಂಥ ಯಂತ್ರಗಳನ್ನು ಸ್ಥಾಪಿಸಲಿದ್ದಾರಂತೆ. ಗಂಗಾನದಿಯುದ್ದಕ್ಕೂ ಪ್ರತಿ ನೂರು ಕಿಲೊಮೀಟರಿಗೆ ಒಂದೊಂದರಂತೆ ಅಂಥ ಅಡ್ಡಗಟ್ಟೆ ಕಟ್ಟಿಸಲಿದ್ದಾರೆ. ಅವರಿಗೆ ಹೂಳಿನ ಸಮಸ್ಯೆ ಗೊತ್ತಿದ್ದಂತಿಲ್ಲ. ಫರಾಕ್ಕಾ ಅಡ್ಡಗಟ್ಟೆಯಿಂದಾಗಿಯೇ ಗಂಗೆಯಲ್ಲಿ ಹೂಳು ಶೇಖರಣೆ ಹೆಚ್ಚುತ್ತ ಅದರಿಂದಾಗಿಯೇ ಪ್ರವಾಹದ ಹಾವಳಿ ಹೆಚ್ಚುತ್ತ ಹೋಗಿದೆ ಎಂಬುದು ಎಷ್ಟೊಂದು ಬಾರಿ ನಿದರ್ಶನಕ್ಕೆ ಬಂದಿದೆ. ‘ಫರಾಕ್ಕಾವನ್ನು ಒಡೆದು ಹಾಕೋಣ’ ಎಂದು ಕಳೆದ ವರ್ಷ ಹೇಳಿದ್ದ ಬಿಹಾರದ ಮುಖ್ಯಮಂತ್ರಿ ಈಗ ಎನ್‌ಡಿಎ ತೆಕ್ಕೆಗೇ ಸೇರಿದ್ದಾರೆ.

ನದಿಗಳ ಜಾಳಿಗೆಯನ್ನು ಆಧರಿಸಿ ಸುಭದ್ರ ಭಾರತವನ್ನು ಕಟ್ಟಬೇಕೆಂಬ ಬಿಜೆಪಿಯ ಆಶಯಕ್ಕೆ ಮತ್ತೆ ನೀರೆರೆಯುವ ಲಕ್ಷಣಗಳು ಕಾಣುತ್ತಿವೆ. ಸಾರಿಗೆ ಸಚಿವ ಗಡ್ಕರಿಯವರು ಜಲಸಂಪನ್ಮೂಲ ಖಾತೆಯನ್ನು ವಹಿಸಿಕೊಳ್ಳುವ ಒಂದು ದಿನ ಮೊದಲು, ಸೆ.2ರಂದು ‘5.5 ಲಕ್ಷ ಕೋಟಿ ವೆಚ್ಚದಲ್ಲಿ 60 ನದಿಗಳ ಜೋಡಣೆ’ ಎಂಬ ಸುದ್ದಿ ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಸಂಭ್ರಮ ಎಲ್ಲೆಲ್ಲಿ ಹೇಗೆ ವ್ಯಕ್ತವಾಯಿತೊ ಗೊತ್ತಿಲ್ಲ. ಆದರೆ ಎಂದೋ ಮಲಗಿದ್ದ ವಿವಾದವೊಂದನ್ನು ಮತ್ತೆ ಎಬ್ಬಿಸಿದಂತಾಗಿದೆ. ನದಿ ಜೋಡಣೆ ಎಂದಾಕ್ಷಣ ಎಷ್ಟೊಂದು ಸುಂದರ ಚಿತ್ರಣಗಳು ನಮ್ಮೆದುರು ಮೂಡುತ್ತವೆ. ಗಂಗೆಯನ್ನು ಕಾವೇರಿಗೆ ಕೂಡಿಸಿದರೆ ಲಾಭಗಳು ಒಂದೆರಡಲ್ಲ: ಉತ್ತರ ಭಾರತದ ಮಹಾಪೂರದ ಹೆಚ್ಚುವರಿ ನೀರನ್ನು ಇತ್ತ ತಿರುಗಿಸಿ ಬರಗಾಲವನ್ನು ತಡೆಯಬಹುದು. ಕಡು ಬೇಸಿಗೆಯಲ್ಲೂ ಹಿಮ ಕರಗಿದ ನೀರನ್ನು ದಕ್ಷಿಣಕ್ಕೆ ಹರಿಸಬಹುದು. ಕಾಲುವೆಯ ಎರಡೂ ಕಡೆ ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರುಣ್ಣಿಸಬಹುದು. ಇಲ್ಲಿಂದ ಅಲ್ಲಿಗೆ ನೌಕಾಯಾನ, ಪ್ರವಾಸೋದ್ಯಮ, ಮೀನುಗಾರಿಕೆ, ನಗರಾಭಿವೃದ್ಧಿ, ಉದ್ಯಮ ಸರಣಿ... ಎಲ್ಲವೂ ಕನಸಿನ ಸುಂದರ ಮಣಿಮಾಲೆಯಂತೆ ಕಾಣಿಸುತ್ತದೆ. 1840ರಲ್ಲೇ ಬ್ರಿಟಿಷ್ ನೀರಾವರಿ ತಜ್ಞ ಸರ್ ಆರ್ಥರ್ ಕಾಟನ್, ಹೀಗೆ ಭೂಪಟದ ಮೇಲೆ ಗಂಗೆ ಕಾವೇರಿಯ ನಡುವೆ ಗೆರೆ ಎಳೆದಿದ್ದೇ ಮುಂದೆ ಅನೇಕರಿಗೆ ಅದು ಭಾರತದ ಅದೃಷ್ಟ ರೇಖೆಯಂತೆ ಕಾಣತೊಡಗಿತು. ನೆಹರೂ ಕಾಲದ ನೀರಾವರಿ ತಜ್ಞ ಕೆ.ಎಲ್. ರಾವ್ ಅವರಿಂದ ಹಿಡಿದು ಅನೇಕ ಎಂಜಿನಿಯರ್‌ಗಳು ಭಾರತದ ನಕಾಶೆಯ ಮೇಲೆ ಬೇರೆ ಬೇರೆ ಗೆರೆ ಎಳೆದರು. ದೊಡ್ಡ ಕನಸುಗಳ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದೇ ತಡ, 2002ರಲ್ಲಿ ಸರ್ವೋಚ್ಚ ನ್ಯಾಯಾಲಯ ಕೂಡ ‘ಯಾಕೆ ಇದನ್ನು ಕೈಗೆತ್ತಿಕೊಳ್ಳುತ್ತಿಲ್ಲ?’ ಎಂದು ಪ್ರಶ್ನಿಸಿತು. ಪ್ರಧಾನಿ ವಾಜಪೇಯಿ ಅದಕ್ಕೆ ಕೊಂಚ ನೂಕುಬಲ ಕೊಟ್ಟರು. ಇಡೀ ಯೋಜನೆಗಲ್ಲ, ಒಂದು ಸಣ್ಣ 70 ಕಿ.ಮೀ. ಉದ್ದದ ಕಾಲುವೆಯನ್ನು ಉ.ಪ್ರ.-ಮ.ಪ್ರ ನಡುವಣ ಕರ್ಣವತಿ ಮತ್ತು ಬೆತ್ವಾ ನದಿಗಳ ನಡುವೆ ನಿರ್ಮಿಸಲು ಅನುಮತಿ ಸಿಕ್ಕಿತು. ಈಗಲೂ ಅಪೂರ್ಣ ಸ್ಥಿತಿಯಲ್ಲಿರುವ ಅದಕ್ಕೆ ಪರಿಸರ ಇಲಾಖೆಯ ಅನುಮತಿ ದೊರಕಿಲ್ಲ.

ನದಿ ಜೋಡಣೆಯ ದುಸ್ಸಾಹಸ ಬೇಡ ಎನ್ನುವವರ ವಾದಸರಣಿ ಹೀಗಿದೆ: ಮಹಾಪೂರ–ಬರಗಾಲ ನಿವಾರಣೆ ಎಂಬುದು ಹುಸಿ ಕಲ್ಪನೆ ಅಷ್ಟೆ: ಭಾರತದ ಎಲ್ಲ ನದಿಗಳಲ್ಲೂ ಏಕಕಾಲಕ್ಕೆ ಮಹಾಪೂರ ಬರುತ್ತದೆ. ಬೇಸಿಗೆಯಲ್ಲಿ ಗಂಗೆಯಿಂದ ಕಾವೇರಿಗೆ ತುಸು ನೀರು ಬಂದಿದ್ದೇ ಆದರೆ ಕಾನಪುರದ ಕೊಳಕೆಲ್ಲ ಬರುತ್ತದೆ. ಕಾಲುವೆ ನಿರ್ಮಾಣಕ್ಕೆ ಅರಣ್ಯ, ವನ್ಯಧಾಮಗಳು ಬಲಿಯಾಗುತ್ತವೆ. ಕೋಟಿಗಟ್ಟಲೆ ಸಂಖ್ಯೆಯಲ್ಲಿ ಬಡಜನರನ್ನು ಎತ್ತಂಗಡಿ ಮಾಡಿ, ಕಾಲುವೆ ಪಕ್ಕದಲ್ಲಿ ಅನುಕೂಲಸ್ಥರು ಜಾಗ ಗಿಟ್ಟಿಸಿಕೊಳ್ಳುತ್ತಾರೆ. ನೀರಿಗಾಗಿ ಪ್ರತಿ ರಾಜ್ಯ, ಪ್ರತಿ ಕಣಿವೆಯಲ್ಲೂ ಜಗಳ ಹೊತ್ತಿಕೊಳ್ಳುತ್ತದೆ. ಕ್ರಮೇಣ ಹೂಳು ತುಂಬಿ, ಭೂಕುಸಿತ, ಭೂಕಂಪನ, ನೆರೆ ರಾದ್ಧಾಂತಗಳು ಹೆಚ್ಚುತ್ತವೆ. ಸಮುದ್ರಕ್ಕೆ ಪೋಷಕಾಂಶಗಳನ್ನು ಸಾಗಿಸಬೇಕಿದ್ದ ಎಲ್ಲ ನದಿಗಳ ಬಾಯಿ ಕಟ್ಟಿದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವೆಂದರೆ ಹವಾಮಾನ ಬದಲಾವಣೆಯ ಈ ಕಾಲದಲ್ಲಿ ಜಡಿಮಳೆ, ಬರಗಾಲ, ಕಾಲುವೆಗಳ ತಾಳಮೇಳ ಇರುವುದಿಲ್ಲ.

ಈ ಎಲ್ಲಕ್ಕೂ ನೂರಾರು ಉದಾಹರಣೆಗಳಿವೆ: ಪಂಜಾಬ್ ಮೂಲಕ ಹರಿಯಾಣಕ್ಕೆ ಬರುವ 214 ಕಿ.ಮೀ. ಉದ್ದದ ‘ಸತ್ಲೆಜ್-ಯಮುನಾ’ ಕಾಲುವೆ 1980ರಲ್ಲಿ ಪೂರ್ತಿಗೊಂಡ ನಂತರ ಆ ಎರಡು ರಾಜ್ಯಗಳ ಕೋರ್ಟ್ ಕದನ ನಿಂತಿದ್ದೇ ಇಲ್ಲ. ಕಳೆದ ವರ್ಷ ಸಾವಿರಾರು ಪಂಜಾಬಿ ರೈತರು ಕೃಷಿಯಂತ್ರಗಳ ಜಾಥಾದಲ್ಲಿ ಬಂದು ಗಿಡಮರ ಮಣ್ಣು ಕಲ್ಲುಗಳನ್ನೆಲ್ಲ ಕಿತ್ತು ಕಾಲುವೆಗೆ ತುಂಬಿ, ಹರಿಯಾಣದ ಕುರುಕ್ಷೇತ್ರಕ್ಕೆ ನೀರು ಹೋಗದಂತೆ ಕುರುಕ್ಷೇತ್ರ ಮಾಡಿದ್ದರು. ಕಾಲುವೆ ನಿರ್ಮಾಣವಾದ ಲಾಗಾಯ್ತೂ ಅಕ್ಕಪಕ್ಕದ ಭೂಮಿಗಾಗಿ ಊರೂರಲ್ಲಿ ಮಾರಾಮಾರಿ, ಕೊಲೆ, ಖಾಸಗಿ ಖಟ್ಲೆ ನಡೆಯುತ್ತಿವೆ (ನೆನಪಿಡಿ: ಪಂಜಾಬದಲ್ಲಿ ಶೇ 90ಕ್ಕೂ ಹೆಚ್ಚು ಭೂಮಿಗೆ ನೀರಾವರಿ ಸೌಲಭ್ಯವಿದೆ. ಸಾಲಬಾಧೆ, ಆತ್ಮಹತ್ಯೆ, ಕ್ಯಾನ್ಸರ್ ಕಾಯಿಲೆ ಎಲ್ಲವೂ ಅತಿಶಯ ಎಂಬಷ್ಟಿದೆ. ಚಿಕಿತ್ಸೆಗೆಂದು ಪಕ್ಕದ ರಾಜಸ್ಥಾನಕ್ಕೆ ಕ್ಯಾನ್ಸರ್ ಟ್ರೇನ್ ದಿನವೂ ಓಡುತ್ತಿದೆ). ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ‘ನಿರ್ಮಾಣ ಹಂತದಲ್ಲಿ ನನೆಗುದಿ’ ಯೋಜನೆಗಳು ಈಗಾಗಲೇ ಭಾರತದಲ್ಲಿವೆ. ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯದೇ 1999ರ ವರದಿಯ ಪ್ರಕಾರ, ಈ ಅರೆಬರೆ ಯೋಜನೆಗಳೆಲ್ಲ ತೀರ ದುಃಸ್ಥಿತಿಯಲ್ಲಿದ್ದು, ತುರ್ತು ಚಿಕಿತ್ಸೆಗೆ ಕಾಯುತ್ತಿವೆ. ಅವಕ್ಕೇ ಹಣ ಇಲ್ಲವೆಂದರೆ ನದಿಜೋಡಣೆಯ ಹೊಸ ಯೋಜನೆಗೆ ಹಣ ಎಲ್ಲಿಂದ ಕೇಳಬೇಡಿ. ಈ ಬಾಬ್ತಿನಲ್ಲಿ ಗಡ್ಕರಿಯವರ ಪರಿಣತಿ ಪ್ರಶ್ನಾತೀತ.

ಹೊಸ ಯೋಜನೆಗೆ ಹಣ ಹರಿದುಬರುವಂತೆ ಮಾಡಲು ಗುತ್ತಿಗೆದಾರರು ವಿಶ್ವಬ್ಯಾಂಕಿನಲ್ಲಿ ಲಾಬಿ ನಡೆಸುತ್ತಾರೆ. ಎಂಜಿನಿಯರ್‌ಗಳು ತುರ್ತಾಗಿ ರೂಪಿಸುವ ನೀಲನಕ್ಷೆಗೆ ಅಷ್ಟೇ ತುರ್ತಾಗಿ ಹಸುರು ಬಾವುಟ ತಯಾರಿಸಲು ಅಧಿಕಾರಿಗಳು ಮತ್ತು ರಾಜಕಾರಣಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಎಲ್ಲರಿಗೂ ಹಬ್ಬ. ಮುಂದೆ ನೀರಿನ ಹಂಚಿಕೆಯ ವಿವಾದ ಸೃಷ್ಟಿಯಾದರೆ ಗಂಟೆಗೆ ಲಕ್ಷ ರೂಪಾಯಿ ಶುಲ್ಕ ಪಡೆದು ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸುವ ವಕೀಲರಿಗೂ ಹಬ್ಬ. ನೀರಿನ ದಕ್ಷ ಬಳಕೆ, ಸಮರ್ಪಕ ಬೆಳೆ ಯೋಜನೆ, ಮಳೆಕೊಯ್ಲಿನ ಬಗ್ಗೆ ಮಾತಾಡಬಲ್ಲ ವಿಜ್ಞಾನಿಗಳು ಮಾತ್ರ ಲೆಕ್ಕಕ್ಕೇ ಬರುವುದಿಲ್ಲ. ಅವರಿಗೆ ಹೆಚ್ಚೆಂದರೆ ಸದ್ಗುರು ರಿವರ್ ರ‍್ಯಾಲಿಯ ವೇದಿಕೆಯಲ್ಲಿ ಜಾಗ ಸಿಗುತ್ತದೆ. ಹಾಗಿದ್ದರೆ ಬಡ ಕೃಷಿಕರು, ಬೆಸ್ತರು, ಆದಿವಾಸಿಗಳು? ಅವರ ನೆಲದಲ್ಲಿ ಸುರಿಯುವ ಮಳೆಯನ್ನು ದೊಡ್ಡ ಡ್ಯಾಮ್‌ಗಳಲ್ಲಿ ಸಂಗ್ರಹಿಸಿ, ಕಾಲುವೆ, ಪಂಪ್‌ಸೆಟ್, ಬ್ಯಾಂಕ್ಲೋನ್ ಇತ್ಯಾದಿ ಮೂಲಕ ಅವರ ನೆಲಕ್ಕೇ ಸುರಿಯುವ ಮಹಾವ್ಯೂಹದ ಮೂಕಪ್ರೇಕ್ಷಕರಾಗುತ್ತಾರೆ ಅವರು. ಚುನಾವಣಾ ರ‍್ಯಾಲಿಗಳಲ್ಲಿ ಈ ಮಹಾಸಾಧನೆಗೆ ಚಪ್ಪಾಳೆ ತಟ್ಟಿ ತಲೆದೂಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry