3

ಹಿಂಸೆ ವಾಡಿಕೆಯಾದಾಗ ಮೌನ ಉಚಿತವಲ್ಲ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ಹಿಂಸೆ ವಾಡಿಕೆಯಾದಾಗ ಮೌನ ಉಚಿತವಲ್ಲ

ಗೌರಿ ಲಂಕೇಶ್ ಅವರ ಭೀಕರ ಹತ್ಯೆಯು ಕನ್ನಡಿಗರೆಲ್ಲರೂ ಒಂದು ಸರಳ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡಿದೆ: ಸ್ವೇಚ್ಛೆಯಿಂದ, ನಿರ್ಭೀತಿಯಿಂದ ರಾಜ್ಯದ ರಾಜಧಾನಿಯಲ್ಲಿಯೇ ನಮ್ಮ ಸಮಾಜದ ಪ್ರಜ್ಞಾವಂತ ಚೇತನವೊಂದನ್ನು ಕೊಲೆ ಮಾಡುವಂತಹ ನಾಡಾಗಿ ಕರ್ನಾಟಕವು ಪರಿವರ್ತಿತವಾದುದು ಎಂದು?

ಇಂದು ಕರ್ನಾಟಕ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾಗಿರುವ ಸಮಯ. ಹಿಂಸೆಯು ಹತ್ಯೆಯ ರೂಪದಲ್ಲಿ ವಾಡಿಕೆಯಾದಾಗಲೂ ನಾವು ಎಚ್ಚರಗೊಳ್ಳದೆ ಇರಲು ಸಾಧ್ಯವಿಲ್ಲ. ಯಾರ ಜೀವಕ್ಕೂ ಬೆಲೆಯಿಲ್ಲ ಎನ್ನುವ ಸಂದೇಶ ಮತ್ತೆ, ಮತ್ತೆ ನಮಗೆ ದೊರಕತೊಡಗಿದಾಗ ಮೌನವಾಗಿರುವುದು ಉಚಿತವಲ್ಲ. ಇಂದು ಜವಾಬ್ದಾರಿಯುತ, ಪ್ರಜ್ಞಾವಂತ ನಾಗರಿಕರೆಲ್ಲರೂ ರಾಜಕೀಯ ಲೆಕ್ಕಾಚಾರ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮೀರಲೇಬೇಕಾದ ಸಮಯ.

ಗೌರಿ ಲಂಕೇಶರ ಪತ್ರಿಕೋದ್ಯಮವನ್ನಾಗಲಿ, ಸಾಮಾಜಿಕ ಹೋರಾಟಗಳನ್ನಾಗಲಿ ಅವರ ಹತ್ಯೆ ಮಾಡುವುದಕ್ಕೆ ಸಮರ್ಥನೆಯಾಗಿ ಬಳಸಲು ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲ ಅವರ ಹತ್ಯೆಯನ್ನು ವಿವರಿಸಲು ಬಳಸುವುದು ಸಹ ಸಾಧ್ಯವಿಲ್ಲ. ಈ ಹಿಂದೆ ಇಂತಹ ಘಟನೆಗಳಾದಾಗ, ನಾವು ಕನ್ನಡಿಗರೆಲ್ಲರೂ ಈ ಮಾತನ್ನು ಸ್ಪಷ್ಟವಾಗಿ ಹೇಳಿಕೊಳ್ಳಬೇಕಿತ್ತು. ಗೌರಿಯವರ ಹತ್ಯೆಯನ್ನು ವಿವರಿಸಲು ಸಿದ್ಧಾಂತಗಳನ್ನು, ಪರಿಕಲ್ಪನೆಗಳನ್ನು ಬಳಸಿ ದೊಡ್ಡ ವಿಶ್ಲೇಷಣೆಯನ್ನು ಬರೆಯುವ ಕಾಲವನ್ನು ನಾವು ದಾಟಿಬಿಟ್ಟಿದ್ದೇವೆ. ಇಂದು ಸರಳವಾಗಿ ನಾವು ಹೇಳಬೇಕಾಗಿರುವುದು ಇಷ್ಟೆ: ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ಕರ್ನಾಟಕದಲ್ಲಿ ನಾವು ಅಸ್ಪದ ನೀಡುವುದಿಲ್ಲ.

ನಾವು ಯಾವುದನ್ನು ಅಸಹನೀಯ ಎಂದು ಗುರುತಿಸಬೇಕೊ ಅದಕ್ಕೆ ಪರಸ್ಪರ ಸಂಬಂಧವಿರುವ ಎರಡು ಆಯಾಮಗಳಿವೆ. ಇವುಗಳಲ್ಲಿ ಮೊದಲನೆಯದು, ಸಾರ್ವಜನಿಕ ಜೀವನದಲ್ಲಿ ಹಿಂಸೆಯನ್ನು ಸಾಧನವಾಗಿ ಬಳಸುವುದು. ಸ್ವಾತಂತ್ರ್ಯ ಚಳುವಳಿಯ ಅಹಿಂಸಾತ್ಮಕ ಪ್ರತಿಭಟನೆಯ ಮಾದರಿಯಿಂದ, ಸತ್ಯಾಗ್ರಹದ ಆಶಯಗಳಿಂದ ನಾವು ಬಹಳ ದೂರ ಬಂದುಬಿಟ್ಟಿದ್ದೇವೆ ಎನ್ನುವುದು ಯಾರಿಗೂ ಸುದ್ದಿಯಲ್ಲ. ಎಲ್ಲ ಸೈದ್ಧಾಂತಿಕ ಹಿನ್ನೆಲೆಯವರೂ ಹಿಂಸೆಯನ್ನು ಒಂದು ನ್ಯಾಯಯುತ ಪ್ರತಿಭಟನೆಯ ಮಾದರಿ ಎಂದೇ ಭಾವಿಸುತ್ತಾರೆ. ಮಾತ್ರವಲ್ಲ, ಅಹಿಂಸೆಯ ಆಚಾರ್ಯ ಗಾಂಧೀಜಿ ಕೂಡ ಇಂದು ಬದುಕಿದ್ದರೆ ಅಹಿಂಸೆಯನ್ನು ಪ್ರತಿಪಾದಿಸುತ್ತಿರಲಿಲ್ಲ ಎಂದೇ ವಾದಿಸುತ್ತಾರೆ. ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ ಬಿದ್ದರೆ ಹಿಂಸೆಯನ್ನು ಬಳಸುವುದು ಸರಿಯೆಂದೇ ಎಲ್ಲರೂ ನಂಬುತ್ತಾರೆ.

ಇಂದು ಇಂತಹ ವಾದಗಳನ್ನು ನಾವು ತಿರಸ್ಕರಿಸಲೇಬೇಕು. ಎಡಪಂಥೀಯರಾಗಲಿ, ಬಲಪಂಥೀಯರಾಗಲಿ, ಕನ್ನಡ ಚಳುವಳಿಗಾರರಾಗಲಿ, ಕಾವೇರಿ ಹೋರಾಟಗಾರರಾಗಲಿ. ಕಾರಣ, ಉದ್ದೇಶ ಏನೇ ಇರಲಿ. ಹಿಂಸೆಯನ್ನು ಸಾಧನವನ್ನಾಗಿ ಬಳಸುವುದನ್ನು ನಾವು ಪ್ರಜ್ಞಾಪೂರ್ವಕವಾಗಿ ತ್ಯಜಿಸಬೇಕಿದೆ. ಹಾಗೆಂದ ಮಾತ್ರಕ್ಕೆ ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಅನುಸರಿಸಿ ಪ್ರತಿಭಟನೆ ಮಾಡಬಾರದು, ಹೋರಾಟಗಳನ್ನು ನಡೆಸಬಾರದು ಎಂದಲ್ಲ. ಪ್ರತಿಭಟಿಸುವ ನಮ್ಮ ಹಕ್ಕುಗಳನ್ನು ಉಳಿಸಿಕೊಂಡೇ, ಹಿಂಸೆಯನ್ನು ಸಾರ್ವಜನಿಕವಾಗಿ ಸಾಧನವನ್ನಾಗಿ ಬಳಸುವುದರ ವಿರುದ್ಧ ದನಿಯೆತ್ತಬೇಕಿದೆ.

ಅಂದರೆ ಹಿಂಸೆಯ ವಿರುದ್ಧ ನಮ್ಮ ನಿಲುವು ಸಾಂದರ್ಭಿಕ ಆಗುವಂತಿಲ್ಲ. ಕೆಲವು ಸಂದರ್ಭಗಳಲ್ಲಿ ಹಿಂಸೆಯ ಬಳಕೆ ಸಮರ್ಥನೀಯ ಎನ್ನುವಂತಿಲ್ಲ. ಬದಲಿಗೆ ಅಹಿಂಸೆಯನ್ನು ಸಂಪೂರ್ಣ ಮತ್ತು ಪರಿಪೂರ್ಣ ಮೌಲ್ಯವಾಗಿ ಒಪ್ಪಲೇಬೇಕಾಗಿರುವ ಅನಿವಾರ್ಯತೆ ನಮಗಿದೆ. ಇಲ್ಲದಿದ್ದರೆ ಯಾವ ಜೀವಕ್ಕೂ ಬೆಲೆಯಿಲ್ಲ ಎನ್ನುವ ಸಾಮಾಜಿಕ ಸಂದರ್ಭದಿಂದ ಹೊರಬರಲು ಸಾಧ್ಯವಿಲ್ಲ. ಅಹಿಂಸೆಯನ್ನು ನಮ್ಮದಾಗಿಸುಕೊಳ್ಳುವುದು ಕಾನೂನಿನ ಭಯ, ಪ್ರಭುತ್ವದ ಒತ್ತಡ ಇತ್ಯಾದಿ ಕಾರಣಗಳಿಂದಲ್ಲ, ನಮ್ಮ ನೈತಿಕ ಪ್ರಜ್ಞೆಯಿಂದ. ಈ ನೈತಿಕತೆಯೇ ಅಹಿಂಸೆಯನ್ನು ಒಂದು ಪರಿಪೂರ್ಣ ಆದರ್ಶ, ಮೌಲ್ಯವೆಂದು ನಮ್ಮ ಸಾರ್ವಜನಿಕ ಜೀವನಕ್ಕೆ ಅಡಿಪಾಯವಾಗಿ ಕಟ್ಟಿಕೊಡಬೇಕಿದೆ.

ಇಲ್ಲಿ ಪ್ರಸ್ತಾಪಿಸಬೇಕಿರುವ ಎರಡನೆಯ ಅಂಶವಿದು: ಈಗಿರುವ ನಮ್ಮ ಆಧುನಿಕ ರಾಜ್ಯ ವ್ಯವಸ್ಥೆಯಲ್ಲಿ, ನಾಗರಿಕರು ಹಿಂಸೆಯನ್ನು ತ್ಯಜಿಸುವ ಮೂಲಕ ಪ್ರಭುತ್ವಕ್ಕೆ ಅದರ ಮೇಲಿನ ಏಕಸ್ವಾಮ್ಯವನ್ನು (ಮನಾಪೊಲಿ) ಕೊಡುತ್ತಾರೆ. ಅಂದರೆ ಪ್ರಭುತ್ವ ಮಾತ್ರ ಅಧಿಕೃತವಾಗಿ, ನ್ಯಾಯಬದ್ಧವಾದ ರೀತಿಯಲ್ಲಿ ಹಿಂಸೆಯನ್ನು ಬಳಸುವ ಅಧಿಕಾರವನ್ನು ಹೊಂದಿರುತ್ತದೆ. ಇಂತಹ ಪ್ರಭುತ್ವದ ಪರಿಕಲ್ಪನೆಯ ಬಗ್ಗೆ ಗಾಂಧೀಜಿಯವರಿಗೆ ಸಮಾಧಾನವಿರಲಿಲ್ಲ ಎನ್ನುವುದನ್ನು ನಾನು ಇಲ್ಲಿ ಗುರುತಿಸಬೇಕು. ಆದರೆ ನಮ್ಮ ಸಂವಿಧಾನ ಅಂತಹದೊಂದು ವ್ಯವಸ್ಥೆಯನ್ನು ರೂಪಿಸಿಕೊಂಡಿದೆ ಹಾಗೂ ನಾವೆಲ್ಲರೂ ಬದುಕಿರುವ ಸಮಾಜ ಅಂತಹ ಕಾನೂನಿನ ಚೌಕಟ್ಟನ್ನು ಹೊಂದಿದೆ.

ಈ ಹಿನ್ನೆಲೆಯಲ್ಲಿ ನಾವು ಅಸಹನೀಯವೆಂದು ಗುರುತಿಸಲೇಬೇಕಾಗಿರುವ ಎರಡನೆಯ ಆಯಾಮವಿದೆ. ಹಿಂಸೆಯ ಮೇಲೆ ಏಕಸ್ವಾಮ್ಯವನ್ನು ಹೊಂದಿರುವ ಪ್ರಭುತ್ವವು ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲೇಬೇಕು. ಪ್ರೊ. ಕಲಬುರ್ಗಿಯವರ ಹತ್ಯೆಯಾಗಿ ಕಳೆದ ವಾರಕ್ಕೆ ಎರಡು ವರ್ಷಗಳಾದವು. ಅವರ ಕೊಲೆಗಡುಕರನ್ನು ಹಿಡಿಯಲಾಗಿಲ್ಲ ಎನ್ನುವುದು ಗೌರಿಯವರ ಕೊಲೆಗಡುಕರಿಗೆ ಪ್ರಚೋದನೆ ನೀಡುತ್ತದೆ. ಕಲಬುರ್ಗಿಯವರ ಹತ್ಯೆ ಮಾಡಿದವರು ಇನ್ನೂ ಸಿಕ್ಕಿಲ್ಲ, ರಾಜ್ಯದ ರಾಜಧಾನಿಯಲ್ಲಿ ಗೌರಿ ಕಗ್ಗೊಲೆಗೀಡಾದರು ಎನ್ನುವುದು ರಾಜ್ಯದ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ನಿದ್ದೆ ಬರಿಸದ ವಿದ್ಯಮಾನವಾಗಬೇಕಿತ್ತು. ಇಂತಹ ಹತ್ಯೆಗಳಾದಾಗ ಸರ್ಕಾರವು ನಿಷ್ಕ್ರಿಯವಾಗಿ ಇರುವುದನ್ನು ಸಹ ನಾಗರಿಕ ಸಮಾಜದ ನಾವೆಲ್ಲರೂ ಸಹಿಸಬಾರದು.

ಈ ಮೇಲಿನ ಮಾತುಗಳು ಗೌರಿ ಲಂಕೇಶ್ ಮತ್ತು ಪ್ರೊ. ಕಲಬುರ್ಗಿಯವರಿಗೆ ಮಾತ್ರ ಸೀಮಿತವಾದವುಗಳಲ್ಲ. ಬಿಜೆಪಿ ನಾಯಕರು ಹೇಳುವ  ಸಂಘ ಪರಿವಾರದ 14 ಕಾರ್ಯಕರ್ತರಿಗೂ ಅನ್ವಯಿಸುತ್ತವೆ. ಗೋಹತ್ಯೆಯ ಶಂಕೆಯ ಆಧಾರದ ಮೇಲೆ ಹಲ್ಲೆಗೊಳಗಾದ, ಕೊಲೆಯಾದ ಇತರರಿಗೂ ಅನ್ವಯಿಸುತ್ತವೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ. ಹತ್ಯೆಗೊಳಗಾದವರು ಯಾರೇ ಇರಲಿ. ಸರ್ಕಾರವು ಜವಾಬ್ದಾರಿಯನ್ನು ನಿರ್ವಹಿಸದೆ ಇರುವಂತಿಲ್ಲ. ಈಗ ನಾವು ನೋಡುತ್ತಿರುವಂತೆ ಹಿಂಸೆಯನ್ನು ವಾಡಿಕೆಯಾಗಲು, ಸರ್ವೆಸಾಮಾನ್ಯ ವಿದ್ಯಮಾನವಾಗಲು ಅವಕಾಶ ಕೊಡುವಂತಿಲ್ಲ. ಸರ್ಕಾರದ ಮೇಲಿನ ಈ ಜವಾಬ್ದಾರಿಯು ಸಹ ಸಂಪೂರ್ಣವಾದುದು ಮತ್ತು ಪರಿಪೂರ್ಣವಾದುದು.

ಇಂದು ನಾವು ಮಾಡಿಕೊಳ್ಳಲೇಬೇಕಿರುವ ಆತ್ಮಾವಲೋಕನಕ್ಕೆ ಹಿಂಸೆಯ ಆಯಾಮವನ್ನು ಮೀರಿದ ಮತ್ತೊಂದು ಪ್ರಶ್ನೆಯಿದೆ. ಅದೇನೆಂದರೆ ನಾವು ಎಂತಹ ಸಮಾಜವಾಗಬೇಕು, ನಮ್ಮ ಮೌಲ್ಯಗಳು ಯಾವುದು ಇರಬೇಕು ಎಂದು ಬಯಸುತ್ತೇವೆ ಎನ್ನುವುದು. ಐತಿಹಾಸಿಕವಾಗಿ ಕನ್ನಡಿಗರು ಅತ್ಯಂತ ಸಹಿಷ್ಣುತೆಯಿದ್ದ, ಅಪಾರ ವೈವಿಧ್ಯ ಮತ್ತು ಬಹುಮುಖತೆಗೆ ಅವಕಾಶವಿದ್ದ ಸಮಾಜಗಳನ್ನು ಕಟ್ಟಿಕೊಂಡು ಬಂದವರು. ಕನ್ನಡದ ಸಾಂಸ್ಕೃತಿಕ ವೈವಿಧ್ಯದ ಪರಿಚಯವಿರುವ ಯಾರಿಗೂ ಈ ಮಾತು ಹೊಸದೂ ಅಲ್ಲ, ಉತ್ಪ್ರೇಕ್ಷೆಯೂ ಅಲ್ಲ. ಕೂಡಿಬಾಳುವ ದಾರಿಗಳನ್ನು, ಪರಸ್ಪರರ ನಡುವೆ ಇರುವ ಅಂತರ ಹಾಗೂ ಭಿನ್ನತೆಗಳನ್ನು ಗುರುತಿಸುವ, ಒಪ್ಪುವ ಮತ್ತು ಅವುಗಳ ನಡುವೆಯೆ ಬದುಕುವ ವಿಧಾನಗಳನ್ನು ರೂಢಿಸಿಕೊಂಡಿದ್ದವರು. ಈ ಸಮಾಜದಲ್ಲಿ ಹಿಂಸೆಯೂ ಇತ್ತು, ಜಾತಿ - ಅಸ್ಪೃಶ್ಯತೆಗಳಂತಹ ಜೀವವಿರೋಧಿ ಆಚರಣೆಗಳು ಸಹ ಇದ್ದವು ಎನ್ನುವುದನ್ನು ನಾವು ಮುಚ್ಚಿಡಬೇಕಿಲ್ಲ. ಆದರೆ ಭಿನ್ನತೆಗಳ ನಡುವೆಯೂ ಪರಸ್ಪರರನ್ನು ಪೋಷಿಸುತ್ತ, ರಕ್ಷಿಸುತ್ತ ಬದುಕುವ ಅಪಾರ ಸಾಮರ್ಥ್ಯ ಕನ್ನಡಿಗರಿಗೆ ಇತ್ತು ಎನ್ನುವುದನ್ನು ನಾವು ಮರೆಯಬಾರದು. ಇಂದು ನಾವು ಕಳೆದುಕೊಳ್ಳುತ್ತಿರುವುದು ಅಂತಹ ಜೀವಪೋಷಣೆಯ ಸಾಮರ್ಥ್ಯವನ್ನು.

ಇಂದಿನದು ಹೆಚ್ಚು ಬರೆಯುವ, ವಿಶ್ಲೇಷಣೆ ಮಾಡುವ, ಮಾತನಾಡುವ ಸಂದರ್ಭವಲ್ಲ. ಇದು ಸ್ವಪರೀಕ್ಷೆಯ, ಆತ್ಮಾವಲೋಕನದ ಸಮಯ. ಬಹುಶಃ ನಮ್ಮ ಈ ಅಗತ್ಯಗಳನ್ನು ಗೌರಿ ಲಂಕೇಶರ ಬಳುವಳಿಯೆಂದು ನಾವು ಗುರುತಿಸಬೇಕು ಎನ್ನಿಸುತ್ತಿದೆ. ನಮ್ಮ ಆತ್ಮಾವಲೋಕನದ ಬಹುಮುಖ್ಯ ಕ್ರಿಯೆಯಾಗಿ ಹಿಂಸೆಯನ್ನು ತ್ಯಜಿಸುವ ಮತ್ತು ಸಹಿಸದ ಪಣ ತೊಡಬೇಕಿದೆ. ಆದರೆ ನಮ್ಮ ಅಸಹನೆ ಹಿಂಸಾತ್ಮಕವಾಗಬಾರದು ಎನ್ನುವ ಎಚ್ಚರವೂ ನಮಗಿರಬೇಕಿದೆ. ಜೊತೆಗೆ ನಮ್ಮ ಮೌಲ್ಯಗಳೇನು ಎನ್ನುವುದನ್ನು ಮಾನವೀಯ ನೆಲೆಯಲ್ಲಿ ಸೃಜಿಸಿಕೊಳ್ಳುವ ದೃಢ ಸಂಕಲ್ಪ ಮಾಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry