ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮಾವಿನ ಕುಚ್ಚುಕಾಯಿ ವಿಶೇಷ

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕುಚ್ಚುಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು: ಗಟ್ಟಿ ಮಾವಿನಕಾಯಿ ಹೋಳು – 4 (ಮಾವಿನಕಾಯಿ), ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಉಪ್ಪು, ಹಸಿಮೆಣಸಿನಕಾಯಿ, ಅರಿಶಿಣ.

ತಯಾರಿಸುವ ವಿಧಾನ: ಗಟ್ಟಿಯಾಗಿರುವ ಬೇಯಿಸಿದ ಮಾವಿನ ಕಾಯಿಯನ್ನು ಹೋಳು ಹೋಳಾಗಿ ಹೆಚ್ಚಿಕೊಳ್ಳಬೇಕು. ನಂತರ ಬಾಣಲಿಗೆ ಎಣ್ಣೆ ಹಾಕಿ ಕಾದ ಮೇಲೆ ಅರಿಶಿಣ, ಸಾಸಿವೆ, ಉದ್ದಿನ ಬೇಳೆ, ಮೆಣಸಿನಕಾಯಿಗಳನ್ನು ಹಾಕಿ ಅದು ಚಟಪಟ ಸದ್ದು ಮಾಡಿದಾಗ, ಹೆಚ್ಚಿಕೊಂಡಿಟ್ಟ ಮಾವಿನ ಕಾಯಿ ಹೋಳುಗಳನ್ನು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರನ್ನು ಬೆರೆಸದೆ ಎಣ್ಣೆಯಲ್ಲಿ ಬೇಯಿಸಬೇಕು. ಇದು ಮೊಸರನ್ನದ ಜೊತೆ ತಿನ್ನಲು ಒಳ್ಳೆಯ ಕಾಂಬಿನೇಷನ್‌.

**

ಕುಚ್ಚುಕಾಯಿ ಸಾರು

ಬೇಕಾಗುವ ಸಾಮಗ್ರಿಗಳು: ಕುಚ್ಚುಕಾಯಿ– 1–2, ಎಣ್ಣೆ, ಸಾಸಿವೆ, ಅರಿಶಿಣ, ಮೆಂತ್ಯ, ಕರಿಬೇವು, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಉಪ್ಪು.

ತಯಾರಿಸುವ ವಿಧಾನ: ನೀರಿನಲ್ಲಿ ತೊಳೆದ ಕುಚ್ಚುಕಾಯಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಹಿಚುಕಿ ರಸ ತಯಾರಿಸಿ. ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಅರಿಶಿಣ, ಕರಿಬೇವು, ಮೆಂತ್ಯ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ. ಇದಕ್ಕೆ ತಯಾರಿಸಿದ ಕುಚ್ಚುಕಾಯಿ ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಾರಿನ ಹದಕ್ಕೆ ಬೇಕಾದಷ್ಟು ನೀರನ್ನು ಹಾಕಿ ಕುದಿಸಬೇಕು. ಮಳೆಗಾಲದಲ್ಲಿ ಊಟದ ಜೊತೆ ಈ ಸಾರು ಸವಿಯುವುದೆಂದರೆ ಅದರ ಆನಂದ ಊಟ ಮಾಡಿದವರಿಗೆ ಗೊತ್ತು!

**

ಕುಚ್ಚುಕಾಯಿ ಮೊಸರು ಗೊಜ್ಜು

ಬೇಕಾಗುವ ಸಾಮಗ್ರಿಗಳು: ಕುಚ್ಚುಕಾಯಿ –1-2 , ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಮೊಸರು,  ಬೆಳ್ಳುಳ್ಳಿ – 8ರಿಂದ 10 ಎಸಳು.

ತಯಾರಿಸುವ ವಿಧಾನ: ಉಪ್ಪುನೀರಿನಿಂದ ಕುಚ್ಚುಕಾಯಿಯನ್ನು ತಗೆದು ತೊಳೆದು ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಹಿಚುಕಿ ಮಿಶ್ರಣ ತಯಾರಿಸಿ. ರುಚಿಗೆ ಉಪ್ಪು, ಸಿಹಿ ಮೊಸರು ಹಾಕಿ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ದಿಢೀರ್ ಅಡುಗೆ ಸವಿಯಲು ಸಿದ್ಧ.

**

ಕುಚ್ಚುಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿಗಳು: ಕುಚ್ಚುಕಾಯಿ –2-3, ಬೆಳ್ಳುಳ್ಳಿ – 8-10 ಎಸಳು, ಉಪ್ಪು, ಎಣ್ಣೆ, ಸಾಸಿವೆ, ಹಸಿಮೆಣಸಿನಕಾಯಿ, ಸಕ್ಕರೆ.

ತಯಾರಿಸುವ ವಿಧಾನ: ಉಪ್ಪು ನೀರಿನಿಂದ ಕುಚ್ಚುಕಾಯಿಯನ್ನು ತಗೆದು ತೊಳೆದು ಒಂದು ಪಾತ್ರೆಗೆ ಚೆನ್ನಾಗಿ ಹಿಚುಕಿ ಮಿಶ್ರಣ ತಯಾರಿಸಿ ಹಾಗು ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಬಾಣಲೆಗೆ ಎಣ್ಣೆ, ಸಾಸಿವೆ, ಅರಿಶಿಣ, ರುಬ್ಬಿಕೊಂಡ ಮಿಶ್ರಣ ಹಾಕಿ ಹಸಿವಾಸನೆ ಹೋಗುವವರೆಗೂ ಹುರಿಯಬೇಕು. ಇದಕ್ಕೆ ಕುಚ್ಚುಕಾಯಿ ರಸ, ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚನ್ನಾಗಿ ಕುದಿಸಿದರೆ ರುಚಿ ಇಲ್ಲದ ನಾಲಿಗೆಗೆ ರುಚಿ ಹೆಚ್ಚಿಸುವ ಕುಚ್ಚುಕಾಯಿ ಗೊಜ್ಜು ರೆಡಿ.

*

ಅರುಂಧತಿ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT