7

ಮಾದಕ ಜಾಲದ ಮಾಯಾಲೋಕ

Published:
Updated:
ಮಾದಕ ಜಾಲದ ಮಾಯಾಲೋಕ

ಬಾಲ್ಯದಿಂದಲೂ ಲವಲವಿಕೆಯಿಂದಲೇ ಇದ್ದ ಆತ, ತನ್ನ 16ನೇ ವಯಸ್ಸಿನ ನಡುವಿನಲ್ಲಿ ಒಮ್ಮೆಲೇ ಮಂಕಾಗಿಬಿಟ್ಟ. ಸದಾ ಒಂಟಿತನ ಬಯಸುತ್ತಿದ್ದ ಮಗನ ವರ್ತನೆ ಪೋಷಕರನ್ನು ದಂಗುಬಡಿಸಿತ್ತು. ಪ್ರೀತಿಯ ಪುತ್ರನ ಜೀವನೋತ್ಸಾಹ ಕ್ಷೀಣಿಸುತ್ತಿರುವುದಕ್ಕೆ ಕಾರಣ ಹುಡುಕಿ ಹೊರಟ ಅವರಿಗೆ ಆಘಾತವೊಂದು ಎದುರಾಗಿತ್ತು. ಮಗ ಮಾದಕ ವಸ್ತುವಿನ ದಾಸನಾಗಿದ್ದಾನೆ ಎಂಬ ಕಟು ಸತ್ಯ ಹೆತ್ತವರಿಗೆ ಗೊತ್ತಾಗಿ ಹೋಗಿತ್ತು.

ಇದು, ಬೆಂಗಳೂರಿನ ಕೊಡಿಗೇಹಳ್ಳಿಯ ‘ಕೃಪಾ’ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿಯ ಕತೆ. ಆತನ ತಂದೆ ಬಿಡಿಎ ಅಧಿಕಾರಿಯಾಗಿದ್ದವರು. ಡ್ರಗ್ಸ್ ಚಟಕ್ಕೆ ಬಿದ್ದ ನಂತರ ಪೋಷಕರ ಬುದ್ಧಿಮಾತನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಆತ, ಲೋಕಲ್ ಬ್ರ್ಯಾಂಡ್ ಗಾಂಜಾದಿಂದ ಹಿಡಿದು ವಿದೇಶಿ ಬ್ರ್ಯಾಂಡ್ ಎನಿಸಿರುವ ಎಲ್‌ಎಸ್‌ಡಿವರೆಗೆ ಎಲ್ಲ ಮಾದರಿಯ ಮಾದಕ ವಸ್ತುಗಳ ರುಚಿಯನ್ನೂ ನೋಡಿದ್ದಾನೆ. ಈಗ ವ್ಯಸನಮುಕ್ತನಾಗಬೇಕೆಂಬ ಹಂಬಲ ಮೂಡಿದೆ.

ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾಗ ಗೆಳೆಯರು ಸಿಗರೇಟಿನಲ್ಲಿ ಗಾಂಜಾ ಹಾಕಿ ಈ ವಿದ್ಯಾರ್ಥಿಗೆ ಸೇದಿಸಿದರು. ಬಳಿಕ ಈತನೇ ಅದನ್ನು ಕೇಳತೊಡಗಿದ. ದಿನಕಳೆದಂತೆ ಹೊಸ ಸ್ನೇಹಿತರ ಪರಿಚಯವಾಗಿ, ವಿದೇಶಿ ಬ್ರ್ಯಾಂಡ್‌ ಡ್ರಗ್ಸ್‌ ಆತನ ಕೈಸೇರಿದ್ದವು.

‘ಮಲ್ಲೇಶ್ವರದ ಕಾಲೇಜೊಂದರಲ್ಲಿ ಪಿಯುಸಿ ಮಾಡಿದೆ. ಆಗ ಗೆಳೆಯರೆಲ್ಲ ಒಟ್ಟಾಗಿ ಬಿನ್ನಿಮಿಲ್‌ ಬಳಿ ಹೋಗಿ ಗಾಂಜಾ ಖರೀದಿಸುತ್ತಿದ್ದೆವು. ಕ್ರಮೇಣ ಅಲ್ಲಿನ ವ್ಯಕ್ತಿ ಗಾಂಜಾ ಜತೆ ಬೇರೆ ಸೊಪ್ಪಿನ ಪುಡಿಯನ್ನೂ  ಮಿಶ್ರಣ ಮಾಡಿ ಮಾರಲಾರಂಭಿಸಿದ. ಅದು ಗೊತ್ತಾಗಿ ಅಲ್ಲಿ ಖರೀದಿ ಬಿಟ್ಟುಬಿಟ್ಟೆ. ಆ ನಂತರ ಆನೇಕಲ್, ಹೊಸಕೋಟೆ, ಮಾಲೂರು, ರಾಮನಗರ, ಕನಕಪುರ, ಬಿಡದಿ, ಕೆಂಗೇರಿ... ಹೀಗೆ, ನಾನಾ ಭಾಗಗಳಲ್ಲಿ ಡ್ರಗ್ಸ್ ತೆಗೆದುಕೊಳ್ಳಲಾರಂಭಿಸಿದೆ’ ಎಂದು ವಿವರಿಸಿದರು ಆ ವಿದ್ಯಾರ್ಥಿ.

‘ಪಿಯುಸಿ ಬಳಿಕ ಬೆಂಗಳೂರಿನಲ್ಲೇ ಡಿಪ್ಲೊಮಾ ಮಾಡಿದೆ. ಎಂಜಿನಿಯರಿಂಗ್ ಓದಬೇಕು ಎಂದೆನಿಸಿ ಮಂಗಳೂರಿನ ಕಾಲೇಜೊಂದನ್ನು ಸೇರಿಕೊಂಡೆ. ವಿದೇಶಿಯರು ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿದ್ದರು. ಅಲ್ಲೆಲ್ಲ ಮಾದಕ ವಸ್ತುಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇಲ್ಲ. ಕರೆ ಮಾಡಿದರೆ, ಅವರೇ ತಂದು ಕೊಟ್ಟು ಹೋಗುತ್ತಿದ್ದರು. ಕರಾವಳಿ ಪ್ರದೇಶಕ್ಕೆ ಗೋವಾದಿಂದ ನೇರವಾಗಿ ಮಾದಕ ವಸ್ತುಗಳು ಪೂರೈಕೆಯಾಗುತ್ತಿದ್ದವು. ಡ್ರಗ್ಸ್ ತೆಗೆದುಕೊಂಡರೆ ಮನಸ್ಸು ನಮ್ಮ ಮಾತು ಕೇಳುವುದಿಲ್ಲ. ಅದರಿಂದ ಅನಾಹುತಗಳಾಗಿದ್ದೇ ನನಗೆ ಗೊತ್ತಾಗಲಿಲ್ಲ’ ಎನ್ನುತ್ತಾರೆ ಅವರು.

ಬೆಂಗಳೂರಿನಲ್ಲಿ ಹೀಗಿದೆ ಮಾಫಿಯಾ

ಸಿಲಿಕಾನ್ ಸಿಟಿಯು ವಿಶ್ವ ಸಮುದಾಯಕ್ಕೆ ತೆರೆದುಕೊಳ್ಳುತ್ತಿದ್ದಂತೆಯೇ ಜಗತ್ತಿನ ಎಲ್ಲಾ ಮಾಫಿಯಾಗಳು ಇಲ್ಲೂ ನೆಲೆಯೂರಿವೆ. ಅಂತೆಯೇ ಡ್ರಗ್ ಮಾಫಿಯಾ ಕೂಡ. ಕಾಸ್ಮೊಪಾಲಿಟನ್ ಸಂಸ್ಕೃತಿ ಹಾಗೂ ವಿದೇಶಿಯರ ಓಡಾಟ ಹೆಚ್ಚಿರುವ ಕಾರಣ ಡ್ರಗ್ ಮಾಫಿಯಾಕ್ಕೆ ಬೆಂಗಳೂರು ಹುಲುಸಾದ ತಾಣವಾಗಿದೆ. ಪೊಲೀಸ್ ದಾಖಲೆ ಪ್ರಕಾರ ಮೂರು ವರ್ಷಗಳಲ್ಲಿ ವಿವಿಧ ತನಿಖಾ ಏಜೆನ್ಸಿಗಳು ಬೆಂಗಳೂರಿನಲ್ಲಿ ಜಪ್ತಿ ಮಾಡಿರುವ ಡ್ರಗ್ ಪ್ರಮಾಣ ಬರೋಬ್ಬರಿ 700 ಕೆ.ಜಿ.

ಭಾರತದ ಎಲ್ಲಾ ತನಿಖಾ ಏಜೆನ್ಸಿಗಳೂ ಮಾದಕ ವಸ್ತು ಮಾರಾಟ ವ್ಯವಸ್ಥೆಯನ್ನು ಎರಡು ಗುಂಪುಗಳನ್ನಾಗಿ ಗುರುತಿಸಿವೆ. ವಿಶ್ವದ ಬೇಡಿಕೆಯ ಶೇ 80ರಷ್ಟು ಹೆರಾಯಿನ್ ಹಾಗೂ ಅಫೀಮನ್ನು ಪೂರೈಕೆ ಮಾಡುತ್ತಿರುವ ಅಫ್ಗಾನಿಸ್ತಾನ, ಇರಾನ್‌, ಪಾಕಿಸ್ತಾನವನ್ನು ಒಂದು ಗುಂಪಿಗೆ ಸೇರಿಸಿ, ಅದನ್ನು ‘ಗೋಲ್ಡನ್ ಕ್ರೆಸೆಂಟ್’ ಎಂದು ಕರೆದಿವೆ. ಇನ್ನುಳಿದ ವಿದೇಶಿ ಬ್ರ್ಯಾಂಡ್ ಡ್ರಗ್ಸ್‌ ಹೆಚ್ಚಾಗಿ ಮ್ಯಾನ್ಮಾರ್, ಥಾಯ್ಲೆಂಡ್‌, ಲಾವೋಸ್‌ನಿಂದ ಪೂರೈಕೆಯಾಗುತ್ತಿವೆ. ಈ ಮೂರು ರಾಷ್ಟ್ರಗಳನ್ನು ‘ಗೋಲ್ಡನ್ ಟ್ರಯಾಂಗಲ್’ ಎಂದು ಗುರುತಿಸಲಾಗುತ್ತಿದೆ.ಈ ರಾಷ್ಟ್ರಗಳಿಂದ ಬಂದರಿನಲ್ಲಿ ಬರುವ ಮಾದಕ ವಸ್ತುಗಳು ಚೆನ್ನೈ, ವಿಶಾಖಪಟ್ಟಣ, ಮುಂಬೈ ಹಾಗೂ ಗೋವಾ ತಲುಪುತ್ತಿವೆ. ಅಲ್ಲಿಂದ ಏಜೆಂಟ್‌ಗಳು ಭೂಸಾರಿಗೆ (ರೈಲು, ಬಸ್, ಸರಕು ಸಾಗಣೆ ವಾಹನ) ಮೂಲಕ ಕರ್ನಾಟಕಕ್ಕೆ ತರುತ್ತಿದ್ದಾರೆ.

ಇನ್ನು, ಸ್ಥಳೀಯವಾಗಿ ಸಿಗುವ ಗಾಂಜಾ, ಆಂಧ್ರಪ್ರದೇಶದ ಗುಂಟೂರು, ಕರ್ನೂಲ್, ಅನಂತಪುರ; ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಹಾಗೂ ಒಡಿಶಾದ ಗಡಿಭಾಗಗಳಿಂದ ಸರಬರಾಜಾಗುತ್ತಿದೆ. ಪಶ್ಚಿಮಘಟ್ಟ ಅರಣ್ಯ ಪ್ರದೇಶ, ಚಾಮರಾಜನಗರ, ಮೈಸೂರು, ಕೋಲಾರ, ಮಡಿಕೇರಿ ಸೇರಿದಂತೆ ರಾಜ್ಯದಲ್ಲೂ ಅನೇಕ ಕಡೆ ಕದ್ದುಮುಚ್ಚಿ ಗಾಂಜಾ ಬೇಸಾಯ ನಡೆದಿದೆ. ನಾರ್ಕೊ ಅಧಿಕಾರಿಗಳ ಪ್ರಕಾರ ಬೆಂಗಳೂರಿನಲ್ಲಿ ವಾರ್ಷಿಕ ₹280 ಕೋಟಿಯಷ್ಟು ಡ್ರಗ್ಸ್ ವಹಿವಾಟು ನಿರಾತಂಕವಾಗಿ ನಡೆಯುತ್ತಿದೆ.

ಬೆಂಗಳೂರಿನ ವಿಜ್ಞಾನಿ ದಂಪತಿ ಹೈದರಾಬಾದ್‌ನಲ್ಲಿನ ತಮ್ಮ ಪ್ರಯೋಗಾಲಯದಲ್ಲಿ ಅಂಫೆಥಮೈನ್ ಮಾದಕ ವಸ್ತು ತಯಾರಿಸಿ, ಪರಿಚಿತ ಜಾಲಗಳಿಗೆ ಮಾರಾಟ ಮಾಡುತ್ತಿದ್ದುದು ಸುದ್ದಿಯಾಗಿತ್ತು. ಅವರ ಬಂಧನವು ಎನ್‌ಸಿಬಿ ನಡೆಸಿದ ದೊಡ್ಡಮಟ್ಟದ ಕಾರ್ಯಾಚರಣೆಗಳಲ್ಲಿ ಒಂದು. ಆ ಪ್ರಕರಣದಲ್ಲಿ ವಾಯುಪಡೆಯ ವಿಂಗ್‌ ಕಮಾಂಡರ್ ರಾಜಶೇಖರ್ ರೆಡ್ಡಿ ಅವರೂ ಜೈಲು ಸೇರಿದ್ದರು.

ಈ ಕಾಲೇಜುಗಳ ಸುತ್ತಮುತ್ತ...

ಸೋಲದೇವನಹಳ್ಳಿ, ಕೆ.ಆರ್.ಪುರ ಹಾಗೂ ಹೆಸರಘಟ್ಟ ಸುತ್ತಮುತ್ತಲಿನ ವೃತ್ತಿಶಿಕ್ಷಣ ಕಾಲೇಜುಗಳ ಆಜುಬಾಜು ಈಗಲೂ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಅವುಗಳ ಮಾರಾಟಕ್ಕಾಗಿಯೇ ಕಾಲೇಜು ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೂ ಇದ್ದಾರೆ.

‘ಡ್ರಗ್ಸ್ ಹಾಗೂ ಮದ್ಯ ಈಗ ಗೆಳೆಯರ ಬಳಗದಲ್ಲಿ ಪ್ರತಿಷ್ಠೆಯ ವಿಷಯಗಳಾಗಿವೆ. ಮೊದಲೆಲ್ಲ ಪಾರ್ಟಿಗಳಲ್ಲಿ ಮಾತ್ರ ಅವುಗಳು ನಮ್ಮ ದೇಹ ಸೇರುತ್ತಿದ್ದವು. ಆದರೆ ಈಗ ಡ್ರಗ್ಸ್ ಸೇವಿಸಿಯೇ ತರಗತಿಗಳಿಗೂ ಹೋಗುತ್ತಿದ್ದೇವೆ’ ಎಂದು ಹೆಣ್ಣೂರಿನ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿ ಹೇಳಿದರು. ಅಲ್ಲದೆ, ಆ ಮಾರಾಟ ವ್ಯವಸ್ಥೆಯನ್ನು ತೋರಿಸುವುದಾಗಿ ನನ್ನನ್ನೂ ಕರೆದುಕೊಂಡು ಹೋದರು.

ಇದೇ ಆ.30ರ ಮಧ್ಯಾಹ್ನ 1.15ರ ಸುಮಾರಿಗೆ ಸೋಲದೇವನಹಳ್ಳಿಯ ಸರ್ವಪಲ್ಲಿ ರಾಧಾಕೃಷ್ಣ ರಸ್ತೆಯಲ್ಲಿ ಎಫ್‌ಜೆಡ್ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ಇಬ್ಬರು ಆಫ್ರಿಕಾದ ಹುಡುಗರು, ಕೊಕೇನ್ ಹಾಗೂ ಬ್ರೌನ್‌ಶುಗರ್ ಮಾರುತ್ತಿದ್ದುದು ಕಂಡು ಬಂತು. ವಿದ್ಯಾರ್ಥಿ ಹೇಳುವ ಪ್ರಕಾರ ಅವರು ನಿತ್ಯವೂ ಇಲ್ಲಿ ದಂಧೆ ಮಾಡಿ ಹೋಗುತ್ತಾರೆ.

ಇನ್ನು ಚಾಮರಾಜಪೇಟೆ 5ನೇ ಅಡ್ಡರಸ್ತೆಯಲ್ಲಿರುವ ಕಾಲೇಜೊಂದರ ಬಳಿ ನೈಟ್ರೊಜೆಪಾಮ್, ಫೆನ್ಸಿಡಿಲ್ ಮಾತ್ರೆಗಳು ಹಾಗೂ ಕೋರೆಕ್ಸ್ ಸಿರಪ್‌ಗಳ ಅಕ್ರಮ ಮಾರಾಟ ನಡೆಯುತ್ತಿದೆ. ವಿದ್ಯಾರ್ಥಿಗಳ ಸೋಗಿನಲ್ಲಿ ಕಾಲೇಜಿನ ಬಳಿ ಬರುವ ಮೂವರು, ಸಮೀಪದ ತಂಪು ಪಾನೀಯದ ಅಂಗಡಿ ಬಳಿ ಕೂರುತ್ತಾರೆ. ನಂತರ ಪರಿಚಿತ ವಿದ್ಯಾರ್ಥಿಗಳು ಹಾಗೂ ಕಾಯಂ ಗಿರಾಕಿಗಳಿಗೆ ಮಾತ್ರ ಮಾದಕ ದ್ರವ್ಯ ಪೂರೈಸುತ್ತಾರೆ.

‘ಆ ಕಾಲೇಜಿನ ಬಳಿ ಡ್ರಗ್ಸ್ ಮಾರಾಟವಾಗುತ್ತಿರುವ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿವೆ. ಅಲ್ಲಿ ದಂಧೆ ನಡೆಸುತ್ತಿದ್ದ ನಾಲ್ವರನ್ನು ಇತ್ತೀಚೆಗೆ ಬಂಧಿಸಿದ್ದೆವು. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅವರು, ಪುನಃ ದಂಧೆ ಶುರು ಮಾಡಿರಬಹುದು. ಕ್ರಮ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ಸ್ಥಳೀಯ ಪೊಲೀಸರು.

ರಾಜಧಾನಿಯಲ್ಲಿ ಎಲ್ಲೆಲ್ಲಿ ಲಭ್ಯ?

ಯಲಹಂಕದ ಮಾರುತಿನಗರ, ಕೋರಮಂಗಲ 2ನೇ ಬ್ಲಾಕ್‌, ತಂಬುಚೆಟ್ಟಿಪಾಳ್ಯ, ಇಂದಿರಾನಗರ ಸೋನಿವರ್ಡ್‌ ಜಂಕ್ಷನ್, ಸಿಎಂಎಚ್ ರಸ್ತೆ, ಇಂದಿರಾನಗರ 80 ಅಡಿ ರಸ್ತೆ, ಎಂ.ಜಿ.ರಸ್ತೆ, ಹೆಣ್ಣೂರು ಬಂಡೆ, ಬಾಣಸವಾಡಿ, ಆವಲಹಳ್ಳಿ, ಬಿದರಹಳ್ಳಿ, ಕೊತ್ತನೂರು, ಬೈರತಿ, ರಾಮಮೂರ್ತಿನಗರದ ಕಲ್ಕೆರೆ, ಹೊರಮಾವು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಶಿವಾಜಿನಗರ ಹಾಗೂ ಟ್ಯಾನರಿ ರಸ್ತೆ ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟದ ಅಡ್ಡೆಗಳಾಗಿವೆ.

ಇನ್ನು ನಗರದ ಹೊರವಲಯಗಳಾದ ಚಂದಾಪುರ, ಆನೇಕಲ್, ಹೊಸಕೋಟೆ ಪ್ರದೇಶಗಳು ಶುದ್ಧ ಗಾಂಜಾ ಸಿಗುವ ಪ್ರದೇಶಗಳೆಂದು ಮಾಫಿಯಾ ಜಗತ್ತಿನಲ್ಲಿ ಹೆಸರು ಪಡೆದಿವೆ. ರಾಜಧಾನಿಯ ಪೂರ್ವ ಭಾಗದಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿರುವ ಆಫ್ರಿಕಾ ಪ್ರಜೆಗಳು, ತಮ್ಮ ದಂಧೆ ವೃದ್ಧಿಸಿಕೊಳ್ಳುವುದಕ್ಕಾಗಿಯೇ ಕೊತ್ತನೂರಿನ ಬಹುತೇಕ ಬಾರ್ ಹಾಗೂ ರೆಸ್ಟೊರೆಂಟ್‌ಗಳನ್ನು ತಾವೇ ನಡೆಸುತ್ತಿದ್ದಾರೆ.

ಬೆಂಗಳೂರು ಬಿಟ್ಟರೆ ಹಂಪಿ, ಮೈಸೂರು, ಮಂಗಳೂರು, ಗೋಕರ್ಣ ಹಾಗೂ ಉಡುಪಿಯಲ್ಲಿ ವಿದೇಶಿ ಪೆಡ್ಲರ್‌ಗಳು (ಪೂರೈಕೆದಾರರು) ಸಿಗುತ್ತಾರೆ. ಲ್ಯಾಟಿನ್‌ ಅಮೆರಿಕ ಮತ್ತು ಬ್ರೆಜಿಲ್‌ ದಂಧೆಕೋರರು ಸ್ಥಳೀಯ ಪೆಡ್ಲರ್‌ಗಳ ಕೆ.ಜಿ.ಗಟ್ಟಲೆ ಮಾಲು ತಲುಪಿಸುವದಕ್ಕೋಸ್ಕರವೇ ಗೋವಾ ಬೀಚ್‌ಗಳಿಗೆ ಬಂದು ಹೋಗುತ್ತಾರೆ. ಅಲ್ಲಿಂದ ಗ್ರಾಂಗಳ ಲೆಕ್ಕದಲ್ಲಿ ಬೆಂಗಳೂರು, ಕೇರಳ ತಲುಪುತ್ತವೆ.

ಮಾತಿಗೆ ಸಿಕ್ಕ ಪೆಡ್ಲರ್

ಪೊಲೀಸ್ ಬಾತ್ಮೀದಾರ ‘ಭಾಯ್‌’ ನೆರವಿನಿಂದ ಮಾತಿಗೆ ಸಿಕ್ಕ ಮಾಜಿ ಪೆಡ್ಲರ್‌ವೊಬ್ಬ, ತಾನು ಕೆಲಸ ಮಾಡುತ್ತಿದ್ದ ಜಾಲದ ಬಗ್ಗೆ ಸ್ವಲ್ಪ ಮಾಹಿತಿ ಬಿಚ್ಚಿಟ್ಟ.

‘ನನಗೆ ಡೇವಿಡ್ ಇಬಾಲು ಎಂಬಾತ ಅಫೀಮು, ಬ್ರೌನ್‌ಶುಗರ್, ಹೆರಾಯಿನ್‌ ತಂದು ಕೊಡುತ್ತಿದ್ದ. ಅದನ್ನು ಮಾರಾಟ ಮಾಡಿದರೆ ಶೇ 10ರಷ್ಟು ಕಮಿಷನ್ ಸಿಗುತ್ತಿತ್ತು. ಬಾಣಸವಾಡಿ ಪೊಲೀಸರು 2016ರ ಡಿಸೆಂಬರ್‌ನಲ್ಲಿ ಡೆವಿಡ್‌ನನ್ನು ಬಂಧಿಸಿದರು. ಆ ನಂತರ ನಾನು ದಂಧೆಯಿಂದ ದೂರ ಉಳಿದೆ. ಈಗ ಬಿ.ಎ. ಓದುತ್ತಿದ್ದೇನೆ’ ಎನ್ನುತ್ತಾನೆ 23 ವರ್ಷದ ಆ ಯುವಕ.

ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಅಫೀಮು ಬೇಸಾಯ ಎಗ್ಗಿಲ್ಲದೆ ನಡೆಯುತ್ತದೆ. ಅಲ್ಲಿನ ಕೃಷಿಕರಿಗೂ ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ಡ್ರಗ್ ಪೆಡ್ಲರ್‌ಗಳಿಗೂ ನೇರ ಸಂಪರ್ಕವಿದೆ. ಅಫೀಮು, ಬ್ರೌನ್‌ಶುಗರ್ ಹಾಗೂ ಹೆರಾಯಿನ್ ರಾಜ್ಯಕ್ಕೆ ರೈಲುಗಳಲ್ಲಿ ಬರುತ್ತವೆ. ಹೀಗೆ ಬಂದ ಸರಕನ್ನು ಏಜೆಂಟರು ಕಲಾಸಿಪಾಳ್ಯಕ್ಕೆ ಹೋಗುವ ಖಾಸಗಿ ಬಸ್‌ಗಳಲ್ಲಿ ಹಾಕುತ್ತಾರೆ. ಇಲ್ಲಿರುವ ಕೆಲ ಪೆಡ್ಲರ್‌ಗಳು ಅವುಗಳನ್ನು ಬಸ್‌ನಿಂದ ಇಳಿಸಿಕೊಳ್ಳುತ್ತಾರೆ. ಹೀಗೆ, ಹತ್ತಾರು ಕೈಗಳನ್ನು ದಾಟಿ, ಸರಕು ನಿಗದಿತ ಸ್ಥಳ ತಲುಪುತ್ತದೆ.

ಬಿಟ್ ಕಾಯಿನ್

ಇತ್ತೀಚಿನ ವರ್ಷಗಳಲ್ಲಿ ಡ್ರಗ್ಸ್ ವಹಿವಾಟಿನ ಸ್ವರೂಪವೇ ಬದಲಾಗಿ ಹೋಗಿದೆ. ರಾಜಧಾನಿಯಲ್ಲಿ ಈಗ ಅಂತರ್ಜಾಲವೇ ಮಾದಕ ಜಗತ್ತಿನ ಅತಿದೊಡ್ಡ ಮಾರುಕಟ್ಟೆ. ಇಲ್ಲಿ ರೂಪಾಯಿ, ಪೌಂಡ್, ಡಾಲರ್‌ಗಳ ವಹಿವಾಟು ನಡೆಯುತ್ತಿಲ್ಲ. ಬದಲಾಗಿ ‘ಬಿಟ್ ಕಾಯಿನ್’ ಚಲಾವಣೆಯಲ್ಲಿದೆ. ಇಂಥ ವಹಿವಾಟಿಗಾಗಿಯೇ ತಲೆ ಎತ್ತುವ ‘ಡಾರ್ಕ್‌ ವೆಬ್‌ಸೈಟ್‌’ಗಳು ಬೆಳಿಗ್ಗೆ ಹುಟ್ಟಿಕೊಂಡು ರಾತ್ರಿ ವೇಳೆಗೆ ಅಸುನೀಗುತ್ತಿವೆ. ಪೆಡ್ಲರ್‌ಗಳು ಹಾಗೂ ವ್ಯಸನಿಗಳು ಸಾಮಾಜಿಕ ತಾಣಗಳಲ್ಲಿ ತಮ್ಮದೇ ಗ್ರೂಪ್‌ಗಳನ್ನು ರಚಿಸಿಕೊಂಡು ಕಳ್ಳ ವ್ಯವಹಾರ ನಡೆಸುತ್ತಿದ್ದಾರೆ.

ಒಂಬತ್ತು ಸಂಸ್ಥೆಗಳ ಸಮರ

ಕೇಂದ್ರ ಮಾದಕ ವಸ್ತು ನಿಗ್ರಹ ಘಟಕ (ಎನ್‌ಸಿಬಿ), ಸಿಐಡಿ (ಆಯುಧ ಮತ್ತು ಮಾದಕ ದ್ರವ್ಯ ನಿಗ್ರಹ ಘಟಕ), ಐದು ಕಮಿಷನರೇಟ್‌ಗಳಲ್ಲಿರುವ ಸಿಸಿಬಿ, ಠಾಣೆಗಳ ಪೊಲೀಸರು, ಕರಾವಳಿ ಪಡೆ, ರೈಲ್ವೆ ಪೊಲೀಸರು, ಗುಪ್ತದಳ, ಜಿಲ್ಲಾ ಮಟ್ಟದ ವಿಶೇಷ ದಳ, ರೆವಿನ್ಯೂ ಇಂಟೆಲಿಜೆನ್ಸ್‌... ಹೀಗೆ ಒಂಬತ್ತು ತನಿಖಾ ಏಜೆನ್ಸಿಗಳು ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿರುದ್ಧ ಸಮರ ಸಾರಿವೆ. ಆದರೂ ಜಾಲದ ಮೂಲ ಬೇರು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

12 ವರ್ಷಗಳ ಹಿಂದೆ ಬೆಂಗಳೂರಿನ ಪುಲಕೇಶಿನಗರ ಪೊಲೀಸರು ಕೆನ್ಯಾದ ಡ್ರಗ್ ಪೆಡ್ಲರ್ ಸ್ಟೀವ್ ರಾಕ್ಸ್‌ ಎಂಬಾತನನ್ನು ಬಂಧಿಸಿದ್ದರು. ಇದು ರಾಜ್ಯದಲ್ಲಿ ವಿದೇಶಿ ಡ್ರಗ್ ಸಂಪರ್ಕ ಬಹಿರಂಗಗೊಂಡ ಮೊದಲ ಪ್ರಕರಣ. ಇನ್ನು 2015ರಲ್ಲಿ ಎನ್‌ಸಿಬಿ ಬಲೆಗೆ ಬಿದ್ದ ನೈಜೀರಿಯಾದ ಕ್ರಿಶ್, ವಿದೇಶಿ ಡ್ರಗ್ ವ್ಯವಹಾರದಲ್ಲಿ ದಕ್ಷಿಣ ಭಾರತದ ಉಸ್ತುವಾರಿ ಹೊತ್ತಿದ್ದಾಗಿ ಬಾಯ್ಬಿಟ್ಟಿದ್ದ. ವಿದೇಶಿ ಪೆಡ್ಲರ್‌ಗಳು ಸಿಕ್ಕರೂ, ಪೊಲೀಸರು ಅವರ ಬೆನ್ನುಹತ್ತಿ ಪ್ರಕರಣದ ಆಳಕ್ಕಿಳಿಯುತ್ತಿಲ್ಲ. ಇದರಿಂದ ಕಿಂಗ್‌ಪಿನ್‌ ಅಸ್ತಿತ್ವ ರಹಸ್ಯವಾಗಿಯೇ ಉಳಿದಿದೆ.

‘ಪೆಡ್ಲರ್‌ಗಳಿಗೆ ಕಿಂಗ್‌ಪಿನ್‌ಗಳ ಸಂಪರ್ಕವಿರುವುದಿಲ್ಲ. ಪೆಡ್ಲರ್‌ಗಳು ಸಿಕ್ಕರೂ ಜಾಲದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಡುವುದಿಲ್ಲ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಹುಚ್ಚರಂತೆ ವರ್ತಿಸಿಬಿಡುತ್ತಾರೆ. ಕಳೆದ ವರ್ಷ ಬೆಂಗಳೂರಿನ ಸಂಜಯಗರದಲ್ಲಿ ನೈಜೀರಿಯಾದ ಬ್ರೈಟ್ ಇಗ್ಯಾಲೊ ಹಾಗೂ ಮೈಕ್ ಎಂಬುವರನ್ನು ಬಂಧಿಸಿದ್ದೆವು. ಮೈಸೂರು ಸ್ಯಾಂಡಲ್‌ ಸೋಪ್ ಮಾದರಿಯ ವಸ್ತು ಸಿಕ್ಕಿತ್ತು. ಅದನ್ನು ನೀರಿನಲ್ಲಿ ಕರಗಿಸಿದಾಗ 300 ಗ್ರಾಂ ಕೊಕೈನ್ ಉಳಿಯಿತು. ನಾವು ಇಗ್ಯಾಲೊನನ್ನು ಹಿಡಿದುಕೊಳ್ಳುತ್ತಿದ್ದಂತೆಯೇ ಆತ ಮೊಬೈಲನ್ನು ನೆಲದ ಮೇಲೆಸೆದು ತುಳಿದು ಹಾಕಿಬಿಟ್ಟ. ಅದು ಸಿಕ್ಕಿದ್ದರೆ ಏಜೆಂಟರನ್ನು ಪತ್ತೆ ಮಾಡಬಹುದಿತ್ತು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಒಬ್ಬ ಸಿಸಿಬಿ ಇನ್‌ಸ್ಪೆಕ್ಟರ್‌.

ಮಹಿಳಾ ಕಿಂಗ್‌ಪಿನ್‌ಗಳು

ಮೈಸೂರು ರಸ್ತೆಯ ವೆನಿಲ್ಲಾ ಹಾಗೂ ಯಶವಂತಪುರದ ಫರೀದಾ. ಇವರಿಬ್ಬರೂ ಬೆಂಗಳೂರಿನ ಗಾಂಜಾ ಮಾರಾಟ ದಂಧೆಯ ಮೇಲೆ ಹಿಡಿತ ಸಾಧಿಸಿದ್ದ ಮಹಿಳೆಯರು. ಹತ್ತಾರು ವರ್ಷಗಳಿಂದ ಇವರ ಕುಟುಂಬ ಇದೇ ದಂಧೆ ನಡೆಸುತ್ತಾ ಬಂದಿತ್ತು. 2015ರಲ್ಲಿ ಸಿಸಿಬಿ ಪೊಲೀಸರು ವೆನಿಲ್ಲಾ ಹಾಗೂ ಆಕೆಯ ಸೊಸೆಯನ್ನು ಬಂಧಿಸಿದ್ದರು. ಯಶವಂತಪುರ ಪೊಲೀಸರು ವೆನಿಲ್ಲಾ ಮೇಲೆ ಗೂಂಡಾ ಕಾಯ್ದೆಯನ್ನೂ ಪ್ರಯೋಗಿಸಿದರು. ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಗೂಂಡಾ ಕಾಯ್ದೆ ಪ್ರಯೋಗಿಸಿದ್ದು ಅದೇ ಮೊದಲು. ಅನಾರೋಗ್ಯದಿಂದ ಬಳಲುತ್ತಿದ್ದ ಫರೀದಾ 2016ರಲ್ಲಿ ಮೃತಪಟ್ಟಳು.

ಗ್ರಾಮ್‌ಗೆ ಲಕ್ಷ ರೂಪಾಯಿ!

‘ಒಂದು ಗ್ರಾಂ ಎಲ್‌ಎಸ್‌ಡಿ ₹ 1.20 ಲಕ್ಷಕ್ಕೆ ಮಾರಾಟವಾಗುತ್ತಿದೆ. ಅಂತೆಯೇ ಒಂದು ಕೆ.ಜಿ. ಕೊಕೇನ್‌ಗೆ ₹ 6 ಕೋಟಿ ಹಾಗೂ ಹೆರಾಯಿನ್‌ಗೆ ₹ 40 ಲಕ್ಷ ಬೆಲೆ ಇದೆ. ಗಾಂಜಾ ₹ 25 ಸಾವಿರಕ್ಕೆ ಸಿಗುತ್ತದೆ. ಇವು ದುಬಾರಿಯಾದ ಕಾರಣ ಕೆಲವರು ಸಲ್ಯೂಷನ್ ಹಾಗೂ ಅವಧಿ ಮುಗಿದ ಮಾತ್ರೆಗಳಿಂದ ನಶೆ ಬರಿಸಿಕೊಳ್ಳುತ್ತಿದ್ದಾರೆ.

ಹೊಸ ಡ್ರಗ್ಸ್‌: ‘ಯಾಬಾ’ ಎಂಬ ಮಾತ್ರೆಗಳು ಬಾಂಗ್ಲಾದೇಶದಿಂದ ನಗರಕ್ಕೆ ಬರುತ್ತಿವೆ. ಒಂದು ಮಾತ್ರೆಯ ಮೌಲ್ಯ ₹ 300. ಇಂದಿರಾನಗರದಲ್ಲಿ ಕೆಲ ಕಾಲ ‘ಮಾರ್ಜೂನಾ ಕೇಕ್’ ಎಂಬ ಮಾದಕ ವಸ್ತು ಮಾರಾಟ ನಡೆಯಿತು. ನೈಜೀರಿಯಾದ ‘ಮಾರ್ನಿಂಗ್ ಗ್ಲೋರಿ’ ಎಂಬ ಮಾದಕ ವಸ್ತು ಸಿಲಿಕಾನ್ ಸಿಟಿಗೆ ಕಾಲಿಟ್ಟಿದೆ.

ನಗರದಲ್ಲಿರುವ 42 ಪುನರ್ವಸತಿ ಕೇಂದ್ರಗಳಲ್ಲಿ 600ಕ್ಕೂ ಹೆಚ್ಚು ವ್ಯಸನಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಜತೆಗೆ, ಸ್ಥಳೀಯರಿಗೆ ವಿದೇಶಿ ಡ್ರಗ್ಸ್ ರುಚಿ ತೋರಿಸುತ್ತಿರುವ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂಬ ಕೂಗು ಪ್ರಬಲವಾಗಿದೆ.

*

ಇರಾನ್ ಮಹಿಳೆಯ ಸಂದೇಶ

ಹೆಣ್ಣು ಮಕ್ಕಳು ಎಷ್ಟು ದಾಸರಾಗಿರುತ್ತಾರೆಂದರೆ ಡ್ರಗ್ಸ್‌ಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಇತ್ತೀಚೆಗೆ ಇಂದಿರಾನಗರದ ಮೆಕ್‌ಡೊನಾಲ್ಡ್ ಬಳಿ ನೈಜೀರಿಯಾದ ಸಿ.ಜೆ. ಎಂಬಾತನನ್ನು ಬಂಧಿಸಿ ಮೊಬೈಲ್ ಜಪ್ತಿ ಮಾಡಿದ್ದೆವು. ಅದರಲ್ಲಿ ‘ಸಿ.ಜೆ. ಐ ಆ್ಯಮ್ ಕನ್ಸೀವ್ಡ್‌ ಫ್ರಮ್ ಯು. ಐ ವಾಂಟ್ ಡ್ರಗ್ಸ್ ನೌ’ ಎಂದು ಇರಾನಿನ ಮಹಿಳೆಯೊಬ್ಬರು ಕಳುಹಿಸಿದ್ದ ಸಂದೇಶವಿತ್ತು ಎಂದು ಸಿಸಿಬಿ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry