ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆಯಲ್ಲಿಯೇ ಇರುವುದು ಉತ್ತರ

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೀಚಿ ಅವರ  ತಿಂಮನ ಜೋಕ್‌ ಒಂದು ಹೀಗಿದೆ:

ತಿಂಮ ಪರೀಕ್ಷೆಗೆ ಕುಳಿತಾಗ ಪ್ರಶ್ನೆಪತ್ರವು ಇಂತಿದ್ದಿತು:

1. ವಲಯಗಳೆಷ್ಟು?

2. ಮೂರು ವಲಯಗಳಾವುವು?

3. ಉಷ್ಣವಲಯ, ಶೀತವಲಯ, ಸಮಶೀತೋಷ್ಣವಲಯ – ಇವುಗಳಲ್ಲಿ ಇರುವ ಭೇದವೇನು?

ಅದಕ್ಕೆ ತಿಂಮನ ಉತ್ತರಗಳು ಹೀಗಿದ್ದವು –

1. ಎರಡನೇ ಪ್ರಶ್ನೆಯನ್ನು ನೋಡಿರಿ.

2. ಮೂರನೆಯ ಪ್ರಶ್ನೆಯನ್ನು ನೋಡಿರಿ.

3. ‘‘.....’’

ಮೂರು ಪ್ರಶ್ನೆಗಳಲ್ಲಿ ಎರಡನ್ನು ಉತ್ತರಿಸಿದ್ದಕ್ಕಾಗಿ ತಿಂಮ ಉತ್ತಮ ಮಾರ್ಕುಗಳಿಂದ ತೇರ್ಗಡೆಯಾದ.

* * * *

ಇಡಿಯ ಜೀವನದ ಗಹನತೆಗೇ ಹೊಸ ಆಯಾಮವನ್ನು ನೀಡುವಷ್ಟು ಸಮರ್ಥವಾಗಿದೆ, ತಿಂಮನ ಈ ಜೋಕ್‌. ಜೊತೆಗೆ ವೇದಾಂತವನ್ನು ಅರ್ಥ ಮಾಡಿ
ಕೊಳ್ಳಲು ಇದು ಒದಗುತ್ತದೆ.

ಜೀವನ ಎಂದರೆ ನಾವು ಸಮಸ್ಯೆಗಳ ಮೂಟೆಯಾಗಿಯೇ ನೋಡುತ್ತೇವೆ. ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂಬಂತೆ ಒದ್ದಾಡುತ್ತಿರುತ್ತೇವೆ. ನಮ್ಮ ಯಾವ ಪ್ರಶ್ನೆಗಳಿಗೂ ಉತ್ತರವೇ ಸಿಗದು ಎಂದು ಕಂಗಾಲಾಗುತ್ತೇವೆ. ಆದರೆ ಒಂದೇ ಒಂದು ಕ್ಷಣ ಸಮಾಧಾನದಿಂದ ಜೀವನದ ಪ್ರಶ್ನೆಗಳನ್ನು ಎದುರಿಸಿದಾಗ ನಮಗೇ ಅಚ್ಚರಿ ಎನಿಸುವಂತೆ ಆ ಪ್ರಶ್ನೆಗಳಿಗೆ ಉತ್ತರಗಳು ಕಾಣಿಸಿಕೊಳ್ಳುತ್ತವೆ. ಪ್ರಶ್ನೆಗಳಲ್ಲಿಯೇ ಉತ್ತರಗಳೂ ಅಡಗಿರುತ್ತವೆ; ಆದರೆ ನಾವು ಆ ದೃಷ್ಟಿಕೋನದಿಂದ ಪ್ರಶ್ನೆಗಳನ್ನು ನೋಡುವುದೇ ಇಲ್ಲವಷ್ಟೆ! ಜೀವನ ಎಂಬ ಪ್ರಶ್ನೆಗೆ ಉತ್ತರ ಏನೆಂದು ತಿಳಿಯದೆ ಒದ್ದಾಡುತ್ತೇವೆ; ಆದರೆ ಜೀವನ ಎಂಬ ಪ್ರಶ್ನೆಗೆ ಜೀವನವೇ ಉತ್ತರ ಎನ್ನುವುದನ್ನು ಕಂಡುಕೊಳ್ಳುವುದೇ ಇಲ್ಲ. ವಾಸ್ತವವಾಗಿ ಜೀವನ ಎನ್ನುವುದು ಪ್ರಶ್ನೆಯೇ ಅಲ್ಲ; ಅದು ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ – ಎನ್ನುವುದರ ಅರಿವೇ ಜೀವನಸೌಂದರ್ಯದ ಸಾಕ್ಷಾತ್ಕಾರಕ್ಕೆ ಬೇಕಾದ ವಿವೇಕ. ‘Life delights in life’ - ‘ಜೀವನ ಜೀವನದಲ್ಲಿ ಸಂಭ್ರಮಿಸುತ್ತದೆ’ ಎಂದ ಸೂಫೀಸಂತ ರೂಮಿಯ ಮಾತು ಇಲ್ಲಿ ಮನನೀಯ. ತಿಂಮ ಪರೀಕ್ಷೆಯಲ್ಲಿ ಮಾಡಿದ್ದಾದರೂ ಅಷ್ಟೇ – ಪ್ರಶ್ನೆಗಳಲ್ಲಿಯೇ ಇರುವ ಉತ್ತರವನ್ನು ಕಂಡುಕೊಂಡ; ಪರೀಕ್ಷೆಯಲ್ಲಿ ಉತ್ತೀರ್ಣನಾದ.

ಸಂಸ್ಕೃತ ಸಾಹಿತ್ಯದ ವಿಶಿಷ್ಟ ಪ್ರಕಾರವಾದ ಸುಭಾಷಿತಗಳಲ್ಲಿಯೂ ಕೂಡ ತಿಂಮನ ಜೋಕ್‌ ಮಾದರಿಯ ಪ್ರಶ್ನೆ– ಉತ್ತರಗಳ ಚಮತ್ಕಾರ
ವನ್ನು ನೋಡಬಹುದು. ಉದಾಹರಣೆಗೆ ಒಂದು ಪದ್ಯ:

ಕಂ ಸಂಜಘಾನ ಕೃಷ್ಣಃ ಕಾ ಶೀತಲವಾಹಿನೀ ಗಂಗಾ |

ಕೇ ದಾರಪೋಷಾಣರತಾಃ ಕಂ ಬಲವಂತಂ ನ ಬಾಧತೇ ಶೀತಮ್‌ ||

ಈ ಶ್ಲೋಕದಲ್ಲಿ ಕೂಡ ಪ್ರಶ್ನೆಗಳಲ್ಲಿಯೇ ಉತ್ತರಗಳೂ ಅಡಗಿವೆ. ಪ್ರಶ್ನೆಯ ಮುಂದಿನ ಅಕ್ಷರವನ್ನು ಸೇರಿಸಿಕೊಳ್ಳುತ್ತಿದ್ದಂತೆ ಉತ್ತರವೇ ಸಿಕ್ಕಿಬಿಡುವಂತೆ ಈ ಶ್ಲೋಕ ರಚನೆಯಾಗಿದೆ. ‘ಕಂ ಸಂಜಘಾನ ಕೃಷ್ಣಃ’; ಕೃಷ್ಣ ಯಾರನ್ನು ಕೊಂದ? ಕಂಸನನ್ನು ಅಲ್ಲವೆ? ಅಲ್ಲೇ ಉತ್ತರ ಇದೆ. ‘ಕಾ ಶೀತಲವಾಹಿನೀ ಗಂಗಾ’; ಶೀತಲವಾದ ಗಂಗಾನದಿಯು ಎಲ್ಲಿ ಹರಿಯುತ್ತಾಳೆ. ಉತ್ತರ: ಕಾಶಿಯಲ್ಲಿ. ‘ಕೇ ದಾರಪೋಷಾಣರತಾಃ’. ಹೆಂಡತಿಯನ್ನು, ಎಂದರೆ ಕುಟುಂಬವನ್ನು ಯಾರು ಪೋಷಿಸಬಲ್ಲ; ತೋಟ ಇದ್ದವನ್ನು – ಎಂದರೆ ಕೃಷಿಕ; ರೈತ (ಕೇದಾರ ಎಂದರೆ ತೋಟ ಎಂದು ಅರ್ಥ). ‘ಕಂ ಬಲವಂತಂ ನ ಬಾಧತೇ ಶೀತಮ್‌’; ಶೀತ ಎಂಥ ಬಲವಂತನನ್ನು ಬಾಧಿಸದು; ಕಂಬಳಿಯನ್ನು ಹೊದ್ದವನನ್ನು ಅಲ್ಲವೆ?

ವೇದಾಂತದ ಪ್ರಕಾರ ಇರುವುದು ಒಂದೇ ವಸ್ತು; ಅದೇ ಬ್ರಹ್ಮವಸ್ತು. ಆದರೆ ಇಲ್ಲೊಂದು ಸಮಸ್ಯೆ ಉಂಟು. ಬ್ರಹ್ಮವಸ್ತು ಕಣ್ಣಿಗೆ ಕಾಣಿಸದು; ಸ್ಪರ್ಶಕ್ಕೆ ಸಿಗದು. ಹೀಗಿದ್ದಾಗ ‘ಅದು ಇದೆ’ ಎಂದು ಹೇಗೆ ನಂಬುವುದು ಎಂಬ ಪ್ರಶ್ನೆ ಏಳುತ್ತದೆ. ಈ ಪ್ರಶ್ನೆಗೆ ವೇದಾಂತದಲ್ಲಿ ಹಲವು ಪರಿಹಾರಗಳನ್ನು ಕೊಡುತ್ತ ಕೊನೆಗೆ ಒಂದು ನಿರ್ಣಯಕ್ಕೆ ಬರುತ್ತದೆ. ಬ್ರಹ್ಮ ಇಲ್ಲ – ಎಂದು ಅದರ ಅಸ್ತಿತ್ವವನ್ನು ನಿರಾಕರಿಸುವ ವ್ಯಕ್ತಿ ಇದ್ದಾನಲ್ಲ – ಅವನು ಯಾರನ್ನು, ಏನನ್ನು ನಿರಾಕರಿಸಿದರೂ ತನ್ನನ್ನು ತಾನು ನಿರಾಕರಿಸಿಕೊಳ್ಳಲಾರ. ಹೀಗೆ ‘ನಾನು’ ಎಂಬ ಅರಿವು, ಚೈತನ್ಯ ಎಂಬ ಪ್ರಜ್ಞೆಗೆ ಕಾರಣವಾಗಿರುವುದೇ ಬ್ರಹ್ಮ; ಅದೇ ಬ್ರಹ್ಮ ಎನ್ನುತ್ತದೆ. ಎಂದರೆ ‘ಬ್ರಹ್ಮ ಯಾವುದು’ ಎಂದು ಯಾವನು ಪ್ರಶ್ನಿಸುತ್ತಿದ್ದಾನೋ ಅವನೇ ಬ್ರಹ್ಮ. ಹೀಗೆ ವೇದಾಂತವೂ ಪ್ರಶ್ನೆಯಲ್ಲಿಯೇ ಉತ್ತರವನ್ನು ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT