7

‘ರೋಹಿಂಗ್ಯಾ ಬಿಕ್ಕಟ್ಟು’: ಎಲ್ಲಕ್ಕಿಂತ ಮಾನವೀಯತೆಯೇ ಮುಖ್ಯ

Published:
Updated:
‘ರೋಹಿಂಗ್ಯಾ ಬಿಕ್ಕಟ್ಟು’: ಎಲ್ಲಕ್ಕಿಂತ ಮಾನವೀಯತೆಯೇ ಮುಖ್ಯ

ಮ್ಯಾನ್ಮಾರ್‌ನಿಂದ ಪಲಾಯನ ಮಾಡಿ ಭಾರತಕ್ಕೆ ಬಂದು ‘ಅಕ್ರಮವಾಗಿ’ ನೆಲೆಸಿರುವ ರೋಹಿಂಗ್ಯಾ ಮುಸ್ಲಿಂ ಸಮುದಾಯದವರನ್ನು ವಾಪಸ್‌ ಕಳುಹಿಸಲಾಗುವುದು ಎಂಬ ಕೇಂದ್ರ ಸರ್ಕಾರದ ನಿಲುವು ವ್ಯಾಪಕ ಚರ್ಚೆಗೆ ಒಳಗಾಗಿದೆ. ಇದಕ್ಕೆ ಸಂಬಂಧಿಸಿ ‘ರೋಹಿಂಗ್ಯಾ ಬಿಕ್ಕಟ್ಟು’ ಏನು ಎಂದು ಅರ್ಥ ಮಾಡಿಕೊಳ್ಳುವ ಪ್ರಯತ್ನ ಇಲ್ಲಿದೆ:

ಹುಟ್ಟಿ ಬೆಳೆದ ಊರಿನಲ್ಲಿ ಕಿರುಕುಳ, ಹಿಂಸೆಗೆ ಒಳಗಾಗಿ ಅದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪಲಾಯನ ಮಾಡಿ ಆಶ್ರಯ ಬೇಡಿ ತಲುಪಿದ ದೇಶಗಳಲ್ಲಿ ತಿರಸ್ಕೃತರಾಗಿ, ವಿಶ್ವಸಂಸ್ಥೆ ಹೇಳುವ ಪ್ರಕಾರ ಈ ಜಗತ್ತಿನಲ್ಲಿ ಅತಿ ಹೆಚ್ಚು ತೊಂದರೆ ಅನುಭವಿಸುತ್ತಿರುವ ಸಮುದಾಯವೇ ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರು. ಆಗಸ್ಟ್ 25ರ ಬಳಿಕ ಈ ಜನರು ಮ್ಯಾನ್ಮಾರ್‌ನಿಂದ ಮತ್ತೆ ಸಾಮೂಹಿಕವಾಗಿ ಪಲಾಯನ ಮಾಡುತ್ತಿದ್ದಾರೆ.ಹುಟ್ಟಿ ಬೆಳೆದ ಊರಿನಲ್ಲಿ ರೋಹಿಂಗ್ಯಾ ಸಮುದಾಯಕ್ಕೆ ಸೇರಿದವರು ಯಾಕೆ ಹಿಂಸೆಗೆ ಒಳಗಾಗುತ್ತಿದ್ದಾರೆ? ಇವರು ನಿಜಕ್ಕೂ ಮ್ಯಾನ್ಮಾರ್‌ನ ಪೌರರು ಅಲ್ಲವೇ? ಆಗಸ್ಟ್ 25ರ ಹಿಂಸಾಚಾರ ಯಾಕೆ ನಡೆಯಿತು? ನೆರೆಯ ದೇಶಗಳು ಯಾಕೆ ಈ ಜನರಿಗೆ ಆಶ್ರಯ ನೀಡುತ್ತಿಲ್ಲ? ಈ ಜನರಿಗೆ ಭಾರತವೂ ಆಶ್ರಯ ನಿರಾಕರಿಸಲು ಕಾರಣವೇನು?

ರೋಹಿಂಗ್ಯಾ ಮುಸ್ಲಿಮರು ಯಾರು?: ಬಂಗಾಳಿ ಭಾಷೆ ಮಾತನಾಡುವ ಈ ಜನರು 15ನೇ ಶತಮಾನದಿಂದಲೇ ಮ್ಯಾನ್ಮಾರ್‌ನಲ್ಲಿ ನೆಲೆಯಾಗಿದ್ದಾರೆ ಎಂದು ಹೇಳಲಾಗು

ತ್ತಿದೆ. ಆದರೆ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಬಾಂಗ್ಲಾ ದೇಶದಿಂದ ವಲಸೆ ಬಂದವರು ಎಂದು ಮ್ಯಾನ್ಮಾರ್ ಸರ್ಕಾರ ಇವರನ್ನು ಪರಿಗಣಿಸುತ್ತಿದೆ.ಇವರಲ್ಲಿ ಹೆಚ್ಚಿನವರು ಮುಸ್ಲಿಂ ಧರ್ಮವನ್ನು ಅನುಸರಿಸುತ್ತಾರೆ. ಇತರ ಧರ್ಮಗಳನ್ನು ಪಾಲಿಸುವವರೂ ಇದ್ದಾರೆ. ಮ್ಯಾನ್ಮಾರ್‌ನ ಜನರಲ್ಲಿ ಹೆಚ್ಚಿನವರು ಬೌದ್ಧ ಧರ್ಮೀಯರಾಗಿದ್ದು ಬರ್ಮಿ ಭಾಷೆ ಮಾತನಾಡುತ್ತಾರೆ. ರೋಹಿಂಗ್ಯಾ ಜನರಲ್ಲಿ ಬಹುಸಂಖ್ಯಾತರು ಮುಸ್ಲಿಮರಾಗಿದ್ದು ಬಂಗಾಳಿ ಮಾತನಾಡುತ್ತಾರೆ. ಇದು ಎದ್ದು ಕಾಣುವ ವ್ಯತ್ಯಾಸ. ಬಂಗಾಳಿ ಮಾತನಾಡುವ ಈ ಜನರನ್ನು ಬೌದ್ಧರು ನಿಕೃಷ್ಟವಾಗಿ ಕಾಣುತ್ತಾರೆ. ‘ರೋಹಿಂಗ್ಯಾ’ ಎನ್ನುವುದು ಮ್ಯಾನ್ಮಾರ್‌ನಲ್ಲಿ ಅವಹೇಳನಕಾರಿ ಪದವಾಗಿ ಮಾರ್ಪಟ್ಟಿದೆ.

ಪೌರತ್ವವೇ ಇಲ್ಲ: ಈ ಜನರಿಗೆ ಮ್ಯಾನ್ಮಾರ್ ಸರ್ಕಾರ ಪೌರತ್ವ ನೀಡಿಲ್ಲ. ಹೀಗೆ ನೀಡದೇ ಇರುವುದಕ್ಕೆ ಅಲ್ಲಿನ ಕಾನೂನಿನ ಬಲವೂ ಇದೆ. 1982ರಲ್ಲಿ ಆ ದೇಶದಲ್ಲಿ ಸೇನೆಯ ಸರ್ವಾಧಿಕಾರ ಇದ್ದಾಗ ಬರ್ಮಾ ಪೌರತ್ವ ಕಾಯ್ದೆ ಜಾರಿಗೆ ಬಂದಿದೆ. ಈ ಕಾನೂನಿನ ಪ್ರಕಾರ, ಯಾವುದೇ ಜನಾಂಗೀಯ ಅಲ್ಪಸಂಖ್ಯಾತರ ಗುಂಪಿಗೆ ಸೇರಿದವರು ಪೌರತ್ವ ಪಡೆಯಬೇಕಿದ್ದರೆ ಅವರ ಪೂರ್ವಜರು 1823ಕ್ಕಿಂತ ಹಿಂದೆ ಈ ದೇಶದಲ್ಲಿ ನೆಲೆಸಿದ್ದರು ಎಂಬ ಪುರಾವೆ ಒದಗಿಸಬೇಕು. ಇಲ್ಲದಿದ್ದರೆ ಅವರನ್ನು ‘ನಿವಾಸಿ ವಿದೇಶಿಯರು’ ಎಂದು ಪರಿಗಣಿಸಲಾಗುತ್ತದೆ. ಹೆತ್ತವರಲ್ಲಿ ಒಬ್ಬರು ಮ್ಯಾನ್ಮಾರ್ ಪೌರತ್ವ ಹೊಂದಿದ್ದರೆ ಅಂಥವರಿಗೆ ‘ಸಹ ಪೌರ’ ಎಂಬ ಅವಕಾಶ ಮಾತ್ರ ದೊರೆಯುತ್ತದೆ.

ಇವರಿಗೆ ಯಾವುದೇ ಹಕ್ಕುಗಳು ಇಲ್ಲ. ಆಹಾರ, ವಸತಿ, ಶಿಕ್ಷಣ, ಆರೋಗ್ಯ ಸೇವೆಯಂತಹ ಸೌಲಭ್ಯದಿಂದಲೂ ಇವರು ವ‌ಂಚಿತರು. ರಾಖೈನ್ ರಾಜ್ಯದ ಹೊರಗೆ

ಇವರು ಹೋಗುವಂತೆಯೂ ಇಲ್ಲ. 2011ರ ವರೆಗೆ ಮ್ಯಾನ್ಮಾರ್‌ನಲ್ಲಿ ಸೇನಾ ಆಡಳಿತವಿತ್ತು. 2012ರಲ್ಲಿ ಪ್ರಜಾಪ್ರಭುತ್ವದತ್ತ ದೇಶ ಹೊರಳುವ ಪ್ರಕ್ರಿಯೆ ಆರಂಭಗೊಂ

ಡಿತು. 2011ಕ್ಕೆ ಹಿಂದೆ ರೋಹಿಂಗ್ಯಾ ಜನರಿಗೆ ಸೇನಾ ಸರ್ಕಾರ ನಿರಂತರವಾಗಿ ಕಿರುಕುಳ ನೀಡಿದೆ. ಸಾವಿರಾರು ಮಂದಿಯನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದೆ ಎಂದು ವಿಶ್ವಸಂಸ್ಥೆಯೇ ಹೇಳಿದೆ.2012ರಲ್ಲಿ ಕೋಮು ಗಲಭೆ ಪರಾಕಾಷ್ಠೆಗೆ: 2011ರ ಬಳಿಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಆರಂಭವಾಯಿತು. ಆದರೆ 2012ರ ಜೂನ್‌ನಲ್ಲಿ ಭಾರಿ ಕೋಮುಗಲಭೆ ರಾಖೈನ್ ಪ್ರಾಂತ್ಯದಲ್ಲಿ ನಡೆಯಿತು. ರೋಹಿಂಗ್ಯಾ ಜನರು ಬಹುಸಂಖ್ಯೆಯಲ್ಲಿರುವ ರಾಖೈನ್‌ ಪ್ರಾಂತ್ಯದ ಸ್ಥಳವೊಂದರಲ್ಲಿ ಬೌದ್ಧ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಇದು ಕೋಮು ದಳ್ಳುರಿಗೆ ಕಾರಣವಾಯಿತು.

ಘರ್ಷಣೆ ಒಮ್ಮೆಗೆ ಶಾಂತವಾದರೂ ಅದೇ ವರ್ಷ ಅಕ್ಟೋಬರ್‌ನಲ್ಲಿ ಮತ್ತೆ ತೀವ್ರಗೊಂಡಿತು. ರೋಹಿಂಗ್ಯಾ ಮತ್ತು ಬೌದ್ಧ– ಎರಡೂ ಸಮುದಾಯಗಳಲ್ಲಿ ನೂರಾರು ಜನರು ‍ಪ್ರಾಣತೆತ್ತರು. ರೋಹಿಂಗ್ಯಾ ಸಮುದಾಯದ ಸಾವಿರಾರು ಜನರು ಸಮೀಪದ ಬಾಂಗ್ಲಾದೇಶ, ಥಾಯ್ಲೆಂಡ್‌, ಮಲೇಷ್ಯಾ ಮತ್ತು ಇಂಡೊನೇಷ್ಯಾಗಳಿಗೆ ಪಲಾಯನ ಮಾಡಿದರು. ಈ ಸಮುದಾಯದ ಲಕ್ಷಾಂತರ ಜನರನ್ನು ನಿರಾಶ್ರಿತ ಶಿಬಿರಗಳಲ್ಲಿ ಸರ್ಕಾರ ಇರಿಸಿತು. ಮ್ಯಾನ್ಮಾರ್‌ನ ಇತರ ಪ್ರಾಂತ್ಯಗಳಿಗೂ ಕೋಮು ಹಿಂಸಾಚಾರ ಹಬ್ಬುವ ಅಪಾಯವೂ ಎದುರಾಯಿತು. ಕೊನೆಗೆ, 2013ರಲ್ಲಿ ಸೇನೆಯ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.

ರೋಹಿಂಗ್ಯಾ ಮುಸ್ಲಿಮರು ಉಗ್ರರೇ?: ಅರ್ಕಾನ್‌ ರೋಹಿಂಗ್ಯಾ ಸಾಲ್ವೇಷನ್‌ ಆರ್ಮಿ (ಅರ್ಸಾ) ಎಂಬ ಹೆಸರಿನ ರೋಹಿಂಗ್ಯಾ ಸಂಘಟನೆ ಇದೆ. ಇದೊಂದು ಉಗ್ರಗಾಮಿ ಸಂಘಟನೆ ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ. ಈ ಸಂಘಟನೆಯಲ್ಲಿ ಇರುವವರು ವಿದೇಶಗಳಲ್ಲಿ ತರಬೇತಿ ಪಡೆದು ಬಂದಿದ್ದಾರೆ ಎಂದೂ ಸರ್ಕಾರ ಆರೋಪಿಸುತ್ತಿದೆ. ಸೌದಿ ಅರೇಬಿಯಾದಲ್ಲಿ ಇರುವ ರೋಹಿಂಗ್ಯಾ ಸಮುದಾಯಕ್ಕೆ ಸೇರಿದವರು ಇದರ ನೇತೃತ್ವ ವಹಿಸಿದ್ದಾರೆ. ಸಂಘಟನೆಯ ಮುಖ್ಯಸ್ಥ ಪಾಕಿಸ್ತಾನ ಸಂಜಾತ ಅತಾವುಲ್ಲಾ ಎಂಬಾತ ಕೂಡ ಸೌದಿಯಲ್ಲಿ ಬೆಳೆದವನು ಎಂದು ಹೇಳಲಾಗುತ್ತಿದೆ. ಆದರೆ ಸಂಘಟನೆಯ ವಕ್ತಾರರು ಇದನ್ನು ಅಲ್ಲಗಳೆಯುತ್ತಾರೆ. ಜನಾಂಗೀಯ ಅಲ್ಪಸಂಖ್ಯಾತ ಗುಂಪು ಎಂಬ ಮನ್ನಣೆಗಾಗಿ ಹೋರಾಡುವುದಷ್ಟೇ ಇದರ ಮುಖ್ಯ ಗುರಿ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಚಾಕುಗಳು ಮತ್ತು ಮನೆಯಲ್ಲಿಯೇ ತಯಾರಿಸುವ ಬಾಂಬ್‌ಗಳಷ್ಟೇ ಇವರಲ್ಲಿರುವ ಆಯುಧಗಳು.

ಆ. 25ರಿಂದ ಮತ್ತೆ ಸಂಘರ್ಷ: ಅರ್ಸಾದ ಸದಸ್ಯರು ಆ. 25ರಂದು ಪೊಲೀಸ್‌ ಚೌಕಿಗಳು ಮತ್ತು ಸೇನಾ ಶಿಬಿರಗಳು ಸೇರಿ ಒಟ್ಟು 30 ಕಡೆ ದಾಳಿ ನಡೆಸಿದರು. ಈ ದಾಳಿಗೆ 12 ಪೊಲೀಸರು ಬಲಿಯಾಗಿದ್ದಾರೆ. ಈ ಗುಂಪು ನಡೆಸಿದ ಅತ್ಯಂತ ದೊಡ್ಡ ಕಾರ್ಯಾಚರಣೆ ಇದು ಎಂದು ಹೇಳಲಾಗಿದೆ. ಆ ಬಳಿಕ ಈ ಉಗ್ರಗಾಮಿಗಳ ಹುಟ್ಟಡಗಿಸಲು ಸೇನೆ ಪಣ ತೊಟ್ಟಿತು. ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 59 ಮಂದಿ ಮೃತಪ‍ಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಆದರೆ 2012 ರಿಂದಲೇ ನಿರಾಶ್ರಿತ ಶಿಬಿರಗಳಲ್ಲಿ ಇರುವವರನ್ನು ಸೇನೆ ಕೊಂದಿದೆ. ಹಲವು ಹಳ್ಳಿಗಳಿಗೆ ಬೆಂಕಿ ಇಟ್ಟು ನಾಶ ಮಾಡಲಾಗಿದೆ. ಈ ಸಮುದಾಯದ ನೂರಾರು ಯುವಕರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಇದ

ರಿಂದ ಬೆದರಿದ ರೋಹಿಂಗ್ಯಾ ಜನರು ಸಿಕ್ಕ ಸಿಕ್ಕ ಕಡೆಗಳಿಗೆಲ್ಲಾ ಪಲಾಯನ ಮಾಡುತ್ತಿದ್ದಾರೆ. ಭಾರಿ ಸಂಖ್ಯೆಯ ಜನರು ಭಾರತಕ್ಕೂ ಬಂದಿದ್ದಾರೆ.

ಭಾರತದ ಸ್ಪಷ್ಟ ನಿಲುವು: ರೋಹಿಂಗ್ಯಾ ಸಮುದಾಯಕ್ಕೆ ಸೇರಿದ 40 ಸಾವಿರ ಜನರು ಭಾರತದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಇವರು ಕಳೆದ ಕೆಲವು ವರ್ಷಗಳಿಂದ ಭಾರತಕ್ಕೆ ವಲಸೆ ಬಂದವರು. ಇವರೆಲ್ಲರನ್ನೂ ಮತ್ತೆ ಅವರ ದೇಶಕ್ಕೆ ಕಳುಹಿಸಲಾಗುವುದು ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಅವರು ಇತ್ತೀಚೆಗೆ ನೀಡಿದ ಹೇಳಿಕೆ ಈ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ರೋಹಿಂಗ್ಯಾ ಸಮುದಾಯದ ಜನರನ್ನು ದೇಶದಿಂದ ಹೊರಗೆ ಅಟ್ಟದಂತೆ ಸರ್ಕಾರಕ್ಕೆ ಸೂಚನೆ ಕೊಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಕೂಡ ದಾಖಲಾಗಿದೆ. ಈ ಬಗ್ಗೆ ಸರ್ಕಾರ ಯಾವ ನಿಲುವು ಹೊಂದಿದೆ ಎಂಬುದನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಸೋಮವಾರ ಸರ್ಕಾರ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸುವ ಸಾಧ್ಯತೆ ಇದೆ.

ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್‌ ಕಳುಹಿಸಬೇಕು ಎಂಬ ವಿಚಾರದಲ್ಲಿ ದೇಶದಲ್ಲಿ ಎರಡು ನಿಲುವುಗಳನ್ನು ಕಾಣಬಹುದು. ತೀವ್ರಗಾಮಿ ಹಿಂದುತ್ವದ ಪ್ರತಿಪಾದಕಿ ಸಾಧ್ವಿ ಪ್ರಾಚಿ ಅವರು ರೋಹಿಂಗ್ಯಾ ಮುಸ್ಲಿಮರನ್ನು ಐಎಸ್‌ ಉಗ್ರರಿಗಿಂತ ಅಪಾಯಕಾರಿ ಎಂದು ಬಣ್ಣಿಸಿದ್ದಾರೆ. ಅವರೆಲ್ಲರನ್ನೂ ದೇಶದಿಂದ ತಕ್ಷಣವೇ ಹೊರದಬ್ಬಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆದರೆ ಈ ಜನರನ್ನು ನಿರಾಶ್ರಿತರು ಎಂದು ಪರಿಗಣಿಸಿ ಅವರಿಗೆ ಆಶ್ರಯ ಕಲ್ಪಿಸಬೇಕು ಎಂಬುದು ಸಿಪಿಎಂನ ನಿಲುವು. ಬೇರೆ ದಾರಿ ಇಲ್ಲದೆ ಭಾರತದಲ್ಲಿ ಆಶ್ರಯ ಕೋರಿರುವ ರೋಹಿಂಗ್ಯಾ ಸಮುದಾಯದವರನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು ಎಂದು ಜಮಿಯತ್‌ ಉಲೇಮಾ ಎ ಹಿಂದ್‌ ಸಂಘಟನೆ ಸರ್ಕಾರವನ್ನು ಕೋರಿದೆ. ಈ ವಿಚಾರದಲ್ಲಿ ಮಾನವ ಹಕ್ಕುಗಳ ನೆಲೆಯಲ್ಲಿ ಮಧ್ಯಪ್ರವೇಶ ನಡೆಸುವುದೇ ಹೆಚ್ಚು ಸಮರ್ಪಕ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೇಳಿದೆ.

ಭಿನ್ನ ನಿಲುವಿನತ್ತ ಭಾರತ:  ಈ ಹಿಂದೆ ಈ ರೀತಿ ಆಶ್ರಯ ಬೇಡಿ ಬಂದವರನ್ನು ಭಾರತ ಹಿಂದಕ್ಕೆ ಅಟ್ಟಿದ ನಿದರ್ಶನ ಇಲ್ಲ. ಟಿಬೆಟ್‌ನ ಬೌದ್ಧರು, ಶ್ರೀಲಂಕಾದ ತಮಿಳರು

ಇದಕ್ಕೆ ಉದಾಹರಣೆ. ಆದರೆ ಈ ಬಾರಿ ರೋಹಿಂಗ್ಯಾ ಸಮುದಾಯದ ಜನರನ್ನು ವಾಪಸ್‌ ಕಳುಹಿಸಲು ಸರ್ಕಾರ ಮುಂದಾಗಿದೆ. ರೋಹಿಂಗ್ಯಾ ಮುಸ್ಲಿಮರನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದ ಜತೆ ಈ ಬಗ್ಗೆ ಮಾತುಕತೆಯನ್ನೂ ನಡೆಸಲಾಗುತ್ತಿದೆ. ಬಹಳ ಎಚ್ಚರಿಕೆಯ ಹೆಜ್ಜೆ ಇರಿಸಿರುವ ಭಾರತ ಸರ್ಕಾರ, ರೋಹಿಂಗ್ಯಾ ಸಮುದಾಯದ ಜನರನ್ನು ನಿರಾಶ್ರಿತರು ಎಂದು ಪರಿಗಣಿಸುವ ಬದಲಿಗೆ ಅಕ್ರಮ ವಲಸಿಗರು ಎಂದು ಹೇಳುತ್ತಿದೆ.

ನಿಯಮದ ತೊಡಕು: ನಿರಾಶ್ರಿತರಿಗೆ ಆಶ್ರಯ ನೀಡುವುದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯು 1951ರಲ್ಲಿ ಅಂಗೀಕರಿಸಿದ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಹಾಗಾಗಿ ರೋಹಿಂಗ್ಯಾ ಸಮುದಾಯದ ನಿರಾಶ್ರಿತರಿಗೆ ಆಶ್ರಯ ನೀಡಬೇಕಿಲ್ಲ ಎಂಬುದು ಭಾರತದ ವಾದ. ಆದರೆ ಈ ಒಪ್ಪಂದಕ್ಕೆ ಸಂಬಂಧಿಸಿದ ಒಂದು ನಿಯಮ ಸಹಿ ಹಾಕದ ದೇಶಗಳಿಗೂ ಅನ್ವಯವಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಒಂದು ದೇಶದಲ್ಲಿ ತಮಗೆ ಅಪಾಯವಿದೆ ಎಂದು ಪರಾರಿಯಾದ ಸಮೂಹವನ್ನು ಮತ್ತೆ ಅದೇ ದೇಶಕ್ಕೆ ಕಳುಹಿಸಬಾರದು ಎಂದು ಈ ನಿಯಮ ಹೇಳುತ್ತದೆ. ಹಾಗಾಗಿ ಒಂದು ವೇಳೆ ರೋಹಿಂಗ್ಯಾ ಸಮುದಾಯದ ನಿರಾಶ್ರಿತರನ್ನು ಭಾರತ ಹಿಂದಕ್ಕೆ ಕಳುಹಿಸಿದರೆ ಅದು ಈ ನಿಯಮದ ಉಲ್ಲಂಘನೆಯಾಗುತ್ತದೆ.

*ಭಾರತದಲ್ಲಿ ರೋಹಿಂಗ್ಯಾ ಸಮುದಾಯದ ಜನರು ಇರುವ ಸ್ಥಳಗಳು: ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಹೈದರಾಬಾದ್‌

ಭಾರತದ ಸಮರ್ಥನೆ

*ಈ ಜನರು ದೇಶದ ಸುರಕ್ಷತೆಗೆ ಧಕ್ಕೆಯಾಗಬಹುದು

*ನಿರಾಶ್ರಿತ ವಲಸಿಗರನ್ನು ಉಗ್ರಗಾಮಿ ಸಂಘಟನೆಗಳು ನೇಮಿಸಿಕೊಳ್ಳುವ ಅಪಾಯ  ಹೆಚ್ಚು

* ಈ ಜನರಿಗೆ ಬೇಕಾದ ವ್ಯವಸ್ಥೆ ಮಾಡಲು ಸಂಪನ್ಮೂಲದ ಕೊರತೆ

*

ಸೂಕಿ ಬಗ್ಗೆ ಶಂಕೆ

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಸಮುದಾಯದ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಆ ದೇಶದ ನಾಯಕಿ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿರುವ ಆಂಗ್‌ ಸಾನ್‌ ಸೂಕಿ ಅವರು ಮಾನವ ಹಕ್ಕುಗಳಿಗೆ ಸಂಬಂಧಿಸಿ ಹೊಂದಿರುವ ಕಾಳಜಿಯ ಬಗ್ಗೆಯೇ ಶಂಕೆ ಮೂಡುವಂತೆ ಮಾಡಿದೆ. 

ರೋಹಿಂಗ್ಯಾ ಸಮುದಾಯದ ಜನರು ಮ್ಯಾನ್ಮಾರ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಸೂಕಿ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಹೇಳಿಕೆಗೆ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಮತ್ತೊಬ್ಬ ಸಾಧಕಿ ಮಲಾಲ ಯೂಸುಫ್‌ಝೈ ಅವರು  ಆಘಾತ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry