ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ’ಮುಖಿ ರಾನಾ

ಸಾಮಾಜಿಕ ಮಾಧ್ಯಮ
Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹೀರೊ, ಖಳನಾಯಕನ ಪಾತ್ರದಲ್ಲಿ ಮಿಂಚಿರುವ ನೀವು, ಈಗ ವೆಬ್‌ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದೀರಿ. ಇದರಿಂದ ನಿಮ್ಮ ಇಮೇಜ್ ಬದಲಾದೀತೆ?
ಇಡೀ ಜಗತ್ತು ಅಂತರ್ಜಾಲದ ಸುತ್ತ ಸುತ್ತುತ್ತಿರುವ ಕಾಲ ಇದು. ನಾನು ಇಂಥದ್ದೇ ಮಾಧ್ಯಮ ಎಂಬ ಸೀಮಿತ ವಲಯವನ್ನು ಸೃಷ್ಟಿಸಿಕೊಂಡಿಲ್ಲ. ಪ್ರಯೋಗಗಳಿಗೆ ಸದಾ ಸಿದ್ಧ. ಭಿನ್ನ ಮಾಧ್ಯಮಗಳಲ್ಲಿ ನನ್ನನ್ನು ನಾನು ನೋಡಿಕೊಳ್ಳಲು ಇಷ್ಟಪಡುತ್ತೇನೆ. ಚಲನಚಿತ್ರ, ಟಿ.ವಿ. ಶೋ, ಹೀಗೆ ಎಲ್ಲಿ ಕಥೆ ಹೇಳಲು ಸಾಧ್ಯವೋ ಅಲ್ಲಿ ಪಾತ್ರಕ್ಕೆ ಸಿದ್ಧ. ಅದು ನನ್ನ ಕೆಲಸ. ಒಬ್ಬ ಕಲಾವಿದ ಜನರನ್ನು ಹೇಗೆ ಸುಲಭವಾಗಿ ತಲುಪಬಹುದು ಎಂಬುದನ್ನು ತಿಳಿದುಕೊಳ್ಳುವುದೂ ತುಂಬಾ ಮುಖ್ಯ. ಇದು ನನ್ನ ಬೆಳವಣಿಗೆಗೆ ಸಹಕಾರಿ ಎಂಬುದನ್ನು ನಾನು ನಂಬುತ್ತೇನೆ. ತೆರೆಯ ಆಚೆಗೂ ಉಳಿಯುವುದು ಮುಖ್ಯವಲ್ಲವೇ?

ಈ ಸರಣಿಗೆ ನಿಮ್ಮನ್ನು ಒಪ್ಪುವಂತೆ ಮಾಡಿದ ಬಹುಮುಖ್ಯ ಅಂಶ ಯಾವುದು?
ಈ ಮಾಧ್ಯಮವೇ ನನ್ನನ್ನು ಸೆಳೆದದ್ದು. ಕೆಲವು ಕಥೆಗಳು ಕೆಲ ಭಿನ್ನ ಮಾಧ್ಯಮವನ್ನು ಬೇಡುತ್ತವೆ. ಕೆಲವು ಕಥೆಗಳನ್ನು ದೊಡ್ಡ ಸ್ಕ್ರಿನ್‌ನಲ್ಲಿ ಹೇಳಲು ಸಾಧ್ಯವೇ ಇಲ್ಲ. ಅಂದರೆ ಮೂರು ಗಂಟೆಗಳಲ್ಲಿ ಹೇಳಿ ಮುಗಿಸಲು ಆಗುವಂಥದ್ದಲ್ಲ. ಅದು ಬೇರೆಯದೇ ವೇದಿಕೆಯನ್ನು ಬಯಸುವಂಥದ್ದು. ಅದಕ್ಕೆ ವೆಬ್‌ಗಿಂತ ಉತ್ತಮ ಆಯ್ಕೆ ಬೇರಿಲ್ಲ. ಸಿನಿಮಾದಲ್ಲಿದ್ದಂತೆ ಸಮಯದ, ಸಂಭಾಷಣೆಯ ಹಿಡಿತವಿಲ್ಲ. ಕಥೆ ಬೆಳೆಯಲು ಅವಕಾಶ ಹೆಚ್ಚು. ಇದೇ ನನ್ನನ್ನು ಹೆಚ್ಚು ಉತ್ಸುಕನಂತೆ ಮಾಡಿದ ಅಂಶ. ಶಶಿ ಸುಡಿಗಾಲ ಅವರ ನಿರ್ದೇಶನ, ನಟ ನವೀನ್ ಕಸ್ತೂರಿಯಾ, ನಟಿ ಪ್ರಿಯಾ ಬ್ಯಾನರ್ಜಿ ನನಗೆ ಜೊತೆಯಾಗಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಗ್ಗೆ ನೆಗೆಟಿವ್‌ ಅಭಿಪ್ರಾಯಗಳೇ ಹೆಚ್ಚಿವೆಯಲ್ಲ?
ನಮ್ಮದು ವರ್ಲ್ಡ್‌ ಆಫ್ ವೆಬ್. ಎಲ್ಲರೂ ಬಿಜಿಯಾಗಿದ್ದಾರೆ. ಆದರೂ ಎಲ್ಲರೂ ಅಂತರಜಾಲದ ಮೂಲಕ ಅಪ್‌ಡೇಟ್ ಆಗುತ್ತಿರುತ್ತಾರೆ. ನಾನು ಪತ್ರಿಕೆ ಓದುವುದೂ ಮೊಬೈಲ್‌ನಲ್ಲೇ. ಎಲ್ಲಾ ಕ್ಷೇತ್ರದಲ್ಲೂ ಇರುವಂತೆ ಇಲ್ಲೂ ಕೆಲವು ಉಪಯೋಗ, ಅನುಪಯೋಗ ಇರಬಹುದು. ಆದರೆ ಸಾಮಾಜಿಕ ಜಾಲತಾಣಗಳ ಬಗೆಗಿನ ನೆಗೆಟಿವ್ ಅಂಶಗಳನ್ನು ಇನ್ನಿತರ ಮಾಧ್ಯಮಗಳು ಹೆಚ್ಚು ಎತ್ತಿ ಹಿಡಿಯುತ್ತಿವೆ ಅಷ್ಟೆ.

‘ಸೋಷಿಯಲ್‌’ನಲ್ಲಿ ಏನು ಸಂದೇಶ ನೀಡಲು ಹೊರಟಿದ್ದೀರಿ?
ಸಂದೇಶ, ಬುದ್ಧಿವಾದ ಎಂದೆಲ್ಲಾ ಏನೂ ಇಲ್ಲ. ಥ್ರಿಲ್ಲರ್, ಸಸ್ಪೆನ್ಸ್, ನಿರಂತರ ಹುಡುಕಾಟ ಇವೆಲ್ಲವುಗಳ ಮಿಶ್ರಣದಿಂದ ಈ ಸರಣಿ ರೂಪಿತಗೊಂಡಿದೆ. ನನ್ನದು ಉದ್ಯಮಿಯ ಪಾತ್ರ. ಸಾಮಾಜಿಕ ಜಾಲತಾಣದ ಆಧಾರದ ಮೇಲೇ ಕಥೆ ಹೆಣೆದುಕೊಂಡಿದೆ. ಕಥೆಯೊಳಗೇ ಕಾಣದಂತೆ ಸಂದೇಶವೂ ಅಡಗಿರುತ್ತದೆ. ಕಥೆ ನಿಮ್ಮನ್ನು ಮುಟ್ಟಿದರೆ ಆ ಸಂದೇಶ ತಂತಾನೇ ತಲುಪಿರುತ್ತದೆ. ಸಾಮಾಜಿಕ ಜಾಲತಾಣಗಳ ವಿವಿಧ ಮಜಲುಗಳನ್ನು ತೋರಲಾಗಿದೆ. ಮಾಹಿತಿಯೊಂದಿಗೆ ಜಾಗೃತಿಯನ್ನೂ, ಥ್ರಿಲ್ಲರ್‌ನ ಹಲವು ಪದರಗಳನ್ನು ಮನರಂಜನೆ ಸಹಿತ ಬಿಡಿಸಿಡಲಾಗಿದೆ.

ದ್ವಿಭಾಷೆ ಮಾಧ್ಯಮದ ಸವಾಲುಗಳೇನು?
ಒಂದೇ ಬಾರಿ ಎರಡೆರಡು ಭಾಷೆಗಳಲ್ಲಿ ಚಿತ್ರ ಮಾಡುವುದು ಕಷ್ಟದ ಕೆಲಸ. ಅದೂ ಒಂದು ರೀತಿ ಪ್ರಯೋಗ. ಆದರೆ ಅದನ್ನು ನಿಭಾಯಿಸುವ ಕಲೆ ಗೊತ್ತಿರಬೇಕಷ್ಟೆ. ಈ ಡಿಜಿಟಲ್ ಸರಣಿ ಕೂಡ ಹಿಂದಿ ಹಾಗೂ ತೆಲುಗಿನಲ್ಲಿ ಮೂಡಿಬಂದಿದೆ.

ಟ್ರೇಲರ್‌ ನೋಡಲು:https://www.youtube.com/watch?v=MSTkgCBDqKw

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT