ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಕ್ತ ಮಠಾಧೀಶರಿಗೊಂದು ಪ್ರೀತಿಯ ಪತ್ರ

ಮಠಾಧೀಶರಾಗಿದ್ದುಕೊಂಡು ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿದ್ದರೆ ಸಮಾಜಕ್ಕೆ ಯಾವ ಸಂದೇಶ ನೀಡಲು ಸಾಧ್ಯ?
Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಾನವ ಜನಾಂಗದಲ್ಲಿ ಧರ್ಮವು ಪ್ರಮುಖ ಸಂಗತಿ ಆಗಿದೆ. ಭಯ- ಭೀತಿಯು ದೇವರ ಸೃಷ್ಟಿಗೆ ಕಾರಣ ಆಯಿತು. ಮಾನವ ಬದುಕಿನಲ್ಲಿ ಮೌಲ್ಯದ ಮಹತ್ವವನ್ನು ಪ್ರತಿಪಾದಿಸಲೆಂದು ಧರ್ಮದ ಪರಿಕಲ್ಪನೆ ಆರಂಭ ಆಯಿತು. ಹಣ, ಅಧಿಕಾರ, ಆಸ್ತಿ, ಸಾಮ್ರಾಜ್ಯ ವಿಸ್ತರಣೆ ಮುಂತಾದವುಗಳಿಗೆ ಮಾನವ ಹೋರಾಡುತ್ತಾ ಬಂದಿದ್ದಾನೆ. ಅದರಂತೆ ದೇವರ ವಿಚಾರಕ್ಕೆ ಆಗಾಗ ಜಗಳ ಕಾಯುತ್ತಾನೆ. ಧರ್ಮದ ವಿಚಾರದಲ್ಲೂ ದಾಂಧಲೆ ನಡೆಸುತ್ತ ನಡೆದಿದ್ದಾನೆ. ಹಿಂದಿನ ಕಾಲದಲ್ಲಿ ಸಾಮ್ರಾಜ್ಯ ವಿಸ್ತರಣೆಯು ಮನ್ನಣೆ ಪಡೆದಿತ್ತು. 20-21ನೇ ಶತಮಾನದಲ್ಲಿ ಧರ್ಮದ ವಿಸ್ತರಣೆಗೆ ಮಾನವ ಒತ್ತು ಕೊಡುತ್ತಿದ್ದಾನೆ. ಪ್ರಬಲ ಧರ್ಮಗಳು ದುರ್ಬಲ ಜನಾಂಗಗಳ ಮೇಲೆ ದಬ್ಬಾಳಿಕೆ ನಡೆಸಿರುವುದು ಹೊಸದೇನಲ್ಲ. ಧರ್ಮ ವಿಸ್ತರಣೆಗಾಗಿ ಮತಾಂತರಗೊಳಿಸಲು ಆಮಿಷಗಳನ್ನು ಒಡ್ಡಲಾಗುತ್ತದೆ ಎಂದು ಹೇಳಲಾಗುತ್ತದೆ. ಮತಾಂತರ ಪ್ರಕ್ರಿಯೆಯು ಧರ್ಮ-ಧರ್ಮಗಳಲ್ಲಿ ದಾಂಧಲೆಗೆ ಅವಕಾಶ ಮಾಡಿಕೊಡುತ್ತದೆ. ಹಾಗೆಂದು ಮತಾಂತರ ನಿಂತಿದೆಯೆಂದು ಹೇಳಲಾಗದು. ಅದು ಒಮ್ಮೊಮ್ಮೆ ವ್ಯಕ್ತವಾಗಿ, ಹಲವಾರು ಸಲ ಗುಪ್ತವಾಗಿ ನಡೆದೇ ಇರುತ್ತದೆ. ಮತಾಂತರದ ಕಾರಣಕ್ಕಾಗಿ ಧರ್ಮ- ಧರ್ಮಗಳಲ್ಲಿ ಯುದ್ಧಗಳು ನಡೆಯುತ್ತ ಬಂದಿವೆ. ಯಾವುದೇ ಧರ್ಮವನ್ನು ಅನುಸರಿಸುವ ಅವಕಾಶವು ಸಂವಿಧಾನಬದ್ಧವಾದುದು.

ವೈದಿಕ ಧರ್ಮವು ಸನಾತನವೆಂದು ಪ್ರತಿಪಾದಿಸುತ್ತ ಬರಲಾಗಿದೆ. ಸರ್ವರನ್ನು ಸಮಭಾವದಿಂದ ನೋಡುತ್ತ ಬಂದಿದ್ದರೆ, ಅದನ್ನೇ ಸರ್ವಜನಾಂಗದವರು ಒಪ್ಪುತ್ತಿದ್ದರೇನೊ! ಆದರೆ ವರ್ಣಾಶ್ರಮ ವ್ಯವಸ್ಥೆಯು ಪ್ರಧಾನ ಪಾತ್ರ ವಹಿಸಿದ್ದರಿಂದ ಕೆಲವು ಜನಾಂಗಗಳು ಅದರಿಂದ ಹೊರಬಂದಿವೆ. ಯಜ್ಞದ ಹೆಸರಲ್ಲಿ ಪಶುಬಲಿ ಕೊಡುತ್ತಿದ್ದು, ಅದನ್ನು ಪ್ರತಿಭಟಿಸಿ ಜೈನರು ಹೊರಬಂದರು. ತೀರ್ಥಂಕರರು ‘ಜೀವ ದಯೆಯೇ ಜೀವನ ಧರ್ಮ’ ಎಂಬುದನ್ನು ಪ್ರತಿಪಾದಿಸುತ್ತ ನಡೆದರು. ಮುಂದೆ ಅದು ‘ಜೈನಧರ್ಮ’ದ ಸ್ವರೂಪ ಪಡೆದುಕೊಂಡಿತು. ಪ್ರತ್ಯೇಕ ಧರ್ಮದ ಅಸ್ತಿತ್ವಕ್ಕಾಗಿ ಹೋರಾಡತೊಡಗಿದರು. ಮಾನವನ ಮಾರಾಟ ನಡೆಯುತ್ತಿದ್ದ ಕಾಲದಲ್ಲಿ ಮತ್ತೊಂದು ಜನಾಂಗವು ವೈದಿಕ ಧರ್ಮದಿಂದ ಹೊರಬಂದಿತು. ಅಷ್ಟೊತ್ತಿಗಾಗಲೇ ಗೌತಮ ಬುದ್ಧನು ತನ್ನ ವಿಚಾರಶ್ರೇಣಿಯನ್ನು ಬಿತ್ತುತ್ತ ಹೊರಟಿದ್ದರಿಂದ, ಅವನು ಪ್ರತಿಪಾದಿಸಿದ ಜೀವನಮಾರ್ಗವು ‘ಬೌದ್ಧ ಧರ್ಮ’ವೆಂದು ಪ್ರಖ್ಯಾತಿ ಪಡೆಯಿತು. ವೈದಿಕ ಧರ್ಮದಲ್ಲಿ ಇಷ್ಟೆಲ್ಲ ವ್ಯತ್ಯಾಸಗಳು ಇದ್ದುದರಿಂದ 12ನೇ ಶತಮಾನದಲ್ಲಿ ಬಸವಾದಿ ಶರಣರು ಲಿಂಗ ಅಸಮಾನತೆ ಮತ್ತು ಸಾಮಾಜಿಕ ಅಸಮಾನತೆಯಂತಹ ಮೂಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೊಸ ವಿಚಾರಗಳನ್ನು ಪ್ರತಿಪಾದಿಸಲು ಮುಂದಾದರು.

ಯಾವುದೇ ಒಂದು ಧರ್ಮಕ್ಕೆ ಅದು ಸ್ಥಾಪಿತವಾಗಿ ಎಷ್ಟು ವರ್ಷ ಆಯಿತು ಎಂಬುದು ಮುಖ್ಯ ಅಲ್ಲ; ಅದು ಜನರ ಬದುಕು ಕಟ್ಟಿಕೊಳ್ಳಲು ಹೇಗೆ ಸಹಕಾರಿ ಆಗಿದೆ ಎಂಬುದು ಅತಿಮುಖ್ಯ. ಝೆನ್‍, ಯಹೂದಿ ಮುಂತಾದ ಧರ್ಮಗಳು ಇತ್ತೀಚಿನವು. ಅಂದು ಅವು ಜನರ ಮೇಲೆ ಅಗಾಧವಾದ ಪರಿಣಾಮವನ್ನು ಉಂಟು ಮಾಡಿದವು. 15-16ನೇ ಶತಮಾನದಲ್ಲಿ ಮತ್ತೊಂದು ಜನಾಂಗವು ಮೂಲ ಧರ್ಮದ ಆಚಾರ- ವಿಚಾರಗಳನ್ನು ಪ್ರತಿಭಟಿಸಿ ಹೊರಬಂತು. ಸ್ಥಾವರ ಇತ್ಯಾದಿ ದೇವರ ಕಲ್ಪನೆಗಳನ್ನು ಒಪ್ಪಿಕೊಳ್ಳದೆ, ಗುರುನಾನಕ್ ಮುಂತಾದವರು ಪ್ರತಿಪಾದಿಸಿದ ಸಂದೇಶಗಳು ‘ಗ್ರಂಥಸಾಹಿಬ್’ ಸ್ವರೂಪ ಪಡೆದುಕೊಂಡವು. ಈ ಗ್ರಂಥವೇ ಆ ಧರ್ಮದ ಮೂಲ ಗ್ರಂಥ ಆಯಿತು. ಮುಂದೆ ಅದು ‘ಸಿಖ್‍ ಧರ್ಮ’ ಎಂದು ಪ್ರಸಿದ್ಧಿ ಆಯಿತು.

ಈ ಧರ್ಮಗಳಿಗೆ ಸೇರಿದವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿ, ಅವರಿಗೆ ವಿಶೇಷ ಸೌಲಭ್ಯಗಳನ್ನು ಸರ್ಕಾರಗಳು ನೀಡುತ್ತ ಬಂದಿರುತ್ತವೆ. ಇಂದು ಲಿಂಗಾಯತರು ತಮ್ಮದು ಸ್ವತಂತ್ರ ಧರ್ಮವೆಂದು ಬಲವಾಗಿ ಪ್ರತಿಪಾದಿಸಲು ಹೊರಟಿದ್ದಾರೆ. 900ವರ್ಷಗಳ ಹಿಂದೆಯೇ ಬಸವಾದಿ ಶರಣರು ಹೊಸ ವಿಚಾರಗಳ ಆಧಾರದ ಮೇಲೆ ಧರ್ಮಸಿದ್ಧಾಂತವನ್ನು ಪ್ರತಿಪಾದಿಸಿದರು. 900ವರ್ಷಗಳಷ್ಟು ಹಳೆಯದಾಗಿದ್ದು, ಸ್ವತಂತ್ರ ಧರ್ಮ ಎಂಬುದನ್ನು ಅಧಿಕೃತಗೊಳಿಸಿ ಎಂದು ಹೋರಾಡಲಾಗುತ್ತಿದೆಯೇ ಹೊರತು ಬೇರೇನೂ ಅಲ್ಲ. ಈ ಹಿಂದೆಯೂ ಈ ಬಗ್ಗೆ ಹೋರಾಟಗಳು ಮತ್ತು ಪ್ರಯತ್ನಗಳು ನಡೆದಿವೆ. ಈ ಶತಮಾನದಲ್ಲಿ ಒಂದಷ್ಟು ತೀವ್ರತೆ ಪಡೆದುಕೊಂಡಿದೆಯಷ್ಟೇ. ಹಿಂದೆಂದೂ ಇರಲಾರದಷ್ಟು ಸಂಘಟನೆ ಈಗ ಕಾಣುತ್ತಿದೆ. ಧಾರ್ಮಿಕರು ಇದರ ಮುಂದಾಳುತನವನ್ನು ವಹಿಸಿಕೊಳ್ಳುವುದಕ್ಕಿಂತ ಜನರೇ ಮುಂದೆ ಬಂದು, ಅವರೇ ಮುಂದಡಿ ಇಡುತ್ತಿದ್ದಾರೆ. ಇದು ಜನಾಂದೋಲನವಾಗಿ ಮಾರ್ಪಟ್ಟಿದೆ.

ಮೂಲಭೂತವಾದಿಗಳ ಬೆದರಿಕೆ ಇರುವುದರಿಂದ ಕೆಲ ಮಠಾಧೀಶರು ಮುಂದೆಬರಲು ಅಂಜುತ್ತಿರಬಹುದು. ಇದು ಪಕ್ಷಾತೀತ ಹೋರಾಟ. ಅದರಲ್ಲೂ ಸೈದ್ಧಾಂತಿಕವಾದ ಹೋರಾಟ. ಈ ಹಿಂದೆ ಲಿಂಗಾಯತರು ಎಂದೂ ಸೈದ್ಧಾಂತಿಕ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಸಂದರ್ಭದಲ್ಲಿ ಅದು ತಾರ್ಕಿಕವಾದ ಕೊನೆಯನ್ನು ಕಾಣಲೇಬೇಕು. ಎಲ್ಲ ಪಕ್ಷಗಳು ಈ ಸೈದ್ಧಾಂತಿಕ ಹೋರಾಟಕ್ಕೆ ಬೆಂಬಲ ನೀಡಬೇಕು. ಬಸವಪ್ರಣೀತ ಧರ್ಮದ ಆಶಯಗಳನ್ನು ಸರ್ವಪಕ್ಷಗಳು ಅರ್ಥಮಾಡಿಕೊಂಡಿವೆ ಎಂಬ ಭಾವನೆ ಸ್ಪಷ್ಟವಾಗುತ್ತದೆ. ಬಸವಾದಿ ಶರಣರು ಪ್ರತಿಪಾದಿಸಿದ ಸಿದ್ಧಾಂತಗಳು ಜಾಗತಿಕ ಮಟ್ಟದ್ದಾಗಿವೆ. ಯಾರು ಬೇಕಾದರೂ ಅವನ್ನು ಒಪ್ಪಿಕೊಳ್ಳುವಂತಿವೆ. ಪಕ್ಷವೊಂದರ ಕೆಲ ಮುಖಂಡರು ಬೆಂಬಲಿಸಿದ ಮಾತ್ರಕ್ಕೆ ಆ ಪಕ್ಷಕ್ಕೆ ಮಾತ್ರ ಸೀಮಿತ ಎಂದು ತಿಳಿಯಬಾರದು. ಸರ್ವಪಕ್ಷಗಳ ಅನುಯಾಯಿಗಳು ಈ ಹೋರಾಟದಲ್ಲಿ ಇದ್ದಾರೆ ಮತ್ತು ಇರಲೇಬೇಕು. ಇದರಿಂದ ದೂರ ಇರುವವರು ಸಹ ಬೆಂಬಲಿಸಿದರೆ ಇದು ಪಕ್ಷಾತೀತ ಹೋರಾಟ ಆಗುವುದರಲ್ಲಿ ಸಂದೇಹವಿಲ್ಲ. ಅಂಥ ಅವಕಾಶದಿಂದ ವಂಚಿತರಾಗಬಾರದೆಂಬುದು ನಮ್ಮ ಆಶಯ.

ಒಡೆಯುವ ಪ್ರಶ್ನೆಯೇ ಇಲ್ಲ: ಎರಡು ಬಾರಿ ತಿರಸ್ಕೃತ ಆಗಿರುವುದರಿಂದ ಈ ಸಾರಿ ಒಂದಷ್ಟು ಸ್ಪಷ್ಟತೆಯೊಂದಿಗೆ, ಮೂಲ ದಾಖಲೆಯೊಂದಿಗೆ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಒಂದು ಪಕ್ಷ ಸುಪ್ರೀಂ ಕೋರ್ಟ್‌ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನವನ್ನು ನೀಡಿದರೆ ಆಗಲೂ ಕೆಲವರು ಬಸವಣ್ಣನವರ ಸಮಗ್ರತೆಯನ್ನು ಮತ್ತು ವಚನಗಳ ಆಶಯಗಳನ್ನು ಒಪ್ಪಿಕೊಂಡು ಇದೇ ಬ್ಯಾನರ್ ಅಡಿಯಲ್ಲಿ ಕೂಡಲು ಬರುತ್ತದೆ. ಬಸವ ತತ್ವವು ಒಗ್ಗೂಡಿಸುವ ತತ್ವ ಆಗಿರುತ್ತದೆ. ಕೆಲವರಿಗೆ ವೇದಾಗಮಗಳು ಮುಖ್ಯವಾದರೆ, ಲಿಂಗಾಯತರಿಗೆ ವಚನಗಳು ಮುಖ್ಯ ಆಗುತ್ತವೆ. ತಮಗೆ ಬೇಕಾದ ಧರ್ಮವನ್ನು ಅನುಸರಿಸಲು ಸರ್ವರಿಗೂ ಅವಕಾಶ ಇದೆ. ಗುರು-ವಿರಕ್ತರು ಮೊದಲಿನಿಂದಲೂ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತ ಬಂದಿದ್ದಾರೆ. ಇತರೆ ಧರ್ಮಗಳಲ್ಲಿ ಅಂದರೆ ಮುಸ್ಲಿಂ ಧರ್ಮದಲ್ಲಿ ಷಿಯಾ- ಸುನ್ನಿ, ಬೌದ್ಧ ಧರ್ಮದಲ್ಲಿ ಹೀನಾಯಾನ ಮತ್ತು ಮಹಾಯಾನ, ಜೈನ ಧರ್ಮದಲ್ಲಿ ಶ್ವೇತಾಂಬರ ಮತ್ತು ದಿಗಂಬರ, ಕ್ರೈಸ್ತ ಧರ್ಮದಲ್ಲಿ ಕ್ಯಾಥಲಿಕ್ ಮತ್ತು ಪ್ರೊಟೆಸ್ಟೆಂಟ್ ಪ್ರಭೇದ ಇರುವಂತೆ ನಮ್ಮಲ್ಲಿಯೂ ವೀರಶೈವ ಮತ್ತು ಲಿಂಗಾಯತ ಎಂಬ ಭೇದ ಇದೆ. ಉಗ್ರವಾದಿಗಳು ಮತ್ತು ಸೌಮ್ಯವಾದಿಗಳು, ಸಂಪ್ರದಾಯವಾದಿಗಳು ಮತ್ತು ವಿಚಾರವಾದಿಗಳು(ಪ್ರಗತಿಪರ) ಇದ್ದಾರೆ. ಅದರಂತೆ ಆಸ್ತಿಕರು-ನಾಸ್ತಿಕರು. ತಮ್ಮ ನಿಲುವನ್ನು ಒಪ್ಪದವರು ಉಳಿಯಬಾರದೆಂಬುದು ತುಂಬ ಅಮಾನವೀಯವಾದುದು. ಬಸವತತ್ವ– ಲಿಂಗಾಯತತ್ವ. ಅದು ಪ್ರಗತಿಪರವಾದುದು, ವೈಚಾರಿಕವಾದುದು. ಸಮಗ್ರತೆಯನ್ನು ಒಳಗೊಂಡಿರುವುದು. ಎಲ್ಲ ಧರ್ಮಗಳೂ ಬೆಳೆಯಬೇಕು.

ಗುರು ಪರಂಪರೆಯಲ್ಲಿ ವೇದಾಗಮಗಳೇ ಮುಖ್ಯವಾದರೆ ಅವರು ಅವನ್ನು ಅನುಸರಿಸುತ್ತ ಹೋಗಲಿ. ಆದರೆ ವಿರಕ್ತ ಪರಂಪರೆಯವರಿಗೆಲ್ಲ ಬಸವಣ್ಣ, ಅಲ್ಲಮಾದಿ ಶರಣರೇ ಆದರ್ಶ. ಅವರು ಆ ತತ್ವ- ಸಿದ್ಧಾಂತವನ್ನು ಒಪ್ಪಿಕೊಂಡು, ಆಚರಿಸಿಕೊಂಡು ಹೋಗಬೇಕಾಗುತ್ತದೆ. ವಿರಕ್ತ ಮಠಗಳ ಕೊಡುಗೆ ಅಪಾರ. ನಾಡಿನಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಸರ್ವ ಜನಾಂಗದವರಲ್ಲಿ ಅಕ್ಷರ ಸಂಸ್ಕೃತಿ ಮೂಡಿಸಿದ ಮಹಾನ್ ಸಾಹಸ ಅವುಗಳದು. ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಪ್ರಸಾದ ನಿಲಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಸೈದ್ಧಾಂತಿಕ ಸ್ಪಷ್ಟತೆಯಲ್ಲೂ ಅವರು ಮುಂದಿರಬೇಕು ಎಂಬುದು ನನ್ನ ವಿನಂತಿ. ಕೆಲವರು ಅಂತರಂಗದಲ್ಲಿ (ಪೂಜಾದಿಗಳಿಗೆ) ವೈದಿಕ ಮಂತ್ರಗಳನ್ನು ಹೇಳುತ್ತ, ಬಹಿರಂಗದಲ್ಲಿ ಬಸವಾದಿ ಶರಣರ ವಚನಗಳ ಮುಖಾಂತರ ಉಪದೇಶಿಸುತ್ತಾರೆ. ಇವರ ದೃಷ್ಟಿಯಲ್ಲಿ ವಚನಗಳು ಜನರಿಗೆ ಉಪದೇಶ ಮಾಡಲು ಮಾತ್ರ ಇವೆ. ಶರಣ ಪರಂಪರೆಯ ಅಥವಾ ಬಸವ ಪರಂಪರೆಯ ಮಠಾಧೀಶರು ಯಾಕೆ ವಂಚನೆಗೆ ಒಳಗಾಗಬೇಕು? ಒಳಗೂ-ಹೊರಗೂ ಒಂದೇ ಇರಬೇಕು. ಪೂಜೆ- ಪುನಸ್ಕಾರದಲ್ಲಿಯೂ ವಚನಗಳು ಬರಲಿ. ಜನರನ್ನು ಉದ್ದೇಶಿಸಿ ಮಾತನಾಡುವಾಗಲೂ ವಚನಗಳು ಉದಾಹರಣೆಗೊಳ್ಳಲಿ. ಆಚಾರ್ಯ ಪರಂಪರೆಯವರು ವಂಚನೆಗೆ ಒಳಗಾಗುತ್ತಿಲ್ಲ. ವಿರಕ್ತ ಅಥವಾ ಶರಣ ಪರಂಪರೆಯವರು ವಂಚನೆಗೆ ಒಳಗಾಗುತ್ತಿದ್ದಾರೆ. ಒಳಗೊಂದು ಧರ್ಮ, ಹೊರಗೊಂದು ಧರ್ಮ ಸರಿಯೆ? ಈ ಮುಖಾಂತರ ಶರಣ ತತ್ವ ಸಂಘಟನೆ ಮತ್ತು ಬಸವ ತತ್ವ ಪರಿಪಾಲಕರಾದ ವಿರಕ್ತ ಮಠಾಧೀಶರು ಅವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು. ಅಕ್ಕ ತನ್ನ ವಚನದಲ್ಲಿ- `ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಬಹುದೆ?’ ಎಂದು ಪ್ರಶ್ನಿಸುತ್ತಾಳೆ. ಅವು ಹೊರಗೆ ನೋಡಲು ಒಂದೇ ಆಗಿರುತ್ತವೆ. ಆದರೆ ಒಳಗಿನ ರುಚಿ ಮಾತ್ರ ಬೇರೆ. ಈ ಮೂಲಕ ವಿರಕ್ತ ಮಠಾಧೀಶರು ಒಂದು ಸ್ಪಷ್ಟತೆಯನ್ನು ಕಂಡುಕೊಳ್ಳಬೇಕಾಗಿದೆ.

ದ್ವಂದ್ವ ಅನೇಕರನ್ನು ಕಾಡುತ್ತದೆ. ದ್ವಂದ್ವವು ಎಡಬಿಡಂಗಿ ಸ್ಥಿತಿಗೆ ತಳ್ಳುತ್ತದೆ. ಮಠಾಧೀಶರಾಗಿದ್ದುಕೊಂಡು ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿದ್ದರೆ ಸಮಾಜಕ್ಕೆ ಯಾವ ಸಂದೇಶ ನೀಡಲು ಸಾಧ್ಯ? ನನ್ನ ದಷ್ಟಿಯಲ್ಲಿ ಇದು ಸಂಕ್ರಮಣ ಕಾಲ. ಹಳೆಯದನ್ನು ಪರಾಮರ್ಶಿಸುವ ಮತ್ತು ಹೊಸತನ್ನು ಒಪ್ಪಿಕೊಳ್ಳುವ(ಸ್ವೀಕರಿಸುವ) ಕಾಲ.

ಬಸವಾದಿ ಶರಣರು ಸ್ಥಾಪಿಸಿದ ಪೀಠವೆಂಬ ಹೆಗ್ಗಳಿಕೆಗೆ ಒಳಗಾಗಿರುವ ಶೂನ್ಯಪೀಠ ಮಠ ಅರ್ಥಾತ್ ಚಿತ್ರದುರ್ಗದ ಶ್ರೀ ಮುರುಘಾ ಮಠದಲ್ಲಿ 25-30ವರ್ಷಗಳ ಹಿಂದೆಯೇ ವಚನಾಭಿಷೇಕ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಜನನದಿಂದ ಹಿಡಿದು ಮರಣದವರೆಗಿನ ಎಲ್ಲ ಸಂಸ್ಕಾರಗಳನ್ನು ವಚನಗಳ ಮೂಲಕವಾಗಿಯೇ ನಿರ್ವಹಿಸಲಾಗುತ್ತಿದೆ. ಹಾಗೆಂದು ಮಠಕ್ಕೆ ಬರುವ ಭಕ್ತರ ಸಂಖ್ಯೆಯೇನು ಕಡಿಮೆ ಆಗಿಲ್ಲ. ಅಂದು ಸೀಮಿತವಾಗಿದ್ದ ಸಂಖ್ಯೆಯು ಇಂದು ಬೃಹತ್ತಾಗಿ ಬೆಳೆಯುತ್ತ ನಡೆದಿದೆ. ಮಾತ್ರವಲ್ಲ, ಇತರ ಧರ್ಮೀಯರೂ ದಿನವೂ ಶ್ರೀಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ. ಶ್ರೀಮಠಕ್ಕೆ ಬರುವ ಕಾಣಿಕೆ ನಾಲ್ಕು ಪಟ್ಟು ಅಧಿಕವಾಗಿದೆ. ವಚನಗಳು ಮತ್ತು ಬಸವಾದಿ ಶರಣರನ್ನು ಅನುಸರಿಸುವುದರಿಂದ ಭಕ್ತರ ಸಂಖ್ಯೆ ಕಡಿಮೆ ಆಗುತ್ತದೆ, ಅವರು ಕೊಡುವ ಕಾಣಿಕೆಯು ಕಡಿಮೆ ಆಗುತ್ತದೆಂಬ ಅಳುಕು ಕೆಲವರಲ್ಲಿ ಇದ್ದಂತೆ ಕಾಣುತ್ತದೆ. ಉತ್ತಮ ಕಾರ್ಯಗಳನ್ನು ನೆರವೇರಿಸುತ್ತ ಹೋದರೆ, ಭಕ್ತರು ಅವನ್ನು ಗಮನಿಸುತ್ತಾರೆ, ನೀಡುತ್ತಾರೆ. ತಾನು ನೀಡುವ ಕಾಣಿಕೆಯು ಸತ್ಪಾತ್ರಕ್ಕೆ ಸಲ್ಲುತ್ತದೆಂಬ ಭರವಸೆ ಬಂದರೆ ಜನರು ನೀಡಲು ಮುಂದೆ ಬರುತ್ತಾರೆ. ಈ ಬಗ್ಗೆ ಯಾರೂ ಅಂಜಿಕೆ ಇಟ್ಟುಕೊಳ್ಳಬಾರದು.

ಅಂಥ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದಲ್ಲಿ ಚರ್ಚಿಸಬಹುದು. ಬಹುದೇವತಾ ಆರಾಧನೆಯಿಂದ ಏಕದೇವತಾ ಆರಾಧನೆಗೆ ಒಳಗಾಗಬಹುದು. ಯಾವುದೇ ಸಮಸ್ಯೆ ಇದ್ದಾಗಲೂ ಪರಸ್ಪರರು ಸಂಪರ್ಕಿಸಿ, ಕುಳಿತು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಬಹುದು. ದೊಡ್ಡ ಮಠಾಧೀಶರಿಗೆ ಸಮಸ್ಯೆ ಇರುವುದಿಲ್ಲ; ಸಣ್ಣಪುಟ್ಟ ಮಠಗಳ ಸ್ವಾಮಿಗಳಿಗೆ ಸಮಸ್ಯೆಗಳು ಇರುತ್ತವೆಂದು ಕೆಲವರು ಭಾವಿಸುತ್ತಾರೆ. ಅಂಥವರ ಆರ್ಥಿಕ ಅಡಚಣೆಯನ್ನು ಶರಣರು ನಿವಾರಿಸುತ್ತಾರಾ? ಎಂದು ಕೆಲವರು ಅಂದುಕೊಳ್ಳಬಹುದು. ಹಣವು ಬರುತ್ತದೆ–ಹೋಗುತ್ತದೆ. ಆದರೆ ಆದರ್ಶ? ಒಂದುಸಾರಿ ಬಂದರೆ ಅದು ಕೊನೆಯವರೆಗೂ ಉಳಿಯುತ್ತದೆ. ಈ ಕಾರಣಕ್ಕಾಗಿ ಆರ್ಥಿಕ ಲೆಕ್ಕಾಚಾರಕ್ಕಿಂತ ಒಂದು ಮಠ-ಪೀಠವು ತತ್ವಾದರ್ಶಗಳಿಗೆ ಎಷ್ಟು ಹತ್ತಿರ ಆಗಿದೆ ಎಂಬುದು ಬಹಳ ಮುಖ್ಯ. ಆದರ್ಶದ ಅನುಸರಣೆಯಲ್ಲಿ ಸಿಗುವ ಸಂತೃಪ್ತಿಯು ಭೌತಿಕ ಅಥವಾ ಆರ್ಥಿಕ ಸಂಪತ್ತಿನ ಸಂಗ್ರಹದಿಂದ ಸಿಗಲಾರದು. ಬನ್ನಿ, ನಾವೆಲ್ಲ ಕೂಡಿಕೊಂಡು ಬಸವಾದಿ ಶರಣರು ಕಂಡಂತಹ ಮಾದರಿಯಲ್ಲಿ ಬಲಿಷ್ಠ ರಾಷ್ಟ್ರವನ್ನು ಕಟ್ಟೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT