6

ಉಳಿತಾಯ ಖಾತೆ ಬಡ್ಡಿ ಇಳಿಕೆ ಬದಲಾವಣೆಗೆ ನಾಂದಿಯೇ?

Published:
Updated:
ಉಳಿತಾಯ ಖಾತೆ ಬಡ್ಡಿ ಇಳಿಕೆ ಬದಲಾವಣೆಗೆ ನಾಂದಿಯೇ?

ಉಳಿತಾಯ ಖಾತೆಯ ಬಡ್ಡಿ ದರ ಇಳಿಸುವ ಸರ್ಕಾರಿ ಸ್ವಾಮ್ಯದ ಮತ್ತು ದೇಶದ ಅತಿದೊಡ್ಡದಾದ ಸ್ಟೇಟ್‌ಬ್ಯಾಂಕ್‌ ಅಫ್‌ ಇಂಡಿಯಾದ (ಎಸ್‌ಬಿಐ) ಕ್ರಮವನ್ನು, ಅದರ ಪರಿಣಾಮಗಳ ಬಗ್ಗೆ ಚಿಂತಿಸದ ಕೆಲವು ಆರ್ಥಿಕ ತಜ್ಞರು ಟೀಕಿಸಿದ್ದಾರೆ. ‘ಎಸ್‌ಬಿಐನ ಈ ನಡೆ ಅಸಾಂಪ್ರದಾಯಿಕ ಮಾತ್ರವಲ್ಲ, ಉಳ್ಳವರಿಗೆ ಹಣ ಕೊಡುವ ಸಲುವಾಗಿ ಬಡವರನ್ನು ಲೂಟಿ ಮಾಡುವಂಥದ್ದು’ ಎಂದು ಅವರು ವಿಶ್ಲೇಷಿಸಿದ್ದಾರೆ.

ಬಡ್ಡಿ ಇಳಿಕೆಯಿಂದ ಉಳಿತಾಯ ಖಾತೆದಾರರಿಗೆ ನಿಜವಾಗಿಯೂ ನಷ್ಟವಾಗಿದೆಯೇ? ಕಾರ್ಪೊರೇಟ್‌ ಸಂಸ್ಥೆಗಳಿಗೆ ಸಾಲ ನೀಡುವಾಗ ಎಸ್‌ಬಿಐ ತನ್ನ ಠೇವಣಿದಾರರ ವಿರುದ್ಧ ಕಠೋರವಾಗಿ ನಡೆದುಕೊಂಡಿದೆಯೇ? ಸತ್ಯ ಏನು ಎಂದು ಅರ್ಥಮಾಡಿಕೊಂಡು ಒಂದು ತೀರ್ಮಾನಕ್ಕೆ ಬರಲು ಅಂಕಿಅಂಶಗಳನ್ನು ಅವಲಂಬಿಸಬೇಕೇ ಹೊರತು ಕಾಲ್ಪನಿಕ ಅಭಿಪ್ರಾಯಗಳನ್ನಲ್ಲ. ಒಂದು ಸಂಸ್ಥೆಯಾಗಿ ಎಸ್‌ಬಿಐ, ಲಕ್ಷಾಂತರ ಜನರಿಗೆ ಉತ್ತರದಾಯಿಯಾಗಿರುತ್ತದೆ ಎಂಬುದನ್ನು ಮರೆಯಬಾರದು.

ಬಡ್ಡಿ ಇಳಿಕೆ ಸತತ ಪ್ರಕ್ರಿಯೆ

ಇಳಿಯುತ್ತಿರುವ ಹಣದುಬ್ಬರಕ್ಕೆ ಅನುಗುಣವಾಗಿ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಬಡ್ಡಿ ದರವೂ ಇಳಿಕೆಯಾಗುತ್ತಲೇ ಇದೆ. ಅವಧಿ ಠೇವಣಿಗಳ ಬಡ್ಡಿ ದರವನ್ನು ಬ್ಯಾಂಕ್‌ಗಳು ಇಳಿಸುತ್ತಲೇ ಬಂದಿವೆ. ಉಳಿತಾಯ ಠೇವಣಿಗಳ ಬಡ್ಡಿ ದರ ಕಳೆದ 15 ವರ್ಷಗಳಿಂದ ಶೇ 3.5ರಿಂದ ಶೇ 4ರ ಆಸುಪಾಸಿನಲ್ಲೇ ಇದೆ. ಅಂದರೆ, ಅವಧಿ ಠೇವಣಿ ಹಾಗೂ ಉಳಿತಾಯ ಖಾತೆಗಳ ಬಡ್ಡಿದರಗಳು ಕಡಿಮೆ ಆಗುತ್ತಲೇ ಇವೆ.

ಇಂಥ ಸ್ಥಿತಿಯಲ್ಲೂ ‘ಬಡ್ಡಿದರ ಇಳಿಕೆ ಅಸಾಂಪ್ರದಾಯಿಕ ನಡೆ’ ಎಂದು ಹೇಳಿದರೆ ಅಚ್ಚರಿ ಎನಿಸದೆ ಇರದು. ಎಸ್‌ಬಿಐ ನಡೆ ಖಂಡಿತವಾಗಿಯೂ ದಿಟ್ಟವಾದದ್ದು. ಆದರೆ, ಕೆಲವು ಅಪ್ರಬುದ್ಧ ವಿಮರ್ಶಕರು ವಿಶ್ಲೇಷಿಸಿರುವಂತೆ ಅಸಾಂಪ್ರದಾಯಿಕವಂತೂ ಅಲ್ಲ. ತಮ್ಮ ಪ್ರತಿಸ್ಪರ್ಧಿಗಳು ಮಾಡಿರದಂತಹ ಮತ್ತು ಮಾಡಲಾಗದಂತಹ ದಿಟ್ಟ ನಿರ್ಣಯವನ್ನು ಎಸ್‌ಬಿಐ ತೆಗೆದುಕೊಂಡಿತು. ಆದರೆ, ಇದಾಗುತ್ತಿದ್ದಂತೆ ಪ್ರತಿಸ್ಪರ್ಧಿಗಳಾದ ಬ್ಯಾಂಕ್‌ ಆಫ್‌ ಬರೋಡ, ಎಚ್‌ಡಿಎಫ್‌ಸಿ, ಐಸಿಐಸಿಐ ಮುಂತಾದವೂ ಉಳಿತಾಯ ಖಾತೆ ಬಡ್ಡಿ ದರವನ್ನು ಶೇ 3.5ಕ್ಕೆ ಇಳಿಸುವ ಮೂಲಕ ಎಸ್‌ಬಿಐ ದಾರಿಗೇ ಬಂದವು. ಹಾಗಿದ್ದರೆ ಈ ಎಲ್ಲ ಬ್ಯಾಂಕ್‌ಗಳ ನಿರ್ಧಾರವನ್ನೂ ಅಸಾಂಪ್ರದಾಯಿಕ ಎನ್ನೋಣವೇ? ಬಡ್ಡಿ ಇಳಿಕೆಯಿಂದ ಬಡವರಿಗೆ ಅನ್ಯಾಯವಾಗುತ್ತದೆ ಎನ್ನುವವರಿಗೆ ಬ್ಯಾಂಕ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದೇ ತಿಳಿದಿಲ್ಲ.

ಇತರ ರಾಷ್ಟ್ರಗಳಲ್ಲಿ ಉಳಿತಾಯ ಖಾತೆಗಳಿಗೆ ಇದಕ್ಕಿಂತ ಕಡಿಮೆ ಬಡ್ಡಿ ನೀಡಲಾಗುತ್ತದೆ ಎಂಬುದನ್ನು ವಿಶ್ಲೇಷಕರು ತಿಳಿಯಬೇಕು. ಉದಾಹರಣೆಗೆ ಚೀನಾದಲ್ಲಿ ಶೇ 0.50 ನೀಡಲಾಗುತ್ತದೆ. ನಮಗಿಂತ ಕಡಿಮೆ ಅಭಿವೃದ್ಧಿ ಹೊಂದಿರುವ ನೇಪಾಳ, ವಿಯೆಟ್ನಾಂ, ಜಿಂಬಾಬ್ವೆ ಮುಂತಾದ ರಾಷ್ಟ್ರಗಳಲ್ಲೂ ಉಳಿತಾಯ ಖಾತೆಗೆ ಕನಿಷ್ಠ ಬಡ್ಡಿ ನೀಡಲಾಗುತ್ತದೆ. ಅಭಿವೃದ್ಧಿ ಹೊಂದಿರುವ ಅಮೆರಿಕ, ಬ್ರಿಟನ್‌ ಹಾಗೂ ಜರ್ಮನಿಗಳಲ್ಲಿ ಸುಮಾರು ಶೇ 1ರಷ್ಟು ಬಡ್ಡಿ ಇದ್ದರೆ ಜಪಾನ್‌ನಲ್ಲಿ ಶೇ 0.20 ಬಡ್ಡಿ ನೀಡಲಾಗುತ್ತಿದೆ.

ಈ ಬಡ್ಡಿ ದರ ಆಯಾ ದೇಶದ ಹಣದುಬ್ಬರವನ್ನು ಪ್ರತಿಬಿಂಬಿಸುತ್ತದೆ. ನಮ್ಮಲ್ಲಿ ಆರ್‌ಬಿಐ ಶೇ 4ರ ಹಣದುಬ್ಬರ ಗುರಿ ನಿಗದಿ ಮಾಡಿರುವುದರಿಂದ ಸಹಜವಾಗಿಯೇ ಉಳಿತಾಯ ಖಾತೆಯ ಬಡ್ಡಿದರ ಅದನ್ನು ಪ್ರತಿಬಿಂಬಿಸುತ್ತದೆ ಎಂಬುದು ಸಾಮಾನ್ಯ ಜ್ಞಾನ.

ಬಡವರ ಜೇಬಿಗೆ ಕತ್ತರಿಯೇ?

ಬಡ್ಡಿ ದರ ಇಳಿಕೆ ನಿರ್ಧಾರವು ಬಡವರ ಮೇಲಿನ ಪ್ರಹಾರ ಎಂಬ ವಾದವೂ ಬಲವಾಗಿದೆ. ಈಗಿರುವ ಒಟ್ಟಾರೆ ಠೇವಣಿಗಳಲ್ಲಿ ಉಳಿತಾಯ ಖಾತೆ ಠೇವಣಿಯ ಪ್ರಮಾಣ ಶೇ 20ರಿಂದ 25ರಷ್ಟು ಮಾತ್ರ. ಈ ವಿಶ್ಲೇಷಕರ ವಾದವನ್ನೇ ಒಪ್ಪುವುದಾದರೆ, ಬಡ್ಡಿದರದ ಪರಿಣಾಮ ಆಗುವುದು ನಾಲ್ಕನೆ ಒಂದರಷ್ಟು ಠೇವಣಿಗಳಿಗೆ ಮಾತ್ರ. ಇಂಥ ಸಂದರ್ಭದಲ್ಲಿ ಲಾರ್ಡ್‌ ಜೆ.ಎಂ. ಕೇನ್ಸ್‌ ಅವರ ‘ಲಿಕ್ವಿಡಿಟಿ ಪ್ರಿಫರೆನ್ಸ್‌ ಥಿಯರಿ’ಯನ್ನು ನೆನಪಿಸಿಕೊಳ್ಳುವುದು ತಪ್ಪಾಗದು. ಅದರ ಪ್ರಕಾರ, ‘ಹಣದ ಉದ್ದೇಶ ವಹಿವಾಟು, ಮುಂಜಾಗ್ರತೆ ಅಥವಾ ಊಹಾತ್ಮಕ’.

ಹೂಡಿಕೆದಾರ ಉಳಿತಾಯ ಖಾತೆಯಲ್ಲಿ ಹಣ ಇಡುವುದು ವಹಿವಾಟಿಗಾಗಿ ಅಥವಾ ಮುನ್ನೆಚ್ಚರಿಕೆಯಾಗಿಯೇ ವಿನಾ ಬಡ್ಡಿ ಗಳಿಸಲು ಅಲ್ಲ. ಆದ್ದರಿಂದ ಇದರ ಬಡ್ಡಿಯ ಬಗ್ಗೆ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಒಂದುವೇಳೆ ಈ ಬಡ್ಡಿದರ ಅಷ್ಟೊಂದು ಗಂಭೀರ ವಿಷಯವಾಗಿದ್ದರೆ ಖಾತೆದಾರರು ಶೇ 6ರಷ್ಟು ಬಡ್ಡಿ ಕೊಡುವ ಕೆಲವು ಖಾಸಗಿ ಬ್ಯಾಂಕ್‌ಗಳಲ್ಲೇ ಖಾತೆ ತೆರೆಯುತ್ತಿದ್ದರು.

ಖಾತೆದಾರನೊಬ್ಬ ತನ್ನ ಉಳಿತಾಯ ಖಾತೆಯಲ್ಲಿ ಸರಾಸರಿ ಒಂದು ಲಕ್ಷ ರೂಪಾಯಿ ಠೇವಣಿ ಕಾಪಾಡಿಕೊಂಡಿದ್ದ ಎಂದಿಟ್ಟುಕೊಳ್ಳಿ. ಬಡ್ಡಿ ದರ ಶೇ 4 ರಿಂದ ಶೇ 3.5ಕ್ಕೆ ಇಳಿದಾಗ ಆತ ₹ 4,000ದ ಬದಲು ₹ 3,500 ಬಡ್ಡಿ ಪಡೆಯುತ್ತಾನೆ. ವ್ಯತ್ಯಾಸ ಕೇವಲ ₹ 500. ಅಂದರೆ ಬಡ್ಡಿ ಇಳಿಕೆಯಿಂದ ಬಡವರ ಜೇಬಿಗೆ ಕತ್ತರಿ ಬೀಳುತ್ತದೆ ಎಂಬುದು ಅರ್ಥಹೀನ ವಾದ.

ಬ್ಯಾಂಕ್‌ಗೆ ಲಾಭವಿದೆಯೇ?

ಹೌದು. ಬಡ್ಡಿ ದರ ಇಳಿಕೆಯಿಂದ ಬ್ಯಾಂಕ್‌ಗೆ ಲಾಭವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. 2017ರ ಮಾರ್ಚ್‌ ತಿಂಗಳ ಅಂಕಿ ಅಂಶಗಳ ಪ್ರಕಾರ ಎಸ್‌ಬಿಐನಲ್ಲಿ ₹ 7.60 ಲಕ್ಷ ಕೋಟಿ ಉಳಿತಾಯ ಖಾತೆ ಹಣವಿದೆ. ಶೇ 0.50ರಷ್ಟು ಬಡ್ಡಿ ಇಳಿಕೆಯಿಂದ ಈ ಖಾತೆಗಳ ನಿರ್ವಹಣೆಗೆ ತಗಲುವ ವೆಚ್ಚದಲ್ಲಿ ₹ 3,800 ಕೋಟಿಯಷ್ಟು ಉಳಿತಾಯ ಆಗಲಿದೆ.

ಅಷ್ಟೇ ಅಲ್ಲ, ಈ ಕ್ರಮ ಖಾತೆದಾರರ ಜೇಬಿಗೆ ಕತ್ತರಿ ಹಾಕದೆಯೇ ಒಟ್ಟಾರೆ ಬ್ಯಾಂಕಿಂಗ್‌ ಉದ್ದಿಮೆಗೆ ದೊಡ್ಡ ಮಟ್ಟಿನ ಸಹಾಯ ಮಾಡಲಿದೆ. ಏರುತ್ತಿರುವ ವಸೂಲಾಗದ ಸಾಲ ಹಾಗೂ ಇತರ ಕೆಲವು ಸಮಸ್ಯೆಗಳಿಂದ ಬ್ಯಾಂಕ್‌ಗಳಿಗೆ ದೊಡ್ಡ ಪರಿಹಾರವನ್ನು ಈ ಕ್ರಮ ಕೊಡಲಿದೆ. ಇದರಿಂದ ಬ್ಯಾಂಕ್‌ ಷೇರುದಾರರು ಖಂಡಿತವಾಗಿ ಖುಷಿಯಾಗಿದ್ದಾರೆ.

ಯಾವುದೇ ಹಣಕಾಸು ಸಂಸ್ಥೆಯು ವಾಣಿಜ್ಯ ಮೌಲ್ಯಗಳನ್ನು ಇಟ್ಟುಕೊಂಡೇ ವ್ಯವಹಾರ ನಡೆಸಬೇಕಾಗುತ್ತದೆ. ಈ ದೃಷ್ಟಿಯಿಂದ ಬಡ್ಡಿ ಇಳಿಸುವ ಎಸ್‌ಬಿಐನ ದಿಟ್ಟ ನಿರ್ಧಾರ ಶ್ಲಾಘನೀಯ. ಇದು ದೊಡ್ಡ ಬದಲಾವಣೆಗೆ ನಾಂದಿಯಾಗಬಹುದು.

(ನಿವೃತ್ತ ಬ್ಯಾಂಕ್‌ ನೌಕರ, ಮಣಿಪಾಲ್‌ ಅಕಾಡೆಮಿ ಆಫ್‌ ಬ್ಯಾಂಕಿಂಗ್‌ನ ಉಪನ್ಯಾಸಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry