ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ ಹೊಣೆಗೇಡಿ ನಿರ್ಧಾರ: ರಾಹುಲ್‌ ಗಾಂಧಿ

Last Updated 12 ಸೆಪ್ಟೆಂಬರ್ 2017, 20:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯನ್ನು ತರಾತುರಿಯಲ್ಲಿ ಜಾರಿಗೆ ತರುವಂತಹ ‘ಬೇಜವಾಬ್ದಾರಿ ಮತ್ತು ಅಪಾಯಕಾರಿ’ ಕ್ರಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅರ್ಥ ವ್ಯವಸ್ಥೆಗೆ ‘ಅಪಾರವಾದ ಹಾನಿ’ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಎರಡು ವಾರಗಳ ಅಮೆರಿಕ ಪ್ರವಾಸ ಆರಂಭಿಸಿರುವ ರಾಹುಲ್‌ ಅವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ಸಮಕಾಲೀನ ಭಾರತ ಮತ್ತು ಮುಂದಿನ ಹಾದಿ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ದೇಶದ ಮುಖ್ಯ ಆರ್ಥಿಕ ಸಲಹೆಗಾರ ಅಥವಾ ಸಂಸತ್ತಿನ ಗಮನಕ್ಕೂ ತಾರದೆ ಕಳೆದ ವರ್ಷ ನವೆಂಬರ್‌ 8ರಂದು ನೋಟು ರದ್ದತಿ ನಿರ್ಧಾರ ಕೈಗೊಳ್ಳಲಾಯಿತು. ಇದು ಅರ್ಥ ವ್ಯವಸ್ಥೆಗೆ ಬಹುದೊಡ್ಡ ಹಾನಿ ಮಾಡಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ವಂಶಾಡಳಿತದ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಹುಲ್‌ ಅವರು ‘ಈ ದೇಶ ನಡೆಯುವುದೇ ಹೀಗೆ’ ಎಂದಿದ್ದಾರೆ. ‘ವಂಶಾಡಳಿತ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಇರುವ ಸಮಸ್ಯೆ. ದೇಶ ನಡೆಯುವುದೇ ಹಾಗೆ. ಹಾಗಾಗಿ ಈ ವಿಚಾರದಲ್ಲಿ ನನ್ನ ಬೆನ್ನು ಹತ್ತದಿರಿ’ ಎಂದು ರಾಹುಲ್‌ ಅವರು ಹೇಳಿದರು.

ವಂಶಾಡಳಿತದ ವಿಫಲ ಕುಡಿ ರಾಹುಲ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿದೇಶದಲ್ಲಿ ರಾಹುಲ್‌ ಗಾಂಧಿ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ವಿಷಾದನೀಯ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ವಂಶಾಡಳಿತದ ವಿಫಲ ಪ್ರತಿನಿಧಿ ಎಂದು ರಾಹುಲ್‌ ಅವರನ್ನು ಸ್ಮೃತಿ ಬಣ್ಣಿಸಿದ್ದಾರೆ. ತಮ್ಮ ವಿಫಲ ರಾಜಕೀಯ ಯಾನದ ಬಗ್ಗೆ ಅವರು ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಯಲ್ಲಿ ಮಾತನಾಡಿದ್ದಾರೆ ಎಂದು ಅವರು ಹೇಳಿದರು.

ವಂಶಾಡಳಿತದ ಬಗ್ಗೆ ಕೇಳಲಾದ ಪ್ರಶ್ನೆಗೆ ರಾಹುಲ್‌ ಅವರು ‘ಭಾರತ ಕಾರ್ಯನಿರ್ವಹಿಸುವುದೇ ಹಾಗೆ’ ಎಂಬ ಉತ್ತರ ನೀಡಿದ್ದು ಕೇಳಿ ದಿಗಿಲಾಗಿದೆ ಎಂದು ಸ್ಮೃತಿ ಹೇಳಿದರು.

ಕಾಂಗ್ರೆಸ್‌ ಸಮರ್ಥನೆ: ರಾಹುಲ್‌ ಭಾಷಣಕ್ಕೆ ಬಿಜೆಪಿಯಿಂದ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಮುಖಂಡರು ತಮ್ಮ ಪಕ್ಷದ ಉಪಾಧ್ಯಕ್ಷನನ್ನು ‘ಮುತ್ಸದ್ದಿ’ ಎಂದಿದ್ದಾರೆ.

ತಾವು ಪ್ರಧಾನಿಯಾಗುವವರೆಗೆ ಭಾರತ ಭ್ರಷ್ಟ ದೇಶವಾಗಿತ್ತು ಎಂದು ವಿದೇಶಗಳಲ್ಲಿ ಹೇಳಿಕೆ ನೀಡಿದವರು ಮೋದಿ. ‘ಭಾರತ ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದಿರುವ ದೇಶ ಎಂದೇ ಗುರುತಿಸಲಾಗುತ್ತದೆ’ ಎಂದು ಟೊರಾಂಟೊದಲ್ಲಿ ಮೋದಿ ಹೇಳಿದ್ದರು ಎಂಬುದನ್ನು ಆನಂದ್‌ ಶರ್ಮಾ ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT