ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯಶ್ರೀಗೆ ಸಬ್‌ ಜೂನಿಯರ್‌ ಪ್ರಶಸ್ತಿ

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ರೋಚಕ ಹೋರಾಟ
Last Updated 12 ಸೆಪ್ಟೆಂಬರ್ 2017, 20:23 IST
ಅಕ್ಷರ ಗಾತ್ರ

ಧಾರವಾಡ: ಆರಂಭದ ಮೊದಲ ಮೂರು ಸೆಟ್‌ಗಳಲ್ಲಿ ಹಿನ್ನಡೆಯಲ್ಲಿದ್ದ ತಮಿಳುನಾಡಿನ ನಿತ್ಯಶ್ರೀ ಮಣಿ ಇನ್ನೇನು ಸೋಲು ಖಚಿತವೆಂದುಕೊಂಡಿದ್ದರು. ಆದರೆ ಕೊನೆಯ ನಾಲ್ಕು ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದ ಅವರು ರಾಷ್ಟ್ರೀಯ (ದಕ್ಷಿಣ ವಲಯ) ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಸಬ್‌ ಜೂನಿಯರ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಧಾರವಾಡ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಏಳು ದಿನ ಟೂರ್ನಿ ನಡೆಯಿತು. ಟೂರ್ನಿಯಲ್ಲಿ ಪ್ರೇಕ್ಷಕರನ್ನು ಹೆಚ್ಚು ಸೆಳೆದ ಪಂದ್ಯ ಇದಾಗಿತ್ತು. ಮಂಗಳವಾರ ನಡೆದ ಫೈನಲ್‌ನಲ್ಲಿ ನಿತ್ಯಶ್ರೀ 4–11, 2–11, 8–11, 12–10, 11–8, 12–10, 15–13ರಲ್ಲಿ ಪಶ್ಚಿಮ ಬಂಗಾಳದ ಮನ್ಮನ್‌ ಕುಂದು ಎದುರು ಗೆಲುವು ಪಡೆದರು.

ಇಂದೋರ್‌ನಲ್ಲಿ ನಡೆದಿದ್ದ ಕೇಂದ್ರ ವಲಯದ ಟೂರ್ನಿಯಲ್ಲಿ ನಿತ್ಯಶ್ರೀ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದರು. ಹಿಂದಿನ ಯಾವ ರಾಷ್ಟ್ರೀಯ ಟೂರ್ನಿಯಲ್ಲಿ ಫೈನಲ್‌ ತಲುಪಿರಲಿಲ್ಲ. ಅವರ ಚೊಚ್ಚಲ ಪ್ರಶಸ್ತಿಯ ಕನಸು ಧಾರವಾಡದಲ್ಲಿ ಈಡೇರಿತು.

‘ಮೊದಲ ಮೂರೂ ಸೆಟ್‌ಗಳಲ್ಲಿ ಹಿನ್ನಡೆಯಲ್ಲಿದ್ದರಿಂದ ಸೋಲು ಖಚಿತ ಅಂದುಕೊಂಡಿದ್ದೆ. ಆದ್ದರಿಂದ ಸೋತರೂ ಚಿಂತೆಯಿಲ್ಲ, ಅಂತಿಮ ಪಾಯಿಂಟ್‌ವರೆಗೂ ಹೋರಾಡಬೇಕು ಎಂದು ನಿರ್ಧರಿಸಿದ್ದೆ. ಎದುರಾಳಿ ಆಟಗಾರ್ತಿ ಪ್ರತಿ ಪಾಯಿಂಟ್‌ ಪಡೆದಾಗಲೂ ಆಕ್ರಮಣಕಾರಿಯಾಗುತ್ತಿದ್ದಳು. ಅದಕ್ಕೆ ರ್‍ಯಾಕೆಟ್‌ ಮೂಲಕವೇ ಉತ್ತರ ನೀಡಿದೆ’ ಎಂದರು.

ಕುತೂಹಲದ ಹೋರಾಟ: ಆರು ಸೆಟ್‌ಗಳು ಮುಗಿದಾಗ ಇಬ್ಬರೂ ತಲಾ ಮೂರು ಸೆಟ್‌ ಜಯಿಸಿದ್ದರು. ಆದ್ದರಿಂದ ಕೊನೆಯ ಸೆಟ್‌ ನಿರ್ಣಾಯಕವಾಗಿತ್ತು.

ಮನ್ಮನ್‌ ಕೊನೆಯ ಸೆಟ್‌ನ ಆರಂಭದಲ್ಲಿ 2–1 ಪಾಯಿಂಟ್ಸ್‌ನಿಂದ ಮುನ್ನಡೆಯಲ್ಲಿದ್ದರು. ನಂತರ 4–4 ಸಮಬಲವಾಯಿತು. ಕೆಲವೇ ನಿಮಿಷಗಳಲ್ಲಿ ಅವರು 8–4ರಲ್ಲಿ ಮುನ್ನಡೆ ಪಡೆದರು. ಆಗ ತಿರುಗೇಟು ನೀಡಿದ ನಿತ್ಯಶ್ರೀ ಸತತ ನಾಲ್ಕು ಪಾಯಿಂಟ್ಸ್ ಗಳಿಸಿ ಸಮಬಲ ಸಾಧಿಸಿದರು. ತಮಿಳುನಾಡಿನ ಆಟಗಾರ್ತಿ ಮತ್ತೆ ಎರಡು ಪಾಯಿಂಟ್ಸ್‌ ಗಳಿಸಿದ್ದರಿಂದ ಪಂದ್ಯ ಗೆಲ್ಲಲು ಒಂದು ಪಾಯಿಂಟ್ಸ್‌ ಮಾತ್ರ ಅಗತ್ಯವಿತ್ತು. ಮರು ಹೋರಾಟ ತೋರಿದ ಮನ್ಮನ್‌ 10–10, 12–12, 13–13 ಪಾಯಿಂಟ್ಸ್‌ನಿಂದ ಸಮಬಲ ಸಾಧಿಸಿದರು. ಕೊನೆಯಲ್ಲಿ ಸತತ ಎರಡು ಪಾಯಿಂಟ್ಸ್ ಗಳಿಸಿದ ನಿತ್ಯಶ್ರೀ ರೋಚಕ ಗೆಲುವು ಪಡೆದು ಭಾವುಕರಾಗಿ ಕಣ್ಣೀರು ಸುರಿಸಿದರು.

ಸಬ್‌ ಜೂನಿಯರ್‌ನ ಬಾಲಕರ ವಿಭಾಗದ ಫೈನಲ್‌ನಲ್ಲಿ ಪಿಎಸ್‌ಪಿಬಿಯ ಎಚ್‌. ಜೆಹೊ 9–11, 11–9, 9–11, 11–9, 9–11, 11–8, 11–4ರಲ್ಲಿ ದೆಹಲಿಯ ಪಾಯಸ್‌ ಜೈನ್‌ ಎದುರು ಗೆಲುವು ಸಾಧಿಸಿದರು.

ಕೆಡೆಟ್‌ ಬಾಲಕರ ಸಿಂಗಲ್ಸ್‌ನಲ್ಲಿ ತಮಿಳುನಾಡಿನ ಎಸ್‌. ಪ್ರಿಯೇಶ್‌ ರಾಜ್‌ 11–4, 9–11, 11–6, 11–2, 11–5ರಲ್ಲಿ ಗೋವಾದ ಎಂ. ಶಾಂತೇಶ್‌ ಮೇಲೂ, ಬಾಲಕಿಯರ ವಿಭಾಗದಲ್ಲಿ ಹರಿಯಾಣದ ಸುಹಾನಾ ಸೈನಿ 11–5, 11–6, 11–1, 11–8ರಲ್ಲಿ ತಮಿಳುನಾಡಿನ ನೇಹಲ್‌ ವೆಂಕಟಸ್ವಾಮಿ ವಿರುದ್ಧವೂ ಗೆಲುವು ಸಾಧಿಸಿ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT