7

ಕಡಿಮೆ ಬೆಲೆಯ ಹೆಡ್‌ಸೆಟ್

ಯು.ಬಿ. ಪವನಜ
Published:
Updated:
ಕಡಿಮೆ ಬೆಲೆಯ ಹೆಡ್‌ಸೆಟ್

ಮೊಬೈಲ್ ಫೋನಿನಲ್ಲಿ ಮಾತನಾಡುವವರು ಕೆಲವೊಮ್ಮೆ ಮಾತನಾಡುತ್ತ ಕೈಯಲ್ಲಿ ಬೇರೆ ಕೆಲಸ ಮಾಡಬೇಕಾಗಿದ್ದರೆ ಇಯರ್‌ಫೋನ್ ಅಥವಾ ಬ್ಲೂಟೂತ್ ಹ್ಯಾಂಡ್ಸ್‌ಫ್ರೀ ಬಳಸುತ್ತಾರೆ. ಈ ಹ್ಯಾಂಡ್ಸ್‌ಫ್ರೀಗಳಲ್ಲಿ ಕೇಬಲ್ ಮೂಲಕ ಜೋಡಣೆಗೊಳ್ಳುವ (ವಯರ್ಡ್) ಮತ್ತು ನಿಸ್ತಂತು (ಬ್ಲೂಟೂತ್ ವಯರ್‌ಲೆಸ್) ಎಂಬ ಎರಡು ನಮೂನೆಗಳಿವೆ. ಈ ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಮತ್ತೆ ಹಲವು ನಮೂನೆಗಳಿವೆ.

ಕೇವಲ ಮಾತನಾಡಲು ಬಳಸುವ ಮೋನೋ ಮತ್ತು ಸಂಗೀತ ಆಲಿಸಲಿಕ್ಕೂ ಬಳಸಬಹುದಾದ ಸ್ಟಿರಿಯೊ ಹೆಡ್‌ಸೆಟ್‌ಗಳು. ಈ ಸ್ಟಿರಿಯೊ ಹೆಡ್‌ಸೆಟ್‌ಗಳಲ್ಲೂ ಹಲವು ನಮೂನೆಗಳಿವೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಝೆಬ್ರೋನಿಕ್ಸ್ ಝೆಡ್‌ಇಬಿ-ಬಿಇ380ಟಿ ಬ್ಲೂಟೂತ್ ಇಯರ್‌ಫೋನ್ (Zebronics ZEB-BE380T Bluetooth Earphone).

ಒಂದಾನೊಂದು ಕಾಲದಲ್ಲಿ ಇದೇ ಅಂಕಣದಲ್ಲಿ ಸ್ಯಾಮ್‌ಸಂಗ್ ಮತ್ತು ಮೋಟೊರೋಲದವರ ವಿಶೇಷ ಬ್ಲೂಟೂತ್ ಹ್ಯಾಂಡ್ಸ್‌ಫ್ರೀಗಳನ್ನು ವಿಮರ್ಶೆ ಮಾಡಲಾಗಿತ್ತು. ಇದೂ ಅದೇ ಮಾದರಿಯದು. ಇದರಲ್ಲಿ ಎರಡು ಅಂಗಗಳಿವೆ. ಮೊದಲನೆಯದು ಬ್ಲೂಟೂತ್ ಮಾಡ್ಯೂಲ್. ಇದರಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಈ ಕಿಂಡಿಗೆ ನೀವು ಯಾವುದೇ ಇಯರ್‌ಫೋನ್ ಜೋಡಿಸಬಹುದು. ಒಂದು ಇಯರ್‌ಫೋನ್ ಅನ್ನು ಅವರೇ ನೀಡಿದ್ದಾರೆ.

ಮೊದಲನೆಯ ಹಾಗೂ ಪ್ರಮುಖ ಅಂಗವಾದ ಬ್ಲೂಟೂತ್ ಮಾಡ್ಯೂಲ್ ಕಡೆ ಗಮನ ಹರಿಸೋಣ. ಇದು ಸುಮಾರು 65 x 20 x 15 ಮಿ.ಮೀ. ಗಾತ್ರದ್ದಾಗಿದ್ದು ತುದಿಗಳಲ್ಲಿ ಸ್ವಲ್ಪ ವೃತ್ತಾಕಾರದಲ್ಲಿದೆ. ಇದರಲ್ಲಿ ಮೂರು ಬಟನ್‌ಗಳಿವೆ. ಮಧ್ಯದ ಬಟನ್ ಹಲವು ಕೆಲಸಗಳನ್ನು ಮಾಡುತ್ತದೆ. ಆನ್/ಆಫ್, ಫೋನ್ ಜೊತೆ ಬಳಸುವಾಗ ಕರೆ ಸ್ವೀಕರಿಸುವುದು ಮತ್ತು ನಿಲ್ಲಿಸುವುದು, ಸಂಗೀತ ಆಲಿಸುವಾಗ ತಾತ್ಕಾಲಿಕವಾಗಿ ನಿಲ್ಲಿಸುವುದು (pause) ಮತ್ತು ಪುನಃ ಪ್ರಾರಂಭಿಸುವುದು, ಇತ್ಯಾದಿ ಕೆಲಸಗಳನ್ನು ಈ ಒಂದೇ ಬಟನ್ ಮಾಡುತ್ತದೆ.

ಈ ಬಟನ್‌ನ ಒಂದು ಬದಿಯಲ್ಲಿ ವಾಲ್ಯೂಮ್ ಹೆಚ್ಚಿಸುವ ಮತ್ತು ಇನ್ನೊಂದು ಬದಿಯಲ್ಲಿ ವಾಲ್ಯೂಮ್ ಕಡಿಮೆ ಮಾಡುವ ಬಟನ್ ಇವೆ. ಈ ಬಟನ್‌ಗಳು ಸಂಗೀತ ಆಲಿಸುವಾಗ ಮುಂದಿನ ಮತ್ತು ಹಿಂದಿನ ಹಾಡುಗಳಿಗೆ ಹೋಗಲೂ ಬಳಕೆಯಾಗುತ್ತವೆ.

ಹಿಂಭಾಗದಲ್ಲಿ ಚಾರ್ಜ್ ಮಾಡಲು ಮೈಕ್ರೊ ಯುಎಸ್‌ಬಿ ಕಿಂಡಿಯಿದೆ. ಯುಎಸ್‌ಬಿ ಕೇಬಲ್ ನೀಡಿದ್ದಾರೆ. ಯಾವುದೇ ಚಾರ್ಜರ್‌ನಿಂದ ಚಾರ್ಜ್ ಮಾಡಬಹುದು. ಒಂದು ತುದಿ ಯಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಅದರ ವಿರುದ್ಧ ಭಾಗದಲ್ಲಿ ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕಲು ಕಿಂಡಿಯಿದೆ. ಈ ಮಾಡ್ಯೂಲ್‌ನ ಒಂದು ಭಾಗದಲ್ಲಿ ಕ್ಲಿಪ್ ಇದೆ. ಇದನ್ನು ಬಳಸಿ ಈ ಮಾಡ್ಯೂಲ್ ಅನ್ನು ನಿಮ್ಮ ಅಂಗಿಗೆ ಜೋಡಿಸಿಕೊಳ್ಳಬಹುದು. ಈ ಸೌಲಭ್ಯ ಅಂಗಿ ಧರಿಸುವ ಗಂಡಸರಿಗೆ ಉಪಯುಕ್ತ. ಮಹಿಳೆಯರೇ ಕ್ಷಮಿಸಿ!

3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮೂಲಕ ಯಾವುದೇ ಇಯರ್‌ಫೋನ್ ಅಥವಾ ಇಯರ್‌ಬಡ್ ಜೋಡಿಸಬಹುದು. ಒಂದು ಇಯರ್‌ಬಡ್ ಅನ್ನು ಅವರೇ ನೀಡಿದ್ದಾರೆ. ಜೊತೆಗೆ 3 ಕುಶನ್‌ಗಳನ್ನೂ ನೀಡಿದ್ದಾರೆ. ಈ ಇಯರ್‌ಬಡ್‌ನ ಗುಣಮಟ್ಟ ಅಷ್ಟಕ್ಕಷ್ಟೆ. ಕಡಿಮೆ ಬೆಲೆಯ ಉತ್ಪನ್ನ ಎಂಬುದನ್ನು ನೆನಪಿಟ್ಟುಕೊಳ್ಳಿ.

ಆದರೆ ಆಶ್ಚರ್ಯದ ಸಂಗತಿಯೆಂದರೆ ಈ ಬ್ಲೂಟೂತ್ ಮಾಡ್ಯೂಲ್‌ನ ಆಡಿಯೊ ಇಂಜಿನ್ ಚೆನ್ನಾಗಿದೆ. ನನ್ನಲ್ಲಿರುವ ಕೆಲವು ಉತ್ತಮ ಇಯರ್‌ಫೋನ್‌ಗಳನ್ನು (ಸೆನ್‌ಹೈಸರ್, ಬೋಸ್) ಜೋಡಿಸಿ ಸಂಗೀತ ಪ್ಲೇ ಮಾಡಿ ನೋಡಿದೆ. ಒಂದು ಮಟ್ಟಿಗೆ ಉತ್ತಮ ಎನ್ನುವಂತಹ ಧ್ವನಿಯ ಪುನರುತ್ಪತ್ತಿ ಆಗುತ್ತಿತ್ತು. ಅಂದರೆ ಈ ಬ್ಲೂಟೂತ್ ಮಾಡ್ಯೂಲ್ ಕೊಂಡುಕೊಂಡು ಸುಮಾರು ₹1000 ಬೆಲೆಯ ಯಾವುದಾದರೂ ಉತ್ತಮ ಇಯರ್‌ಬಡ್ (ಉದಾ -ಕ್ರಿಯೇಟಿವ್ ಇಪಿ630) ಜೋಡಿಸಿ ಉತ್ತಮ ಸಂಗೀತ ಆಸ್ವಾದ ಮಾಡಬಹುದು.

ಆನ್/ಆಫ್ ಬಟನ್‌ ಅನ್ನು 3 ಸೆಕೆಂಡುಗಳಷ್ಟು ಕಾಲ ಒತ್ತಿ ಹಿಡಿದರೆ ಇದು ಆನ್ ಆಗುತ್ತದೆ ಮತ್ತು ಬ್ಲೂಟೂತ್ ಪೇರಿಂಗ್ ಮೋಡ್‌ಗೆ ಹೋಗುತ್ತದೆ. ಅಂದರೆ ಬ್ಲೂಟೂತ್ ಸೌಲಭ್ಯವಿರುವ ಇನ್ನೊಂದು ಸಾಧನದ ಜೊತೆ ಸಂಪರ್ಕಗೊಳ್ಳಲು ಸಿದ್ಧವಾಗಿದೆ ಎಂದು ಅರ್ಥ. ಇದನ್ನು ಮೊಬೈಲ್ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಜೊತೆ ಸಂಪರ್ಕಿಸಿ ಬಳಸಬಹುದು. ಇದರಲ್ಲಿ A2DP ಮತ್ತು AVRCP ಸೌಲಭ್ಯಗಳಿವೆ. ಅಂದರೆ ಇದು ಬ್ಲೂಟೂತ್ ವಿಧಾನದಲ್ಲಿ ಸಂಪರ್ಕಗೊಂಡಾಗ ಸ್ಟಿರಿಯೊ ವಿಧಾನದಲ್ಲಿ ಕೆಲಸ ಮಾಡುತ್ತದೆ ಹಾಗೂ ಸಂಗೀತ ಆಲಿಸುವಾಗ ಹಿಂದಿನ ಮತ್ತು ಮುಂದಿನ ಹಾಡುಗಳಿಗೆ ಲಾಗ ಹಾಕಬಹುದು ಎಂದು ಅರ್ಥ.

ವಾಲ್ಯೂಮ್ ಹೆಚ್ಚಿಸುವ ಬಟನ್‌ ಅನ್ನು ವೇಗವಾಗಿ ಒಮ್ಮೆ ಒತ್ತಿದರೆ ಮುಂದಿನ ಹಾಡಿಗೆ ಹೋಗುತ್ತದೆ. ಅದೇ ರೀತಿ ವಾಲ್ಯೂಮ್ ಕಡಿಮೆ ಮಾಡುವ ಬಟನ್ ಅನ್ನು ಒಮ್ಮೆ ವೇಗವಾಗಿ ಒತ್ತಿದರೆ ಹಿಂದಿನ ಹಾಡಿಗೆ ಹೋಗಬಹುದು.

ಇದರಲ್ಲಿ ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯವಿದೆ. ಅದರಲ್ಲಿ ಎಂಪಿ3 ಫೈಲ್‌ಗಳಿದ್ದಲ್ಲಿ ಇದು ಅವನ್ನು ಪ್ಲೇ ಮಾಡುತ್ತದೆ. ಆದರೆ ಇದರಲ್ಲಿ ಎಲ್‌ಸಿಡಿ ಪರದೆ ಇಲ್ಲದಿರುವ ಕಾರಣ ಯಾವ ಫೋಲ್ಡರಿನ ಯಾವ ಹಾಡು ಪ್ಲೇ ಆಗುತ್ತಿದೆ ಎಂದು ಗೊತ್ತಾಗುವುದಿಲ್ಲ. ಮೆಮೊರಿ ಕಾರ್ಡ್ ಹಾಕಿದರೆ ಇದು ಫೋನ್ ಜೊತೆ ಬ್ಲೂಟೂತ್ ಸಂಪರ್ಕ ಹೊಂದುವುದಿಲ್ಲ.

ಇದನ್ನು ಬ್ಲೂಟೂತ್ ವಿಧಾನದ ಮೂಲಕ ಮೊಬೈಲ್ ಫೋನಿಗೆ ಜೋಡಿಸಿ ಮಾತನಾಡಲು ಬಳಸಬಹುದು ಎಂದು ಪ್ರಾರಂಭದಲ್ಲೇ ಹೇಳಿದ್ದೇನೆ. ಅದುವೇ ಇದರ ಪ್ರಮುಖ ಕೆಲಸ ಕೂಡ. ಹಾಗೆ ಜೋಡಿಸಿದಾಗ ಮಾತನಾಡುವ ಧ್ವನಿಯಲ್ಲಿ ಸ್ಪಷ್ಟತೆ ಪರವಾಗಿಲ್ಲ. ಮೈಕ್ರೊಫೋನ್‌ನ ಸಂವೇದನೆ ಚೆನ್ನಾಗಿದೆ. ಆದರೆ ಒಂದು ತೊಂದರೆ ಕಂಡುಬಂತು ಅದೇನೆಂದರೆ ತುಂಬ ಹೊತ್ತು ಮಾತನಾಡುತ್ತಿದ್ದರೆ ಮಧ್ಯೆ ಮಧ್ಯೆ ಸುಮಾರು 10 ರಿಂದ 30 ಸೆಕೆಂಡು ಕಾಲ ಧ್ವನಿ ಗೊರಗೊರ ಎನ್ನುತ್ತದೆ. ನಂತರ ತನ್ನಿಂದ ತಾನೆ ಸರಿಹೋಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡಬಲ್ಲ ಸಾಧನ ಎನ್ನಬಹುದು.

ಗುಣವೈಶಿಷ್ಟ್ಯಗಳು
ನಮೂನೆ  ಬ್ಲೂಟೂತ್ ಸ್ಟಿರಿಯೊ ಇಯರ್‌ಫೋನ್ ಬ್ಲೂಟೂತ್ ಆವೃತ್ತಿ – 4.2
ಪ್ರೊಫೈಲ್ ಬೆಂಬಲ – A2DP, AVRCP, HSP,  HFP
ಬ್ಲೂಟೂತ್ ವ್ಯಾಪ್ತಿ –10 ಮೀ.
ಬ್ಯಾಟರಿ ಶಕ್ತಿ –140 mAh
ಕಂಪನಾಂಕ ವ್ಯಾಪ್ತಿ –20Hz-20kHz
ಇಂಪೆಡೆನ್ಸ್ –32 W
ಸಂವೇದನೆ (sensitivity)– 102 ಡೆಸಿಬೆಲ್
ಸ್ಪೀಕರ್ ಗಾತ್ರ –10 ಮಿ.ಮೀ.
ಮಾತನಾಡಬಹುದಾದ ಸಮಯ– 6-8 ಗಂಟೆ
ಸಂಗೀತ ಆಲಿಸಬಹುದಾದ ಸಮಯ– 4-6 ಗಂಟೆ
ಮೈಕ್ರೊಫೋನ್ ಸಂವೇದನೆ – 38 ಡೆಸಿಬೆಲ್
ಒಟ್ಟು ತೂಕ – 20 ಗ್ರಾಂ
ಬೆಲೆ – ₹999

*

ವಾರದ ಆಪ್‌– ಆರೋಗ್ಯ ಸಂಗಾತಿ
ಆರೋಗ್ಯ ಸಂಬಂಧಿ ಕಿರುತಂತ್ರಾಂಶಗಳು (ಆ್ಯಪ್) ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬೇಕಾದಷ್ಟಿವೆ. ಆದರೆ ಭಾರತೀಯ ಸಂದರ್ಭಕ್ಕೆ ಸರಿಹೊಂದುವಂಥವು ಕಡಿಮೆ. ಅಂತಹ ಕಿರುತಂತ್ರಾಂಶ ಬೇಕಿದ್ದರೆ ನೀವು ಪ್ಲೇ ಸ್ಟೋರ್‌ನಲ್ಲಿ Health-PIE Digital Nurse ಎಂದು ಹುಡುಕಬೇಕು ಅಥವಾ bit.ly/gadgetloka295 ಜಾಲತಾಣಕ್ಕೆ ಭೇಟಿ ನೀಡಬೇಕು. ಇದು ಅಪ್ಪಟ ಭಾರತೀಯ ಕಿರುತಂತ್ರಾಂಶ. ಇದರಲ್ಲಿ ಕನ್ನಡ ಭಾಷೆಯ ಆಯ್ಕೆಯೂ ಇದೆ. ಇದರಲ್ಲಿ ನಿಮ್ಮ ಎಲ್ಲ ಆರೋಗ್ಯ ಸಂಬಂಧಿ ದಾಖಲೆಗಳನ್ನು ಸಂಗ್ರಹಿಸಿಡಬಹುದು.

ಪ್ರತಿನಿತ್ಯ ಸೇವಿಸಬೇಕಾದ ಔಷಧಿಗಳ ಮಾಹಿತಿಯನ್ನು ಸೇರಿಸಿ ನಿಗದಿತ ಸಮಯಕ್ಕೆ ನಿಮ್ಮನ್ನು ಔಷಧಿ ಸೇವಿಸಲು ಎಚ್ಚರಿಸುವಂತೆ ಆಯ್ಕೆ ಮಾಡಬಹುದು. ಹಲವು ಕಾಯಿಲೆಗಳ ಲೇಖನಗಳು, ನಿರ್ಮೂಲನಾ ದಾರಿ ಇತ್ಯಾದಿ ಮಾಹಿತಿ ನೀಡುವ ಲೇಖನಗಳೂ ಇದರಲ್ಲಿವೆ. ನಿಮ್ಮ ರಕ್ತದೊತ್ತಡ, ಸಕ್ಕರೆಯ ಪ್ರಮಾಣ, ಹಾಗೂ ಇತರೆ ಪರೀಕ್ಷೆಗಳ ಮಾಹಿತಿಯನ್ನು ಸಂಗ್ರಹಿಸಿಟ್ಟು ಅದನ್ನು ವೈದ್ಯರ ಜೊತೆ ಹಂಚಿಕೊಳ್ಳಬಹುದು.

*
ಗ್ಯಾಜೆಟ್‌ ಸುದ್ದಿ – ಹಳೆ ಫೋನ್‌ಗಳ ಸಂಗ್ರಹಾಲಯ
ಅಂಚೆಚೀಟಿ ಸಂಗ್ರಹಿಸುವವರು ಗೊತ್ತು. ಹಲವು ನಮೂನೆಯ ನಾಣ್ಯ ಸಂಗ್ರಹಿಸುವವರು ಗೊತ್ತು. ಇನ್ನೂ ಏನೇನೋ ಸಂಗ್ರಹಿಸುವ ಹವ್ಯಾಸಿಗಳೂ ಗೊತ್ತು. ಹಾಗಿರುವಾಗ ಫೋನ್ ಸಂಗ್ರಹಿಸುವವರೂ ಬೇಕು ತಾನೆ? ಹೌದು. ಸ್ಲೊವೇಕಿಯಾ ದೇಶದಲ್ಲಿ ಸ್ಟೆಫನ್ ಪೊಲ್ಗರಿ ಎನ್ನುವವರಿಗೆ ಫೋನ್ ಸಂಗ್ರಹಿಸುವ ಹುಚ್ಚು. ಜಗತ್ತಿನ ಸುಮಾರು 1500 ಮಾದರಿಗಳ ಸುಮಾರು 3500 ಫೋನ್‌ಗಳ ಅವರ ಸಂಗ್ರಹದಲ್ಲಿವೆ.

ದೊಡ್ಡ ಇಟ್ಟಿಗೆಯ ಗಾತ್ರದಷ್ಟಿದ್ದ ಪ್ರಾರಂಭದ ಫೋನ್‌ಗಳು, ತುಂಬ ಪ್ರಸಿದ್ಧವಾಗಿದ್ದ ನೋಕಿಯಾ 3310 ಫೋನ್ ಎಲ್ಲ ಅವರ ಸಂಗ್ರಹದಲ್ಲಿವೆ. ಈ ಸಂಗ್ರಹಾಲಯ ಸಾರ್ವಜನಿಕರಿಗೆ ಯಾವಾಗಲೂ ಮುಕ್ತವಲ್ಲ. ಅದನ್ನು ವಾರದಲ್ಲಿ ಒಂದು ದಿನ ಮಾತ್ರ ತೆರೆದಿಡುತ್ತಾರೆ. ಬೇರೆ ದಿನ ನೋಡಬೇಕಿದ್ದರೆ ಅವರಿಗೆ ಮೊದಲೇ ತಿಳಿಸಿ ಅವರು ಒಪ್ಪಿದರೆ ಹೋಗಬಹುದು. ಅಷ್ಟಕ್ಕೂ ಈ ಸಂಗ್ರಹಾಲಯ ನಮ್ಮ ಪಕ್ಕದಲ್ಲಿಲ್ಲ, ಸ್ಲೊವೇಕಿಯಾ ದೇಶದಲ್ಲಿದೆ.

*
ಗ್ಯಾಜೆಟ್‌ ಸಲಹೆ – ಮಲ್ಲಿಕಾರ್ಜುನ ಅವರ ಪ್ರಶ್ನೆ: ನನ್ನಲ್ಲಿ ಜಿಯೊನಿ ಎಸ್ಸಿಕ್ಸ್ ಎಸ್ ಮೊಬೈಲ್ ಇದ್ದು ಇದರಲ್ಲಿ ಕನ್ನಡ ವರ್ಡ್ ಮತ್ತು ಎಕ್ಸೆಲ್ ಕಡತಗಳನ್ನು ಓದಲು ಸಾಧ್ಯವಾಗುತ್ತಿಲ್ಲ ದಯವಿಟ್ಟು ಇದಕ್ಕೆ ಸೂಕ್ತವಾದ ಒಂದು ತ೦ತ್ರಾ೦ಶ ತಿಳಿಸಿ.

ಉ:  ಬಹುಶಃ ನೀವು ವರ್ಡ್ ಮತ್ತು ಎಕ್ಸೆಲ್ ಕಡತಗಳನ್ನು ಕನ್ನಡದಲ್ಲಿ ತಯಾರಿಸುವಾಗ ಯುನಿಕೋಡ್ ಅಲ್ಲದ ನುಡಿ ಅಥವಾ ಬರಹ ಫಾಂಟ್‌ನಲ್ಲಿ ತಯಾರಿಸಿರಬೇಕು. ಕನ್ನಡ ಯುನಿಕೋಡ್‌ನಲ್ಲಿ ತಯಾರಿಸಿದರೆ ಆಂಡ್ರಾಯ್ಡ್‌ ಫೋನಿನಲ್ಲಿ ಮೈಕ್ರೊಸಾಫ್ಟ್ ಆಫೀಸ್ ಆ್ಯಪ್‌ಗಳನ್ನು ಹಾಕಿಕೊಂಡು ಅವುಗಳ ಮೂಲಕ ತೆರೆಯಬಹುದು.

*
ಗ್ಯಾಜೆಟ್‌ ತರ್ಲೆ
ವೈದ್ಯರುಗಳ ಕೈಬರಹ ಓದಲು ಕಷ್ಟ ಎಂಬ ಮಾತು ಪ್ರಚಲಿತವಿದೆ. ಇದರ ಬಗ್ಗೆ ವೈದ್ಯರೊಬ್ಬರನ್ನು ಪ್ರಶ್ನಿಸಿದಾಗ ಅವರ ಉತ್ತರ ಈ ರೀತಿ ಇತ್ತು – ‘ನನ್ನ ಕೈಬರಹ ಕೆಟ್ಟದಾಗಿಲ್ಲ. ನಾನು ನನ್ನದೇ ಫಾಂಟ್ ಬಳಸುತ್ತಿದ್ದೇನೆ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry