5
ಎರಡನೆಯ ಸಿನಿಮಾ

ರಾಮ್–ವಿನೋದ್ ಜೋಡಿಯ ‘ಕ್ರ್ಯಾಕ್’

Published:
Updated:
ರಾಮ್–ವಿನೋದ್ ಜೋಡಿಯ ‘ಕ್ರ್ಯಾಕ್’

ನಿರ್ದೇಶಕ ರಾಮ್‌ ನಾರಾಯಣ್ ಅವರ ನಾಲ್ಕನೆಯ ಸಿನಿಮಾ ‘ಕ್ರ್ಯಾಕ್‌’ ಇಂದು (ಸೆ.15) ತೆರೆಗೆ ಬರುತ್ತಿದೆ. ನಟ ವಿನೋದ್ ಪ್ರಭಾಕರ್ ಹಾಗೂ ರಾಮ್ ನಾರಾಯಣ್ ಜೋಡಿಯ ಎರಡನೆಯ ಸಿನಿಮಾ ಇದು. ಈ ಹಿಂದೆ ಈ ಜೋಡಿ ‘ಟೈಸನ್’ ಎನ್ನುವ ಸಿನಿಮಾ ಮಾಡಿದ್ದರು. ಹೊಸ ಸಿನಿಮಾ ಬಗ್ಗೆ ರಾಮ್ ನಾರಾಯಣ್ ಅವರು ‘ಚಂದನವನ’ದ ಜೊತೆ ಮಾತನಾಡಿದ್ದಾರೆ. ಅಂದಹಾಗೆ, ರಾಮ್‌ ನಾರಾಯಣ್ ಅವರು ಹನ್ನೆರಡು ವರ್ಷಗಳಿಂದ ಕನ್ನಡ ಸಿನಿಮಾ ಉದ್ಯಮದಲ್ಲಿ ಇದ್ದಾರೆ.

* ಹೊಸ ಸಿನಿಮಾದಲ್ಲಿ ಆ್ಯಕ್ಷನ್‌ಗೆ ಹೆಚ್ಚಿನ ಆದ್ಯತೆ ಇದೆಯೇ?

ಸಿನಿಮಾದ ಪೋಸ್ಟರ್‌ ನೋಡಿದಾಗ ನಿಮಗೆ ಇದು ಆ್ಯಕ್ಷನ್ ಸಿನಿಮಾ ಅನಿಸಬಹುದು. ಆದರೆ ಇದು ಅಂತಹ ಸಿನಿಮಾ ಅಲ್ಲ. ಥ್ರಿಲ್ಲರ್ ಸಿನಿಮಾ ಇದು. ಸಿನಿಮಾದಲ್ಲಿ ಒಂದು ತನಿಖೆಗೆ ಪೂರಕವಾಗಿ ಆ್ಯಕ್ಷನ್ ಕೂಡ ಇದೆ. ಹಾಗಾಗಿ ಇದು ಪೂರ್ತಿಯಾಗಿ ಆ್ಯಕ್ಷನ್ ಸಿನಿಮಾ ಅಲ್ಲ. ಇದರಲ್ಲಿ ಸಸ್ಪೆನ್ಸ್ ಕೂಡ ಇದೆ.

* ಈ ರೀತಿಯ ಸಿನಿಮಾ ಮಾಡಬೇಕು ಅಂತ ಅನಿಸಿದ್ದು ಏಕೆ?

ಸಿನಿಮಾ ಈ ರೀತಿಯಲ್ಲೇ ಇರಬೇಕು ಎಂಬ ಉದ್ದೇಶ ಇಟ್ಟುಕೊಂಡು ಕಥೆ ಹೊಸೆಯಲಿಲ್ಲ. ‘ಟೈಸನ್’ ಸಿನಿಮಾ ಜನರಿಗೆ ಇಷ್ಟವಾಗಿತ್ತು. ವಿನೋದ್‌ ಜೊತೆಯಲ್ಲೇ ಇನ್ನೊಂದು ಸಿನಿಮಾ ಮಾಡಬೇಕು ಅನಿಸಿತು. ಯಾವ ಬಗೆಯ ಸಿನಿಮಾ ಮಾಡಿದರೆ ಜನರಿಗೆ ಇಷ್ಟವಾಗಬಹುದು, ವಿನೋದ್‌ಗೆ ಇರುವ ಹೀರೊ ಇಮೇಜ್‌ ಹಾಗೇ ಇಟ್ಟುಕೊಂಡು ಯಾವ ಕಥೆ ಮಾಡಬಹುದು ಎಂದು ಆಲೋಚಿಸಿದಾಗ ಇದು ಹೊಳೆಯಿತು.

ಒಂದು ನಿಗೂಢ ಕೊಲೆ, ಅದರ ತನಿಖೆ ‘ಕ್ರ್ಯಾಕ್‌’ನ ಕಥಾಹಂದರ. ಇದರಲ್ಲಿ ಹೀರೊಗೆ ಒಂದು ವಿಭಿನ್ನ ಕ್ಯಾರೆಕ್ಟರ್ ಇದೆ. ನಿಗೂಢ ಕೊಲೆಯನ್ನು ಕಥಾಹಂದರ ಆಗಿಟ್ಟುಕೊಂಡ ಸಿನಿಮಾಗಳು ಬೇಕಷ್ಟಿವೆ. ಆದರೆ ಅವೆಲ್ಲ ಕ್ಕಿಂತಲೂ ಇದು ಪ್ರತ್ಯೇಕ. ಇದರಲ್ಲಿ ಹೀರೊ ತನಿಖೆಗೆ ಆರಿಸಿಕೊಳ್ಳುವ ಮಾರ್ಗ ತೀರಾ ವಿಭಿನ್ನ. ಒಬ್ಬ ಕ್ರ್ಯಾಕ್‌ ಪೊಲೀಸ್ ಅಧಿಕಾರಿ ಹೇಗೆ ತನಿಖೆ ಮಾಡ ಬಲ್ಲ ಎಂಬುದನ್ನು ಈ ಸಿನಿಮಾ ಮೂಲಕ ತೋರಿಸಲಾಗಿದೆ. ಇದರಲ್ಲಿ ಕಥೆಯನ್ನು ಹೇಳುವ ವಿಧಾನ ತೀರಾ ಭಿನ್ನವಾಗಿದೆ.

*ವಿನೋದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಿರ್ದಿಷ್ಟ ಕಾರಣಗಳು ಇವೆಯಾ?

ಈ ಕಥೆಯನ್ನು ವಿನೋದ್ ಅವರನ್ನೇ ಇಟ್ಟುಕೊಂಡು ಮಾಡಬೇಕು ಎಂಬ ತೀರ್ಮಾನ ಆರಂಭದಲ್ಲಿ ಇರಲಿಲ್ಲ. ಆದರೆ ‘ಟೈಸನ್’ ಸಿನಿಮಾದ ಯಶಸ್ಸನ್ನು ಕಂಡು, ವಿನೋದ್ ಜೊತೆಯಲ್ಲೇ ಸಿನಿಮಾ ಮಾಡಿ ಎಂದು ನಿರ್ಮಾಪಕರು ಹೇಳಿದರು. ‘ನಿಮ್ಮ ಅವರ ಹೊಂದಾಣಿಕೆ ಚೆನ್ನಾಗಿದೆ’ ಎಂದು ಹಲವರು ಹೇಳಿದ್ದರು. ವಿನೋದ್ ಜೊತೆಯಲ್ಲೇ ಸಿನಿಮಾ ಮಾಡಲು ಇದೂ ಒಂದು ಕಾರಣ.

ನಮ್ಮಿಬ್ಬರ ಜೋಡಿ ಒಂದಾಗಬೇಕು ಎಂಬ ಬೇಡಿಕೆ ಅಭಿಮಾನಿಗಳಿಂದಲೂ ಇತ್ತು. ವಿನೋದ್ ಅಭಿಮಾನಿಗಳು ಹಲವೆಡೆ ಈ ಮಾತು ಹೇಳಿದ್ದಾರೆ. ಇಂಥ ಮಾತುಗಳನ್ನು ಮತ್ತೆ ಮತ್ತೆ ಕೇಳಿ, ನಾವಿಬ್ಬರೂ ಮತ್ತೆ ಒಂದಾಗಿ ಏಕೆ ಸಿನಿಮಾ ಮಾಡಬಾರದು ಅಂತ ಅನಿಸಿತು. ಅಭಿಮಾನಿಗಳ ಒತ್ತಾಯ ಕೂಡ ಇದಕ್ಕೆ ಒಂದು ಕಾರಣ. ಅಲ್ಲದೆ, ನಮಗೆ ಸಿಕ್ಕಿದ ನಿರ್ಮಾಪಕರು ವಿನೋದ್–ರಾಮ್‌ ಜೋಡಿ ಒಂದಾಗಿರಬೇಕು ಎಂದೇ ಹೇಳಿದರು. ‘ಟೈಸನ್’ ಸಿನಿಮಾದ ಮೂಲಕ ವಿನೋದ್ ಅವರಿಗೆ ಹೊಸ ಹುಟ್ಟು ಸಿಕ್ಕಿತು. ಹಾಗಾಗಿ ನಮ್ಮಿಬ್ಬರ ಜೋಡಿಯಿಂದ ಜನ ನಿರೀಕ್ಷಿಸುವುದನ್ನು ಕೊಡುವುದು ಕೂಡ ಒಂದು ಸವಾಲು.

* ನಿರ್ದೇಶಕನಾಗಿ ನಿಮ್ಮ ಮುಂದಿನ ಯೋಜನೆ ಏನು?

‘ರಾಜ ಮಾರ್ತಾಂಡ’ ಎಂಬ ಹೆಸರಿನ ಒಂದು ಸಿನಿಮಾ ಮಾಡುವ ಆಲೋಚನೆ ಇದೆ. ಚಿರಂಜೀವಿ ಸರ್ಜಾ ಅವರ ಜೊತೆ ಮಾತನಾಡಿದ್ದೇನೆ. ಈ ಸಿನಿಮಾಕ್ಕಾಗಿ ಅಕ್ಟೋಬರ್‌ ಕೊನೆಯಲ್ಲಿ ಇದರ ಚಿತ್ರೀಕರಣ ಶುರು ಮಾಡುವ ಲೆಕ್ಕಾಚಾರದಲ್ಲಿ ಇದ್ದೇನೆ.

ಯಾವುದೇ ಸ್ವರೂಪದ ಚಿತ್ರವನ್ನು ಜನರ ಮನಸ್ಸನ್ನು ರಂಜಿಸುವಂತೆ ಹೇಳಬಲ್ಲೆ ಎಂಬ ನಂಬಿಕೆ ನನ್ನಲಿ ಬಲವಾಗಿದೆ.

* ನಿಮ್ಮ ಮತ್ತು ವಿನೋದ್‌ ಜೋಡಿಯ ಮುಂದಿನ ಆಲೋಚನೆ ಏನು?

ಸದ್ಯಕ್ಕೆ ಅಂತಹ ಯಾವುದೇ ಯೋಜನೆ ಇಲ್ಲ. ಮೂರನೆಯ ಸಿನಿಮಾಕ್ಕೆ ನಾವು ಹಣ ಹಾಕುತ್ತೇವೆ ಎಂದು ಎರಡು – ಮೂರು ಜನ ನಿರ್ಮಾಪಕರು ಈಗಾಗಲೇ ಹೇಳಿದ್ದಾರೆ. ಆದರೆ ಆ ಬಗ್ಗೆ ಹೆಚ್ಚಿನ ಯೋಚನೆ ಮಾಡಲು ಈವರೆಗೆ ಆಗಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ, ಮೂರನೆಯ ಸಿನಿಮಾವನ್ನು ಇನ್ನಷ್ಟು ಅದ್ಭುತವಾಗಿ ಮಾಡಬೇಕು ಎಂಬ ಆಸೆಯಿದೆ.

* ಕ್ರ್ಯಾಕ್‌  ನಿರ್ಮಾಪಕರು ಈಗಾಗಲೇ ಲಾಭದಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದ್ದೀರಿ. ನಿಮ್ಮನ್ನು ನಂಬಿ ಹಣ ಹೂಡಿದವರಿಗೆ ಹಣವನ್ನು ಮರಳಿ ಗಳಿಸಿ ಕೊಡುವ ವಿಚಾರದಲ್ಲಿ  ಸಿದ್ಧ ಸೂತ್ರಗಳು ಇವೆಯೇ? 

ನಿರ್ಮಾಪಕರಲ್ಲಿ ಅಂಥದ್ದೊಂದು ವಿಶ್ವಾಸ ಹುಟ್ಟಿಸುವುದು ಸುಲಭದ ಕೆಲಸವಲ್ಲ. ಆದರೆ ವಿಭಿನ್ನವಾಗಿ ಕೊಟ್ಟಾಗ ಜನರಿಗೆ ಇಷ್ಟವಾಗುತ್ತದೆ. ನನ್ನದೇ ಆದ ಸೂತ್ರ ಎಂಬುದು ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry