7

ಸ್ವತಂತ್ರ ಚಿಂತನೆಯಿಂದ ಜೀವಕ್ಕೇ ಅಪಾಯ

ರಾಮಚಂದ್ರ ಗುಹಾ
Published:
Updated:
ಸ್ವತಂತ್ರ ಚಿಂತನೆಯಿಂದ ಜೀವಕ್ಕೇ ಅಪಾಯ

ಬೇರೆ ದೇಶಗಳಲ್ಲಿನ ವಿದ್ಯಮಾನ ಮತ್ತು ಬೇರೊಂದು ಕಾಲದಲ್ಲಿ ಪ್ರಕಟವಾದ ಪುಸ್ತಕಗಳು ಇಂದಿನ ಭಾರತಕ್ಕೆ ಎದ್ದು ಕಾಣುವಷ್ಟು ಪ್ರಸ್ತುತ ಎನಿಸಬಹುದು. 1963ರಲ್ಲಿ ಪ್ರಕಟವಾದ ರಿಚರ್ಡ್ ಹಾಫ್‍ಸ್ಟೇಡರ್ ಅವರ ‘ಆ್ಯಂಟಿ ಇಂಟಲೆಕ್ಚುವಲಿಸಂ ಇನ್ ಅಮೆರಿಕನ್ ಲೈಫ್’ ಎಂಬ ಪುಸ್ತಕವನ್ನು ಖಂಡಿತವಾಗಿಯೂ ಈ ವರ್ಗಕ್ಕೆ ಸೇರಿಸಬಹುದು. ಮೂವತ್ತು ವರ್ಷಗಳ ಹಿಂದೆ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದಾಗ ಓದಿದ್ದ ಪುಸ್ತಕವನ್ನು ಇತ್ತೀಚೆಗೆ ಮತ್ತೆ ಓದಿದೆ.

ಸೆನೆಟ್ ಸದಸ್ಯರಾಗಿದ್ದ ಜೋ ಮೆಕಾರ್ಥಿ ಮತ್ತು ಅವರ ಗುಂಪು 1950ರ ದಶಕದಲ್ಲಿ ವಿದ್ವಾಂಸರು ಮತ್ತು ಲೇಖಕರಿಗೆ ನೀಡಿದ್ದ ಕಿರುಕುಳವನ್ನು ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಹಾಫ್‍ಸ್ಟೇಡರ್ ದಿಗಿಲಿನಿಂದ ಗಮನಿಸಿದ್ದರು. ಮೆಕಾರ್ಥಿ ನಿಧನದ ನಂತರ, ಹಾಫ್‍ಸ್ಟೇಡರ್ ಅವರು ಅಮೆರಿಕದ ಇತಿಹಾಸದಲ್ಲಿ ನಡೆದ ಜ್ಞಾನ ವಿರೋಧಿ ಪ್ರಕರಣಗಳ ಜತೆಗೆ, ಮೆಕಾರ್ಥಿ ನಡೆಸಿದ ದ್ವೇಷ ಸಾಧನೆಯನ್ನು ದಾಖಲಿಸಿದರು.

ವಿದ್ವಾಂಸರು ಮತ್ತು ಜ್ಞಾನದ ಬಗ್ಗೆ ಇದ್ದ ಅಸಡ್ಡೆಗೆ ಕ್ರೈಸ್ತ ಧರ್ಮದ ಪರಮನಿಷ್ಠೆ ಹಾಗೂ ಬೈಬಲ್‍ನ ಅಕ್ಷರಶಃ ಅನುಸರಣೆಯೇ ಕಾರಣ ಎಂದು ಹಾಫ್‍ಸ್ಟೇಡರ್ ಗುರುತಿಸುತ್ತಾರೆ. ‘ಸಚಿವರಾಗಿರುವವರೇ ಚಿಂತಕರು ಮತ್ತು ಶೈಕ್ಷಣಿಕ ನಾಯಕರು ಎಂಬ 16ನೇ ಶತಮಾನದ ಧರ್ಮ ಸುಧಾರಣೆ ಕಾಲದ ನಂಬಿಕೆ 18ನೇ ಶತಮಾನದ ಉದ್ದಕ್ಕೂ ದುರ್ಬಲವಾಗುತ್ತಾ ಬಂತು; ಅದರ ಬದಲಿಗೆ ಸಚಿವರು ಕಠೋರ ಧರ್ಮನಿಷ್ಠೆ ಇರುವವರು ಮತ್ತು ಧರ್ಮದ ಪ್ರತಿಪಾದಕರು ಎಂಬ ನಂಬಿಕೆ ಬೆಳೆಯಿತು’ ಎಂದು ಹಾಫ್‍ಸ್ಟೇಡರ್ ಬರೆದಿದ್ದಾರೆ. ‘ಧರ್ಮ ಮತ್ತು ಜ್ಞಾನ ಪರಸ್ಪರ ಶತ್ರುಗಳು’ ಎಂದು ಈ ಧರ್ಮನಿಷ್ಠ ಜನರು ನಂಬಿದ್ದರು. ಧಾರ್ಮಿಕ ಪುನರುಜ್ಜೀವನದ ಕೆಲಸಗಳು ಅಮೆರಿಕದಲ್ಲಿ ವ್ಯಾಪಕವಾಗಿದ್ದುದನ್ನು ಗಮನಿಸಿದ್ದ ಲೇಖಕರೊಬ್ಬರು 1770ರ ದಶಕದಲ್ಲಿ ಹೀಗೆ ಹೇಳಿದ್ದರು: ‘ಬನಿಯನ್‍ನ ಪಿಲಿಗ್ರಿಮ್ಸ್ ಪ್ರೋಗ್ರೆಸ್, ವ್ಯಾಟ್ ಬರೆದ ಧರ್ಮ ಬೋಧನೆಯ ಪ್ರಾಸ ಪದ್ಯಗಳು, ಪ್ರಶ್ನೋತ್ತರ ರೂಪದಲ್ಲಿ ಧರ್ಮವನ್ನು ತಿಳಿಸುವ ಪುಸ್ತಕಗಳನ್ನು ಬಿಟ್ಟರೆ ಈ ವಿಶಾಲ ದೇಶದಲ್ಲಿ ಬೇರೆ ಯಾವ ಪುಸ್ತಕಗಳು ಕಾಣ ಸಿಗವು. ಇತಿಹಾಸದ ಪುಸ್ತಕಗಳನ್ನು ಇರಿಸಿಕೊಳ್ಳುವುದು ಅಥವಾ ಅವುಗಳನ್ನು ಒದುವ ಬಗ್ಗೆಯೂ ಅವರಿಗೆ ಆಸಕ್ತಿ ಇಲ್ಲ... ಈ ಜನರು ಜ್ಞಾನವನ್ನು ತಿರಸ್ಕಾರದಿಂದ ಕಾಣುತ್ತಾರೆ. ವಿದ್ವಾಂಸರನ್ನು-ಅವರು ಕಲೆ, ವಿಜ್ಞಾನ ಅಥವಾ ಭಾಷಾಶಾಸ್ತ್ರ ಯಾವುದರಲ್ಲೇ ಪರಿಣತಿ ಪಡೆದಿರಲಿ ಅವರನ್ನು ಗೌರವಿಸುವ ಬದಲಿಗೆ ತಿರಸ್ಕಾರದಿಂದ ನೋಡುತ್ತಾರೆ ಮತ್ತು ಅವಮಾನಿಸುತ್ತಾರೆ. ಈ ಪ್ರಾಂತ್ಯದ ಮುಖ್ಯಸ್ಥರು ಕೂಡ ಇದೇ ಮನೋಭಾವವನ್ನು ಹೊಂದಿದ್ದಾರೆ’.

(ಈ ವಿವರಣೆ ಈಗಿನ ಹಿಂದುತ್ವ ಸಂಘಟನೆಗಳನ್ನು ನೆನಪಿಗೆ ತರುತ್ತದೆ. ಸಾಕಷ್ಟು ಸಂಶೋಧನೆ ನಡೆಸಿ ಬರೆಯಲಾದ ಇತಿಹಾಸ ಅಥವಾ ಸಮಾಜ ವಿಜ್ಞಾನ ಅಥವಾ ಇಂತಹ ಇತರ ಕೃತಿಗಳನ್ನು ಇವರು ತಿರಸ್ಕರಿಸುತ್ತಾರೆ. ಬದಲಿಗೆ ವಿ.ಡಿ. ಸಾವರ್ಕರ್ ಮತ್ತು ಎಂ.ಎಸ್. ಗೋಳ್ವಾಲ್ಕರ್ ಅವರು ಬರೆದ ಯಾವುದೋ ಕಾಲದ, ಧರ್ಮ ಪ್ರಚಾರದ ಲೇಖನಗಳನ್ನು ಗೌರವಿಸುತ್ತಾರೆ. 18ನೇ ಶತಮಾನದ ಕ್ರೈಸ್ತ ಮೂಲಭೂತವಾದಿಗಳು ಭಾವಿಸಿದ ರೀತಿಯಲ್ಲಿಯೇ 21ನೇ ಶತಮಾನದ ಹಿಂದೂ ಮೂಲಭೂತವಾದಿಗಳು ‘ಧರ್ಮ ಮತ್ತು ಜ್ಞಾನ ಪರಸ್ಪರ ವಿರೋಧಿಸುತ್ತವೆ’ ಎಂದು ಭಾವಿಸಿದ್ದಾರೆ).

19ನೇ ಶತಮಾನದ ಅಮೆರಿಕದಲ್ಲಿಯೂ ಜ್ಞಾನ ವಿರೋಧಿ ಧಾರ್ಮಿಕತೆ ಇನ್ನಷ್ಟು ಗಟ್ಟಿಗೊಂಡಿತು. ಆಗಿನ ಒಬ್ಬ ಪ್ರಭಾವಿ ಬೋಧಕರು ಶೇಕ್ಸ್‌ಪಿಯರ್‌ ಮತ್ತು ಬೈರನ್ ಅವರನ್ನು ‘ಹುಡುಗಾಟಿಕೆ ಸ್ವಭಾವದ ದೈವನಿಂದಕರು’ ಎಂದು ಕರೆದಿದ್ದರು. ದೈವಭಕ್ತಿ ಇಲ್ಲದ ಜ್ಞಾನಕ್ಕಿಂತ ಜ್ಞಾನವಿಲ್ಲದ ದೈವಭಕ್ತಿಯನ್ನೇ ಆರಿಸಿಕೊಳ್ಳುವುದಾಗಿ ಇನ್ನೊಬ್ಬರು ಹೇಳಿದ್ದರು. ಸಾವಿರಾರು ಪದವೀಧರರು ಎಷ್ಟು ವೇಗದಲ್ಲಿ ಸಾಧ್ಯವೋ ಅಷ್ಟು ವೇಗದಲ್ಲಿ ನರಕಕ್ಕೆ ಓಡುತ್ತಿದ್ದಾರೆ ಎಂಬುದು ಅವರು ಅಭಿಪ್ರಾಯವಾಗಿತ್ತು. ‘ನನ್ನಲ್ಲಿ 10 ಲಕ್ಷ ಡಾಲರ್ ಇದ್ದರೆ ಅದರಲ್ಲಿ 9,99,999 ಡಾಲರ್‍ಗಳನ್ನು ಧರ್ಮ ಪ್ರಚಾರಕ್ಕೆ ಮತ್ತು ಒಂದು ಡಾಲರ್ ಅನ್ನು ಶಿಕ್ಷಣಕ್ಕೆ ನೀಡುತ್ತೇನೆ ಎಂದು ಅವರು ಹೇಳಿದ್ದರು.

20ನೇ ಶತಮಾನದ ಮೊದಲ ಭಾಗದಲ್ಲಿ ವಿಳಂಬವಾಗಿಯಾದರೂ ಅಮೆರಿಕದಲ್ಲಿ ವಿದ್ವಾಂಸರು ಮತ್ತು ಜ್ಞಾನದ ಬಗ್ಗೆ ಗೌರವ ಮೂಡಲು ಆರಂಭವಾಯಿತು. ಒಂದೇ ಕುಲನಾಮ ಹೊಂದಿದ್ದ ಇಬ್ಬರು ಅಧ್ಯಕ್ಷರು ರಾಜಕಾರಣ ಮತ್ತು ಸಾರ್ವಜನಿಕ ನೀತಿಗೆ ಜ್ಞಾನವನ್ನು ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರೆಂದರೆ ಥಿಯೋಡಾರ್ ರೂಸ್‍ವೆಲ್ಟ್ ಮತ್ತು ಫ್ರಾಂಕ್ಲಿನ್ ಡಿಲಾನೊ ರೂಸ್‍ವೆಲ್ಟ್. ಥಿಯೋಡಾರ್ ಅವರು ಪ್ರಗತಿಪರ ಚಳವಳಿಯ ಭಾಗವಾಗಿದ್ದರೆ, ಫ್ರಾಂಕ್ಲಿನ್ ಅವರು ‘ನ್ಯೂ ಡೀಲ್’ನ (ಭಾರಿ ಬಡತನದಿಂದ ಕಂಗಾಲಾಗಿದ್ದ ಜನರ ಸ್ಥಿತಿ ಗತಿ ಉತ್ತಮಪಡಿಸುವ ನೀತಿಗಳು) ಪ್ರತಿಪಾದಕರಾಗಿದ್ದರು. ಆದರೆ 1952ರಲ್ಲಿ ಮತ್ತೆ ಚಿತ್ರಣ ಬದಲಾಯಿತು. ಜನರಲ್ ಡ್ವೈಟ್ ಐಸೆನ್‍ಹೋವರ್ ಮತ್ತು ಅಡಲಾಯ್‌ ಸ್ಟೀವನ್‍ಸನ್ ನಡುವಣ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಬೌದ್ಧಿಕತೆ ಮತ್ತು ಧರ್ಮನಿಷ್ಠೆಯ ಬಗ್ಗೆಯೇ ಪರಸ್ಪರರು ಆರೋಪ ಪ್ರತ್ಯಾರೋಪಗಳನ್ನು ನಡೆಸಿದರು. ಐಸೆನ್‍ಹೋವರ್ ಅವರ ಗೆಲುವು ‘ವಿದ್ವಾಂಸರು ಮತ್ತು ಅವರ ಟೀಕಾಕಾರರಿಬ್ಬರಲ್ಲೂ ಅಚ್ಚರಿ ಮೂಡಿಸಿತ್ತು. ಅಮೆರಿಕದ ಜನರು ತಮ್ಮ ಚಿಂತನೆಗಳನ್ನು ನಿರಾಕರಿಸಿದ್ದಾರೆ ಎಂದು ಎರಡೂ ವರ್ಗಗಳು ಭಾವಿಸಿದವು’ ಎಂದು ಹಾಫ್‍ಸ್ಟೇಡರ್ ಬರೆದಿದ್ದಾರೆ. ಸ್ಟೀವನ್‍ಸನ್ ಅವರ ಹೀನಾಯ ಸೋಲು ‘ಅಮೆರಿಕದ ವಿದ್ವಾಂಸರು ಮತ್ತು ವಿದ್ವತ್ತಿನ ನಿರಾಕರಣೆ’ ಎಂದು ಹಲವರು ಭಾವಿಸಿದ್ದರು.

ಐಸೆನ್‍ಹೋವರ್ ಅಧ್ಯಕ್ಷರಾದ ಕೆಲವು ತಿಂಗಳ ಬಳಿಕ ಇತಿಹಾಸಕಾರ ಆರ್ಥರ್ ಷೆಲ್‍ಸಿಂಗರ್ ಅವರು ‘ವಿದ್ವಾಂಸರು ಅಮೆರಿಕದ ಸಮಾಜದಿಂದ ಪಲಾಯನ ಮಾಡುತ್ತಿದ್ದಾರೆ’ ಎಂದು ಬರೆದರು. 1950ರ ದಶಕದಲ್ಲಿ ಬಲಪಂಥೀಯರು ಬೌದ್ಧಿಕತೆ ಬಗ್ಗೆ ಹೊಂದಿದ್ದ ತೀವ್ರವಾದ ಮತ್ತು ವ್ಯಾಪಕವಾದ ಅಸಹಿಷ್ಣುತೆ ವಿದ್ಯಾವಂತ ವರ್ಗ ಮತ್ತು ಗೌರವಾನ್ವಿತವಾದ ಎಲ್ಲದರ ಬಗ್ಗೆಯೂ ಅಸಡ್ಡೆ ಸೃಷ್ಟಿಸಿತು ಎಂದು ಹಾಫ್‍ಸ್ಟೇಡರ್ ಅಭಿಪ್ರಾಯಪಟ್ಟಿದ್ದಾರೆ. ವಿದ್ವಾಂಸರು ‘ಡಾಂಭಿಕರು, ವಂಚಕರು, ಪೌರುಷವಿಲ್ಲದವರು ಮತ್ತು ದೊಡ್ಡಸ್ತಿಕೆಯ ಜನ; ಅವರು ಅನೈತಿಕವಾಗುವ, ಅಪಾಯಕಾರಿಯಾಗುವ ಮತ್ತು ವಿಧ್ವಂಸಕರಾಗುವ ಸಾಧ್ಯತೆ ಹೆಚ್ಚು’ ಎಂದು ಕಟ್ಟಾ ರಿಪಬ್ಲಿಕನ್ನರು ನಂಬಿದ್ದರು. ‘ಹೃದಯ ಹೇಳಿದಂತೆ ಕೇಳುವುದು, ಹಳೆಯ ಧಾರ್ಮಿಕ ಮತ್ತು ನೈತಿಕತೆಯ ತತ್ವಗಳು ಜೀವನಕ್ಕೆ ಹೆಚ್ಚು ಉಪಯುಕ್ತವಾದ ಮಾರ್ಗದರ್ಶಿ ಸೂತ್ರಗಳು. ಆದರೆ, ಶಿಕ್ಷಣವು ಹೊಸ ಪ್ರವೃತ್ತಿಗಳು, ಚಿಂತನೆ ಮತ್ತು ಕಲೆಗೆ ಸ್ಪಂದಿಸುವ ಮನಸ್ಸನ್ನು ಸೃಷ್ಟಿಸುತ್ತದೆ ಎಂಬ ಭಾವನೆಯನ್ನು ಅವರು ಹೊಂದಿದ್ದರು. 

ಅಮೆರಿಕದಲ್ಲಿ ಸೃಷ್ಟಿಯಾದ ಜ್ಞಾನ ವಿರೋಧಿ ನಿಲುವಿಗೆ ಅವರಲ್ಲಿದ್ದ ಪ್ರಾಯೋಗಿಕತೆ ಮತ್ತು ತಾವು ಏನನ್ನಾದರೂ ಮಾಡಬಲ್ಲೆವು ಎಂಬ ವಿಶ್ವಾಸ ಕಾರಣ. ಹಾರ್ವರ್ಡ್ ಮತ್ತು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯಗಳಿಗೆ ಹೋಗಿ ಕಲಿಯದಿದ್ದರೂ ದೊಡ್ಡ ವ್ಯಾಪಾರ ಸಾಮ್ರಾಜ್ಯಗಳನ್ನು ಕಟ್ಟಬಲ್ಲೆವು ಮತ್ತು ಯುದ್ಧಗಳನ್ನು ಗೆಲ್ಲಬಲ್ಲೆವು ಎಂಬುದು ಅವರ ಅನುಭವವಾಗಿತ್ತು. ಅಧ್ಯಕ್ಷ ಐಸೆನ್‍ಹೋವರ್ ಅವರೇ ಜ್ಞಾನವನ್ನು ತಿರಸ್ಕರಿಸುವ ನಿಲುವನ್ನು ಅತ್ಯುತ್ಸಾಹದಿಂದ ಅಪ್ಪಿಕೊಂಡಿದ್ದರು. 1954ರಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಭೆಯಲ್ಲಿ ಅವರು ನೀಡಿದ ಹೇಳಿಕೆ ಹೀಗಿತ್ತು: ‘ವಿದ್ವಾಂಸ ಎಂದರೆ ಏನು ಎಂಬುದಕ್ಕೆ ನಾನು ಇತ್ತೀಚೆಗೆ ಕೇಳಿಸಿಕೊಂಡ ಒಂದು ವ್ಯಾಖ್ಯೆ ಅಸಕ್ತಿದಾಯಕವಾಗಿದೆ: ತನಗೆ ಏನು ಗೊತ್ತಿದೆಯೋ ಅದಕ್ಕಿಂತ ಹೆಚ್ಚಿನದನ್ನು ಹೇಳಲು ಅಗತ್ಯಕ್ಕಿಂತ ಹೆಚ್ಚು ಪದಗಳನ್ನು ಬಳಸುವವನು’.

ಸಮಕಾಲೀನ ಭಾರತದಲ್ಲಿ ಇದಕ್ಕೆ ಸಂವಾದಿಯಾಗಿ ಹಲವು ಅಂಶಗಳು ಎದ್ದು ಕಾಣುತ್ತಿವೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಗೆಲುವು ಹಿಂದುತ್ವವಾದಿ ಚಿಂತನೆಯನ್ನು ಗಟ್ಟಿಗೊಳಿಸಿ ಸ್ವತಂತ್ರ ಚಿಂತನೆಯ ವಿದ್ವಾಂಸರು ಮತ್ತು ಲೇಖಕರ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸುವಂತೆ ಮಾಡಿತು. ಈ ಜನರ ಭಾಷೆ 1950ರ ದಶಕದಲ್ಲಿ ಅಮೆರಿಕದ ರಿಪಬ್ಲಿಕನ್ನರು ಮಾತನಾಡಿದ್ದ ಭಾಷೆಗಿಂತ ಹೆಚ್ಚು ಕಠೋರ; ಆದರೆ ಈ ಎರಡೂ ವರ್ಗಗಳು ಹೊಂದಿರುವ ಲಕ್ಷಣಗಳ ತಿರುಳು ಅಥವಾ ನಿರಾಕರಣೆಯ ದಾಟಿ ಒಂದೇ ಆಗಿದೆ. ‘ಢಾಂಬಿಕರು, ವಂಚಕರು, ಪೌರುಷ ಇಲ್ಲದವರು ಮತ್ತು ದೊಡ್ಡಸ್ತಿಕೆಯ ಜನ’ ಎಂಬುದರ ಬದಲಿಗೆ ಇವರು ’10 ಜನಪಥದ ಬೂಟು ನೆಕ್ಕುವವರು, ಇಟಲಿಯ ಬಾರ್ ಪರಿಚಾರಿಕೆಯ ಹೊಗಳುಭಟರು, ರೋಗಿಷ್ಠರು (libtard, Aaptard, sickular)’ ಎಂದು ಹೇಳುತ್ತಿದ್ದಾರೆ. ಬೌದ್ಧಿಕತೆ ವಿರೋಧಿ ಸಿದ್ಧಾಂತದ ಪ್ರತಿಪಾದಕರು ಅಮೆರಿಕಕ್ಕೆ ಮಾಡಿದ್ದಕ್ಕಿಂತ ಬಹಳ ಹೆಚ್ಚಿನ ಹಾನಿ ಭಾರತಕ್ಕೆ ಆಗುತ್ತಿದೆ ಎಂಬುದು ಹೆಚ್ಚು ಚಿಂತೆಗೆ ಕಾರಣವಾಗುವಂತಹ ವಿಷಯ. ಹಾರ್ವರ್ಡ್ ಮತ್ತು ಪ್ರಿನ್ಸ್‌ಟನ್‍ನಂತಹ ವಿಶ್ವವಿದ್ಯಾಲಯಗಳು ಖಾಸಗಿ ಕ್ಷೇತ್ರದಿಂದ ಹಣ ಪಡೆಯತ್ತವೆ; ಬರ್ಕ್‍ಲಿ ಮತ್ತು ವಿಸ್ಕಾನ್ಸಿನ್‍ನಂತಹ ಸರ್ಕಾರದ ಅಧೀನದಲ್ಲಿರುವ ವಿದ್ಯಾಸಂಸ್ಥೆಗಳು ತಮ್ಮ ವಿದ್ವತ್ತಿನ ಸ್ವಾಯತ್ತೆ ಮತ್ತು ಬದ್ಧತೆಯನ್ನು ಹಟದಿಂದ ಕಾಯ್ದುಕೊಳ್ಳುತ್ತವೆ. ಆದರೆ ಇಲ್ಲಿ, ನಮ್ಮ ಅತ್ಯುತ್ತಮ ಮತ್ತು ಅತ್ಯಂತ ಕೆಟ್ಟ ವಿಶ್ವವಿದ್ಯಾಲಯಗಳು ರಾಜಕೀಯ ನಿಯಂತ್ರಣ ಮತ್ತು ತಿರುಚುವಿಕೆಗೆ ಸುಲಭದಲ್ಲಿ ಪಕ್ಕಾಗುತ್ತವೆ. ಹಾಗಾಗಿಯೇ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭೌತವಿಜ್ಞಾನ, ಜೀವವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ ಅಥವಾ ಅಂತರರಾಷ್ಟ್ರೀಯ ಸಂಬಂಧಗಳನ್ನು ಕಲಿಯುವ ಬದಲಿಗೆ ತಮ್ಮ ದೇಶಭಕ್ತಿಯನ್ನು ಸಾಬೀತು ಮಾಡುವುದಕ್ಕಾಗಿ ರಾಷ್ಟ್ರಧ್ವಜಕ್ಕೆ ಮತ್ತು ಸೇನಾ ಟ್ಯಾಂಕುಗಳಿಗೆ ವಂದಿಸುವಂತೆ ಮಾಡಲಾಗುತ್ತಿದೆ.

ಬಲಪಂಥೀಯರು ಯಾವತ್ತೂ ‘ಸಾಮಾನ್ಯ ಪ್ರಗತಿಪರ ಮತ್ತು ಕ್ರಾಂತಿಕಾರಿಯ ನಡುವಣ ಗೆರೆಯನ್ನು ಮಂಜಾಗಿಸಲು ಬಯಸುತ್ತಾರೆ’ ಎಂದು ಹಾಫ್‍ಸ್ಟೇಡರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇದು ಕೂಡ, ಅಮೆರಿಕದಲ್ಲಿ ಎಷ್ಟು ನಿಜವೋ ಭಾರತದಲ್ಲಿಯೂ ಅಷ್ಟೇ ಸತ್ಯ. ಮಾರ್ಕ್ಸ್‌ವಾದ, ಮಾವೋವಾದ ಮತ್ತು ಸ್ಟಾಲಿನ್‍ವಾದಗಳನ್ನು ಬಹಿರಂಗವಾಗಿ ಟೀಕಿಸಿದ ಉದಾರವಾದಿಗಳಿಗೂ ಕಮ್ಯುನಿಸ್ಟರು ಎಂಬ ಹಣೆಪಟ್ಟಿಯನ್ನು ಹಿಂದುತ್ವ ಸಿದ್ಧಾಂತದ ಪ್ರತಿಪಾದಕರು ಕಟ್ಟುತ್ತಾರೆ. ಬಲಪಂಥೀಯ ತೀವ್ರವಾದವನ್ನು ಇವರು ವಿರೋಧಿಸುತ್ತಾರೆ ಎಂಬುದು ಮಾತ್ರ ಇದಕ್ಕೆ ಕಾರಣ. ಪುಸ್ತಕಗಳು ಅಥವಾ ಲೇಖನಗಳನ್ನಷ್ಟೇ ಬರೆಯುತ್ತಿದ್ದೇವೆ ಎಂದು ಚಿಂತಕರು ಭಾವಿಸಿರುತ್ತಾರೆ. ಆದರೆ ಇವರು ದೇಶವನ್ನೇ ಶಿಥಿಲಗೊಳಿಸುತ್ತಿದ್ದಾರೆ ಎಂದು ಅವರ ಶತ್ರುಗಳಾದ ಬಲಪಂಥೀಯರು ಬಿಂಬಿಸುತ್ತಾರೆ.

‘ಅಮೆರಿಕದಲ್ಲಿ ದ್ವೇಷವನ್ನು ಒಂದು ರೀತಿಯ ಸಿದ್ಧಾಂತವಾಗಿ ಪರಿವರ್ತನೆ ಮಾಡಲಾಗಿತ್ತು. ಬೇರೆ ಆಧುನಿಕ ಸಮಾಜಗಳಲ್ಲಿ ವರ್ಗ ಸಂಘರ್ಷ ಸೃಷ್ಟಿಸಿದ್ದಕ್ಕೆ ಸಮನಾದ ರಾಜಕೀಯ ದ್ವೇಷದ ಸೃಷ್ಟಿ ಅಮೆರಿಕದಲ್ಲಿಯೂ ಆಗಿದೆ. ರಹಸ್ಯಗಳು ಮತ್ತು ಷಡ್ಯಂತ್ರಗಳನ್ನು ನಡೆಸಲಾಗುತ್ತಿದೆ ಎಂಬ ಭ್ರಮೆಯಲ್ಲಿ ಸೃಷ್ಟಿಯಾದ, ಸುಲಭದಲ್ಲಿ ಅರ್ಥವಾಗದ ಮತ್ತು ಸತ್ಯವಲ್ಲದ ದೂರುಗಳು ಮತ್ತು ಹತಾಶೆಗಳನ್ನು ಜ್ಞಾನ ವಿರೋಧಿಗಳು ಹೊಂದಿದ್ದರು. ಇದಕ್ಕೆ ಗುಲಾಮಗಿರಿ ವಿರೋಧಿ ಹೋರಾಟಗಾರರು, ಮರ್ಮನ್ ಪಂಥದ ಅನುಯಾಯಿಗಳು, ಯಹೂದ್ಯರು, ನೀಗ್ರೊಗಳು ಅಥವಾ ವಲಸಿಗರು, ಮದ್ಯ ಮಾರಾಟಗಾರರು ಅಥವಾ ಅಂತರರಾಷ್ಟ್ರೀಯ ಬ್ಯಾಂಕರುಗಳು ಗುರಿಯಾಗಿದ್ದಾರೆ. ಶೂನ್ಯ ಜ್ಞಾನವಾದಿಗಳ ಈ ಪರಂಪರೆಯ ಬಲಿಪಶುಗಳಾಗಿ ನಮ್ಮ ಕಾಲದಲ್ಲಿ ಚಿಂತಕರು ಸ್ಥಾನ ಪಡೆದುಕೊಂಡಿದ್ದಾರೆ’ ಎಂದು ಬಲಪಂಥೀಯ ತೀವ್ರವಾದದ ಬಲಿಪಶುಗಳ ಬಗ್ಗೆ ಹಾಫ್‍ಸ್ಟೇಡರ್ ಬರೆದಿದ್ದಾರೆ.

ಹಿಂದೂವಾದಿ ಬಲಪಂಥೀಯರ ಬಗ್ಗೆಯೂ ಇದಕ್ಕೆ ಹೋಲಿಕೆಯಾಗುವ ರೀತಿಯಲ್ಲಿ ಬರೆಯುವುದಕ್ಕೆ ಸಾಧ್ಯ ಇದೆ. ಇವರು ಅತಿ ಅಪಾಯಕಾರಿ ಪಿಶಾಚಿಗಳು ಎಂದು ಪರಿಗಣಿಸಿದವರಲ್ಲಿ ಮೊದಲಿಗೆ ಮುಸ್ಲಿಮರೇ ಇದ್ದಾರೆ; ಕ್ರೈಸ್ತರು, ಕಮ್ಯುನಿಸ್ಟರು, ವಿದೇಶಿಯರು, ನೆಹರೂ ಮತ್ತು ನೆಹರೂ-ಗಾಂಧಿ ಕುಟುಂಬ ಮತ್ತು (ಕೆಲವರಿಗೆ) ಮಹಾತ್ಮ ಗಾಂಧಿ ಕೂಡ ಈ ಪಟ್ಟಿಗೆ ಸೇರುತ್ತಾರೆ. ಶೂನ್ಯ ಜ್ಞಾನವಾದಿಗಳ ಪರಂಪರೆ ಆಯ್ಕೆ ಮಾಡಿಕೊಂಡ ಬಲಿಪಶುಗಳ ಪಟ್ಟಿಯಲ್ಲಿ ಕೊನೆಗೂ ನಮ್ಮ ಕಾಲದಲ್ಲಿ ಚಿಂತಕರು ಸ್ಥಾನ ಪಡೆದುಕೊಂಡಿದ್ದಾರೆ.

ತಮ್ಮ ದೇಶದ ಬಗ್ಗೆ ಹಾಫ್‍ಸ್ಟೇಡರ್ ಅವರ ವಿಶ್ಲೇಷಣೆ ಹೀಗಿದೆ: ‘ಕೆಲವು ವ್ಯಕ್ತಿಗಳು ದ್ವೇಷವನ್ನೇ ಒಂದು ಸಿದ್ಧಾಂತವಾಗಿಸಿ ಬದುಕುತ್ತಾರೆ. ಭಾರತದ ಸಂದರ್ಭದಲ್ಲಿ ಹೇಳುವುದಾದರೆ, ‘ಕೆಲವು ವ್ಯಕ್ತಿಗಳು’ ಎಂಬುದರ ಬದಲಿಗೆ ‘ಹಲವು’ ಎಂದು ಸೇರಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮಪೂರ್ವ ಯುಗದಲ್ಲಿ ಜೀವಿಸಿದ್ದ ಹಾಫ್‍ಸ್ಟೇಡರ್ ಇಂತಹ ದ್ವೇಷವನ್ನು ಆಗೊಮ್ಮೆ ಈಗೊಮ್ಮೆ ಮಾತ್ರ ಅನುಭವಿಸಬೇಕಾಗಿ ಬಂದಿತ್ತು. ಆದರೆ ಇಂದಿನ ವಿದ್ವಾಂಸರು ಇದನ್ನು ಪ್ರತಿ ದಿನ ಮತ್ತು ಪ್ರತಿಕ್ಷಣ ಅನುಭವಿಸಬೇಕಾಗಿದೆ. ‘ಮೆಕಾರ್ಥಿವಾದ’ ಎಂಬ ಪದ ಪದಕೋಶವನ್ನು ಸೇರಿಕೊಂಡಿದೆ. ಆದರೆ, 1950ರ ದಶಕದಲ್ಲಿ ಇದ್ದುದಕ್ಕಿಂತ ಬಹಳಷ್ಟು ಹೆಚ್ಚು ಪ್ರತಿಕೂಲ ಸ್ಥಿತಿಯನ್ನು ಭಾರತದಲ್ಲಿ ಈಗ ವಿದ್ವಾಂಸರು ಎದುರಿಸುತ್ತಿದ್ದಾರೆ. ಮೆಕಾರ್ಥಿ ಮತ್ತು ಅವರ ಅನುಯಾಯಿಗಳು ಸ್ವತಂತ್ರ ಚಿಂತಕರು ಮತ್ತು ಲೇಖಕರನ್ನು ಕೆಲಸದಿಂದ ಒದ್ದೋಡಿಸಿದ್ದರು; ಆದರೆ ಭಾರತದಲ್ಲಿ ಇರುವ ಜ್ಞಾನ ವಿರೋಧಿಗಳು ಇನ್ನೂ ಬಹಳ ಮುಂದಕ್ಕೆ ಹೋಗಿದ್ದಾರೆ- ದಾಭೋಲ್ಕರ್, ಪಾನ್ಸರೆ, ಕಲಬುರ್ಗಿ ಮತ್ತು ಗೌರಿ ಲಂಕೇಶ್ ಇದಕ್ಕೆ ನಿದರ್ಶನಗಳು- ಸ್ವತಂತ್ರ ಚಿಂತಕರು ಮತ್ತು ಲೇಖಕರ ಜೀವವೇ ಉಳಿಯುವುದಿಲ್ಲ ಇಲ್ಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry