5

ಶ್ರದ್ಧಾಗೆ ಸೈನಾ ಪಾಠ

Published:
Updated:
ಶ್ರದ್ಧಾಗೆ ಸೈನಾ ಪಾಠ

ನಟಿ ಶ್ರದ್ಧಾ ಕಪೂರ್‌ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ ಅವರು ಈಗ ಮನರಂಜನಾ ಕ್ಷೇತ್ರದ ಸುದ್ದಿಗಳ ಕೇಂದ್ರಬಿಂದುಗಳಾಗಿದ್ದಾರೆ. ‘ಹಸೀನಾ ಪಾರ್ಕರ್‌’ ಮತ್ತು ‘ಸಾಹೊ’ ಚಿತ್ರಗಳಿಂದಾಗಿ ಶ್ರದ್ಧಾ ಮೊದಲೇ ಸುದ್ದಿಯಲ್ಲಿದ್ದರು. ಈಗ, ಸೈನಾ ನೆಹ್ವಾಲ್‌ ಜೀವನಕತೆಯನ್ನು ಆಧರಿಸಿದ ಚಿತ್ರದಲ್ಲಿ ಸೈನಾ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಹೈದರಾಬಾದ್‌ನಲ್ಲಿ ‘ಸಾಹೊ’ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಶ್ರದ್ಧಾಗೆ ಚಿತ್ರ ತಂಡ ಭರ್ಜರಿಯಾಗಿ ಹೈದರಾಬಾದಿ ಮೆನುಗಳನ್ನು ಉಣಬಡಿಸುತ್ತಿದೆ. ದಿನಕ್ಕೊಂದು ಬಗೆಯನ್ನು ಅವರಿಗೆ ಪರಿಚಯಿಸುವ ಉಮೇದು ಚಿತ್ರತಂಡದ್ದು. ಚಿತ್ರೀಕರಣದ ಮಧ್ಯೆ ಬಿಡುವು ಮಾಡಿಕೊಂಡು ಅವರು ಸೈನಾ ನೆಹ್ವಾಲ್‌ನ ಭೇಟಿಯಾಗಿ ಬ್ಯಾಡ್ಮಿಂಟನ್‌ ತಾರೆ ರೆಕೆಟ್‌ ಹಿಡಿಯುವ ಶೈಲಿ, ಹೊಡೆತಗಳು, ಸರ್ವಿಂಗ್‌ ಹೀಗೆ ಮೂಲ ಪಾಠಗಳನ್ನು ಹೇಳಿಸಿಕೊಂಡು ಬಂದಿದ್ದರು.

‘ಸೈನಾ ಕೆಲವು ಮೂಲ ಸಂಗತಿಗಳನ್ನು ಹೇಳಿಕೊಟ್ಟರು. ನಾನು ಅವರೊಂದಿಗೆ ಸ್ವಲ್ಪ ಆಟವಾಡಿದೆ. ಪ್ರತಿ ಸರ್ವ್‌ ಕೂಡಾ ಶಕ್ತಿಶಾಲಿಯಾಗಿರಬೇಕು ಎಂಬ ಅಂಶವನ್ನು ಸೈನಾ ಹೇಳಿಕೊಟ್ಟರು. ಪ್ರತಿ ಹೊಡೆತಕ್ಕೂ ಪೂರ್ಣಪ್ರಮಾಣದ ಸಾಮರ್ಥ್ಯ ಹಾಕಬೇಕು ಎಂದು ತಿಳಿಸಿದರು. ನೀನು ಎಷ್ಟು ಚೆನ್ನಾಗಿ ಬ್ಯಾಡ್ಮಿಂಟನ್‌ನಲ್ಲಿ ಪಳಗುತ್ತೀಯೋ ಅಷ್ಟು ಪರಿಣಾಮಕಾರಿಯಾಗಿ ನೀನು ನಾನಾಗಬಲ್ಲೆ ಎಂದು ಸೈನಾ ಕಿವಿಮಾತು ಹೇಳಿದ್ದಾಗಿ ಶ್ರದ್ಧೆಯ ವಿದ್ಯಾರ್ಥಿನಿಯಂತೆ ಶ್ರದ್ಧಾ ತಿಳಿಸಿದ್ದಾರೆ.

ಸೈನಾ ಜತೆ ಬ್ಯಾಡ್ಮಿಂಟನ್‌ ಆಡುತ್ತಿರುವ ಮತ್ತು ಜತೆಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿಕೊಂಡ ಬೆನ್ನಿಗೇ ನೂರಾರು ಪ್ರತಿಕ್ರಿಯೆಗಳು ಶ್ರದ್ಧಾ ಪುಳಕಿತರಾಗುವಂತೆ ಮಾಡಿವೆ. ‘ನೀವು ಸೈನಾ ನೆಹ್ವಾಲ್‌ ಅವರ ತಂಗಿಯಂತೆ ಕಾಣುತ್ತೀರಿ’ ಎಂಬ ಮೆಚ್ಚುಗೆಯ ಮಾತಿನಿಂದ ‘ಸಾಹೊ’ ಬೆಡಗಿ ಕುಣಿದು ಕುಪ್ಪಳಿಸುವಷ್ಟು ಆನಂದತುಂದಿಲರಾಗಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry