ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನರಂತೆ ತಿಳಿಯಾಗಿದೆಯಲ್ಲ ಈ ನೀರು!

Last Updated 31 ಜುಲೈ 2018, 16:20 IST
ಅಕ್ಷರ ಗಾತ್ರ

ನಾರದಮಹರ್ಷಿಗಳು ವಾಲ್ಮೀಕಿಮುನಿಗಳಿಗೆ ಶ್ರೀರಾಮನ ಚರಿತ್ರೆಯನ್ನು ಹೇಳಿದರು. ಆ ಕಥೆಯನ್ನು ಕೇಳಿ ವಾಲ್ಮೀಕಿಗಳು ಆನಂದ ಪಟ್ಟರು; ಅವರ ಶಿಷ್ಯರೂ ಆನಂದಿಸಿದರು. ವಾಲ್ಮೀಕಿಗಳ ಮನಸ್ಸಿನಲ್ಲಿ ಕೊರೆಯುತ್ತಿದ್ದ ಚಿಂತೆಗೆ ಆ ದಿವ್ಯವಾದ ಕಥೆಯ ಮೂಲಕ ಪರಿಹಾರ ಒದಗಿಸಿದ ನಾರದರಿಗೆ ಅವರ ಆಶ್ರಮದಲ್ಲಿ ಸತ್ಕಾರಗಳು ನಡೆದವು. ನಾರದರು ದೇವಲೋಕಕ್ಕೆ ಹಿಂದಿರುಗಿದರು. ಸ್ವಲ್ಪ ಕಾಲ ಆಶ್ರಮದಲ್ಲಿಯೇ ಇದ್ದರು ವಾಲ್ಮೀಕಿಗಳು. ಶಿಷ್ಯರೊಡನೆ ರಾಮನ ಕಥೆಯ ಸ್ವಾರಸ್ಯವನ್ನು ಮೆಲುಕು ಹಾಕುತ್ತಿದ್ದರೋ? ಅಥವಾ ಅವರೇ ಅದರಲ್ಲಿ ತಲ್ಲೀನರಾಗಿದ್ದಾರೋ? ಬಹುಶಃ ರಾಮಕಥೆಯಲ್ಲಿಯೇ ಮುಳುಗಿದ್ದರೆನಿಸುತ್ತದೆ. ಅನುಷ್ಠಾನಕ್ಕೆ ಹೊತ್ತಾಗಿದ್ದದ್ದು ಆ ತಲ್ಲೀನತೆಯಲ್ಲಿಯೂ ಅವರ ಅರಿವಿಗೆ ಬಂತು. ಎಷ್ಟೇ ಆಗಲಿ, ಅವರು ಕೇಳಿದ್ದ ಕಥೆಯ ನಾಯಕ ರಾಮ ಕರ್ತವ್ಯನಿಷ್ಠನೇ ಅಲ್ಲವೆ? ವಾಲ್ಮೀಕಿಗಳಿಗೂ ಕರ್ತವ್ಯದ ಎಚ್ಚರವಾದದ್ದು ಸಹಜವಷ್ಟೆ! ತಮಸಾನದಿಯ ತೀರಕ್ಕೆ ಸ್ನಾನಕ್ಕೆಂದು ತೆರಳಿದರು. ಜೊತೆಯಲ್ಲಿ ಶಿಷ್ಯರೂ ಹೊರಟರು.

ಎಲ್ಲರೂ ನದಿಯ ತೀರಕ್ಕೆ ಬಂದಿದ್ದಾರೆ. ವಾಲ್ಮೀಕಿಗಳು ಎಷ್ಟೋ ವರ್ಷಗಳಿಂದ ತಮಸಾನದಿಯಲ್ಲಿಯೇ ಸ್ನಾನ ಮಾಡುತ್ತಿರುವುದು. ಅದೂ ಅದೇ ತೀರದಲ್ಲಿಯೇ. ಸ್ನಾನ ಮಾಡುವ ನೀರನ್ನು, ಹರಿಯುತ್ತಿರುವ ನೀರನ್ನು ಎಂದೂ ನೋಡಿರುವುದಿಲ್ಲವೆ? ಪ್ರತಿ ಸಲವೂ ನೋಡಿಯೇ ನೋಡಿರುತ್ತಾರೆ. ಆದರೆ ಅವರು ಅಂದು ಮಾತ್ರ ಮೊದಲ ಬಾರಿಗೆ ನೋಡುತ್ತಿರುವೆನೋ ಎಂಬಂತೆ ಗಾಢವಾಗಿ ತಮಸಾನದಿಯ ನೀರನ್ನು ನೋಡಿದರು. ಆ ನೀರಿನ ಪ್ರತಿಫಲನದಲ್ಲಿ ಏನೆಲ್ಲ ಕಂಡರೋ? ಶಿಷ್ಯನಾದ ಭರದ್ವಾಜನನ್ನು ಕುರಿತು ಉದ್ಗರಿಸಿದರು:

ಅಕರ್ದಮಮಿದಂ ತೀರ್ಥಂ ಭರದ್ವಾಜ ನಿಶಾಮಯ |

ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯ-
ಮನೋ ಯಥಾ ||

ನ್ಯಸ್ಯತಾಂ ಕಲಶಸ್ತಾತ ದೀಯತಾಂ ವಲ್ಕಲಂ ಮಮ |

ಇದಮೇವಾವಗಾಹಿಷ್ಯೇ ತಮಸಾತೀರ್ಥಮುತ್ತಮಮ್‌ ||

‘ಭರದ್ವಾಜ, ಸ್ವಚ್ಛವಾದ ಈ ತೀರ್ಥವನ್ನು ನೋಡು. ತಿಳಿಯಾದ ನೀರಿನಿಂದ ತುಂಬಿದ ಇದು ಸಜ್ಜನರ ಮನಸ್ಸಿನಂತೆ ಎಷ್ಟು ರಮಣೀಯವಾಗಿದೆ! ಕಂದ!! ಕಮಂಡಲವನ್ನು ಕೆಳಗಿಡು; ನನ್ನ ನಾರುಬಟ್ಟೆಯನ್ನು (ವಲ್ಕಲ) ಕೊಡು. ಉತ್ತಮವಾದ ಈ ತಮಸಾತೀರ್ಥದಲ್ಲಿಯೇ ಸ್ನಾನ ಮಾಡುವೆನು’.

ಮುಂದೆ ನಡೆಯಲಿರುವ ಘಟನೆಗಳಿಗೆ ಸೂಚನೆಗಳೋ ಎಂಬಂತಿವೆ ಈ ಮಾತುಗಳು. ವಾಲ್ಮೀಕಿಗಳ ಮನಸ್ಸು ದುಗುಡದಲ್ಲಿದ್ದಾಗ ನೀರಿನ ಕಡೆಗೆ ಅವರ ದೃಷ್ಟಿ ಹೋಗಿರಲಿಲ್ಲವೆ? ಅಥವಾ ಬಗ್ಗಡವೆಲ್ಲ ತಳವನ್ನು ಸೇರಿ ನೀರು ಈಗ ಸ್ವಚ್ಛವಾಗಿದೆಯೆ? ವಾಲ್ಮೀಕಿಗಳ ಮನಸ್ಸಿನಲ್ಲಿದ್ದ ಕೆಸರನ್ನಂತೂ ನಾರದರು ಸ್ವಚ್ಛಗೊಳಿಸಿದ್ದರೆನ್ನಿ! ವಾಲ್ಮೀಕಿಗಳ ಮನಸ್ಸು ಈಗ ತಿಳಿಯಾಗಿದೆ. ಒಂದು ಸ್ವಚ್ಛಮನಸ್ಸು ಮಾತ್ರವೇ ಇನ್ನೊಂದು ಸ್ವಚ್ಛವಾದುದನ್ನು ಗುರುತಿಸುತ್ತದೆಯೇನೋ? ಅಂತೂ ತಮಸೆಯ ಸ್ವಚ್ಛವಾದ ನೀರನ್ನು ನೋಡಿ ವಾಲ್ಮೀಕಿಗಳು ಆನಂದಿಸುತ್ತಿದ್ದಾರೆ; ಆ ಆನಂದವನ್ನು ಜೊತೆಯಲ್ಲಿರುವವರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಆ ಸ್ವಚ್ಛತೆಯ ಮಾದರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ತಿಳಿತನ ಎಂದರೇನು ಎನ್ನುವ ದರ್ಶನವೇ ಅವರಿಗಾಗಿದೆ. ‘ಸಜ್ಜನರ ಮನಸ್ಸಿನಂತೆ ಆ ತಿಳಿತನ ರಮಣೀಯವಾಗಿದೆ’ – ಎಂಬ ವಿಶೇಷ ಉಕ್ತಿಯೊಂದು ಅವರಿಂದ ಪ್ರಕಟವಾಗಿದೆ. ನೀರಿನ ತಿಳಿತನ ಹೇಗಿದೆ ಎಂಬ ಹೋಲಿಕೆಯಲ್ಲಿ ತೊಡಗಿದೆ ಅವರ ಮನಸ್ಸು. ಋಷಿದರ್ಶನ ಈಗ ಕವಿಪ್ರತಿಭೆಯಾಗಿ ಬೀಜಾಂಕರುವಾಗುತ್ತಿದೆ. ಹೋಲಿಕೆಯೇ ಅಲ್ಲವೆ ಕವಿಮನಸ್ಸಿನ ಮೊದಲ ಸಾಧನ. ಹೀಗಾಗಿಯೇ ‘ಉಪಮೆ’ಯನ್ನು ಎಲ್ಲ ಅಲಂಕಾರಗಳ ಮೂಲ, ‘ಮಾತೃಕೆ’ ಎನ್ನುವುದು. ತಮಸೆಯ ಆ ನೀರು ಸಜ್ಜನರ ಮನಸ್ಸಿನಂತೆ ತಿಳಿಯಾಗಿದೆಯಂತೆ! ಎಂಥ ಹೋಲಿಕೆ?!

ಸಜ್ಜನರಿಗೂ ತಿಳಿತನಕ್ಕೂ ನಾರುಬಟ್ಟೆಗೂ ಏನಾದರೂ ಸಂಬಂಧವಿದೆಯೆ? ಮುಂದೆ ನೋಡೋಣ; ಇದ್ದರೆ ಕಾಣಿಸೀತು, ಅಲ್ಲವೆ?

ಶಿಷ್ಯ ಭರದ್ವಾಜ ನಾರುಬಟ್ಟೆಯನ್ನು ಗುರುಗಳಿಗೆ ಕೊಟ್ಟ. ಅದನ್ನು ತೆಗೆದುಕೊಂಡ ವಾಲ್ಮೀಕಿಗಳು ಆ ಕೂಡಲೇ ಸ್ನಾನಕ್ಕೆ ಸಿದ್ಧರಾಗಲಿಲ್ಲ. ಮನಸ್ಸು ಯಾವುದೋ ಲಹರಿಯಲ್ಲಿ, ಆನಂದದ ಅಲೆಗಳಲ್ಲಿ ವಿಹರಿಸುತ್ತಿದೆ. ನಮ್ಮ ಮನಸ್ಸು ಯಾವುದೋ ಗಾಢಭಾವದಲ್ಲಿ ತೇಲುತ್ತಿದೆ ಎಂದಿಟ್ಟುಕೊಳ್ಳಿ; ಅಂಥ ಸಮಯದಲ್ಲಿ ಸ್ನಾನಕ್ಕೆ ಹೋದರೂ ಅಥವಾ ಮತ್ತೇನೋ ಕೆಲಸಕ್ಕೆಂದು ಹೊರಟರೂ – ತತ್‌ಕ್ಷಣವೇ ಅದನ್ನು ಮಾಡಲಾಗದೆ, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಡ್ಡಾಡುತ್ತಿರುತ್ತೇವೆಯಷ್ಟೆ! ಅಂತೆಯೇ ವಾಲ್ಮೀಕಿಗಳು ಕೂಡ ಆಗ ವನದಲ್ಲಿ ಸುತ್ತಾಡತೊಡಗಿದರು. ಅಂದು ಅವರಿಗೆ ಅಲ್ಲಿಯ ಮರ–ಗಿಡ–ಬಳ್ಳಿಗಳು, ನೀರು–ಕಲ್ಲು–ಹೂವು–ಪ್ರಾಣಿ–ಪಕ್ಷಿಗಳು ಎಲ್ಲವೂ ಹೊಸದಾಗಿ ಕಾಣುತ್ತಿವೆ; ನೂತನಭಾವದಲ್ಲಿ ಸಂಭ್ರಮಿಸುತ್ತಿದ್ದಾರೆ. ಆಗ ಅವರು ಕ್ರೌಂಚಪಕ್ಷಿಗಳ ಜೋಡಿಯೊಂದನ್ನು ಕಂಡರು. ಅವೆರಡು ಸಹ ಸಂತಸದಲ್ಲಿವೆ; ಒಂದು ಇನ್ನೊಂದನ್ನು ಬಿಡದೆ ಹಾರುತ್ತಿವೆ; ಹಾರುತ್ತ ಅವು ಹಾಡುತ್ತಿವೆ ಕೂಡ. ಪ್ರೀತಿಯಲ್ಲಿ ಮೈಮರೆತಿವೆ. ಅಯ್ಯೋ! ಅಷ್ಟರಲ್ಲಿ ಅವನು ಅಲ್ಲಿಗೇ ಬರಬೇಕೆ? ಹಾಗೆ ಬಂದವನೇ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT