ಗಣಿಗಾರಿಕೆಗೆ ನಲುಗಿದ ಕಮತೂರಿನ ಕತೆ

7

ಗಣಿಗಾರಿಕೆಗೆ ನಲುಗಿದ ಕಮತೂರಿನ ಕತೆ

Published:
Updated:
ಗಣಿಗಾರಿಕೆಗೆ ನಲುಗಿದ ಕಮತೂರಿನ ಕತೆ

ಆಗಸ್ಟ್‌ ಕೊನೇ ವಾರದಲ್ಲಿ ತಮ್ಮ ಮನೆಗೆ ಅತಿ ಹತ್ತಿರದಲ್ಲಿ ಗಣಿಗಾರಿಕೆಗೆ ಡೈನಮೈಟ್‌ ಇಡಲಾಗಿದೆ ಎಂದು ತಿಳಿದಾಕ್ಷಣ ಅದನ್ನು ತಡೆಯಲು ಎನ್‌. ಮಲ್ಲೇಶ್‌ ಓಡಿಹೋಗಿದ್ದರು. ತಡೆಯಲು ಆಗದಿದ್ದರೆ ಅದರೊಂದಿಗೆ ಸಿಡಿದು ಸಾಯಲು ಸಹ ಅವರು ಸಿದ್ಧವಾಗಿದ್ದರು. ಆದರೆ ಅವರನ್ನು ಅಲ್ಲಿ ಗಣಿಗಾರಿಕೆ ನಡೆಸಿರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಭದ್ರತಾ ಸಿಬ್ಬಂದಿ ಮುಲಾಜಿಲ್ಲದೆ ದೂರಕ್ಕೆ ದಬ್ಬಿದ್ದರು. ಕೊನೆಗೂ ಡೈನಮೈಟ್‌ ಸಿಡಿದೇಬಿಟ್ಟಿತ್ತು. ಮನೆಗೆ ಬಂದು ನೋಡಿದಾಗ ಗೋಡೆ ಮೇಲಿನಿಂದ ಕೆಳಗಿನವರೆಗೂ ದೊಡ್ಡ ಬಿರುಕು ಬಿಟ್ಟಿತ್ತು.

ಗಣಿಗಾರಿಕೆಯಿಂದ ಅತಿಯಾಗಿ, ಅಮಾನವೀಯವಾಗಿ ನಲುಗಿದ ಯಾವುದಾದರೂ ಹಳ್ಳಿ ಬಳ್ಳಾರಿ ಜಿಲ್ಲೆಯಲ್ಲಿ ಇದ್ದರೆ ಅದು ಕಮತೂರು. ಸಂಡೂರಿನಿಂದ 23 ಕಿ.ಮೀ. ದೂರದಲ್ಲಿ ಅದಿರಿನ ಬೆಟ್ಟಗಳ ತುದಿಯಲ್ಲಿರುವ ನತದೃಷ್ಟ ಹಳ್ಳಿ. ಇಲ್ಲಿನವರು ‘ನಮಗೆ ಕಲ್ಲೇ (ಅದಿರು) ಶಾಪ’ ಎಂದು ದಿನವೂ ನಿಡುಸುಯ್ಯುತ್ತಾರೆ.

ಅಲ್ಲಿನ ಮನೆಗಳಿಂದ ಕೆಲವು ನೂರು ಮೀಟರುಗಳ ದೂರದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ಸಿಡಿಮದ್ದು ಸ್ಫೋಟಕ್ಕೆ ಈಗ ಇನ್ನಷ್ಟು ಮನೆಗಳು ಬಿರುಕು ಬಿಟ್ಟಿವೆ. ಅದರಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮನೆಗಳೂ ಸೇರಿವೆ.

ಸುತ್ತ ಏಳು ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ನಡುವೆಯೇ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪುಟ್ಟ ಹಳ್ಳಿ ಹೆಣಗಾಡುತ್ತಿದೆ. ಜಿಲ್ಲೆಯ ಎಲ್ಲ ಜನವಸತಿ ಪ್ರದೇಶಗಳಿಂದ ಸಿಡಿದು ದ್ವೀಪವಾಗಿರುವ ಈ ಹಳ್ಳಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾರ್ವಜನಿಕ ಆಡಳಿತ ಅಸ್ತಿತ್ವದಲ್ಲಿ ಇದ್ದಂತೆ ಕಾಣುವುದಿಲ್ಲ. ಇದ್ದರೂ ನೆಪಮಾತ್ರಕ್ಕೆ ಇದೆ ಅಷ್ಟೇ. ಜನ ಮೂರು ಬಾರಿ ಚುನಾವಣೆ ಬಹಿಷ್ಕರಿಸಿದ್ದರೂ ಅಭಿವೃದ್ಧಿ ಇಲ್ಲಿ ಮರೀಚಿಕೆ.

ಇಲ್ಲಿನ ಬಹುತೇಕ ಮನೆಗಳು ಬಿರುಕು ಬಿಟ್ಟಿವೆ. ಡೈನಮೈಟ್‌ ಸದ್ದಿಗೆ ಹಸು–ಕರುಗಳು ನಲುಗಿ ಸತ್ತಿವೆ. ಕೆಂಪು ದೂಳಿನಿಂದಾಗಿ ಜನ ಬಿಳಿ–ತಿಳಿಬಣ್ಣದ ಬಟ್ಟೆ ಧರಿಸುವುದನ್ನೇ ಬಿಟ್ಟಿದ್ದಾರೆ. ‘ನಮ್ಮ ಹಳ್ಳಿ ಸುತ್ತ ಗಣಿಗಾರಿಕೆ ನಡೆಸುವುದು ಬೇಡ’ ಎಂದು ಪ್ರತಿಭಟಿಸುವ ಸ್ಥಿತಿಯಲ್ಲೂ ಅವರು ಇಲ್ಲ. ಏಕೆಂದರೆ ಅದೇ ಗಣಿ ಕಂಪೆನಿ ಗಳಲ್ಲಿ ಅವರು ಸಣ್ಣ–ಪುಟ್ಟ ಕೆಲಸ ಮಾಡುತ್ತಾ ಜೀವನೋಪಾಯ ಕಂಡುಕೊಂಡಿದ್ದಾರೆ.

ಎರಡು ವರ್ಷದ ಹಿಂದೆ ಈ ಹಳ್ಳಿಯ ಹಿರಿಯರೊಬ್ಬರಿಗೆ ಹೃದಯಾಘಾತವಾದಾಗ, ಅವರನ್ನು ಬಳ್ಳಾರಿಯ ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ಹೊರಟ ವಾಹನ ಮನೆಯಿಂದ ಮುಂದಕ್ಕೆ ಚಲಿಸಲು ಆಗಲೇ ಇಲ್ಲ. ಹಳ್ಳಿಯ ಮುಖ್ಯರಸ್ತೆ, ಅಲ್ಲಿಂದ ಹೊರಕ್ಕೆ ಉದ್ದಕ್ಕೂ ನಿಂತಿದ್ದ ಅದಿರು ಸಾಗಣೆ ಲಾರಿಗಳು ದಾರಿ ಕೊಡಲಿಲ್ಲ. ಚಿಕಿತ್ಸೆ ದೊರಕಿದ್ದರೆ ಬದುಕಿ ಉಳಿಯಬಹುದಾಗಿದ್ದ ಆ ಹಿರಿಯರು ಅಲ್ಲಿಯೇ ಕೊನೆ ಉಸಿರು ಎಳೆದರು. ಆಗ ನಡೆಸಿದ ಪ್ರತಿಭಟನೆ ಪರಿಣಾಮವಾಗಿ, ಲಾರಿಗಳು ಹಳ್ಳಿಯ ಹೊರಗಿನಿಂದ ಸಂಚರಿಸುವಂತಾಯಿತು.

ಇತ್ತೀಚೆಗಷ್ಟೆ ನಡೆದ ಘಟನೆ. ಹೆರಿಗೆ ನೋವಿನಿಂದ ಮಹಿಳೆಯೊಬ್ಬರು ನರಳಾಡುತ್ತಿದ್ದರು. ಸಂಬಂಧಿಕರು ಗಣಿ ಕಂಪೆನಿ ಸ್ಮಯೋರ್‌ನ ಕಿರು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿನ ವೈದ್ಯರು ಬಳ್ಳಾರಿಯ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು.

ಅಷ್ಟು ಹೊತ್ತಿಗೆ, ಈ ಲೋಕಕ್ಕೆ ಬರಲು ಅವಸರದಿಂದಿದ್ದ ಕೂಸಿನ ಮೈ ಕೊಂಚ ಹೊರಗೆ ಬಂದಿತ್ತು. ಗರ್ಭಿಣಿಯೊಂದಿಗೆ ಜೀವ ಕೈಯಲ್ಲಿ ಹಿಡಿದು ಬಳ್ಳಾರಿಗೆ ಪ್ರಯಾಣಿಸಿ ಹೆರಿಗೆ ಮಾಡಿಸುವಷ್ಟರಲ್ಲಿ ಎಲ್ಲರಿಗೂ ಪುನರ್ಜನ್ಮ ದೊರಕಿದಂತಾಗಿತ್ತು. ಹಳ್ಳಿಯ ಮಹಿಳೆಯರು ಮತ್ತು ಮಕ್ಕಳ ಪರಿಸ್ಥಿತಿ ಇದು.

2013ರವರೆಗೂ ಇಲ್ಲಿ ಒಂದು ಆರೋಗ್ಯ ಉಪಕೇಂದ್ರವೂ ಇರಲಿಲ್ಲ. ಈಗ ಇದ್ದರೂ ಸದಾ ಕಾಲ ಬಾಗಿಲು ಮುಚ್ಚಿರುತ್ತದೆ. ಜಿಲ್ಲಾ ಆರೋಗ್ಯಾಧಿಕಾರಿಗೆ ಇದು ಗೊತ್ತಾಗುವುದಿಲ್ಲ.

ದುಮ್ಮಾನ ಕೇಳುವವರಿಲ್ಲ

‘ಇವತ್ತಿಗೂ ಈ ಹಳ್ಳಿಯಲ್ಲಿ ಆಂಬುಲೆನ್ಸ್‌ ಇಲ್ಲ. ರಸ್ತೆಯೇ ಇಲ್ಲದಿರುವಾಗ ಆಂಬುಲೆನ್ಸ್‌ ಕೊಟ್ಟರೆ ಏನು ಪ್ರಯೋಜನ’ ಎನ್ನುತ್ತಾರೆ ಇಲ್ಲಿನ ಪೆನ್ನಪ್ಪ ಮಾಳಗಿ.

ಹಳ್ಳಿಯಿಂದ ಸಂಡೂರಿನ ಕಡೆಗೆ ಹೋಗಬೇಕೆಂದರೆ ಮೊದಲು ಹನ್ನೆರಡು ಕಿ.ಮೀ. ದೂರದಲ್ಲಿರುವ ಕುಮಾರಸ್ವಾಮಿ ಗುಡಿಯನ್ನು ದಾಟಬೇಕು. ಆದರೆ ಅಲ್ಲಿಯವರೆಗೆ ರಸ್ತೆಯೇ ಇಲ್ಲ. ಅದು ಹಳ್ಳಿ ಮತ್ತು ಲೋಕದ ನಡುವಿನ ಸಂಪರ್ಕದ ದೊಡ್ಡ ಬಿರುಕು. ಆದರೆ ಅದುವೇ ಅದಿರು ಸಾಗಣೆ ಲಾರಿಗಳ ರಾಜಮಾರ್ಗ. ರಸ್ತೆಯ ಹೆಸರಿನಲ್ಲಿರುವ ಹಳ್ಳಕೊಳ್ಳಗಳ ಬಯಲು ಮತ್ತು ಗಣಿಗಾರಿಕೆಯ ದೂಳು–ದುಮ್ಮಾನದ ನಡುವೆಯೇ ಜನರ ನಿತ್ಯ ಪ್ರಯಾಣ. ದ್ವಿಚಕ್ರ ವಾಹನ ಪ್ರಯೋಜನಕ್ಕೆ ಬರುವುದಿಲ್ಲ. ಏನಿದ್ದರೂ ಟ್ರ್ಯಾಕ್ಸ್‌ ವಾಹನವೇ ಗತಿ. ಹೀಗಾಗಿ ಈ ಹಳ್ಳಿಗೆ ಯಾವುದೇ ಇಲಾಖೆಯ ಅಧಿಕಾರಿಗಳು ಬರುವುದು ಅಪರೂಪ.

ಕೂಗಳತೆಯಲ್ಲೇ ದೇವಗಿರಿ ಪಂಚಾಯಿತಿ ಇದೆ. ಆದರೆ ಅದು ಕೂಡ ಈ ಹಳ್ಳಿ ಜನರ ನೆರವಿಗೆ ಬಂದಿದ್ದಕ್ಕಿಂತ, ಗಣಿಗಾರಿಕೆಯ ಪರವಾಗಿ ಮೌನ ವಹಿಸಿದ್ದೇ ಹೆಚ್ಚು. ಅಲ್ಲಿರುವ ಹೈಸ್ಕೂಲ್ ದಾಟಿದ ಮೇಲೆ ಮಕ್ಕಳು ಪಿಯುಸಿಗೆ ಸಂಡೂರಿಗೇ ಬರಬೇಕು. ಬಹುತೇಕ ಮಕ್ಕಳಲ್ಲಿ ಅಪೌಷ್ಟಿಕತೆ ಎದ್ದುಕಾಣುವ ಅಂಶ.

ಜಮೀನು ಕಿತ್ತುಕೊಂಡರು

ಇಲ್ಲಿನ ಬಹುತೇಕ ರೈತರ ಜಮೀನುಗಳು ಈಗ ಗಣಿ ಕಂಪೆನಿಗಳ ಹೆಸರಿನಲ್ಲಿವೆ. ತಮ್ಮ ಹೆಸರಿನಲ್ಲೇ ಪಟ್ಟಾ ಇದ್ದು, ತಲೆಮಾರುಗಳಿಂದ ಇನಾಮು ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದವರನ್ನು ಹೊರದಬ್ಬಿ ಒಂದು ದಶಕಕ್ಕೂ ಹೆಚ್ಚು ಕಾಲವಾಯಿತು. ಕಾರಣ ಇಷ್ಟೇ: ಸರ್ವೆ ಸೆಟ್ಲ್‌ಮೆಂಟ್‌ ಆಗಿಲ್ಲ. ಗ್ರಾಮ ನಕ್ಷೆಯಲ್ಲಿ ಅವರ ಹೆಸರಿನ ಜಮೀನು ನಮೂದೇ ಆಗಿಲ್ಲ!

‘ಅವರು ಇದುವರೆಗೂ ತಮ್ಮದಲ್ಲದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಈಗ ಅದು ತಮ್ಮದೇ ಎಂದು ಹೇಳುತ್ತಿದ್ದಾರೆ ಅಷ್ಟೇ’ ಎಂಬುದು ಜಿಲ್ಲಾಡಳಿತದ ನಿಷ್ಠುರ ಮಾತು. ಸೆಟ್ಲ್‌ಮೆಂಟ್‌ಗಾಗಿ ಡಿ.ಸಾರಣ್ಣ, ಈರಲಿಂಗಪ್ಪ, ಡಿ.ಮಾರಣ್ಣ, ವಿ.ಕುಮಾರಸ್ವಾಮಿ, ಮಲ್ಲೇಶ ಅವರ ಹೋರಾಟ ಮಾತ್ರ ನಿಂತಿಲ್ಲ. ಅಂಥ 14 ಹಳ್ಳಿಗಳು ಈ ಪ್ರದೇಶದಲ್ಲಿವೆ.

ತಮ್ಮೂರಲ್ಲೇ ಪರಕೀಯರು!

ಇಲ್ಲಿನ ಜನ ಹೊರಕ್ಕೆ ಹೋಗಲು–ಒಳ ಬರಲು ಎನ್‌ಎಂಡಿಸಿ ಮತ್ತು ಸ್ಮಯೋರ್‌ ಕಂಪೆನಿ ಭದ್ರತಾ ಸಿಬ್ಬಂದಿಯ ತಪಾಸಣೆಗೆ ಒಳಪಡಬೇಕು. ಹೀಗೆ ಅವರೆಲ್ಲ ತಮ್ಮೂರಿನಲ್ಲೇ ಪರಕೀಯರಾಗಿದ್ದಾರೆ. ಹಳ್ಳಿಯ ಕೆಳಗಿನ ಗುಡ್ಡದಲ್ಲಿ ಇರುವ ನಾರಾಯಣಪುರ ಮಾತ್ರ ಸುಭಿಕ್ಷವಾಗಿದೆ. ಏಕೆಂದರೆ ಅಲ್ಲಿನ ಮಣ್ಣಲ್ಲಿ ಅದಿರು ಇಲ್ಲ. ಗರಸು ಕಲ್ಲುಗಳು ಮಾತ್ರ ಇವೆ. ಅದು ಗಣಿ ಕಂಪೆನಿಗಳಿಗೆ ಬೇಡವಾದ ಪ್ರದೇಶ. ಕಲ್ಲು ತನ್ನ ಸ್ವರೂಪದಲ್ಲಿ ಮಾಡಿಕೊಂಡ ಬದಲಾಣೆಯ ಪರಿಣಾಮವಾಗಿ ಒಂದು ಹಳ್ಳಿಗೆ ವರವೂ ಮತ್ತೊಂದು ಹಳ್ಳಿಯ ಜೀವಸಂಕುಲಕ್ಕೆ ಶಾಪವೂ ಆಗಿರುವುದು ಹೀಗೆ.

ಕಮತೂರಿನ ಜನ ತಲೆಮಾರುಗಳಿಂದ ಪೂಜಿಸುತ್ತಿರುವ ಅವರ ಮನೆದೇವರು ಕುಮಾರಸ್ವಾಮಿಯ ಗುಡಿಯೂ ಗಣಿಗಾರಿಕೆಯ ದೊಡ್ಡ ಏಟಿಗೆ ಎದೆಕೊಡಬೇಕಾದ ಪರಿಸ್ಥಿತಿ ಇದೆ. ಅವರ ದೇವರೇ ಈಗ ತನ್ನನ್ನು ಕಾಪಾಡಿಕೊಳ್ಳಬೇಕಾದ ವಿಚಿತ್ರ ಸನ್ನಿವೇಶ.

ಶಾಪವೇ ದೊಡ್ಡದು...

ಖನಿಜ ಸಂಪತ್ತು ಯಾವುದೇ ದೇಶಕ್ಕೆ ವರವಿದ್ದಂತೆ ಎಂಬುದು ಬಳಕೆ ಮತ್ತು ವಾಣಿಜ್ಯ ಉದ್ದೇಶದಿಂದ ಕೂಡಿದ ಮಾತು. ಆದರೆ ಜಿಲ್ಲೆಯಲ್ಲಿ ಅತಿಹೆಚ್ಚು ಗಣಿಗಾರಿಕೆ ನಡೆದಿರುವ, ನಡೆಯುತ್ತಿರುವ ಸಂಡೂರು ತಾಲ್ಲೂಕಿನ ಬೆಟ್ಟ ಸಾಲಿನ ಹಳ್ಳಿಗಳಲ್ಲಿ ಮತ್ತು ಹೊಸಪೇಟೆ ತಾಲ್ಲೂಕಿನ ಹಳ್ಳಿಗಳಲ್ಲಿ ಪರಿಸರ, ಕೃಷಿ ಜಮೀನು, ಜನ–ಜಾನುವಾರುಗಳ ಜೀವನಕ್ಕೆ ಖನಿಜ ಶಾಪವೇ ಆಗಿದೆ.

ಇಷ್ಟಾಗಿ, ಗಣಿಗಾರಿಕೆ ಉತ್ತುಂಗದಲ್ಲಿದ್ದ ಕಾಲದಲ್ಲಿ ಹೆಚ್ಚು ಹಣ ಸಂಪಾದಿಸಿದ ಹಳ್ಳಿಯ ಮಂದಿ ಈಗಲೂ ಗಣಿಗಾರಿಕೆ ಬೇಕೆನ್ನುತ್ತಾರೆ, ಅದು ಒಡ್ಡಿರುವ ಅನಿಯಂತ್ರಿತ ಅಪಾಯ ಮತ್ತು ಅತಂತ್ರ ಪರಿಸ್ಥಿತಿಗಿಂತಲೂ, ಕೈತುಂಬ ತಂದಿಟ್ಟ ಹಣವೇ ಅವರ ಆದ್ಯತೆ.

ಕಮತೂರಿನ ಜನ ಮಾತ್ರ ಹೀಗೆ ಹೇಳುವುದಿಲ್ಲ, ಹೇಳಲಾರರು ಎಂಬುದನ್ನು ಗಮನಿಸಬೇಕು. ಗಣಿಬಾಧಿತ ಪ್ರದೇಶಗಳ ಪೈಕಿ ಈ ಹಳ್ಳಿಯನ್ನು ಪ್ರಾತಿನಿಧಿಕವೆಂದು ಪರಿಗಣಿಸಿ, ಗಣಿ ಪ್ರದೇಶಗಳ ಪುನಶ್ಚೇತನ ಮತ್ತು ಪುನರುಜ್ಜೀವನ (ಆರ್‌ ಅಂಡ್‌ ಆರ್‌) ಯೋಜನೆಯ ಅನುಷ್ಠಾನದ ಕಡೆಗೆ ಗಮನ ಹರಿಸಿದರೆ ಏಕಕಾಲಕ್ಕೆ ನಿರಾಶೆಯೂ, ದಟ್ಟ ವಿಷಾದವೂ ಆವರಿಸುತ್ತದೆ.

ಅಕ್ರಮ ಗಣಿಗಾರಿಕೆಗೆ ಜನ ಸಂಗ್ರಾಮ ಪರಿಷತ್ತಿನ ಹೋರಾಟದ ಫಲವಾಗಿ 2012ರಲ್ಲಿ ತಡೆ ಒಡ್ಡಿದ ಬಳಿಕ, ಸುಪ್ರೀಂ ಕೋರ್ಟ್‌ ವೈಜ್ಞಾನಿಕ ಮತ್ತು ವ್ಯವಸ್ಥಿತ ಗಣಿಗಾರಿಕೆ ನಡೆಸಲು ಮತ್ತು ಬಾಧಿತ ಜನ ಮತ್ತು ಪರಿಸರ ಸಂರಕ್ಷಣೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿತ್ತು.

ಗಣಿಬಾಧಿತ ಪ್ರದೇಶಗಳ ಸಮಗ್ರ ಪರಿಸರ ಯೋಜನೆ (ಸಿಪಿಎಂಐಝಡ್‌–Comprehensive Environment Plan for the Mining Impact Zone) ಸಿದ್ಧಗೊಂಡಿದ್ದು, ಅದನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮವನ್ನು (ಕೆಎಂಇಆರ್‌ಸಿ–Karnataka Mining Environment Restoration Corporation) ಸ್ಥಾಪಿಸಿದೆ. ಗಣಿಗಳ ಲಾಭಾಂಶದಲ್ಲಿ ಶೇ 10ರಷ್ಟನ್ನು ಕ್ರೋಡೀಕರಿಸಿ ₹ 30 ಸಾವಿರ ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧವಾಗಿದೆ. ಆದರೆ ಅದಕ್ಕೆ ಬೇಕಾದ ಕ್ರಿಯಾಯೋಜನೆಯನ್ನು ಸಮರ್ಪಕವಾಗಿ ಸಲ್ಲಿಸದ ಕಾರಣಕ್ಕೆ ಜಿಲ್ಲಾಡಳಿತಕ್ಕೆ ಹಿನ್ನಡೆ ಆಗುತ್ತಲೇ ಇದೆ. ಪರಿಣಾಮ ಇಷ್ಟೇ: ಬಾಧಿತರು ಬಳಲುತ್ತಲೇ ಇದ್ದಾರೆ. ನಿಗಮಕ್ಕೆ ಮೂರನೇ ಬಾರಿ ಕ್ರಿಯಾಯೋಜನೆ ಸಲ್ಲಿಸಲು ಜಿಲ್ಲೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಅದು ಸುಪ್ರೀಂ ಕೋರ್ಟ್‌ ಮುಂದೆ ಬರಬೇಕು. ಆಮೇಲೆ ಅನುಷ್ಠಾನದ ಮಾತು. ಅಕ್ರಮ ಗಣಿಗಾರಿಕೆಗೆ ನಿಷೇಧ ಹೇರಿ ಏಳು ವರ್ಷವಾಯಿತು. ಕೆಲವು ಕಂಪೆನಿಗಳು ಸಸಿಗಳನ್ನು ನೆಟ್ಟಿದ್ದು ಬಿಟ್ಟರೆ, ಸಮಗ್ರ ಪುನಶ್ಚೇತನ ಎಂಬುದು ಕಾಗದದಲ್ಲಿ ಮಾತ್ರ ಉಳಿದಿದೆ.

ಯಾಕೆ ಹೀಗೆ?

ಇದರ ಕಾರಣ ಹುಡುಕುತ್ತಾ ಹೊರಟರೆ ದಂಗುಬಡಿಸುವ ವಿಷಯಗಳು ಎದುರಾಗುತ್ತವೆ. ಬಾಧಿತ ಜನರೊಡನೆ ಚರ್ಚೆ, ಗ್ರಾಮಸಭೆ ನಡೆಸದೆಯೇ ಕ್ರಿಯಾಯೋಜನೆಯನ್ನು ತಯಾರಿಸಲಾಗುತ್ತಿದೆ ಎಂಬುದು ಅವುಗಳಲ್ಲಿ ಒಂದು. ಜಿಲ್ಲಾ ಮಟ್ಟದ ಅಧಿಕಾರಿಗಳು ಅದರ ರೂವಾರಿಗಳು. ಕಮತೂರಿನಂಥ ಹಳ್ಳಿಗೆ ಭೇಟಿಯನ್ನೇ ನೀಡದ ಅಧಿಕಾರಿಗಳು, ಅಲ್ಲಿನ ಜನರಿಗೆ ಏನು ಬೇಕು? ಏನು ಬೇಡ? ಎಂಬುದನ್ನು ನಿರ್ಧರಿಸುತ್ತಿದ್ದಾರೆ.

ಇದೇಕೆ ಹೀಗೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರನ್ನು ಕೇಳಿದರೆ, ‘ಸುಪ್ರೀಂ ಕೋರ್ಟ್‌ ಅನುಮೋದನೆ ದೊರೆತ ಬಳಿಕ ಕ್ರಿಯಾಯೋಜನೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯವಿದೆ. ಇಷ್ಟಕ್ಕೂ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಕ್ರಿಯಾಯೋಜನೆ ಸಲ್ಲಿಸಬೇಕೆಂದರೆ ಇನ್ನಷ್ಟು ವಿಳಂಬವಾಗುತ್ತದೆ’ ಎನ್ನುತ್ತಾರೆ. ಕಮತೂರಿಗೆ ಅವರು ಒಮ್ಮೆ ಮಾತ್ರ ಭೇಟಿ ನೀಡಿದ್ದಾರೆ.

ಫಲಿತಾಂಶ ಹೆಚ್ಚಳಕ್ಕೆ ನಿಧಿ

ಗಣಿಗಾರಿಕೆ ಹಾಗೂ ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದ ಬಳಿಕ ಜಿಲ್ಲಾ ಖನಿಜ ನಿಧಿಯೂ ಸ್ಥಾಪನೆಯಾಗಿದೆ. ಕಂಪೆನಿಗಳಿಂದ ಹಣವನ್ನೂ ಸಂಗ್ರಹಿಸಲಾಗಿದೆ. ಅದನ್ನು ಸದ್ಯಕ್ಕೆ, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಹೆಚ್ಚಿಸಲು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ! ‘ನಿರ್ದಿಷ್ಟವಾಗಿ ಸಂತ್ರಸ್ತರಿಗೆ ಬಳಸಬೇಕಾದ ಹಣವನ್ನು ಹೀಗೆ ಬಳಸುವುದು ಸರಿಯಲ್ಲ’ ಎನ್ನುತ್ತಾರೆ ಸಂತ್ರಸ್ತ ಮಹಿಳೆಯರಿಗಾಗಿ ಕೆಲಸ ಮಾಡುತ್ತಿರುವ ‘ಸಖಿ’ ಸಂಸ್ಥೆಯ ಎಂ.ಭಾಗ್ಯಲಕ್ಷ್ಮಿ.

ಆದರೆ, ‘ಬಾಧಿತ ಪ್ರದೇಶಗಳ ಜನರ ಶೈಕ್ಷಣಿಕ ಅಭಿವೃದ್ಧಿಗಾಗಿ ನಿಧಿ ಬಳಸಲಾಗುತ್ತಿದೆ. ಶಿಕ್ಷಣವಿಲ್ಲದೆ ಅಭಿವೃದ್ಧಿ ಇಲ್ಲ’ ಎಂಬುದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಅವರ ಪ್ರತಿಪಾದನೆ.

ಈ ನಡುವೆ, ಗಣಿಗಾರಿಕೆ ಪ್ರದೇಶದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ರೈಲ್ವೆ ಕನ್ವೆಯರ್ ಬೆಲ್ಟ್‌ ಹಾಗೂ ರೈಲ್ವೆ ಸೈಡಿಂಗ್‌ಗಳನ್ನು ಗುತ್ತಿಗೆದಾರರು ತಮ್ಮ ಸ್ವಂತ ಖರ್ಚಿನಲ್ಲಿ ಅಳವಡಿಸುವವರೆಗೂ ವಾರ್ಷಿಕ ಮೂರು ಕೋಟಿ ಟನ್‌ಗಿಂತ ಹೆಚ್ಚು ಅದಿರು ಉತ್ಪಾದಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿಯ ಮಾಜಿ ಸದಸ್ಯ ಕಾರ್ಯದರ್ಶಿ ಎನ್‌.ಕೆ.ಜೀವ್‌ರಾಜ್ಕ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ ಗಮನ ಸೆಳೆದಿದ್ದಾರೆ.

‘ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಅದಿರಿನ ಪೈಕಿ ಶೇ 40ರಷ್ಟು ಸಂಡೂರಿನ ರಸ್ತೆಗಳ ಮೂಲಕವೇ ಸಾಗಣೆಯಾಗುತ್ತದೆ. ಈ ರಸ್ತೆಗಳಲ್ಲಿ ನಡೆಯುವ ಅಪಘಾತಗಳು ಜನರ ಜೀವವನ್ನು ಹಿಂಡಿವೆ. ಸಂಡೂರಿನಿಂದ ಕಮತೂರಿನವರೆಗೆ ಪುನಶ್ಚೇತನ ಎಂಬುದು ನಿಜಕಾಣ್ಕೆಯಾಗಲು ಇನ್ನೆಷ್ಟು ಹೋರಾಟ ನಡೆಯಬೇಕು’ ಎಂಬುದು ಜನ ಸಂಗ್ರಾಮ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಮಾಳಗಿ ಮತ್ತು ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಆಲ್ದಳ್ಳಿ ಅವರ ಹಲವು ವರ್ಷಗಳ ಪ್ರಶ್ನೆ, ಆಗ್ರಹ.

ಮತ್ತೆ ಕಮತೂರಿಗೆ ಮರಳಿದರೆ, ಅವರಿಗೆ ತಮ್ಮ ಪರವಾಗಿ ಹೊರಜಗತ್ತಿನಲ್ಲಿ ನಡೆಯುತ್ತಿರುವ ಈ ವಾಗ್ವಾದಗಳು, ಯೋಜನೆಗಳ ಕುರಿತು ಚರ್ಚಿಸಲು ವ್ಯವಧಾನವಿಲ್ಲ. ಇರುವ ನೆಲದಲ್ಲೇ ಒಂದು ಸಹನೀಯ ಬದುಕು ದೊರೆತರೆ ಸಾಕು.

ಹೊರಗಿನವರಿಗೆ ಇದು ಸಾವಿರಾರು ಕೋಟಿ ರೂಪಾಯಿಗಳ ದೊಡ್ಡ ಮಾತು. ಒಳಗಿನವರಿಗೆ ಮಾತ್ರ ತಮಗೆ ಬೇಕಾದ್ದನ್ನು ಬೆಳೆದುಕೊಳ್ಳಲು ಇಷ್ಟು ತುಂಡು ಭೂಮಿ, ಎರಡು ಹೊತ್ತಿನ ಊಟ, ನೆಮ್ಮದಿಯ ನಿದ್ರೆ. ಆದರೆ ಗಣಿಗಾರಿಕೆ ಇಷ್ಟನ್ನೂ ದುಬಾರಿ ಮಾಡಿದೆ. ವರವೇ ಶಾಪವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry