7

ಓಡುಪ್ಪಾಳೆ-ತುಳುನಾಡ ಸಿರಿ

Published:
Updated:
ಓಡುಪ್ಪಾಳೆ-ತುಳುನಾಡ ಸಿರಿ

–ಕೃಷ್ಣವೇಣಿ ಕಿದೂರು

‘ಅಪ್ಪೇ. ಅಮ್ಮೆರ್ ಬತ್ತೆರ್’ ತುಳುಭಾಷಿಗರು  ಹಾಗೆ ಕರೆದರೆ ಅಲ್ಲಿ ಅಪ್ಪೆ ಎಂದರೆ ತಾಯಿ; ಅಮ್ಮೆರ್ ಎಂದರೆ  ಅದು ತಂದೆ. ಬಂಧುಗಳು ಮಕ್ಕಳ ಬಳಿ ಅಪ್ಪೆ, ಅಮ್ಮೆ ಎಂಚ ಉಲ್ಲೆರ್ ಅಂತ ವಿಚಾರಿಸಿದರೆ ಮೊದಲಿನ ಸಂಭೋದನೆ ತಾಯಿಯನ್ನು, ಎರಡನೆಯದು ತಂದೆಯನ್ನು ಉದ್ದೇಶಿಸಿ ಇರುತ್ತದೆ. ಹೀಗ್ಯಾಕೆ ಬಂತು ಅಂದರೆ ಅರ್ಧ ತುಳುನಾಡು, ಇನ್ನರ್ಧ ಮಲಯಾಳ ರಾಜ್ಯಕ್ಕೆ ಸೇರಿದ ನನಗೆ ತಿಳಿಯದು.

ಪ್ರಾಥಮಿಕ ಶಾಲೆಯಲ್ಲಿ (ಕೇರಳ) ಪ್ರಾಣಸ್ನೇಹಿತೆ ಅಕ್ಕಮ್ಮ ಇದ್ದಳು. ನಾವು ಬೆಳಗ್ಗೆ ಮನೆಯಲ್ಲಿ ಕುಚ್ಚಲಕ್ಕಿ ಗಂಜಿಯೂಟ ಉಂಡು, ಮಧ್ಯಾಹ್ನದ ಬುತ್ತಿಗೆ ಅದನ್ನು ತುಂಬಿ, ಮೇಲೊಂದಿಷ್ಟು ಮಜ್ಜಿಗೆ , ಒಂದು ಮಾವಿನ ಮಿಡಿ ಉಪ್ಪಿನಕಾಯಿ ಹಾಕಿ ತರುವವರು.

ಪಕ್ಕದಲ್ಲಿ ಕೂತು ಅಕ್ಕಮ್ಮ ಬುತ್ತಿ ಬಿಚ್ಚಿ ಉಣ್ಣುವಾಗ ಮಧ್ಯಾಹ್ನಕ್ಕೆ ಹುಳಿ ಬಂದು ಗಂಟಲಿನಲ್ಲಿ ಸಿಕ್ಕಿಹಾಕೊಳ್ಳುವ ಮಜ್ಜಿಗೆ ಅನ್ನ ನುಂಗಲಾರದೆ ಅಕ್, ಅಕ್ ಎಂದು ಆಗಿ ನೀರು ಕುಡಿಯುವಾಗ, ಕೇದಿಗೆ ಮೈಬಣ್ಣದ ಬಲುಸುಂದರಿ ಅಕ್ಕಮ್ಮ ಹಾಯಾಗಿ  ಬುತ್ತಿಯಿಂದ ಓಡುಪ್ಪಳೆ ತುಂಡು ಮಾಡಿ ಮುನ್ನಾ ದಿನ ರಾತ್ರೆಯ ಬಂಗುಡೆ ಕರಿಯಲ್ಲಿ ಅದ್ದಿ ತಿನ್ನುತ್ತಿದ್ದಳು.

ಕೆಂಪು ಕೆಂಪು ರಸ ಕಾಣುವಾಗ ಬೆಪ್ಪುತಕ್ಕಡಿಗಳಾದ ನಮಗೆ ಅದು ಮೀನು ಕರಿ ಎಂಬ ಅರಿವಿರುತ್ತಿರಲಿಲ್ಲ. ನಾವೋ ಸಸ್ಯಾಹಾರಿಗಳು. ನಮ್ಮ ವಾರೆಗಣ್ಣು ಅವಳ ಬುತ್ತಿಯ ಬೆಳ್ಳಗೆ ಜೇನಿನ ಎರೆಯ ಹಾಗೆ ಕಣ್ಣು ಕಣ್ಣುಗಳಿರುವ ಓಡುಪ್ಪಳೆಯ ತುಂಡಿನ ಮೇಲಿರುವುದು ಅವಳಿಗೂ ಗೊತ್ತು. ಆಕೆ ಅವಳ ಆಹಾರಕ್ಕೆ ದೃಷ್ಟಿಯಾಗದಿರಲಿ ನಮ್ಮಿಂದ ಎಂದು ಚಿಕ್ಕದೊಂದು ತುಂಡು ತೆಗೆದು ನೆಲಕ್ಕೆ ಹಾಕುವ ಜಾಣೆ.

ಹುಣ್ಣಿಮೆ ಚಂದಿರನ ಹಾಗಿರುವ ಬಿಳಿ ಬಿಳಿ ಓಡುಪ್ಪಾಳೆ ನಮ್ಮಲ್ಲಿ ಮಾಡುವ ಪದ್ಧತಿಯಿಲ್ಲ. ಏಳೆಂಟು ವರ್ಷದ ನಮಗೆ ಆಕೆಯ ಬುತ್ತಿಯಲ್ಲಿ ಕಾಣುವಾಗ ಆಸೆ ಹುಟ್ಟಿದರೆ ತಪ್ಪೇನಿದೆ. ಬಲು ಸಹೃದಯಿ ಅಕ್ಕಮ್ಮ ಒಮ್ಮೆ ಗುಟ್ಟಾಗಿ ಒಂದು ತುಂಡು ಓಡುಪ್ಪಾಳೆ ಕೊಟ್ಟಳು. ಚೂರು ಚೂರೇ ತಿಂದರೂ ಮುಗಿಯಿತು, ಅದರ ಸ್ವಾದ  ಹಾಗೇ ಉಳಿಯಿತು.

ಮನೆಗೆ ಬಂದು ಓಡುಪ್ಪಾಳೆ ಮಾಡಿಕೊಡಿ ಎಂದು ಹಟ ಹಿಡಿದಾಗ ಪ್ರಾಥಮಿಕ ತನಿಖೆ ಶುರುವಾಯಿತು. ‘ಎಲ್ಲಿ ತಿಂದೆ? ಯಾರು ಕೊಟ್ಟರು?’  ಸತ್ಯ ಹೇಳಿದೆ. ‘ಅಯ್ಯೋ, ಅವರಲ್ಲಿ  ಬಂಗುಡೆ, ಭೂತಾಯಿ ಸಾರಿಗೆ ಹಾಕಿದ ಸೌಟಿನಲ್ಲೇ ಓಡುಪ್ಪಾಳೆ ಹಿಟ್ಟು ಕಲಸುತ್ತಾರೆ’.

‘ಮೀನು ತಿಂದ ಹಾಗಾಯ್ತು ನೀನು’ ಅಂದಾಗ ಭೋರನೆ ಅಳು, ಭೀತಿ. ಕಡೆಗೂ ಅದು ಸತ್ಯವಲ್ಲ ಎಂದು ಗೊತ್ತಾಗಿ ಮಾರನೆ ದಿನ ಶನಿವಾರ; ರಜಾದಿನ ಅಂದು ಮಾಡೋಣ ಅಂತ ನಮ್ಮಲ್ಲಿ ಓಡುಪ್ಪಾಳೆ ಮಾಡಿದರು.ಬಿಳಿ ಬಿಳಿಯ ಪೂರ್ಣ ಚಂದ್ರಮನ ಹಾಗಿದ್ದ ಆ ತಿಂಡಿ ತಿಂದಾಗ ನಿತ್ಯದ ಗಂಜಿ, ದೋಸೆಗಿಂತ ಇದೇ ಸವಿ ಅನ್ನಿಸಿದ್ದು ನಿಜ. ‘ಅವರಲ್ಲಿ ದಿನಾ ಮಾಡ್ತಾರೆ; ನಮ್ಮಲ್ಲಿ ಯಾಕಿಲ್ಲ’ ಅಂದಾಗ ‘ಅವರಿಗೆಲ್ಲ ಗದ್ದೆ, ತೋಟ ಎಂದು ದುಡಿಯುವಾಗ ಗಟ್ಟಿ ತಿಂಡಿ ಆಗಬೇಕು; ಹೊಟ್ಟೆಗೆ ಗಟ್ಟಿ ಅಂತ ನಿತ್ಯ ಮಾಡ್ತಾರೆ’ ಅಂತ ಗೊತ್ತಾಯಿತು

ತೋಟದ ಕೆಲಸದ ಮಾನಕ್ಕ ಗುಟ್ಟಾಗಿ ‘ಹಿಟ್ಟಿಗೆ ಸ್ವಲ್ಪ ವಾಟೀಸು’ ಹಾಕಿದರೆ ಮೆತ್ತಗೆ ಜೇನಿನ ಎರೆ ಹಾಗೆ ಆಗುವುದು; ನೀವು ಮಾಡಿದರೆ ಹಾಗೆ ಆಗದು ಅಂತ ಗುಟ್ಟು ಬಿಟ್ಟುಕೊಟ್ಟಳು. ಅಂದ ಹಾಗೆ ‘ವಾಟೀಸು’ ಅಂದರೆ ತುಳುಭಾಷೆಯಲ್ಲಿ ಕಳ್ಳು ಎಂದು ಅರ್ಥ.

ಕರಾವಳಿಯ ತುಳುವರ ಅಚ್ಚುಮೆಚ್ಚಿನ ತಿಂಡಿ ಓಡುಪ್ಪಾಳೆ. ಮಂಗಳೂರು, ಪುತ್ತೂರು ಕಡೆಯ ಹಳ್ಳಿಯ ಹೋಟೆಲ್‌ಗಳಲ್ಲಿ ಸಿಗಬಹುದು. ಬೆಳ್ತಿಗೆ ಅಕ್ಕಿಗೆ ಸ್ವಲ್ಪ ಕುಸುಬಲಕ್ಕಿ ಹಾಕಿ ಮುನ್ನಾದಿನ ರಾತ್ರಿ ನೆನೆಸಬೇಕು. ಮರುದಿನ ನುಣ್ಣಗೆ ಅರೆದು, ದೋಸೆ ಹಿಟ್ಟಿನ ಹದಕ್ಕೆ ಮಾಡಿ ಅ ತಿನಿಸಿಗಾಗಿ ಸ್ಪೆಷಲ್ ಆಗಿ ಸಿಗುವ ಮಣ್ಣಿನ ಓಡು (ಇದು ಉರುಟಾಗಿದ್ದು ತಳದಲ್ಲಿ ಎರಡಿಂಚಿನಷ್ಟು ಆಳ ಇರುತ್ತದೆ) ಒಲೆಗಿಡಬೇಕು.

ಅದು ಚೆನ್ನಾಗಿ ಕಾದು ಬಿಸಿ ಹಬೆಯೇಳುವಾಗ ತೆಂಗಿನ ಕರಟದಲ್ಲಿ ಹಿಟ್ಟು ತುಂಬಿಸಿ ಮಣ್ಣಿನ ಓಡಿಗೆ  ಎರೆದು ಮುಚ್ಚಿದರಾಯ್ತು. ಬೇಯಲು ತುಸು ಹೆಚ್ಚು ಹೊತ್ತು ತೆಗೆದುಕೊಳ್ಳುತ್ತದೆ. ಬಾವಡೆ ತೆಗೆದಾಗ ಅಲ್ಲಿ  ನೂರಾರು ಕಣ್ಣು ಕಣ್ಣು ಇರುವ ಬೆಳ್ಳಗಿನ, ಉರುಟುರುಟಾದ ಓಡುಪ್ಪಾಳೆ ಕಾವಲಿಗೆ ಸಟ್ಟುಗಕ್ಕೆ ಸಿಕ್ಕಿ ವಿಧೇಯವಾಗಿ ಎದ್ದು ಬರುತ್ತದೆ.

ಈ ತಿಂಡಿಗೆ ಕಾಯಿ ಪೇರ್ (ತೆಂಗಿನ ತುರಿಗೆ  ತುಸು ಬೆಲ್ಲ ಹಾಕಿ ಅರೆದು ಅದನ್ನು   ಕ್ಲೀನಾದ ಹತ್ತಿ ಬಟ್ಟೆಗೆ ಹಾಕಿ ಹಿಂಡಿ ತೆಗೆದಾಗ ಸಿಗುವ ಹಾಲು ಕಾಯಿ ಪೇರ್. ಅಂದರೆ ತುಳುಭಾಷೆಯಲ್ಲಿ ಕಾಯಿಹಾಲು.

ಇದು ಉತ್ತಮ ಕಾಂಬಿನೇಶನ್. ತೆಳ್ಳಗಿನ ನಾಲ್ಕು ದೋಸೆ ತಿನ್ನುವವರಿಗೆ ಈ ತಿಂಡಿ ಎರಡು ತಿನ್ನುವಲ್ಲಿ ಹೊಟ್ಟೆ ತುಂಬುತ್ತದೆ.  ಅದ್ಭುತ ರುಚಿಯ, ತುಂಡು ಮುರಿಯುವಾಗ ಥೇಟ್ ಜೇನಿನ ಎರೆಯಂತೆ ಕಾಣುವ ಓಡುಪ್ಪಾಳೆ ತುಳುವರು ತಯಾರಿಸಿದ ಹಾಗೆ  ಛಪ್ಪನ್ನೈವತ್ತಾರು  ದೇಶಿಗರಿಂದಲೂ ತಯಾರಿಸಲು ಅಸಾಧ್ಯ.

ಮುನ್ನಾ ರಾತ್ರೆಯ ಸಿಗಡಿ ಗಸಿಯ ರುಚಿ ನನಗರಿಯದು; ಆದರೆ ಅದೇ ಬಲು ರುಚಿ ಅಂತ ಅಕ್ಕಮ್ಮನ ಉವಾಚ. ಈಗೆಲ್ಲಿದ್ದಾಳೋ  ಆಕೆ. ಓಡುಪ್ಪಾಳೆ ತಿನ್ನುವಾಗ ನನ್ನ ದೃಷ್ಟಿಯಾಗದಿರಲಿ ಅಂತ ಬಲು ಚಿಕ್ಕ ಚೂರು ತೆಗೆದು ಕೊಟ್ಟ ಆ ತುಳುನಾಡ  ಕೇದಗೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry