ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜಾ ಕಾಲದ ಮೋಜಿಗೆ ಜೆಸ್ಕಿ ಕ್ರುಮ್ಲೊಫ್

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

– ಶೈಲಜಾ, ಸಂದೀಪ್ ಶಾಸ್ತ್ರಿ

ಯುರೋಪಿನ ಜೆಕ್ ಗಣರಾಜ್ಯವು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ದೇಶಗಳಲ್ಲಿ ಒಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಪರಿವರ್ತನೆ ಕಂಡಿದೆ. ಈ ದೇಶದ ರಾಜಧಾನಿ ಪ್ರಾಗ್ ನಗರಕ್ಕೆ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ, ಅಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಿದ್ದಾರೆ.

ಪ್ರಾಗ್ ನಗರದ ಇತಿಹಾಸ ಮತ್ತು ಸಂಸ್ಕೃತಿ ಶ್ರೀಮಂತವಾಗಿದೆ. ಈ ಸುಂದರ ದೇಶದಲ್ಲಿ ರಜಾ ಕಾಲದ ಮೋಜು ಅನುಭವಿಸುವ ತಾಣವಾಗಿ ವೇಗವಾಗಿ ಅಭಿವೃದ್ಧಿಹೊಂದುತ್ತಿರುವ ಸುಂದರ ಪಟ್ಟಣದ ಹೆಸರು ಜೆಸ್ಕಿ ಕ್ರುಮ್ಲೊಫ್.

ಜೆಕ್ ಗಣರಾಜ್ಯದ ದಕ್ಷಿಣ ಬೊಹಿಮಿಯಾ ಪ್ರಾಂತ್ಯದಲ್ಲಿರುವ ಈ ನಗರದ ಮೂಲಕ ವೊಲ್ಟಾವಾ ನದಿ ಹರಿದು ಹೋಗಿದೆ. ‘ಬಾಗಿದ ಹುಲ್ಲುಗಾವಲು’ ಎಂಬ ಅರ್ಥ ನೀಡುವ ಜರ್ಮನ್ ಭಾಷೆಯ ಪದ ‘ಕ್ರಮ್ ಆವ್’ನಿಂದ ಕ್ರುಮ್ಲೊಫ್‌ ಎನ್ನುವ ಹೆಸರು ಬಂದಿದೆ. ಇದಕ್ಕೆ ಜೆಸ್ಕಿ ಎನ್ನುವ ಪದ ಸೇರಿಸಲಾಯಿತು.

ಈ ಪಟ್ಟಣದ ವಾಸಿಗಳ ಸಂಖ್ಯೆ 14 ಸಾವಿರ ಮಾತ್ರ. ಆದರೆ ಈಚಿನ ವರ್ಷಗಳಲ್ಲಿ ಜೆಸ್ಕಿ ಕ್ರುಮ್ಲೊಫ್‌ ಪಟ್ಟಣವು ವಾರ್ಷಿಕ 20 ಲಕ್ಷಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಸೆಳೆದಿದೆ. ಈ ಪಟ್ಟಣದ ಹಲವು ಚಟುವಟಿಕೆಗಳು ಪ್ರವಾಸೋದ್ಯಮದ ಸುತ್ತ ಸುತ್ತುತ್ತವೆ ಎಂಬುದು ಸ್ಪಷ್ಟ. ಚೆಂದದ ಊರು ಜನರನ್ನು ಆಕರ್ಷಿಸಲು ಕಾರಣ ಏನು? ಈ ಪಟ್ಟಣವನ್ನು 1992ರಲ್ಲಿ ‘ಯುನೆಸ್ಕೊ’ದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು. 13ನೆಯ ಶತಮಾನದ ಕೋಟೆ ಇಲ್ಲಿದೆ.

ಗೋಥಿಕ್ ಪುನರುತ್ಥಾನ ವಿನ್ಯಾಸದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಬರೋಕ್ ಶೈಲಿಯ ಪ್ರಮುಖ ರಚನೆಗಳೂ ಇವೆ. 32 ಎಕರೆ ವಿಸ್ತೀರ್ಣದ ಉದ್ಯಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಬೆಳಗಿನ ವೇಳೆಯಲ್ಲಿ ಆರಾಮವಾಗಿ ಸುತ್ತಾಡಲು ಇದು ಹೇಳಿ ಮಾಡಿಸಿದ ಸ್ಥಳ. ಹಳೆಯ ಕಾಲದ ಭವ್ಯತೆ ಹಾಗೂ ಶೈಲಿಯನ್ನು ಉಳಿಸಿಕೊಂಡಿರುವ ವಿಶಾಲವಾದ ಕೊಠಡಿಗಳನ್ನು ಇಲ್ಲಿ ವೀಕ್ಷಿಸಬಹುದು.

ಕೋಟೆ ವಸ್ತುಸಂಗ್ರಹಾಲಯದ ಅನನ್ಯ ವಸ್ತುಗಳನ್ನು ನೋಡಬಹುದು ಅಥವಾ ಸುಮ್ಮನೆ ಸುತ್ತಾಡುತ್ತ ಕೋಟೆ ಉದ್ಯಾನದ ಸೌಂದರ್ಯವನ್ನು ಆಸ್ವಾದಿಸಬಹುದು. ಅಲ್ಲದೆ, ಈ ಸ್ಥಳದ ಸೌಂದರ್ಯದಲ್ಲಿ ಮುಳುಗೇಳುವ ಅವಕಾಶ ಕೂಡ ಪ್ರವಾಸಿಗರಿಗೆ ದೊರೆಯುತ್ತದೆ.

ಪಟ್ಟಣವನ್ನು ನದಿ ಪ್ರವೇಶಿಸುವುದನ್ನು, ಪಟ್ಟಣದಿಂದ ನದಿ ಹೊರಕ್ಕೆ ಹರಿಯುವುದನ್ನು ನೋಡಬಹುದು. ಪ್ರಾಗ್‌ನಲ್ಲಿರುವ ಕೋಟೆಯನ್ನು ಹೊರತುಪಡಿಸಿದರೆ, ಇಲ್ಲಿರುವುದು ಜೆಕ್ ಗಣರಾಜ್ಯದಲ್ಲಿನ ಅತಿದೊಡ್ಡ ಕೋಟೆ.

ಜೆಸ್ಕಿ ಕ್ರುಮ್ಲೊಫ್ ಪಟ್ಟಣ ಸುತ್ತಾಡಲು ವಾಹನ ಸೌಲಭ್ಯದ ಅಗತ್ಯ ಇಲ್ಲ. ಪಟ್ಟಣದ ಎಲ್ಲ ಸ್ಥಳಗಳನ್ನೂ ಕಾಲ್ನಡಿಗೆಯಲ್ಲೇ ಸುತ್ತಬಹುದು. ಜನರೆಲ್ಲ ಒಟ್ಟಿಗೆ ಸೇರಲು ಬಳಸುವ ಸ್ಥಳ ಜೆಸ್ಕಿ ಕ್ರುಮ್ಲೊಫ್‌ ಪಟ್ಟಣದ ಕೇಂದ್ರದಲ್ಲಿ ಇದೆ. ಯುರೋಪಿನ ಬಹುತೇಕ ನಗರ, ಪಟ್ಟಣಗಳಲ್ಲಿ ಇದೇ ರೀತಿಯ ಸ್ಥಳ ಇರುತ್ತದೆ. ಪಟ್ಟಣದ ಎಲ್ಲ ಬೀದಿಗಳು ಈ ಕೇಂದ್ರವನ್ನು ಸೇರುತ್ತವೆ.

ಕೆಫೆಗಳು, ಸಣ್ಣ ರೆಸ್ಟೊರೆಂಟ್‌ಗಳು, ಬಾರ್‌ಗಳು ಹಾಗೂ ಸಣ್ಣ ಅಂಗಡಿಗಳನ್ನು ಈ ಬೀದಿಗಳಲ್ಲಿ ಕಾಣಬಹುದು. ಇಲ್ಲಿನ ಎಲ್ಲಾ ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಸ್ಥಳೀಯ ತಿನಿಸುಗಳ ರುಚಿ ಸವಿಯಬಹುದು. ಆದರೆ, ಅಲ್ಲಿ ವಿಶ್ವದ ಎಲ್ಲ ಕಡೆಗಳ ಆಹಾರ ಲಭ್ಯ.

ಸಸ್ಯಾಹಾರಿಗಳಾದ ನಾವು ಲಾಯ್ಬನ್ ಎನ್ನುವ ಸಸ್ಯಾಹಾರಿ ರೆಸ್ಟೊರೆಂಟ್‌ ಅಲ್ಲಿ ಇದ್ದಿದ್ದನ್ನು ನೋಡಿ ಖುಷಿಪಟ್ಟೆವು. ಭಾರತದ ಪ್ರವಾಸಿಗರು ಇಲ್ಲಿಗೆ ಬರುವುದು ಬಹಳ ಅಪರೂಪವಾಗಿರುವ ಕಾರಣ, ನಮ್ಮನ್ನು ಕಂಡ ಆ ರೆಸ್ಟೊರೆಂಟ್‌ ಮಾಲೀಕ ಡೇವಿಡ್‌ ಬಹಳ ಖುಷಿಪಟ್ಟರು.

ಡೇವಿಡ್‌ ಅವರು ಸಾಕಷ್ಟು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರಂತೆ. ನಮ್ಮ ಊಟದ ಜೊತೆ ಭಾರತದ ಕುರಿತು ಡೇವಿಡ್‌ ಆಡುವ ಮಾತುಗಳೂ ಇರುತ್ತಿದ್ದವು. ಅಲ್ಲಿನ ಕೆಫೆಗಳು ಹಾಗೂ ಬಾರ್‌ಗಳು ತಡರಾತ್ರಿಯವರೆಗೂ ತೆರೆದಿರುತ್ತವೆ. ತಮ್ಮಲ್ಲಿ ಸಿಗುವ ಬಿಯರ್‌ ಬಗ್ಗೆ ಸ್ಥಳೀಯರಿಗೆ ಬಹಳ ಹೆಮ್ಮಿಯಿದೆ. ಅವರು ಅದನ್ನು ಅಪಾರ ಉತ್ಸಾಹದಿಂದ, ಖುಷಿಯಿಂದ ಮಾರಾಟ ಮಾಡುತ್ತಾರೆ.

ಇಲ್ಲಿನ ಸಿಹಿ ತಿನಿಸು ‘ತ್ರದಾಲ್ನಿಕ್‌’ನ ರುಚಿ ಆಸ್ವಾದಿಸುವುದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದು ಟೊಳ್ಳಾಗಿರುವ ಇರುವ ಸಿಹಿ ಪೇಸ್ಟ್ರಿ. ಟೊಳ್ಳಿನಲ್ಲಿ ವೆನಿಲ್ಲಾ, ಐಸ್‌ ಕ್ರೀಂ ಅಥವಾ ಚಾಕೊಲೇಟ್‌ ತುಂಬಿಸಬಹುದು. ಇದರ ರುಚಿಯನ್ನು ಸವಿಯದಿದ್ದರೆ ಜೆಸ್ಕಿ ಕ್ರುಮ್ಲೊಫ್‌ ಪ್ರವಾಸ ಪೂರ್ಣವಾಗುವುದಿಲ್ಲ. ಇಲ್ಲಿನ ಹವ್ಯಾಸಿ ಕಲಾವಿದರು ಸ್ಥಳೀಯ ಸಂಗೀತ ನುಡಿಸುವುದನ್ನು ರಸ್ತೆ ಬದಿಗಳಲ್ಲಿ ಕಾಣಬಹುದು.

ಕೋಟೆಯಲ್ಲಿ ಸುತ್ತಾಡುವುದು ಮತ್ತು ಕಲ್ಲುಹಾಸಿನ ಬೀದಿಗಳಲ್ಲಿ ನಡೆಯುವುದು, ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವುದು ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದು ಮಾತ್ರವಲ್ಲದೆ ವೊಲ್ಟಾವಾ ನದಿಯಲ್ಲಿ ದೋಣಿ ವಿಹಾರ ನಡೆಸುವುದು ಕೂಡ ಇಲ್ಲಿ ಮಾಡಬೇಕಾದ ಬಹುಮುಖ್ಯ ಕೆಲಸ. ದೋಣಿಯಲ್ಲಿ ಸಾಗುವಾಗ ಪಟ್ಟಣದ ಸುಂದರ ದೃಶ್ಯಗಳು ಕಾಣುತ್ತವೆ.

ದೋಣಿ ವಿಹಾರವು ಒಂದು ತಾಸಿಗಿಂತ ತುಸು ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಆ ಸಮಯದಲ್ಲಿ ನಗರದ ಬೇರೆ ಬೇರೆ ಭಾಗಗಳನ್ನು ವೀಕ್ಷಿಸಬಹುದು. 2002ರ ಆಗಸ್ಟ್‌ನಲ್ಲಿ ಈ ಪಟ್ಟಣವು ದಿಢೀರ್‌ ಪ್ರವಾಹಕ್ಕೆ ತುತ್ತಾಯಿತು. ಇಲ್ಲಿನ ಎಲ್ಲ ಕಟ್ಟಡಗಳ ಗೋಡೆಗಳ ಮೇಲೆ ನೀರಿನ ಗರಿಷ್ಠ ಮಟ್ಟ ಏನಿತ್ತು ಎಂಬುದನ್ನು ಸೂಚಿಸುವ ಗುರುತುಗಳಿವೆ.

ಜೆಸ್ಕಿ ಕ್ರುಮ್ಲೊಫ್‌‌ನಲ್ಲಿ ಉಳಿದುಕೊಳ್ಳಲು ಸಾಕಷ್ಟು ಸ್ಥಳಗಳಿವೆ. ಇಲ್ಲಿ ಕೆಲವು ದುಬಾರಿ ಹೋಟೆಲ್‌ಗಳು ಇವೆ. ಆದರೆ, ಯುರೋಪ್‌ನಲ್ಲಿ ‘ಪೆನ್ಷನ್’ ಎಂದು ಕರೆಯಲಾಗುವ ಅತಿಥಿ ಗೃಹ ಅಥವಾ ವಸತಿ ಗೃಹದಲ್ಲಿ ಉಳಿದುಕೊಳ್ಳಲು ಹೆಚ್ಚಿನ ಪ್ರವಾಸಿಗರು ಬಯಸುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ, ಸ್ಥಳೀಯರು ತಮ್ಮ ಮನೆಗಳಲ್ಲೇ ಒಂದು ಕೊಠಡಿಯನ್ನು ಬಾಡಿಗೆಗೆ ನೀಡುತ್ತಾರೆ.

ಪ್ರವಾಸೋದ್ಯಮವೇ ಮುಖ್ಯ ಉದ್ಯಮವಾಗಿರುವ ಈ ಪಟ್ಟಣದಲ್ಲಿ ‘ಪೆನ್ಷನ್‌’ಗಳು ಬಹಳ ಹೆಸರುವಾಸಿ. ಬಹುತೇಕ ‘ಪೆನ್ಷನ್‌’ಗಳಲ್ಲಿ ಬೆಳಗಿನ ಉಪಾಹಾರದ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆ ಇಲ್ಲದಿದ್ದರೂ, ಹತ್ತಿರದ ರೆಸ್ಟೊರೆಂಟ್‌ಗಳಲ್ಲಿ ತಿಂಡಿ – ಊಟ ಮಾಡಬಹುದು.

ನಾವು ವೊಲ್ಟಾವಾ ನದಿಯ ದಂಡೆಯ ಮೇಲಿರುವ ಒಂದು ಅತ್ಯಂತ ಹಳೆಯ ‘ಪೆನ್ಷನ್‌’ನಲ್ಲಿ ಉಳಿದುಕೊಂಡಿದ್ದೆವು. 2002ರ ಪ್ರವಾಹದ ವೇಳೆ ಇದು ಸಂಪೂರ್ಣವಾಗಿ ನಾಶವಾಗಿತ್ತು. ನಂತರ ಇದನ್ನು ಪುನಃ ನಿರ್ಮಿಸಲಾಯಿತು.

ಪ್ರಾಗ್‌ನಿಂದ ಬಸ್‌ ಹತ್ತಿ ಮೂರು ತಾಸು ಪ್ರಯಾಣಿಸಿದರೆ ಜೆಸ್ಕಿ ಕ್ರುಮ್ಲೊಫ್‌ ತಲುಪಬಹುದು. ಪ್ರಾಗ್‌ನ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ನಿಯಮಿತವಾಗಿ ಬಸ್‌ಗಳು ಹೊರಡುತ್ತವೆ. ಅಲ್ಲದೆ, ಟ್ಯಾಕ್ಸಿಯನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೊರಟರೆ ಮೂರು ತಾಸುಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಪಟ್ಟಣ ತಲುಪಬಹುದು. ಪ್ರಾಗ್‌ನಿಂದ ರೈಲಿನ ವ್ಯವಸ್ಥೆ ಕೂಡ ಇದೆ. ಆದರೆ ಮಾರ್ಗದ ಮಧ್ಯೆ ರೈಲು ಬದಲಿಸಬೇಕಿರುವ ಕಾರಣ, ಪ್ರಯಾಣದ ಒಟ್ಟು ಅವಧಿ ಸರಿಸುಮಾರು ನಾಲ್ಕು ತಾಸು ಆಗುತ್ತದೆ. ಬೇಸಿಗೆ ಕಾಲದಲ್ಲಿ ಕೆಲವು ಉತ್ಸಾಹಿಗಳು ಬೈಕ್‌ ಏರಿ ಈ ಪಟ್ಟಣ ತಲುಪುತ್ತಾರೆ.

ಜೆಸ್ಕಿ ಕ್ರುಮ್ಲೊಫ್‌ನಲ್ಲಿ ಒಂದೆರಡು ದಿನಗಳನ್ನು ಕಳೆಯುವುದು ಅದ್ಭುತ ಅನುಭವ. ಇಲ್ಲಿ ಉಳಿದುಕೊಂಡು ಇತಿಹಾಸದ ಮೇಲೆ ನೋಟ ಹರಿಸಬಹುದು, ಅದ್ಭುತ ವ್ಯಕ್ತಿಗಳನ್ನು ಭೇಟಿ ಮಾಡಬಹುದು.

*


ಗಿಟಾರ್‌ ನುಡಿಸಿ ಪ್ರವಾಸಿಗರನ್ನು ರಂಜಿಸುತ್ತಿರುವ ತಂದೆ, ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT