5

ನುಸ್ರತ್‌ ಆದ ಲತಾ ಹೆಗಡೆ

Published:
Updated:
ನುಸ್ರತ್‌ ಆದ ಲತಾ ಹೆಗಡೆ

ತೆಲುಗು, ತಮಿಳು ಭಾಷೆಗಳಲ್ಲಿ ಒಂದೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಲತಾ ಹೆಗಡೆ ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಮೂಲಕ ಚಂದನವನಕ್ಕೂ ಪದಾರ್ಪಣೆ ಮಾಡಿದ್ದರು. ‘ಅತಿರಥ’ ಬಿಡುಗಡೆಗೂ ಮುನ್ನವೇ ವಿನಯ ರಾಜಕುಮಾರ್‌ ನಾಯಕನಾಗಿ ನಟಿಸುತ್ತಿರುವ ‘ಅನಂತು ವರ್ಸಸ್‌ ನುಸ್ರತ್‌’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಸಿಕ್ಕಿದೆ.

‘ಅನಂತು ವರ್ಸಸ್‌ ನುಸ್ರತ್‌’ ಮುಹೂರ್ತ ನಡೆದುಹೋಗಿದ್ದರೂ ನಾಯಕಿ ಯಾರು ಎಂಬುದು ಬಹಿರಂಗಗೊಂಡಿರಲಿಲ್ಲ. ಆ ಕುತೂಹಲಕ್ಕೀಗ ತೆರೆ ಬಿದ್ದಿದೆ. ಲತಾ ನುಸ್ರತ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಇತ್ತೀಚೆಗೆ ಕಾಟನ್‌ ಪೇಟೆಯ ದರ್ಗಾವೊಂದರಲ್ಲಿ ಫೋಟೊಶೂಟ್‌ ಕೂಡ ಮಾಡಲಾಗಿದೆ.

‘ಅತಿರಥ’ ಸಿನಿಮಾದ ರಶಸ್‌ ನೋಡಿದ ವಿನಯ್‌ ಸ್ನೇಹಿತರೊಬ್ಬರು ನನ್ನ ಹೆಸರನ್ನು ಸುಧೀರ್‌ ಶ್ಯಾನುಭೋಗ ಅವರಿಗೆ ಹೇಳಿದರಂತೆ. ಅವರು ನನ್ನನ್ನು ಭೇಟಿಯಾದರು. ನನ್ನನ್ನು ನೋಡಿ ಬರೀ ಹತ್ತು ನಿಮಿಷಕ್ಕೇ ‘ನನ್ನ ಸಿನಿಮಾಗೆ ನೀವೇ ನಾಯಕಿ’ ಎಂದು ಹೇಳಿಬಿಟ್ಟರು. ಆಮೇಲೆ ಕಥೆ ಹೇಳಿದರು. ಕಥೆ ನನಗೆ ತುಂಬ ಇಷ್ಟವಾಯ್ತು. ನಾನು ಇದುವರೆಗೂ ಮಾಡದೇ ಇರುವ ಪಾತ್ರ. ಈ ಚಿತ್ರದಲ್ಲಿ ಅನಂತು ಬ್ರಾಹ್ಮಣ ಹುಡುಗನ ಪಾತ್ರ. ನಾನು ಬ್ರಾಹ್ಮಣರ ಕುಟುಂಬದಲ್ಲಿ ಬೆಳೆದವಳು. ನನಗೆ ಆ ಜಗತ್ತು ಗೊತ್ತಿದೆ. ಆದರೆ ಇಲ್ಲಿ ನನ್ನದು ಮುಸ್ಲಿಂ ಹುಡುಗಿ ಪಾತ್ರ. ಇದೊಂದು ರೀತಿಯಲ್ಲಿ ನನಗೆ ಸವಾಲು. ಆದರೆ ನನಗೆ ಸವಾಲುಗಳೆಂದರೆ ಮೊದಲಿನಿಂದಲೂ ಇಷ್ಟ. ಆದ್ದರಿಂದಲೇ ಒಪ್ಪಿಕೊಂಡೆ’ ಎಂದು ಖುಷಿಯಿಂದಲೇ ನುಸ್ರತ್‌ ಆದ ಬಗೆಯನ್ನು ಹಂಚಿಕೊಳ್ಳುತ್ತಾರೆ ಲತಾ.

ಈ ಪಾತ್ರಕ್ಕಾಗಿ ಲತಾ ಸಾಕಷ್ಟು ಪೂರ್ವ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ನೈಜವಾಗಿ ಇರಬೇಕು ಎಂಬ ಕಾರಣಕ್ಕೆ ಫೋಟೊಶೂಟ್‌ನಲ್ಲಿ ಅವರ ಜತೆ ಒಬ್ಬರು ಮುಸ್ಲಿಂ ಮಹಿಳೆಯನ್ನೂ ನಿಯೋಜಿಸಲಾಗಿತ್ತು. ಅವರು ವೇಷಭೂಷಣಗಳು, ಹಿಜಾಬ್‌ ಧರಿಸುವ ಕುರಿತು ಲತಾ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಹಾಗೆಯೇ ಈ ಚಿತ್ರದಲ್ಲಿ ಲತಾ ಅವರಿಗೆ ಒಂದು ಅರೆಬಿಕ್ ಶಬ್ದಗಳು ಹೆಚ್ಚಾಗಿರುವ ಒಂದು ಹಾಡು ಇದೆ. ಆ ಹಾಡಿಗಾಗಿಯೇ ಅವರು ಅರೆಬಿಕ್ ಶಬ್ದಗಳನ್ನೂ ಕಲಿತುಕೊಳ್ಳುತ್ತಿದ್ದಾರೆ. ಅವರಿಗೆ ನಿರ್ದೇಶಕ ಸುಧೀರ್‌ ಕೂಡ ಸಹಾಯ ಮಾಡುತ್ತಿದ್ದಾರೆ.

ಸುಧೀರ್‌ ಶ್ಯಾನುಭೋಗ್‌ ನಿರ್ದೇಶನದ ‘ಅನಂತು ವರ್ಸಸ್‌ ನುಸ್ರತ್‌’ ಚಿತ್ರೀಕರಣ ಅಕ್ಟೋಬರ್‌ 6ರಿಂದ ಆರಂಭವಾಗಲಿದೆ. ಚಿತ್ರೀಕರಣಕ್ಕೆ ಒಂದು ವಾರ ಮೊದಲು ಲತಾ ಪಾತ್ರದ ಹಾವಭಾವಗಳನ್ನು ಮೈಗೂಡಿಸಿಕೊಳ್ಳಲು ವಿಶೇಷ ತರಬೇತಿಯನ್ನೂ ಪಡೆದುಕೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry