3

ಅರಿವು ವಿಸ್ತರಿಸಿದ ಚಿಂತನೆಗಳ ಹಾದಿ

Published:
Updated:
ಅರಿವು ವಿಸ್ತರಿಸಿದ ಚಿಂತನೆಗಳ ಹಾದಿ

ಸೆಪ್ಟೆಂಬರ್ 6ರಂದು ದೂರದ ಪ್ಯಾರಿಸ್‌ನಲ್ಲಿ ಅಮೆರಿಕದ ಸ್ತ್ರೀವಾದಿ ಲೇಖಕಿ ಹಾಗೂ ಹೋರಾಟಗಾರ್ತಿ ಕೇಟ್ ಮಿಲ್ಲೆಟ್ (82) ತೀರಿಕೊಂಡ ಸುದ್ದಿ ಭಾರತೀಯ ಮಾಧ್ಯಮಗಳಲ್ಲಿ ಹೆಚ್ಚು ಗಮನ ಸೆಳೆದುಕೊಳ್ಳಲಿಲ್ಲ. ಜಾಗತಿಕ ಸ್ತ್ರೀವಾದದ ಚಿಂತನೆಗೆ ಹೊಸ ಹೊಳಹು, ದಿಕ್ಕು ನೀಡಿದವರು ಕೇಟ್ ಮಿಲ್ಲೆಟ್ ಎಂಬುದನ್ನು ನಾವು ಸ್ಮರಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಎಂಬತ್ತರ ದಶಕದ ಆದಿ ಭಾಗದಲ್ಲಿ ಮಹಿಳಾ ಚಳವಳಿ ಚಿಗುರೊಡೆಯುತ್ತಿತ್ತು.

ಅತ್ಯಾಚಾರ, ವಧು ದಹನ, ವರದಕ್ಷಿಣೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಬಿರುಸಿನ ಚರ್ಚೆ, ಹೋರಾಟಗಳು ನಡೆಯುತ್ತಿದ್ದಂತಹ ದಿನಗಳು ಅವು. ಸಮಾಜದಲ್ಲಿ ಹೆಣ್ಣಿಗೇಕೆ ಈ ಅಸಮಾನತೆ ಎಂದು ಕಾಡುವ ಪ್ರಶ್ನೆಗಳಿಗೆ ತಾತ್ವಿಕ ದೃಷ್ಟಿಯನ್ನು ಒದಗಿಸುವ ಗ್ರಂಥಗಳಾಗಿ ಸಿಮೊನ್ ದಿ ಬೊವಾ ಅವರ ‘ದಿ ಸೆಕೆಂಡ್ ಸೆಕ್ಸ್’, ಬೆಟ್ಟಿ ಫ್ರೀಡನ್ ಅವರ ‘ಫೆಮಿನೈನ್ ಮಿಸ್ಟಿಕ್’ ಹಾಗೂ ಕೇಟ್ ಮಿಲ್ಲೆಟ್ ಅವರ ‘ಸೆಕ್ಷುಯಲ್ ಪಾಲಿಟಿಕ್ಸ್’ ಮುಖ್ಯವಾಗಿದ್ದವು.

1949ರಲ್ಲಿ ಪ್ರಕಟವಾದ ‘ದಿ ಸೆಕೆಂಡ್ ಸೆಕ್ಸ್’ ಪುಸ್ತಕದಲ್ಲಿ ‘ಮಹಿಳೆ ಎಂದರೆ ಯಾರು’ ಎಂಬ ಪ್ರಶ್ನೆಗೆ ಉತ್ತರ ಅರಸುವ ಯತ್ನವಿದೆ. ‘ಮನುಷ್ಯ ಎಂದರೆ ಪುರುಷ. ಮಹಿಳೆ ಅನ್ಯಳು (other). ಮಹಿಳೆಯನ್ನು ಸ್ವತಂತ್ರವಾಗಿ ಅಲ್ಲ, ತನಗೆ ಸಂಬಂಧಿಸಿದ ನೆಲೆಯಲ್ಲಿ ಪುರುಷ ಗ್ರಹಿಸುತ್ತಾನೆ’ ಎಂಬಂತಹ ಸಿಮೊನ್ ದಿ ಬೊವಾ ಮಾತುಗಳು ಹೊಸ ಪ್ರಜ್ಞೆಯನ್ನೇ ಹುಟ್ಟುಹಾಕಿತ್ತು. ಫ್ರೆಂಚ್ ಭಾಷೆಯಲ್ಲಿದ್ದ ಈ ಕೃತಿ ಇಂಗ್ಲಿಷ್‌ಗೆ ಅನುವಾದಗೊಂಡಿದ್ದು 1953ರಲ್ಲಿ. ಕನ್ನಡದಲ್ಲೂ ಈ ಕೃತಿಯನ್ನು ಎಚ್.ಎಸ್. ಶ್ರೀಮತಿ ಅವರು ಭಾಷಾಂತರಿಸಿದ್ದು 2011ರಲ್ಲಿ ಪ್ರಕಟವಾಗಿದೆ.

ಪಾಶ್ಚಿಮಾತ್ಯ ಜಗತ್ತಿನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪಡೆದುಕೊಳ್ಳುವ ಹೋರಾಟಗಳು ಮೊದಲನೆಯ ಅಲೆಯ ಸ್ತ್ರೀವಾದವಾಗಿತ್ತು. ಅದರ ಯಶಸ್ಸಿನ ನಂತರ ಸ್ತ್ರೀವಾದದ ತಾತ್ವಿಕತೆಯನ್ನು ನಿರೂಪಿಸುವ ಬಹು ಮುಖ್ಯ ಕೃತಿ ‘ದಿ ಸೆಕೆಂಡ್ ಸೆಕ್ಸ್’.

ಎರಡನೇ ಅಲೆಯ ಸ್ತ್ರೀವಾದದ ಆರಂಭದ ಇಂಗಿತವನ್ನು ಇದು ನೀಡುತ್ತದೆ. ನಂತರ 1963ರಲ್ಲಿ ಪ್ರಕಟವಾದ ಬೆಟ್ಟಿ ಫ್ರೀಡನ್ ಅವರ ‘ದಿ ಫೆಮಿನೈನ್ ಮಿಸ್ಟಿಕ್’ ಪುಸ್ತಕ ಮಹಿಳೆಯರ ಸಮಸ್ಯೆಗಳ ಅರ್ಥೈಸುವಿಕೆಗೆ ಹೊಸ ಹೊಳಹುಗಳನ್ನು ನೀಡಿತ್ತು. ಈ ಪುಸ್ತಕ, ಅಮೆರಿಕದ ಸಾಮಾಜಿಕ ಸ್ವರೂಪವನ್ನೇ ಅಲುಗಾಡಿಸಿತ್ತು

ಹಲವು ಅಮೆರಿಕನ್ ಮಹಿಳೆಯರು 60ರ ದಶಕವನ್ನು ನೆನಪಿಸಿಕೊಳ್ಳುವುದು ಹೇಗೆ ಗೊತ್ತೆ? ಕೆನಡಿ ಸತ್ತಾಗ ಅಥವಾ ಬೆಟ್ಟಿ ಫ್ರೀಡನ್ ಅವರ ಪುಸ್ತಕ ಓದುತ್ತಿದ್ದಾಗ ಎಂದು. ಎಂದರೆ ಈ ಪುಸ್ತಕ ಅಮೆರಿಕನ್ನರ ಪ್ರಜ್ಞೆಯಲ್ಲಿ ಮೂಡಿಸಿದ್ದ ಪ್ರಭಾವವನ್ನು ಗುರುತಿಸಬಹುದು. ಕುಟುಂಬದೊಳಗೆ ಬಂಧನದಲ್ಲಿ ಸಿಲುಕಿದಂತಹ ಭಾವನೆಗಳನ್ನು ಸುಶಿಕ್ಷಿತ ಮಧ್ಯಮವರ್ಗದ ಮಹಿಳೆಯರು ಈ ಪುಸ್ತಕಕ್ಕಾಗಿ ನಡೆಸಲಾದ ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದರು.

ಇದೊಂದು ರೀತಿ ‘ಹೆಸರಿಲ್ಲದ ಸಮಸ್ಯೆ’. ‘ಅಪೂರ್ಣ’ ಎನಿಸುವಂತಹ ವಿಷಣ್ಣ ಭಾವನೆಯದು. ಇಂತಹ ಭಾವನೆಯನ್ನು ಟ್ರಾಂಕ್ವಿಲೈಸರ್, ಅಲಂಕಾರ ಅಥವಾ ಹೆಚ್ಚು ಮಕ್ಕಳನ್ನು ಪಡೆಯುವ ಮೂಲಕ ಸರಿ ಮಾಡಿಕೊಳ್ಳಲು ಈ ಮಹಿಳೆಯರು ಯತ್ನಿಸುತ್ತಿದ್ದರು. ಆದರೆ, ಸಂತೃಪ್ತ ಸಂಸಾರವನ್ನೂ ಮೀರಿ ಏನನ್ನಾದರೂ ಸಾಧಿಸಲು ಮಹಿಳೆ ಬಯಸುತ್ತಾಳೆ ಎಂಬ ವಿಚಾರವೇ ಸಭ್ಯ ಸಮಾಜಕ್ಕೆ ಆಗ ಆಘಾತಕಾರಿ ಎನಿಸಿತ್ತು. ನಂತರ, 1970ರಲ್ಲಿ ಪ್ರಕಟವಾದ ಕೇಟ್ ಮಿಲ್ಲೆಟ್ ಅವರ ‘ಸೆಕ್ಷುಯಲ್ ಪಾಲಿಟಿಕ್ಸ್’ ಅನ್ನು ‘ದಿ ಫೆಮಿನೈನ್ ಮಿಸ್ಟಿಕ್’ನ ಮಗಳು ಎದು ಬಣ್ಣಿಸಲಾಗುತ್ತದೆ.

ಮಹಿಳೆಯರಿಗೆ ಮತದಾನದ ಹಕ್ಕು ಸೇರಿದಂತೆ ಕಾನೂನು ನೀಡುವ ಹಕ್ಕುಗಳಾಚೆಗೆ ಮಹಿಳಾ ಹಕ್ಕುಗಳ ಪರಿಕಲ್ಪನೆಯನ್ನು ಮುಂದಕ್ಕೊಯ್ಯಲು ಸ್ತ್ರೀವಾದದ ಎರಡನೇ ಅಲೆಯ ಹೋರಾಟಗಾರರು ಶ್ರಮಿಸಿದರು ಎಂಬುದು ಇಲ್ಲಿ ಮುಖ್ಯ. ಉದ್ಯೋಗದ ಸ್ಥಳದಲ್ಲಿ ಸಮಾನತೆ, ವಿವಾಹದೊಳಗೆ ಸಮಾನತೆ ಹಾಗೂ ಲೈಂಗಿಕ ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ಅವರು ವಿಸ್ತರಿಸಿದರು.

ಲೈಂಗಿಕತೆಯ ರಾಜಕೀಯ ಆಯಾಮವನ್ನು ‘ಸೆಕ್ಷುಯಲ್ ಪಾಲಿಟಿಕ್ಸ್’ ಪುಸ್ತಕ ವಿವರಿಸುತ್ತದೆ. ಮಹಿಳೆಯ ದಮನದಲ್ಲಿ ಪಿತೃಪ್ರಧಾನ ವ್ಯವಸ್ಥೆಯ ಪಾತ್ರವನ್ನು ಮೊದಲ ಬಾರಿಗೆ ಎತ್ತಿ ಹೇಳಿದ ಕೃತಿ ಇದು. ಬೆದರಿಕೆ ಹಾಗೂ ಬಲವನ್ನು ಬಳಸುವ ಪೊಲೀಸ್ ವ್ಯವಸ್ಥೆ ಸೇರಿದಂತೆ ಸಮಾಜದೊಳಗಿನ ಎಲ್ಲಾ ಅಧಿಕಾರವೂ ಪುರುಷರ ಕೈಯಲ್ಲಿದೆ ಎಂದು ಹೇಳಿದವರು ಕೇಟ್ ಮಿಲ್ಲೆಟ್. ರಾಜಕೀಯದ ತಿರುಳೇ ಅಧಿಕಾರವಾಗಿರುವಾಗ ಇಂತಹ ಅರಿವು ಪರಿಣಾಮ ಬೀರದೇ ಇರದು.

ರಾಜಕೀಯ ಎಂದರೆ ಒಂದು ಗುಂಪಿನ ವ್ಯಕ್ತಿಗಳು ಮತ್ತೊಂದು ಗುಂಪಿನಿಂದ ನಿಯಂತ್ರಣಕ್ಕೆ ಒಳಪಡುವುದು ಎಂದು ಈ ರಾಜಕೀಯವನ್ನು ಕೇಟ್ ಮಿಲ್ಲೆಟ್ ವಿವರಿಸುತ್ತಾರೆ. ಬೈಬಲ್‌ನಲ್ಲಿ ನಿರೂಪಿತವಾಗಿರುವ ಪಿತೃ ಪ್ರಧಾನ ಮೌಲ್ಯಗಳಿಂದ ವಿಮೋಚನೆಯನ್ನು ಪಡೆದುಕೊಂಡ ನಂತರವೂ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಕೇಟ್ ಮಿಲ್ಲೆಟ್ ನಿರೂಪಿಸಿದ್ದಾರೆ.

ಸ್ವಾತಂತ್ರ್ಯದ ಸಾಧ್ಯತೆಗಳ ಬಗ್ಗೆ ಕಣ್ಣು ಹಾಗೂ ಮನಸ್ಸುಗಳನ್ನು ತೆರೆಸಿದವರು ಅವರು ಎಂದು ಹೇಳಲಾಗುತ್ತದೆ. ‘ಜಗತ್ತು ಮಲಗಿತ್ತು, ಕೇಟ್ ಮಿಲ್ಲೆಟ್ ಎಚ್ಚರಿಸಿದರು’ ಎಂದು ಸ್ತ್ರೀವಾದಿ ಲೇಖಕಿ ಹಾಗೂ ವಿಮರ್ಶಕಿ ಆಂಡ್ರಿಯಾ ಡ್ವೊರ್ಕಿನ್ ನಂತರದ ವರ್ಷಗಳಲ್ಲಿ ಬರೆಯುತ್ತಾರೆ.

‘ಮಹಿಳಾ ಚಳವಳಿಯ ಮಾವೊ ತ್ಸೆ ತುಂಗ’ ಎಂದು ‘ಟೈಮ್ ’ ಮ್ಯಾಗಜಿನ್ ಕೇಟ್ ಮಿಲ್ಲೆಟ್ ಅವರನ್ನು ಬಣ್ಣಿಸುತ್ತದೆ. ಅಲ್ಲದೆ, ‘ಟೈಮ್’ ಮ್ಯಾಗಜಿನ್‌ನಲ್ಲಿ ಕೇಟ್ ಮಿಲ್ಲೆಟ್ ಕುರಿತು ಮುಖಪುಟದ ಲೇಖನವೂ 1970ರ ಆಗಸ್ಟ್‌ನಲ್ಲಿ ಪ್ರಕಟವಾಗುತ್ತದೆ. ‘ಸೆಕ್ಷುಯಲ್ ಪಾಲಿಟಿಕ್ಸ್’ ಕೃತಿಯನ್ನು ‘ಮಹಿಳಾ ವಿಮೋಚನೆಯ ಬೈಬಲ್’ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಬಣ್ಣಿಸಿತ್ತು.

ಪುಸ್ತಕ ಪ್ರಕಟವಾದ 15 ದಿನಗಳಲ್ಲೇ 10,000 ಪ್ರತಿಗಳು ಮಾರಾಟವಾದವು ಎಂಬುದು ಆ ಕಾಲದ ಹೆಗ್ಗಳಿಕೆ. ಸಾಹಿತ್ಯ ವಿಮರ್ಶೆ, ಚಾರಿತ್ರಿಕ ವಿಶ್ಲೇಷಣೆ ಹಾಗೂ ವಿವಾದಾತ್ಮಕ ತರ್ಕಗಳನ್ನೊಳಗೊಂಡ ಕೃತಿ ‘ಸೆಕ್ಷ್ಯುಯಲ್ ಪಾಲಿಟಿಕ್ಸ್’. ಲೈಂಗಿಕ ಸ್ವಾತಂತ್ರ್ಯ ಕುರಿತು ಮುಕ್ತವಾಗಿ ಬರೆಯುವ ಪ್ರಸಿದ್ದ ಲೇಖಕರಾದ ಹೆನ್ರಿ ಮಿಲ್ಲರ್, ಡಿ.ಎಚ್. ಲಾರೆನ್ಸ್ ಹಾಗೂ ನಾರ್ಮನ್ ಮೇಲರ್ ನಂತಹವರು ಪ್ರತಿಪಾದಿಸುವ ಪಿತೃಪ್ರಧಾನ ಧೋರಣೆಗಳನ್ನು ಈ ಕೃತಿಯಲ್ಲಿ ನಿಕಷಕ್ಕೆ ಒಳಪಡಿಸಲಾಗಿದೆ.

ಈ ವಿಶ್ಲೇಷಣೆಗಳು ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಚರ್ಚೆಗಳಿಗೆ ಕಾರಣವಾಗಿದ್ದವು. ಆ ನಂತರ ಕೇಟ್ ಮಿಲ್ಲೆಟ್ ಅವರ ಟೀಕೆಗಳಿಗೆ ಉತ್ತರ ಹೇಳುವುದಕ್ಕೆಂದೇ ನಾರ್ಮನ್ ಮೇಲರ್ ಅವರು ‘ದಿ ಪ್ರಿಸನರ್ ಆಫ್ ಸೆಕ್ಸ್’ ಎಂಬ ಕೃತಿಯನ್ನು ಬರೆದು ಅದರಲ್ಲಿ ಕೇಟ್ ಮಿಲ್ಲೆಟ್ ಅವರನ್ನು ತೀಕ್ಷ್ಣವಾಗಿ ವಿಡಂಬಿಸಿದಂತಹ ವಿದ್ಯಮಾನವೂ ನಡೆದಿದೆ. ರಾಜಕೀಯೇತರವಾಗಿ ಪರಿಗಣಿಸಲಾಗುತ್ತಿದ್ದ ಮನೆ, ಸಾಹಿತ್ಯ, ರೊಮ್ಯಾಂಟಿಕ್ ಸಂಬಂಧಗಳಲ್ಲೂ ಹುದುಗಿರುವ ಅಧಿಕಾರ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವಂತಹ ಮಿಲ್ಲೆಟ್ ಆಲೋಚನಾ ವಿಧಾನ ಕ್ರಾತಿಕಾರಕವಾದುದು.

ಕೇಟ್ ಮಿಲ್ಲೆಟ್ ಲೇಖಕಿ ಮಾತ್ರವಲ್ಲ ಶಿಲ್ಪ ಕಲಾವಿದೆಯೂ ಹೌದು. ನ್ಯೂಯಾರ್ಕ್ ಬಳಿ ಕಲಾ ಕಾಲೊನಿಯೊಂದನ್ನು ಸ್ಥಾಪಿಸಿದ್ದರು. ಅವರ ಮೊದಲ ಪತಿ ಜಪಾನಿನವರಾಗಿದ್ದು ಆತ ಶಿಲ್ಪಿಯಾಗಿದ್ದರು. ‘ಸೆಕ್ಷುಯಲ್ ಪಾಲಿಟಿಕ್ಸ್’ ಕೃತಿಯಿಂದಾಗಿ ಇದ್ದಕ್ಕಿದ್ದಂತೆ ಲಭಿಸಿದ ಪ್ರಸಿದ್ಧಿ ಹಾಗೂ ಪ್ರಚಾರದ ಬೆಳಕಿಗೆ ಒಗ್ಗಿಕೊಳ್ಳುವುದು ಕೇಟ್ ಮಿಲ್ಲೆಟ್‌ಗೆ ಅಷ್ಟೊಂದು ಸುಲಭವಾಗಿರಲಿಲ್ಲ.

ಸಾರ್ವಜನಿಕ ವ್ಯಕ್ತಿಯಾಗಿರುವುದರ ಕಷ್ಟ ಹಾಗೂ ವೈಯಕ್ತಿಕ ಬದುಕಿನ ವಿವರಗಳನ್ನು 1975ರಲ್ಲಿ ಪ್ರಕಟಿಸಿದ ತಮ್ಮ ಆತ್ಮಚರಿತ್ರೆ ‘ಫ್ಲೈಯಿಂಗ್’ನಲ್ಲಿ ಹೇಳಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ‘ಸೆಕ್ಷುಯಲ್ ಪಾಲಿಟಿಕ್ಸ್’ ಕೃತಿ ಮರು ಮುದ್ರಣಗೊಂಡಿರಲಿಲ್ಲ. ಕಳೆದ ವರ್ಷ ಫೆಬ್ರುವರಿಯಲ್ಲಿ ಮತ್ತೆ ‘ಸೆಕ್ಷುಯಲ್ ಪಾಲಿಟಿಕ್ಸ್’ ಹೊಸ ಆವೃತ್ತಿ ಬಿಡುಗಡೆಯಾಗಿದೆ.

ಸಾಂಸ್ಕೃತಿಕ ಅಧ್ಯಯನ ಹಾಗೂ ವಿಮರ್ಶೆಯನ್ನು ಮರುರೂಪಿಸುವಲ್ಲಿ ಅವರ ಕೃತಿ ಹೇಗೆ ನೆರವಾಗಿದೆ ಎಂಬ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮತ್ತೆ ಆಸಕ್ತಿ ಸೃಷ್ಟಿಯಾಗಿದೆ. ‘ಕಲಿಕೆಯ ಮೂಲಕ ನಾನು ಪೋಷಿಸಿಕೊಂಡು ಬಂದ ವ್ಯವಸ್ಥಿತ ಭ್ರಮೆಯನ್ನು ಅವರ ಪುಸ್ತಕ ಒಡೆದುಹಾಕಿದೆ. ಸಾಹಿತ್ಯ ವಿಮರ್ಶೆ ಹಾಗೂ ಸಾಮಾಜಿಕ ರಾಜಕಾರಣ ಎರಡೂ ಒಂದಕ್ಕೊಂದು ಬೇರೆಯೇ ಅರ್ಥ ಧ್ವನಿಸುತ್ತವೆ’ ಎಂದು ಹೊಸ ಆವೃತ್ತಿಗೆ ಬರೆದ ಹಿನ್ನುಡಿಯಲ್ಲಿ ರೆಬೆಕಾ ಮೀಡ್ ಹೇಳಿದ್ದಾರೆ.

ಸಂಬಂಧಗಳ ದ್ವಂದ್ವ, ಬದುಕಿನ ಸಂಕೀರ್ಣತೆ ಹಾಗೂ ಬೌದ್ಧಿಕ, ದೈಹಿಕ, ಭಾವನಾತ್ಮಕ ನೆಲೆಗಳಲ್ಲಿ ನಿಮ್ಮ ಆಕಾಂಕ್ಷೆಗಳಿಗೆ ಅನುಗುಣವಾಗಿ ಬದುಕು ನಡೆಸುವಲ್ಲಿನ ಸಂಕೀರ್ಣತೆಯನ್ನು ಅರ್ಥ ಮಾಡಿಸುವಲ್ಲಿ ಕೇಟ್ ಕೃತಿಗಳು ಸಹಾಯಕ. 1979ರಲ್ಲಿ ಇರಾನ್‌ನ ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇರಾನ್‌ಗೆ ಅವರು ಪ್ರವಾಸ ಮಾಡುತ್ತಾರೆ. ಅಲ್ಲಿ ಅಯೊತೊಲ್ಲಾ ಖೊಮಿನಿ ಆಡಳಿತದಿಂದ ಅವರ ಬಂಧನವಾಗಿ ನಂತರ ಬಿಡುಗಡೆಯಾಗುತ್ತದೆ. ‘ಗೋಯಿಂಗ್ ಟು ಇರಾನ್’ನಲ್ಲಿ (1982) ಆ ಅನುಭವ ಕಟ್ಟಿಕೊಡುತ್ತಾರೆ.

ಅಸಮಾನತೆಯ ಸಂಸ್ಕೃತಿಯಲ್ಲಿ ನರಳುತ್ತಿರುವ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಿದ ನಂತರವೂ ಬದಲಾವಣೆಯಾಗುವುದು ಅಚ್ಚರಿ ಎನಿಸುವ ರೀತಿಯಲ್ಲಿ ನಿಧಾನ ಎಂಬುದನ್ನೂ ಮಿಲ್ಲೆಟ್ ಕಂಡುಕೊಳ್ಳುತ್ತಾರೆ. ‘ಸೆಕ್ಸಿಸಂ’ ಅನ್ನು (ಲಿಂಗತಾರತಮ್ಯ) ಅವರು ‘ರೇಸಿಸಂ’ಗೆ (ಜನಾಂಗೀಯವಾದ) ಹೋಲಿಕೆ ಮಾಡುತ್ತಾರೆ.

‘ಆ ಬಗ್ಗೆ ಕಾನೂನು ಮಾಡಬಹುದು. ಆದರೆ ಎಲ್ಲರೂ ಎಲ್ಲಿಯವರೆಗೆ ಜನಾಂಗೀಯವಾದಿಗಳೇ ಆಗಿರುತ್ತಾರೋ ನೀವು ಹೆಚ್ಚೇನೂ ಮಾಡಲಾಗದು’ ಎಂದು 1970ರಲ್ಲಿ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ವ್ಯಕ್ತಿಗಳನ್ನು ಹಾಗೂ ದೃಷ್ಟಿಕೋನಗಳನ್ನು ಬದಲಿಸುವವರಗೆ ನೀವು ಹೆಚ್ಚೇನೂ ಬದಲಾವಣೆ ಮಾಡಲಾಗುವುದಿಲ್ಲ. ಈ ಮಾತು ಈಗಲೂ ನಿಜ.

ಪಾತ್ರಗಳಲ್ಲಿನ ಲಿಂಗ ತಾರತಮ್ಯದ (ಸೆಕ್ಸಿಸ್ಟ್) ಚಿತ್ರಣಗಳ ಕುರಿತಂತೆ ಈಚಿನ ದಿನಗಳಲ್ಲಿ ನಡೆಯುವ ಚರ್ಚೆಗಳಿಗೆ ಕೇಟ್ ಮಿಲ್ಲೆಟ್ ಅವರ ಚಿಂತನೆಗಳು ಕೊಡುಗೆ ಸಲ್ಲಿಸಿವೆ ಎಂಬುದನ್ನು ಮರೆಯುವಂತಿಲ್ಲ. 80ರ ದಶಕದ ಕನ್ನಡ ಸಾಹಿತ್ಯದಲ್ಲಿ ಒಡಮೂಡಿದ ಸ್ತ್ರೀವಾದಿ ಅಭಿವ್ಯಕ್ತಿಯ ಹಿಂದೆಯೂ ಈ ಚರ್ಚೆಗಳ ಪ್ರಭಾವ ಇದೆ. ಕೇಟ್ ಮಿಲ್ಲೆಟ್ ಅವರ ವಿಶ್ಲೇಷಣೆಗಳು ಈಗಲೂ ಪ್ರಸ್ತುತ.

ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತು, ಕ್ರಿಯೆಗಳಿಂದಾಗಿ ಎರಡನೇ ಅಲೆಯ ಸ್ತ್ರೀವಾದದ ಚಿಂತನೆಗಳು ಮತ್ತಷ್ಟು ಪ್ರಸ್ತುತವಾಗುತ್ತಿವೆ ಎಂಬುದು ವಿಪರ್ಯಾಸ. ಲೈಂಗಿಕತೆ ಬಗ್ಗೆ ಕೊಚ್ಚಿಕೊಳ್ಳುವುದು, ಮಹಿಳೆ ದೇಹವನ್ನು ಸರಕಿನಂತೆ ಚರ್ಚಿಸುವುದು, ಸ್ವಂತ ಅಸ್ಮಿತೆ ಪ್ರತಿಪಾದಿಸುವ ಮಹಿಳೆಯನ್ನು ನಿಕೃಷ್ಟವಾಗಿ ನೋಡುವುದು– ಇವೆಲ್ಲಾ ಆಧುನಿಕೋತ್ತರ ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮ ಸುತ್ತ ಕಾಣುತ್ತಿದ್ದೇವೆ.

ಭಾರತದಲ್ಲಿ ಈಗ ವಿವಾದಕ್ಕೆ ಗುರಿಯಾಗಿ ‘ಯೂ ಟ್ಯೂಬ್‌’ ನಿಂದ ತೆಗೆದುಹಾಕಲಾಗಿರುವ ‘ಬೋಲ್ ಆಂಟಿ ಆವೊ ಕ್ಯಾ’ನಂತಹ ವಿಡಿಯೊ ಇದಕ್ಕೆ ಮತ್ತೊಂದು ತಾಜಾ ಉದಾಹರಣೆ. ಮನರಂಜನೆ ಅಥವಾ ಹಾಸ್ಯದ ಹೆಸರಿನಲ್ಲಿ ವಿವಿಧ ಮಾಧ್ಯಮಗಳ ಮೂಲಕ ಹೆಣ್ಣಿನ ಕುರಿತಾಗಿ ಬಿತ್ತುತ್ತಿರುವ ನಿಕೃಷ್ಟ ಭಾವನೆಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ.

‘ಪುರುಷ ಪ್ರಾಧಾನ್ಯದ ರಾಜಕಾರಣದ ಬಗ್ಗೆ ಕೇಟ್ ಮಿಲ್ಲೆಟ್ ಬರೆದರು. ಮಹಿಳೆಯರ ದೇಹಗಳನ್ನು ಪ್ರಜನನ ಸಾಧನವಾಗಿಸಿದ ಕ್ರಮಗಳೇ ಜನಾಂಗ ಹಾಗೂ ವರ್ಗಗಳ ಶ್ರೇಣೀಕೃತ ವ್ಯವಸ್ಥೆಗೆ ಮೂಲ ಎಂಬುದನ್ನು ಅರ್ಥ ಮಾಡಿಸಿದರು. ಅಸಮಾನ ವೇತನದ ಬಗ್ಗೆ ಮಾತ್ರ ಅವರು ಮಾತನಾಡಲಿಲ್ಲ. ಆದರೆ ಉನ್ನತ ಸ್ಥಾನಗಳಲ್ಲಿರುವವರು ಹಾಗೂ ನಮ್ಮ ಅಚ್ಚುಮೆಚ್ಚಿನ ಬುದ್ಧಿಜೀವಿಗಳಲ್ಲಿರುವ ಮಹಿಳಾ ದ್ವೇಷದ ಬಗ್ಗೆ ಬರೆದರು’ ಎಂದು ಮತ್ತೊಬ್ಬ ಪ್ರಮುಖ ಸ್ತ್ರೀವಾದಿ ಲೇಖಕಿ ಗ್ಲೋರಿಯಾ ಸ್ಟೀನಮ್ ಕೇಟ್ ಮಿಲ್ಲೆಟ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ಸೆಕ್ಷುಯಲ್ ಪಾಲಿಟಿಕ್ಸ್’ ಕೃತಿ ಪ್ರಕಟವಾಗಿ 47 ವರ್ಷಗಳಾಗಿವೆ. ಅಂದರೆ ಸುಮಾರು ಅರ್ಧಶತಮಾನದಷ್ಟು ಕಾಲ ಸಾಗಿಬಂದಿದ್ದೇವೆ. ಆದರೂ ನಾವು ಲಿಂಗತ್ವ ಸಮಾನತೆಯತ್ತ ಸಾಗಿದ್ದೇವೆಯೇ ಅಥವಾ ಮತ್ತಷ್ಟು ದೂರ ಸರಿದಿದ್ದೇವೆಯೆ? ಎಂಬುದಕ್ಕೆ ಉತ್ತರ ಕಷ್ಟ. ಸಮಾನತೆ ಹಾಗೂ ನ್ಯಾಯದ ಬಹು ಮುಖ್ಯ ಸಂವಾದ ನಿರಂತರವಾಗಿಯೇ ಇದೆ. ಸಾಕಾರಗೊಳ್ಳುವುದು ಯಾವಾಗ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry