3

‘ಗುರಿ 150’: ಯಾವುದೇ ಪಕ್ಷಕ್ಕೂ ಕನಸಿನ ಮಾತು

ಡಾ. ಸಂದೀಪ್‌ ಶಾಸ್ತ್ರಿ
Published:
Updated:
‘ಗುರಿ 150’: ಯಾವುದೇ ಪಕ್ಷಕ್ಕೂ ಕನಸಿನ ಮಾತು

ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷ 150 ಸೀಟುಗಳನ್ನು ಗೆಲ್ಲಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಗುರಿ ಹಾಕಿಕೊಂಡಿದ್ದಾರೆ. ರಾಜ್ಯದಲ್ಲಿ ಶತಾಯಗತಾಯ ಅಧಿಕಾರ ಉಳಿಸಿಕೊಳ್ಳಲು ಪಣ ತೊಟ್ಟಿರುವ ಕಾಂಗ್ರೆಸ್ ಕೂಡ 150ರ ಗಡಿ ದಾಟದಿದ್ದರೂ ಪರವಾಗಿಲ್ಲ, ಈ ಗುರಿಯ ಹತ್ತಿರ ಬರುವಷ್ಟು ಸಂಖ್ಯೆಯಲ್ಲಿ ಪಕ್ಷದ ಶಾಸಕರನ್ನು ಗೆಲ್ಲಿಸುವ ಉದ್ದೇಶ ಹೊಂದಿದೆ. ಚುನಾವಣಾ ಕಣದಲ್ಲಿ ಮೂರನೇ ಎದುರಾಳಿ ರೂಪದಲ್ಲಿ ಇರುವ ಜೆಡಿಎಸ್‌ನ ನಾಯಕರು ಮಾತ್ರ ತಮ್ಮ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಪಕ್ಷದ ಒಳ ಲೆಕ್ಕಾಚಾರ ಬೇರೆಯೇ ಆಗಿದೆ. ಯಾವುದೇ ಪಕ್ಷವು ಸ್ಪಷ್ಟ ಬಹುಮತ ಗಳಿಸಲಾರದು. ಅಂತಹ ಅತಂತ್ರ ಫಲಿತಾಂಶ ಹೊರ ಬಿದ್ದಾಗ ಸರ್ಕಾರ ರಚನೆಯಲ್ಲಿ ‘ಕಿಂಗ್‌ ಮೇಕರ್‌’ ಪಾತ್ರ ನಿರ್ವಹಿಸುವ ಅಪೂರ್ವ ಅವಕಾಶ ಜೆಡಿಎಸ್‌ಗೆ ಅನಾಯಾಸವಾಗಿ ಒದಗಿ ಬರಬಹುದು ಎನ್ನುವ ಆಶಾವಾದ ತಳೆದಿದೆ. ಈ ಎಲ್ಲ ವಾದ ಮತ್ತು ಪ್ರತಿವಾದಗಳ ಹೊರತಾಗಿಯೂ ಯಾವುದೇ ರಾಜಕೀಯ ಪಕ್ಷಕ್ಕೆ ‘ಗುರಿ 150’ ತಲುಪಲು ಸಾಧ್ಯವಾಗಲಿದೆಯೇ ಎನ್ನುವ ಅನುಮಾನವಂತೂ ಕಾಡುತ್ತಿದೆ.

ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು 1989ರಲ್ಲಿ ವೀರೇಂದ್ರ ಪಾಟೀಲ ಅವರ ನೇತೃತ್ವದಲ್ಲಿ 178 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅದೊಂದು ಸಾರ್ವಕಾಲಿಕ ದಾಖಲೆಯಾಗಿತ್ತು. ರಾಜ್ಯದಲ್ಲಿ ಇರುವ ಸದ್ಯದ ರಾಜಕೀಯ ಪರಿಸ್ಥಿತಿ ಆಧರಿಸಿ ಹೇಳುವುದಾದರೆ, ‘ಗುರಿ 150’ ಸಾಧಿಸುವುದು ಯಾವುದೇ ಪಕ್ಷಕ್ಕೂ ಕನಸಿನ ಮಾತು ಆಗಿರಲಿದೆ ಎಂದು ಹೇಳುವುದೇ ಹೆಚ್ಚು ಸಮಂಜ

ಸವಾಗಿರಲಿದೆ.

ಯಾವುದೇ ಪಕ್ಷವು 115 ರಿಂದ 130ರ ಆಸುಪಾಸಿನಲ್ಲಿ ಸರಳ ಬಹುಮತವನ್ನಷ್ಟೆ ಪಡೆಯಲಿದೆ ಎಂದು ಊಹಿಸುವುದು ಹೆಚ್ಚು ವಾಸ್ತವಿಕ ಸಂಗತಿಯಾಗಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಹೊರಬೀಳುವ ಫಲಿತಾಂಶದಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಾರದು ಎಂದೂ ಕೆಲವರು ಪ್ರತಿಪಾದಿಸಬಹುದಾಗಿದೆ. ರಾಜ್ಯದಲ್ಲಿ ಈ ಹಿಂದೆಯೂ ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತ ಪಡೆಯದ ನಿದರ್ಶನಗಳಿವೆ. ಅತಂತ್ರ ವಿಧಾನಸಭೆ ಸೃಷ್ಟಿಯಾದ ಅಂತಹ ಸಂದರ್ಭಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಭಾರಿ ಬದಲಾವಣೆಗೆ ಚಾಲನೆ ದೊರೆತಿತ್ತು  ಎಂದು ವಾದಿಸಬಹುದು. 1983ರಲ್ಲಿ ಒಂದೇ ರಾಜಕೀಯ ಪಕ್ಷದ ಪ್ರಭಾವದಿಂದ ಹೊರ ಬಂದಿದ್ದ ರಾಜ್ಯದಲ್ಲಿ, ಚುನಾವಣಾ ಕಣವು ಇತರ ಪಕ್ಷಗಳ ಪ್ರಬಲ ಪೈಪೋಟಿಗೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ರುಚಿ ತೋರಿಸಿದ್ದರೂ, ಪರ್ಯಾಯ ರಾಜಕಾರಣವು ಸ್ಪಷ್ಟವಾಗಿ ಹೊರ ಹೊಮ್ಮಿರಲಿಲ್ಲ. ಜನತಾ ಪಕ್ಷದ ರೂಪದಲ್ಲಿ ಅಂತಹ ಪರ್ಯಾಯ ರಾಜಕೀಯ ಶಕ್ತಿಯು 1985ರ ವಿಧಾನಸಭೆ ಚುನಾವಣೆಯಲ್ಲಿಸ್ಪಷ್ಟಗೊಂಡಿತ್ತು.

2004ರಲ್ಲಿ ಕಾಂಗ್ರೆಸ್‌ ಮತ್ತೆ ಸೋಲು ಕಂಡರೂ, ಪ್ರತಿಪಕ್ಷಗಳಿಗೆ ಸ್ಪಷ್ಟ ಬಹುಮತ ದೊರೆತಿರಲಿಲ್ಲ, ಅಲ್ಲಿಯವರೆಗೆ ರಾಜ್ಯ ಮಟ್ಟದಲ್ಲಿ ಚುನಾವಣಾ ಹಣಾಹಣಿಯು ಕಾಂಗ್ರೆಸ್‌ ಮತ್ತು ಜನತಾ ಪಕ್ಷ, ದಳದ ಮಧ್ಯೆ ಇರುತ್ತಿತ್ತು. 2008ರಲ್ಲಿ ಈ ರಾಜಕೀಯ ಚಿತ್ರಣ ಗಮನಾರ್ಹವಾಗಿ ಬದಲಾವಣೆ ಕಂಡಿತು. ಬಿಜೆಪಿಯು ಮೊದಲ ಬಾರಿಗೆ ಆಡಳಿತ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಲ್ಲಿಂದಾಚೆಗೆ ಈ ರಾಜಕೀಯ ಪರಿಸ್ಥಿತಿಯಲ್ಲಿ ಭಾರಿ ಎನ್ನಬಹುದಾದ ಬದಲಾವಣೆ ಕಂಡು ಬಂದಿಲ್ಲ. ಆದರೆ, ಮತ್ತೊಮ್ಮೆ ಅತಂತ್ರ ವಿಧಾನಸಭೆಯ ಫಲಿತಾಂಶ ಹೊರ ಬರುವ ನಿರೀಕ್ಷೆಗಂತೂ ಪುಷ್ಟಿ ನೀಡಿದೆ.

‘ಗುರಿ 150’ರ ಸಮೀಪಕ್ಕೆ ಸಾಗುವ ಪಕ್ಷಗಳ ಸಾಮರ್ಥ್ಯ ಮತ್ತು ಅವುಗಳ ಎದುರಿಗೆ ಇರುವ ಸವಾಲುಗಳನ್ನು ನಾವಿಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳೋಣ. ಮೊದಲಿಗೆ ಬಿಜೆಪಿಯನ್ನೇ ಪರಿಗಣಿಸೋಣ. ಇದಕ್ಕೆ, ಈ ಪಕ್ಷವು ಈ ಗುರಿ ತಲುಪುವ ಸಾಧ್ಯತೆ ಇದೆ ಎನ್ನುವುದು ಕಾರಣವಲ್ಲ. ಈ ‘ಗುರಿ 150’ ಘೋಷಣೆಯನ್ನು ಮೊದಲಿಗೆ ಪರಿಚಯಿಸಿದ್ದೇ ಬಿಜೆಪಿ.

ಬಿಜೆಪಿಯ ಚುನಾವಣಾ ಸಮರ ತಂತ್ರ ತುಂಬ ಸ್ಪಷ್ಟವಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಕಾರ್ಯತಂತ್ರದಂತಹ ಸೂಕ್ಷ್ಮ ಸಂಗತಿಗಳನ್ನು ಒಳಗೊಂಡ ಎಲ್ಲ ಬಗೆಯ ಪ್ರಕ್ರಿಯೆ ಮೇಲೆ ಪಕ್ಷದ ರಾಷ್ಟ್ರೀಯ ನಾಯಕತ್ವ ಸಂಪೂರ್ಣ ಹಿಡಿತ ಹೊಂದಲು ಉದ್ದೇಶಿಸಿದೆ. ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಮಟ್ಟದ ನಾಯಕರ ನಿಯಂತ್ರಣದಲ್ಲಿ ಇಲ್ಲವೇ ಇಲ್ಲ. ಕರ್ನಾಟಕವನ್ನು ಬಿಜೆಪಿಗೆ ಗೆಲುವಿನ ಉಡುಗೊರೆಯಾಗಿ ಕೊಡುವ ಹೊಣೆಗಾರಿಕೆಯನ್ನು ಇಬ್ಬರು ಕೇಂದ್ರ ಸಚಿವರ ಹೆಗಲಿಗೆ ಒಪ್ಪಿಸಲಾಗಿದೆ. ಈಗಾಗಲೇ ಈ ಇಬ್ಬರೂ ಸಚಿವರು ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿ ಚುನಾವಣಾ ಸಿದ್ಧತೆಗಳನ್ನು ಪರಾಮರ್ಶಿಸಿದ್ದಾರೆ. ಇದು ಬಿಜೆಪಿಯ ಚುನಾವಣಾ ಕಾರ್ಯತಂತ್ರ ಹೇಗೆ ಇರಲಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಪಕ್ಷದ ಅಧ್ಯಕ್ಷ, ಇಬ್ಬರು ಕೇಂದ್ರ ಸಚಿವರು ನೀಡಿರುವ ಹೇಳಿಕೆಗಳು ಮತ್ತು ಸ್ಥಳೀಯ ಮುಖಂಡರ ಜತೆಗಿನ ಅವರ ಮಾತುಕತೆ ಕುರಿತ ಪತ್ರಿಕಾ ವರದಿಗಳನ್ನು ಆಧರಿಸಿ ಹೇಳುವುದಾದರೆ, ರಾಜ್ಯಮಟ್ಟದ ನಾಯಕರು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷದ ಉನ್ನತ ಮಟ್ಟದ ನಾಯಕತ್ವ ತೆಗೆದುಕೊಳ್ಳುವ ನಿರ್ಧಾರಗಳನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕು ಎನ್ನುವ ಸ್ಪಷ್ಟ ಸಂದೇಶ ರವಾನಿಸಿರುವುದು ಸ್ಪಷ್ಟವಾಗುತ್ತದೆ.

ಪಕ್ಷವು ಒಂದು ವೇಳೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದರೂ, ಅದು ಯಾರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎನ್ನುವುದನ್ನು ಮನದಟ್ಟು ಮಾಡಿಕೊಡಲಿದೆ. ಲಿಂಗಾಯತ ವೋಟುಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಒಂದು ವೇಳೆ ಮುಖ್ಯಮಂತ್ರಿ ಅಭ್ಯರ್ಥಿಯು ಉತ್ತರ ಕರ್ನಾಟಕದಿಂದ ಸ್ಪರ್ಧಿಸಬೇಕು ಎಂದು ಮನವೊಲಿಸಿದರೆ ಅದಕ್ಕೆ ಪಕ್ಷದ ಉನ್ನತ ಮಟ್ಟದ ನಾಯಕತ್ವವು ಸಂಗ್ರಹಿಸಿರುವ ಮಾಹಿತಿಯೇ ಆಧಾರವಾಗಿರುತ್ತದೆ. ಜತೆಗೆ ಅದೊಂದು ಚುನಾವಣಾ ಕಾರ್ಯತಂತ್ರದ ಭಾಗವೂ ಆಗಿರುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅವರ ಸ್ವಂತ ಜಿಲ್ಲೆಯಲ್ಲಿನ ಪಕ್ಷದ ಸ್ಥಳೀಯ ಹಿರಿಯ ಮುಖಂಡರ ಜತೆಗಿನ ಸಂಘರ್ಷದ ರಾಜಕೀಯದಿಂದ ದೂರ ಇರಿಸುವ ಪಕ್ಷದ ಉದ್ದೇಶವೂ ಇದರಿಂದ ಈಡೇರಿದಂತಾಗಲಿದೆ. ಇತರ ಮತಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದಾಗಲೇ ನಿಜವಾದ ಅಗ್ನಿ ಪರೀಕ್ಷೆ ಏನೆಂಬುದು ಗೊತ್ತಾಗಲಿದೆ.

ಚುನಾವಣಾ ಕಣಕ್ಕೆ ಇಳಿಸಲು ಪಕ್ಷದ ಕೇಂದ್ರ ಕಚೇರಿಯು ಪ್ರಕಟಿಸುವ ಅಭ್ಯರ್ಥಿಗಳ ಹೆಸರುಗಳನ್ನು ಮುಖ್ಯಮಂತ್ರಿ ಅಭ್ಯರ್ಥಿಯೂ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಯಾವುದೇ ಪ್ರತಿರೋಧ ಇಲ್ಲದೆ ಒಪ್ಪಿಕೊಳ್ಳುವರೇ ಅಥವಾ ಬಂಡಾಯ ಚಟುವಟಿಕೆಗಳು ಬಿರುಸಾಗಿ ನಡೆಯಲಿವೆಯೇ ಎನ್ನುವುದರ ಮೇಲೆ ಬಿಜೆಪಿಯ ಯಶಸ್ಸು ಅವಲಂಬಿಸಿದೆ.

1970ರ ದಶಕದಲ್ಲಿ ಇಂದಿರಾ ಗಾಂಧಿ ಮತ್ತು ಅವರ ಪ್ರಮುಖ ಸಲಹೆಗಾರರೇ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ರೀತಿಯಲ್ಲಿಯೇ, ಸದ್ಯಕ್ಕೆ ಬಿಜೆಪಿಯು ಕೂಡ ಪಕ್ಷದ ವ್ಯವಹಾರಗಳನ್ನೆಲ್ಲ ಕೇಂದ್ರ ಮಟ್ಟದಲ್ಲಿಯೇ ನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳುವ ಮಹತ್ವವು ಕಾಂಗ್ರೆಸ್‌ಗೆ ಮನವರಿಕೆಯಾಗಿದ್ದರೂ, ಅದರ ಸಿದ್ಧತೆಗಳು ಕೊಂಚಮಟ್ಟಿಗೆ ವಿಳಂಬವಾಗಿವೆ. ಮುಖ್ಯಮಂತ್ರಿಯ ಕೈ ಬಲಪಡಿಸುವ ಮತ್ತು ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಘೋಷಿಸಿರುವ ಪಕ್ಷದ ಈ ಕಾರ್ಯತಂತ್ರವು, ತನ್ನ ನಾಮಬಲದ ಮೇಲೆ ಚುನಾವಣೆ ಗೆಲ್ಲಲು ಸಾಧ್ಯ ಇಲ್ಲ ಎನ್ನುವ ವಾಸ್ತವವನ್ನು ಹೈಕಮಾಂಡ್‌ ಒಪ್ಪಿಕೊಂಡಂತೆ ಆಗಿದೆ.

ಪಂಜಾಬ್‌ನಲ್ಲಿ ಅಮರಿಂದರ್‌ ಸಿಂಗ್‌ ಅವರಿಗೆ ಚುನಾವಣೆ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡುವ ಮೂಲಕ ಕಾಂಗ್ರೆಸ್ ಹೊಸ ಪ್ರಯೋಗ ನಡೆಸಿತ್ತು. ಪಂಜಾಬ್‌ ಮತ್ತು ಕರ್ನಾಟಕದ ವಿಷಯದಲ್ಲಿ ಒಂದು ಮಹತ್ವದ ವ್ಯತ್ಯಾಸ ಇದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ, ಆಡಳಿತಾರೂಢ ಮೈತ್ರಿ ಸರ್ಕಾರ ವಿರುದ್ಧದ ಜನಾಭಿಪ್ರಾಯವು ನೆರವಿಗೆ ಬಂದಿತ್ತು. ಜನಪ್ರಿಯತೆಗೆ ಎರವಾಗಿದ್ದ ಅಕಾಲಿ ದಳ ನೇತೃತ್ವದಲ್ಲಿನ ಸರ್ಕಾರಕ್ಕೆ ಸವಾಲು ಒಡ್ಡುವುದೂ ಕಾಂಗ್ರೆಸ್‌ಗೆ ಸುಲಭವಾಗಿತ್ತು.

ಕರ್ನಾಟಕದಲ್ಲಿ ಪಕ್ಷವು ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ, ತನ್ನ ಆಡಳಿತ ಮತ್ತು ಸಾಧನೆಗಳನ್ನು ನೆಚ್ಚಿಕೊಂಡು ಮತ್ತು ಸಮರ್ಥಿಸಿಕೊಳ್ಳುತ್ತಲೇ ಮತದಾರರ ಬಳಿ ಹೋಗಬೇಕಾಗಿದೆ. ಮುಖ್ಯಮಂತ್ರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಕ್ಕೆ ಕಾಂಗ್ರೆಸ್‌ ಅನುಸರಿಸುತ್ತಿರುವ ರಾಜಕೀಯ ಧೋರಣೆಗೆ ಸಂಬಂಧಿಸಿ ಅದರದ್ದೇ ಆದ ಮಿತಿಗಳಿವೆ. ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಲಿಂಗಾಯತ ಮತ್ತು ವೀರಶೈವ ವಿವಾದವನ್ನು ಪಕ್ಷ ಎದುರಿಸಬೇಕಾಗಿ ಬಂದಿರುವುದನ್ನು ವರಿಷ್ಠ ಮಂಡಳಿಯು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಈ ವಿವಾದ ಪಕ್ಷಕ್ಕೆ ಮುಳುವಾಗಿ ಗಂಭೀರ ಸ್ವರೂಪದ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳಲು ಎಚ್ಚರದಿಂದ ಇರುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿಗೆ ಸಲಹೆ ನೀಡಿರುವಂತೆ ಕಂಡು ಬರುತ್ತಿದೆ.

ಹೈಕಮಾಂಡ್‌ನ ಆಣತಿಯಂತೆಯೇ ಪಕ್ಷ ಮತ್ತು ಕಾರ್ಯಕರ್ತರು ನಡೆದುಕೊಳ್ಳುವ ಕಾಂಗ್ರೆಸ್‌ನಲ್ಲಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡುವುದನ್ನು ಕುತೂಹಲದಿಂದ ಗಮನಿಸಲಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಈ ಕಾರ್ಯತಂತ್ರ ಫಲ ನೀಡುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದಿರುವುದೇ ಜೆಡಿಎಸ್ ಪಾಲಿಗೆ ಹೆಚ್ಚು ಮಹತ್ವವಾಗಿರಲಿದೆ. ‘ಕುಟುಂಬ ರಾಜಕಾರಣ’ದ ನಿಯಂತ್ರಣಕ್ಕೆ ಒಳಪಟ್ಟಿರುವ ಮಟ್ಟಕ್ಕೆ ಕುಸಿದಿರುವ ಪಕ್ಷವು, ಟಿಕೆಟ್‌ ಹಂಚಿಕೆಯನ್ನು ಹೇಗೆ ನಿಭಾಯಿಸಲಿದೆ ಮತ್ತು ಕುಟುಂಬದ ಒಳಗಿನ ಬಂಡಾಯವನ್ನು ಹೇಗೆ ದಮನ ಮಾಡಲಿದೆ ಎನ್ನುವುದೇ ಹೆಚ್ಚು ಆಸಕ್ತಿದಾಯಕ ಸಂಗತಿಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಮೇಲೆ ಗೆದ್ದು ಬಂದಿರುವ ಜೆಡಿಎಸ್‌ನ ಕೆಲ ಶಾಸಕರು ಈ ಬಾರಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದು, ತಮ್ಮ ಮೂಲ ಪಕ್ಷದ ಬಲವನ್ನು ಕುಗ್ಗಿಸಲಿದ್ದಾರೆ.

ಈ ಎಲ್ಲ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿ ಹೇಳುವುದಾದರೆ, ರಾಜ್ಯದಲ್ಲಿನ ಯಾವುದೇ ಪಕ್ಷಕ್ಕೆ ‘ಗುರಿ 150’ ಸಾಧಿಸುವುದು ತುಂಬ ದೂರದ ಸಾಧ್ಯತೆಯಾಗಿ ಕಾಣಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry