ಮರೆತುಹೋದ ಗಾಂಧಿಯನ್ನು ನೆನಪಿಸಿಕೊಳ್ಳುವ ಸಮಯ

7

ಮರೆತುಹೋದ ಗಾಂಧಿಯನ್ನು ನೆನಪಿಸಿಕೊಳ್ಳುವ ಸಮಯ

ಎ.ಸೂರ್ಯ ಪ್ರಕಾಶ್
Published:
Updated:
ಮರೆತುಹೋದ ಗಾಂಧಿಯನ್ನು ನೆನಪಿಸಿಕೊಳ್ಳುವ ಸಮಯ

ದೇಶವನ್ನು ದಶಕಗಳ ಕಾಲ ಆಳಿರುವ ಗಾಂಧಿ ಕುಟುಂಬದ ಸದಸ್ಯರು, ತಮಗೆ ಹೆಸರು ಹಾಗೂ ರಾಜಕೀಯ ಅಸ್ಮಿತೆ ಕೊಟ್ಟ ಒಬ್ಬ ವ್ಯಕ್ತಿಯ ಹೆಸರನ್ನು ಅಳಿಸಿಹಾಕಲು ಸಾಧ್ಯವಿರುವ ಎಲ್ಲ ಕೆಲಸಗಳನ್ನೂ ಮಾಡಿದ್ದಾರೆ. ಆದರೆ, ಈ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಸಮಯ ಬಂದಿದೆ.

ಇಲ್ಲಿ ಹೇಳುತ್ತಿರುವುದು ಫಿರೋಜ್ ಗಾಂಧಿ ಬಗ್ಗೆ. ಫಿರೋಜ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಅಸಾಮಾನ್ಯ ಸಂಸದೀಯ ಪಟು ಕೂಡ ಹೌದು. 1928ರಲ್ಲಿ ಸೈಮನ್ ಆಯೋಗವನ್ನು ವಿರೋಧಿಸಿ ನಡೆದ ಪ್ರತಿಭಟನೆಯಿಂದ ಆರಂಭಿಸಿ ಸ್ವಾತಂತ್ರ್ಯ ಬಯಸಿ ನಡೆದ ಹಲವು ಪ್ರತಿಭಟನೆಗಳಲ್ಲಿ ಫಿರೋಜ್ ಅವರು ಪೊಲೀಸರಿಂದ ಲಾಠಿ ಏಟು ತಿಂದಿದ್ದಾರೆ, ಜೈಲು ವಾಸ ಅನುಭವಿಸಿದ್ದಾರೆ. ಕಮಲಾ ನೆಹರೂ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಫಿರೋಜ್ ಅವರು ತೀರಾ ಅಗತ್ಯವಾಗಿದ್ದ ಭಾವನಾತ್ಮಕ ಬೆಂಬಲ ನೀಡಿದರು, ಇಂದಿರಾ ಗಾಂಧಿ ಅವರನ್ನು ವಿವಾಹವಾದರು, ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿ ಉಳಿದರು. ಸ್ವಾತಂತ್ರ್ಯ ದೊರೆತ ನಂತರ ರಚನೆಯಾದ ತಾತ್ಕಾಲಿಕ ಸಂಸತ್ತಿನ ಸದಸ್ಯರಾಗಿದ್ದರು, 1952 ಹಾಗೂ 1957ರಲ್ಲಿ ರಾಯ್‌ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಸಂಸತ್ತು ಪ್ರವೇಶಿಸಿದ ಕೆಲವೇ ವರ್ಷಗಳಲ್ಲಿ ಫಿರೋಜ್ ಅವರು ದೇಶದ ಮಹಾನ್ ಸಂಸದೀಯ ಪಟುಗಳಲ್ಲಿ ಒಬ್ಬರಾಗಿ ಬೆಳೆದರು, ದೇಶ ಕಂಡ ಅತ್ಯಂತ ಪ್ರಭಾವಶಾಲಿ ತನಿಖಾ ಸಂಸದರಾಗಿದ್ದರು. ಬೇರೆಯವರು ಅಸೂಯೆಪಡಬಹುದಾದಂತಹ ಸಂಸದೀಯ ಜೀವನ ಅವರದ್ದು. ಸಂಸದೀಯ ಜೀವನದ ಆರಂಭದಲ್ಲೇ ಅವರು ಆಳವಾದ ಅಧ್ಯಯನ ನಡೆಸಿ, ಖಾಸಗಿ ಜೀವ ವಿಮಾ ಕಂಪೆನಿಗಳ ಮೇಲೆ ಪ್ರಹಾರ ನಡೆಸಿದರು. ಈ ವಲಯವನ್ನು ತಕ್ಷಣ ರಾಷ್ಟ್ರೀಕರಣ ಮಾಡಬೇಕು ಎಂದು ಆಗ್ರಹಿಸಿದರು. ‘ಕುದುರೆಯನ್ನು ಹಿಡಿದಿಡಲು ಒಂದು ಲಗಾಮು ಬೇಕು, ಆನೆಯನ್ನು ಹಿಡಿದಿಡಲು ಸರಪಳಿ ಬೇಕು’ ಎಂದು ಅವರು ಹೇಳಿದ್ದರು. ಫಿರೋಜ್ ಅವರು ಮಧ್ಯಪ್ರವೇಶಿಸಿದ ಕಾರಣದಿಂದಾಗಿ, ಜೀವ ವಿಮಾ ಕಂಪೆನಿಗಳ ರಾಷ್ಟ್ರೀಕರಣ ಅನಿವಾರ್ಯ ಎಂಬುದು ಸಂಸದರಿಗೆ ಗೊತ್ತಾಯಿತು. ನೆಹರೂ ನೇತೃತ್ವದ ಸರ್ಕಾರವು ತಡಮಾಡದೆ ಈ ಕಂಪೆನಿಗಳನ್ನು ರಾಷ್ಟ್ರೀಕರಣಗೊಳಿಸಿ, ಅವುಗಳ ವ್ಯವಹಾರಗಳನ್ನು ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಹಸ್ತಾಂತರ ಮಾಡಿತು.

ಇದಾದ ನಂತರ, ಫಿರೋಜ್ ಅವರು ಮುಂದ್ರಾ–ಎಲ್‌ಐಸಿ ಹಗರಣ ಬಯಲಿಗೆಳೆದರು. ಆಡಳಿತ ಪಕ್ಷದ ಜೊತೆ ಇದ್ದರೂ, ತಮ್ಮದೇ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಅಥವಾ ತಪ್ಪು ಮಾಡುತ್ತಿದೆ ಎಂಬ ಅನುಮಾನ ಬಂದಾಗ, ತೀಕ್ಷ್ಣ ಆರೋಪಗಳನ್ನು ಮಾಡಿದ ಮೊದಲ ಸಂಸದರಾದರು. ಮುಂದ್ರಾ ಕಂಪೆನಿಗಳಲ್ಲಿ ಎಲ್‌ಐಸಿ ಮಾಡಿದ ಹೂಡಿಕೆಗಳ ಬಗ್ಗೆ ಸತ್ಯ ಹೇಳುವಲ್ಲಿ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರು ಜಿಪುಣತನ ತೋರಿಸಿದ್ದನ್ನು ಕಂಡ ಫಿರೋಜ್‌ ಹೀಗೆ ಮಾತನಾಡಲು ಶುರುವಿಟ್ಟುಕೊಂಡರು. ಎಲ್‌ಐಸಿ–ಮುಂದ್ರಾ ಹಗರಣದ ವಿಚಾರದಲ್ಲಿ ಫಿರೋಜ್‌ ಅವರು ಬದ್ಧತೆಯಿಂದ ಕೆಲಸ ಮಾಡಿದರು, ಕಲ್ಕತ್ತಾ ಹಾಗೂ ಬಾಂಬೆ ಷೇರು ವಿನಿಮಯ ಕೇಂದ್ರಗಳಿಂದ ಸಾಕ್ಷ್ಯ ಸಂಗ್ರಹಿಸಿದರು. ಕೃಷ್ಣಮಾಚಾರಿ ಅವರ ಸಮರ್ಥನೆಯನ್ನು ಪುಡಿ ಮಾಡಿದರು. ತಮ್ಮ ಮನಸ್ಸಿನಲ್ಲಿ ಉಂಟಾದ ದಂಗೆಯೊಂದು ಈ ವಿಚಾರ ಪ್ರಸ್ತಾಪಿಸಲು ಒತ್ತಡ ತಂದಿತು ಎನ್ನುವ ಮೂಲಕ ಫಿರೋಜ್ ಅವರು ತಮ್ಮ ಭಾಷಣ ಆರಂಭಿಸಿದರು. ಷೇರುಗಳ ಖರೀದಿ ಸಮಯದಲ್ಲಿ ಎಲ್‌ಐಸಿಯು ಮುಂದ್ರಾ ಕಂಪೆನಿಗಳ ಪರವಾಗಿ ಹೇಗೆ ಪಕ್ಷಪಾತಿ ಧೋರಣೆ ತೋರಿದೆ, ಮುಂದ್ರಾ ಅವರು ತಮ್ಮ ಷೇರುಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿದ ನಂತರ ಷೇರುಗಳನ್ನು ಹೇಗೆ ಖರೀದಿ ಮಾಡಲಾಗಿದೆ ಎಂಬುದನ್ನು ಫಿರೋಜ್ ಅವರು ತೋರಿಸಿಕೊಟ್ಟರು.

ಸಂಸತ್ತಿನ ಕಲಾಪಗಳನ್ನು ವರದಿ ಮಾಡಿದ ಸಂದರ್ಭದಲ್ಲಿ ಮಾಧ್ಯಮಗಳನ್ನು ಮಾನನಷ್ಟ ಮೊಕದ್ದಮೆಗಳಿಂದ ರಕ್ಷಿಸಲು ಫಿರೋಜ್ ಅವರು ಖಾಸಗಿಯಾಗಿ ‘ಸಂಸದೀಯ ನಡಾವಳಿಗಳು (ಪ್ರಕಟಣೆಗಳ ಸಂರಕ್ಷಣೆ) ಮಸೂದೆ – 1956’ ಅನ್ನು ಮಂಡಿಸಿದರು. ಖಾಸಗಿ ಮಸೂದೆಯನ್ನು ಸರ್ಕಾರ ಅಧಿಕೃತವಾಗಿ ಅಂಗೀಕರಿಸುವಂತೆ ಮಾಡಿದ ಮೊದಲ ಸಂಸದ ಫಿರೋಜ್. ಸಂಸತ್ತಿನಲ್ಲಿ ಆಡುವ ಮಾತುಗಳು ಹಾಗೂ ಕೈಗೊಳ್ಳುವ ತೀರ್ಮಾನಗಳ ವಿಚಾರದಲ್ಲಿ ಸಂಸದರಿಗೆ ರಕ್ಷಣೆ ಇದ್ದರೂ, ಮಾಧ್ಯಮಗಳಿಗೆ ಅಂಥದ್ದೊಂದು ರಕ್ಷಣೆ ಇರಲಿಲ್ಲ. ಸಂಸದರು ಸಂಸತ್ತಿನಲ್ಲಿ ಮಾತನಾಡುವಾಗ ಮೋಸಗಾರರ, ತೆರಿಗೆ ವಂಚಕರ ಹಾಗೂ ದೊಡ್ಡ ಉದ್ಯಮ‍ಪತಿಗಳ ವಿರುದ್ಧ ಆರೋಪಗಳನ್ನು ಹೊರಿಸುತ್ತಿದ್ದರು. ಇದನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆಗ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆಗಳು ದಾಖಲಾಗುತ್ತಿದ್ದವು. ಈ ಪರಿಸ್ಥಿತಿಯನ್ನು ಇಲ್ಲವಾಗಿಸಲು, ಮಾಧ್ಯಮಗಳಿಗೆ ರಕ್ಷಣೆ ಒದಗಿಸಲು ಫಿರೋಜ್ ಅವರು ಈ ಮಸೂದೆ ಮಂಡಿಸಿದರು. ಆದರೆ, ಇದಾದ ಇಪ್ಪತ್ತು ವರ್ಷಗಳ ನಂತರ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಇಂದಿರಾ ಗಾಂಧಿ ಅವರು ಈ ಕಾಯ್ದೆಯನ್ನು ತೆಗೆದುಹಾಕಲು, ಪತ್ರಕರ್ತರನ್ನು ಸಿವಿಲ್ ಹಾಗೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳಿಗೆ ಮತ್ತೆ ಈಡು ಮಾಡಲು ಇನ್ನೊಂದು ಮಸೂದೆ ಮಂಡಿಸಿದರು.

ಫಿರೋಜ್ ಗಾಂಧಿ ಅವರ ಕೊಡುಗೆಗಳನ್ನು ಮತ್ತೆ ನೆನಪಿಸಿಕೊಳ್ಳಲು ಕಾರಣ ಇದೆ. ಸೆಪ್ಟೆಂಬರ್ 12, ಫಿರೋಜ್ ಅವರ ಜನ್ಮದಿನ. ಆದರೆ, ಎಂದಿನಂತೆ ಈ ವರ್ಷ ಕೂಡ ಈ ದಿನ ಬಹುತೇಕರ ಗಮನಕ್ಕೆ ಬರಲಿಲ್ಲ. ಆದರೆ, ಹುಟ್ಟಿದ ದಿನವೇ ಫಿರೋಜ್ ಅವರನ್ನು ಮರೆಯಬಾರದು ಎಂದು ಭಾವಿಸಿದ ಒಬ್ಬ ವ್ಯಕ್ತಿ ಇದ್ದಾರೆ. ಅವರು ಸ್ವೀಡನ್‌ನವರು, ಹೆಸರು ಬರ್ಟಿಲ್ ಫಾಕ್. ‘ಫಿರೋಜ್– ಮರೆತುಹೋದ ಗಾಂಧಿ’ ಎನ್ನುವ ಬಹಳ ಸೊಗಸಾದ ಪುಸ್ತಕ ಬರೆಯಲು ಫಾಕ್ ಅವರು ನಾಲ್ಕು ದಶಕಗಳ ಸಮಯ ವ್ಯಯಿಸಿದ್ದಾರೆ. ಫಿರೋಜ್ ಅವರಿಗೆ ಹಾಗೂ ಅವರ ಕೆಲಸಗಳಿಗೆ ಗೌರವ ಸಲ್ಲಿಸಲು ಫಾಕ್‌ ಅವರು ರಾಯ್‌ ಬರೇಲಿ ಹಾಗೂ ಫಿರೋಜ್ ಸ್ಥಾಪಿಸಿದ ಕಾಲೇಜಿಗೆ ಭೇಟಿ ನೀಡಿದ್ದಾರೆ. ಫಿರೋಜ್ ಅವರಿಗೆ ತಕ್ಕ ಗೌರವ ದೊರೆಯಬೇಕು ಎಂಬ ಉದ್ದೇಶದಿಂದ ಫಾಕ್ ಅವರು ರಾಷ್ಟ್ರದ ರಾಜಧಾನಿಯಲ್ಲಿ ಸರಣಿ ಉಪನ್ಯಾಸಗಳನ್ನು ನೀಡುತ್ತಿದ್ದಾರೆ.

ಫಿರೋಜ್ ಅವರು ದೊಡ್ಡ ಮಟ್ಟದ ಗೌರವ ಸಂಪಾದಿಸಿದ ಸಂಸದ, ಸದನದ ಎಲ್ಲ ವರ್ಗಗಳ ಪ್ರೀತಿಗೆ ಪಾತ್ರರಾಗಿದ್ದವರು. ಆದರೆ ಇಂದಿರಾ ಗಾಂಧಿ ಜೊತೆಗಿನ ವೈವಾಹಿಕ ಸಂಬಂಧ ಅಷ್ಟೇನೂ ಉತ್ತಮ ಆಗಿರದಿದ್ದ ಕಾರಣ, ನೆಹರೂ ಕಾಲದಿಂದಲೇ ಕುಟುಂಬ ಅವರಿಂದ ದೂರ ಇರಲು ಯತ್ನಿಸಿತು. ವಿವಾಹ ನಡೆದ ಸ್ವಲ್ಪ ವರ್ಷಗಳ ನಂತರ ಇಂದಿರಾ ಹಾಗೂ ಫಿರೋಜ್ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು ಎಂಬ ಉದಾಹರಣೆಯನ್ನು ಫಾಕ್ ಅವರು ನೀಡುತ್ತಾರೆ. ಇಂದಿರಾ ಅವರು ತಮ್ಮ ತಂದೆ, ಪ್ರಧಾನಿ ನೆಹರೂ ಜೊತೆ ತೀನ್‌ ಮೂರ್ತಿ ಭವನದಲ್ಲಿ ವಾಸಿಸುತ್ತಿದ್ದರು. ಫಿರೋಜ್ ಅವರು ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಸಂಸದರ ಬಂಗಲೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಪುತ್ರರಾದ ರಾಜೀವ್ ಹಾಗೂ ಸಂಜಯ್ ಅವರನ್ನು ಭೇಟಿ ಮಾಡಲು ಫಿರೋಜ್ ಅವರು ವಾರಕ್ಕೆ ಒಮ್ಮೆ, ಬೆಳಗ್ಗಿನ ಉಪಾಹಾರದ ವೇಳೆಗೆ ತೀನ್‌ ಮೂರ್ತಿ ಭವನಕ್ಕೆ ಭೇಟಿ ನೀಡುತ್ತಿದ್ದರು. ಫಿರೋಜ್ ಅವರು ತಮ್ಮ ಮಕ್ಕಳನ್ನು ಸಂಸದರ ನಿವಾಸಕ್ಕೆ ಕರೆದುಕೊಂಡು ಹೋಗಿ ಅವರಿಗೆ ಬಡಗಿಯ ಕೆಲಸ, ಯಂತ್ರಗಳ ರಿಪೇರಿ, ಕಾರು ಮತ್ತು ದ್ವಿಚಕ್ರವಾಹನಗಳ ರಿಪೇರಿ ಸೇರಿದಂತೆ ಹಲವು ಕೌಶಲಗಳನ್ನು ಕಲಿಸುತ್ತಿದ್ದರು.

ಆದರೆ ಇತಿಹಾಸವನ್ನು ಒಂದು ಕುಟುಂಬದ ಯಜಮಾನಿಕೆಗೆ ಕಟ್ಟಿಹಾಕಲು, ಕುಟುಂಬದ ಇಚ್ಛೆಗಳು ಸತ್ಯವನ್ನು ಮುಚ್ಚಿಹಾಕುವಂತೆ ಮಾಡಲು ಎಷ್ಟು ದಿನಗಳವರೆಗೆ ಸಾಧ್ಯ? ಈ ಕುಟುಂಬದ ಆಸ್ಥಾನ ಪಂಡಿತರಂತೆ ವರ್ತಿಸಿದ ಇತಿಹಾಸಕಾರರ ಕೈಯಲ್ಲಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್, ಡಾ.ಬಿ.ಆರ್. ಅಂಬೇಡ್ಕರ್ ಅವರಂತಹ ಭಾರತದ ಮಹಾನ್‌ ವ್ಯಕ್ತಿಗಳು ದೊಡ್ಡ ಅನ್ಯಾಯ ಅನುಭವಿಸಿದ್ದಾರೆ. ಇಂಥ ವ್ಯಕ್ತಿಗಳು ‘ಹೊರಗಿನವರಾಗಿದ್ದರು’. ಆದರೆ ಫಿರೋಜ್‌ ಅವರು ‘ಒಳಗಿನವರಾಗಿದ್ದರೂ’ ಇಂತಹ ಪರಿಸ್ಥಿತಿ ಎದುರಿಸಿದರು.

ಫಿರೋಜ್ ಅವರು ಸಂಸತ್ತಿನಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದ ರೀತಿ ಹಾಗೂ ತೀಕ್ಷ್ಣ ವಾಗ್ದಾಳಿಗಳು ನೆಹರೂ ನೇತೃತ್ವದ ಸರ್ಕಾರದ ಹಲವು ಸಚಿವರಲ್ಲಿ ಭೀತಿ ಮೂಡಿಸುತ್ತಿದ್ದವು. ಹೀಗಿದ್ದರೂ ಇಂದಿರಾ ಹಾಗೂ ಫಿರೋಜ್ ನಡುವಣ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲದಿದ್ದ ಕಾರಣ, ಫಿರೋಜ್ ಅವರ ನೈಜ ಶಕ್ತಿಯನ್ನು ಅರಿಯುವಲ್ಲಿ ನೆಹರೂ ವಿಫಲರಾದರು. 1960ರಲ್ಲಿ ಹೃದಯಾಘಾತಕ್ಕೆ ಒಳಗಾಗಿ ಫಿರೋಜ್ ಅವರು ಮೃತಪಟ್ಟಾಗ ಜನರಲ್ಲಿ ವ್ಯಕ್ತವಾದ ದುಃಖ ಹಾಗೂ ಜನ ಸೇರಿದ್ದನ್ನು ಗಮನಿಸಿದ ನೆಹರೂ ಅವರಿಗೆ ಮಾತೇ ಹೊರಡಲಿಲ್ಲ. ಅಂತಿಮ ಸಂಸ್ಕಾರಕ್ಕಾಗಿ ಫಿರೋಜ್ ಅವರ ಪಾರ್ಥಿವ ಶರೀರವನ್ನು ನಿಗಮಬೋಧ ಘಾಟ್‌ಗೆ ಒಯ್ಯುತ್ತಿದ್ದ ಮಾರ್ಗದಲ್ಲಿ ಸಹಸ್ರಾರು ಜನ ಸಾಲುಗಟ್ಟಿ ನಿಂತಿದ್ದರು ಎಂದು ಫಾಕ್ ಹೇಳುತ್ತಾರೆ. ‘ಜನರ ಭಾರಿ ಗುಂಪನ್ನು ಕಂಡ ನೆಹರೂ ಆಶ್ಚರ್ಯಪಟ್ಟರು. ತಮ್ಮ ಅಳಿಯನಲ್ಲಿ ಇದ್ದ ಒಳ್ಳೆಯ ಗುಣಗಳನ್ನು ಗುರುತಿಸುವ ವಿಚಾರದಲ್ಲಿ ನೆಹರೂ ಅವರು ಯಾವಾಗಲೂ ತುಸು ನಿಧಾನವಾಗಿರುತ್ತಿದ್ದ ಕಾರಣ, ಅವರು ತಮ್ಮ ಪ್ರಾಮಾಣಿಕ ಆಶ್ಚರ್ಯವನ್ನು ವ್ಯಕ್ತಪಡಿಸಿದರು’ ಎಂದು ಫಾಕ್ ಹೇಳುತ್ತಾರೆ.

‘ಫಿರೋಜ್ ಅವರಿಗೆ ಇಷ್ಟೊಂದು ಬೆಂಬಲಿಗರು ಇದ್ದಾರೆ, ಅವರು ಈ ಮಟ್ಟಿಗೆ ಜನಪ್ರಿಯರು ಎಂಬುದು ನನಗೆ ಗೊತ್ತಿರಲಿಲ್ಲ’ ಎಂದು ನೆಹರೂ ಹೇಳಿದ್ದರು ಎನ್ನುವ ಮಾತನ್ನು ಫಾಕ್ ಹೇಳುತ್ತಾರೆ. ಆಗಿರುವ ಅನ್ಯಾಯವನ್ನು ಸರಿಪಡಿಸುವ ಸಮಯ ಈಗ ಬಂದಿದೆ. ದೇಶದ ಮಹಾನ್ ಸಂಸದೀಯ ಪಟುಗಳ ಸಾಲಿನಲ್ಲಿ ಫಿರೋಜ್ ಅವರಿಗೂ ಸ್ಥಾನ ದೊರೆಯಬೇಕು. ವಿಳಂಬವಿಲ್ಲದೆ ಈ ಕೆಲಸ ಮಾಡಬೇಕಿರುವುದು ಫಿರೋಜ್, ಇತಿಹಾಸ ಮತ್ತು ನಮ್ಮ ಪ್ರಜಾತಂತ್ರ ವ್ಯವಸ್ಥೆ ನಮ್ಮ ಮೇಲೆ ಹೊರಿಸಿರುವ ಋಣಭಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry