5

ಪುಟಾಣಿ ಹಾಗೂ ವೇಗದ ಡ್ರೈವ್

ಯು.ಬಿ. ಪವನಜ
Published:
Updated:
ಪುಟಾಣಿ ಹಾಗೂ ವೇಗದ ಡ್ರೈವ್

ಣಕಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿಡಲು ಸಾಮಾನ್ಯವಾಗಿ ಬಳಸುವುದು ಹಾರ್ಡ್‌ಡಿಸ್ಕ್ ಡ್ರೈವ್‌ಗಳನ್ನು. ಇವುಗಳು ಹಲವು ಗಿಗಾಬೈಟ್‌ಗಳಿಂದ ಹಿಡಿದು ಟೆರ್‍ರಾಬೈಟ್ ಸಂಗ್ರಹಶಕ್ತಿಗಳಲ್ಲಿ ಲಭ್ಯ. ಈ ಹಾರ್ಡ್‌ಡಿಸ್ಕ್‌ಗಳು ಗಣಕದ ಹೊರಗಿನಿಂದ ಜೋಡಿಸಬಹುದಾದ ಮಾದರಿಯಲ್ಲೂ ಲಭ್ಯ. ಗಣಕಗಳಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿ ಪ್ರತಿಮಾಡಿಟ್ಟುಕೊಳ್ಳಲು ಇವುಗಳ ಬಳಕೆ ಆಗುತ್ತದೆ. ಆದ್ದರಿಂದ ಇವುಗಳಿಗೆ ಬ್ಯಾಕ್‌ಅಪ್ ಹಾರ್ಡ್‌ಡಿಸ್ಕ್ ಎಂಬ ಹೆಸರೂ ಇದೆ.

ಇತ್ತೀಚೆಗೆ ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ) ಎಂಬ ಹೊಸ ಮಾದರಿಯ ಸಂಗ್ರಹ ಡ್ರೈವ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ. ಮೊದಮೊದಲಿಗೆ ಕಡಿಮೆ ಸಂಗ್ರಹ ಶಕ್ತಿಗಳಲ್ಲಿ ದೊರೆಯುತ್ತಿದ್ದ ಇಂತಹ ಡ್ರೈವ್‌ಗಳು ಈಗ ಟೆರ್‍ರಾಬೈಟ್ ಸಂಗ್ರಹಶಕ್ತಿಗಳಲ್ಲೂ ದೊರೆಯುತ್ತಿವೆ. ಈ ಎಸ್‌ಎಸ್‌ಡಿಗಳಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನವು ಸಂಪೂರ್ಣ ಹೊಸತೇನೂ ಅಲ್ಲ. ಗಣಕಗಳ ಮೆಮೊರಿಗಳಲ್ಲಿ ಇದು ಈಗಾಗಲೇ ಬಳಕೆಯಲ್ಲಿದೆ. ಯುಎಸ್‌ಬಿ ಡ್ರೈವ್, ಮೈಕ್ರೊಎಸ್‌ಡಿ ಕಾರ್ಡ್ ಇತ್ಯಾದಿಗಳಲ್ಲೂ ಇದೇ ತಂತ್ರಜ್ಞಾನ ಬಳಕೆಯಲ್ಲಿದೆ. ಹಾರ್ಡ್‌ಡಿಸ್ಕ್ ಹಾಗೂ ಎಸ್‌ಎಸ್‌ಡಿಗಳಿಗೂ ಇರುವ ಪ್ರಮುಖ ವ್ಯತ್ಯಾಸಗಳನ್ನು ಕೋಷ್ಟಕ1ರಲ್ಲಿ ನೀಡಲಾಗಿದೆ.

ಈ ಕೋಷ್ಟಕದಿಂದ ನಮಗೆ ವೇದ್ಯವಾಗುವುದೇನೆಂದರೆ ಎಸ್‌ಎಸ್‌ಡಿಗಳು ಮಾಮೂಲಿ ಹಾರ್ಡ್‌ಡಿಸ್ಕ್‌ಗಳಿಗಿಂತ ಎಷ್ಟೋ ಪಟ್ಟು ಅಧಿಕ ವೇಗವಾಗಿ ಕೆಲಸ ಮಾಡಬಲ್ಲವು ಹಾಗೂ ಅವು ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸುತ್ತವೆ ಎಂದು. ಹಲವು ಕಂಪೆನಿಗಳ ಎಸ್‌ಎಸ್‌ಡಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಈ ವಾರ ನಾವು ವಿಮರ್ಶೆ ಮಾಡುತ್ತಿರುವುದು ಸ್ಯಾಮ್‌ಸಂಗ್ ಕಂಪೆನಿಯ ಟಿ5 (Samsung T5 SSD) ಶ್ರೇಣಿಯ ಡ್ರೈವ್ ಅನ್ನು.

ಈ ಡ್ರೈವ್‌ಗಳು 250, 500 ಗಿಗಾಬೈಟ್ ಮತ್ತು 1, 2 ಟೆರ್‍ರಾಬೈಟ್ ಸಂಗ್ರಹಶಕ್ತಿಗಳಲ್ಲಿ ಲಭ್ಯ. ನನಗೆ ವಿಮರ್ಶೆಗೆ ಬಂದುದು 500 ಗಿಗಾಬೈಟ್ ಸಂಗ್ರಹಶಕ್ತಿಯದು. ಅದರ ಗುಣವೈಶಿಷ್ಟ್ಯಗಳನ್ನು ಕೋಷ್ಟಕ 2ರಲ್ಲಿ ನೀಡಲಾಗಿದೆ.

ಇದರ ಗುಣವೈಶಿಷ್ಟ್ಯಗಳನ್ನು ನೋಡಿದರೆ ಇದು ಒಂದು ಚಿಕ್ಕ ಹಾಗೂ ಹಗುರವಾದ ಡ್ರೈವ್ ಎಂದು ವೇದ್ಯವಾಗುತ್ತದೆ. ಇದನ್ನು ಆರಾಮವಾಗಿ ಕಿಸೆಯಲ್ಲಿ ಇಟ್ಟುಕೊಳ್ಳಬಹುದು. ಇದರ ಪೆಟ್ಟಿಗೆಯಲ್ಲಿ ಎರಡು ನಮೂನೆಯ ಯುಎಸ್‌ಬಿ ಕೇಬಲ್‌ಗಳನ್ನು ನೀಡಿದ್ದಾರೆ. ಎರಡೂ ಕೇಬಲ್‌ಗಳಲ್ಲಿ ಒಂದು ತುದಿಯಲ್ಲಿ ಯುಎಸ್‌ಬಿ-ಸಿ ಮಾದರಿಯ ಕನೆಕ್ಟರ್ ಇದೆ. ಒಂದು ಕೇಬಲ್‌ನಲ್ಲಿ ಇನ್ನೊಂದು ತುದಿಯಲ್ಲಿ ಗಣಕಕ್ಕೆ ಅಥವಾ ಲ್ಯಾಪ್‌ಟಾಪ್‌ಗೆ ಜೋಡಿಸುವ ಯುಎಸ್‌ಬಿ ಎ ಕನೆಕ್ಟರ್ ಇದೆ. ಮತ್ತೊಂದು ಕೇಬಲ್‌ನ ಇನ್ನೊಂದು ತುದಿಯಲ್ಲಿ ಯುಎಸ್‌ಬಿ-ಸಿ ನಮೂನೆಯ ಕನೆಕ್ಟರ್ ಇದೆ. ಈ ಕೇಬಲ್ ಬಳಸಿ ಈ ಡ್ರೈವ್ ಅನ್ನು ಯುಎಸ್‌ಬಿ-ಸಿ ನಮೂನೆಯ ಕಿಂಡಿ ಇರುವ ಸ್ಮಾರ್ಟ್‌ಫೋನಿಗೆ ಜೋಡಿಸಬಹುದು.

ಈ ಡ್ರೈವ್‌ನಲ್ಲಿ ಒಂದು ತಂತ್ರಾಂಶ ಇದೆ. ಅದನ್ನು ಗಣಕ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಅದನ್ನು ಬಳಸಿ ಈ ಡ್ರೈವ್‌ಗೆ ಪಾಸ್‌ವರ್ಡ್ ಹಾಕಿಟ್ಟುಕೊಳ್ಳಬಹುದು. ಹಾಗೆ ಹಾಕಿಟ್ಟುಕೊಂಡು ಸಂಗ್ರಹಿಸಿಟ್ಟ ಮಾಹಿತಿಯನ್ನು ವಾಪಸು ಪಡೆಯಬೇಕಿದ್ದರೆ ಅದೇ ತಂತ್ರಾಂಶವನ್ನು ಪ್ರಾರಂಭಿಸಿ ಪಾಸ್‌ವರ್ಡ್ ಹಾಕಿಯೇ ಪಡೆಯಬೇಕು. ಈ ಡ್ರೈವ್ ಬಳಸಲು ಗೂಗಲ್‌ ಪ್ಲೇ ಸ್ಟೋರಿನಲ್ಲಿ ಸ್ಯಾಮ್‌ಸಂಗ್‌ನವರದೇ ಒಂದು ಆ್ಯಪ್ ಇದೆ. ಅದನ್ನು ನಿಮ್ಮ ಆಂಡ್ರಾಯ್ಡ್‌ ಫೋನಿಗೆ ಹಾಕಿಕೊಂಡರೆ ಗಣಕ ಬಳಸಿ ಪಾಸ್‌ವರ್ಡ್ ಹಾಕಿ ಈ ಡ್ರೈವ್‌ನಲ್ಲಿ ಸಂರಕ್ಷಿಸಿಟ್ಟು ಕೊಂಡ ಫೈಲ್‌ಗಳನ್ನು ಮತ್ತೆ ಪಾಸ್‌ವರ್ಡ್‌ ಬಳಸಿ ಪಡೆಯ ಬಹುದು. ಈ ತಂತ್ರಾಂಶ ಇಲ್ಲದೆಯೂ ಡ್ರೈವ್ ಬಳಸಬಹುದು. ಆಗ ಪಾಸ್‌ವರ್ಡ್ ಮೂಲಕ ಸಂರಕ್ಷಿಸಲು ಆಗುವುದಿಲ್ಲ.

ಎಸ್‌ಎಸ್‌ಡಿಗಳನ್ನು ಪರೀಕ್ಷಿಸಲು ಹಲವು ತಂತ್ರಾಂಶಗಳು ಲಭ್ಯವಿವೆ. ಅಂತಹ ಒಂದು ತಂತ್ರಾಂಶ ಬಳಸಿ ಇದನ್ನು ಪರಿಶೀಲಿಸಿದೆ. ಆಗ ದೊರೆತ ಫಲಿತಾಂಶ ಈ ರೀತಿ ಇದೆ.

1.2 ಗಿಗಾಬೈಟ್ ಗಾತ್ರದ ಒಂದು ಸಿನಿಮಾದ ಫೈಲ್ ಅನ್ನು ಗಣಕದಿಂದ ಈ ಡ್ರೈವ್‌ಗೆ ವರ್ಗಾಯಿಸಿ ನೋಡಿದೆ. ಆಗ ಮಾಹಿತಿ ವರ್ಗಾವಣೆಯ ವೇಗ ಸುಮಾರು 60 MB/sನಷ್ಟಿತ್ತು. ಎರಡು ನಮೂನೆಯ ಕೇಬಲ್‌ಗಳನ್ನು ನೀಡಿರುವುದರಿಂದ ಈ ಡ್ರೈವ್ ಅನ್ನು ಗಣಕ, ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್ ಜೊತೆ ಬಳಸಬಹುದು. ಅತಿ ವೇಗವಾಗಿ ಮಾಹಿತಿ ವರ್ಗಾವಣೆ ಆಗುತ್ತದೆ. ಇದು ಛಾಯಾಗ್ರಾಹಕರಿಗೆ, ಸಂಗೀತ ಸಂಯೋಜನೆ ಮಾಡುವವರಿಗೆ, ತಂತ್ರಾಂಶ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉಪಯುಕ್ತ. ಹಾಗೆಂದು ಹೇಳಿ ಜನಸಾಮಾನ್ಯರಿಗೆ ಉಪಯುಕ್ತವಲ್ಲ ಎಂದಲ್ಲ.

ಇದನ್ನು ಅತಿ ವೇಗದಲ್ಲಿ ಮಾಹಿತಿ ವರ್ಗಾವಣೆ ಹಾಗೂ ಚಿಕ್ಕ ಗಾತ್ರದ ಬಾಹ್ಯ ಡ್ರೈವ್ ಬೇಕಿರುವ ಯಾರಾದರೂ ಬಳಸಬಹುದು.

***

ವಾರದ ಆ್ಯಪ್

ಏಳು (7)

ಇದೇನು ಶೀರ್ಷಿಕೆ ಹೀಗಿದೆ ಅಂದುಕೊಂಡಿದ್ದೀರಾ? ಇಲ್ಲಿ ಏಳು ಎಂಬುದು ಅಂಕಿ (ಅಥವಾ ಸಂಖ್ಯೆ), ಮಲಗಿದ್ದರೆ ಎದ್ದೇಳಿ ಎಂದು ಹೇಳುತ್ತಿರುವುದಲ್ಲ. ಇದು ಸರಳ ಆಟ. ಹಲವು ಇಟ್ಟಿಗೆಗಳು ಕಂಡುಬರುತ್ತವೆ. ಅವುಗಳ ಮೇಲೆ 1, 2, 3, 6 ಇತ್ಯಾದಿ ಅಂಕಿಗಳನ್ನು ಬರೆದಿರುತ್ತಾರೆ. ಈ ಅಂಕಿಗಳು 1 ರಿಂದ 6ರ ತನಕ ಮಾತ್ರ ಇರುತ್ತವೆ. ಪಕ್ಕ ಪಕ್ಕದಲ್ಲಿರುವ ಇಟ್ಟಿಗೆಗಳ ಮೇಲೆ ಬೆರಳಿಟ್ಟು ಬೆರಳನ್ನು ಸರಿಸುತ್ತಾ ಆ ಇಟ್ಟಿಗೆಗಳ ಮೇಲೆ ಬರೆದ ಅಂಕಿಗಳ ಮೊತ್ತ 7 ಆಗುವಂತೆ ಮಾಡಬೇಕು. ಆಗ ಆ ಇಟ್ಟಿಗೆಗಳು ನಾಶವಾಗುತ್ತವೆ ಮತ್ತು ನಿಮಗೆ ಅಂಕ ದೊರೆಯುತ್ತದೆ. ಎಲ್ಲ ಆಟಗಳಂತೆ ಇದರಲ್ಲೂ ಹಲವು ಹಂತಗಳಿವೆ. ಹೊತ್ತು ಕಳೆಯಲು ಉತ್ತಮ ಆಟ. ಜೊತೆಗೆ ಮೆದುಳಿಗೂ ಸ್ವಲ್ಪ ಕೆಲಸ ನೀಡುತ್ತದೆ. ಈ ಆಟ ಬೇಕಿದ್ದರೆ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ 7 ಎಂದು ಹುಡುಕಿ ಅಥವಾ http://bit.ly/gadgetloka296 ಜಾಲತಾಣಕ್ಕೆ ಭೇಟಿ ನೀಡಿ.

***

ಗ್ಯಾಜೆಟ್ ಸುದ್ದಿ

ವಿವೊ ಸುಳ್ಳು ಹೇಳುತ್ತಿದೆಯೇ?

ವಿವೊ ಕಂಪೆನಿ ಇತ್ತೀಚೆಗೆ ತುಂಬ ಗದ್ದಲ ಮಾಡಿ ಬಿಡುಗಡೆ ಮಾಡಿದ ವಿವೊ7+ ಫೋನಿನಲ್ಲಿ 24 ಮೆಗಾಪಿಕ್ಸೆಲ್‌ ರೆಸೊಲ್ಯೂಶನ್‌ನ ಸೆಲ್ಫೀ ಕ್ಯಾಮೆರಾ ಇದೆ ಎಂದು ಹೇಳಿಕೊಂಡಿತ್ತು. ಅಷ್ಟು ಮಾತ್ರವಲ್ಲ, ಅದನ್ನೇ ತನ್ನ ವೈಶಿಷ್ಟ್ಯ ಎಂದು ಎಲ್ಲ ಕಡೆ ಪ್ರಚಾರ ಮಾಡಿತ್ತು. ಈ ಫೋನಿನಲ್ಲಿ ಬಳಕೆಯಾಗಿರುವುದು ಕ್ವಾಲ್ಕಂ ಕಂಪೆನಿ ತಯಾರಿಸಿದ ಕಡಿಮೆ ಬೆಲೆಯ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್. ಈ ಪ್ರೊಸೆಸರ್ 21 ಮೆಗಾಪಿಕ್ಸೆಲ್ ತನಕ ಮಾತ್ರ ಬೆಂಬಲಿಸಬಲ್ಲುದು ಎಂದು ಕ್ವಾಲ್ಕಂ ಕಂಪೆನಿಯ ಜಾಲತಾಣದಲ್ಲಿ ಬರೆದಿತ್ತು. ಈ ವ್ಯತ್ಯಾಸವನ್ನು ಪತ್ತೆ ಹಚ್ಚಿದ ಬೆಂಗಳೂರಿನ ಬ್ಲಾಗರ್ ವಿನಯ ಗೌಡ ಅವರು ತಮ್ಮ ಬ್ಲಾಗಿನಲ್ಲಿ ವಿವೊ ಮೋಸ ಮಾಡುತ್ತಿದೆಯೇ ಎಂದು ಬರೆದರು (http://bit.ly/gadgetloka296a). ಇದು ತುಂಬ ಸುದ್ದಿಯಾಯಿತು. ಕೊನೆಗೆ ವಿವೊ ಒಂದು ಸ್ಪಷ್ಟೀಕರಣ ನೀಡಿ ಕ್ವಾಲ್ಕಂ ತನ್ನ ಜಾಲತಾಣದಲ್ಲಿ ಸ್ನಾಪ್‌ಡ್ರಾಗನ್ 450ರ ಗುಣವೈಶಿಷ್ಟ್ಯವನ್ನು ನವೀಕರಿಸಿದೆ ಎಂದು ಹೇಳಿತು.

ಆ ಜಾಲತಾಣದಲ್ಲಿ ‘Dual camera up to 13 MP, Single Camera up to 21MP @ 30fps, 24MP @ 24fps’ ಎಂದು ಬರೆದಿದೆ. ಇಲ್ಲಿ fps ಏನು ಮಾಡುತ್ತಿದೆ ಅರ್ಥವಾಗುತ್ತಿಲ್ಲ. FPS ಎಂದರೆ frames per second. ಇದು ಸಾಮಾನ್ಯವಾಗಿ ವಿಡಿಯೊ ಅಥವಾ burst click ಅಂದರೆ ಅತಿ ವೇಗವಾಗಿ ಕ್ಲಿಕ್ ಮಾಡುವುದಕ್ಕೆ ಅನ್ವಯವಾಗುತ್ತದೆ. ಅಂದರೆ ಕಡಿಮೆ ವೇಗದಲ್ಲಿ ಫೋಟೊ ತೆಗೆದರೆ ಹೆಚ್ಚಿನ ರೆಸೊಲ್ಯೂಶನ್‌ನಲ್ಲಿ ಫೋಟೊ ತೆಗೆಯಬಹುದು ಎಂದೇ? ಒಂದೇ ಫೋಟೊ ತೆಗೆದರೆ ಎಷ್ಟು ರೆಸೊಲ್ಯೂಶನ್? ವಿವೋ ಮತ್ತು ಕ್ವಾಲ್ಕಂ ವಿವರ ನೀಡಬಹುದೇ?

***

ಗ್ಯಾಜೆಟ್ ಸಲಹೆ

ಹೊಸ ಐಫೋನ್ ಎಕ್ಸ್‌ನಲ್ಲಿ ನಿಮ್ಮ ಮುಖವೇ ಪಾಸ್‌ವರ್ಡ್. ಅದರ ಬಗ್ಗೆ ಹಲವು ನಗೆಹನಿಗಳು ಅಂತರಜಾಲದಲ್ಲಿ ಓಡಾಡುತ್ತಿವೆ. ಕೆಲವು-

l ಅವಳಿಜವಳಿಗಳು ಒಂದೇ ಫೋನ್ ಬಳಸಬಹುದು.

l ಮೇಕಪ್ ಮಾಡಿಕೊಂಡ ಸಿನಿಮಾ ನಟಿಯ ಐಫೋನ್ ಕೆಲಸ ಮಾಡಲಿಲ್ಲ.

l ನನಗೆ ಅಪಘಾತವಾಗಿದೆ ಎಂದು ಪೊಲೀಸರಿಗೆ ತಿಳಿಸಲು ಹೊರಟಾಗ ಐಫೋನ್ ಕೆಲಸ ಮಾಡಲಿಲ್ಲ.

l ಮೂರು ತಿಂಗಳಿಗೊಮ್ಮೆ ನಿಮ್ಮ ಪಾಸ್‌ವರ್ಡ್ ಬದಲಿಸಬೇಕೆಂಬ ನಿಯಮವಿದೆ. ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ನೀವು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಮುಖಚಹರೆ ಬದಲಿಸಬೇಕು!

***

ಗ್ಯಾಜೆಟ್ ತರ್ಲೆ

ಚಂದನ ಗೌಡರ ಪ್ರಶ್ನೆ: ₹15,000ದ ಒಳಗೆ ಉತ್ತಮ ಫೋನ್ ಸೂಚಿಸಿ. ಹಾಗೆಯೇ ಹೋನರ್ 8 ಲೈಟ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉ:  ನೀವು ಶಿಯೋಮಿ ಎಂಐ ಎ1 ಕೊಳ್ಳಬಹುದು. ಅದರ ವಿಮರ್ಶೆಯನ್ನು ನಿರೀಕ್ಷಿಸಿ. ಹೋನರ್ 8 ಲೈಟ್ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಗ್ಯಾಜೆಟ್‌ಲೋಕದ ಎಲ್ಲ ಹಳೆಯ ಸಂಚಿಕೆಗಳನ್ನು http://bitly.com/gadgetloka ಜಾಲತಾಣದಲ್ಲಿ ಓದಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry