6

ಕಸ್ಸೀನಿಯ ಕ್ಯಾಮರಾಗಳಲ್ಲಿ ಶನಿ ಮಹಾತ್ಮೆ

ನಾಗೇಶ ಹೆಗಡೆ
Published:
Updated:
ಕಸ್ಸೀನಿಯ ಕ್ಯಾಮರಾಗಳಲ್ಲಿ ಶನಿ ಮಹಾತ್ಮೆ

ಕಳೆದ 13 ವರ್ಷಗಳಿಂದ ಶನಿಗ್ರಹಕ್ಕೆ ಶುಕ್ರದೆಸೆ ಬಂದಂತಾಗಿತ್ತು. ಮನುಷ್ಯರು ಕಳಿಸಿದ್ದ ‘ಕಸ್ಸೀನಿ’ ಎಂಬ ಗಗನನೌಕೆಯ ಮೂಲಕ ಶನಿ ಕುಟುಂಬದ ಅಷ್ಟೊಂದು ಸದಸ್ಯರು ಭೂಜೀವಿಗಳೆದುರು ತಮ್ಮ ವೈಭವವನ್ನು ಮೆರೆಯುವಂತಾಗಿತ್ತು. ಕಸ್ಸೀನಿ ನೌಕೆ ಶನಿಯ ಬಹು ವಿಶಿಷ್ಟ ಉಪಗ್ರಹಗಳನ್ನೆಲ್ಲ ಸಮೀಪದಿಂದ ನೋಡುತ್ತ, ಒಂದರಿಂದ ಇನ್ನೊಂದಕ್ಕೆ ಲಾಗಾ ಹಾಕುತ್ತ, ಅಲ್ಲಿನ ಬಣ್ಣದ ಬಳೆಗಳ ಮಧ್ಯೆ ಕೊಡೆ ಬಿಚ್ಚಿಕೊಂಡು ತೂರಿಕೊಳ್ಳುತ್ತ, ತನ್ನ ಹೊಟ್ಟೆಯೊಳಗಿನ ಶೋಧ ಪೆಟ್ಟಿಗೆಯನ್ನು ಶನಿಯ ಅತಿ ದೊಡ್ಡ ಚಂದ್ರನ ಮೇಲೆ ಇಳಿಸಿ ಅಚ್ಚರಿಯ ಮಾಹಿತಿಗಳನ್ನು ಭೂಮಿಗೆ ರವಾನಿಸುತ್ತಿತ್ತು.

ಮನುಷ್ಯನ ಅಮೋಘ ತಂತ್ರಚಕ್ಯತೆಯ ಪ್ರತಿನಿಧಿಯಾಗಿ ನಾಲ್ಕು ವರ್ಷ ಮಾತ್ರ ಕೆಲಸ ಮಾಡಬೇಕಿದ್ದ ಕಸ್ಸೀನಿ ಹದಿಮೂರು ವರ್ಷ ದುಡಿದಿತ್ತು; ಸುಸ್ತಾಗಿತ್ತು. ಮೊನ್ನೆ ಶುಕ್ರವಾರ ನಾಸಾ ತಜ್ಞರು ಅದನ್ನು ಶನಿಗ್ರಹಕ್ಕೇ ಡಿಕ್ಕಿ ಹೊಡೆಸಿ ಬಲಿ ಕೊಟ್ಟರು. ಕೊಟ್ಟು ಕಣ್ಣೀರಿನ ವಿದಾಯ ಹೇಳಿದರು.

‘ಡಿಕ್ಕಿ ಹೊಡೆಸಿ’ ಎಂಬುದು ಸರಿಯಾದ ವಿವರಣೆ ಅಲ್ಲ ಅನ್ನಿ. ಏಕೆಂದರೆ ಶನಿಗ್ರಹ -ಅದು ಭೂಮಿಗಿಂತ 95 ಪಟ್ಟು ದೊಡ್ಡದಾಗಿದ್ದರೂ ಅದೊಂದು ಅನಿಲದ ಉಂಡೆ. ಗಟ್ಟಿ ನೆಲ ಇಲ್ಲವೇ ಇಲ್ಲ. ನೀರಲ್ಲಿ ಅದ್ದಿದರೆ ತೇಲುವ ಪುಗ್ಗಿಯಂತೆ ಕಂಡೀತು. ತೀರ ಆಳದಲ್ಲಿ ದ್ರವರೂಪಿ ಜಲಜನಕ ಇದ್ದೀತೆಂದು ಊಹಿಸಲಾಗಿದೆ. ಅದಕ್ಕೆ ಹತ್ತಿಪ್ಪತ್ತಲ್ಲ, 63 ಚಂದ್ರಗಳಿವೆ. ನಮ್ಮಿಂದ 120 ಕೋಟಿ ಕಿಲೊಮೀಟರ್ ದೂರದ ಆಕಾಶದಲ್ಲಿ ಬಂಗಾರ ಬಣ್ಣದ ನಕ್ಷತ್ರದಂತೆ ಕಾಣುವ ಶನಿಗ್ರಹ ಸಾವಿರಾರು ವರ್ಷಗಳಿಂದ ನಮಗೆಲ್ಲ ಕುತೂಹಲದ ವಸ್ತುವಾಗಿತ್ತು.

ನಾವೇನೊ ಅದನ್ನು ಅನಿಷ್ಟ ಗ್ರಹವೆಂದು ಪರಿಗಣಿಸಿದ್ದರೆ ಗ್ರೀಕ್ ರೋಮನ್ನರು ಶನಿಯನ್ನು ಕೃಷಿ ದೇವತೆ ಎಂದು ಪರಿಗಣಿಸಿದ್ದರು. ಗೆಲಿಲಿಯೊ ತನ್ನ ಮಬ್ಬು ದೂರದರ್ಶಕದಲ್ಲಿ ಅದನ್ನು ನೋಡಿದ. ಶನಿಗೆ ಬಳೆ ಇರುವುದು ಗೊತ್ತಾಗಲಿಲ್ಲ. ಅಕ್ಕಪಕ್ಕದಲ್ಲಿ ಎರಡು ಉಪಗ್ರಹ ಇವೆ ಎಂದು ಆತ ವರ್ಣಿಸಿದ್ದ. ಆಮೇಲೆ ತುಸು ಸುಧಾರಿತ ದೂರದರ್ಶಕಗಳನ್ನು ಬಳಸಿ ಕ್ರಿಸ್ತಿಯಾನ್ ಹೈಗೆನ್ಸ್ ಎಂಬಾತ ಶನಿಯ ಸುತ್ತಲಿನ ಬಳೆಯನ್ನು ಗುರುತಿಸಿದ.

ಅದರ ಅತಿ ದೊಡ್ಡ ಉಪಗ್ರಹ ಟೈಟಾನನ್ನೂ ಪತ್ತೆ ಹಚ್ಚಿದ. ನಂತರ ಬಂದ ಜೊವಾನ್ನಿ ಕಸ್ಸೀನಿ (Giovanni Cassini) 1675ರಲ್ಲಿ ಬಳೆಗಳ ನಡುವಣ ಖಾಲಿಸ್ಥಳವನ್ನೂ ಪತ್ತೆ ಮಾಡಿದ್ದಲ್ಲದೆ ಇನ್ನೂ ನಾಲ್ಕಾರು ಉಪಗ್ರಹಗಳನ್ನೂ ಗುರುತಿಸಿದ. ಅಮೆರಿಕದ ನಾಸಾ ಸಂಸ್ಥೆ 1981ರಲ್ಲಿ ವಯಾಜರ್ ನೌಕೆ ಶನಿಯ ಸಮೀಪದಿಂದ ಹಾದು ಹೋದಾಗ ಅಲ್ಲಿನ ಜಗತ್ತು ಇನ್ನಷ್ಟು ಕುತೂಹಲ ಕೆರಳಿಸಿತ್ತು. ಅದರ ಅಧ್ಯಯನಕ್ಕೆ ಪ್ರತ್ಯೇಕ ನೌಕೆಯನ್ನು ಕಳಿಸಲು ನಿರ್ಧರಿಸಲಾಯಿತು.

1997ರಲ್ಲಿ ಮನುಷ್ಯ ನಿರ್ಮಿತ ಅತಿ ದೊಡ್ಡ ಬಾಹ್ಯಾಕಾಶ ಯಂತ್ರವಾಗಿ ಮಿನಿಬಸ್ ಗಾತ್ರದ ಕಸ್ಸೀನಿ ಮೇಲೇರುವಾಗಲೇ ಅತಿ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಏಕೆಂದರೆ ಅಷ್ಟು ದೊಡ್ಡ ಯಂತ್ರವನ್ನು 120 ಕೋಟಿ ಕಿಲೊಮೀಟರ್ ಆಚೆ ಕಳಿಸಿ ಅಲ್ಲಿನ ಶನಿಕೂಟದಲ್ಲಿ ಸುತ್ತಿಸಲು ಪ್ಲುಟೊನಿಯಂ ಎಂಬ ಅಣು ಇಂಧನವನ್ನು ತುಂಬಿಸಲಾಗಿತ್ತು. ಈ ಯಂತ್ರವನ್ನು ಮೇಲೆತ್ತಲು ರಾಕೆಟ್ ಅಕಸ್ಮಾತ್ ವಿಫಲವಾಗಿ ಢಮ್ ಎಂದಿದ್ದರೆ ಅದು ನಾಗಾಸಾಕಿ ಬಾಂಬ್‌ನಂತೇ ಸಿಡಿಯುವ ಸಾಧ್ಯತೆ ಇತ್ತು.

ಸುರಕ್ಷಿತವಾಗಿ ಮೇಲಕ್ಕೆ ಚಿಮ್ಮಿದರೂ ಮುಂದೆ ಯಾವುದೋ ಕ್ಷುದ್ರಗ್ರಹಕ್ಕೊ, ಶನಿಯ ಚಂದ್ರನಿಗೋ ಡಿಕ್ಕಿ ಹೊಡೆದರೆ ಅಲ್ಲೆಲ್ಲ ಪರಮಾಣು ತ್ಯಾಜ್ಯವನ್ನು ಹರಡುವ ಸಾಧ್ಯತೆ ಇತ್ತು. ಅದಕ್ಕೇ ಕಸ್ಸೀನಿಗೆ ಸೌರ ರೆಕ್ಕೆ ಜೋಡಿಸುವಂತೆ ಒತ್ತಾಯಿಸಿ, ನ್ಯೂಕ್ಲಿಯರ್ ಇಂಧನವನ್ನು ವಿರೋಧಿಸಿ ಇಡೀ ಅಮೆರಿಕದ ಉದ್ದಗಲಕ್ಕೂ ಭಾರೀ ಪ್ರತಿಭಟನೆಗಳು ನಡೆದವು. ನ್ಯಾಸಾ ಕ್ಯಾರೇ ಅನ್ನಲಿಲ್ಲ. ಬದಲಿಗೆ 81 ರಾಷ್ಟ್ರಗಳ ಆರು ಲಕ್ಷ ಜನರ ಶುಭ ಹಾರೈಕೆಗಳ ಸಹಿ ಇರುವ ಡಿಜಿಟಲ್ ತಟ್ಟೆಯನ್ನು ಕಸ್ಸೀನಿಯ ಉಡಿಯಲ್ಲಿಟ್ಟು ಸುರಕ್ಷಿತ ಉಡಾವಣೆ ಮಾಡಿತ್ತು.

ಆದರೂ ಆತಂಕ ದೂರವಾಗುವ ಬದಲು ಮತ್ತೊಮ್ಮೆ ಮರುಕಳಿಸಿತ್ತು. ಶನಿಯವರೆಗೆ ಸಾಗಬೇಕೆಂದರೆ ಭಾರೀ ನೂಕು ಬಲ ಬೇಕು. ಅದಕ್ಕೇ ಕಸ್ಸೀನಿ ಬುಧಗ್ರಹಕ್ಕೆ ಹೋಗಿ ಎರಡು ವರ್ಷಗಳ ನಂತರ ಅಲ್ಲಿಂದ ಮತ್ತೆ ಭೂಮಿಯ ಕಕ್ಷೆಯನ್ನು ಸವರಿ ಕವಣೆಯ ಕಲ್ಲಿನಂತೆ ಚಿಮ್ಮಿ ಹೋಗಬೇಕಿತ್ತು.

1999ರಲ್ಲಿ ಅದು ಭೂಮಿಯ ಸಮೀಪ ಬಂದಾಗ ಎರಡನೆಯ ಬಾರಿ ಭೀತಿಯ ಬಿತ್ತರಣೆಯಾಯಿತು. ‘ಪ್ಲುಟೊನಿಯಂ ಹೊತ್ತ ಕಸ್ಸೀನಿ ಗಂಟೆಗೆ 65 ಸಾವಿರ ಕಿ.ಮೀ ವೇಗದಲ್ಲಿ ನಮ್ಮತ್ತ ಬರುತ್ತಿದೆ’ ಎಂಬ ಎಚ್ಚರಿಕೆ ಗಂಟೆ ಎಲ್ಲ ಮಾಧ್ಯಮಗಳಲ್ಲಿ ಮೊಳಗಿತ್ತು. ‘ಪರಮಾಣು ಶಕ್ತಿಯ ವಿರುದ್ಧ ಇಮೇಲ್ ಸುರಿಮಳೆ ಆಯಿತೇ ವಿನಾ ಈಗಲೂ ವಿಕಿರಣ ಸುರಿಯಲಿಲ್ಲ’ ಎಂದು ಇದೇ ಅಂಕಣದಲ್ಲಿ ಅಂದು ಬರೆಯಲಾಗಿತ್ತು.

ಭೂಕಕ್ಷೆಯನ್ನೇ ಕವಣೆಯಂತೆ ಬಳಸಿಕೊಂಡು ಮತ್ತೆ ಚಿಮ್ಮಿದ ಕಸ್ಸೀನಿ ಸುತ್ತು ಬಳಸಿ 320 ಕೋಟಿ ಕಿಲೊಮೀಟರ್ ಸಾಗಿ, ಏಳು ವರ್ಷಗಳ ನಂತರ 2004ರಲ್ಲಿ ಶನಿಗ್ರಹವನ್ನು ಸುತ್ತಿ ಅದರ ಅತಿ ದೊಡ್ಡ ಉಪಗ್ರಹ ಟೈಟಾನ್ ಸಮೀಪ ಬಂದಾಗ ಇಡೀ ಜಗತ್ತೇ ಕಣ್ಣರಳಿಸಿ ನೋಡುವಂತಾಗಿತ್ತು. ನಮ್ಮ ಚಂದ್ರನಿಗಿಂತ ಒಂದೂವರೆ ಪಟ್ಟು ದೊಡ್ಡದಾದ ಈ ಉಪಗ್ರಹಕ್ಕಿಂತ ಅದನ್ನು ಸುತ್ತಿಕೊಂಡ ವಾಯುಮಂಡಲವೇ ಹೆಚ್ಚಿನ ವೇಗದಲ್ಲಿ ಗಿರಕಿ ಹೊಡೆಯುತ್ತಿದೆ.

ಹುಷಾರಾಗಿ ಕಸ್ಸೀನಿ ತನ್ನ ಗರ್ಭದಿಂದ ಫ್ರಿಜ್ ಗಾತ್ರದ ‘ಹೈಗೆನ್ಸ್’ ಎಂಬ ಶೋಧ ಯಂತ್ರವನ್ನು ಹೊರತೆಗೆಯಿತು. ಮೊದಲ ಬಾರಿಗೆ ಅನ್ಯಗ್ರಹದ ಚಂದ್ರನ ಮೇಲೆ ಯಂತ್ರವನ್ನು ಇಳಿಸಿದ ಖ್ಯಾತಿ ಮನುಷ್ಯರಿಗೆ ಬಂತು. ಐರೋಪ್ಯ ಬಾಹ್ಯಾಕಾಶ ಸಂಸ್ಥೆ ತಯಾರಿಸಿದ್ದ ‘ಹೈಗೆನ್ಸ್’ ಹೆಸರಿನ ಆ ಯಂತ್ರ ಮೆಲ್ಲಗೆ ದಟ್ಟ ಮೋಡಗಳ ಮಧ್ಯೆ ಧೊಪ್ಪೆಂದು ಗಟ್ಟಿ ನೆಲದ ಮೇಲೆ ಬಿದ್ದಾಗ ಖಗೋಲ ವಿಜ್ಞಾನಿಗಳಿಗೇ ಆಘಾತವಾಯಿತೇನೊ. ಆದರೆ ಆ ಪೆಟ್ಟಿಗೆ ಬಡಪಟ್ಟಿಗೆ ಹಾಳಾಗುವಂತಿರಲಿಲ್ಲ.ತನ್ನ ಸುತ್ತಲಿನ ಹಳ್ಳವನ್ನೂ ಅಲ್ಲಿ ಹರಿಯುವ ದ್ರವವನ್ನೂ ವಿಶ್ಲೇಷಣೆ ಮಾಡಿ ವರದಿ ಕಳಿಸಿತು.

ವಿಜ್ಞಾನಿಗಳಿಗೆ ಈಗ ಅಚ್ಚರಿ. ‘ನಾವು ಮತ್ತೊಂದು ಪೃಥ್ವಿಯನ್ನು ನೋಡಿದಂತಾಗಿದೆ. ಅದು 130 ಕೋಟಿ ಕಿ.ಮೀ. ದೂರದಲ್ಲಿ, ಮುನ್ನೂರು ಕೋಟಿ ವರ್ಷಗಳ ಹಿಂದಿನ ಪೃಥ್ವಿಯಂತಿದೆ’ ಎಂದು ಉದ್ಗರಿಸಿದ್ದರು. ಹಳ್ಳಕೊಳ್ಳ, ನದಿ-ಶರಧಿ ಏನೆಲ್ಲ. ಆದರೆ ನೀರಿನದಲ್ಲ! ಸಾರಜನಕ ಮೋಡ, ಈಥೇನ್ ಹಿಮದ ಹಾಸು; ಪರಿಮಳ ಬೀರುವ ಅಸಿಟೇನ್, ಬೆಂಝೀನ್ ಮುಂತಾದ ಸಾವಯವ ಸಂಯುಕ್ತಗಳ ಹಳ್ಳ, ಕೊಳ್ಳ; ಮೀಥೇನ್ ಸಾಗರ. ನಮ್ಮ ಕಲ್ಪನೆಗೂ ಎಟುಕದ ಜೀವಿಗಳು ಅಲ್ಲಿ ಇರಬಹುದು.

ಹೈಗೆನ್ಸ್ ಶೋಧಯಂತ್ರವನ್ನು ಇಳಿಸಿ ಹೊರಟು ಹೋದ ಕಸ್ಸೀನಿ ಆಮೇಲೆ ನೂರಾರು ಬಾರಿ ಟೈಟಾನ್ ಬಳಿ ಬಂತು. ಹೈಗೆನ್ಸ್‌ನ ಯೋಗಕ್ಷೇಮ ನೋಡಲಿಕ್ಕಲ್ಲ. ಟೈಟಾನ್ ಗುರುತ್ವವನ್ನು ಕವಣೆಯಂತೆ ಬಳಸಿ ಬೇರೆ ಬೇರೆ ದಿಕ್ಕಿಗೆ ಚಿಮ್ಮುತ್ತ ಶನಿಯ ಕುಟುಂಬದ ಇತರ ಸದಸ್ಯರಿಗೆ ಹಲೋ ಹೇಳಲೆಂದು. ಅದು ಕೊಡೆ ಬಿಚ್ಚಿ ಶನಿಯ ಚಮತ್ಕಾರಿಕ ಬಳೆಗಳ ಮೂಲಕ ಹಾಯುತ್ತಿದ್ದಾಗ ಇಲ್ಲಿನ ವೀಕ್ಷಕರಿಗೆ ಡವಡವ.

ಬಳೆ ಎಂದರೆ ಚಿಕ್ಕದೊಡ್ಡ ಹಿಮಗಲ್ಲುಗಳ ವೃತ್ತಾಕಾರ ಪಟ್ಟೆ ಪ್ರವಾಹ. ಕೆಲವು ಪಟ್ಟೆಗಳು ಲಕ್ಷಾಂತರ ಕಿಲೊಮೀಟರ್ ದಪ್ಪ. ಅವುಗಳ ನಿರಿಗೆಯ ಬಿಳಲು, ಬಳ್ಳಿ, ಜಡೆಗಳಂಥ ಸಂದುಗೊಂದಿನಲ್ಲಿ ಚಿತ್ರೀಕರಣ ಮಾಡುತ್ತ ಸಾಗುವಾಗ ಸಾಸಿವೆ ಕಾಳಿನ ಗಾತ್ರದ ಒಂದು ಕಲ್ಲು ಡಿಕ್ಕಿ ಹೊಡೆದರೂ ಕಸ್ಸೀನಿ ಕೆಲಸ ಕೆಡುತ್ತಿತ್ತು.

ಮುಷ್ಟಿಗಾತ್ರದ ಕಲ್ಲು ಬಡಿದಿದ್ದರೆ ಅದು ಸಿಡಿದು ಸಾವಿರ ಹೋಳಾಗುತ್ತಿತ್ತು. ಹಾಗೇನೂ ಆಗಲಿಲ್ಲ. ಏರುತ್ತ, ಇಳಿಯುತ್ತ, ದಿಕ್ಕು ಬದಲಿಸುತ್ತ ಅದು ಶನಿಯ 62 ಸಂತಾನಗಳ ಪೈಕಿ ಮುಖ್ಯವಾದವುಗಳನ್ನೆಲ್ಲ ಸವರುತ್ತ ಸಾಗಿದ ಹನ್ನೆರಡು ವರ್ಷಗಳ ಅವಧಿಯೆಂದರೆ ಅಚ್ಚರಿಗಳ ಸರಮಾಲೆಯೇ ಆಗಿತ್ತು. ಅಲ್ಲಿನ ವಿಶ್ವ ಅನೂಹ್ಯವಾಗಿತ್ತು.

ಚಿನ್ನದ ಬಳೆಯಗುಂಟ ತುಂಟ ಮಕ್ಕಳಂತೆ ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಓಡುವ ಹಾಲುಬಿಳಿ ಚಂದ್ರಗಳು, ಶನಿಯ ಸೆರಗನ್ನು ಜಗ್ಗಿ ಜಗ್ಗಿ ಸುತ್ತುತ್ತ ಕೀಟಲೆ ಕೊಡುವಂತಿರುವ ಪ್ರೊಮೀಥಿಯಸ್, ಕುಡಿದು ತೂರಾಡುತ್ತ ಸಾಗುವ ಸ್ಪಂಜಿನಂತಿರುವ ಹೈಪೀರಿಯನ್, ಬಳೆಗಳ ಮಧ್ಯೆ ತೂರಿಕೊಂಡ ಸೌತೆಕಾಯಿಯಂತೆ ಕಾಣುವ ಡಾಫ್ನಿಸ್, ತನ್ನ ಹಾದಿಯುದ್ದಕ್ಕೂ ಗುಡಿಸುತ್ತ ಮೈಗೆಲ್ಲ ಕೊಳೆ ಮೆತ್ತಿಕೊಂಡು ಸಾಗುವ ಪೇಲಿಯಾಪಿಡಿಸ್, ಕಸ ಎತ್ತುವ ಮೊರದಂತೆ ಅದರ ಹಿಂದೆಹಿಂದಕ್ಕೆ ಓಡುವ ಪ್ಯಾನ್....

ಶನಿಯ ಚಂದ್ರಗಳಲ್ಲಿ ಎಲ್ಲಕ್ಕಿಂತ ಅಚ್ಚರಿಯನ್ನು ಮೂಡಿಸಿದ್ದು ಎನ್ಸಿಲಾಡಸ್. ಸೌರಮಂಡಲದ ಅತ್ಯಂತ ಪ್ರಖರ ಬಿಳುಪಿನ ಕಾಯ ಅದು. ನಾಸಾ ವಿಜ್ಞಾನಿಗಳು ಕಸ್ಸೀನಿಯನ್ನು ಅತ್ತ ತಿರುಗಿಸಿ, ಮೆಗ್ನೆಟೊಮೀಟರ್ ಬಳಸಿ ಅದರ ಗರ್ಭವನ್ನು ಕೆದಕಿದಾಗ ಅಲ್ಲೊಂದು ಸಮುದ್ರವೇ ಗೋಚರಿಸಿತು. ಹಿಮದ ಹೊದಿಕೆಯನ್ನು ಛೇದಿಸಿ, ಸಮುದ್ರದ ಆಳದಿಂದ ಮಂಜಿನ ಕಾರಂಜಿಗಳು ಚಿಮ್ಮುತ್ತಿದ್ದವು. ಆಳದಲ್ಲಿ ನಮ್ಮ ಸಮುದ್ರದಲ್ಲಿ ಇರುವಂತೆ ಹೈಡ್ರೊಕಾರ್ಬನ್ ಬಿಸಿ ಚಿಲುಮೆಗಳು ಇದ್ದವು. ಅಲ್ಲಿಂದ ಚಿಮ್ಮುವ ದ್ರವ್ಯಗಳೇ ಶನಿಯ ‘ಇ’ ಬಳೆಯನ್ನು ನಿರ್ಮಿಸುತ್ತಿದ್ದವು.

ಕಸ್ಸೀನಿ ಪದೇ ಪದೇ ಅದರ ಲವಣಭರಿತ ಮೋಡಗಳ ಮೂಲಕ ಪ್ರದಕ್ಷಿಣೆ ಹಾಕುತ್ತ ರೋಹಿತಗಳ ನಕ್ಷೆಗಳನ್ನು ಭೂಮಿಗೆ ಕಳಿಸುತ್ತಿತ್ತು. ಜೀವಧಾರಕ ಕಣಗಳು ಅಲ್ಲಿಂದ ಚಿಮ್ಮುತ್ತಿವೆಯೆ? ಗೊತ್ತಿಲ್ಲ. ಸೂಕ್ಷ್ಮಜೀವಿಗಳನ್ನು ಪತ್ತೆ ಮಾಡಬಹುದಾದ ಸಾಧನಗಳು ಕಸ್ಸೀನಿಯ ಬಳಿ ಇರಲಿಲ್ಲ. ‘ಭೂಮಿಯ ಆಚೆ ಜೀವಿಗಳಿರುವ ಸಾಧ್ಯತೆಯನ್ನು ಹುಡುಕುವುದಾದರೆ ಇಲ್ಲಿಗೇ ಬನ್ನಿ’ ಎಂದು ಸಂದೇಶವನ್ನು ಕಳಿಸಿ ಈ ನೌಕೆ, ಕೊನೆಯ ಬಾರಿಗೆ ಶನಿಯ ಉತ್ತರ ಧ್ರುವದ ಬಳಿ ಬಂದಾಗ ಅಲ್ಲಿ ಇನ್ನೊಂದು ಅಚ್ಚರಿ ಕಾದಿತ್ತು: ನಾಲ್ಕು ಭೂಮಿಗಳನ್ನು ತನ್ನ ತೆಕ್ಕೆಯಲ್ಲಿ ಸೇರಿಸಿಕೊಳ್ಳಬಹುದಾದಷ್ಟು ಗಾತ್ರದ ಚಂಡ ಮಾರುತವೊಂದು ಶನಿಯ ನೆತ್ತಿಯ ಮೇಲೆ ಷಟ್ಕೋನದ ಚಿತ್ರ ಬರೆದಿತ್ತು. ವೃತ್ತಾಕಾರ ಸುತ್ತಬೇಕಿದ್ದ ಅನಿಲ ಮಾರುತಗಳು ಆರು ಭುಜಗಳನ್ನು ಸೃಷ್ಟಿಸಿದ್ದು ಹೇಗೆ?

ಉತ್ತರ ನಿಮಗೆ ಗೊತ್ತೆ ಎಂದು ಕೇಳುವಂತೆ ಕೊನೆಯ ಬಾರಿಗೆ ಕಸ್ಸಿನಿ ಭೂಮಿಯತ್ತ ಮುಖ ಮಾಡಿತು. ಭೂಮಿಯನ್ನೂ ತನ್ನನ್ನೂ ಶನಿಯ ಕೆಲವು ಸದಸ್ಯರನ್ನೂ ಸೇರಿಸಿ ಸೆಲ್ಫಿಯನ್ನು ದಾಖಲಿಸಿ ಭೂಮಿಗೆ ರವಾನಿಸಿತು. ಅದರ ಆಯಸ್ಸು ಮುಗಿಯುತ್ತ ಬಂದಿತ್ತು. ಶನಿಯ ಕಕ್ಷೆಯಲ್ಲಿ ಅದರ ಕಳೇವರ ಬಹಳಷ್ಟು ಕಾಲ ಹಾಗೆಯೇ ಸುತ್ತುತ್ತಿರುವಂತೆ ಮಾಡಬಹುದಿತ್ತು. ಆದರೆ ಅಲ್ಲಿನ ಎರ‍್ರಾಬಿರ‍್ರಿ ಚಂದ್ರಗಳು ಎಂದಾದರೂ ಅದನ್ನು ಚಿಂದಿ ಮಾಡಿ ಪ್ಲುಟೋನಿಯಂ ಪುಡಿಯನ್ನು ಎಲ್ಲೆಡೆ ಎರಚುವ ಸಾಧ್ಯತೆಯಿತ್ತು. ಅಥವಾ ಭೂಮಿಯಿಂದ ಅಂಟಿಕೊಂಡು ಬಂದಿರಬಹುದಾದ ಸೂಕ್ಷ್ಮಾಣುಗಳು ಅಲ್ಲಿನ ಯಾವುದೋ ಚಂದ್ರನಲ್ಲಿ ಸಂತಾನ ವೃದ್ಧಿಸುವ ಸಾಧ್ಯತೆಯಿತ್ತು. ಹಾಗಾದಂತೆ ಕಸ್ಸೀನಿಯನ್ನು ಶನಿಗೇ ಅರ್ಪಿಸುವುದು ಅನಿವಾರ್ಯವಾಗಿತ್ತು.

ಮೊನ್ನೆ ಶನಿವಾರಕ್ಕೆ ಒಂದು ದಿನ ಮುಂಚೆಯೇ ಶನಿಯ ಹೊದಿಕೆಯ ಬಿಗಿಮೋಡಗಳ ನಡುವೆ ಕಸ್ಸೀನಿ ಅಣುಗಾತ್ರದ ಕಣಗಳಾಗಿ ಲೀನವಾಯಿತು. ‘ನಾವು ನೀಡಿದ ಪ್ರತಿಯೊಂದು ಆದೇಶವನ್ನೂ ಅದು ತಪ್ಪದೇ ಪಾಲಿಸಿತ್ತು’ ಎಂದು ಕಸ್ಸೀನಿಯೊಂದಿಗೆ ದಶಕಗಳ ಕಾಲ ಒಡನಾಡಿದ ನಾಸಾ ನಿಯಂತ್ರಕ ತಂಡದ ಸದಸ್ಯರು ಪರಸ್ಪರ ಅಪ್ಪಿಕೊಂಡು ಗದ್ಗದಿತರಾದರೆಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು. ಕಸ್ಸೀನಿಯ ಹಾಗೆ, ಅದನ್ನು ಇಷ್ಟುಕಾಲ ನಿಯಂತ್ರಿಸುತ್ತಿದ್ದ ತಜ್ಞರ ತಂಡವೂ ಚದುರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry