ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬರುತ್ತಿದ್ದಾನೆ ‘ಕೌರವ’

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬಹಳ ದಿನಗಳ ಬಿಡುವಿನ ನಂತರ ಎಸ್. ಮಹೇಂದರ್ ಅವರು ಮತ್ತೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಬಾರಿ ಅವರು ‘ವನ್ಸ್ ಮೋರ್ ಕೌರವ’ ಎನ್ನುವ ಸಿನಿಮಾ ನಿರ್ದೇಶಿಸಿದ್ದು, ಇದು ತೆರೆಗೆ ಬರಲು ಸಜ್ಜಾಗುತ್ತಿದೆ. ಚಿತ್ರದ ಬಗ್ಗೆ ಮಾಹಿತಿ ನೀಡಲು ಮಹೇಂದರ್ ಅವರು ತಮ್ಮ ತಂಡದ ಜೊತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದು.

ಕಾರ್ಯಕ್ರಮದಲ್ಲಿ ಮೊದಲು ಮಾತು ಆರಂಭಿಸಿದ್ದು ಮಹೇಂದರ್. ‘ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದು ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದೆ. ಹಳೆಯ ಹಾಗೂ ಹೊಸ ಕಾಲಗಳ ಮಿಶ್ರಣ ಈ ಸಿನಿಮಾದಲ್ಲಿ ಇದೆ’ ಎಂದು ಹೇಳಿದರು.

‘ಫ್ಲ್ಯಾಶ್‌ಬ್ಯಾಕ್‌ ದೃಶ್ಯಗಳಿಗೆ ಹಳೆಯ ಕಲಾವಿದರನ್ನು ಬಳಸಿಕೊಂಡಿದ್ದೇನೆ. ಈಗಿನ ಸಂದರ್ಭದ ದೃಶ್ಯಗಳಿಗೆ ಹೊಸಬರನ್ನು ಬಳಸಿಕೊಂಡಿದ್ದೇನೆ. ರಂಗಭೂಮಿಯ ಹಿನ್ನೆಲೆ ಇರುವ ಕಲಾವಿದರೂ ಈ ಸಿನಿಮಾದಲ್ಲಿ ಇದ್ದಾರೆ. ಕಾವೇರಿ ನದಿ ಹರಿಯುವ ಪ್ರದೇಶದಲ್ಲಿ ಈ ಸಿನಿಮಾ ಮಾಡಿದ್ದೇನೆ. ನಾನು ಬಹಳಷ್ಟು ಸಿನಿಮಾಗಳನ್ನು ಮಾಡಿರುವ ಪ್ರದೇಶ ಕೂಡ ಹೌದು ಇದು’ ಎಂದು ತಮ್ಮದೇ ಶೈಲಿಯಲ್ಲಿ ಮಾತು ಮುಂದುವರಿಸಿದರು ಮಹೇಂದರ್.

ಈ ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆಯಂತೆ. ನಾಟಕವೊಂದರ ತಾಲೀಮಿನ ವೇಳೆ ಆರಂಭವಾಗುವ ಸಿನಿಮಾ ಕಥೆಯು ಆ ನಾಟಕ ರಂಗ ಪ್ರದರ್ಶನಕ್ಕೆ ಸಜ್ಜಾಗುವ ಹೊತ್ತಿನಲ್ಲಿ ಪೂರ್ಣಗೊಂಡಿರುತ್ತದೆಯಂತೆ. ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದವರು ಶ್ರೀಧರ್ ವಿ. ಸಂಭ್ರಮ್. ಈ ಸಿನಿಮಾದಲ್ಲಿ ಹಾಡುಗಳಿಗೆ ಬಹಳ ಮಹತ್ವ ನೀಡಲಾಗಿದೆಯಂತೆ.

ಸಿನಿಮಾದ ಹೀರೊ ಹಾಗೂ ನಿರ್ಮಾಪಕ ನರೇಶ್ ಗೌಡ ಅವರು. ‘ಈ ಸಿನಿಮಾವನ್ನು ನಾನು ಕಷ್ಟಪಟ್ಟು ಮಾಡಿಲ್ಲ, ಬದಲಿಗೆ ಇಷ್ಟಪಟ್ಟು ಮಾಡಿದ್ದೇನೆ. ನನಗೆ ಈ ಸಿನಿಮಾದಿಂದ ಹಣ ಬರುತ್ತದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಜನ ಬೈಯ್ಯದಂತಹ ಸಿನಿಮಾ ಮಾಡಿಕೊಡಿ ಎಂದಷ್ಟೇ ನಿರ್ದೇಶಕರನ್ನು ಕೇಳಿಕೊಂಡಿದ್ದೆ’ ಎಂದರು ನರೇಶ್.

‘ಒಳ್ಳೆಯ ಸಿನಿಮಾ ಮಾಡಿರುವ ಖುಷಿ ನನಗೆ ಇದೆ. ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.

ಅಂದಹಾಗೆ, ಈ ಚಿತ್ರದ ನಾಯಕಿ ಅನುಷಾ ಅವರು. ‘ನನ್ನದು ಈ ಸಿನಿಮಾದಲ್ಲಿ ಬಜಾರಿಯ ಪಾತ್ರ. ಈಕೆ ಸಿಕ್ಕಾಪಟ್ಟೆ ಮಾತನಾಡುತ್ತಾಳೆ. ಇಂಗ್ಲಿಷ್ ಕಲಿಯಬೇಕು ಎಂಬ ಹುಚ್ಚು ಉಳ್ಳವಳಾದರೂ ಈಕೆಗೆ ಕನ್ನಡದ ಮೇಲೆ ಅಭಿಮಾನ ಜಾಸ್ತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT