6

ಮೈಸೂರಿನ ಅರಸರು ಮತ್ತು ವಾಸ್ತವಾಂಶ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ಮೈಸೂರಿನ ಅರಸರು ಮತ್ತು ವಾಸ್ತವಾಂಶ

ಪಾರಂಪರಿಕ ದಸರಾ ಹಬ್ಬದ ಆಚರಣೆಗೆ ಸಜ್ಜಾಗುತ್ತಿರುವ ಮೈಸೂರಿನಲ್ಲಿ ಅಲ್ಲಿನ ಮೇಯರ್ ಸಣ್ಣ ವಿವಾದವೊಂದರಲ್ಲಿ ಸಿಲುಕಿದ್ದಾರೆ. ನಗರದ ಸೌಂದರ್ಯೀಕರಣ ಪ್ರಕ್ರಿಯೆಯ ಅಂಗವಾಗಿ ಆಯ್ದ ಸ್ಥಳಗಳಲ್ಲಿ ಗೋಡೆಗಳ ಮೇಲೆ ಒಡೆಯರ್ ದೊರೆಗಳ ಚಿತ್ರಗಳನ್ನು ಕಲಾವಿದರು ಬಿಡಿಸುತ್ತಿದ್ದರು. ಅದೇ ಸಾಲಿನಲ್ಲಿ ರಾಜಪೋಷಾಕನ್ನು ಧರಿಸಿ, ಕುದುರೆಯ ಮೇಲೆ ಕುಳಿತು ಪಕ್ಕದಲ್ಲಿರುವ ಸೈನಿಕನೊಡನೆ ರಾಜಠೀವಿಯಿಂದಿರುವ ಮೇಯರ್ ಎಂ.ಜೆ. ರವಿಕುಮಾರ್ ಚಿತ್ರವನ್ನು ಸಹ ಬಿಡಿಸಲಾಗಿತ್ತು. ಈ ಕುರಿತಾಗಿ ಮಾಧ್ಯಮಗಳಲ್ಲಿ ವರದಿಯಾದ ನಂತರ ಚಿತ್ರಕಾರರಿಗೆ ತಮ್ಮ ಚಿತ್ರವನ್ನೂ ಬಿಡಿಸುವಂತೆ ಕೇಳಿರಲಿಲ್ಲ ಮತ್ತು ಅವರ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎನ್ನುವ ಸಮಜಾಯಷಿಯನ್ನು ರವಿಕುಮಾರ್ ನೀಡಿದರು. ಸ್ಥಳೀಯ ನಾಗರಿಕರ ಪ್ರತಿಭಟನೆಯ ನಂತರ ರಾಜರ ಸಾಲಿನಲ್ಲಿದ್ದ ಅವರ ಚಿತ್ರಪಟವನ್ನು ಅಳಿಸಿ, ಬದಲಿಗೆ ‘ಮೈಸೂರು ದಸರಾಗೆ ಸ್ವಾಗತ’ ಎಂಬ ಪಠ್ಯಶೀರ್ಷಿಕೆಯನ್ನು ಚಿತ್ರಿಸಲಾಗಿದೆ.

ಒಡೆಯರ್ ಮನೆತನದ ದೊರೆಗಳು ಮೈಸೂರು ನಗರಕ್ಕೆ ಮತ್ತು ಹಳೆಯ ಮೈಸೂರು ಪ್ರಾಂತ್ಯಕ್ಕೆ ಯಾರೂ ನೀಡದಷ್ಟು ಕೊಡುಗೆ ನೀಡಿದ್ದಾರೆ ಎಂಬ ನಂಬಿಕೆ ಇಂದಿಗೂ ಆಳವಾಗಿ ಬೇರೂರಿದೆ. ಹಾಗಾಗಿ ಸಾಮಾನ್ಯ ರಾಜಕಾರಣಿಯೊಬ್ಬರು ಅವರ ಸಾಲಿನಲ್ಲಿ ನಿಲ್ಲುವುದಕ್ಕೆ ಆಕ್ಷೇಪಣೆಗಳು ಕೇಳಿಬಂದಾಗ ಯಾರಿಗೂ ಆಶ್ಚರ್ಯವಾಗುವುದಿಲ್ಲ. ಮೈಸೂರು ನಗರದಲ್ಲಿಯಂತೂ ಮಹಾರಾಜರ ಆಳ್ವಿಕೆಯೇ ಸುವರ್ಣಯುಗವೆಂಬ ಭಾವನೆ ಗಟ್ಟಿಯಾಗಿ ಉಳಿದಿದೆ. ಹಾಗಾಗಿ ಈಗಿರುವ ರಾಜವಂಶಸ್ಥರ ಬಗ್ಗೆ ಸಹ ವಿಶ್ವಾಸ ಮತ್ತು ಸಹಾನುಭೂತಿಗಳು ವ್ಯಕ್ತವಾಗುತ್ತವೆ. ಕುತೂಹಲದ ವಿಷಯವೆಂದರೆ ಒಡೆಯರ್ ದೊರೆಗಳ ಬಗ್ಗೆ ಇರುವ ಸದಭಿಪ್ರಾಯ, ಗೌರವ ಮತ್ತು ನಿಷ್ಠೆಗಳು ಜಾತಿ, ಧರ್ಮ, ವರ್ಗ ಮತ್ತು ಸಿದ್ಧಾಂತಗಳ ಭಿನ್ನತೆಯನ್ನು ಮೀರುತ್ತವೆ. ಅಂದರೆ ಎಲ್ಲ ವರ್ಗಗಳ ಮತ್ತು ಸೈದ್ಧಾಂತಿಕ ಹಿನ್ನೆಲೆಯ ಜನರೂ ಒಡೆಯರ್ ರಾಜಮನೆತನದ ಪರವಾಗಿಯೇ ಮಾತನಾಡುತ್ತಾರೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಸಂಪ್ರದಾಯವಾದಿ ಮೇಲ್ವರ್ಗಗಳು ಮಾತ್ರವಲ್ಲ, ರೈತಾಪಿ ವರ್ಗಗಳು, ಹಿಂದುಳಿದ ಮತ್ತು ದಲಿತ ಸಮುದಾಯದ ರ‍್ಯಾಡಿಕಲ್ ಹೋರಾಟಗಾರರು ಸಹ ‘ಮೈಸೂರಿನ ರಾಜಮನೆತನವು ತಮ್ಮ ಒಳಿತಿಗೆ ಬದ್ಧವಾಗಿತ್ತು, ಅದಕ್ಕೆ ಪೂರಕವಾದ ಸಾರ್ವಜನಿಕ ನೀತಿಗಳನ್ನು ರೂಪಿಸುತ್ತಿತ್ತು’ ಎಂದು ನಂಬಿದ್ದಾರೆ, ವಾದಿಸುತ್ತಾರೆ. ಹಾಗಾಗಿಯೇ ಒಡೆಯರ್ ಮನೆತನದೊಡನೆ ಮೈಸೂರು ಭಾಗದ ಜನಸಮುದಾಯದಲ್ಲಿ ಇಂತಹ ಅವಿನಾಭಾವ ಸಂಬಂಧವೊಂದು ಬೆಳೆದು, ಉಳಿದು ಬಂದಿದೆ.

ಇಂದು ರಾಜತ್ವ ಉಳಿದಿಲ್ಲ. 17ನೆಯ ಶತಮಾನದ ಆರಂಭದಲ್ಲಿ ರಾಜ ಒಡೆಯರು ಮೈಸೂರಿನಲ್ಲಿ ಆರಂಭಿಸಿದ್ದ, ರಾಜಪ್ರಭುತ್ವ ಕೇಂದ್ರಿತವಾಗಿದ್ದ ಪಾರಂಪರಿಕ ದಸರಾ ಹಬ್ಬವು 1970ರ ದಶಕದ ನಂತರ ನಾಡಹಬ್ಬವಾಗಿ ಪರಿವರ್ತಿತವಾಗಿದೆ. ಆದರೆ ಒಡೆಯರ್ ಮನೆತನದ ಕುರಿತು ಇರುವ ಸದಭಿಪ್ರಾಯ ಮತ್ತು ವಿಶ್ವಾಸ ಗಟ್ಟಿಯಾಗುತ್ತಲೇ ಇದೆ. ಇದನ್ನು ಇತಿಹಾಸಕಾರ ವಿವರಿಸುವುದು ಹೇಗೆ?

ಯಾವುದೇ ಮಾನದಂಡಗಳನ್ನು ನಾವು ಬಳಸಿದರೂ ಸರಿಯೇ. 1880ರ ವಸಾಹತುಶಾಹಿ ಸಂದರ್ಭದಲ್ಲಿ ಭಾರತದಲ್ಲಿದ್ದ ಸುಮಾರು 550 ಸಂಸ್ಥಾನಗಳ ರಾಜರ ಪೈಕಿ ಮೈಸೂರಿನ ಒಡೆಯರ್ ದೊರೆಗಳು ಉತ್ತಮ ಮತ್ತು ಜವಾಬ್ದಾರಿಯುತವಾದ ನಡವಳಿಕೆ ಹಾಗೂ ಆಡಳಿತಗಳೆರಡಕ್ಕೂ ಹೆಸರಾದವರು. ಅದರ ಹಿಂದಿನ ಅರ್ಧ ಶತಮಾನದಲ್ಲಿ ಕಮಿಷನರುಗಳ ಆಳ್ವಿಕೆಯ ಸಂದರ್ಭದಲ್ಲಿ ಆಧುನಿಕ ರಾಜ್ಯವ್ಯವಸ್ಥೆಗೆ ಬೇಕಾಗಿದ್ದ ಭದ್ರ ಅಡಿಪಾಯವನ್ನು ಹಾಕಲಾಗಿತ್ತು ಎನ್ನುವುದು ನಿಜವಿರಬಹುದು. ಆ ಅಡಿಪಾಯದ ಮೇಲೆ ಭಾರತದಲ್ಲಿಯೇ ವಿಶಿಷ್ಟವಾದ ಹಲವು ಕೆಲಸಗಳು ಮೈಸೂರಿನಲ್ಲಿ ನಡೆದವು. ಕೆಳಗಿನ ಉದಾಹರಣೆಗಳನ್ನು ಗಮನಿಸಿ. ಸಂಸ್ಥಾನದ ಜನರಿಗೆ ಸೀಮಿತ ನೆಲೆಯಲ್ಲಾದರೂ ಸರಿಯೆ, ಅಧಿಕಾರದಲ್ಲಿ ಪ್ರಾತಿನಿಧ್ಯ ನೀಡುವ ಪ್ರಜಾಪ್ರತಿನಿಧಿ ಸಭೆ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವಾರು ಪಟ್ಟಣಗಳು ಮತ್ತು ನಗರಗಳ ಯೋಜಿತ ಬೆಳವಣಿಗೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಗಳ ಗಣನೀಯ ವಿಸ್ತರಣೆ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸಲು ಮೀಸಲಾತಿ ಒದಗಿಸುವ ವ್ಯವಸ್ಥೆ, ರೈಲು ಮತ್ತು ರಸ್ತೆಜಾಲಗಳಂತಹ ಮೂಲಭೂತ ಸೌಕರ್ಯಗಳ ಸೃಷ್ಟಿ, ಆಧುನಿಕ ಅರ್ಥವ್ಯವಸ್ಥೆಯೊಂದನ್ನು ಕಟ್ಟಲು ಬೃಹತ್ ಕೈಗಾರಿಕೆಗಳಿಗೆ ಪ್ರೋತ್ಸಾಹ, ಹಾಗೆಯೇ ಕೃಷಿಗೆ ನೀರಾವರಿ ಒದಗಿಸಲು ಬೃಹತ್ ನೀರಾವರಿ ಯೋಜನೆಗಳನ್ನು ರೂಪಿಸಿದ್ದು...

ಹೀಗೆ ಪ್ರಜಾಸತ್ತಾತ್ಮಕ ಸುಧಾರಣೆಗಳು, ಕಲ್ಯಾಣ ಕಾರ್ಯಕ್ರಮಗಳು, ಆರ್ಥಿಕ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಸೃಷ್ಟಿ- ಈ ಎಲ್ಲವೂ 20ನೆಯ ಶತಮಾನದ ಮೈಸೂರು ಸಂಸ್ಥಾನದಲ್ಲಿ ಕಾಣಬರುತ್ತವೆ ಎನ್ನುವುದು ಭಾರತದ ಮಟ್ಟದಲ್ಲಿಯೇ ಅಪರೂಪದ ವಿಚಾರ. ಜೊತೆಗೆ ಮೈಸೂರಿನ ದೊರೆಗಳ ವ್ಯಕ್ತಿತ್ವ ಮತ್ತು ವೈಯಕ್ತಿಕ ನಡವಳಿಕೆಗಳು ಸಹ ಇತರ ಭಾರತೀಯ ದೊರೆಗಳ ಲಂಪಟತನ ಮತ್ತು ದುಂದು ವೆಚ್ಚಕ್ಕೆ ಹೋಲಿಸಿದಾಗ ಆದರ್ಶಪ್ರಾಯವಾದುದು.

ಹೀಗೆ ನೋಡಿದಾಗ ಮೈಸೂರಿನ ಅರಸರ ಜನಪ್ರಿಯತೆ ಆಶ್ಚರ್ಯವನ್ನು ಮೂಡಿಸಬಾರದು. ಆದರೆ ಇತಿಹಾಸಕಾರ ಗಮನಿಸಬೇಕಾದ ಎರಡು ಅಂಶಗಳಿವೆ. ಮೊದಲನೆಯದು, ಮೈಸೂರು ಅರಸರ ಗಮನಾರ್ಹ ಸಾಧನೆಗಳು 1881ರಲ್ಲಿ ಒಡೆಯರ್ ಮನೆತನಕ್ಕೆ ಬ್ರಿಟಿಷರು ಅಧಿಕಾರವನ್ನು ವಾಪಸು ಮಾಡಿದ ನಂತರದ ಸಮಯಕ್ಕೆ ಸೇರಿದವು. 1881ಕ್ಕೆ ಮೊದಲಿನ ಸುಮಾರು ಐದುನೂರು ವರ್ಷಗಳ ಒಡೆಯರ್ ರಾಜರ ಇತಿಹಾಸ ಅಂತಹ ಗಮನಾರ್ಹವಾದುದೇನಲ್ಲ. ಪ್ರತಿಯೊಬ್ಬ ಸಮರ್ಥ ದೊರೆಯ ನಂತರ ಇಬ್ಬರು-ಮೂವರು ಅಸಮರ್ಥರು ಆಳಿರುವುದನ್ನು ನಾವು ಗಮನಿಸುತ್ತೇವೆ. ಹಾಗೆ ನೋಡಿದರೆ ಮೈಸೂರನ್ನು ಜಾಗತಿಕ ಇತಿಹಾಸದ ಭೂಪಟದಲ್ಲಿ ಸೇರಿಸಿದವರು ಮತ್ತು ಆಧುನಿಕ ಪ್ರಭುತ್ವವೊಂದರ ಅಡಿಪಾಯವನ್ನು ಹಾಕಿದವರು ಹೈದರ್ ಮತ್ತು ಟಿಪ್ಪು.

ನಾನು ಪ್ರಸ್ತಾಪಿಸಬಯಸುವ ಎರಡನೆಯ ಅಂಶವು ಮೈಸೂರಿನ ಇತಿಹಾಸದ ಬರವಣಿಗೆಗಳಲ್ಲಿ ಇತ್ತೀಚೆಗೆ ಚರ್ಚೆಯಾಗುತ್ತಿರುವ ಒಂದು ಆಯಾಮ. 1881–1947ರ ನಡುವೆ ಮೈಸೂರಿನಲ್ಲಾದ ಹಲವಾರು ಕೆಲಸಗಳ ಶ್ರೇಯಸ್ಸು ಯಾರಿಗೆ ಸೇರಬೇಕು ಎನ್ನುವ ಪ್ರಶ್ನೆಯನ್ನು ಕೆಲವು ಇತಿಹಾಸಕಾರರು ಮತ್ತು ಪ್ರಗತಿಪರ ಚಿಂತಕರು ಎತ್ತಿದ್ದಾರೆ. ಈ ಅವಧಿಯಲ್ಲಿ ಮೈಸೂರಿನ ಅರಸರಾಗಿದ್ದ ಹತ್ತನೆಯ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್ ಅವರು ಹಕ್ಕುದಾರರೇ? ಅಥವಾ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್, ಎಂ. ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಮೊದಲಾದವರು ಆಧುನಿಕ ಮೈಸೂರಿನ ನಿರ್ಮಾತೃಗಳೇ?

ವಾಸ್ತವ ಎಷ್ಟೇ ಸಂಕೀರ್ಣವಾಗಿದ್ದರೂ ಐತಿಹಾಸಿಕ ಕಥನಗಳಲ್ಲಿ ಸಾಧನೆಯ ಶ್ರೇಯಸ್ಸನ್ನು ಅಥವಾ ವೈಫಲ್ಯದ ಹೊಣೆಗಾರಿಕೆಯನ್ನು ಒಬ್ಬ ವ್ಯಕ್ತಿಗೆ ಕೊಡುವುದು ವಾಡಿಕೆ. ಇದಕ್ಕೆ ಕಾರಣವೆಂದರೆ ಹಾಗೆ ಮಾಡಿದಾಗ ವಿವರಿಸಲು ಸಾಧ್ಯವಾಗುವಂತಹ ಕಥನವೊಂದನ್ನು ಕಟ್ಟಿಕೊಳ್ಳಬಹುದು ಮತ್ತು ಐತಿಹಾಸಿಕ ವ್ಯಕ್ತಿಯೊಬ್ಬನನ್ನು ಅದರ ಕೇಂದ್ರದಲ್ಲಿರಿಸಬಹುದು ಎನ್ನುವುದು. ಕೃಷ್ಣರಾಜಸಾಗರ ಜಲಾಶಯವನ್ನು ವಿಶ್ವೇಶ್ವರಯ್ಯನವರು ಯೋಜಿಸಿ, ಕಟ್ಟಿಸಿದರೇ? ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಶ್ರೇಯಸ್ಸು ಅವರಿಗೆ ಸೇರಬೇಕೇ? ಅಥವಾ ವಿಶ್ವೇಶ್ವರಯ್ಯನವರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಿ, ಅವರಿಗೆ ಸಂಪನ್ಮೂಲಗಳನ್ನು ಒದಗಿಸಿದ ನಾಲ್ವಡಿಯವರಿಗೆ ಸೇರಬೇಕೇ? ಇವರ ಜೊತೆಗೆ ಕೆಲಸ ಮಾಡುತ್ತಿದ್ದ ನೂರಾರು ಭಾರತೀಯ ಮತ್ತು ಯುರೋಪಿಯನ್ ಮೂಲದ ಎಂಜಿನಿಯರುಗಳು, ಅಧ್ಯಾಪಕರು ಮತ್ತು ಅಧಿಕಾರಿಗಳ ಪಾತ್ರವೇನಿತ್ತು?

ಈ ಪ್ರಶ್ನೆಗಳನ್ನು ಎತ್ತುವ ಮೂಲಕ ಐತಿಹಾಸಿಕ ವಾಸ್ತವದ ಸಂಕೀರ್ಣತೆಯನ್ನು ನಾವು ಅರಿಯಬಹುದು. ಆದರೂ ಇವರೊಬ್ಬರಿಲ್ಲದಿದ್ದರೆ ಈ ಸಾಧನೆಗಳು ಸಾಧ್ಯವಾಗುತ್ತಿರಲಿಲ್ಲವೇನೋ ಎನ್ನುವ ಅನುಮಾನ ಯಾರನ್ನಾದರೂ ನಮ್ಮ ಕಥನಗಳ ನಾಯಕರನ್ನಾಗಿಸಲು ಪ್ರೇರೇಪಿಸುತ್ತದೆ. ಉದಾಹರಣೆಗೆ, ಇತ್ತೀಚಿನ ಕೆಲವು ಬರಹಗಳು ಮತ್ತು ಚಿಂತನೆಗಳಲ್ಲಿ ನಾಲ್ವಡಿಯವರನ್ನು ಎಲ್ಲರಿಗಿಂತ ಮೇಲೆ ಎತ್ತುವ ಪ್ರಯತ್ನವೊಂದು ನಡೆಯುತ್ತಿದೆ. ಆದರೆ ಗಮನಿಸಿ. ಆಧುನಿಕ ಮೈಸೂರಿನ ಇತಿಹಾಸದ ಬಗ್ಗೆ ಸಾವಿರಾರು ಕೃತಿಗಳು ಬಂದಿದ್ದರೂ, ನಾಲ್ವಡಿಯವರ ವೈಯಕ್ತಿಕ ನಂಬಿಕೆಗಳು ಮತ್ತು ವ್ಯಕ್ತಿತ್ವಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ಅವರ ದಿನಚರಿಯಾಗಲಿ, ಅವರ ಪತ್ರಿಕಾ ಸಂದರ್ಶನಗಳಾಗಲಿ ಅಥವಾ ಅವರ ಆಪ್ತರಾಗಿದ್ದವರು ಬರೆದಿರುವ ವ್ಯಕ್ತಿಚಿತ್ರಗಳಾಗಲಿ ದೊರಕುವುದಿಲ್ಲ. ಸಾರ್ವಜನಿಕ ನೀತಿಗಳಿಗೆ ಸಂಬಂಧಿಸಿದಂತೆ, ಕಡತಗಳ ಮೇಲೆ ಅವರ ಟಿಪ್ಪಣಿಗಳಿರುವುದು ಕಾಣಬರುವುದಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ವಡಿಯವರ ಕೊಡುಗೆಯ ಸ್ವರೂಪ, ನಿರ್ದಿಷ್ಟತೆ ಏನು ಎನ್ನುವ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಈ ಸಂದರ್ಭದಲ್ಲಿ ಮುಖ್ಯವಾಗುವ ಮತ್ತೊಂದು ಅಂಶವನ್ನು ಮುಖ್ಯಮಂತ್ರಿ ಇತ್ತೀಚೆಗೆ ಪ್ರಸ್ತಾಪಿಸಿದರು. ಮೈಸೂರಿನ ದೇವರಾಜ ಮಾರುಕಟ್ಟೆಯ ಪುನರುಜ್ಜೀವನದ ಬಗ್ಗೆ ಚರ್ಚಿಸುವಾಗ, ಮೈಸೂರಿನವರೇ ಆದ ಸಿದ್ದರಾಮಯ್ಯನವರು ನಾಲ್ವಡಿಯವರನ್ನು ಏಕವಚನದಲ್ಲಿ ಸಂಬೋಧಿಸಿದರು. ಮಾತ್ರವಲ್ಲ, ‘ಮಾರುಕಟ್ಟೆಯನ್ನು ಜನರ ತೆರಿಗೆ ಹಣದಿಂದ ಕಟ್ಟಿಸಿದರೇ ಹೊರತು ಸ್ವಂತ ಹಣದಿಂದಲ್ಲ’ ಎನ್ನುವ ವಿವಾದಕ್ಕೀಡಾದ ಮಾತುಗಳನ್ನಾಡಿದರು. ಇಲ್ಲಿ ನಾವು ಸಾಮಾನ್ಯವಾಗಿ ನಿರ್ಲಕ್ಷಿಸುವ ವಾಸ್ತವದ ವಿಚಾರವೊಂದನ್ನು ಮುಖ್ಯಮಂತ್ರಿ ಗುರುತಿಸಿದರು. ಮೈಸೂರು ಸಂಸ್ಥಾನದ ದೊರೆಯಾದರೂ ಸಹ ನಾಲ್ವಡಿಯವರು ಇಡೀ ರಾಜ್ಯದ ಎಲ್ಲ ಆಸ್ತಿ-ಸಂಪತ್ತಿನ ಸಂಪೂರ್ಣ ಒಡೆಯರಾಗಿರಲಿಲ್ಲ. ಬ್ರಿಟಿಷರ ಅನುಗ್ರಹದಿಂದ ಅವರು ಪಡೆದಿದ್ದ ರಾಜತ್ವವು ಮೈಸೂರಿನ ರಾಜ್ಯದ ಮೇಲೆ ಅವರು ಹೊಂದಿದ್ದ ಪಾರುಪತ್ಯ (ಟ್ರಸ್ಟಿಷಿಪ್) ಆಗಿತ್ತು. ಆದರೆ ಅವರು ಮತ್ತು ರಾಜಮನೆತನದವರು ಒಡೆತನ ಹೊಂದಿದ್ದ ಖಾಸಗಿ ಆಸ್ತಿ ಬೇರೆಯದೇ ಇತ್ತು. 1947ರಲ್ಲಿ ಭಾರತ ಸ್ವತಂತ್ರವಾದಾಗ, ಒಡೆಯರ್ ಮನೆತನವು ಭಾರತದಲ್ಲಿಯೇ ಎರಡನೆಯ ಅತ್ಯಂತ ಶ್ರೀಮಂತ ಕುಟುಂಬವಾಗಿತ್ತು ಎನ್ನಲಾಗುತ್ತದೆ.

ಆಧುನಿಕ ಮೈಸೂರಿನ ಅರಸರು ಸಭ್ಯರು. ಉತ್ತಮ ಆಡಳಿತಗಾರರನ್ನು ಗುರುತಿಸಿ, ಅವರಿಗೆ ಸ್ವಾತಂತ್ರ್ಯ ನೀಡಿ, ಸಂಪನ್ಮೂಲಗಳನ್ನು ಒದಗಿಸಿದ್ದರು. ಇವರೆಲ್ಲರೂ ಅಂಗವಾಗಿದ್ದ ಮೈಸೂರು ಸರ್ಕಾರವು ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿತು.

ಜೊತೆಗೆ ರಾಜಮನೆತನವು ಸಾವಿರಾರು ಎಕರೆ ಭೂಮಿ, ಹತ್ತಾರು ಅರಮನೆಗಳು ಮತ್ತಿತರ ಖಾಸಗಿ ಆಸ್ತಿಪಾಸ್ತಿಗಳನ್ನು ಬೆಂಗಳೂರು, ಮೈಸೂರು ನಗರಗಳಲ್ಲಿ ಹೊಂದಿತ್ತು. ಬಹುಶಃ ಇಂತಹ ವಾಸ್ತವಾಂಶಗಳನ್ನು ಅನುಲಕ್ಷಿಸಿ ನಮ್ಮ ತೀರ್ಮಾನಗಳನ್ನು ಮಾಡಬೇಕು ಎನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry