ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಯೊಳಗಿನ ಗಂಟೇ?

ಚಕ್ಮಾ ಮತ್ತು ಹಜೊಂಗ್ ನಿರಾಶ್ರಿತರ ಪೌರತ್ವ ವಿವಾದ
Last Updated 22 ಸೆಪ್ಟೆಂಬರ್ 2017, 20:07 IST
ಅಕ್ಷರ ಗಾತ್ರ

ಚಕ್ಮಾ ಮತ್ತು ಹಜೊಂಗ್ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ನಿರ್ಧಾರ ವಿವಾದ ಸೃಷ್ಟಿಸಿದೆ. ಮ್ಯಾನ್ಮಾರ್‌ನಿಂದ ಬಂದಿರುವ ರೋಹಿಂಗ್ಯಾ ಸಮುದಾಯಕ್ಕೆ ಸೇರಿದ ಮುಸ್ಲಿಮರಿಗೆ ಆಶ್ರಯ ನೀಡುವ ವಿಚಾರದಲ್ಲಿ ಭಾರಿ ಪರ– ವಿರೋಧದ ಅಭಿಪ್ರಾಯಗಳ ನಡುವೆಯೇ ಚಕ್ಮಾ ಮತ್ತು ಹಜೊಂಗ್ ಸಮುದಾಯಗಳ ಪೌರತ್ವ ವಿಚಾರವೂ ಚರ್ಚೆಯ ಮುನ್ನೆಲೆಗೆ ಬಂದಿದೆ.

ಈ ಸಮುದಾಯಗಳ ಜನರು ನೆಲೆಯಾಗಿರುವ ಅರುಣಾಚಲ ಪ್ರದೇಶದ ಪ್ರಭಾವಿ ಅಖಿಲ ಅರುಣಾಚಲ ವಿದ್ಯಾರ್ಥಿ ಸಂಘಟನೆ (ಎಎಪಿಎಸ್‍ಯು) ಇದೇ 19ರಂದು ಕರೆ ನೀಡಿದ್ದ ಬಂದ್ ಹಿಂಸಾಚಾರಕ್ಕೆ ತಿರುಗಿತು.

ಏನಿದು ಚಕ್ಮಾ– ಹಜೊಂಗ್ ಪೌರತ್ವ ಸಮಸ್ಯೆ? ಯಾರಿವರು?  ಭಾರತಕ್ಕೆ ಯಾಕೆ ಬಂದರು?
ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಚಿತ್ತಗಾಂಗ್ ಗುಡ್ಡಗಾಡು ಪ್ರದೇಶ, ಈ ಚಕ್ಮಾ– ಹಜೊಂಗ್ ಸಮುದಾಯಗಳ ನೆಲೆಯಾಗಿತ್ತು. ಜಲ ವಿದ್ಯುತ್ ಯೋಜನೆಗಾಗಿ ಈ ಪ್ರದೇಶದಲ್ಲಿ ಹರಿಯುವ ಕರ್ನಫುಲಿ ನದಿಗೆ 1960ರ ದಶಕದ ಆರಂಭದಲ್ಲಿ ಅಣೆಕಟ್ಟೆ ನಿರ್ಮಾಣದ ಕೆಲಸ ಆರಂಭವಾಯಿತು. ಚಕ್ಮಾ ಮತ್ತು ಹಜೊಂಗ್ ಸಮುದಾಯದ ಜನರಿದ್ದ ಪ್ರದೇಶ ಮುಳುಗಡೆಯಾಯಿತು. ಆದರೆ ಈ ಜನರಿಗೆ ಪರಿಹಾರ ಅಥವಾ ಪುನರ್ವಸತಿ ದೊರೆಯಲಿಲ್ಲ. ಸಿಕ್ಕ ಸ್ಥಳದಲ್ಲಿ ಇವರು ನೆಲೆಯಾದರು. ಚಕ್ಮಾಗಳು ಬೌದ್ಧರಾದರೆ, ಹಜೊಂಗ್ ಜನರು ಹಿಂದೂ ಧರ್ಮವನ್ನು ಅನುಸರಿಸುವವರು. ಹಾಗಾಗಿ ಧರ್ಮದ ನೆಲೆಯಲ್ಲಿಯೂ ಇವರಿಗೆ ಕಿರುಕುಳ ನೀಡಲಾಯಿತು. ಬೇರೆ ದಾರಿ ಇಲ್ಲದೆ ಇವರು ಮುಸ್ಲಿಂ ಪ್ರಾಬಲ್ಯದ ಪೂರ್ವ ಪಾಕಿಸ್ತಾನ ಬಿಟ್ಟು ಭಾರತಕ್ಕೆ ವಲಸೆ ಬಂದರು.

ಅರುಣಾಚಲದಲ್ಲಿ ನೆಲೆಯಾದದ್ದು ಹೇಗೆ?
ಗುಡ್ಡಗಾಡಿನ ಈ ಜನರು ಗುಡ್ಡಗಳನ್ನು ಹಾದು ಬಂದು ಅಸ್ಸಾಂನ ಲುಷಾಯ್ ಹಿಲ್ ಜಿಲ್ಲೆಯಲ್ಲಿ (ಈಗಿನ ಮಿಜೋರಾಂ) ನೆಲೆಯಾದರು. ಆಗ ಅರುಣಾಚಲ ಪ್ರದೇಶ ರಾಜ್ಯ ರಚನೆಯಾಗಿರಲಿಲ್ಲ. ಈಶಾನ್ಯ ಗಡಿ ಪ್ರದೇಶ ಸಂಸ್ಥೆಯು (ಎನ್‍ಇಎಫ್‍ಎ) ಇಲ್ಲಿನ ಆಡಳಿತ ನೋಡಿಕೊಳ್ಳುತ್ತಿತ್ತು. ಅಸ್ಸಾಂ ರಾಜ್ಯಪಾಲರ ಮೂಲಕ ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಉಸ್ತುವಾರಿ ಇತ್ತು. ಆ ಸಂದರ್ಭದಲ್ಲಿ ಗಡಿಯ ಆಸುಪಾಸಿನ ಪ್ರದೇಶ ಹೆಚ್ಚು ಬಳಕೆಯಾಗಿರಲಿಲ್ಲ. ಅಲ್ಲಿ ಜನವಸತಿಯೂ ಇರಲಿಲ್ಲ. ಗಡಿ ಪ್ರದೇಶ ನಿರ್ಜನವಾಗಿರುವುದು ದೇಶದ ಸುರಕ್ಷತೆಗೆ ಅಪಾಯ. ಹಾಗಾಗಿ ಚಕ್ಮಾ ಮತ್ತು ಹಜೊಂಗ್ ಸಮುದಾಯದ ಜನರನ್ನು ಈ ಪ್ರದೇಶದಲ್ಲಿ ನೆಲೆಯಾಗಿಸಬಹುದು ಎಂದು ಕೇಂದ್ರಕ್ಕೆ ಅಸ್ಸಾಂ ರಾಜ್ಯಪಾಲರು ವರದಿ ಕೊಟ್ಟರು. 1964-69ರ ನಡುವೆ ಸುಮಾರು 15 ಸಾವಿರ ಜನರು ಇಲ್ಲಿ ಬೀಡುಬಿಟ್ಟರು.

ಇವರು ನಿರಾಶ್ರಿತರೇ ಅಥವಾ ನಿರ್ವಸಿತರೇ?
ಅರುಣಾಚಲ ಪ್ರದೇಶದ ಪೂರ್ವ ಭಾಗದಲ್ಲಿರುವ ಚಾಂಗ್‍ಲಾಂಗ್ ಜಿಲ್ಲೆಯಲ್ಲಿ ನೆಲೆಯಾದ ಈ ಸಮುದಾಯಕ್ಕೆ ಸೇರಿದ ಕುಟುಂಬಗಳ ಸಂಖ್ಯೆ 2,748. ಪ್ರತಿ ಕುಟುಂಬಕ್ಕೆ ಆಗ ಐದು ಎಕರೆ ಜಮೀನು ನೀಡಲಾಗಿತ್ತು. ಅವರು ಅಲ್ಲಿ ಈಗಲೂ ಬೇಸಾಯ ಮಾಡುತ್ತಿದ್ದಾರೆ ಮತ್ತು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಇತರ ಎಲ್ಲ ಬುಡಕಟ್ಟುಗಳ ರೀತಿಯಲ್ಲಿಯೇ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ. ಯುವ ತಲೆಮಾರಿನ ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬೇರೆ ಪ್ರದೇಶಗಳಿಗೂ ಹೋಗುತ್ತಿದ್ದಾರೆ. ಪೌರತ್ವ ಇಲ್ಲ ಎಂಬುದು ಅವರು ಎದುರಿಸುತ್ತಿರುವ ದೊಡ್ಡ ಸಮಸ್ಯೆ.

ಆದರೆ ಈ ಸಮುದಾಯಕ್ಕೆ ಸೇರಿದ ಎಲ್ಲರೂ ಪೌರತ್ವ ಇಲ್ಲದವರಲ್ಲ. ಈ ಜನರಿಗೆ ಭಾರತದ ಪೌರತ್ವ ನೀಡಲಾಗುವುದು ಎಂದು ಭಾರತ ಮತ್ತು ಬಾಂಗ್ಲಾ ದೇಶದ ಪ್ರಧಾನಿಗಳು 1972ರಲ್ಲಿ ನೀಡಿದ ಜಂಟಿ ಹೇಳಿಕೆಯಲ್ಲಿ ಘೋಷಿಸಲಾಗಿತ್ತು. ಅದೇ ವರ್ಷ ಅರುಣಾಚಲ ಪ್ರದೇಶಕ್ಕೆ ಕೇಂದ್ರಾಡಳಿತದ ಸ್ಥಾನ ನೀಡಲಾಯಿತು. ಆಗ ಅಸ್ತಿತ್ವಕ್ಕೆ ಬಂದ ಸರ್ಕಾರ ಚಕ್ಮಾ–ಹಜೊಂಗ್‌ ಜನರಿಗೆ ಪೌರತ್ವ ನೀಡುವುದನ್ನು ವಿರೋಧಿಸಿತು. ಆದರೆ ಈ ವಿರೋಧದ ನಡುವೆಯೂ ಸಾಕಷ್ಟು ಜನರಿಗೆ ಆಗ ಪೌರತ್ವ ನೀಡಲಾಗಿದೆ.

ಪೌರತ್ವ ನೀಡಿಕೆ ವಿವಾದವಾಗಲು ಕಾರಣವೇನು?
ಅರುಣಾಚಲ ಪ್ರದೇಶದಲ್ಲಿ ಕಡಿಮೆ ಜನಸಂಖ್ಯೆ ಇರುವ ನೂರಾರು ಬುಡಕಟ್ಟು ಸಮುದಾಯಗಳಿವೆ. ಈ ಬುಡಕಟ್ಟುಗಳಿಗೆ ಸಂವಿಧಾನ ನೀಡಿರುವ ವಿಶೇಷ ರಕ್ಷಣೆಯೂ ಇದೆ. ಭಾರತದ ಬೇರೆ ರಾಜ್ಯಗಳ ಜನರು ಅರುಣಾಚಲ ಪ್ರದೇಶಕ್ಕೆ ಹೋಗಲು ಅನುಮತಿ ಪಡೆದುಕೊಳ್ಳುವುದು ಅಗತ್ಯ. ಹೊರಗಿನವರಿಗೆ ಅಲ್ಲಿ ಜಮೀನು ಖರೀದಿಯ ಹಕ್ಕೂ ಇಲ್ಲ.

ಚಕ್ಮಾ ಮತ್ತು ಹಜೊಂಗ್  ಜನರಿಗೆ ಪೌರತ್ವ ನೀಡಿದರೆ ಇವು ಅರುಣಾಚಲ ಪ್ರದೇಶದ ದೊಡ್ಡ ಸಮುದಾಯಗಳ ಪಟ್ಟಿಗೆ ಸೇರುತ್ತವೆ. ಉಳಿದ ನೂರಾರು ಬುಡಕಟ್ಟುಗಳು ಅಲ್ಪಸಂಖ್ಯಾತ ಸಮುದಾಯಗಳಾಗುತ್ತವೆ. ಇದು ರಾಜ್ಯದ ಸಾಮಾಜಿಕ ಚಿತ್ರಣವನ್ನೇ ಬದಲಿಸಬಹುದು. ಅದಲ್ಲದೆ, ಪೌರತ್ವ ನೀಡಿದರೆ, ಸರ್ಕಾರ ಇವರಿಗೆ ಹಿಂದೆ ನೀಡಿರುವ ಜಮೀನಿಗೆ ಇವರು ಮಾಲೀಕರಾಗುತ್ತಾರೆ. ಜತೆಗೆ, ಅವರಿಗೆ ಅಲ್ಲಿ ಆಸ್ತಿ ಖರೀದಿಸುವ ಹಕ್ಕೂ ದೊರೆಯುತ್ತದೆ. ಹಾಗಾದರೆ, ಭಾರತದ ಪೌರರಿಗೇ ಇಲ್ಲದ ವಿಶೇಷ ಅವಕಾಶವನ್ನು ನಿರಾಶ್ರಿತ ವಲಸಿಗರಿಗೆ ನೀಡಿದಂತಾಗುತ್ತದೆ. ಅರುಣಾಚಲ ಪ್ರದೇಶದ ಜನರಿಗೆ ಸಂವಿಧಾನ ನೀಡಿರುವ ವಿಶೇಷ ಹಕ್ಕುಗಳನ್ನು ಬದಲಾಯಿಸಲು ಸಂವಿಧಾನ ತಿದ್ದುಪಡಿಯ ಅಗತ್ಯವೂ ಇದೆ.

ಈಗಿನ ಸ್ಥಿತಿ ಏನು?
ಈಶಾನ್ಯ ರಾಜ್ಯಗಳಲ್ಲಿ ವಾಸಿಸುತ್ತಿರುವ ಈ ಜನರಿಗೆ ಪೌರತ್ವ ನೀಡಲು ಇದೇ 13ರಂದು ನಡೆದ ಗೃಹ ಸಚಿವಾಲಯದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಎರಡು ಸಮುದಾಯಗಳಿಗೆ ಪೌರತ್ವ ನೀಡಬೇಕು ಎಂದು 2015ರಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಈ ನಿರ್ದೇಶನಕ್ಕೆ ಅನುಗುಣವಾಗಿ ಗೃಹ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಆದರೆ ಬಳಿಕ ಮಾತನಾಡಿದ ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಅವರು, ಅರುಣಾಚಲ ಪ್ರದೇಶದ ಜನರ ಹಕ್ಕುಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಚಕ್ಮಾ ಮತ್ತು ಹಜೊಂಗ್‌ ಸಮುದಾಯಗಳಿಗೆ ಪೌರತ್ವ ನೀಡಲು ಸಾಧ್ಯವಾಗುವಂತೆ ಆದೇಶವನ್ನು ಮಾರ್ಪಡಿಸಲು ಸುಪ್ರೀಂ ಕೋರ್ಟನ್ನು ಕೋರಲಾಗುವುದು ಎಂದು ಹೇಳಿದ್ದಾರೆ.

* 14,888– 1960ರ ದಶಕದಲ್ಲಿ ಭಾರತಕ್ಕೆ ಬಂದ ಚಕ್ಮಾ–ಹಜೊಂಗ್‌ ಸಮುದಾಯದ ಜನರ ಸಂಖ್ಯೆ
* 2,748 – ಆಗ ಇದ್ದ ಕುಟುಂಬಗಳ ಸಂಖ್ಯೆ
* 1 ಲಕ್ಷ – ಈ ಸಮುದಾಯಗಳ ಈಗಿನ ಅಂದಾಜು ಜನಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT